ರಸ್ತೆಯಲ್ಲಿ ಯಾರಾದರೂ ಚುಡಾಯಿಸಿದರೆ ನೀವು ರಸ್ತೆ ಬದಲಿಸಬಹುದು. ಆದರೆ ಆಫೀಸ್‌ನಲ್ಲಿ ಹಾಗೆ ಆದರೆ ನೀವು ಅದನ್ನು ಎದುರಿಸಲೇಬೇಕು. ಅಂತಹ ಸಂದರ್ಭದಲ್ಲಿ ಹಾವು ಸಾಯಬಾರದು ಕೋಲೂ ಮುರಿಯಬಾರದು ಎನ್ನುವಂತೆ ಮಹಿಳೆಯರು ಏನು ಮಾಡಬೇಕು? ಕೆಲವು ಮೋಜಿನ ಸಲಹೆಗಳನ್ನು ಇಲ್ಲಿ ಕೊಡಲಾಗಿದೆ……?

ಒಂದುವೇಳೆ ಇದ್ದಕ್ಕಿದ್ದಂತೆ ಯಾರಾದರೂ ಹಿಂದಿನಿಂದ ಸೆರಗನ್ನು ಹಿಡಿದುಕೊಂಡರೆ ಆಗ, “ಅರೆ, ದೀಪಕ್‌ ನೀವಾ? ನನಗಂತೂ ಭಯ ಆಗಿತ್ತು. ಹುಲ್ಲು ಮೇಯ್ತಾ ಮೇಯ್ತಾ ಕತ್ತೆ ಈ ಆಫೀಸ್‌ನೊಳಗೆ ಎಲ್ಲಿಂದ ಬಂತು ಅಂದ್ಕೊಂಡಿದ್ದೆ,” ಎಂದು ಗಾಬರಿಯಿಂದ ಕೊಂಚ ನಾಟಕೀಯವಾಗಿ ಹೇಳಿ. ಸಹೋದ್ಯೋಗಿಗಳೆಲ್ಲಾ ಜೋರಾಗಿ ನಗತೊಡಗಿದಾಗ ಅವನಿಗೆ ಬಹಳ ಅವಮಾನವಾಗುತ್ತದೆ. ನಂತರ ನೀವು ಎಲ್ಲರೊಂದಿಗೆ ಮೋಜು ಅನುಭವಿಸಿ.

ಅಗತ್ಯಕ್ಕಿಂತ ಹೆಚ್ಚು ಹೊಗಳುವವರನ್ನು ನೋಡಿ ಮುಗುಳ್ನಕ್ಕು “ಓಹೋ, ಬಹಳ ಹೊಗಳುತ್ತಿದ್ದೀರಿ. ತುಂಬಾ ಥ್ಯಾಂಕ್ಸ್, ನಿಮಗೊಂದು ವಿಷಯ ಹೇಳಬೇಕು. ಬರೋ ತಿಂಗಳು ನನ್ನ ಬರ್ಥ್‌ಡೇ ಇದೆ. 5-10 ಸಾವಿರ ರೂಪಾಯಿದು ಗಿಫ್ಟ್ ಅಂತೂ ಖಂಡಿತಾ ತಂದುಕೊಡುತ್ತೀರಲ್ವಾ…?” ಎಂದಾಗ ಅವರು ತಡವರಿಸುತ್ತಾ “ಹ್ಞೂಂ… ಹ್ಞೂಂ…..ಆಯ್ತು ಮೇಡಂ,” ಎನ್ನುತ್ತಾರೆ.

ಫ್ಲರ್ಟ್‌ ಮಾಡುವವರಿಗೆ ರೇಗದೆ ನಗುನಗುತ್ತಾ ಹೀಗೆ ಹೇಳಿ, “ಅಬ್ಬಾ, ಏನು ರೇಗಿಸ್ತೀರಪ್ಪ. ನೀವು ರೇಗಿಸೋದು ಬಹಳ ಅದ್ಭುತವಾಗಿರುತ್ತೆ. ನೀವು ಹೀಗೇ ಮಾತಾಡಿ ಮಾತಾಡಿ ನಿಮ್ಮ ಹೆಂಡತೀನ ಪಟಾಯಿಸಿರಬೇಕು,” ಅನ್ನಿ. ಅದನ್ನು ಕೇಳಿ ಅವರು ನಾಚಿಕೊಂಡು ಮುಂದೆ ಏನೂ ಮಾತಾಡುವುದಿಲ್ಲ. “ವಾವ್! ಮಿಸ್‌ ಈ ಸೆಕ್ಸಿ ಸೂಟ್‌ ನಿಮಗೆ ಎಷ್ಟು ಚೆನ್ನಾಗಿ ಒಪ್ಪುತ್ತೇ,” ಎಂದು ಯಾರಾದರೂ ಹೇಳಿದರೆ ಆಗ, “ಅಯ್ಯೋ ನಾನು ಮರೆತೇ ಹೋಗಿದ್ದೆ. ನೀವು ಒಪ್ಪುತ್ತೆ ಅಂದಾಗ ಜ್ಞಾಪಕ ಬಂತು. ಮ್ಯಾನೇಜರ್‌ ನಿಮ್ಮ ಅಕೌಂಟ್ಸ್ ಟ್ಯಾಲಿ ಆಗ್ತಿಲ್ಲಾಂತ ರೇಗ್ತಿದ್ರು. ಬಹಳ ಕೋಪದಲ್ಲಿದ್ರು. ಬೇಗ ಹೋಗಿ,” ಅನ್ನಿ. ಅವರು ತಡಬಡಾಯಿಸಿ

ತೆರೆದ ಬಾಯಿ ಮುಚ್ಚುವುದೇ ಇಲ್ಲ. ಒಂದು ವೇಳೆ ಯಾರಾದರೂ ಕೈ ಹಿಡಿದುಕೊಂಡರೆ ಹೀಗೆ ಹಾಡಿ, “ಅಣ್ಣಾ ನಿನ್ನಾ ಸೋದರಿಯಣ್ಣ, ಮರೆಯದಿರು ಎಂದೂ ನನ್ನ… ನಿಂಗೆ ರಾಖಿ ಕಟ್ತೀನಿ. ಗಿಫ್ಟ್ ಕೊಡ್ತಿಯೋ, ನಾನೇ ಕೊಡಲೋ? ನಿಂಗೆ ಕಬ್ಬಿಣದ ಬಳೆ ತೊಡಿಸ್ತೀನಿ,” ಎಂದು ಹೇಳಿ ಜೋರಾಗಿ ನಕ್ಕು ಬಿಡಿ.

ಯಾರಾದರೂ ಹತ್ತಿರ ಬಂದು ಅಂಟಿಕೊಳ್ಳಲು ಪ್ರಯತ್ನಿಸಿದರೆ ಮುಖ ಕಿವುಚಿ, “ಛೀ, ಎಷ್ಟು ಕೆಟ್ಟ ವಾಸನೆ ಬರ್ತಿದೆ ನಿಮ್ಮ ಮೈಯಿಂದ. ನಿಮ್ಮ ಹೆಂಡತಿ ಹೇಗೆ ಸಹಿಸಿಕೊಳ್ತಿದ್ದಾರೋ ಪಾಪ. ಎಷ್ಟು ಸಂಪಾದಿಸಿದ್ರೆ ಏನು? ಒಂದು ಡಿಯೋಡರೆಂಟ್‌ ಕೂಡ ಕೊಳ್ಳಲಿಲ್ಲಾಂದ್ರೆ…..” ನಂತರ ವಾರೆಗಣ್ಣಿನಿಂದ ಅವರ ಮುಖ ನೋಡಿ. ಅವರು ನಾಚಿಕೆಯಿಂದ ತಲೆ ತಗ್ಗಿಸಿರುತ್ತಾರೆ.

ನೀವು ಹೋಗುತ್ತಿದ್ದಾಗ ಯಾರಾದರೂ ನಿಮ್ಮ ದಾರಿಗೆ ಅಡ್ಡ ನಿಂತರೆ ಕೂಡಲೇ ಗಟ್ಟಿಯಾಗಿ, “ಸಿದ್ದಪ್ಪಾ, ತಗೋ ಈ ಫೈಲ್‌ ಬಾಸ್‌ಗೆ ಕೊಡು,” ಎಂದು ಅಟೆಂಡರ್‌ನ್ನು ಕೂಗಿ. ನಿಮ್ಮ ದಾರಿ ತಡೆದವರು ತಿರುಗಿ ನಿಂತು ನೋಡತೊಡಗುವರು. ಕೂಡಲೇ ನಿಮಗೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವ ಅವಕಾಶ ಸಿಗುತ್ತದೆ.

ಜ್ಯೂಡೋ, ಕರಾಟೆಯ ಕೆಲವು ವರಸೆಗಳನ್ನು ಕಲಿಯಿರಿ. ಅನಿರೀಕ್ಷಿತ ಸಂದರ್ಭಗಳಲ್ಲಿ ಕೈಕಾಲು ಪ್ರಯೋಗಿಸಬೇಕಾಗಬಹುದು. ಆಗ ಎದುರಿಗಿರುವ ವ್ಯಕ್ತಿ ಕೂಡಲೇ ಅಲ್ಲಿಂದ ಪಲಾಯನ ಮಾಡುತ್ತಾರೆ.

ಮೇಲೆ ತಿಳಿಸಿರುವ ವಿಧಾನಗಳನ್ನು ಪ್ರಯತ್ನಿಸಿದ ನಂತರ ವಿಷಯ ಗಂಭೀರವಾಗತೊಡಗಿದರೆ 101 ನಂಬರ್‌ ಅಂತೂ ನಿಮ್ಮ ಬಳಿ ಇದ್ದೇ ಇದೆ.

– ಜಿ. ಅನುರಾಧಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ