ಫ್ಲೋರಿಡಾ, ಕ್ಯಾಲಿಫೋರ್ನಿಯಾದಂತಹ ಕೆಲವು ರಾಜ್ಯಗಳನ್ನು ಬಿಟ್ಟು ಅಮೆರಿಕಾದ ಹೆಚ್ಚಿನ ರಾಜ್ಯಗಳಲ್ಲಿ ಚಳಿಗಾಲ ಭಾರತೀಯರಿಗೆ ಅಸಹನೀಯವಾಗಿರುತ್ತದೆ. ಹೀಗಿರುವಾಗ ಅಮೆರಿಕಾದ ಇಂಡರ್ಸ್‌ ನೋಡುವ ಬದಲು ಭಾರತೀಯ ಪ್ರವಾಸಿಗರು ಬೆಚ್ಚನೆಯ ಹೋಟೆಲ್ ಗಳು, ರೂಮುಗಳು, ಆರ್ಟ್‌ಗ್ಯಾಲರಿಗಳು ಅಥವಾ ಮ್ಯೂಸಿಯಂಗಳಲ್ಲಿ ತಮ್ಮ ಸಮಯ ಕಳೆಯುತ್ತಾರೆ. ಏಕೆಂದರೆ ಚಳಿಗಾಲದಲ್ಲಿ ಇಲ್ಲಿ ಪ್ರತಿ ಮನೆ, ಅಂಗಡಿ, ಮಾಲ್, ಗ್ಯಾಲರಿ, ಮ್ಯೂಸಿಯಂ, ಆಫೀಸ್‌ ಇತ್ಯಾದಿಗಳಲ್ಲಿ ಒಳಗೆ ಬೆಚ್ಚಗಿಡಲಾಗುತ್ತದೆ. ಚಳಿಗಾಲದಲ್ಲಿ ಆಗಾಗ್ಗೆ ಹಿಮ ಬೀಳುತ್ತದೆ. ಮಂಜು ಸುರಿಯುವ ಈ ಕಾಲದಲ್ಲಿ ಕೊಡೆ, ಬೆಚ್ಚನೆಯ ಉಡುಪು, ಕೋಟು, ಕೈಗವಸುಗಳು, ಕ್ಯಾಪ್‌, ಸ್ನೋಶೂಸ್‌ ಬೇಕೇ ಬೇಕು.

ಇಂತಹ ಹಾವಾಮಾನದಲ್ಲಿ ನಿಮ್ಮ ಅಮೆರಿಕಾ ಯಾತ್ರೆಯ ಸಂದರ್ಭದಲ್ಲಿ ಒಂದು ವಿಶೇಷ ಸಲಹೆ ಏನೆಂದರೆ ಈ ಪ್ರವಾಸದ ಮಧ್ಯೆ ಸಮಯ ಪಡೆದು 1 ವಾರದ ಮಟ್ಟಿಗೆ ಪ್ಯೂರೆಟೋರಿಕೋಗೆ ಹೋಗಿ  ಬನ್ನಿ. ಲ್ಯಾಟಿನ್‌ ಅಮೆರಿಕಾದ ಈ ಪುಟ್ಟ ದೇಶದ ರಾಜಧಾನಿ ಸೈನ್‌ ಜುವಾನ್‌.  ಇಲ್ಲಿಗೆ ಬಂದು ನಿಮಗೆ ಅಮೆರಿಕಾದ ಕೊರೆಯುವ ಚಳಿಯಿಂದ ನೆಮ್ಮದಿ ಸಿಗುತ್ತದೆ. ಜೊತೆಗೆ ಸಾಗರದ ಮಧ್ಯದಲ್ಲಿರುವ ಈ ದೇಶದಲ್ಲಿ ಗೋವಾದಲ್ಲಿ ಸಿಗುವ ಸಂತಸ ದೊರಕುತ್ತದೆ.

ಎಳನೀರು, ಬಾಳೆಹಣ್ಣು, ಪಪ್ಪಾಯಿ ಇತ್ಯಾದಿ ಇಲ್ಲಿ ಲಭ್ಯ. ಗೋವಾದಂತಹ ಉಷ್ಣತೆ, ಸುಂದರ ಸರ್ಕಲ್ ಗಳು, ಸಾಗರದ ಮಾದಕ ಹವೆ, ಸ್ವಿಮ್ಮಿಂಗ್‌ ಫೂಲ್‌, ಸಮೃದ್ಧ ಹಸಿರು ಇತ್ಯಾದಿ ನಿಮ್ಮ ಮನಸ್ಸನ್ನು ಮೋಹಗೊಳಿಸುತ್ತವೆ. ಇಲ್ಲಿನ ಜನರೂ ನಮ್ಮಂತೆಯೇ ಇದ್ದಾರೆ. ಇಂಗ್ಲಿಷ್‌ ಭಾಷೆಯಲ್ಲಿ ಇಲ್ಲಿ ಸುಲಭವಾಗಿ ವ್ಯವಹರಿಸಬಹುದು.

ಹೊಸ ಉತ್ಸಾಹ, ಹೊಸ ಶಕ್ತಿ

ಪ್ಯೂರೆಟೋರಿಕೋ ನೋಡಿದ ನಂತರ ಮನಸ್ಸಿನಲ್ಲಿ ಮೂಡುವ ಮೊದಲ ವಿಚಾರವೆಂದರೆ, ಅಲ್ಲಿನ ಸಂತಸಮಯ ಅನುಭವಗಳನ್ನು ಗೃಹಶೋಭಾದ ಓದುಗರೊಡನೆ ಹಂಚಿಕೊಳ್ಳುವುದು. ಒಂದುವೇಳೆ ನೀವು ಅಮೆರಿಕಾದ ವೀಸಾ ಪಡೆದಿದ್ದರೆ ಪ್ಯೂರೆಟೋರಿಕೋವನ್ನು ನೋಡಲು ಅಡ್ಡಿಯಿಲ್ಲ. ಅಮೆರಿಕಾದ ವೀಸಾ ಮತ್ತು ಕರೆನ್ಸಿ ಅಲ್ಲಿ ನಡೆಯುತ್ತದೆ. ಮಹಾನಗರಗಳಾದ ನ್ಯೂಯಾರ್ಕ್‌, ಅಟ್ಲಾಂಟಾ, ಶಿಕಾಗೋ, ಲಾಸ್‌ ಏಂಜಲಿಸ್‌, ಮಿಯಾಮಿ ಇತ್ಯಾದಿಗಳಿಂದ ಪ್ಯೂರೆಟೋರಿಕೋಗೆ ನೇರವಾಗಿ ಹಾರಬಹುದು. ಅಲ್ಲಿಂದ ಬೇಗನೆ ಸೈನ್‌ ಜುವಾನ್‌ ತಲುಪಬಹುದು. ಈ ಸೌಲಭ್ಯಗಳಲ್ಲದೆ ಆಹಾರ, ಸುತ್ತಾಟ ಇತ್ಯಾದಿ ಕೂಡ ಅಮೆರಿಕಾಗೆ ಹೋಲಿಸಿದರೆ ಅಗ್ಗವಾಗಿದೆ.

ಅಲ್ಲಿಗೆ ಹೋಗಿ ಅಮೆರಿಕಾದ ಕೊರೆಯುವ ಚಳಿಯಿಂದ 1 ವಾರ ಮುಕ್ತಿ ಪಡೆದು ಉತ್ಸವ ಆಚರಿಸಿ. ನಂತರ ಅಮೆರಿಕಾ ನೋಡಲು ಹೊಸ ಉತ್ಸಾಹ, ಹೊಸ ಶಕ್ತಿಯೊಂದಿಗೆ ಹೊರಡಿ. ನಾನು ಮನೆಯವರೊಂದಿಗೆ ಅಮೆರಿಕಾಗೆ ಹೋದಾಗ ಹೀಗೇ ಮಾಡಿದೆ. ಹೌದು. 6 ದಿನಗಳ ಆ ಸುಂದರ ಟ್ರಿಪ್‌ ನಾನೆಂದೂ ಮರೆಯುವಂತಿಲ್ಲ. ಬನ್ನಿ, ನಿಮ್ಮನ್ನೂ ಪ್ಯೂರೆಟೋರಿಕೋ ಸುತ್ತಾಡಿಸುತ್ತೇನೆ.

ಪ್ಯೂರೆಟೋರಿಕೋದಲ್ಲಿ ಅಮೆರಿಕಾದ್ದೇ ಕಾನೂನು ಕಾಯಿದೆಗಳು ನಡೆಯುತ್ತವೆ. ಹೀಗಾಗಿ ಇದನ್ನು ಅಮೆರಿಕಾದ 51ನೇ ರಾಜ್ಯವೆಂದೂ ಹೇಳುತ್ತಾರೆ. ಆದರೆ ಇಲ್ಲಿ ಜನ ಇದೊಂದು ಸ್ವತಂತ್ರ ದೇಶವೆಂಬ ಅನುಭವ ಪಡೆಯುತ್ತಾರೆ. ಇಲ್ಲಿನ ಪ್ರಮುಖ ಭಾಷೆ ಸ್ಪ್ಯಾನಿಶ್‌. ಆದರೂ ಇಂಗ್ಲಿಷ್‌ ಮಾತನಾಡುವ, ಅರ್ಥ ಮಾಡಿಕೊಳ್ಳುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇಲ್ಲಿನ ಸೈನ್‌ ಬೋರ್ಡ್‌ಗಳು ಸ್ಪ್ಯಾನಿಶ್‌ ನಲ್ಲಿದ್ದರೂ ಪ್ರತಿ ವರ್ಷ ಇಲ್ಲಿ 40-45 ಲಕ್ಷ ಪ್ರವಾಸಿಗರು ಬರುತ್ತಾರೆ. ಚಳಿಗಾಲವನ್ನು ಪೂರ್ತಿ ಇಲ್ಲಿ ಕಳೆದು ನಂತರ ಅಮೆರಿಕಾಗೆ ಹೋಗುವ ಕೆಲವು ಪ್ರವಾಸಿಗರೂ ಇಲ್ಲಿ ಸಿಕ್ಕರು.

ವಿಶಾಲ ಮತ್ತು ಭವ್ಯ ದೃಶ್ಯ

ನಾನು ನನ್ನ ಗಂಡ, ಮಗ, ಸೊಸೆ, ಮೊಮ್ಮಗ, ಮೊಮ್ಮಗಳ ಜೊತೆಗೆ ನ್ಯೂಯಾರ್ಕ್‌ನಿಂದ ಹೊರಟಾಗ ಕೇವಲ 4 ಗಂಟೆಗಳಲ್ಲಿಯೇ ಸೈನ್‌ ಜುವಾನ್‌ ತಲುಪಿದೆ. ಯುನೈಟೆಡ್‌ನ ಈ ಫ್ಲೈಟ್‌ನಲ್ಲಿ ನೀರು ಮತ್ತು ಜ್ಯೂಸ್‌ನ್ನು ಉಚಿತವಾಗಿ ಕೊಡುತ್ತಾರೆ. ಆದರೆ ಆಹಾರ ವಸ್ತುಗಳನ್ನು ಖರೀದಿಸಬೇಕಿತ್ತು. ಸೈನ್‌ ಜುವಾನ್‌ನಲ್ಲಿ ವಿಶ್ವದ ಅನೇಕ ದೇಶಗಳಿಂದ ದಿನ ವಿಮಾನಗಳು ಬರುತ್ತವೆ. ಹೀಗಾಗಿ ಇದು ದೊಡ್ಡ ಏರ್‌ಪೋರ್ಟ್‌ ಆಗಿದೆ. ಆಹಾರದ ಸ್ಥಳೀಯ ಮತ್ತು ಅಮೆರಿಕಾದ ಜಾಯಿಂಟ್ಸ್ ಎಲ್ಲ ಏರ್‌ಪೋರ್ಟ್‌ನಲ್ಲಿ ಲಭ್ಯವಿವೆ. ಇಲ್ಲಿ ಏರ್‌ಪೋರ್ಟ್‌ನಲ್ಲಿ ನಾವು ಕೊಂಚ ತಿಂಡಿ ತಿಂದು, ಕಾಫಿ ಕುಡಿದು ಇಲ್ಲಿಂದ ಬಾಡಿಗೆಗೆ 1 ಗಂಟೆಗೆ 1 ದೊಡ್ಡ ಕಾರ್‌ ಪಡೆದೆವು. 6 ದಿನಕ್ಕೆ ಅವರು ನನ್ನಿಂದ 500 ಡಾಲರ್‌ ಪಡೆದರು. ಅದನ್ನು ಡ್ರೈವ್ ಮಾಡಿಕೊಂಡು ನಮ್ಮ ಹೋಟೆಲ್ ವಿಂಢವ್‌ ತಲುಪಿದೆವು. ಅಲ್ಲಿ 5 ರಾತ್ರಿಗಳನ್ನು ಕಳೆಯಲು ನಾವು 3 ಕೋಣೆಗಳ ಕೋಂಡೋ ಬಾಡಿಗೆಗೆ ತೆಗೆದುಕೊಂಡೆವು. ಅದರ ಒಟ್ಟು ಬಾಡಿಗೆ 1500 ಡಾಲರ್‌ ಆಗಿತ್ತು.

ಕೋಂಡೋದಲ್ಲಿ ಉತ್ತಮ ಫರ್ನೀಚರ್‌, ಪಾತ್ರೆಗಳು, ಫ್ರಿಜ್‌, ಮೈಕ್ರೋವೇವ್‌ನಂತಹ ಎಲ್ಲ ಸೌಲಭ್ಯಗಳಿದ್ದವು. ಖಾದ್ಯ ಸಾಮಗ್ರಿಗಳನ್ನು ನಾವು ಕೊಂಡು ತಂದೆವು. ಉಳಿದದ್ದನ್ನು ಹೋಟೆಲ್ ನಿಂದ ತರಿಸುತ್ತಿದ್ದೆವು.

2-3 ಗಂಟೆ ವಿಶ್ರಾಂತಿ ಪಡೆದು 4 ಗಂಟೆಗೆ ಊರು ನೋಡಲು ಹೊರಟೆವು. ಮೊದಲ ದಿನ ಇಡೀ ವಾತಾರಣ ಬಹಳ ಸುಂದರವಾಗಿತ್ತು. ನಾವು ಗೋವಾದಲ್ಲಿ ಇದ್ದಂತೆಯೇ ಇತ್ತು. ಗೋವಾಗೆ ಹೋಲಿಸಿದರೆ ಟ್ರ್ಯಾಫಿಕ್‌ ಮತ್ತು ಜನಸಂದಣಿ ಸಾಕಷ್ಟು ಕಡಿಮೆ ಇತ್ತು. ಆಹಾರ ಪದಾರ್ಥಗಳನ್ನು ಖರೀದಿಸಲು ಅಮೆರಿಕನ್‌ ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳ ಜೊತೆಜೊತೆಗೆ ಸ್ಥಳೀಯ ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳೂ ಇದ್ದವು. ರಸ್ತೆ ಬದಿಯಲ್ಲಿ ನಾವು ಬಾಳೆಹಣ್ಣು, ಪಪ್ಪಾಯಿ, ಸೇಬು ಇತ್ಯಾದಿ ಖರೀದಿಸಿದೆವು, ನ್ಯೂಯಾರ್ಕ್‌ಗಿಂತ ಸುಮಾರು ಅರ್ಧ ದರದಲ್ಲಿ. ನಂತರ ಹಳೆಯ ಸೈನ್‌ ಜುವಾನ್‌ ಭಾಗದಲ್ಲಿನ ಒಂದು ಸುಂದರ ಹಳೆಯ ಕೋಟೆ ನೋಡಲು ಹೊರಟೆವು.

1539ರಲ್ಲಿ ಈ ಕೋಟೆಯನ್ನು  ಸ್ಪೇನ್‌ನ ಜನ ನಿರ್ಮಿಸಲು ಆರಂಭಿಸಿದರು. ಕೋಟೆ ಮುಗಿದಾಗ ಅದಕ್ಕೆ `ಕ್ಯಾಸ್ಟಿಲ ಸೈನ್‌ ಫೆಲಿಪೆ ಡೆಲ್ ಮಾರೋ,’ ಎಂದು ಹೆಸರಿಟ್ಟರು. ಇಂದು ಇದರ ಅವಶೇಷಗಳನ್ನು ನೋಡುವಾಗ ವಿಶಾಲ! ಭವ್ಯ! ರೋಮಾಂಚಕ! ಎಂಬ ಶಬ್ದಗಳು ನಮ್ಮ ಬಾಯಿಯಿಂದ ಹೊರಬರುತ್ತವೆ. ಸಾಗರದಿಂದ 140 ಅಡಿ ಎತ್ತರದಲ್ಲಿ ನಿರ್ಮಿಸಲ್ಪಟ್ಟ ಈ ಕೋಟೆ ಹಳೆಯ ಸೈನ್‌ ಜುವಾನ್‌ ವಿಭಾಗದಲ್ಲಿದೆ. ಇಲ್ಲಿ ಬಹಳಷ್ಟು ಕಾಂತಿ ಇದೆ. ಅಸಂಖ್ಯಾತ ಸಣ್ಣ ಸಣ್ಣ ಅಂಗಡಿಗಳಿವೆ ಮತ್ತು ಹಳೆಯಕಾಲದ ಸುಂದರ ಮನೆ ಇದೆ.

ಅಲ್ಲಿನ ಒಂದು ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದೆವು. ರೆಸ್ಟೋರೆಂಟ್‌ನ ಹೊರಗೆ ಸ್ಟ್ರೀಟ್‌ ಡ್ಯಾನ್ಸರ್‌ಗಳು ಮತ್ತು ಗಾಯಕರು ಪ್ರವಾಸಿಗರಿಗಾಗಿ ಪರ್ಫಾರ್ಮ್ ಮಾಡುತ್ತಿದ್ದರು. ಲೈವ್‌ ಡ್ಯಾನ್ಸ್, ಮ್ಯೂಸಿಕ್‌ ಮತ್ತು ಹೊಟ್ಟೆ ತುಂಬಾ ಊಟ ನಮಗೆ ಮದವೇರಿಸಿತ್ತು.

ರೋಮಾಂಚಕ ದೃಶ್ಯಗಳು

ಸೈನ್‌ ಜುವಾನ್‌ನಲ್ಲಿ ಇನ್ನೂ ಒಂದು ಹಳೆಯ ಕೋಟೆ ಇದೆ. ಅದರ ಹೆಸರು `ಕ್ಯಾಸಿಯೋ ದಿ ಸೈನ್‌ ಕ್ರಿಸ್ಟೋಬ್‌.’ ಆದರೆ ಅದು ಮುಚ್ಚಿತ್ತು. ಆದ್ದರಿಂದ ನೋಡಲಾಗಲಿಲ್ಲ. ಹಳೆಯ ಸೈನ್‌ ಜುವಾನ್‌ನಲ್ಲಿ ನಾವು `ಆಯುರ್ವೇದಿಕ್‌ ಮೆಡಿಸಿನ್‌’ ಅಂಗಡಿಯನ್ನು ನೋಡಿದೆವು. ಅಂತೂ ನಮ್ಮ ಮೊದಲ ದಿನ ಬಹಳ ಸಂತೋಷಕರವಾಗಿತ್ತು. ಗೋವಾದ ಒಂದು ಹೋಟೆಲ್ ‌ನಲ್ಲಿ ನಮ್ಮವರ ಮಧ್ಯದಲ್ಲೇ ಇದ್ದೇವೆ ಅನ್ನಿಸಿತು.

ಮರುದಿನ ತಿಂಡಿ ತಿಂದು ಸ್ವಿಮ್ಮಿಂಗ್‌ ಕಾಸ್ಟ್ಯೂಮ್ ನಲ್ಲಿ ಸ್ವಿಮ್ಮಿಂಗ್‌ ಪೂಲ್ ಗೆ ಹೋದೆವು. ಹೋಟೆಲ್ ನ ಗ್ರೌಂಡ್‌ ಫ್ಲೋರ್‌ನಲ್ಲಿ 4 ಪೂಲ್‌ಗಳಿವೆ. ಅವುಗಳಲ್ಲಿ ಒಂದು ಪುಟ್ಟ ಮಕ್ಕಳಿಗೆ, ದೊಡ್ಡ ಮಕ್ಕಳಿಗಾಗಿ, ಪೂಲ್‌ಗೆ ದುಮುಕಲು ಕ್ರಾದ ಮೋಜಿನ ಸ್ಲೈಡ್‌ಗಳಿವೆ. ಗಂಟೆಗಟ್ಟಲೆ ಮನಸಾರೆ ಈಜಿದೆವು. ಮಧ್ಯೆಮಧ್ಯೆ ಹತ್ತಿರದಲ್ಲೇ ಇದ್ದ ರೆಸ್ಟೋರೆಂಟ್‌ನಲ್ಲಿ ತಿಂಡಿ ತೀರ್ಥ ಸೇವಿಸುತ್ತಿದ್ದೆವು.

ನಂತರ ಹೋಟೆಲ್‌ನ ಗೋಡೆಗೆ ಹೊಂದಿಕೊಂಡಿದ್ದ ಸಮುದ್ರದ ತೀರದಲ್ಲಿ ಸುತ್ತಾಡಿದೆವು. ಸಮುದ್ರದ ನೀರು ಸ್ವಚ್ಛವಾಗಿತ್ತು. ಎಲ್ಲೂ ಯಾವುದೇ ಕಸ ಇರಲಿಲ್ಲ. ಸಮುದ್ರದ ನೀರು ಸೂರ್ಯನ ಕಿರಣಗಳನ್ನು ಹಿಡಿದುಕೊಂಡು ಹೊಂಬಣ್ಣ, ನೀಲಿ, ಹಸಿರು ಬಣ್ಣಗಳನ್ನು ಉಂಟು ಮಾಡುತ್ತಿತ್ತು. ಸಂಜೆ ಬ್ಲ್ಯೂ ಬೇಗೆ ಹೊರಟೆವು.

ಇಡೀ ವಿಶ್ವದಲ್ಲಿ ಕೇವಲ 5 ಬ್ಲ್ಯೂ ಬೇಗಳಿವೆ ಎನ್ನುತ್ತಾರೆ. ಅವುಗಳಲ್ಲಿ 3 ಪ್ಯೂರೆಟೋರಿಕೋನಲ್ಲಿವೆ. ಅದರಲ್ಲಿ ನಾವು ಕೇವಲ 1 ಬ್ಲ್ಯೂ ಬೇ ನೋಡಿದೆವು. ಅದೂ 2 ಕಂತುಗಳಲ್ಲಿ ರಾತ್ರಿ ಹೊತ್ತು. ಎರಡನೇ ಹಾಗೂ ಮೂರನೇ ದಿನ ರಾತ್ರಿ 2-2 ಟಿಕೆಟ್‌ ಮಾತ್ರ ಸಿಕ್ಕಿತು. ರಾತ್ರಿ 8 ರಿಂದ 10 ಗಂಟೆಯ ನಡುವೆ ನೋಡಿದ ಬ್ಲ್ಯೂ ಬೇ ನಿಜಕ್ಕೂ ರೋಮಾಂಚಕಾರಿಯಾಗಿತ್ತು.

ಅದ್ಭುತ ಪ್ರವಾಸಿ ಸ್ಥಳ

ಸಮುದ್ರದಲ್ಲಿ ಕೆಲವು ಆಳವಿಲ್ಲದ ಅದ್ಭುತ ಸ್ಥಳಗಳಿರುತ್ತವೆ. ಅಲ್ಲಿ ಮ್ಯಾಂಗ್ರೋಟ್ಸ್ ಮಧ್ಯೆ ಕೆಲವು ಅದ್ಭುತ ಜೀವಾಣುಗಳು ಉತ್ಪತ್ತಿಯಾಗುತ್ತವೆ. ಅವು ರಾತ್ರಿಯ ವೇಳೆ ಮಿಂಚು ಹುಳುಗಳಂತೆ ಹೊಳೆಯುತ್ತವೆ. ಈ ಲಕ್ಷಗಟ್ಟಲೆ, ಕೋಟಿಗಟ್ಟಲೆ ಜೀವಾಣುಗಳು ನೀಲಿ, ಹಸಿರು ಬೆಳಕಿನಲ್ಲಿ ಇನ್ನೂ ಹೆಚ್ಚು ಹೊಳೆಯುತ್ತವೆ. ಈ ಸ್ಥಳಗಳನ್ನು ಬ್ಲ್ಯೂ ಬೇ ಎಂದು ಕರೆಯುತ್ತಾರೆ. ಇವುಗಳ ಉತ್ಪತ್ತಿಗೆ ವಿಶೇಷ ಪ್ರಾಕೃತಿಕ ಇಕೊಲಜಿ ಇರಬೇಕು. ಈ ಸ್ಥಳಗಳಲ್ಲಿ ಪೆಟ್ರೋಲ್, ಡೀಸೆಲ್ ನ ಮೋಟಾರ್‌ ಬೋಟ್‌ ತೆಗೆದುಕೊಂಡು ಹೋಗಲಾಗುವುದಿಲ್ಲ. ಏಕೆಂದರೆ ಪರಿಸರ ಮಾಲಿನ್ಯ ಈ ಜೀವಾಣುಗಳನ್ನು ನಾಶಗೊಳಿಸುತ್ತದೆ. ಆದ್ದರಿಂದ ನಾವು ಹುಟ್ಟು ಉಪಯೋಗಿಸಿ ಸಾಧಾರಣ ಬೋಟುಗಳಿಂದ ಒಂದು ಲೀಡ್‌ ಬೋಟ್‌ನ ಹಿಂದೆ ಹಿಂದೆ ಬ್ಲ್ಯೂ ಬೇ ನೋಡಲು ಹೋದೆವು.

ಈ ರೀತಿಯ ಬೋಟಿಂಗ್‌ಗೆ ಕಯಾಕಿಂಗ್‌ ಎನ್ನುತ್ತಾರೆ. ಹತ್ತುವಾಗ ಇಳಿಯುವಾಗ ನಿಮ್ಮ ಸೊಂಟದವರೆಗೆ ನೀರಿನಲ್ಲಿ ನಡೆಯಬೇಕಾಗುತ್ತದೆ. ಆದರೆ ಪ್ರಕೃತಿಯ ಈ ಲೀಲೆಯ ಆನಂದವೇ ವಿಭಿನ್ನ. ಪ್ಯೂರೆಟೋರಿಕೋದ ಬ್ಲ್ಯೂ ಬೇ ಸೈನ್‌ ಜುವಾನ್‌ನಲ್ಲೇ ಇದೆ. ಫ್ಜಾರ್ದೋ ಎಂಬ ಸ್ಥಳದಲ್ಲಿ ಬ್ಲ್ಯೂ ಬೇನ ಬುಕಿಂಗ್‌ ಬಹಳ ಹಿಂದೆಯೇ ಆಗಿರುತ್ತದೆ. ಆದ್ದರಿಂದ ನಮಗೆ ಕ್ಯಾನ್ಸಲ್ ಆಗಿದ್ದ ಟಿಕೆಟ್‌ಗಳೇ ಮತ್ತೆ ಸಿಕ್ಕವು. ಹೀಗಾಗಿ ನಾವು ಎರಡು ಕಂತುಗಳಲ್ಲಿ ಹೋಗಿದ್ದೆವು.

ಲಾ ಪಾಗುನ್ಶಿಯೆರಾ ಮತ್ತು ವಿಯೆಕ್ಸ್ ಮ್ಯಾಸ್ಕಿಟೋ ಬೇ ಎಂಬ ಎರಡು ಬೇರೆ ಬ್ಲ್ಯೂ ಬೇಗಳಿವೆ. ನಾವು ಅವನ್ನು ನೋಡಲಾಗದಿದ್ದರೂ ಅವುಗಳ ಬಗ್ಗೆ ಪ್ರಶಂಸೆ ಕೇಳಿದೆ. ಸೈನ್‌ ಜುವಾನ್‌ನಲ್ಲಿ ಸ್ಥಳೀಯ ಜನರು ಹೆಚ್ಚು ಪ್ರವಾಸಿಗರಿಂದಾಗಿ ಈ ಬೇಗಳಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು. ಬಹುಶಃ ಕೆಲವೇ ವರ್ಷಗಳಲ್ಲಿ ಈ ಬ್ಲ್ಯೂ ಬೇಗಳು ಕೊನೆಯಾಗಬಹುದು.

ಪ್ಯೂರೆಟೋರಿಕೋನಲ್ಲಿ ಅಮೆರಿಕನ್‌ ಮ್ಯಾಕ್‌ಡೊನಾಲ್ಡ್, ಸಬ್‌ವೇ, ಡಂಕಿನ್‌ ಡೋನಟ್ಸ್ ಇತ್ಯಾದಿಗಳಿವೆ. ಆದರೆ ನಾವು `ಚಿಲೀಸ್‌’ ಹೆಚ್ಚು ಉಪಯೋಗಿಸಿದೆವು. ಇಲ್ಲಿ ವೆಜಿಟೇರಿಯನ್‌ ಫುಡ್‌ ಸಿಗುತ್ತದೆ. ಟೀ, ಕಾಫಿ, ಹಾಲು ಇತ್ಯಾದಿಗಳ ಸ್ಟಾಕ್‌ ರೂಮಿನಲ್ಲೇ ಇತ್ತು. ಹೊರಗಿನಿಂದ ತರುವ ಪ್ರಮೇಯವೇ ಇರಲಿಲ್ಲ. ಹೀಗೆ 3 ದಿನಗಳು ಆರಾಮಾಗಿ ಕಳೆದೆವು. ಹೋಟೆಲ್‌ ರೂಮ್ ಗಳಲ್ಲಿ ಹೆಚ್ಚುವರಿ ಸೌಲಭ್ಯಗಳು ಬೇಕಿದ್ದರೆ ಮೊದಲೇ ಸೂಚನೆ ಕೊಡಬೇಕು.

ಅದ್ಭುತ ಪ್ರಾಕೃತಿಕ ದೃಶ್ಯಗಳು

ನಾಲ್ಕನೆಯ ದಿನ ನಾವು ಅಮೆಜಾನ್‌, ಇಂಡೋನೇಷಿಯಾ, ಕಾಂಗೋ ಇತ್ಯಾದಿ ಮಳೆ ಕಾಡುಗಳನ್ನು ನೋಡಲು ಹೋದೆವು. ಕೊಡೆ ಇತ್ಯಾದಿಗಳನ್ನು ತೆಗೆದುಕೊಂಡು ಸ್ಯಾಂಡ್‌ವಿಚ್‌ ಮತ್ತು ಇತರ ತಿಂಡಿ ಪ್ಯಾಕ್‌ ಮಾಡಿಕೊಂಡು ರೇನ್‌ ಫಾರೆಸ್ಟ್ ನೋಡಲು ಹೋದೆವು. ನಮ್ಮ ಕಾರು ಕೆಲವು ಕಿ.ಮೀ. ಹೋಗುಷ್ಟವರಲ್ಲಿ ಒತ್ತಾದ ಮರಗಳು ಶುರುವಾದವು. ದಾರಿಯಲ್ಲಿ ಒಂದು ದೊಡ್ಡದಾದ ಸುಂದರ ಝರಿ ಕಂಡಾಗ ಅಲ್ಲಿ ಇಳಿದು ನೋಡಿ ಆನಂದಿಸಿದೆವು. ಅದನ್ನು `ಲಾ ಕೋಕಾ’ ಫಾಲ್ಸ್ ಎನ್ನುತ್ತಾರೆ. 12 ಕಿ.ಮೀ. ನಂತರ `ಏಲ್ ಯಂಗ್‌ ರೇನ್‌ ಫಾರೆಸ್ಟ್’ ತಲುಪಿದೆವು. ಆಹಾ! ಎಂತಹ ದೃಶ್ಯ. ಅದ್ಭುತ ವೃಕ್ಷಗಳು, ಬಳ್ಳಿಗಳು, ಸ್ಥಳೀಯ ಗಿಣಿಗಳು ಮತ್ತು ಕೋಕೀ ಕಪ್ಪೆಗಳು. (ಬಹಳ ಚಿಕ್ಕ ಕಪ್ಪೆಗಳಾಗಿದ್ದರೂ ಇವು ವಿಶೇಷ ಧ್ವನಿಯಲ್ಲಿ ವಟಗುಟ್ಟುತ್ತಿರುತ್ತವೆ), ಹಲ್ಲಿಗಳು, ಬಣ್ಣ ಬಣ್ಣದ ಗಿಡಮರಗಳು. ಪ್ರವಾಸಿಗರಿಗೆ ಕಾಡಿನಲ್ಲಿ ಕೆನೋಪಿಗಳನ್ನು ಮಾಡಲಾಗಿದ್ದು, ಇದ್ದಕ್ಕಿದ್ದಂತೆ ಮಳೆ ಶುರುವಾದರೆ ಅವುಗಳಲ್ಲಿ ಆಶ್ರಯ ಪಡೆಯಬಹುದು.

ಒಂದು ಕೆನೋಪಿಯಲ್ಲಿ ಕುಳಿತು ಸ್ಯಾಂಡ್‌ವಿಚ್‌, ಟೀ ತೆಗೆದುಕೊಂಡೆವು. ಇನ್ನೂ ಕೊಂಚ ಸುತ್ತಾಡಿದೆವು. ವಾಪಸ್‌ ಹೊರಡಲು ಮನಸ್ಸಾಗಲೇ ಇಲ್ಲ. ಆಗಾಗ್ಗೆ ಮಳೆ ಬೀಳುತ್ತಲೇ ಇತ್ತು. 3-4 ಗಂಟೆಗೆ ಬೇಸರದಿಂದಲೇ ಕೋಂಡೋಗೆ ಹಿಂತಿರುಗಿದೆವು. ಕೊಂಚ ವಿಶ್ರಮಿಸಿದೆವು. ನಂತರ ಊಟ, ಮತ್ತೆ ರಾತ್ರಿ `ಚಿಲೀಸ್‌’ ರೆಸ್ಟೋರೆಂಟ್‌ಗೆ ಹೋದೆವು. ಅಲ್ಲಿ ಬಹಳ ಜನಸಂದಣಿ ಇತ್ತು. ನಾವು ಊಟ ಮಾಡಿ ಮತ್ತೆ ಕೋಂಡೋಗೆ ಹಿಂತಿರುಗಿದೆವು.

ವಿಶ್ವದಲ್ಲಿ ಹಸಿರು, ನೀಲಿ, ಪಿಂಕ್‌ ಮತ್ತು ಬಿಳಿಯ ಮರಳುಳ್ಳ ಅನೇಕ ಬೀಚ್‌ಗಳಿವೆ. 5ನೇ ದಿನ ನಾವು ಬೇಗನೆ ಎದ್ದು ಸ್ನಾನ ಮಾಡದೆ ಕುಲೆಬ್ರಾ ಐಲೆಂಡ್‌ಗೆ ಹೊರಟೆವು. ಅಲ್ಲಿ ಬಿಳಿಯ ಮರಳಿರುವ ಹಲವಾರು ಬೀಚ್‌ಗಳಿವೆ. ಕುಲೆಬ್ರಾ ತಲುಪಿದ ನಂತರ ಬಾಡಿಗೆಗೆ ಒಂದು ಜೀಪ್‌ ಪಡೆದು ಅಲ್ಲಿನ ಅತ್ಯಂತ ಜನಪ್ರಿಯ ಬೀಚ್‌ ಆದ ಫ್ಲೆಮೆಂಕೋಗೆ ಹೋದೆವು.

ಈ ಬೀಚ್‌ ವಿಶ್ವದ ಅತ್ಯಂತ ಪ್ರಸಿದ್ಧ ಬೀಚ್‌ಗಳಲ್ಲಿ ಒಂದಾಗಿದೆ. ಅಲ್ಲಿ ಕೆಲವು ಪ್ರವಾಸಿಗರು ಸನ್‌ಬಾಥ್‌, ಕೆಲವರು ಸ್ನಾನ, ಕೆಲವರು ಕ್ಯಾಂಪ್‌ ಔಟ್‌, ಕೆಲವರು ಬೋಟಿಂಗ್‌, ಕೆಲವರು ಕಯಾಕಿಂಗ್‌, ಇನ್ನೂ ಕೆಲವರು ಸ್ನಾರ್ಕಲಿಂಗ್‌ನಲ್ಲಿ ವ್ಯಸ್ತರಾಗಿರುತ್ತಾರೆ. ಈ ಬೀಚ್‌ನ್ನು `ಬೀಚ್‌ ಆಫ್‌ ಲೈಟ್‌ ಸ್ಯಾಂಡ್ಸ್ ಅಂಡ್‌ ಕ್ಲಿಯರ್‌ ಬ್ಲೂ ವಾಟರ್ಸ್‌’ ಎಂದು ಕರೆಯುತ್ತಾರೆ. ನೀರು ನೀಲಿಯಾಗಿ ಸ್ವಚ್ಛವಾಗಿತ್ತು. ನಾವು ಭಾರತದಲ್ಲಿ ಇಷ್ಟು ಸುಂದರವಾದ, ಸ್ವಚ್ಛವಾದ, ಉತ್ತಮ ಬೀಚ್‌ ನೋಡಿರಲಿಲ್ಲ. ಅಮೆರಿಕಾದ ಅಟ್ಲಾಂಟಿಕ್‌ ಸಿಟಿ ಬೀಚ್‌ ಕೂಡ ಇಷ್ಟು ಸುಂದರವಾಗಿಲ್ಲ. ಏನೇ ಆದರೂ ನಮಗೆ ನಮ್ಮ ಪ್ರೀತಿಯ ಗೋವಾದಲ್ಲಿ ಇದ್ದಂತೆ ಅನ್ನಿಸಿತು. ಸಂಜೆ ವೇಳೆಗೆ ಹೋಟೆಲ್ ಗೆ ವಾಪಸ್‌ ಬಂದೆವು. ನಂತರ ಸ್ವಿಮಿಂಗ್‌ ಪೂಲ್‌ಗೆ ಹೋಗಿ ಜಲಕ್ರೀಡೆಯಲ್ಲಿ ಮಗ್ನರಾದೆವು.

ನಿಯಮಗಳನ್ನು ಪಾಲಿಸುವುದು ಅಗತ್ಯ

ಸ್ವಿಮಿಂಗ್‌ ಪೂಲ್‌ಗಳ ಬಳಿ ಒಂದು ಚಿಕ್ಕ ತೋಟವಿದ್ದು, ಅಲ್ಲಿ 10 ಇಗುವಾನಾ ಸಾಕಲಾಗಿದೆ. ಪ್ರವಾಸಿಗರು ಅವಕ್ಕೆ ಎಲೆ, ಸೊಪ್ಪು ತಿನ್ನಿಸಿ ಗೆಳೆತನ ಬೆಳೆಸುತ್ತಾರೆ. ಇಗುವಾನಾ ಇಲ್ಲಿಯ ಪ್ರಸಿದ್ಧ ಹಲ್ಲಿಯಾಗಿದ್ದರೂ ಮೊಸಳೆ ಮರಿಯಂತೆ ಕಾಣುತ್ತದೆ. ನಾವು ಅದನ್ನು ಹಿಂದೆಂದೂ ಯಾವುದೇ ಮ್ಯೂಸಿಯಂನಲ್ಲಿ ನೋಡಿರಲಿಲ್ಲ. ಆಟವಾಡುವಾಗ ಇಗುವಾನ ನಮ್ಮ ಮೊಮ್ಮಗನನ್ನು ಕಚ್ಚಿದಾಗ ನಮಗೆ ಬಹಳ ಆತಂಕವಾಯಿತು. ಆದರೆ ಕಚ್ಚಿದ ಸ್ಥಳವನ್ನು ಚೆನ್ನಾಗಿ ಸೋಪಿನಿಂದ ತೊಳೆದು, ನಿಶ್ಚಿಂತರಾಗಿರಿ ಎಂದು ಗಾರ್ಡ್‌ ಆಶ್ವಾಸನೆ ಕೊಟ್ಟ. ಮರುದಿನ ಹೋಟೆಲ್‌ನಿಂದ ಚೆಕ್‌ಔಟ್‌ ಮಾಡಿ ಏರ್‌ಪೋರ್ಟ್‌ಗೆ ಹೊರಟೆವು. ಹೊಸ ಉತ್ಸಾಹ ಮತ್ತು ಹೊಸ ಜ್ಞಾನದೊಂದಿಗೆ ಫ್ಲೈಟ್‌ನಲ್ಲಿ ನ್ಯೂಯಾರ್ಕ್‌ಗೆ ಬಂದೆವು. ನಮಗೆ ಅಮೆರಿಕಾದಲ್ಲಾಗಲೀ, ಪ್ಯೂರೆಟೋರಿಕೋದಲ್ಲಾಗಲೀ ಜನ ಮಾತಾಡುವ ರೇಸಿಸಂ ಬಗ್ಗೆ ಅನುಭವವಾಗಲಿಲ್ಲ. `ವಸುದೈವ ಕುಟುಂಬಕಂ’ ಎಂದೇ ನಾವು ಹೇಳುವುದು. ಚೆನ್ನಾಗಿ ಪ್ರವಾಸ ಮಾಡಿ. ನಿಮ್ಮ ಕುಟುಂಬದವರೊಂದಿಗೆ ಭೇಟಿಯಾಗುತ್ತಿರಿ. ನೀವು ಲಜ್ಜಿತರಾಗಬಹುದಾದಂತಹ ಯಾವ ಕೆಲಸವನ್ನೂ ಮಾಡಬೇಡಿ. ವಿಶೇಷವಾಗಿ ಕಸವನ್ನು ಕಸದ ಡಬ್ಬಿಯಲ್ಲೇ ಹಾಕಿ. ಸ್ಥಳೀಯ ನಿಯಮಗಳನ್ನು ಪಾಲಿಸಿ ಮತ್ತು ಪ್ರವಾಸದ ಸಂಪೂರ್ಣ ಆನಂದ ಪಡೆಯಿರಿ.

– ಶಾರದಾ ಪ್ರಸಾದ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ