ಶಿಕಾರಿಪುರ: ಬಡತನದ ನಡುವೆಯೂ ಛಲ ಬಿಡದೆ ಓದಿ, ಪರಿಶ್ರಮದ ಮೂಲಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೊಟ್ರೇಶ್ ಅವರು ಇದೀಗ ಸಾವನ್ನೇ ಗೆದ್ದು ಬಂದಿದ್ದಾರೆ. ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಕಾರು ಕೆರೆಗೆ ಬಿದ್ದರೂ, ಸ್ಥಳೀಯ ಯುವಕರ ಸಮಯಪ್ರಜ್ಞೆ ಮತ್ತು ಮಾನವೀಯತೆಯಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿಕಾರಿಪುರ ತಾಲೂಕಿನ ನಿಂಬೆಗೊಂದಿ ಗ್ರಾಮದ ನಿವಾಸಿ ಕೊಟ್ರೇಶ್ ಅವರ ಬದುಕಿನ ಪಯಣವೇ ಹೋರಾಟ ಮತ್ತು ಸಾಧನೆಯ ಕಥೆ. ಬಡತನದ ಪರಿಸ್ಥಿತಿಯಲ್ಲೂ ಕೂಲಿ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದ ಅವರು, ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಹೊಂದಿದ್ದರು. ಬಾಲ್ಯದಿಂದಲೇ ರಕ್ಷಣಾ ಇಲಾಖೆಯಲ್ಲಿ ಪೊಲೀಸ್ ಹುದ್ದೆ ಪಡೆಯಬೇಕೆಂಬ ಕನಸು ಕಂಡಿದ್ದ ಅವರು, ಯಾವುದೇ ಅಡ್ಡದಾರಿ ಹಿಡಿಯದೆ ತಮ್ಮ ಪರಿಶ್ರಮ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡು ನಿರಂತರವಾಗಿ ಅಧ್ಯಯನ ಮಾಡಿದರು.

IMG-20260920-WA0076

ಹೊಟ್ಟೆಪಾಡಿಗಾಗಿ ಕೆಲ ವರ್ಷಗಳ ಕಾಲ ಖಾಸಗಿ ಬಸ್ ಏಜೆಂಟರಾಗಿಯೂ ಕೆಲಸ ಮಾಡಿದರು. ಆದರೆ ಆರ್ಥಿಕ ಸಂಕಷ್ಟಗಳ ನಡುವೆಯೂ ತಮ್ಮ ಕನಸನ್ನು ಕೈಬಿಡಲಿಲ್ಲ. ಕೊನೆಗೂ ಅವರ ಪರಿಶ್ರಮಕ್ಕೆ ಫಲ ದೊರೆತು, ರಕ್ಷಣಾ ಇಲಾಖೆಯಲ್ಲಿ ಸಿವಿಲ್ ಹೆಡ್ ಕಾನ್ಸ್‌ಟೇಬಲ್ ಹುದ್ದೆಗೆ ಆಯ್ಕೆಯಾದರು.

ಭದ್ರಾವತಿ ಹಾಗೂ ಆನವಟ್ಟಿಯಲ್ಲಿ ಸೇವೆ ಸಲ್ಲಿಸಿರುವ ಕೊಟ್ರೇಶ್ ಅವರು ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಸಿವಿಲ್ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸೇವಾ ಮನೋಭಾವ ಮತ್ತು ಕರ್ತವ್ಯನಿಷ್ಠೆಗೆ ‘Knights in Khaki’ ಪ್ರಶಸ್ತಿಯೂ ಸಂದಿದೆ.

IMG-20260920-WA0074

ಪೊಲೀಸ್ ಕರ್ತವ್ಯದ ಜತೆಗೆ ಸಮಾಜ ಸೇವೆ

ಕೊಟ್ರೇಶ್ ಅವರ ಸೇವಾ ಮನೋಭಾವ ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬಡವರು ಮತ್ತು ಸಂಕಷ್ಟದಲ್ಲಿರುವವರಿಗೆ ನೆರವಾಗುವ ಗುಣ ಹೊಂದಿರುವ ಅವರು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ರಂಗಭೂಮಿಯಲ್ಲಿಯೂ ಆಸಕ್ತಿ ಹೊಂದಿರುವ ಅವರು, ಸರಳ ಜೀವನ ನಡೆಸುತ್ತಾ ಜಾತಿ, ಧರ್ಮದ ಭೇದವಿಲ್ಲದೆ ಅಗತ್ಯವಿರುವವರಿಗೆ ನೆರವಿನ ಹಸ್ತ ಚಾಚುತ್ತ ಬಂದಿದ್ದಾರೆ. ಇದೇ ಕಾರಣದಿಂದ ಸ್ಥಳೀಯವಾಗಿ ಅವರು ಅನೇಕರಿಗೆ ಪರಿಚಿತರಾಗಿದ್ದಾರೆ.

IMG-20260920-WA0073

ಕೆರೆಗೆ ಬಿದ್ದ ಕಾರು; ಯುವಕರಿಂದ ರಕ್ಷಣೆ

ಇಂತಹ ಸೇವಾ ಮನೋಭಾವದ ಕೊಟ್ರೇಶ್ ಅವರಿಗೆ ಇತ್ತೀಚೆಗೆ ವಿಧಿಯೇ ದೊಡ್ಡ ಪರೀಕ್ಷೆ ಎದುರಿಸಿತು. ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಶಿರಾಳಕೊಪ್ಪದ ಛತ್ರದಹಳ್ಳಿ ಕೆರೆಗೆ ಬಿದ್ದಿತು. ಪರಿಣಾಮ ಸಾವು–ಬದುಕಿನ ನಡುವೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಕಾರು ಕೆರೆಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ಯುವಕರು ಕೂಡಲೇ ನೆರವಿಗೆ ಧಾವಿಸಿದರು. ಯಾವುದೇ ಭಯವಿಲ್ಲದೆ ಜೀವದ ಹಂಗು ತೊರೆದು ಕೆರೆಗೆ ಧುಮುಕಿದ ಯುವಕರ ಪೈಕಿ ಶಿಕಾರಿಪುರದ ಆಲ್ತಾಫ್ ಅವರು ಸಾಹಸ ಮೆರೆದು ಕೊಟ್ರೇಶ್ ಅವರನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಂಕಷ್ಟದ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದ ಯುವಕರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮಾನವೀಯತೆಗೆ ಮತ್ತೊಂದು ಸಾಕ್ಷಿ

ಇತರರಿಗೆ ನೆರವಾಗುತ್ತಾ ಬಂದಿದ್ದ ಕೊಟ್ರೇಶ್ ಅವರ ಸಂಕಷ್ಟದ ಸಂದರ್ಭದಲ್ಲಿ ಸ್ಥಳೀಯ ಯುವಕರು ನೆರವಿನ ಹಸ್ತ ಚಾಚಿರುವುದು ಮಾನವೀಯತೆಯ ಮತ್ತೊಂದು ಉದಾಹರಣೆಯಾಗಿದೆ. ಸದಾ ಸಮಾಜದ ಕಷ್ಟದಲ್ಲಿರುವವರ ನೆರವಿಗೆ ನಿಂತಿದ್ದ ವ್ಯಕ್ತಿಯೊಬ್ಬರು ಅಪಾಯಕ್ಕೆ ಸಿಲುಕಿದಾಗ, ಸ್ಥಳೀಯರು ಕೂಡ ಅದೇ ಮಾನವೀಯತೆಯಿಂದ ಅವರನ್ನು ರಕ್ಷಿಸಿದ್ದಾರೆ.

ಸಾವಿನ ದವಡೆಯಿಂದ ಪಾರಾಗಿ ಬದುಕುಳಿದಿರುವ ಕೊಟ್ರೇಶ್ ಅವರಿಗೆ ಇದು ಹೊಸ ಜೀವನದಂತಾಗಿದೆ. ಅವರ ಬದುಕಿನ ಹೋರಾಟ, ಸಾಧನೆ ಹಾಗೂ ಇದೀಗ ಅಪಾಯದಿಂದ ಪಾರಾದ ಘಟನೆ ಎಲ್ಲರಿಗೂ ಪ್ರೇರಣೆಯಾಗುವಂತಿದೆ.

ಮುಂದೆಯೂ ರಕ್ಷಣಾ ಇಲಾಖೆಯಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ, ಉನ್ನತ ಹುದ್ದೆಗೇರಿ ಸಮಾಜ ಮತ್ತು ಜನತೆಗೆ ಇನ್ನಷ್ಟು ಸೇವೆ ಸಲ್ಲಿಸಲಿ ಎಂಬುದು ಎಲ್ಲರ ಆಶಯ. ಒಳ್ಳೆಯದನ್ನೇ ಬಯಸಿ, ಸಾಧ್ಯವಾದಷ್ಟು ಇತರರಿಗೆ ನೆರವಾಗುತ್ತ ಬದುಕಿದರೆ ಸಂಕಷ್ಟದ ಸಮಯದಲ್ಲಿ ಮಾನವೀಯತೆಯೇ ದೊಡ್ಡ ಶಕ್ತಿಯಾಗಿ ನಿಲ್ಲುತ್ತದೆ ಎಂಬುದನ್ನು ಕೊಟ್ರೇಶ್ ಅವರ ಬದುಕಿನ ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

ಬರಹಗಾರರು– ಅನಿಲ್ ಹೆಚ್. ಪ್ರಕಾಶ್, ಸುರಹೊನ್ನೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ