ನಿನ್ನೆ ಆಕಸ್ಮಿಕವಾಗಿ ಪಕ್ಕದ್ಮನೆಯ ಮಾಲತಿ ಒಂದಿಷ್ಟು ಹಣವನ್ನು ಸಾಲವಾಗಿ ಕೇಳಲು ಬಂದಿದ್ದಳು. ಅವಳ ಮುಖದಲ್ಲಿ  ಉದಾಸತನ ಎದ್ದು ಕಾಣುತ್ತಿತ್ತು. ಏನೋ ಗಹನ ವಿಷಯ ಇರಬೇಕೆಂದು ಅನಿಸಿತು. ಅವಳನ್ನು ಕೆದಕಿ ಕೇಳಿದಾಗ ಆಕೆ ತನ್ನ ಪತಿ ಒಬ್ಬ ಬಾಬಾನ ಜಾಲಕ್ಕೆ ಸಿಲುಕಿ ತಮ್ಮ ಬಳಿ ಇರುವುದೆಲ್ಲನ್ನು ಕಳೆದುಕೊಂಡಿರುವ ಬಗ್ಗೆ ಹೇಳಿದಳು.

ಆ ಬಾಬಾ ಆಕೆಯ ಪತಿಗೆ ಮುಂಬರುವ ದಿನಗಳಲ್ಲಿ ಬರುವ ಕಷ್ಟಗಳ ಬಗ್ಗೆ ಹೇಳಿ ಹೆದರಿಸಿ, ಅದಕ್ಕೆ ಪರಿಹಾರ ತೋರಿಸುವ ನೆಪದಲ್ಲಿ  ಪೂಜೆ ಪುನಸ್ಕಾರಗಳಿಗೆಂದು ತಮ್ಮ ಬಳಿಯಿದ್ದ ಎಲ್ಲ ಹಣವನ್ನು ಕಳೆದುಕೊಂಡಿದ್ದರು. ಮಾಲತಿ ತನ್ನ ಪತಿಗೆ ಈ ಬಗ್ಗೆ ಅದೆಷ್ಟೇ ಹೇಳಿದರೂ ಆತ ಮಾತ್ರ ಆ ಯಾವ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆ ಕಾರಣದಿಂದ ಅವರ ಮನೆಯ ಪರಿಸ್ಥಿತಿ ಅದೆಷ್ಟು ಬಿಗಡಾಯಿಸಿ ಬಿಟ್ಟಿತೆಂದರೆ, ಮಗಳ ತಿಂಗಳ ಶಾಲಾ ಫೀಸ್‌ ಕೂಡ ಕೊಡೋಕೆ ಕಷ್ಟ ಆಗತೊಡಗಿತು. ಒಳ್ಳೆಯ ಸ್ಥಿತಿಯಲ್ಲಿದ್ದ ಮನೆಯನ್ನು ಹೀನಾಯ ಸ್ಥಿತಿಗೆ ತಂದು ನಿಲ್ಲಿಸಿದ ಅವಳ ಪತಿ ಇನ್ನೂ ಯಾವ ಒಳ್ಳೆಯ ದಿನಗಳ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತಿದ್ದನೊ ಏನೋ?

ಮಾಲತಿಯ ಪತಿಯಷ್ಟೇ ತಮ್ಮ ಬಳಿ ಇದ್ದುದನ್ನು ಕಳೆದುಕೊಂಡದ್ದಲ್ಲ, ಇಂತಹ ನೂರಾರು, ಸಾವಿರಾರು ಜನರು ನಮ್ಮ ನಡುವೆ ಸಿಗುತ್ತಾರೆ.

ಮೂಢನಂಬಿಕೆಯೆಂಬ ಕೆಸರು

ಮೂಢನಂಬಿಕೆ ಎಂದರೇನು? ಮನುಷ್ಯನ ಜೊತೆಗೆ ಅದು ಅಷ್ಟೊಂದು ನಿಕಟತೆ ಹೊಂದಿದ್ದಾರೂ ಹೇಗೆ? ಇದನ್ನು ಸರಳ ಶಬ್ದಗಳಲ್ಲಿ ಹೇಳುವುದಾದರೆ ತರ್ಕ ಮಾಡದೆಯೇ, ಯಾವುದೇ ಸಂಗತಿಯನ್ನಾದರೂ ಒಪ್ಪಿಕೊಳ್ಳುವುದೇ ಮೂಢನಂಬಿಕೆ. ಕೆಲವರು ಅಜ್ಞಾನದಿಂದ ಮತ್ತೆ ಕೆಲವರು ರೂಢಿವಾದದ ಕಾರಣದಿಂದ ಮೂಢನಂಬಿಕೆಗೆ ಸಿಲುಕುತ್ತಾರೆ. ಮೂಢನಂಬಿಕೆಯನ್ನು ಧರ್ಮದೊಂದಿಗೆ ಜೋಡಿಸಿ, ಧರ್ಮದ ಗುತ್ತಿಗೆದಾರರು ವ್ಯಕ್ತಿಯೊಬ್ಬನ ದೌರ್ಬಲ್ಯದ ಲಾಭ ಪಡೆದು ಹಣದ ಸುಲಿಗೆ ಮಾಡುತ್ತಾರೆ.

ಗ್ರಹ ನಕ್ಷತ್ರಗಳ ಮಾಯಾಜಾಲ

ಇಂದಿನ ವೈಜ್ಞಾನಿಕ ಯುಗದಲ್ಲಿ ವಿಜ್ಞಾನಿಗಳು ಹೊಸ ಹೊಸ ಗ್ರಹನಕ್ಷತ್ರಗಳ ಶೋಧದಲ್ಲಿ ತೊಡಗಿದ್ದರೆ, ಕೆಲವು ಜನರು ಈ ಗ್ರಹಗಳನ್ನು ತಮ್ಮ ಜೀವನದ ಸುಖದುಃಖಕ್ಕೆ ಆಧಾರ ಎಂದು ಭಾವಿಸುತ್ತಿದ್ದಾರೆ. ಮಗುವೊಂದು ಹುಟ್ಟುತ್ತಿದ್ದಂತೆಯೇ ಅದರ ಜಾತಕ ಬರೆಸಿ, ಅದನ್ನು ಗ್ರಹನಕ್ಷತ್ರಗಳಿಗೆ ಹೋಲಿಸುತ್ತಾರೆ. ಆ ಮಗು ಮುಂದೆ ದೊಡ್ಡವನಾಗಿ ಏನು ಓದುತ್ತದೆ, ಹೇಗೆ ಓದುತ್ತದೆ, ಏನು ಉದ್ಯೋಗ ಮಾಡುತ್ತದೆ ಎಂಬುದನ್ನು ಹೇಳುವ ಜ್ಯೋತಿಷಿಗಳು, ಹುಟ್ಟಿದ ಸಮಯದಲ್ಲಿನ ಗ್ರಹ ನಕ್ಷತ್ರಗಳಿಂದ ಅದು ಯಾವಾಗ ಮದುವೆಯಾಗಬಹುದು ಎಂಬ ಭವಿಷ್ಯವಾಣಿ ನುಡಿಯುತ್ತಾರೆ.

ಗ್ರಹಗಳು ಅಶಾಂತವಾಗಿದ್ದರೆ, ಪೂಜೆ, ಹವನ, ದಾನ ಮುಂತಾದವುಗಳ ಮುಂಖಾಂತರ ಅವನ್ನು ಶಾಂತಗೊಳಿಸಿ ಅನುಕೂಲಕರ ವಾತಾವರಣ ಕಲ್ಪಿಸುವ ಬಗ್ಗೆ ಹುಸಿ ಭರವಸೆ ನೀಡುತ್ತಾರೆ. ಕೆಲವು ವ್ಯಕ್ತಿಗಳು ತಮ್ಮ ಜೀವನವನ್ನು ಐಶಾರಾಮಿ ಆಗಿಸಿಕೊಳ್ಳಲು ಹೆಣೆದ ಜಾಲವಿದು ಎಂಬುದು ಸಾಮಾನ್ಯ ಜನರಿಗೆ ಏಕೆ ಗೊತ್ತಾಗುವುದಿಲ್ಲವೋ ಏನೋ? ಬಡವರು ಮಧ್ಯಮ ವರ್ಗದವರು ಎಲ್ಲಿಯವರೆಗೆ ಈ ದುರುಳರಿಗೆ ತಮ್ಮ ಬೆವರಿನ ಹಣವನ್ನು ಅರ್ಪಿಸುತ್ತಿರುತ್ತಾರೊ ಏನೋ? ಈ ಮೂಢನಂಬಿಕೆ ಎಲ್ಲಿಯವರೆಗೆ ಜನರಲ್ಲಿ ಹಾಗೆಯೇ ಸುಳಿದಾಡುತ್ತಿರುತ್ತದೆ?

ಧಾರ್ಮಿಕ ಲೂಟಿಕೋರರ ಸಂಚು

ದೇವರನ್ನು ಪ್ರಸನ್ನವಾಗಿಡುವುದು, ಭೂತಪ್ರೇತ, ಮಾಟಗಾತಿ ಹಾಗೂ ದೇವಿ ದೇವತೆಗಳು ಕೋಪಗೊಂಡು ಶಾಪ ಕೊಡುತ್ತಾರೆ ಎಂಬ ಭಯ ಹುಟ್ಟಿಸಿ ಜನರನ್ನು ಸುಲಿಗೆ ಮಾಡುತ್ತಿರುವುದು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಮನುಷ್ಯನ ಹಣೆಬರಹದ ಮೇಲೆ ಎಲ್ಲವನ್ನು ಹಾಕಿಬಿಡುವ ಮನೋವೈಜ್ಞಾನಿಕ ಯೋಚನೆ ಈ ಬಗೆಯ ಧಾರ್ಮಿಕ ಲೂಟಿಕೋರತನಕ್ಕೆ ದಾರಿ ಮಾಡಿಕೊಟ್ಟಿದೆ. ಜ್ಯೋತಿಷಿಗಳ ಜಾಲ ಮನೋವೈಜ್ಞಾನಿಕ ಯೋಚನೆಯಿಂದ ಪ್ರೇರಿತವಾಗಿದ್ದು, ಹಾಗಾಗಿ ಸುಲಿಗೆ ಸುಲಭವಾಗಿ ಯಾವುದೇ ವಿರೋಧವಿಲ್ಲದೆ ನಡೆಯುತ್ತಿದೆ.

ಸಂತ್ರಸ್ತ ಮಹಿಳೆ ಅಥವಾ ಪುರುಷ ಭಾವಿಸುವುದೇನೆಂದರೆ, ಇಂತಿಂಥ ಸ್ವಾಮಿ ಅಥವಾ ಜ್ಯೋತಿಷಿ ದಿವ್ಯಶಕ್ತಿ ಹೊಂದಿದ್ದು, ಅವರು ಹೇಳಿದ್ದನ್ನು ಪಾಲಿಸುವುದರಿಂದ ತಾನು ನಿಜವಾಗಿಯೂ ಕಷ್ಟಗಳಿಂದ ಮುಕ್ತಿ ಹೊಂದುತ್ತೇನೆ ಎಂದು ನಂಬುತ್ತಾನೆ. ಆದರೆ ವಾಸ್ತವದಲ್ಲಿ ಜನರ ಜೇಬು ಖಾಲಿಯಾಗುತ್ತದೆಯೇ ವಿನಾ, ಅವರ ಸಮಸ್ಯೆಗಳೇನೂ ಕಡಿಮೆಯಾಗುವುದಿಲ್ಲ. ದೆಹಲಿಯ ನಿವಾಸಿ ರಮೇಶ್‌ ಕುಮಾರ್‌ ಒಂದು ಸಲ ತಮ್ಮ ತಾಯಿಯನ್ನು ಕರೆದುಕೊಂಡು ಬಾಬಾ ಒಬ್ಬರ ಬಳಿ ಹೋಗಿದ್ದರು. ಏಕೆಂದರೆ ಅವರ ಹೆಂಡತಿಯ ಜೊತೆ ಅಮ್ಮನ ಜಗಳ ನಡೆಯುತ್ತಿತ್ತು. ಬಾಬಾರನ್ನು ಭೇಟಿಯಾಗಲು ಹೊರಗೆ ಕೌಂಟರ್‌ನಲ್ಲಿ ದೊಡ್ಡ ಮೊತ್ತವೊಂದನ್ನು ಕೊಡಬೇಕಾಯಿತು. ಒಳಗೆ ತಲುಪಿದಾಗ, ಏರ್‌ ಕಂಡೀಷನ್ಡ್ ರೂಮಿನಲ್ಲಿ ಪ್ಯಾಂಟ್‌ಶರ್ಟ್‌ ಧರಿಸಿದ್ದ ವ್ಯಕ್ತಿ ಎತ್ತರದ ಚೇರ್‌ ಮೇಲೆ ಕುಳಿತಿದ್ದ. ಆತ ಚಿತ್ರ ವಿಚಿತ್ರ ಸಲಹೆಗಳನ್ನು ಕೊಡುತ್ತಿದ್ದ. ಒಬ್ಬರಿಗೆ ಸಮೋಸಾ ತಿನ್ನಲು ಹೇಳುತ್ತಿದ್ದರೆ,  ಮತ್ತೊಬ್ಬರಿಗೆ ದೇವರಿಗೆ ಮದ್ಯದ ನೈವೇದ್ಯ ಕೊಡಲು, ಇನ್ನೊಬ್ಬರಿಗೆ ನೀಲಿ ಪೆನ್‌ ಬಳಸಲು ಹೇಳುತ್ತಿದ್ದ. ರಮೇಶ್‌ಗೆ ಆ ಸ್ವಾಮಿ ಖೀರು ಸೇವನೆಯಿಂದ ಹೆಂಡತಿ ಅಮ್ಮನ ಸಂಬಂಧ ಸರಿಹೋಗುತ್ತದೆ ಎಂದು ಹೇಳಿದ.

ಮನೆಗೆ ಬಂದು ರಮೇಶ್‌ ಯಥೇಚ್ಛವಾಗಿ ಖೀರು ತಿಂದಿದ್ದರಿಂದಾಗಿ ಅವನ ಆರೋಗ್ಯ ಹದಗೆಟ್ಟಿತು. ಏಕೆಂದರೆ ಅವನು ಮಧುಮೇಹ ಪೀಡಿತ ವ್ಯಕ್ತಿ. ಇದರಿಂದಾಗಿ ಆಸ್ಪತ್ರೆಗೆ ಸಾಕಷ್ಟು ಖರ್ಚಾಯಿತು. ಜೊತೆಗೆ ಸ್ವಾಮೀಜಿಗೆ ಕೊಟ್ಟ ಹಣ ವ್ಯರ್ಥವಾಗಿ ಹೋಯಿತು. ಹೀಗೆ ಸಮಸ್ಯೆ ಮತ್ತಷ್ಟು ಕಗ್ಗಂಟಾಯಿತು.

ಮೋಸದ ಹಲವು ರೂಪಗಳು

ಧರ್ಮದ ಹೆಸರಿನಲ್ಲಿ ಮೋಸ ಮಾಡಿ ತಮ್ಮ ಜೇಬು ಭರ್ತಿ ಮಾಡಿಕೊಳ್ಳಲು, ಬಂದ ವ್ಯಕ್ತಿಯನ್ನು ತಮ್ಮ ಕಪಿಮುಷ್ಟಿಗೆ ಸಿಲುಕಿಸಿಕೊಳ್ಳಲು ಹೊಸ ಹೊಸ ತಂತ್ರ ಅನುಸರಿಸುತ್ತಾರೆ. ಹಸ್ತರೇಖೆ ಹಾಗೂ ಜಾತಕ ನೋಡಿ ಭವಿಷ್ಯ ಹೇಳುವುದು ಹಾಗೂ ಬಾಯಿಗೆ ಬಂದಷ್ಟು ದುಡ್ಡು ಕೇಳುವುದು ಸಾಮಾನ್ಯ ಸಂಗತಿ. ಗ್ರಹಗಳ ದುಷ್ಪ್ರಭಾವದಿಂದ ರಕ್ಷಿಸಿಕೊಳ್ಳಲು, ಜನರು ಮೊದಲು ದುಬಾರಿ ಹರಳುಗಳ್ಳುಳ್ಳ ಬೆಳ್ಳಿಬಂಗಾರದ ಉಂಗುರಗಳನ್ನು ಧರಿಸುವುದು ಕಂಡುಬರುತ್ತಿತ್ತು. ಒಮ್ಮೊಮ್ಮೆ ಈ ಭವಿಷ್ಯ ಹೇಳುವವರು ಅಗ್ಗದ ಹರಳುಗಳನ್ನು ಅಳವಡಿಸಿದ ಉಂಗುರಗಳನ್ನು ಚಮತ್ಕಾರಿ ಉಂಗುರವೆಂದು ಹೇಳಿ, ಭಾರಿ ಮೊತ್ತವನ್ನು ಗಿಟ್ಟಿಸಿಕೊಳ್ಳುತ್ತಿದ್ದರು. ತಂತ್ರಮಂತ್ರದ ಸುಳ್ಳು ಪ್ರಯೋಗ ಮಾಡಿ ತಾಯಿತಗಳನ್ನು ಮಾರುವ ಕೆಲಸವನ್ನು ಇವರು ಮಾಡಿಕೊಂಡು ಬರುತ್ತಲೇ ಇದ್ದಾರೆ.

ಯಾವುದೇ ಕೆಲಸ ಸರಿಯಾಗಿ ನೆರವೇರಲೆಂದು ಮಾಡುವ ಪೂಜೆ ಹೋಮಹವನ, ಅಭಿಷೇಕ ಮುಂತಾದ ಹೆಸರಿನಲ್ಲಿ ಚೆನ್ನಾಗಿ ಓದಿದರು ಹಾಗೂ ಸೆಲೆಬ್ರಿಟಿ ಜನರಿಂದ ವಸೂಲಿ ಮಾಡುವ ಕಲೆಯೂ ಪೂಜಾರಿ ಪುರೋಹಿತರಿಗೆ ಚೆನ್ನಾಗಿ ಸಿದ್ಧಿಸಿದೆ.

ಮದುವೆ ಆಗದೇ ಇರುವುದು, ಉದ್ಯೋಗ ದೊರೆಯದೇ ಇರುವುದು, ವ್ಯಾಪಾರದಲ್ಲಿ ನಷ್ಟ ಸಂಭವಿಸಿದಾಗ ಜನರು ತಮ್ಮಲ್ಲಿ ತಾವು ಸುಧಾರಣೆಗೆ ಮಾಡಿಕೊಳ್ಳುವ ಬದಲಿಗೆ ತಮ್ಮ ಹಣೆಬರಹವನ್ನು ಹಳಿದುಕೊಳ್ಳುತ್ತಾರೆ. ಈ ಮೂಲಕ ಧರ್ಮದ ಹೆಸರಿನಲ್ಲಿ ಮೋಸ ಮಾಡುವವರ ಕಪಿಮುಷ್ಟಿಗೆ ಸುಲಭವಾಗಿ ಸಿಲುಕಿ, ಅವರು ಹೇಳಿದ ಉಪಾಯ ಅನುಸರಿಸಿ ತಮ್ಮ ಜೇಬು ಖಾಲಿ ಮಾಡಿಕೊಳ್ಳುತ್ತಾರೆ.

ಚೀನಾ ಫೆಂಗ್‌ಶುಯಿ

ಜೀವನಮಟ್ಟ ಸುಧಾರಿಸುವ  ಬೊಗಳೆ ಭರವಸೆ ನೀಡಿ ಇತ್ತೀಚಿನ ದಿನಗಳಲ್ಲಿ  ಕೆಲವು ಭ್ರಾಮಕ ಜಾಲಗಳು ಹರಿದಾಡುತ್ತಿವೆ. ಚೀನಾ ವಾಸ್ತು ಅಂದರೆ ಫೆಂಗ್‌ಶುಯಿ ಇದೇ ಶ್ರೇಣಿಯಲ್ಲಿ ಬರುತ್ತದೆ. ಅದನ್ನು ಅನುಸರಿಸುವವರ ಪ್ರಮಾಣ ಹೆಚ್ಚುತ್ತಿದೆ. ಆಸ್ತಿ, ಸಂಪತ್ತು, ಒಳ್ಳೆಯ ಆರೋಗ್ಯ, ಯಶಸ್ಸು ಮತ್ತು ಸುಖ ಶಾಂತಿಯ ಲಾಲಸೆಯಲ್ಲಿ ವಿಭಿನ್ನ ಬಗೆಯ ಮೀನುಗಳು, ಕಪ್ಪೆಗಳು, ಡ್ರ್ಯಾಗನ್‌ ಹಾಗೂ ಕ್ರಿಸ್ಟಲ್ ಬಾಲ್‌ಗಳಿಗಾಗಿ ಜನರು ವ್ಯರ್ಥ ಹಣ ಖರ್ಚು ಮಾಡುತ್ತಿದ್ದಾರೆ.

ಎಲ್ಲೆಲ್ಲೂ ಮೋಸ

ಧರ್ಮದ ಹೆಸರಿನಲ್ಲಿ ಮೋಸ ಮಾಡುವವರು ಅಲ್ಲಲ್ಲಿ ಆಫೀಸು ತೆರೆದಿದ್ದಾರೆ. ರಸ್ತೆ ಬದಿ, ಫುಟ್‌ಪಾತ್‌, ಬಸ್‌ ನಿಲ್ದಾಣಗಳಲ್ಲಿ ಅಷ್ಟೇ ಏಕೆ, ಖರೀದಿಯ ಆಧುನಿಕ ಮಾಲ್‌ಗಳಲ್ಲೂ ಕೂಡ ಇವರು ಧರ್ಮದ ವ್ಯಾಪಾರ ಶುರು ಮಾಡಿಕೊಂಡಿದ್ದಾರೆ. ಧಾರ್ಮಿಕ ಪುಸ್ತಕಗಳನ್ನು ಮಾರುವ ಇವರು ಹಣೆಗೆ ತಿಲಕ ಇಟ್ಟುಕೊಂಡು ಬಹಳ ಬೇಗ ಎಲ್ಲರ ಆಕರ್ಷಣೆಗೆ ಪಾತ್ರರಾಗುತ್ತಾರೆ. ಇಲ್ಲಿಗೆ ಬರುವ ಜನರು ತಮ್ಮ ಮುಂಬರುವ ದಿನಗಳ ಬಗ್ಗೆ ತಿಳಿಯುವ ಕುತೂಹಲ ಹೊಂದಿರುತ್ತಾರೆ. ಅದೇ ಅವರನ್ನು ಮೂಢನಂಬಿಕೆಯತ್ತ  ಕ್ರಮೇಣ ಕೊಂಡೊಯ್ಯುತ್ತದೆ. ಬೇರೆ ಬೇರೆ ಪ್ರಕಾರದ ರೋಗಗಳನ್ನು ಗುಣಪಡಿಸುವುದು, ಮದುವೆ ಅಥವಾ ಪ್ರೀತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುವ ಭರವಸೆ, ವ್ಯಾಪಾರ ಹಾಗೂ ಉದ್ಯೋಗಕ್ಕೆ ಸಂಬಧಪಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಮ್ಮನ್ನು ಸಂಪರ್ಕಿಸುವ ಕುರಿತಂತೆ ಜಾಹೀರಾತುಗಳು ಬೀದಿ ಬೀದಿಗಳಲ್ಲಿ, ಬಸ್‌ಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಅಂಟಿಸಿರುವುದನ್ನು ಕಾಣಬಹುದು. ಯಾರಾದರೂ ಅವರಿಗೆ ಕರೆ ಮಾಡಿದರೆ ಸಾಕು, ಸ್ವಲ್ಪ ಹೊತ್ತು ಬಣ್ಣದ ಮಾತುಗಳನ್ನಾಡಿ ನಂತರ ತಮ್ಮ ವಾಸ್ತವ ಮುಖ ತೋರಿಸುತ್ತಾರೆ. ವ್ಯಕ್ತಿಯೊಬ್ಬ ಇವರ ಜಾಲಕ್ಕೆ ಸಿಲುಕಿದರೆ ಸಾಕು, ಅವರು ದೊಡ್ಡ ಮೊತ್ತ ಕಬಳಿಸಿಬಿಡುತ್ತಾರೆ.

ಧಾರ್ಮಿಕ ಮೋಸದ ಬದಲಾದ ಸ್ವರೂಪ

ಮೂಢನಂಬಿಕೆಯ ಹೆಸರಿನಲ್ಲಿ  ಹಣ ಲಪಟಾಯಿಸುವ ಆಟ ಈಗ ಟಿ.ವಿ ಚಾನೆಲ್‌ಗಳು ಹಾಗೂ ವೆಬ್‌ಸೈಟ್‌ಗಳನ್ನು ಕೂಡ ತಲುಪಿದೆ. ಮಾಧ್ಯಮಗಳು ಇದನ್ನು ವಿರೋಧಿಸುವ ಬದಲು ಅದನ್ನು ಪೋಷಿಸುವಂತಹ ಕೆಲಸ ಮಾಡುತ್ತಿವೆ. ಭವಿಷ್ಯದಲ್ಲಿ ಬರಬಹುದಾದ ಒಳ್ಳೆಯ ದಿನಗಳ ಭ್ರಮೆ ತೋರಿಸಿ ಬಗೆಬಗೆಯ ದೇವಿ ದೇವತೆಗಳ ಮೂರ್ತಿಗಳು, ತಾಮ್ರ ಅಥವಾ ಹಿತ್ತಾಳೆಯ ಮೇವೆ ಕೆತ್ತಲಾದ ಯಂತ್ರಮಂತ್ರ, ಉಂಗುರುಗಳು, ತಾಯಿತಗಳು, ದುಬಾರಿ ಹರಳುಗಳನ್ನು ಮಾರಾಟ ಮಾಡುವ ಬಹು ದೊಡ್ಡ ಜಾಲ ಎಲ್ಲೆಲ್ಲೂ ಪಸರಿಸಿದೆ. ರುದ್ರಾಕ್ಷಿ, ಸ್ಛಟಿಕಮಣಿ, ತುಳಸಿ ಮಾಲೆ  ಧರಿಸುವುದರಿಂದ ರೋಗ ನಿವಾರಣೆ ಆಗುತ್ತದೆಂಬ ಭರವಸೆ ನೀಡುವುದು ಈಗ ಸಾಮಾನ್ಯ ಎಂಬಂತಾಗಿದೆ. ಟಿ.ವಿ ಚಾನೆಲ್ ಹಾಗೂ ವೆಬ್‌ಸೈಟ್‌ಗಳಲ್ಲಿ ಇಂತಹ ಜಾಹೀರಾತುಗಳ ಸುರಿಮಳೆಯೇ ಆಗುತ್ತಿದೆ. ಫೆಂಗ್‌ಶುಯಿಯ ಸಲಕರಣೆಗಳು ಕೂಡ ಶಾಪಿಂಗ್‌ ವೆಬ್‌ಸೈಟ್‌ಗಳಲ್ಲಿ ಹೇರಳವಾಗಿ ಮಾರಾಟವಾಗುತ್ತಿವೆ. ತಮ್ಮನ್ನು ತಾವು ಭವಿಷ್ಯವಾಣಿ ನುಡಿಯುವವರು ಎಂದು ಹೇಳಿಕೊಳ್ಳುವ ವ್ಯಕ್ತಿಗಳು ಈಗ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಅವರು ಸಮಸ್ಯೆಗಳನ್ನು ಆಲಿಸುತ್ತಾರೆ. ಕುಟುಂಬದ ವಿವರ, ಹಣಕಾಸಿನ ಮಾಹಿತಿ ಪಡೆದು ಆನ್‌ಲೈನ್‌ನಲ್ಲಿಯೇ ಮೋಸದ ವಹಿವಾಟು ನಡೆಸುತ್ತಾರೆ. ವ್ಯಕ್ತಿಯೊಬ್ಬ ಇವರ ಬಣ್ಣದ ಮಾತುಗಳಿಗೆ ಮರುಳಾಗಿ ಹೇಗೆ ಮೋಸ ಹೋಗುತ್ತಾನೆಂದರೆ, ಕಾಲಕಾಲಕ್ಕೆ ಅವರ ಸೂಚನೆಯ ಪ್ರಕಾರ ಹಣ ಕಳಿಸುತ್ತಾನೆ.

ಮೂಢನಂಬಿಕೆ ವಿರುದ್ಧ ಕಾನೂನು

ಮನುಷ್ಯನ ಮನಸ್ಸಿನಲ್ಲಿ ಸಂಸ್ಕಾರ ಎನ್ನುವುದು ಬಾಲ್ಯದಿಂದಲೇ ಗಟ್ಟಿಯಾಗಿ ಬೇರು ಬಿಡುತ್ತದೆ. ಕೆಲವು ಸಂಸ್ಕಾರಗಳು ನೈತಿಕತೆಯ ದಾರಿ ತೋರಿಸಿದರೆ, ಮತ್ತೆ ಕೆಲವು ಮೂಢನಂಬಿಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಅವುಗಳ ವಿರುದ್ಧ ಜನರಿಗೆ ತಿಳಿ ಹೇಳಲು ಜನಜಾಗೃತಿ ಕಾರ್ಯಕ್ರಮಗಳು ಹಾಗೂ ಮಾಧ್ಯಮಗಳ ಸಹಕಾರದಿಂದ ಮೂಢನಂಬಿಕೆ ನಿವಾರಣೆ ಮಾಡುವ ಪ್ರಯತ್ನ ಮಾಡಬೇಕು.

ಪತ್ರಿಕೆಗಳಲ್ಲಿ ಧಾರ್ಮಿಕ ಆಡಂಬರವನ್ನು ವಿರೋಧಿಸುವ ಸುದ್ದಿಗಳಿಗೆ, ಲೇಖನಗಳಿಗೆ ವಿಶೇಷ ಆದ್ಯತೆ ನೀಡಬೇಕು. ಧಾರಾವಾಹಿಗಳಲ್ಲಿ ಮೂಢನಂಬಿಕೆಗಳಿಗೆ ಒತ್ತು ಕೊಡುವುದನ್ನು ನಿಲ್ಲಿಸಬೇಕು. ಶಾಲಾಕಾಲೇಜುಗಳ ಪಠ್ಯಕ್ರಮದಲ್ಲಿ ಮೂಢನಂಬಿಕೆ ವಿರೋಧಿಸುವ ಪಾಠಗಳು ಸೇರಬೇಕು. ಎನ್‌ಜಿಓಗಳ ಮುಖಾಂತರ ಜಾಗೃತಿ ಮೂಡಿಸಬೇಕು.

– ಕೆ. ಮಧು ಶರ್ಮ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ