ಧರ್ಮ ನಿವಾರಿಸಿ ಮಹಿಳೆಯನ್ನು ಉಳಿಸಿ
ಮಹಿಳೆಯರ ಸುರಕ್ಷತೆಯ ಬಾಬತ್ತಿನಲ್ಲಿ ಗೋವಾ, ಕೇರಳ, ಮಿಜೋರಾಂ, ಮಣಿಪುರ, ಸಿಕ್ಕಿಂ ಮುಂಚೂಣಿಯಲ್ಲಿದ್ದರೆ, ಬಿಹಾರ, ಉ.ಪ್ರದೇಶ ಮತ್ತು ದೆಹಲಿಯಲ್ಲಿ ಅವರ ಸ್ಥಿತಿ ದಯನೀಯವಾಗಿದೆ. `ಜೆಂಡರ್ ವಲ್ನರೆಬಿಲಿಟಿ ಇಂಡೆಕ್ಸ್'ನ್ನು ಅರೆ ಸರ್ಕಾರಿ ಸಂಸ್ಥೆಯೊಂದು ಸಿದ್ಧಪಡಿಸಿದೆ. ಇದರಲ್ಲಿ 0 ಯಿಂದ 1 ಅಂಕ ನೀಡಲಾಗಿದೆ. ಗೋವಾಗೆ 0.656 ಅಂಕ ಕೊಡಲಾಗಿದೆ. ದೆಹಲಿ 0.456, ಉ.ಪ್ರದೇಶ 0.434 ಮತ್ತು ಬಿಹಾರಕ್ಕೆ ದೊರೆತ ಅಂಕ 0.410.ಯಾವ ರಾಜ್ಯಗಳು ಸುರಕ್ಷಿತ ಪಟ್ಟಿಯಲ್ಲಿ ಇವೆಯೋ, ಅಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇದೆ, ಆದರೆ ಜೊತೆಗೆ ಅಲ್ಲಿ ಶೋಷಣೆಯ ಪ್ರಮಾಣ ಕಡಿಮೆಯಾಗಿದೆ. ಅಲ್ಲಿ ಹೆಣ್ಣುಗಂಡಿನ ನಡುವೆ ಭೇದಭಾವ ಕಡಿಮೆ ಇದೆ. ಮಹಿಳೆಯರಿಗೆ ಹೆಚ್ಚು ಸುರಕ್ಷತೆ ಇರುವ ರಾಜ್ಯಗಳಲ್ಲಿ ಅವರು ತಮಗಿಷ್ಟವಾದ ಸಂಗಾತಿಯನ್ನು ತಾವೇ ಆಯ್ಕೆ ಮಾಡಬಹುದು. ಅವರ ಸ್ಥಿತಿ ದಯನೀಯವಾಗಿರುವ ರಾಜ್ಯಗಳಲ್ಲಿ ಅವರು ತಮ್ಮ ಇಷ್ಟದ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಂಡರೆ ಅವರನ್ನು ಹೊಡೆದು ಮೂಲೆಗುಂಪು ಮಾಡಲಾಗುತ್ತದೆ, ಕೆಲವೊಂದು ಕಡೆ ಅವರನ್ನು ಸಾಯಿಸಿಬಿಡಲಾಗುತ್ತದೆ.
ಅಲ್ಲಿನ ಭೇದಭಾವಕ್ಕೆ ಏನು ಕಾರಣ ಎಂಬುದನ್ನು ಈ ವರದಿಯು ಸ್ಪಷ್ಟಪಡಿಸಿಲ್ಲವಾದರೂ, ಮಹಿಳೆಯರು ಹೆಚ್ಚು ಸುರಕ್ಷಿತವಾಗಿರುವ ರಾಜ್ಯಗಳಲ್ಲಿ ಧರ್ಮದ ಪ್ರಭಾವ ಕಡಿಮೆ ಇದೆ. ಅಸುರಕ್ಷಿತ ರಾಜ್ಯಗಳಲ್ಲಿ ಧರ್ಮದ ಪ್ರಭಾವ ಅತಿ ಹೆಚ್ಚು. ಅಸುರಕ್ಷತೆ ಇರುವ ರಾಜ್ಯಗಳಲ್ಲಿ ಧರ್ಮದ ಬಾರುಕೋಲಿನಿಂದ ಮಹಿಳೆಯರ ಮೇಲೆ ಹಗಲು-ರಾತ್ರಿ ಪ್ರಹಾರ ಮಾಡಲಾಗುತ್ತದೆ. ಅವರಿಗೆ ಮನೆಯಲ್ಲೂ ಕೂಡ ವ್ಯವಸ್ಥಿತವಾಗಿ ಇರಲು ಅವಕಾಶ ಕೊಡಲಾಗುವುದಿಲ್ಲ. ಏಕೆಂದರೆ ಧರ್ಮ ಮಾಡುವುದು ಅದನ್ನೇ ಅಲ್ವಾ? ಯಾವ ಸಮಾಜದಲ್ಲಿ ಹಗಲು ರಾತ್ರಿ ಧರ್ಮದ ಗುಣಗಾನ ಮಾಡಲಾಗುತ್ತದೊ, ಧರ್ಮಾಧಿಕಾರಿಗಳು ರಾಜ್ಯಭಾರ ನಡೆಸುತ್ತಿರುತ್ತಾರೊ ಅಲ್ಲಿ ಇಂತಹ ಹೀನ ಘಟನೆಗಳು ಸಾಮಾನ್ಯ. ನಮ್ಮಲ್ಲಿ ಪೂಜಿಸಲ್ಪಡುವ ದೇವಿದೇವತೆಯರ ಇತಿಹಾಸ ಗಮನಿಸಿದರೆ ಸ್ತ್ರೀ ಶೋಷಣೆಯ ಉದಾಹರಣೆಗಳು ಹೇರಳವಾಗಿ ದೊರೆಯುತ್ತವೆ. ಯಾವ ಸಮಾಜ ಮಹಿಳೆಯರನ್ನು ಬೊಂಬೆಗಳಂತೆ, ಗುಲಾಮರಂತೆ ಭಾವಿಸುತ್ತದೊ, ಅಲ್ಲಿ ಇಂಥದು ಸಾಮಾನ್ಯ. ಇಂದು ಇಸ್ಲಾಂ ಮಹಿಳೆಯರನ್ನು ಅಂಕುಶದಿಂದ ಬಂಧಿಸಿ ಇಡುತ್ತಿದೆ. ಮನೆಯೊಳಗೂ ಕೂಡ ಮಹಿಳೆಯರು ಸುರಕ್ಷಿತವಾಗಿಲ್ಲ. ಇಡೀ ಪಶ್ಚಿಮ ಏಷ್ಯಾ ಧರ್ಮ ಹೊತ್ತಿಸಿದ ಬೆಂಕಿಯಲ್ಲಿ ಬೇಯುತ್ತಿದೆ. ಆ ಬೆಂಕಿಯ ಕಿಡಿಗಳು ಒಮ್ಮೆ ಯೂರೋಪ್, ಮತ್ತೊಮ್ಮೆ ಅಮೆರಿಕ, ಇನ್ನೊಮ್ಮೆ ಭಾರತದಲ್ಲಿ ತನ್ನ ಕೆನ್ನಾಲಿಗೆ ಚಾಚುತ್ತಿವೆ.
ಯಾವ ದೇಶದಲ್ಲಿ ಧರ್ಮದ ಪ್ರಭಾವ ಕಡಿಮೆ ಇದೆಯೊ, ಆ ದೇಶಗಳು ಭಾರಿ ಪ್ರಗತಿ ಸಾಧಿಸುತ್ತಿವೆ. ಚೀನಾ, ಜಪಾನ್, ಕೊರಿಯಾ ದೇಶಗಳ ಮೇಲೆ ಪಾಶ್ಚಿಮಾತ್ಯರು ರಾಜ್ಯಭಾರ ಮಾಡಲು ಆಗಲೇ ಇಲ್ಲ. ಭಾರತ, ಪಶ್ಚಿಮ ಏಷ್ಯಾ ಹಾಗೂ ಆಫ್ರಿಕಾದ ಅನೇಕ ರಾಷ್ಟ್ರಗಳಲ್ಲಿ ಅವರು ಸುಲಭವಾಗಿ ರಾಜ್ಯಭಾರ ನಡೆಸಿದರು.
ಮಹಿಳೆಯರ ಸುರಕ್ಷತೆ ಅವರನ್ನು ಗೌರವಿಸುವುದರ ಮೂಲಕ ಬರುತ್ತದೆ. ಯಾವ ಸಮಾಜದಲ್ಲಿ ಆಕೆಗೆ ಗೌರವ ಕೊಡುವುದಿಲ್ಲವೋ ಅಲ್ಲಿ ಸುರಕ್ಷತಾ ವ್ಯವಸ್ಥೆ ದುರ್ಬಲವಾಗಿರುತ್ತದೆ. ಅವಳು ತನ್ನ ಕಾಲ ಮೇಲೆ ನಿಲ್ಲಲು ಆಗುವುದಿಲ್ಲ. ಆಕ್ರಮಣಕಾರಿಗಳನ್ನು ಸುಲಭವಾಗಿ ಎದುರಿಸಲು ಆಗುವುದಿಲ್ಲ.