ನಮ್ಮ ರಾಜ್ಯದ ಆನೇಕಲ್ ತಾಲ್ಲೂಕಿನ ತಿರುಮಲಗೊಂಡನಹಳ್ಳಿ ಮೂಲದ 24 ವರ್ಷದ ವಿದ್ಯಾ ಯೆಲ್ಲಾರೆಡ್ಡಿ ಸ್ವತಃ ಅಂಧೆ ಆಗಿದ್ದರೂ, ಟೆಕ್ನಿಕಲ್ ವಿಭಾಗದಲ್ಲಿ ತಮ್ಮ ಸ್ನಾತಕೋತ್ತರ ವಿದ್ಯಾಭ್ಯಾಸ ಪೂರೈಸಿಕೊಂಡರು. ಇದಕ್ಕಾಗಿ ವಿದ್ಯಾ ಬಹಳಷ್ಟು ಸಂಘರ್ಷ ನಡೆಸಿದ್ದಾರೆ. ಆದರೆ ಆಕೆ ಎಂದೂ ಹಿಮ್ಮೆಟ್ಟಲಿಲ್ಲ. ಬದಲಿಗೆ ಹೆಜ್ಜೆ ಹೆಜ್ಜೆಗೂ ಯಶಸ್ಸಿನ ಸೋಪಾನವೇರಿ ಮೇಲೆ ಬಂದಿದ್ದಾರೆ. ಇದೀಗ ಅವರು ತಮ್ಮದೇ ಸಂಸ್ಥೆ ರೂಪಿಸುತ್ತಿದ್ದಾರೆ. ಇದರಿಂದ ಗಣಿತ, ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡಬಯಸುವ ಅಂಧ ಮಕ್ಕಳಿಗೆ ಹೆಚ್ಚಿನ ಸಹಕಾರ ಸಿಗಲಿದೆ. ವಿದ್ಯಾರ ಈ ಯಶಸ್ವೀ ಸಾಹಸಗಾಥೆಗಾಗಿ ರೀಬೋಕ್‌ ಸಂಸ್ಥೆ `ಫಿಟ್‌ ಟು ಫೈಟ್‌’ ಪ್ರಶಸ್ತಿ ಪುರಸ್ಕಾರಗಳಿಂದ ಸನ್ಮಾನಿಸಿದೆ.

ಹೆತ್ತವರ ಸಹಕಾರ

ಹುಟ್ಟಿನಿಂದ ಅಂಧೆಯಾದ ವಿದ್ಯಾ ಚಿಕ್ಕ ವಯಸ್ಸಿನಿಂದಲೇ ಹೋರಾಟಗಾರ್ತಿ. ಆಕೆಯ ತಾಯಿತಂದೆ ಎಲ್ಲ ಮಕ್ಕಳಂತೆಯೇ ಇವಳನ್ನು ಸಾಧಾರಣ ರೀತಿಯಲ್ಲಿ ಸಾಕಿ ಸಲಹಿದರು. ಆಕೆ ಹೇಳುತ್ತಾರೆ, “ನನ್ನ ತಾಯಿ ತಂದೆ  ಕಲಿತವರಲ್ಲ. ಆದರೆ ಅವರ ಮಾರ್ಗದರ್ಶನ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಹಳ್ಳಿಯಲ್ಲಿ ನೆಲೆಸಿದ ಕಾರಣ ಯಾವುದೇ ಆಧುನಿಕ ಸೌಲಭ್ಯಗಳ ಬಗ್ಗೆ ಅವರಿಗೆ  ಮಾಹಿತಿ ಇರಲಿಲ್ಲ. ನನ್ನನ್ನು  ಬೆಂಗಳೂರಿನಂಥ ಮಹಾನಗರದ ವೈದ್ಯರುಗಳಿಗೆ ತೋರಿಸಿ ಆಧುನಿಕ ಚಿಕಿತ್ಸೆ ಕೊಡಿಸುವ ಐಡಿಯಾ ಇರಲಿಲ್ಲ. ನಾನು ಅವರ ಮೊದಲ ಸಂತಾನ ಹಾಗೂ ಪ್ರೀಮೆಚ್ಯೂರ್‌ ಬೇಬಿ ಆದಕಾರಣ ಅವರು ಬಹಳ ಗಾಬರಿಗೊಂಡಿದ್ದರು. ಇದೆಲ್ಲ ನನಗೆ ಅರಿವಾಗುವಷ್ಟರಲ್ಲಿ ಬಹಳ ತಡವಾಗಿತ್ತು. ನನಗಿಂತ ಚಿಕ್ಕವರಾದ ಇಬ್ಬರು ತಂಗಿಯರು ನಾರ್ಮಲ್ ಆಗಿದ್ದಾರೆ.

“ಮೊದಲ ಮಗು ಹೆಣ್ಣಾಗಿ ಹುಟ್ಟಿದ್ದೇ ಅವರಿಗೆ ಘೋರ ನಿರಾಸೆ ತರಿಸಿತ್ತು. ಅಂಥದ್ದರಲ್ಲಿ ಆ ಮಗು ಹುಟ್ಟು ಕುರುಡು ಎಂದು ಗೊತ್ತಾದರೆ ಅವರಿಗೆ ಇನ್ನೆಷ್ಟು ಕಂಗಾಲಾಗಬೇಡ….. ಹಳ್ಳಿಯ ಜನ ತಲೆಗೊಂದರಂತೆ ಅವರಿಗೆ ಸಲಹೆ ನೀಡಿದರು. ಅಂದರೆ, ಹುಡುಗಿಯನ್ನು ಶಾಲೆಗೆ ಸೇರಿಸಬೇಡಿ, ಇವಳನ್ನು ಮುಂದೆ ನೋಡಿಕೊಳ್ಳುವರಾರು? ಮುಂದೆ ಯಾರು ಇವಳನ್ನು ಮದುವೆ ಆಗ್ತಾರೆ? ಮೈನೆರೆದು ದೊಡ್ಡವಳಾದಾಗ ಇವಳ ಗರ್ಭಕೋಶ ತೆಗೆಸಿಬಿಡಿ, ಮುಂದೆ ತಾಯಿ ಆಗುವ ಆತಂಕ ಇರುವುದಿಲ್ಲ…. ಇತ್ಯಾದಿ ಹೇಳಿದ್ದಾರೆ.

“ಆದರೆ ಸಾಹಸಿಗಳಾದ ನನ್ನ ಹೆತ್ತವರು ಇಂಥ ಯಾವ ಮಾತುಗಳಿಗೂ ಕಿವಿಗೊಡಲಿಲ್ಲ. ಎಲ್ಲರ ಸಲಹೆ ಕೇಳಿದರು, ತಮಗೆ ಸರಿತೋರಿದ್ದನ್ನು ವಿವೇಕಯುತವಾಗಿ ನಡೆಸಿದರು. ನನ್ನ ತಾಯಿಗೆ 12 ವರ್ಷಕ್ಕೆ ಮೊದಲೇ ಮದುವೆ ಆಗಿತ್ತು. ಅವರಿಗೆ 16 ತುಂಬುವಷ್ಟರಲ್ಲೇ ನಾನು ಹುಟ್ಟಿದ್ದೆ. ಆದ್ದರಿಂದ ಪರಿಸ್ಥಿತಿ ಸರಿತೂಗಿಸಲು ಬಹಳ ಕಷ್ಟಪಟ್ಟಿದ್ದಾರೆ.”

ಸಂಘರ್ಷದ ಆರಂಭ

ವಿದ್ಯಾ ಹೇಳುತ್ತಾರೆ, “ಅಂಧರ ಮಕ್ಕಳ ಶಾಲೆ ನಮ್ಮಂಥ ಹಳ್ಳಿಗಳಲ್ಲಿ ಎಲ್ಲಿಂದ ಬರಬೇಕು? ಎಲ್ಲ ನಗರಗಳಲ್ಲಿ ಕೇಂದ್ರೀಕೃತಗೊಂಡಿವೆ. ಹೀಗಿರುವಾಗ ಎಲ್ಲಿ ಏನು ಮಾಡಬೇಕೆಂದು ಯಾರಿಗೂ ಹೊಳೆಯಲಿಲ್ಲ. ನಂತರ ಹೆತ್ತವರು ನನ್ನನ್ನು ಬೆಂಗಳೂರಿನ ಒಂದು ಹಾಸ್ಟೆಲ್‌ಗೆ ಸೇರಿಸಿ, ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ನಾಂದಿ ಹಾಡಿದರು. ಹಾಸ್ಟೆಲ್‌ನಿಂದ ಶಾಲೆಗೆ ನಾನು ಒಬ್ಬಳೇ ಹೋಗಿಬರುತ್ತಿದ್ದೆ. ಅಲ್ಲಿ ನನಗೆ ಉತ್ತಮ ಮಟ್ಟದ ವಿದ್ಯಾಭ್ಯಾಸ ದೊರೆಯಿತು. ಆದರೆ ಹೈಸ್ಕೂಲ್‌‌ನಲ್ಲೂ ಸಹ ನನ್ನ ಗಣಿತ, ವಿಜ್ಞಾನ  ಹೆಚ್ಚಿಗೇನೂ ಸುಧಾರಿಸಿರಲಿಲ್ಲ. ವಿಜ್ಞಾನದ 3 ಭಾಗಗಳ ಡ್ರಾಯಿಂಗ್ಸ್ ಕಲಿಸುವ ಪ್ರಮೇಯವೇ ಇರಲಿಲ್ಲ. ಏಕೆಂದರೆ ಅದಕ್ಕೆ ದೃಷ್ಟಿ ಮಾಧ್ಯಮ ಅಗತ್ಯವಾಗಿತ್ತು.

“ಅಂತೂ 7ನೇ ತರಗತಿಯವರೆಗೂ ಇಂಥ ಬ್ಲೈಂಡ್‌ ಶಾಲೆಯಲ್ಲೇ ಓದಿದೆ. ಇದಾದ ಮೇಲೆ ನಾನು ಎಲ್ಲರಂತೆ ಸಾಧಾರಣ ಶಾಲೆಯಲ್ಲೇ ಕಲಿಯ ಬಯಸಿದೆ. ಆದರೆ ಯಾವ ಶಾಲೆಯಲ್ಲೂ ನನಗೆ ಅಡ್ಮಿಷನ್‌ ದೊರಕಲಿಲ್ಲ. ಅಂಧೆ ಆಗಿರುವುದೇ ನನ್ನ ಅಭಿಶಾಪವಾಗಿತ್ತು. ಅಷ್ಟು ಮಾತ್ರವಲ್ಲದೆ, ವೈಯಕ್ತಿಕವಾದ ನನ್ನ ಸ್ನಾನ, ಶೌಚ ಇನ್ನಿತರ ಕೆಲಸಗಳನ್ನು ಹೇಗೆ ನಿಭಾಯಿಸಿಕೊಳ್ಳುವೆ ಎಂದೆಲ್ಲ ಪ್ರಶ್ನೆ ಕೇಳಿ ಹಿಂಸಿಸುತ್ತಿದ್ದರು.”

ಈ ಹೊತ್ತಿಗೆ ವಿದ್ಯಾರಿಗೆ ತಮ್ಮ ಹಕ್ಕನ್ನು ಪಡೆಯಲು ತಾವು ಸಂಘರ್ಷ ನಡೆಸಿದರೆ ಮಾತ್ರ ಮುನ್ನೇರಲು ಸಾಧ್ಯ ಎಂಬುದರ ಅರಿವಾಗಿತ್ತು. ಅದಕ್ಕೆ ಆಕೆ ತಯಾರಾಗ ತೊಡಗಿದರು.

ಆಕೆ ನಸುನಗುತ್ತಾ ಹೇಳುತ್ತಾರೆ, “ನಾನು ನನ್ನ ತಾಯಿ ತಂದೆ ಜೊತೆ ಚರ್ಚಿಸಿ, ನಮ್ಮ ಹಳ್ಳಿಗೇ ಹಿಂದಿರುಗಿ ಸಾಮಾನ್ಯ ಮಕ್ಕಳ ಜೊತೆ ಅತ್ತಿಬೆಲೆಯ ಪ್ರೌಢಶಾಲೆಗೆ ಸೇರಿದೆ. ಇಲ್ಲಿ  ಗಣಿತ, ವಿಜ್ಞಾನ ನನ್ನ ಮುಖ್ಯ ಆಸಕ್ತಿಕರ ವಿಷಯಗಳಾಗಿದ್ದವು. ಆದರೆ ಬೋರ್ಡ್‌ ಮೇಲೆ ಬರೆಯಲಾಗಿದ್ದ ಡ್ರಾಯಿಂಗ್ಸ್ ನನಗೆ ಏನೇನೂ ಅರ್ಥವಾಗುತ್ತಿರಲಿಲ್ಲ. ಆಗ ಟೀಚರ್‌ ನೆರವಿನಿಂದ ಈ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯತೊಡಗಿದೆ. ಹೀಗೆ 10ನೇ ತರಗತಿಯಲ್ಲಿ 95% ಅಂಕ ಗಳಿಸಿದೆ!

“ಪಿ.ಯು.ಸಿ ಗಾಗಿ ನಾನು ಕಾಲೇಜ್‌ ಸೇರಿ ಪ್ರತಿದಿನ ಹೋಗಿಬರುವುದಕ್ಕೆ 58 ಕಿ.ಮೀ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಈ ವಿಷಯದಲ್ಲಿ ನನ್ನ ಕಸಿನ್‌ ಮೂರ್ತಿ ನನಗೆ ಬಹಳ ಸಹಾಯ ಮಾಡಿದ್ದಾನೆ. ಅವನು ಇಡೀ ದಿನ ನನ್ನ ಜೊತೆ ಕ್ಲಾಸಿನಲ್ಲಿದ್ದು ಪಾಠಗಳನ್ನು ಟೇಪ್‌ ಮಾಡಿಕೊಂಡು ನನಗೆ ಅಭ್ಯಾಸ ಮಾಡಲು ನೆರವಾಗುತ್ತಿದ್ದ. ಪರೀಕ್ಷೆಯಲ್ಲಿ ಅವನು ನನಗೆ ರೈಟರ್‌ ಆಗಿದ್ದ. ಮುಖ್ಯವಾಗಿ ವಿಜ್ಞಾನದ ರೇಖಾಗಣಿತದ ಚಿತ್ರ ಬಿಡಿಸಲು, ಕರ್ನಾಟಕ ಶಿಕ್ಷಣ ಮಂಡಳಿಯಿಂದ ಹೆಚ್ಚಿನ ಸಮಯದ ಬಗ್ಗೆ ಅನುಮತಿ ಕೇಳಿದಾಗ, ಮೊದಲು ಅವರು ನಿರಾಕರಿಸಿದರು. ನಮ್ಮ ಕಾಲೇಜಿನ ಪ್ರಿನ್ಸಿಪಾಲ್‌ರ ನೆರವು ಪಡೆದು ಹೋರಾಡಿದ ಮೇಲೆ ಈ ವಿಷಯವಾಗಿ ಎಲ್ಲಾ ಅಂಧ ವಿದ್ಯಾರ್ಥಿಗಳಿಗೂ 1 ಗಂಟೆ ಕಾಲ ಹೆಚ್ಚುವರಿ ಸಮಯ ಮಂಜೂರಾಯ್ತು.

“ಇದಾದ ಮೇಲೆ ನಾನು ಕಂಪ್ಯೂಟರ್‌ ಸೈನ್ಸ್ ಕೋರ್ಸ್‌ ಸೇರಿದೆ. ಆದರೆ ಕಾಲೇಜಿನಲ್ಲಿ ಹೇಳಿಕೊಡುವ ವಿಧಾನದಿಂದ ಕಲಿಯುವುದು ನನ್ನಂಥವರಿಗೆ ಅಸಾಧ್ಯವಾಗಿತ್ತು. ಆಗ ನಾನು ಮನೆಯಲ್ಲೇ ಸ್ಕೈಪ್‌ ನೆರವಿನಿಂದ ಅದೇ ಪಾಠಗಳನ್ನು ಕೇಳಿ ಕೇಳಿ ನನ್ನ ಕಲಿಕೆ ಮುಂದುವರಿಸಿದೆ. ಇದಾದ ಮೇಲೆ ನಾನು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಡಿ ತಾಂತ್ರಿಕ ವಿಭಾಗದ ಸ್ನಾತಕೋತ್ತರ ಪದವೀಧರೆಯಾಗಿ ಗೋಲ್ಡ್ ಮೆಡಲ್ ಪಡೆದುಕೊಂಡೆ,” ಹೆಮ್ಮೆಯಿಂದ ಆತ್ಮವಿಶ್ವಾಸ ತುಂಬಿಕೊಂಡು ಆಕೆ ಹೇಳುತ್ತಿದ್ದರೆ ಕೇಳುವವರಿಗೆ ರೋಮಾಂಚನವಾಗುತ್ತಿತ್ತು.

ಎಲ್ಲೆಲ್ಲೂ ಸವಾಲು!

ವಿದ್ಯಾರಿಗೆ ಕೇವಲ ಕಲಿಕೆ ಮಾತ್ರವಲ್ಲದೆ, ಎಲ್ಲಾ ಜಾಗಗಳಲ್ಲೂ ಸವಾಲುಗಳೇ ಕಾದಿದ್ದವು. ಬೇರೆಯವರ ಮುಂದೆ ನೀನು ಕೆಳಮಟ್ಟ ಎಂದೇ ಆಕೆಗೆ ತೋರಿಸಿಕೊಡಲಾಗುತ್ತಿತ್ತು. ಯಾವುದೇ ಶುಭ ಸಮಾರಂಭಕ್ಕೂ ಹೋಗಲು ಆಕೆಗೆ ಇಷ್ಟವಾಗುತ್ತಿರಲಿಲ್ಲ. ವಿದ್ಯಾ ಮುಂದುವರಿಸುತ್ತಾರೆ, “ಎಲ್ಲರೂ ಅಯ್ಯೋ ಪಾಪ ಎಂದು ಮರುಕ ತೋರಿಸುತ್ತಾ ನನ್ನನ್ನು ಪ್ರತ್ಯೇಕವಾಗಿ ಗಮನಿಸುತ್ತಿದ್ದರೇ ಹೊರತು ಎಲ್ಲ ಹುಡುಗಿಯರಂತೆ ಸಹಜವಾಗಿ ನಾನು ಕೆಲಸಗಳನ್ನು ತೂಗಿಸಿಕೊಳ್ಳಬಲ್ಲೆ ಎಂದರೆ ಯಾರೂ ಒಪ್ಪುತ್ತಿರಲಿಲ್ಲ. ಹೀಗಾಗಿಯೇ ನಾನೊಂದು ನಿರ್ಧಾರಕ್ಕೆ ಬಂದೆ. ಶಿಕ್ಷಣದ ಯಾವ ಯಾವ ವಿಭಾಗ ಅಂಧ ಮಕ್ಕಳಿಗಾಗಿ ಇಲ್ಲವೇ ಹೇಗಾದರೂ ಅವರಿಗೆ ಅದನ್ನು ತಲುಪಿಸಿ ನುರಿತವರನ್ನಾಗಿಸುವುದೇ ನನ್ನ ಗುರಿ! ಇಷ್ಟೆಲ್ಲ ಕಲಿತರೂ ನನಗೆ ಈಗ ಬಂದಿರುವ ದುರ್ದಶೆ ಮುಂದಿನ ಪೀಳಿಗೆಯ ಮಕ್ಕಳಿಗೆ ಬೇಡ ಎಂದು ಪಣತೊಟ್ಟೆ. ಹೀಗಾಗಿ ನಾನು `ವಿಷನ್‌ ಎಂಪರ್‌’ ಸಂಸ್ಥೆ ಜೊತೆ ಕೈಗೂಡಿಸಿ, ಗಣಿತ-ವಿಜ್ಞಾನಗಳನ್ನೂ ಎಂಥ ಕುಗ್ರಾಮದ ಅಂಧ ವಿದ್ಯಾರ್ಥಿಗೂ ಸುಲಭವಾಗಿ ತಲುಪುವ ಹಾಗೆ ಮಾಡುವ ತಾಂತ್ರಿಕ ಅಗತ್ಯಗಳನ್ನು ಸುಧಾರಿಸುತ್ತಿದ್ದೇನೆ. ನಮ್ಮ ರಾಜ್ಯದ ನಂತರ ಮುಂದಿನ ವರ್ಷಗಳಲ್ಲಿ ನಮ್ಮ ದೇಶದ ಇಡೀ ಮೂಲೆ ಮೂಲೆಯ ಎಲ್ಲಾ ಅಂಧ ಮಕ್ಕಳ ಶಾಲೆಗೂ ಈ ಸದವಕಾಶ ಸಿಗುವಂತೆ ಮಾಡಲಿದ್ದೇವೆ. ಏಕೆಂದರೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಏನೇನೂ ಸುಧಾರಣೆ ಆಗಿಲ್ಲ ಎಂದೇ ಹೇಳಬೇಕು.

“ನಮ್ಮ ರಾಜ್ಯದ 45 ಅಂಧ ಮಕ್ಕಳ ಶಾಲೆಗಳಲ್ಲಿ, ಕೇವಲ ಒಂದೇ ಒಂದು ಶಾಲೆಯಲ್ಲಿ ಅದೂ 10ನೇ ತರಗತಿಯವರೆಗೆ ಮಾತ್ರ ಗಣಿತ, ಬೋಧಿಸುತ್ತಾರೆ. ಅದೇ ನಮ್ಮ ಇಡೀ ದೇಶವನ್ನು ಗಮನಿಸಿದಾಗ, 5-19 ವರ್ಷದ ಅಂಧ ಮಕ್ಕಳು ಸುಮಾರು 11 ಲಕ್ಷದಷ್ಟಿದ್ದಾರೆ. ಇವರಲ್ಲಿ 68% ಮಕ್ಕಳು ಮಾತ್ರವೇ ಶಾಲೆಗೆ ಹೋಗಬಲ್ಲರು. ಅವರಲ್ಲಿ ಕೇವಲ 15% ಮಾತ್ರ ಉನ್ನತ ಶಿಕ್ಷಣ ಗಳಿಸುತ್ತಾರೆ. ಹೀಗಾಗಿ `ಪವರ್‌ ವಿಷನ್‌’ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅಂಧ ಮಕ್ಕಳಿಗಾಗಿ ಹೊಸ ಕ್ರಾಂತಿ ಮಾಡಬಯಸುತ್ತೇನೆ,” ಎನ್ನುವ ವಿದ್ಯಾರಿಗೆ ಗೃಹಶೋಭಾ ಶುಭ ಕೋರುತ್ತಾಳೆ.

– ಸೀಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ