ಪತ್ರಗಳ ಸುವಾಸನೆ, ಮನಿ ಆರ್ಡರ್‌ನ ಸಂತೋಷ, ಅಂಚೆ ಪೆಟ್ಟಿಗೆಯ ನಿರೀಕ್ಷೆ!
ಅದು 1970ರ ದಶಕ. ಆಗಿನ್ನೂ ಶಾಲೆಗೆ ಹೋಗಿ ಅಕ್ಷರಾಭ್ಯಾಸ ಕಲಿಯುತ್ತಿದ್ದ ಕಾಲ. ನಮ್ಮೂರು ಬಾಳಗಂಚಿಯಲ್ಲಿದ್ದ ನಮ್ಮ ಅಜ್ಜಿ, ತಾತಂದಿರಿಗೆ (ತಂದೆಯವರ ತಂದೆ-ತಾಯಿ) ಪ್ರತಿ ಹದಿನೈದು ದಿನಗಳಿಗೊಮ್ಮೆ ಇಲ್ಲವೇ ತಿಂಗಳಿಗೊಮ್ಮೆ ಪತ್ರ ಬರೆಯುವ ಸಂಪ್ರದಾಯವನ್ನು ನಮ್ಮ ತಾಯಿ ರೂಢಿಸಿಕೊಂಡಿದ್ದರು. ಮನೆಯಲ್ಲಿನ ವಿಶೇಷಗಳು, ಮಕ್ಕಳ ಓದು, ಆರೋಗ್ಯ, ಊರಿನ ಸಮಾಚಾರ ಹೀಗೆ ಎಲ್ಲ ವಿಷಯಗಳನ್ನೂ ಪತ್ರದ ಮೂಲಕ ಅವರಿಗೆ ತಿಳಿಸುತ್ತಿದ್ದರು. ಅದೇ ರೀತಿ, ತಮ್ಮ ತಾಯಿಯ ತವರೂರಾದ ಕೆಜಿಎಫ್‌ನಲ್ಲಿದ್ದ ಅಜ್ಜಿ, ಸೋದರಮಾವ ಮತ್ತು ಚಿಕ್ಕಮ್ಮಂದಿರಿಗೂ ಪತ್ರಗಳನ್ನು ಬರೆಯುತ್ತಿದ್ದರು.
ನಮ್ಮ ಮನೆಯಲ್ಲೊಂದು ಅಲಿಖಿತ ನಿಯಮವಿತ್ತು. ಪ್ರತಿ ಬಾರಿ ಪತ್ರ ಬರೆಯುವಾಗ ಇನ್‌ಲ್ಯಾಂಡ್ ಲೆಟರ್‌ನ ಕೊನೆಯ ಪುಟ ನನಗಾಗಿಯೇ ಮೀಸಲು! ಅದರಲ್ಲಿ ನಾನು ಕಲಿತ ಹೊಸ ಅಕ್ಷರಗಳು, ಮಗ್ಗಿ, ಪದ್ಯಗಳು, ಕೆಲವೊಮ್ಮೆ ನನಗೇ ಅರ್ಥವಾಗದ ಚಿತ್ರ-ವಿಚಿತ್ರಗಳನ್ನು ಬರೆದು ಕಳುಹಿಸಲೇಬೇಕಿತ್ತು.
ಇಂದಿನ ಮಕ್ಕಳಿಗೆ ಮೊಬೈಲ್‌ನಲ್ಲಿ ಫೋಟೋ ಕಳುಹಿಸುವುದು, ವೀಡಿಯೊ ಕಾಲ್ ಮಾಡುವುದು, ಕ್ಷಣಾರ್ಧದಲ್ಲಿ ಸಂದೇಶ ತಲುಪಿಸುವುದು ಬಹಳ ಸಹಜ. ಆದರೆ ಅಂದಿನ ದಿನಗಳಲ್ಲಿ ದೂರದ ಊರಿನಲ್ಲಿದ್ದ ಅಜ್ಜ-ಅಜ್ಜಿಯರಿಗೆ ಮೊಮ್ಮಗನ ಕೈಬರಹದಲ್ಲಿ ಒಂದೆರಡು ಸಾಲುಗಳು ತಲುಪುವುದೇ ದೊಡ್ಡ ಸಂಭ್ರಮವಾಗಿತ್ತು.
ನಮ್ಮ ಪತ್ರಕ್ಕಾಗಿ ಎರಡೂ ಕಡೆಯ ಅಜ್ಜ-ಅಜ್ಜಿಯರು ಕಾಯುತ್ತಿದ್ದರು. ಪತ್ರ ಬಂದ ತಕ್ಷಣ ಅದನ್ನು ಊರಿನ ಅಕ್ಕಪಕ್ಕದವರಿಗೆ ತೋರಿಸಿ, ಮೊಮ್ಮಗನ ಓದು, ಬರವಣಿಗೆ ಮತ್ತು ಬೆಳವಣಿಗೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದರು.
ಇಂದು ಒಂದು ಸಂದೇಶಕ್ಕೆ ನೀಲಿ ಟಿಕ್ ಬಂದಿದೆಯೇ ಎಂದು ಕಾಯುವ ನಾವು, ಅಂದು ಅಂಚೆ ಪೆಟ್ಟಿಗೆಯಲ್ಲಿ ಪತ್ರ ಬಿದ್ದಿದೆಯೇ ಎಂದು ಕಾತರದಿಂದ ಕಾಯುತ್ತಿದ್ದೆವು!
ಮನಿ ಆರ್ಡರ್ ಕಳುಹಿಸಿದ ಸಂತೋಷವೇ ಬೇರೆ!

ಸ್ವಲ್ಪ ದೊಡ್ಡವನಾಗಿ ಅಕ್ಷರಗಳ ಪರಿಚಯದ ಜೊತೆಗೆ ಜವಾಬ್ದಾರಿಯ ಅರಿವೂ ಬಂದ ನಂತರ, ನಮ್ಮ ಮನೆಯ ಪತ್ರ ಬರೆಯುವ ಸಂಪ್ರದಾಯದಲ್ಲಿ ನನ್ನ ಪಾಲು ಕಡಿಮೆಯಾಯಿತು. ಆದರೆ ಪ್ರತಿ ವರ್ಷ ಗೌರಿ ಹಬ್ಬದ ಸಮಯದಲ್ಲಿ ದೂರದ ಊರುಗಳಲ್ಲಿದ್ದ ನಮ್ಮ ಅತ್ತೆಯಂದಿರಿಗೆ ಮನಿ ಆರ್ಡರ್ ಕಳುಹಿಸುವ ಜವಾಬ್ದಾರಿ ನನ್ನದಾಗಿತ್ತು.
ನನ್ನ ಶಾಲೆ ಮಧ್ಯಾಹ್ನದ ಪಾಳಿಯಾಗಿದ್ದರಿಂದ, ಸ್ವಲ್ಪ ಮುಂಚೆಯೇ ಮನೆಯಿಂದ ಹೊರಟು ಶಾಲೆಯ ಹತ್ತಿರದಲ್ಲಿದ್ದ ಅಂಚೆ ಕಚೇರಿಗೆ ಹೋಗುತ್ತಿದ್ದೆ. ಅಲ್ಲಿ ಪ್ರತಿಯೊಬ್ಬರಿಗೂ ಹಣ ಕಳುಹಿಸುವ ಪ್ರಕ್ರಿಯೆಯನ್ನು ಮುಗಿಸಿ ಶಾಲೆಗೆ ಹೋಗುತ್ತಿದ್ದೆ.
ಆ ಹಣ ಸರಿಯಾದ ವ್ಯಕ್ತಿಗೆ ತಲುಪಿದ ನಂತರ ಅವರಿಂದ ಸ್ವೀಕೃತಿ ಬಂದಾಗ ಆಗುತ್ತಿದ್ದ ಸಂತೋಷವೇ ಬೇರೆ! ಇಂದಿನ UPI ಪಾವತಿಯಂತೆ ಕ್ಷಣಾರ್ಧದಲ್ಲಿ ಹಣ ವರ್ಗಾವಣೆಯಾಗುತ್ತಿರಲಿಲ್ಲ. ಹಣ ಕಳುಹಿಸಿದ ನಂತರ ಅದು ತಲುಪಿದೆಯೇ, ಸ್ವೀಕರಿಸಿದವರಿಂದ ಮಾಹಿತಿ ಬಂದಿದೆಯೇ ಎಂದು ಕಾಯಬೇಕಾಗಿತ್ತು. ಆದರೆ ಆ ಕಾಯುವಿಕೆಯಲ್ಲೂ ಒಂದು ಆತ್ಮೀಯತೆ ಇತ್ತು. ಹಣ ತಲುಪಿದ ಸುದ್ದಿ ಬಂದರೆ, ನಮ್ಮ ಕರ್ತವ್ಯ ಮುಗಿದ ಸಂತೃಪ್ತಿ ಸಿಗುತ್ತಿತ್ತು.
ಅದೇ ರೀತಿ, 1990ರ ದಶಕದವರೆಗೂ ನಮ್ಮ ಮನೆಯ ರೇಡಿಯೋಗಳಿಗೆ ಪರವಾನಗಿ ಪಡೆಯಲು ಅಂಚೆ ಕಚೇರಿಗೆ ಹೋಗುತ್ತಿದ್ದ ನೆನಪೂ ಇದೆ. ಅಂದಿನ ಅಂಚೆ ಕಚೇರಿ ಕೇವಲ ಪತ್ರಗಳನ್ನು ಕಳುಹಿಸುವ ಸ್ಥಳವಾಗಿರಲಿಲ್ಲ; ಜನರ ದೈನಂದಿನ ಬದುಕಿನ ಅನೇಕ ಅಗತ್ಯಗಳಿಗೆ ನೆರವಾಗುತ್ತಿದ್ದ ಕೇಂದ್ರವಾಗಿತ್ತು.






