ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಫೋನ್‌ಗಳ ಬಳಕೆ ಮತ್ತು ಪೂರೈಕೆಗೆ ಸಂಬಂಧಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಜೈಲು ಸಿಬ್ಬಂದಿ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.

ಆಗಸ್ಟ್ 11 ರಂದು ಕೇಂದ್ರ ಕಾರಾಗೃಹದ ಭದ್ರತಾ ವಿಭಾಗದ ಬ್ಯಾರಕ್‌ಗಳಲ್ಲಿ ನಡೆಸಿದ ದಿಢೀರ್ ದಾಳಿ ಸಂದರ್ಭ, ಜೈಲಿನಲ್ಲಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಚಾರಣಾಧೀನ ಕೈದಿ ಪ್ರತಾಪ್ ರೈ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾಗಿತ್ತು.

ನಂತರ ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದ ಪೊಲೀಸರು, ಇದೀಗ 9 ಜನರನ್ನು ಬಂಧಿಸಿದ್ದಾರೆ.

ಪರಪ್ಪನ ಅಗ್ರಹಾರ ಕಾರಾಗೃಹದ ಸಿಬ್ಬಂದಿಗಳಾದ ಪ್ರಕಾಶ್‌ ಮಹಾವೀರ್‌,ವಿಜಯ್‌ಕುಮಾರ್‌ ಹಾಗೂ ಶ್ರೀನಿವಾಸ್‌ ನಾಯ್ಕ ಮತ್ತು ವಿಚಾರಣಾಧೀನ ಖೈದಿ ಪ್ರತಾಪ್‌ ರಾಯ್‌, ಪ್ರಜ್ವಲ್‌ ರೇವಣ್ಣ, ನವೀನ್‌ ಕುಮಾರ್‌, ಸಿದ್ಧಿಕ್‌, ಮೊಹಮದ್‌ ತೌಸಿಫ್‌ ಹಾಗೂ ಮಂಜುನಾಥ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಹಣದ ಆಸೆಗಾಗಿ ಜೈಲಿನೊಳಗಿರುವ ಖೈದಿಗಳಿಗೆ ಒಂದು ಮೊಬೈಲ್‌ಗೆ ಒಂದು ಲಕ್ಷ ರೂ. ಹಾಗೂ ಒಂದು ಸಿಮ್‌ಗೆ 50 ಸಾವಿರ ರೂ. ಪಡೆದುಕೊಳ್ಳಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಿಂದ ತಿಳಿದು ಬಂದಿದೆ.

ಪೊಲೀಸರು ತನಿಖೆ ಮುಂದುವರಿಸಿದಾಗ ಏರ್‌ಟೇಲ್‌ಗೆ ಸೇರಿದ ಎರಡು ಸಿಮ್‌ಗಳ ಮೇಲೆ ನಮೂದಿಸಿದ್ದ ನಂಬರ್‌ ಆಧಾರದಲ್ಲಿ ಈ ನಂಬರ್‌ಗಳು ಯಾವ ಮೊಬೈಲ್‌ಗಳಲ್ಲಿ ಬಳಕೆಯಾಗಿವೆ ಎಂಬುವುದನ್ನು ಸಿಇಐಆರ್‌ ಪೋರ್ಟಲ್‌ ಮೂಲಕ ತಾಂತ್ರಿಕ ಮಾಹಿತಿ ಸಂಗ್ರಹಿಸಲಾಗಿದೆ. ಈ ಆಧಾರದ ಮೇಲೆ ಎರಡು ಮೊಬೈಲ್‌ಗಳು ಕೇಂದ್ರ ಕಾರಾಗೃಹದ ವೀಕ್ಷಕ ಸಿಬ್ಬಂದಿ ಶ್ರೀನಿವಾಸ್‌‍ ನಾಯ್ಕ ಬಳಿ ಇರುವುದು ಪತ್ತೆಯಾಗುತ್ತಿದ್ದಂತೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರಾಹುಲ್‌ ಎಂಬ ಅಪರಿಚಿತನ ಹೆಸರಿನಲ್ಲಿ ಖರೀದಿ ಮಾಡಿರುವುದು ತಿಳಿದು ಬಂದಿದೆ. ಅಲ್ಲದೇ ಇದೇ ರೀತಿ ಸುಮಾರು 12 ಮೊಬೈಲ್‌ಗಳನ್ನು ಖರೀದಿ ಮಾಡಿ ತನ್ನ ಬಳಿ ಇಟ್ಟುಕೊಂಡು ಅಕ್ರಮವಾಗಿ ಕೇಂದ್ರ ಕಾರಾಗೃಹದೊಳಗೆ ಸರಬರಾಜು ಮಾಡಿರುವುದು ವಿಚಾರಣೆ ವೇಳೆ ಬಹಿರಂಗಗೊಂಡಿದೆ.

ಮತ್ತೊಂದು ಪ್ರಕರಣದಲ್ಲಿ ಕೇಂದ್ರ ಕಾರಾಗೃಹದಲ್ಲಿ ದೊರೆತ ಒಂದು ಮೊಬೈಲ್‌ ಹಾಗೂ ಸಿಮ್‌ ಕಾರ್ಡ್‌ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದಾಗ , ಸಿಮ್‌ ನಂಬರ್‌ ಆಧಾರದಲ್ಲಿ ಮೊಬೈಲ್‌ ಕಂಪನಿಯೊಂದಿಗೆ ಸಮಾಲೋಚನೆ ನಡೆಸಿದಾಗ ಆ ಮೊಬೈಲ್‌ ಆಂಧ್ರ ಪ್ರದೇಶದ ಏಜೆನ್ಸಿಯೊಂದಕ್ಕೆ ಮಾರಾಟವಾಗಿರುವುದು ಗೊತ್ತಾಗಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಮೊಬೈಲ್‌ ಮಾರಾಟದ ಸಂಪೂರ್ಣ ವಿವರಗಳನ್ನು ಪಡೆದುಕೊಂಡು ಪರಿಶೀಲನೆ ಮಾಡಿದಾಗ ಭರತ್‌ ಅಲಿಯಾಸ್‌‍ ಭುವನ್‌ ಎಂಬ ವ್ಯಕ್ತಿ ಖರೀದಿ ಮಾಡಿರುವುದು ತಿಳಿದುಬಂದಿದೆ.

ಆತನ ಬಗ್ಗೆ ಮಾಹಿತಿ ಕಲೆಹಾಕಿ ಆತನನ್ನು ಪತ್ತೆಹಚ್ಚಿ ಪರಿಶೀಲಿಸಿದಾಗ, ಕಾರಾಗೃಹದಲ್ಲಿರುವ ಭರತ್‌ ಅಲಿಯಾಸ್‌‍ ಕೆಟಿಎಂ ಭರತ್‌ ಸೂಚನೆಯಂತೆ ಕೇಂದ್ರ ಕಾರಾಗೃಹದ ಮುಖ್ಯ ವೀಕ್ಷಕ ವಿಜಯ್‌ ಕುಮಾರ್‌ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾನೆ.

ಸಿಸಿಬಿ ಪೊಲೀಸರು ನೀಡಿದ ಇನ್ನೊಂದು ಪ್ರಕರಣದಲ್ಲಿ ಕೇಂದ್ರ ಕಾರಾಗೃಹ ಭದ್ರತಾ ವಿಭಾಗ ಬ್ಯಾರಕ್‌ಗಳಲ್ಲಿ ವಿಚಾರಣಾದಿನ ಖೈದಿ ಪ್ರತಾಪ್‌ ರಾಯ್‌ ಹಾಗೂ ಪ್ರಜ್ವಲ್‌ ರೇವಣ್ಣ ಕೊಠಡಿಯಲ್ಲಿ ದೊರೆತ ಸಿಮ್‌ ಹಾಗೂ ಮೊಬೈಲ್‌ ನ್ನು ಕಾರಾಗೃಹದ ವಾರ್ಡರ್‌ ಸಿಬ್ಬಂದಿ ಮೂಲಕ ಸಾಗಾಣೆ ಮಾಡಿರುವುದು ತಿಳಿದುಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ