ಇಂದಿನ ಮಕ್ಕಳು ಅಸಾಧಾರಣ ಪ್ರತಿಭೆಗಳ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವ ಕಾಲ ಇದು. ಅಂತಹ ಬಾಲ ಪ್ರತಿಭೆಗಳಲ್ಲಿ ತನ್ನ ವಿಶಿಷ್ಟ ಸಾಧನೆಗಳಿಂದ ಕರ್ನಾಟಕದ ಹೆಸರನ್ನು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿರುವ ಬಾಲಕನ ಹೆಸರು ಪೃಥು ಪಿ. ಅದ್ವೈತ್ (Prithu P. Advaith). ಅಸಾಮಾನ್ಯ ಸ್ಮರಣಶಕ್ತಿ, ವೇದ-ಉಪನಿಷತ್ತುಗಳ ಮೇಲಿನ ಆಸಕ್ತಿ, ಶ್ಲೋಕ ಪಠಣದಲ್ಲಿನ ಅದ್ಭುತ ಪ್ರತಿಭೆ ಮತ್ತು ನಿರಂತರ ಪರಿಶ್ರಮದ ಮೂಲಕ ಈ ಪುಟ್ಟ ಬಾಲಕ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಶ್ವ ದಾಖಲೆಗಳನ್ನು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾನೆ.

ವಿದ್ಯೆ ಕಲಿಯುವುದಕ್ಕೆ ಯಾರದ್ದೇ ಹಂಗಿಲ್ಲಾ. ಸಾಧನೆಗೆ ವಯಸ್ಸಿಲ್ಲಾ!  ಎಂಬುದನ್ನು ಈಗಾಗಲೇ ಆದಿಗುರು ಶ್ರೀ ಶಂಕರಾಚಾರ್ಯರು ಸಾಧಿಸಿ ತೋರಿಸಿದ್ದಾರೆ. ಅವರ ಕುರಿತಾಗಿರುವ ಈ ಶ್ಲೋಕವೇ ಎಲ್ಲವನ್ನೂ ವಿವರಿಸಿಬಿಡುತ್ತದೆ.

ಅಷ್ಟ ವರ್ಷೇ ಚತುರ್ವೇದಿ ದ್ವಾದಶೇ ಸರ್ವ ಶಾಸ್ತ್ರವಿತ್ |ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||

ಅಂದರೆ  ಆಚಾರ್ಯ ಶಂಕರರು ಎಂಟನೇ ವಯಸ್ಸಿಗೆ ನಾಲ್ಕು ವೇದಗಳನ್ನು ಕಲಿತರು. ಹನ್ನೆರಡನೇ ವಯಸ್ಸಿಗೆ ಸಕಲ ಶಾಸ್ತ್ರಗಳಲ್ಲೂ ಪಾರಂಗತರಾದರು. ಹದಿನಾರನೇ ವಯಸ್ಸಿಗೆ ಪ್ರಮುಖ ಉಪನಿಷತ್ತುಗಳು ಮತ್ತು ಬ್ರಹ್ಮಸೂತ್ರಗಳಿಗೆ ಅದ್ಭುತವಾದ ಭಾಷ್ಯಗಳನ್ನು ಬರೆದರು ಎಂಬತಹ ಅಪ್ರತಿಮ ಪ್ರತಿಭೆಯನ್ನು ಹೊಂದಿದ್ದರು ಎಂದು ತಿಳಿಸುತ್ತದೆ.

ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಅಂದ್ರೇ, ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನನ್ನ ತಮ್ಮನ (ಚಿಕ್ಕಪ್ಪನ ಮಗ) ಮದುವೆಗೆ ಹೋಗಿದ್ದೆ.  ಅದು ಬಹಳ ವಿಶೇಷವಾದ ಮದುವೆ. ಅದು ಭಾರತ ಮತ್ತು ಸ್ಪೇನ್ ದೇಶದ ಅದ್ಭುತವಾದ ಸಮಾಗಮ. ಪ್ರೀತಿಗೆ ಕಣ್ಣಿಲ್ಲಾ ಮತ್ತು ಯಾವುದೇ ಜಾತಿ ಧರ್ಮದ ಹಂಗಿಲ್ಲಾ!! ಹಾಗೇ ಪ್ರೀತಿ ಮಾಡ ಬಾರದು. ಮಾಡಿದರೆ ಜಗಕೆ ಹೆದರಬಾರದು ಎಂಬ ರವಿಮಾಮನ ಹೇಳಿಕೆಯಂತೆ ಇಬ್ಬರ ಮನೆಯವರನ್ನೂ ಒಪ್ಪಿಸಿ ಬಹಳ ಅದ್ದೂರಿಯಾಗಿ ಹಿಂದೂ ಸಂಪ್ರದಾಯದ ಪ್ರಕಾರ  ಶಾಸ್ತ್ರೀಯವಾಗಿ ಸಪ್ತಪದಿ ತುಳಿದ ಮದುವೆ ಅದಾಗಿತ್ತು. ಇಂತಹ ಸೂಕ್ಷ್ಮವಾದ ಮದುವೆಯ ಪೌರೋಹಿತ್ಯವಹಿಸಿದ್ದವರು ಪ್ರತೀ ಮಂತ್ರವನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸೂಕ್ತವಾಗಿ ವಿವರಿಸುತ್ತಾ, ಹೆಣ್ಣಿನ ಮನೆಯವರಿಗೆ ನಮ್ಮ ಶಾಸ್ತ್ರ ಸಂಪ್ರದಾಯಗಳನ್ನು ಪರಿಚಯಿಸುತ್ತಾ, ಬಹಳ ಅದ್ಭುತವಾಗಿ ಮದುವೆಯನ್ನು ನಿಭಾಯಿಸಿದ್ದರು. ವರಪೂಜೆಯ ನಂತರ ಕುಟುಂಬದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಎಲ್ಲರನ್ನೂ ಮನರಂಜಿಸುವ ಸಲುವಾಗಿ ಹುಬ್ಬಳ್ಳಿ ಮುದುಕಾ ಜಾತ್ರೆಗೆ ಹೊಂಟಾ.. ಹುಬ್ಬಳ್ಳಿ ಮುದುಕಾ.. ಮುದುಕನ ಹೆಂಡತಿ.. ಎಂದು  ಒಂದಕ್ಕೊಂದು ಜೋಡಿಸಿಕೊಂಡು ವೇಗವಾಗಿ ಹೇಳುತ್ತಾ, ಎಲ್ಲೀ ನೀವು  ಹೇಳ್ತೀರಾ!! ನಿಮ್ಮ ಕೈಯ್ಯಲ್ಲಿ ಹೇಳುಕ್ಕಾಗುತ್ತಾ.. ಎಂದು  ಒಬ್ಬೊಬ್ಬರನ್ನೇ ಕೇಳುತ್ತಾ ಸ್ವಲ್ಪ ಹೊತ್ತು ಕಾಲ ಕಳೆದಿದ್ದೆ. ಪುರೋಹಿತರ ಜೊತೆ ಬಂದಿದ್ದ ಸಣ್ಣ ವಯಸ್ಸಿನ ಹುಡುಗ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ. ಪುಟ್ಟ ಹುಡುಗಾ!! ಅಂತಾ ಸುಮ್ಮನಾಗಿದ್ದೆ.

ಮಾರನೇಯ ದಿನ ಧಾರೆ, ಸಪ್ತಪದಿ, ಹೆಣ್ಣು ಒಪ್ಪಿಸುವ ಶಾಸ್ರ ಎಲ್ಲವೂ ಮುಗಿದು ಸಂಜೆ ಆರತಕ್ಷತೆಗೆ ಬಂದವರೆಲ್ಲರನ್ನೂ ಸ್ವಾಗತಿಸಲು ಬಾಗಿಲು ಮುಂದೆ ನಿಂತಿದ್ದಾಗ, ಸಕುಟುಂಬ ಸಮೇತರಾಗಿ ಬಂದ ಪುರೋಹಿತರ ವೇಷ ಬದಲಾಗಿದ್ದನ್ನು ಕಂಡು, ಏನು ಪುರೋಹಿತರೇ ವೇಷ ಎಲ್ಲವೂ ಬದಲಾಗಿದೆ ಎಂದು ಕೇಳಿದಾಗ ಅವರು ನಗುತ್ತಲ್ಲೇ ಸಾರ್, ವೃತ್ತಿಯಲ್ಲಿ ನಾನು ಸಾಫ್ಟ್ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್, ಪ್ರವೃತ್ತಿಯಲ್ಲಿ ವಂಶಪಾರಂಪರ್ಯದ ಪೌರೋಹಿತ್ಯವನ್ನೂ ರೂಢಿಸಿಕೊಂಡಿದ್ದೇನೆ. ನಮ್ಮ ಸಂಪ್ರದಾಯ ಬಿಡಬಾರದಲ್ಲವೇ  ಎಂದಾಗ ಅರೇ!! ಹೌದಲ್ವೇ ಎನಿಸಿತು. ಹಾಗೇ ಮಾತನಾಡುತ್ತಾ. ನಮ್ಮ ಮಗ ನೆನ್ನೆಯಿಂದ ನಿಮ್ಮ ಅಭಿಮಾನಿಯಾಗಿ ಬಿಟ್ಟಿದ್ದಾನೆ. ನಿಮ್ಮ ಮುಂದೆ ಅವನು ಹುಬ್ಬಳ್ಳಿ ಮುದುಕಾ.. ಮುದುಕನ ಹೆಂಡತಿ.. ಪೂರ್ತಿ ಹೇಳಬೇಕೆಂದೇ ಇಂದು ಬಂದಿದ್ದಾನೆ ಎಂದಾಗ, ಅರೇ ಹೌದಾ!! ಎಂದು ಅಚ್ಚರಿ ಪಟ್ಟು ಎಲ್ಲಿ ಹೇಳು ಮಗೂ ಎಂದಾಗ, ಒಂದೇ ಉಸಿರಿನಲ್ಲಿ ಎಲ್ಲವನ್ನೂ ಸರಿಯಾಗಿ ಹೇಳಿದಾಗ ಬಹಳ ಸಂತೋಷವಾಗಿ ಏನಪ್ಪಾ ನಿನ್ನ ಹೆಸರು ಎಂದು ಕೇಳಿದಾಗ ಡಾ. ಪೃಥು ಪಿ. ಅದ್ವೈತ್ ಎಂದು ವೇಗವಾಗಿ ಹೇಳಿದಾಗ,  ಪುಟ್ಟ ಮಗು ಈಗಲಿಂದಲೇ ಡಾಕ್ಟರ್ ಆಗಬೇಕೆಂದು ಹಾಗೆ ಹೇಳುತ್ತಿರಬಹುದು ಎಂದು ಭಾವಿಸಿ ಮತ್ತೆ, ನಿನ್ನ ಹೆಸರು ಸರಿಯಾಗಿ ಹೇಳು ಎಂದು ಕೇಳಿದಾಗ ಮತ್ತೆ ಡಾ. ಪೃಥು ಪಿ. ಅದ್ವೈತ್ ಎಂದು ಹೇಳಿದ್ದನ್ನು ಕೇಳಿ, ಅವರ ತಂದೆಯವರ ಬಳಿ ಏನ್ ಸರ್ ಹೀಗೆ ಹೇಳ್ತಾ ಇದ್ದಾನೆ ನಿಮ್ಮ ಮಗ ಎಂದಾಗ. ಹೌದು ಅವನು ಈಗಾಗಲೇ ಆರು ವಿಶ್ವದಾಖಲೆ ಮಾಡಿದ್ದು, ಎರಡು ವಿದ್ಯಾ ಸಂಸ್ಥೆಗಳು ಅವನಿಗೆ ಗೌರವ ಡಾಕ್ಟರೇಟ್ ಕೊಟ್ಟಿದ್ದಾರೆ ಎಂದಾಗ, ಈಗ ಮೂಗಿನ ಮೇಲೆ ಬೆರಳಿಡುವ ಸರದಿ ನಮ್ಮದಾಗಿತ್ತು ಎಂದು ಬೇರೆ ಹೇಳಬೇಕಿಲ್ಲಾ ಅಲ್ವೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ