ಡಾ. ರಾಣಿ ಝಾ
ರಾಣಿ ಝಾ ಮಿಥಿಲಾ ಫೇಕ್ ಆರ್ಟಿಸ್ಟ್ ಸ್ಕಾಲರ್. ಈಕೆ ಹಲವು ಸಾವಿರ ಮಹಿಳೆಯರಿಗೆ ಈ ಕಲೆ ಕಲಿಸಿದ್ದಾರೆ. ಅವರನ್ನು ಸ್ವಾವಲಂಬಿಗಳಾಗಿಸಿದ್ದಾರೆ.
ಇವರಿಂದ ಪ್ರೇರಣೆ ಪಡೆದವರು ಲಕ್ಷಾಂತರ ಮಂದಿ. ಗೃಹಶೋಭಾ ಇನ್ ಸ್ಪೈರ್ ಅವಾರ್ಡ್ಸ್ ಫಂಕ್ಷನ್ ನಲ್ಲಿ ಇವರು ಬಿಡುವಾಗಿ ಮಾತನಾಡಿದರು.
ಒಂದು ಸರ್ವೇ ಸಾಧಾರಣ ಕಾಟನ್ ಸೀರೆ, ಹಣೆಯಲ್ಲಿ ಒಂದು ಬಿಂದಿ, ಮಾಮೂಲಿ ಭಾರತೀಯ ಸರಳ ಗೆಟಪ್ ನಲ್ಲಿ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆದರೆ ಅಸಲಿಗೆ ಈಕೆ ಭಾರತದ ಹಲವು ಕೋಟಿ ಮಹಿಳೆಯರನ್ನು ಪ್ರತಿನಿಧಿಸುತ್ತಿದ್ದರು, ಅವರೆಲ್ಲ ಅಪಾರ ಸಂಘರ್ಷ ಎದುರಿಸಿದರು, ಆದರೆ ಈಕೆ ಎಂದೂ ಸೋಲು ಒಪ್ಪಿದವರಲ್ಲ. ಈ ಕಾರಣಕ್ಕಾಗಿಯೇ ಇವರನ್ನು ಗೃಹಶೋಭಾ ಫೇಕ್ ಹೆರಿಟೇಜ್ ಅವಾರ್ಡ್ ನಿಂದ ಸನ್ಮಾನಿಸಲಾಯಿತು.
ಪರಿಶ್ರಮ ತಂದ ಪ್ರತಿಫಲ
ರಾಣಿ ಹೇಳುತ್ತಾರೆ, ``ನಾನು ಕಳೆದ 45 ವರ್ಷಗಳಿಂದಲೂ ಮಧುಬನೀ ಆರ್ಟ್ ಗಾಗಿ ದುಡಿಯುತ್ತಿದ್ದೇನೆ. ನನ್ನ ತಾಯಿ, ಅಜ್ಜಿ, ಅಕ್ಕಂದಿರೆಲ್ಲ ಇದನ್ನೇ ಮಾಡುತ್ತಿದ್ದರು. ಅವರಿಂದಲೇ ಇದನ್ನು ಕಲಿತ ನಾನು, ಹಳ್ಳಿಯ ಯಾವುದೇ ಸಣ್ಣಪುಟ್ಟ ಮಂಗಳ ಕಾರ್ಯದಲ್ಲೂ ಈ ಕಲೆಯಿಂದ ಅಲಂಕಾರ ಮಾಡುತ್ತೇನೆ. ಹಿಂದೆಲ್ಲ ಹೆಣ್ಣುಮಕ್ಕಳು ಈ `ಲಿಖಿಯಾ' (ಮಧುಬನೀ ಆರ್ಟ್) ಕಲೆಯಲ್ಲಿ ಎಷ್ಟು ಪರಿಣಿತರೆಂದು ತಿಳಿದೇ, ಅವರ ಪ್ರತಿಭೆ ಗುರುತಿಸಲಾಗುತ್ತಿತ್ತು. ಮದುವೆಗೆ ಇದು ಪ್ರಮುಖ ಮಾನದಂಡ. ಭಗವತಿ ಕುರಿತು ಹಾಡುಹಸೆ ಗೊತ್ತೇ ಎಂದು ಕೇಳುತ್ತಿದ್ದರು. ಹಳ್ಳಿಯ ಪ್ರತಿ ಹುಡುಗಿಯೂ ಇದನ್ನು ಕಲಿಯುತ್ತಿದ್ದಳು. ನಾನು ಅತಿ ಉತ್ಸಾಹದಿಂದ ನನ್ನ ಚಿಕ್ಕಜ್ಜಿ ಬಿಂದು ದೇವಿಯಿಂದ ಈ ಬಗ್ಗೆ ಅಪಾರವಾಗಿ ಕಲಿತೆ. ಆಕೆ ಆ ಕಾಲದಲ್ಲೇ ಇದರಲ್ಲಿ ಗ್ರೇಟ್ ಆರ್ಟಿಸ್ಟ್! ಆಕೆ ರಚಿಸಿದ ಪೇಂಟಿಂಗ್ ಫೋಟೋಗ್ರಾಫ್ಸ್ ಇಂದಿಗೂ ಲಂಡನ್ನಿನ ಬ್ರಿಟಿಷ್ ಲೈಬ್ರೆರಿಯಲ್ಲಿ ರಾರಾಜಿಸುತ್ತಿದೆ!

``ಮನೆಯ ಇಂಥ ಹಿರಿಯ ಹೆಂಗಸರೇ ಹೆಣ್ಣುಮಕ್ಕಳಿಗೆ ಪರಮ ಗುರುಗಳು. ಭೂಮಿಚಿತ್ರದ ಕಲೆ ಬಿಡಿಸುವಾಗ, ಅಕ್ಕಿ ಹಿಟ್ಟಿನಲ್ಲಿ (ದೋಸೆ ಹಿಟ್ಟಿನ ಹದ) ಕೈ ಅದ್ದಿ ಹೇಗೆ ಒಂದೆಳೆ, ಎರಡೆಳೆ ರೇಖೆಗಳನ್ನು ಬಿಡಿಸುವುದು, ಹಾಡು, ಹಸೆ, ರಂಗೋಲಿ, ಹೆಣಿಗೆ, ಹೊಲಿಗೆ ಇತ್ಯಾದಿ ಎಲ್ಲವನ್ನೂ ಈ ಹಿರಿಯರಿಂದ ಕಲಿಯುತ್ತಿದ್ದೆ. ಈ ರೀತಿ ಕುಟುಂಬದ, ಎಲ್ಲಾ ಹೆಂಗಸರೂ ಕೂಡಿ ಒಂದು ಚಿತ್ರ ಪೂರ್ತಿಗೊಳಿಸುತ್ತಿದ್ದೆವು.''
ರಾಣಿ ಝಾ 2010ರಲ್ಲಿ ದರ್ಭಾಂಗಾದಿಂದ, `ಮಿಥಿಲಾ ಪೇಂಟಿಂಗ್ ಲಿಟರೇಚರ್ ನಲ್ಲಿ ಹೆಂಗಸರ ಪಾತ್ರ' ಎಂಬ ವಿಷಯಕ್ಕೆ ಪಿಎಚ್ ಡಿ ಪಡೆದಿರುತ್ತಾರೆ! ತಮ್ಮ ಈ ಕಲೆಯನ್ನು ಇನ್ನಷ್ಟು ಆಳವಾಗಿ ಅರಿಯಲು ಈ ಉನ್ನತ ಪದವಿ ಗಳಿಸಿದರು. ಸೋಶಿಯಲ್ ಮೆಸೇಜ್ ಇಲ್ಲದಿದ್ದರೆ ಯಾವ ಕಲೆಯೂ ಪರಿಪೂರ್ಣವಲ್ಲ. ನಮ್ಮ ದೇಶದಲ್ಲಿ ಯಾವುದೇ ಕಲೆಯಿಂದ ಕಲಾವಿದರು ಲೈಮ್ ಲೈಟಿಗೆ ಬಂದಿರಲಿ, ಅವರೆಲ್ಲರೂ ಒಂದಲ್ಲ ಒಂದು ಸಾಮಾಜಿಕ ಸಂದೇಶಗಳನ್ನು ಸಾರಿದ್ದಾರೆ, ಎಂದು ಇವರು ಬಣ್ಣಿಸುತ್ತಾರೆ.
ಚಿತ್ರಗಳ ಮಾಧ್ಯಮದಿಂದ ಅಭಿಪ್ರಾಯ
``2004ರವರೆಗೂ ನಾನು ಸಾಂಪ್ರದಾಯಿಕ ಚಿತ್ರಗಳನ್ನಷ್ಟೇ ಬಿಡಿಸುತ್ತಿದ್ದೆ. ಹೆಂಗಸರ ಪ್ರಗತಿಯ ಕುರಿತಾಗಿ ಬಹಳ ಚಿಂತನೆ ನಡೆಸುತ್ತಿದ್ದೆ. ಭ್ರೂಣಹತ್ಯೆ, ಹೆಣ್ಣಿಗೆ 4 ಗೋಡೆಗಳ ಬಂಧನವೇಕೆ? ಹೆಣ್ಣಿನ ಶಿಕ್ಷಣದ ಹಕ್ಕು, ವರದಕ್ಷಿಣೆ ಪಿಡುಗು ಇತ್ಯಾದಿ ಎಲ್ಲದರ ವಿರುದ್ಧ ಸಿಡಿದೇಳುವಂಥ ಸಾಮಾಜಿಕ ಚಿತ್ರ ಬಿಡಿಸಬೇಕು ಎಂದುಕೊಂಡು, ಅದನ್ನು ಸಾಧಿಸುವುದರಲ್ಲಿ ಯಶಸ್ವಿಯಾದೆ! ಸಮಾಜದಲ್ಲಿ ಯಾವುದು ಸ್ತ್ರೀ ಶೋಷಣೆಗೆ ಮೂಲವೋ ಅಂಥದ್ದನ್ನು ನನ್ನ ಚಿತ್ರಗಳ ಮೂಲಕ ತೀವ್ರವಾಗಿ ಖಂಡಿಸಿದ್ದೇನೆ. ಈ ಕುರಿತು ವೇದಿಕೆಗಳಲ್ಲಿ ಹಾಡುತ್ತಾ, ಆ ಮೂಲಕ ಸಾಮಾಜಿಕ ಬದಲಾವಣೆ ತರಲು ಯತ್ನಿಸುತ್ತೇನೆ,'' ಎಂದು ರಾಣಿ ವಿವರಿಸುತ್ತಾರೆ.





