ಸವಾಲುಗಳು ನನಗೆ ಏನಾದರೂ ಹೊಸದನ್ನು ಮಾಡಲು ಪ್ರೇರೇಪಿಸುತ್ತವೆ
ರಶ್ಮಿ ಶರ್ಮ ಕ್ರಿಯೇಟಿವ್ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್
ರಶ್ಮಿ ಶರ್ಮ ಟೆಲಿಫಿಲಮ್ಸ್
ಏನಾದರೂ ಮಾಡಿ ತೋರಿಸುವ ಹುಚ್ಚು ಮನದಲ್ಲಿದ್ದರೆ ಸಾಮಾನ್ಯ ವ್ಯಕ್ತಿಗಿಂತ ವಿಶೇಷ ವ್ಯಕ್ತಿಯಾಗಲು ದಾರಿ ಸಿಗುತ್ತದೆ. ರಶ್ಮಿಯೊಳಗೂ ಇಂತಹ ಒಂದು ಉತ್ಸಾಹವಿತ್ತು. ಅದೇನೆಂದು ವಿವರವಾಗಿ ತಿಳಿಯೋಣವೇ…....?
ಮಧ್ಯಮ ವರ್ಗದಲ್ಲಿ ಜನಿಸಿದ ರಶ್ಮಿ ಶರ್ಮ ಮುನ್ನಡೆದು ರೈಟರ್‌ನಿಂದ ಕ್ರಿಯೇಟಿವ್ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಆಗುತ್ತೇನೆಂದು ಎಂದೂ ಯೋಚಿಸಿರಲಿಲ್ಲ. ಆದರೆ ಪರಿಶ್ರಮ, ನಿಷ್ಠೆ ಹಾಗೂ ಏನನ್ನಾದರೂ ಮಾಡಿ ತೋರಿಸಬೇಕೆಂಬ ಹಠ ಅವರನ್ನು ಸಾಮಾನ್ಯರಿಂದ ವಿಶೇಷ ವ್ಯಕ್ತಿಯನ್ನಾಗಿಸಿತು. 2008ರಲ್ಲಿ ರಶ್ಮಿ ಮೊದಲ ಬಾರಿ `ರಾಜಾ ಕೀ ಆಯೇಗಿ ಬಾರಾತ್' ಧಾರಾವಾಹಿಯಲ್ಲಿ ಕೆಲಸ ಮಾಡಿದರು. ನಂತರ `ರೆಹನಾ ಹೈ ತೇರಿ ಪಲಕೋಂ ಕೀ ಛಾವೋಮೆ,' `ಮಿಸೆಸ್ ಕೌಶಿಕ್ ಕೀ 5 ಬಹೂಯೇ,' `ದೇಶ್ ಕೀ ಬೇಟಿ ನಂದಿನಿ' ಧಾರಾವಾಹಿಗಳೊಂದಿಗೆ ಅವರ ಯಶಸ್ಸಿನ ಸರಣಿ ಆರಂಭವಾಯಿತು. `ಸಾಥಿಯಾ ಸಾಥ್ ನಿಭಾನಾ' ಮತ್ತು `ಸಸುರಾಲ್ ಸಿಮರ್ ಕಾ' ಧಾರಾವಾಹಿಗಳು ಈಗ 1000ಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ಪೂರೈಸಿವೆ. ಅವರ ಇತರ ಧಾರಾವಾಹಿಗಳು `ಶಕ್ತಿ,' `ಸ್ವರಾಗಿನಿ,' `ಸರೋಜಿನಿ,' ಇತ್ಯಾದಿ ಯಾವಾಗಲೂ ಟಿಆರ್‌ಪಿ ರೇಸ್‌ನಲ್ಲಿ ಮುಂದಿವೆ. ಅವುಗಳಲ್ಲಿ ಕೆಲವು ಧಾರಾವಾಹಿಗಳ ಕಥೆಯನ್ನು ಸ್ವತಃ ರಶ್ಮಿ ಬರೆದಿದ್ದಾರೆ. ರಶ್ಮಿಯವರ ವ್ಯಕ್ತಿತ್ವವನ್ನು ಇನ್ನೂ ಕೊಂಚ ತಿಳಿಯೋಣ ಬನ್ನಿ :
ನಿಮ್ಮ ಮನಸ್ಸಿನಲ್ಲಿ ಪ್ರೊಡ್ಯೂಸರ್ ಆಗುವ ಕಲ್ಪನೆ ಯಾವಾಗ ಬಂತು?
ನಾನು ಇಂಡಸ್ಟ್ರಿಯಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿದೆ. ಪ್ರೊಡ್ಯೂಸರ್ ಆಗುವ ಮೊದಲು ನಾನು ಹಲವಾರು ಧಾರಾವಾಹಿಗಳಲ್ಲಿ ಕ್ರಿಯೇಟಿವ್ ಹೆಡ್ ಆಗಿದ್ದೆ. ಆ ಧಾರಾವಾಹಿಗಳ ಕಥೆಯ ಬಗ್ಗೆ ಯೋಚಿಸುವುದು, ಸ್ಟೋರಿ ಲೈನ್ ತಯಾರಿಸುವುದು, ಅದನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುವುದು ನನ್ನ ಕೆಲಸವಾಗಿತ್ತು. ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ ನಂತರ ಇಂದು ನಾನು ಇತರರಿಗಾಗಿ ಮಾಡುತ್ತಿರುವ ಕೆಲಸಗಳನ್ನು ನನಗಾಗಿಯೂ ಮಾಡಿಕೊಳ್ಳಬಹುದು ಅನ್ನಿಸಿತು. ಅಂದಹಾಗೆ ನಾವು ಇತರರಿಗಾಗಿ ಪ್ರಾಡಕ್ಟ್ಸ್ ಪ್ರೆಸೆಂಟ್ ಮಾಡುವಾಗ ನಮಗೆ ಹಲವಾರು ನಿರ್ಬಂಧಗಳಿರುತ್ತವೆ. ಇತರರ ಧಾರಾವಾಹಿಗಳನ್ನು ಮಾಡುವಾಗ ಒಂದು ವೇಳೆ ಈ ಶೋ ನನ್ನದಾಗಿದ್ದರೆ ಅದನ್ನು ಬೇರೊಂದು ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದೆ ಅನ್ನಿಸಿತು. ಈ ಆಲೋಚನೆಗಳೊಂದಿಗೆ ಹಾಗೂ ಮೊದಲು ನನ್ನನ್ನು ಒಳ್ಳೆಯ ಕ್ರಿಯೇಟಿವ್ ಹೆಡ್ ಎಂದು ಸಾಬೀತುಪಡಿಸಿದ ನಂತರ ನಾನು ಪ್ರೊಡ್ಯೂಸರ್ ಆಗಲು ಯೋಚಿಸಿದೆ. ಅದು ನನಗೆ ಬಹಳ ಕಷ್ಟವಿತ್ತು. ಏಕೆಂದರೆ ನಾನೊಂದು ಮಧ್ಯಮವರ್ಗದ ಕುಟುಂಬದಿಂದ ಬಂದಿದ್ದೆ. ಹೀಗಾಗಿ ಅಷ್ಟು ದೊಡ್ಡ ಇನ್ವೆಸ್ಟ್ ಮೆಂಟ್ ಮಾಡುವುದು ಕಷ್ಟವಾಗಿತ್ತು. ಏನೇ ಮಾಡಿದರೂ ಸ್ವತಃ ಮಾಡಬೇಕಿತ್ತು. ಆದರೆ ಡೆಡಿಕೇಶನ್ ಮತ್ತು ಪ್ಯಾಶನ್ ಇದ್ದರೆ ನೀವು ಇಷ್ಟಪಟ್ಟಿದ್ದನ್ನು ನಿಮ್ಮಿಂದ ಮಾಡಿಸುತ್ತದೆ.
ಮೇಲ್ ಡಾಮಿನೇಟಿಂಗ್ ಗ್ಲ್ಯಾಮರ್ ಇಂಡಸ್ಟ್ರಿಯಲ್ಲಿ ನಿಮಗೊಂದು ಸ್ಥಾನ ಮಾಡಿಕೊಳ್ಳುವುದು ಎಷ್ಟು ಕಷ್ಟವಾಗಿತ್ತು?
ನಾನು ಈ ವಿಷಯವನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಗ್ಲ್ಯಾಮರ್ ಇಂಡಸ್ಟ್ರಿಯಲ್ಲಿ ಮೇಲ್ ಡಾಮಿನೇಶನ್ ಹೆಚ್ಚು ಸ್ಟ್ರಾಂಗ್ ಆಗಿದೆ. ಒಬ್ಬ ಮಹಿಳೆಯಾಗಿರುವುದರಿಂದ ನಿಮ್ಮ ವಿಷಯ ಪ್ರಸ್ತುತಪಡಿಸುವುದು ಹಾಗೂ ಅದನ್ನು ಒಪ್ಪಿಸುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಆದರೆ ಒಬ್ಬ ಮಹಿಳೆಯಾಗಿದ್ದೂ ನನ್ನನ್ನು ನಾನು ಎರಡೂ ಇಂಡಸ್ಟ್ರಿಯಲ್ಲಿ (ಫಿಲ್ಮ್ ಮತ್ತು ಟಿವಿ) ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿಕೊಂಡೆ. ನನ್ನ ವಿಷಯಗಳನ್ನು ಒಪ್ಪಿಸುವುದರಲ್ಲೂ ಯಶಸ್ವಿಯಾಗಿದ್ದೇನೆ. ನಾನು ಕ್ರಿಯೇಟಿವ್ ಹೆಡ್ ಆಗಿದ್ದಾಗ ಈ ಡಾಮಿನೇಶನ್ ಸಹಿಸಿಕೊಳ್ಳಬೇಕಾಗಿತ್ತು. ಆದರೆ ನನಗಿರುವ ಗಾಢ ನಂಬಿಕೆ ಏನೆಂದರೆ ನಮ್ಮ ಕೆಲಸ ನಮಗೆ ಚೆನ್ನಾಗಿ ಗೊತ್ತಿದ್ದರೆ, ನಮ್ಮ ಕೆಲಸದ ಬಗ್ಗೆ ಪ್ರಾಮಾಣಿಕರಾಗಿದ್ದರೆ, ನಮ್ಮನ್ನು ಯಾರೂ ಡಾಮಿನೇಟ್ ಮಾಡಲು ಸಾಧ್ಯವಿಲ್ಲ. ನನ್ನಲ್ಲಿ ಮೊದಲಿನಿಂದಲೂ ಕಲಿಯುವ ಹಂಬಲ ಇದೆ. ನಾನು ಬಹಳ ಕೆಳಗಿನ ಹಂತದಿಂದ ಕೆಲಸ ಮಾಡಲು ಶುರು ಮಾಡಿದ್ದೇನೆ. ಆದ್ದರಿಂದ ನನ್ನ ಕೆಲಸವನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ ಮತ್ತು ಸರಿಯಾದ ನಿರ್ಣಯ ತೆಗೆದುಕೊಳ್ಳುವಲ್ಲಿ ಸಮರ್ಥಳಾಗಿದ್ದೇನೆ.