ಮುಟ್ಟು ಎಂಬುದು ಎಲ್ಲಾ ಹೆಣ್ಣುಮಕ್ಕಳಲ್ಲೂ ಕಂಡುಬರುವ ಸಾಮಾನ್ಯ ದೈಹಿಕ ಪ್ರಕ್ರಿಯೆ. ಇದಕ್ಕಾಗಿ ಈಸ್ಟ್ರೋಜನ್‌, ಪ್ರೊಜೆಸ್ಟರಾನ್‌ ಹಾರ್ಮೋನಗಳೇ ಕಾರಣ. ಆದರೆ ಮುಟ್ಟಿನ ಕುರಿತಾಗಿ ಇಂದಿಗೂ ಹೆಂಗಸರಲ್ಲಿ ಜಾಗರೂಕತೆಯ ಅಭಾವವಿದೆ, ಹೀಗಾಗಿ ವಿಭಿನ್ನ ದೇಶಗಳಲ್ಲಿ ಈ ಕುರಿತಾಗಿ ವಿಭಿನ್ನ ಭ್ರಾಂತಿಗಳು ಹರಡಿವೆ. ಈ ಕಾರಣದಿಂದ ಈ ವೈಜ್ಞಾನಿಕ ಯುಗದಲ್ಲಿ ಇಂದಿಗೂ ಹೆಣ್ಣನ್ನು ಅಶುದ್ಧಳು, ಅಪವಿತ್ರಳೆಂದೇ ಭಾವಿಸಲಾಗುತ್ತದೆ. ಅದರಿಂದಾಗಿ ಅವರು ಅಡುಗೆಮನೆ ಅಥವಾ ಧಾರ್ಮಿಕ ಕೆಲಸಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಎಷ್ಟೋ ಕಡೆ ಬರೀ ನೆಲದಲ್ಲಿ ಮಲಗಬೇಕಾದ ಕಠಿಣ ಪದ್ಧತಿಗಳಿವೆ.

ಪ್ಯಾಡ್ಸ್ ಕುರಿತಾಗಿ ಜಾಗೃತಿಯ ಸಾಕಷ್ಟು ಅಭಾವವಿದೆ. ಇದಕ್ಕೆ ಕಾರಣ ಹೆಂಗಸರು ಈ ದಿನಗಳಲ್ಲಿ ಹಳೆ ಕಾಲದವರಂತೆ ಬಟ್ಟೆಗಳನ್ನೇ ಬಳಸುತ್ತಾ ತಮ್ಮ ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದರೆ ವೈಜ್ಞಾನಿಕ ದೃಷ್ಟಿಯಿಂದ ಹೆಣ್ಣುಮಕ್ಕಳ ಸುರಕ್ಷತೆ, ಹೈಜೀನ್‌ಗಾಗಿ ಸಾಕಷ್ಟು ಆಧುನಿಕ ಸೌಲಭ್ಯಗಳು ಲಭ್ಯವಿವೆ, ಚಿಂತನೆಯ ದೃಷ್ಟಿ ಬದಲಾಗಬೇಕಿದೆ.

ಈ ಕುರಿತಾಗಿ ನೈನ್‌ ಸ್ಯಾನಿಟರಿ ಪ್ಯಾಡ್ಸ್ ನ ಸಿಇಓ ರಿಚಾ ಸಿಂಗ್‌ರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ :

ನಿಮ್ಮ ಕೌಟುಂಬಿಕ ಹಿನ್ನೆಲೆ ವಿವರಿಸಿ?

ನನ್ನ ತಂದೆ ಎಂಜಿನಿಯರ್‌, ತಾಯಿ ಟೀಚರ್‌. ನಮ್ಮ ಕುಟುಂಬದಲ್ಲಿ ಹೆಣ್ಣುಮಕ್ಕಳು ಉದ್ಯಮ ಸ್ಥಾಪಿಸಿ ತಮ್ಮ ಕೆರಿಯರ್‌ರೂಪಿಸಿಕೊಳ್ಳುವುದು ಎಂಬುದು ಹೊಸ ವಿಷಯ. ನಮ್ಮಮ್ಮ ಅಜ್ಜಿಯರೂ ಇದಕ್ಕೆ ಹೊರತಾಗಿರಲಿಲ್ಲ. ನಾನು ಡಾಕ್ಟರ್‌ ಅಥವಾ ಎಂಜಿನಿಯರ್‌ ಆಗಬೇಕೆಂದು ಅವರು ಬಯಸುತ್ತಿದ್ದರು. ಅದು ಆ ಕಾಲಕ್ಕೆ ಅತ್ಯುತ್ತಮ ಕೆರಿಯರ್‌ಎನಿಸಿತ್ತು. ಆದರೆ ನಾನು ಬಿ.ಕಾಂ, ಎಂ.ಬಿ.ಎ ಮುಗಿಸಿ ವಾಣಿಜ್ಯ ಕ್ಷೇತ್ರದತ್ತ ಬಿಸ್‌ನೆಸ್‌ನಲ್ಲಿ ಕೆರಿಯರ್‌ ರೂಪಿಸಿಕೊಳ್ಳಲು ನಿರ್ಧರಿಸಿಬಿಟ್ಟಿದ್ದೆ. ಇಲ್ಲಿಂದ ಕಾರ್ಪೊರೇಟ್ ಲೋಕಕ್ಕೆ ನನ್ನ ಎಂಟ್ರಿ ಆಯ್ತು.

ನಮ್ಮ ಸಮಾಜದಲ್ಲಿ ಇಂದಿಗೂ ಮುಟ್ಟಿನ ಕುರಿತು ಇಷ್ಟೊಂದು ಮೂಢನಂಬಿಕೆ, ಭ್ರಾಂತಿಗಳೇಕೆ? ಈ ಕುರಿತಾಗಿ ನೀವೇನು ಹೇಳುವಿರಿ?

ನಮ್ಮ ದೇಶದಲ್ಲಿ ಇಂದಿಗೂ ಮುಟ್ಟಿನ ಕುರಿತು ಅಖಂಡ ಮೂಢನಂಬಿಕೆಗಳು ತುಂಬಿಕೊಂಡಿವೆ. ಈ ಸಂದರ್ಭದಲ್ಲಿ ಹೆಣ್ಣನ್ನು ಅಸ್ಪೃಶ್ಯಳಂತೆ ದೂರ ಇರಿಸುತ್ತಾರೆ. ಅಷ್ಟು ಮಾತ್ರವಲ್ಲ ಅವಳಿಗೆ ಇನ್ನೂ ಹಲವಾರು ಪ್ರತಿಬಂಧಗಳನ್ನು ಹೇರಲಾಗುತ್ತದೆ. ಕೆಲವು ಪರಿವಾರಗಳಂತೂ ಮುಟ್ಟಿನ ಹೈಜೀನ್‌ಗಾಗಿ ಖರ್ಚು ಮಾಡುವುದು ಮಹಾಪಾಪ ಎಂದು ಭಾವಿಸುತ್ತವೆ. ಹಾಗಾಗಿ ಅಂಥ ಹೆಂಗಸರು ವಿಧಿಯಿಲ್ಲದೆ ಈಗಲೂ ಬಟ್ಟೆ ಬಳಸುತ್ತಿದ್ದಾರೆ. ಇವು ಸಾಮಾನ್ಯವಾಗಿ ಬೇಗ ಕೊಳಕಾಗುವುದರಿಂದ, ಅವರಿಗೆ ಅನಾರೋಗ್ಯ ತಪ್ಪಿದ್ದಲ್ಲ.

ಎಲ್ಲರಿಗೂ ನೆಗಡಿ, ಕೆಮ್ಮು ಬರುವಂತೆ ಮುಟ್ಟು ಎಂಬುದು ಹೆಣ್ಣಿನ ಒಂದು ಸಹಜ ದೈಹಿಕ ಕ್ರಿಯೆ. ಇದು ಹುಡುಗಿ ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಹೊಂದಿದ್ದಾಳೆ ಎಂಬುದರ ಸೂಚನೆ. ಮುಂದೆ ಅವಳು ತಾಯಿಯಾಗಲು ಅರ್ಹಳು ಎಂಬುದರ ಸಂಕೇತ. ಈ ಮೂಲಕ ಆಗುವ ಸ್ರಾವ ಖಂಡಿತಾ ಕೊಳಕಲ್ಲ. ಇದು ಸ್ಟೆಮ್ ಕೋಶಗಳಿಂದ ಸಮೃದ್ಧ, ಅದು ಮುಂದೆ ಫಲವತ್ತಾದರೆ ಒಂದು ಜೀವ ರೂಪುಗೊಳ್ಳಲು ಮೂಲಾಧಾರ. ಈ ಪ್ರಕ್ರಿಯೆ ಗಂಡು ಹುಡುಗರಲ್ಲೂ ಇಷ್ಟೇ ಸಹಜ. ಯಾರು ತಿಂಗಳಾದರೂ ವೀರ್ಯ ಹೊರ ಚೆಲ್ಲುವುದಿಲ್ಲವೋ, ಅವರಿಗೆ ಸಹಜ ವೀರ್ಯಪತನ ಆಗಿ ಬಟ್ಟೆಗೆ ತಗುಲುತ್ತದೆ. ಹೆಣ್ಣಿಗೆ ಹೋಲಿಸಿದಾಗ ಇದರ ಸ್ರಾವ ಅತ್ಯಲ್ಪ. ಹೀಗಾಗಿ ಮುಟ್ಟಿನ ಸ್ರಾಂದತೆ ಇದು ಹಿಂಸಕಾರಕವಲ್ಲ. ಆದರೆ ಜೀವ ಉತ್ಪನ್ನಕ್ಕೆ ಎರಡರ ಮಿಲನ ಅನಿವಾರ್ಯ. ಪ್ರಕೃತಿಯ ಈ ವ್ಯತ್ಯಾಸ ಅರಿತರೆ ಜನ ಇಷ್ಟೆಲ್ಲ ಕಸಿವಿಸಿಗೆ ಒಳಗಾಗುವ ಅಗತ್ಯವೇ ಇಲ್ಲ!

ಕೊರೋನಾ ಕಾಲದಲ್ಲಿ ನೀವು ಪ್ಯಾಡ್ಸ್ ಹಂಚುವಿಕೆಯನ್ನು ಹೇಗೆ ನಿರಾಯಾಸವಾಗಿ ನಿಭಾಯಿಸಿದಿರಿ?

ಲಾಕ್‌ ಡೌನ್‌ ಕಾಲದಲ್ಲಿ ಪ್ಯಾಡ್ಸ್ ಪೂರೈಕೆ ನಿರಾಯಾಸವಾಗಿ ನಡೆಯಬೇಕೆಂದು ಸರ್ಕಾರದ ಜೊತೆ ಚರ್ಚಿಸಿ, ಎಲ್ಲೆಡೆ ಜಾಗೃತಿ ಮೂಡಿಸಿದೆ. ಇಡೀ ದೇಶದಲ್ಲಿ ಸ್ಯಾನಿಟರಿ ಪ್ಯಾಡ್ಸ್ ನ್ನು ಅತ್ಯಗತ್ಯ ಅವಶ್ಯಕತೆ ಎಂದು ಮೆಡಿಕಲ್ ದೃಷ್ಟಿಯಲ್ಲಿ ಸ್ಪಷ್ಟಪಡಿಸಲಾಯಿತು. ಈ ಕೆಲಸದಲ್ಲಿ ನಾವು ಸರ್ಕಾರಿ ಮತ್ತು ಸರ್ಕಾರೇತರ ಸಂಘಟನೆಗಳ ಸಹಕಾರ ಪಡೆದೆವು.

ಈ ಮುಟ್ಟಿನ ಹೈಜೀನ್‌ ಏಕೆ ಅತ್ಯಗತ್ಯ?

ಮುಟ್ಟಿನ ಹೈಜೀನ್‌ ಗೆ ಅತ್ಯಧಿಕ ಮಹತ್ವ ನೀಡಲು 2 ಕಾರಣಗಳಿವೆ. ಮೊದಲು ಮಾನಸಿಕ ಆರೋಗ್ಯ, ಏಕೆಂದರೆ ಉತ್ತಮ ಮುಟ್ಟಿನ ಹೈಜೀನ್‌ ಇಲ್ಲದಿದ್ದರೆ ಹೆಂಗಸರು ಈ 4-5 ದಿನಗಳಲ್ಲಿ ಬಹಳಷ್ಟು ಹಿಂಸೆ ಅನುಭವಿಸುತ್ತಾರೆ. ಇದರಿಂದ ಅವರ ಕೆಲಸ, ಪರ್ಫಾರ್ಮೆನ್ಸ್, ಕಲಿಕೆ ಎಲ್ಲದರ ಮೇಲೂ ದುಷ್ಪರಿಣಾಮ ಆಗುತ್ತದೆ. ಮತ್ತೊಂದು, ದೈಹಿಕ ಆರೋಗ್ಯ. ಕೆಟ್ಟ ಹೈಜೀನ್‌ ಕಾರಣ ಹೆಂಗಸರು ವಿಭಿನ್ನ ಸೋಂಕುಗಳಿಗೆ ಗುರಿಯಾಗುತ್ತಾರೆ, ಅದು ಗೊತ್ತಾಗುವುದೂ ಇಲ್ಲ. ಅದು ಗೊತ್ತಾಗುವ ಹೊತ್ತಿಗೆ ಸರ್ವೈಕಲ್ ಕ್ಯಾನ್ಸರ್‌ಗೆ ತಿರುಗಿದ್ದರೂ ಆಶ್ಚರ್ಯವಿಲ್ಲ. ಮುಂದೆ ಬಂಜೆತನದ ಸಮಸ್ಯೆಯೂ ಕಾಡಬಹುದು. ಆದ್ದರಿಂದ ಮುಟ್ಟಿನ ಹೈಜೀನ್‌ನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ!

ಇಂದಿಗೂ ಕಾರ್ಪೊರೇಟ್‌ ಕ್ಷೇತ್ರದಲ್ಲಿ ಹೆಂಗಸರಿಗೆ ಕೆರಿಯರ್‌ ರೂಪಿಸಿಕೊಳ್ಳುವುದು ಕಷ್ಟಕರ ಅಂತೀರಾ?

ಭಾರತೀಯ ಹೆಂಗಸರು ಇಂದಿಗೂ ಸಹ ಕಾರ್ಪೊರೇಟ್‌ ಲೋಕದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅವಳ ಕುಟುಂಬದವರೇ ಒತ್ತಾಸೆ ನೀಡುವುದಿಲ್ಲ. ಯಾವುದೇ ಫೀಲ್ಡ್ ಇರಲಿ, ಅದಕ್ಕೆ ಸಂಪೂರ್ಣ ಸಮರ್ಪಣೆ ಹಾಗೂ ಪ್ರತಿಬದ್ಧತೆಯ ಅಗತ್ಯವಿದೆ. ಆದರೆ ಹೆಣ್ಣಿನ ಮೇಲೆ ಕೌಟುಂಬಿಕ ಜವಾಬ್ದಾರಿಗಳೇ ಅತ್ಯಧಿಕ ಆಗಿರುವುದರಿಂದ, ಕೆರಿಯರ್‌ ಅವಳಿಗೆ ಮೊದಲ ಪ್ರಯಾರಿಟಿ ಆಗುವುದಿಲ್ಲ. ಅವಳು ಮನೆಯಲ್ಲಿ ಬೆಳೆದು ಬಂದ ಕ್ರಮ, ಸಮಾಜ ಅವಳನ್ನು ಹೇಗೆ ಗಮನಿಸುತ್ತಿದೆ ಎಂಬುದೂ ಮುಖ್ಯ. ಹೆಚ್ಚಿನ ಹೆಂಗಸರಲ್ಲಿ ಚಾಲೆಂಜಿಂಗ್‌ ಟಾಸ್ಕ್ ಎದುರಿಸಲು ಆತ್ಮವಿಶ್ವಾಸವೇ ಇರುವುದಿಲ್ಲ. ಆದರೆ ಪ್ರತಿಯೊಬ್ಬ ಹೆಣ್ಣೂ ಇದನ್ನು ಮೆಟ್ಟಿ ನಿಂತು ತನ್ನ ಸ್ವಪ್ರತಿಭೆ ಹಾಗೂ ಧೈರ್ಯದ ಆಧಾರದಿಂದ ತನ್ನ ಕೆರಿಯರ್‌ನಲ್ಲಿ ಯಶಸ್ಸು ಸಾಧಿಸಬೇಕಿದೆ. ಸಾಮಾಜಿಕ, ಕೌಟುಂಬಿಕ ಹೊರೆಗಳನ್ನು ಒಂದು ಕಡೆಯಿಂದ ನಿಭಾಯಿಸುತ್ತಲೇ, ಪರಿವಾರದವರ ಸಹಕಾರ ಪಡೆದು ಕೆರಿಯರ್‌ನಲ್ಲಿ ಸೈ ಎನಿಸಬೇಕು. ಕಾರ್ಪೊರೇಟರ್ಡ್ ಎಂದರೆ ಪೈಪೋಟಿಯ ಮಹಾಪ್ರವಾಹ….. ಹೆಣ್ಣು, ಗಂಡು ಯಾರೇ ಇರಲಿ, ತಮ್ಮ ಕರ್ತವ್ಯ ನಿಷ್ಠೆಯಿಂದಾಗಿ ಇಲ್ಲಿ ಗೆಲ್ಲಬೇಕಷ್ಟೆ!

– ಪಾರ್ವತಿ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ