ಮಾಲಾ : ಪ್ರಾಣಿಗಳಿಗೆ ದೃಷ್ಟಿದೋಷದ ಸಮಸ್ಯೆ ಎಂದೂ ಕಂಡುಬರುವುದಿಲ್ಲ….. ಅಲ್ಲವೇ?
ಲೀಲಾ : ಇರಬಹುದು ಅನಿಸುತ್ತೆ ….. ನಾನಂತೂ ಕನ್ನಡಕ ಧರಿಸಿದ ಯಾವ ಪ್ರಾಣಿಯನ್ನೂ ನೋಡಿಯೇ ಇಲ್ಲ ಬಿಡು.
ಮಾಲಾ : ಹಾಗೇಂತ ಅವು ಲೆನ್ಸ್ ಧರಿಸಿವೆ ಅಂತಾನೂ ಅಂದ್ಕೊಬಾರದು!
ಪುಸ್ತಕ ನೋಡಿಕೊಂಡು ಸೊಸೆ ಅಡುಗೆ ಮಾಡುತ್ತಿದ್ದಳು.
ಅತ್ತೆ : ಏನಮ್ಮ, ಚಪಾತಿ ಹಿಟ್ಟಿನ ಮೇಲೆ ಪೂಜಾ ರೂಮಿನ ಘಂಟೆ ಯಾಕೆ ತಂದಿರಿಸಿದ್ದೀಯಾ…?
ಸೊಸೆ : ಓ ಅದಾ ಅತ್ತೆ…… ಈ ಪುಸ್ತಕದಲ್ಲಿ ಹಿಟ್ಟು ಕಲಸಿದ ಮೇಲೆ 1 ಗಂಟೆ ಇಡಿ ಅಂತ ಕೊಟ್ಟಿದ್ದಾರೆ.
ಟೀಚರ್: ಲೋ ಕಿಟ್ಟಿ, ಪರೀಕ್ಷೆ ಬರ್ತಿದೆ, ತಯಾರಿ ಮಾಡಿಕೊಂಡಿದ್ದೀಯಾ?
ಕಿಟ್ಟಿ : ಏನೋ ಸುಮಾರಾಗಿ.
ಟೀಚರ್: ಎಲ್ಲಿ…. ದ್ಯುತಿ ಸಂಶ್ಲೇಷಣೆ ಎಂದರೇನು? ಹೇಳು ನೋಡೋಣ.
ಕಿಟ್ಟಿ : ಗೊತ್ತಿಲ್ಲ ಟೀಟರ್.
ಟೀಚರ್ : ಮೊದಲು ಸ್ವಲ್ಪ ಓದಿನ ಕಡೆ ಗಮನ ಕೊಡು.
ಕಿಟ್ಟಿ : ಟೀಚರ್ ನಿಮಗೆ ಪ್ರಶಾಂತ್ ಕುಮಾರ್ ಗೊತ್ತಾ?
ಟೀಚರ್ : ಯಾರದು….? ಗೊತ್ತಿಲ್ಲವಲ್ಲ….
ಕಿಟ್ಟಿ : ನಿಮ್ಮ ಮಗಳು 10ನೇ ಕ್ಲಾಸಿಗೆ ಬಂದಾಯ್ತು, ಸ್ವಲ್ಪ ಅವಳ ಮೇಲೂ ಗಮನ ಕೊಡಿ!
ಮಗಳು : ಅಮ್ಮಾ, ಶ್ರಾವಣ ಮಾಸದಲ್ಲಿ ಹೆಣ್ಣು ಮಕ್ಕಳು ಯಾಕೆ ದೇವಸ್ಥಾನಕ್ಕೆ ಹೋಗ್ತಾರೆ?
ತಾಯಿ : ಒಳ್ಳೆಯ ಗಂಡನ್ನ ಕೊಡಪ್ಪ ಅಂತ ದೇವರನ್ನು ಕೇಳಿಕೊಳ್ಳೋಕೆ.
ಮಗಳು : ಮತ್ತೆ ಮದುವೆಯಾದ ಆಂಟಿಯರು ಯಾಕೆ ಹೋಗ್ತಾರೆ…..?
ತಾಯಿ ನಾನು ಕೇಳಿದ್ದೇನು….? ನೀನು ಕೊಟ್ಟಿದ್ದೇನು…. ಅಂತ ವಿಚಾರಿಸೋಕ್ಕೆ!
ವೀಣಾ : ವಾಟ್ಸ್ ಆ್ಯಪ್ ಮೆಸೇಜ್‌ಗೂ ಅಡುಗೆಮನೆಗೂ ಬಹಳ ಸಂಬಂಧ ಗೊತ್ತಾ?
ವಾಣಿ : ಅದು ಹೇಗೆ ಅಂತೀಯಾ?
ವೀಣಾ : ಅದು ಒಲೆ ಮೇಲೆ ಇಟ್ಟ ಹಾಲಿನಂತೆ…. ಅಗಾಗ ಇಣುಕಿ ನೋಡುತ್ತಲೇ ಇರಬೇಕು.
ಟೀಚರ್ : ಸೀನ, ಲಿಂಗಗಳಲ್ಲಿ ಎಷ್ಟು ವಿಧ ಹೇಳು…..
ಸೀನ : ಆರು ವಿಧ ಟೀಚರ್.
ಟೀಚರ್ : ಅದು ಹೇಗೋ?
ಸೀನ : ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ, ನಮ್ಮಪ್ಪ ಸಿದ್ಲಿಂಗ, ಅಟೆಂಡರ್ ಗುರುಲಿಂಗ, ಶ್ರೀಲಂಕಾ ಬೋಲರ್ ಮಲಿಂಗ!
ಕಿಟ್ಟಿ : ನಾನು ಸತ್ತ ಮೇಲೆ ದೇವರನ್ನು ನನ್ನನ್ನು ನರಕಕ್ಕೇ ಕಳಿಸು ಎಂದು ಬೇಡಿಕೊಳ್ಳುತ್ತೇನೆ.
ನಾಣಿ : ಇದ್ಯಾಕೋ ಮಾರಾಯ… ನಿನ್ನ ತಲೆ ನೆಟ್ಟಗಿದೆ ತಾನೇ?
ಸೀನ : ಎಲ್ಲರೂ ಸ್ವರ್ಗಕ್ಕೆ ಹೋಗಬೇಕು ಅಂತ ತಾನೇ ಆಸೆ?
ವೆಂಕಿ : ಬೇಡ, ಮನಸ್ಸು ಸರಿಯಾಗಿಟ್ಟುಕೊಂಡು ಪ್ರಾರ್ಥನೆ ಮಾಡಿಕೋ…..
ಕಿಟ್ಟಿ : ಅದೆಲ್ಲ ಮುಖ್ಯವಲ್ಲ, ನಿಮ್ಮಂಥ ಆತ್ಮೀಯ ಗೆಳೆಯರೆಲ್ಲ ಗ್ಯಾರಂಟಿ ನರಕದಲ್ಲೇ ಇರುತ್ತೀರಿ ಅಂತ ಗೊತ್ತು, ಹಾಗಿರುವಾಗ ನಾನೇಕೆ ನಿಮ್ಮನ್ನು ಬಿಟ್ಟು ಸ್ವರ್ಗಕ್ಕೆ ಹೋಗಲಿ?
ಗುಂಡನಿಗೆ ಸಮಾಜ ಸೇವೆಯಲ್ಲಿ ಅಪಾರ ಆಸಕ್ತಿ. ಹೇಗಾದರೂ ಸಮಾಜ ಸೇವೆಗೆ ತನ್ನನ್ನೇ ಅರ್ಪಿಸಿಕೊಳ್ಳಬೇಕೆಂದು ತಿಮ್ಮನ ಸಹಾಯ ಪಡೆದ.
ಅದಾಗಿ ಒಂದು ವಾರದ ನಂತರ ತಿಮ್ಮ ಗುಂಡನನ್ನು ಹಿಡಿದು ಯದ್ವಾತದ್ವಾ ಹೊಡೆಯುತ್ತಿದ್ದ. ಯಾಕೆ ಅಂತೀರಾ? ಹತ್ತಿರದ ಸ್ಮಶಾನಕ್ಕೆ ಹೋದ ಗುಂಡ ಅಲ್ಲಿದ್ದ ಪ್ರತಿ ಗೋರಿಯ ಮೇಲೂ ಬೋರ್ಡ್ ತಗುಲಿಸಿದ್ದ, `ಎಲ್ಲರಿಗೂ ಇಲ್ಲಿಗೆ ಹೃದಯಪೂರ್ವಕ ಸುಸ್ವಾಗತ!’
ಮನೆಯವರಿಗೆಲ್ಲ ಬುದ್ಧಿ ಕಲಿಸೋಣ ಎಂದು ಸೂಕ್ಮಗ್ರಾಹಿಯಾದ, ಸುಳ್ಳು ಹೇಳಿದೊಡನೆ ಕಪಾಳಕ್ಕೆ ಬೀಸಿ ಹೊಡೆಯುವ ರೋಬೋಟ್ ತಂದಿಟ್ಟ ಅಪ್ಪ. ಮಗರಾಯ ಅಂದೇ ಲೇಟಾಗಿ ಬರಬೇಕೇ?
ಅಪ್ಪ : ಯಾಕೋ ಲೇಟು?
ಮಗ : ಫ್ರೆಂಡ್ಸ್ ಜೊತೆ ಕಂಬೈಂಡ್ ಸ್ಟಡೀಸ್ ಮಾಡ್ತಿದ್ದೆ.
ರೊಬೋಟ್ ತಕ್ಷಣ ಮಗನ ಕೆನ್ನೆಗೆ ಬಾರಿಸಿತು.
ಮಗ : ಸಿನಿಮಾ ನೋಡೋಕ್ಕೆ ಹೋಗಿದ್ದೆ.
ಅಪ್ಪ : ಅದೇ… ಯಾವುದು ಅಂತ?
ಮಗ : ಸತ್ಯ ಹರಿಶ್ಚಂದ್ರ!
ರೋಬೋಟ್ ಮತ್ತೆ ಮಗನ ಕೆನ್ನೆಗೆ ಬಾರಿಸಿತು.
ಮಗ : ಅಲ್ಲ ಅಲ್ಲ…. ಯೌವನದ ಹೊಳೆಯಲ್ಲಿ!
ಅಪ್ಪ : ಛೇ…ಛೇ! ನಾನೇ ಅಂಥ ಸಿನಿಮಾ ನೋಡಿಲ್ಲ, ಗೊತ್ತಾ?
ರೊಬೋಟ್ ತಕ್ಷಣ ಅಪ್ಪನ ಕೆನ್ನೆಗೇ ಬಾರಿಸಿತು.
ಅಮ್ಮ : ಮಗ ಸುಳ್ಳು ಹೇಳ್ದೆ ಏನು ಮಾಡ್ತಾನೆ? ಎಷ್ಟೇ ಆಗಲಿ ನಿಮ್ಮ ಮಗ ತಾನೇ?
ರೋಬೋಟ್ ಈಗ ಅಮ್ಮನ ಕೆನ್ನೆಗೂ ಬಾರಿಸಿತು.
ಗಿರೀಶ್ : ಕಷ್ಟಕಾಲ ಬಂತು ಅಂತ ಎಂದೂ ಹೆಂಡತಿ ಬಳಿ ಮಾತ್ರ ಸಾಲ ತೆಗೆದುಕೊಂಡು ಬಿಡಬೇಡ!
ಸತೀಶ್ : ಅದು ಯಾಕೆ ಹಾಗೆ ಹೇಳ್ತಿದ್ದೀಯಾ?
ಗಿರೀಶ್ : 4 ತಿಂಗಳ ಹಿಂದೆ ನನ್ನ ಹೆಂಡತಿ ಬಳಿ 2 ಸಾವಿರ ಸಾಲ ತೆಗೆದುಕೊಂಡಿದ್ದು 3 ಸಲ ವಾಪಸ್ಸು ಕೊಟ್ಟೀದ್ದೀನಿ…. ಆದ್ರೂ ಇನ್ನೂ 1500/ ಬಾಕಿ ಇದೆ ಅಂತ ಜೀವ ತಿಂತಿದ್ದಾಳೆ!
ಬ್ಯಾಂಕಿನಿಂದ ಇಂಟರ್ ವ್ಯೂ ಬಂದಿತ್ತು. ನಾಣಿ ಎ್ಲಾ ರೀತಿಯ ತಯಾರಿ ಮಾಡಿಕೊಂಡೇ ಹೋಗಿದ್ದ. ಅಲ್ಲಿನ ಮ್ಯಾನೇಜರ್ಗೆ ಬಂದವರನ್ನು ಒಂದಿಷ್ಟು ಜನರಲ್ ನಾಲೆಜ್ ಬಗ್ಗೆ ಪ್ರಶ್ನೆ ಕೇಳುವ ಚಪಲ.
ಮ್ಯಾನೇಜರ್ : ಸೈಕ್ಲೋನ್ ಅಂದರೇನು? ಬ್ಯಾಂಕ್ ಅಲ್ಲವೇ….? ಅದಕ್ಕೆ ತಕ್ಕಂತೆ ಕೇಳಿರುತ್ತಾರೆ ಎಂದು ನಾಣಿ ತರ್ಕಿಸಿದ.
ನಾಣಿ : ಸೈಕಲ್ ಖರೀದಿಸುವುದಕ್ಕೆ ಕೊಡುವ ಸಾಲವೇ ಸೈಕ್ಲೋನ್!
ಅಂದಿನಿಂದ ಆ ಮ್ಯಾನೇಜರ್ ಯಾರನ್ನೂ ಜನರಲ್ ನಾಲೆಜ್ಗೆ ಸಂಬಂಧಿಸಿದ ಪ್ರಶ್ನೆ ಕೇಳುವುದಿಲ್ಲವಂತೆ!
ಟೀಚರ್ : ಗುಂಡ, `ಗಂಡಬೇರುಂಡ’ ಅಂದ್ರೆ ಏನು ಅಂತ ಸ್ವಲ್ಪ ವಿವರಿಸು ನೋಡೋಣ.
ಗುಂಡ : ಅದು ತುಂಬಾ ಸುಲಭ ಮೇಡಂ, ಹೆಂಡತಿಯಿಂದ ದೂರ ಕುಳಿತು ಗಂಡ ಒಬ್ಬನೇ ಹೊಟ್ಟೆ ತುಂಬಾ ಊಟ ಮಾಡಿದ ತೃಪ್ತಿಯಾಗಿ ಅಂತ!
ಟೀಚರ್ : ಅಯ್ಯೋ…. `ಗಂಡ ಬೇರೆ ಉಂಡ’ ಅಂದ್ಯಾ?
ಟೀಚರ್ : ನೀನು ಚೆನ್ನಾಗಿ ಓದಿ ಮುಂದೆ ನಮ್ಮ ದೇಶಕ್ಕೆ ಒಳ್ಳೆ ಹೆಸರು ತರಬೇಕು.
ನಾಣಿ : ಯಾಕೆ ಟೀಚರ್, ಈಗಿರುವ `ಭಾರತ’ ಅನ್ನೋ ಹೆಸರು ಚೆನ್ನಾಗಿಲ್ವಾ?
ಟೀಚರ್ : ಲೋ ಗುಂಡ, ಇವತ್ತು ಹಾಫ್ ಪ್ಯಾಂಟ್ ಹಾಕ್ಕೊಂಡು ಶಾಲೆಗೆ ಬಂದಿದ್ದೀಯಾ?
ಗುಂಡ : ಮೇಡಂ, ಇವತ್ತು ಶನಿವಾರ ಶಾಲೆ ಅರ್ಧ ದಿನ ಮಾತ್ರ ವರ್ಕಿಂಗ್ ಅಲ್ವಾ…. ಅದಕ್ಕೆ ಹಾಫ್ ಪ್ಯಾಂಟ್ ಹಾಕ್ಕೊಂಡೆ.
ಟೀಚರ್ : ದಯವಿಟ್ಟು ಭಾನುವಾರ ಮಾತ್ರ ಶಾಲೆಗೆ ಬರಬೇಡಪ್ಪ!
ಮಹೇಶ : ಪಾಪ, ಟೀನಾಗೆ ಕೊರೋನಾ ಆಯ್ತು ಅಂತ ಅವಳ ಬಾಯ್ ಫ್ರೆಂಡ್ ಜಾನಿಯನ್ನೂ ಕ್ವಾರಂಟೈನ್ಗೆ ಹಾಕಿದ್ದಾರಂತೆ. ಸುರೇಶ್ : ಅಷ್ಟೇ ಅಲ್ಲ, ಅವಳ ಮಾಜಿ ಬಾಯ್ ಫ್ರೆಂಡ್ಸ್ ಮೂವರು ಮತ್ತು ಆ ಕುಟುಂಬದ 30 ಜನರನ್ನೂ ಸಹ!
ಟೀಚರ್ : ಏನಪ್ಪ ಹೊಸ ಹುಡುಗ…. ನಿನ್ನ ಹೆಸರೇನು?
ಹುಡುಗ :ಚರಂಡಿ
ಟೀಚರ್: ಹೊಸ ಹುಡುಗ ಅಂತ ಕೇಳಿದರೆ ತರಲೆ ಮಾಡ್ತಿಯೇನೋ…..ಕತ್ತೆ!
ಗುಂಡ : ಅವನಿಗೆ ಸ್ವಲ್ಪ ನಾಲಿಗೆ ಹೊರಳಲ್ಲ ಟೀಚರ್, ಪಾಪ ಸರಿಯಾಗೇ ಹೇಳಿದ್ದಾನೆ. ಅಂದ್ರೆ…… ಚರಣ್ ಡಿ.