ಯುದ್ಧಪೀಡಿತ ರಷ್ಯಾದ ಸೈಬಿರಿಯಾ ಪ್ರಾಂತ್ಯದಲ್ಲಿನ ಲ್ಯಾಬ್‌ವೊಂದರಲ್ಲಿ 28 ವರ್ಷದ ಮಹಿಳಾ ಲ್ಯಾಬ್‌ ಟೆಕ್ನಿಶಿಯನ್‌ ನಿಗೂಢ ಪ್ಲೇಗ್‌ವೊಂದು ತಗುಲಿ ಮೃತಪಟ್ಟಿದ್ದಾರೆ. ಈ ಘಟನೆ ಬಳಿಕ 5 ಆಸ್ಪತ್ರೆಗಳನ್ನು ಬಂದ್‌ ಮಾಡಲಾಗಿದ್ದು, ನೂರಾರು ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ರಷ್ಯಾದ ಸೈಬೀರಿಯನ್ ಪ್ರದೇಶವಾದ ಇರ್ಕುಟ್ಸ್ಕ್‌ನಲ್ಲಿ ಈ ಘಟನೆ ನಡೆದಿದ್ದು,  ಇರ್ಕುಟ್ಸ್ಕ್‌ನ ಶೆಲೆಖೋವ್‌ನಲ್ಲಿರುವ ಪ್ಲೇಗ್ ವಿರೋಧಿ ಸಂಶೋಧನಾ ಸಂಸ್ಥೆಯೊಂದರಲ್ಲಿ 28 ವರ್ಷದ ದರಿಯಾ ಶಿಪಿಲೋವಾ ಅವರಯ ಲ್ಯಾಬ್‌ ಟೆಕ್ನಿಶಿಯನ್‌ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸುವಾಗ ಜೀವಂತ ಬ್ಯಾಕ್ಟೀರಿಯಾ ಹೊಂದಿರುವ ಪರೀಕ್ಷಾ ಟ್ಯೂಬ್‌ನೊಂದಿಗೆ ಕೆಲಸ ಮಾಡುತ್ತಿದ್ದಾಗ ಆಕಸ್ಮಾತ್ತಾಗಿ ಅದು ಒಡೆದುಬಿದ್ದಿದೆ. ಇದರಿಂದ ಆಕೆ ಅಸ್ವಸ್ಥಗೊಂಡಿದ್ದು ಶಿಪಿಲೋವಾ ಅವರಲ್ಲಿ ತೀವ್ರವಾದ ನ್ಯುಮೋನಿಯಾದ ಲಕ್ಷಣಗಳು ಕಾಣಿಸಿಕೊಂಡಿದ್ದು, ಸೆ.29ರಂದು ಶೆಲೆಖೋವ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‌ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು.  ಆದರೆ, ಚಿಕಿತ್ಸೆ ಫಲಿಸದೇ ಆಕೆ ಅ.1ರಂದು ಮೃತಪಟ್ಟಿದ್ದಾರೆ ಎಂದು ರಷ್ಯಾದ ಸರ್ಕಾರಿ ಮಾಧ್ಯಮ TASS ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಕುರಿತು ಮಾಹಿತಿ ನೀಡಿದ ಇರ್ಕುಟ್ಸ್ಕ್ ಪ್ರದೇಶದ ಗವರ್ನರ್ ಇಗೊರ್ ಕೊಬ್ಜೆವ್ ಆರಂಭದಲ್ಲಿ ʼನಗರದಲ್ಲಿ ಅತ್ಯಂತ ಅಪಾಯಕಾರಿ ಸೋಂಕಿನ ಶಂಕಿತ ಪ್ರಕರಣ ಬೆಳಕಿಗೆ ಬಂದಿದೆʼ ಎಂದು ತಿಳಿಸಿದ್ದರು.

ಇದಾದ ಬಳಿಕ ಈ ಕುರಿತು ಅಕ್ಟೋಬರ್​ 4ರಂದು ಮಾಹಿತಿ ನೀಡಿದ ಗವರ್ನರ್ ಇಗೊರ್ ಕೊಬ್ಜೆವ್ “ಇದೊಂದು ಅಪರಿಚಿತ ಕಾರಣದ ನ್ಯುಮೋನಿಯಾ ಪ್ರಕರಣವಾಗಿದ್ದು, ರೋಗಿಯ ಟೆಸ್ಟಿಂಗ್ ಮಾದರಿಗಳಲ್ಲಿ ವೃತ್ತಿಪರ ಚಟುವಟಿಕೆಗಳ ಸಂದರ್ಭಕ್ಕೆ ಸಂಬಂಧಿಸಿದ ಬ್ಯಾಕ್ಟೀರಿಯಾ ಪತ್ತೆಯಾಗಿಲ್ಲ. ರೋಗಿಯ ಎಲ್ಲಾ ಸಂಪರ್ಕಗಳನ್ನು ಗುರುತಿಸಿ, ಪರೀಕ್ಷಿಸಲಾಗಿದೆ ಮತ್ತು ದೈನಂದಿನ ಪ್ರಯೋಗಾಲಯ ಪರೀಕ್ಷೆಯೊಂದಿಗೆ ಎಲ್ಲರನ್ನೂ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಈ ಸಂಬಂಧ ಈ ಪ್ರದೇಶದಾದ್ಯಂತ ಸಾಂಕ್ರಾಮಿಕ ವಿರೋಧಿ ಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುತ್ತಿದೆ” ಎಂದು ತಿಳಿಸಿದ್ದಾರೆ.

ಸದ್ಯ ಈಕೆಯ ಸಾವಿನಿಂದಾಗಿ ಇರ್ಕುಟ್ಸ್ಕ್‌ ಪ್ರದೇಶದಲ್ಲಿ ಆತಂಕದ ವಾತಾವರಣ  ನಿರ್ಮಾಣವಾಗಿದ್ದು, ಈ ಸೋಂಕು ಯಾವುದು ಎಂಬ ನಿಖರತೆ ಇಲ್ಲದ ಕಾರಣ ಆಕೆಯ ಸಂಪರ್ಕದಲ್ಲಿದ್ದ 200ಕ್ಕೂ ಅಧಿಕ ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಶೆಲೆಖೋವ್ ಸುತ್ತಮುತ್ತಲಿನ ಪ್ರದೇಶದಾದ್ಯಂತ ಎಲ್ಲಾ ರೀತಿಯ ಸಾರ್ವಜನಿಕ ಸಭೆಗಳನ್ನು ರದ್ದುಗೊಳಿಸಿದ್ದು, ಜನ ಗುಂಪಾಗಿ ಒಟ್ಟು ಸೇರುವುದನ್ನು ನಿರ್ಬಂಧಿಸಲಾಗಿದೆ.  ಘಟನೆ ನಡೆದ ಲ್ಯಾಬ್‌ನಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿರುವ ಇರ್ಕುಟ್ಸ್ಕ್ ಅಲ್ಯೂಮಿನಿಯಂ ಸ್ಥಾವರದಲ್ಲಿನ ಕಾರ್ಮಿಕರಿಗೆ ಕಡ್ಡಾಯ ಮಾಸ್ಕ್‌ ಧರಿಸುವಂತೆ ಸೂಚನೆ ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ(WHO) ಪ್ರಕಾರ, ಶ್ವಾಸಕೋಶ ಆಧಾರಿತ ಪ್ಲೇಗ್ ಎಂದು ಕರೆಯಲ್ಪಡುವ ಈ ನ್ಯುಮೋನಿಕ್ ಪ್ಲೇಗ್ ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಂನಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳ ಪೈಕಿ ನ್ಯೂಮೋನಿಕ್ ಅತ್ಯಂತ ಅಪಾಯಕಾರಿ ರೂಪವಾಗಿದ್ದು, ಉಸಿರಾಟದ ಕಣಗಳ ಮೂಲಕ ಹರಡುತ್ತದೆ. ‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ