ಮಹಿಳೆಯರ ಆರೋಗ್ಯ ಕಾಳಜಿಗೆ ಒತ್ತು ನೀಡುವ ಉದ್ದೇಶದಿಂದ ಸರ್ಕಾರ ‘ಋತುತಾರೆ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಋತುಬಂಧದ ಸಮಯದಲ್ಲಿ ಕಾಣಿಸಿಕೊಳ್ಳುವ ದೈಹಿಕ ಸಮಸ್ಯೆಗಳು ಹಾಗೂ ಮಾನಸಿಕ ಒತ್ತಡಗಳ ನಿರ್ವಹಣೆಗೆ ಆರೋಗ್ಯ ಇಲಾಖೆ “ಋತುತಾರೆ” ಯೋಜನೆ ರೂಪಿಸಿದೆ.
ವಿಧಾನಸೌಧದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ನಟಿ ರಮ್ಯಾ ಪತ್ರಿಕಾಗೋಷ್ಠಿ ನಡೆಸಿ ಯೋಜನೆ ಕುರಿತು ಮಾಹಿತಿ ನೀಡಿದರು.
ರಾಜ್ಯದಲ್ಲಿ ಮಹಿಳಾ ಆರೋಗ್ಯ ನೀತಿ ಜಾರಿಗೆ ತರಲಾಗುತ್ತಿದೆ. ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಪ್ರತ್ಯೇಕ ನೀತಿಯಿಲ್ಲ. ಈ ನೀತಿಯನ್ನು ಜಾರಿಗೆ ತರುವ ಪ್ರಥಮ ರಾಜ್ಯ ಕರ್ನಾಟಕವಾಗಲಿದೆ. ಋತುಬಂಧದ ವೇಳೆ ಬಹಳಷ್ಟು ಮಹಿಳೆಯರು ಮಾನಾಸಿಕ ಸಮಸ್ಯೆ ಅನುಭವಿಸುತ್ತಾರೆ. ಮನೆ ಒಳಗೆ ಹಾಗೂ ಹೊರಗೆ ಕೆಲಸ ಮಾಡುವವರು ವಿವಿಧ ಸವಾಲು ಎದುರಿಸುತ್ತಾರೆ. ಆದ್ದರಿಂದ ಅವರಿಗೆ ಅಗತ್ಯ ಬೆಂಬಲ ನೀಡಲು, ಜನಜಾಗೃತಿ ಮೂಡಿಸಲು “ಋತುತಾರೆ” ಯೋಜನೆ ಜಾರಿಗೆ ತರಲಾಗುತ್ತಿದೆ ಎಂದರು.
ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಆರು ತಿಂಗಳ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ. ಋತುಬಂಧದ ಪೂರ್ವ ಹಾಗೂ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಲಿದ್ದಾರೆ. ಜೀವನಶೈಲಿಯಲ್ಲಿ ಬದಲಾವಣೆ, ಊಟೋಪಚಾರ, ನಿದ್ದೆಯ ಅವಧಿ, ಮಾನಸಿಕ ಸಮಸ್ಯೆ ನಿರ್ವಹಣೆ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಯೋಜನೆಯಡಿ ಅರಿವು ಮೂಡಿಲಾಗುತ್ತದೆ ಎಂದು ಹೇಳಿದರು.
ಮಹಿಳೆಯರ ಆರೋಗ್ಯ ಸಂಬಂಧಿತ ಸಮಸ್ಯೆಗಳ ಅಧ್ಯಯನ ಮತ್ತು ಪರಿಹಾರ ಕ್ರಮಗಳಿಗಾಗಿ ಮಹಿಳಾ ತಜ್ಞೆ ಡಾ. ಜೋಸ್ನಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಚಿವ ಯು.ಟಿ ಖಾದರ್ ತಿಳಿಸಿದರು.
ನಟಿ ರಮ್ಯಾ ಮಾತನಾಡಿ, ಮೆನೋಪಾಸ್ ಸಮಸ್ಯೆ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೆನೋಪಾಸ್ ಬೇಗ ಕಾಣಿಸಿಕೊಳ್ಳುತ್ತದೆ. ಸಿಟಿಯಲ್ಲಿ ಅತಿ ಹೆಚ್ಚಿನ ಮಹಿಳೆಯರು ಮೆನೋಪಾಸ್ ಸಮಯದಲ್ಲಿ ಸಮಸ್ಯೆಯಿಂದ ಬಳಲುತ್ತಾರೆ. ಇದನ್ನು ಸಮರ್ಥವಾಗಿ ನಿಭಾಯಿಸಬೇಕು. ನಮ್ಮ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಯೋಜನೆ ಜಾರಿಗೆ ತಂದಿದ್ದು, ನನ್ನನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿರುವುದು ಖುಷಿ ಇದೆ ಎಂದರು.





