ಸಂತಸ ಪಡೆಯುವುದು ಮತ್ತು ನಿಮ್ಮ ಜೀವನದಲ್ಲಿ ಅವನ್ನು ಸದೃಢವಾಗಿ ಇಟ್ಟುಕೊಳ್ಳುವುದು ನಿಮ್ಮ ಕೈಗಳಲ್ಲಿದೆ. ಸಂತಸವನ್ನು ಹಂಚಿಕೊಂಡರೆ ಹೆಚ್ಚಾಗುತ್ತದೆ ಮತ್ತು ದುಃಖವನ್ನು ಹಂಚಿಕೊಂಡರೆ ಕಡಿಮೆಯಾಗುತ್ತದೆ ಎಂದು ಚಿಕ್ಕಂದಿನಿಂದ ಕೇಳಿಕೊಂಡು ಬಂದಿದ್ದೇವೆ. ಚಿಕ್ಕವರಾಗಿದ್ದಾಗ ಈ ಮಾತು ಅರ್ಥವಾಗುತ್ತಿರಲಿಲ್ಲ. ಆದರೆ ಬೆಳೆದ ನಂತರ ಬಹಳ ಬೇಗ ಅರ್ಥವಾಯಿತು. ಮನಸ್ಸಿನಲ್ಲಿ ಎಷ್ಟೇ ಭಾರಿ ಹೊರೆಯಿದ್ದರೂ ನಮ್ಮವರೊಂದಿಗೆ ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ. ಬದುಕಿನಲ್ಲಿ ಸಂತಸಕ್ಕೆ ಆಹ್ವಾನ ಕೊಡಲು ಈ ವಿಷಯಗಳನ್ನು ಗಮನಿಸಿ :

ಪಾಸಿಟಿವ್‌ ಥಿಂಕಿಂಗ್‌ ಇಟ್ಟುಕೊಳ್ಳಿ

ಸಕಾರಾತ್ಮಕ ಆಲೋಚನೆ ಕಾಯಿಲೆಗಳನ್ನು ದೂರ ಮಾಡುವುದಲ್ಲದೆ, ಅದರಿಂದ ಕಾರ್ಯಕ್ಷಮತೆಯಲ್ಲಿ ಹೆಚ್ಚಳ ಉಂಟಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಕೆರಿಯರ್‌ ಬಗ್ಗೆ ಹೆಚ್ಚು ದುಃಖಿಯಾಗಿರುತ್ತಾನೆ. ತನ್ನ ಕೆಟ್ಟ ಪರ್ಫಾರ್ಮೆನ್ಸ್ ನಿಂದಾಗಿ ಉದ್ಯೋಗ ಕಳೆದುಹೋದರೆ ಅಥವಾ ಪ್ರಮೋಷನ್‌ ಸಿಗುತ್ತದೆಯೋ ಇಲ್ಲವೋ ಎಂದು ಸದಾ ಭಯವಿರುತ್ತದೆ. ಇಂತಹ ಯೋಚನೆ ಅವನ ಕಾರ್ಯಕ್ಷಮತೆಯನ್ನು ಕಡಿಮೆಗೊಳಿಸುತ್ತದೆ. ನಿಮ್ಮ ಕಾರ್ಯದಲ್ಲಿ ಯಶಸ್ಸು ಸಿಗಬೇಕು ಹಾಗೂ ಉದ್ಯೋಗದಲ್ಲಿ ಪ್ರಮೋಷನ್‌ ಸಿಗಬೇಕು ಎಂದು ಇಚ್ಛಿಸಿದರೆ ನೀವು ಸದಾ ಖುಷಿಯಿಂದಿರಬೇಕು ಮತ್ತು ನಿಮ್ಮ ಆಲೋಚನೆಯನ್ನು ಸಕಾರಾತ್ಮಕವಾಗಿ ಇಟ್ಟುಕೊಂಡು ನಿಮ್ಮ ಕೆಲಸದಲ್ಲಿ ಫೋಕಸ್‌ ಮಾಡಿ. ಖಂಡಿತಾ ನಿಮಗೆ ಸಫಲತೆ ಸಿಗುತ್ತದೆ. ಬದುಕಿನಲ್ಲಿ ಏನನ್ನಾದರೂ ಪಡೆಯಲು ಯಾವುದಾದರೂ ಪೂರ್ವಾಗ್ರಹ ಇಟ್ಟುಕೊಳ್ಳುವ ಬದಲು ಸಕಾರಾತ್ಮಕ ಆಲೋಚನೆ ಇಟ್ಟುಕೊಳ್ಳಬೇಕು. ಒಳ್ಳೆಯ ಆಲೋಚನೆ ಇಟ್ಟುಕೊಂಡು ಕೆಟ್ಟದರಲ್ಲೂ ಒಳ್ಳೆಯದನ್ನು ಹುಡುಕುವ ಪ್ರಯತ್ನ ಮಾಡಿ ನೋಡಿ. ಖಂಡಿತವಾಗಿಯೂ ನಿಮ್ಮ ಬದುಕಿನಲ್ಲಿ ಸಂತಸದ ಸುರಿಮಳೆಯಾಗುತ್ತದೆ ಹಾಗೂ ಯಶಸ್ಸು ನಿಮ್ಮ ಕಾಲಡಿಯಲ್ಲಿರುತ್ತದೆ.

so

ನಕಾರಾತ್ಮಾಕ ಆಲೋಚನೆ ಹೊರಹಾಕಿ

ನಿಮ್ಮ ಸುತ್ತಮುತ್ತ ಕಣ್ಣು ಹಾಯಿಸಿದರೆ ಅಂತಹ ಬಹಳಷ್ಟು ಜನ ನಕಾರಾತ್ಮಕ ಆಲೋಚನೆಗಳ ಜಾಲವನ್ನು ಮಾಡಿಕೊಂಡಿರುವವರು ಸಿಗುತ್ತಾರೆ. ಎಲ್ಲ ರೀತಿಯ ಸುಖಸೌಲಭ್ಯಗಳಿದ್ದರೂ ಅವರ ಮುಖದ ಮೇಲೆ ನಿರಾಸೆ ಕಂಡುಬರುತ್ತದೆ. ಅದಕ್ಕೆ ಕಾರಣ ಅವರ ಆಲೋಚನೆಗಳಲ್ಲಿ ನಕಾರಾತ್ಮಕ ಭಾವನೆಗಳ ಪ್ರಾಧಾನ್ಯತೆ. ಈ ಕಾರಣದಿಂದಾಗಿ ಅವರು ಒಳ್ಳೆಯ ವಿಷಯಗಳ ಬಗ್ಗೆಯೂ ಖುಷಿಪಡುವುದಿಲ್ಲ. ನೀವು ಜೀವನದಲ್ಲಿ ಖುಷಿಯಾಗಿರಲು ಇಚ್ಛಿಸಿದರೆ ನಿಮ್ಮ ಸುತ್ತಮುತ್ತ ಇರುವ ಅಂತಹ ಜನರಿಂದ ಸಾಕಷ್ಟು ದೂರವಿರಿ. ನಂತರ ನಿಮ್ಮೊಳಗಿನ ನೆಗೆಟಿವ್‌ ಥಾಟ್ಸ್ ತೆಗೆದು ಹೊರಹಾಕಿ. ಮ್ಯಾಡ್ರಿಡ್‌ ಯೂನಿವರ್ಸಿಟಿಯ ಒಂದು ಸಂಶೋಧನೆಯಲ್ಲಿ ಹೇಳಿರುವ ಪ್ರಕಾರ, ನಿಮ್ಮ ಮನಸ್ಸಿನ ನಕಾರಾತ್ಮಕ ವಿಚಾರಗಳಿಂದ ಮುಕ್ತಿ ಪಡೆಯಲು ಅತ್ಯಂತ ಒಳ್ಳೆಯ ವಿಧಾನವೆಂದರೆ ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಒಂದು ಖಾಲಿ ಹಾಳೆಯಲ್ಲಿ ಬರೆದು ಅದನ್ನು ಹರಿದುಹಾಕುವುದು. ಅದರಿಂದ  ನಿಮ್ಮ ನಕಾರಾತ್ಮಕ ಭಾವನೆ ತಾನಾಗಿ ದೂರವಾಗುತ್ತದೆ.

ಚೆನ್ನಾಗಿ ಎಕ್ಸರ್‌ಸೈಜ್‌ ಮಾಡಿ

ಬದುಕಿನಲ್ಲಿ ಖುಷಿಯಾಗಿರಲು ಆರೋಗ್ಯವಾಗಿರುವುದು ಬಹಳ ಅಗತ್ಯ. ಇದರ ಬಗ್ಗೆ ಟೊರಂಟೊ ಯೂನಿವರ್ಸಿಟಿ 25ಕ್ಕೂ ಹೆಚ್ಚು ರಿಸರ್ಚ್‌ ಮಾಡಿದೆ. ಅದರಿಂದ ತಿಳಿದು ಬಂದಿರುವುದೇನೆಂದರೆ ಎಕ್ಸರ್‌ಸೈಜ್‌ ಮಾಡುವುದರಿಂದ ಮೂಡ್‌ ಚೆನ್ನಾಗಿರುತ್ತದೆ. ಅದರಿಂದ ನಿಮ್ಮ ಒತ್ತಡ ದೂರವಾಗುವುದಲ್ಲದೆ, ನಿಯಮಿತ ವ್ಯಾಯಾಮದಿಂದ ನೀವು ಡಿಪ್ರೆಶನ್‌ನಿಂದಲೂ ದೂರವಿರುತ್ತೀರಿ. ನಿಮ್ಮ ಹತ್ತಿರದ ಪಾರ್ಕ್‌ನಲ್ಲಿ 3-4 ಸುತ್ತು ವಾಕ್‌ ಮಾಡಿದರೆ ಒಳಗಿನಿಂದ ಸಂತಸದ ಅನುಭವ ವ್ಯಕ್ತವಾಗುತ್ತದೆ. ನೀವು ಮನೆಯಿಂದ ಹೊರಹೋದಾಗ ನೀವು ಬಹಳಷ್ಟು ಹೊಸಬರನ್ನು ಭೇಟಿಯಾಗುತ್ತೀರಿ. ಪಾರ್ಕ್‌ಗೆ ಹೋದರೆ ಅಲ್ಲಿ ಅಡುತ್ತಿರುವ ಮಕ್ಕಳನ್ನು ಕಂಡು ನಿಮ್ಮೆಲ್ಲಾ ಒತ್ತಡ ಮರೆಯುತ್ತೀರಿ. ನಿಮ್ಮ ಬಾಲ್ಯ ನೆನಪಾಗುತ್ತದೆ. ಅದರಿಂದ ಖುಷಿ ಉಂಟಾಗುತ್ತದೆ.

soc

ಗಾಢ ನಿದ್ದೆ

ಆಗಾಗ್ಗೆ ನಡೆಸಿದ ವಿಭಿನ್ನ ಸಮೀಕ್ಷೆಗಳಲ್ಲಿ ತಿಳಿದು ಬಂದಿದ್ದು ಗಾಢ ನಿದ್ದೆ ಆರೋಗ್ಯವಾಗಿರಲು ಮಾತ್ರ ಅಲ್ಲ, ನಿಮ್ಮೊಳಗಿನ ನಕಾರಾತ್ಮಕತೆಯೂ ಕೊನೆಯಾಗುತ್ತದೆ. ನೀವು ಮಲಗಿ ಎದ್ದಾಗ ಸಂಪೂರ್ಣವಾಗಿ ತಾಜಾ ಆಗುತ್ತೀರಿ. ಆಗ ನಿಮ್ಮೊಳಗೆ ನಿಮ್ಮ ಕೆಲಸವನ್ನು ಉತ್ತಮವಾಗಿ ಮಾಡಲು ಇಚ್ಛೆಯಾಗುತ್ತದೆ ಹಾಗೂ ಅದಕ್ಕೆ ಬೇಕಾದ ಎನರ್ಜಿ ಕೊಡುತ್ತದೆ. ನೀವು ಯಾವುದೇ ಕೆಲಸಕ್ಕೆ ಉತ್ತಮ ಫಲಿತಾಂಶ ಕೊಡಬಹುದು. ನಿಮ್ಮೊಳಗೆ ಅದ್ಭುತ ಖುಷಿಯ ಸಂಚಾರವಾಗುತ್ತದೆ. ಗಾಢ ನಿದ್ದೆಯಿಂದ ನಿಮ್ಮ ಒಳಗಿನ ಎಲ್ಲ ನೆಗೆಟಿವಿಟಿ ಕೊನೆಯಾಗುತ್ತದೆ.

ಒಳ್ಳೆಯ ನೆನಪುಗಳನ್ನು ಮೆಲುಕುಹಾಕಿ

ಯಾವಾಗಲೂ ಖುಷಿಯಾಗಿರಲು ನಿಮ್ಮ ಒಳ್ಳೆಯ ನೆನಪುಗಳನ್ನು ಮೆಲುಕು ಹಾಕುತ್ತಿರಿ. ನಿಮಗೆ ಏನಾದರೂ ಕೆಟ್ಟದ್ದು ಸಂಭವಿಸಿದ್ದರೆ ಅದನ್ನು ಮರೆತು ಒಳ್ಳೆಯ ವಿಷಯಗಳನ್ನು ನೆನೆಪಿಸಿಕೊಳ್ಳಿ. ಅದರ ಬಗ್ಗೆ ಕಾರ್‌ನೆ ಯೂನಿವರ್ಸಿಟಿಯ ಮನೋವಿಜ್ಞಾನಿ ಥಾಮಸ್‌ ಗಿಲೋವಿಚ್‌ ಸಂಶೋಧನೆ ಮಾಡಿ ತಿಳಿದುಬಂದದ್ದೇನೆಂದರೆ ನಿಮ್ಮ ಒಳ್ಳೆಯ ಕ್ಷಣಗಳನ್ನು ನೆನೆಸಿಕೊಳ್ಳುವುದು, ನಿಮ್ಮ ಹೃದಯಕ್ಕೆ ಹತ್ತಿರವಾದವರೊಂದಿಗೆ ಸಮಯ ಕಳೆಯುವುದು, ಅವರೊಂದಿಗೆ ನಿಮ್ಮ ಮನಸ್ಸಿನ ಭಾವನೆಗಳು ಹಾಗೂ ವಿಚಾರಗಳನ್ನು ಹಂಚಿಕೊಳ್ಳುವುದು ಮಾಡಿದಾಗ ಸಿಗುವ ಸಂತೋಷ ದುಬಾರಿ ವಸ್ತುಗಳನ್ನು ಶಾಪಿಂಗ್‌ ಮಾಡಿದಾಗಲೂ ಸಿಗುವುದಿಲ್ಲ. ಸತ್ಯ ಏನೆಂದರೆ ಒಳ್ಳೆಯ ನೆನಪುಗಳಿಂದ ಸಿಗುವ ಖುಷಿ ಎಂದಿಗೂ ಕೊನೆಯಾಗುವುದಿಲ್ಲ. ನಿಮ್ಮನ್ನು ತಾಜಾ ಆಗಿಟ್ಟುಕೊಳ್ಳಲು ನಿಮ್ಮ ಹಳೆಯ ಗೆಳೆಯರೊಂದಿಗೆ ಸೇರಿ ಅವರೊಂದಿಗೆ ಕಳೆದ ದಿನಗಳ ನೆನಪುಗಳನ್ನು ತಾಜಾ ಮಾಡಿಕೊಂಡು ನೋಡಿ. ನಿಮಗೆ ಅಮಿತ ಆನಂದ ಸಿಗುತ್ತದೆ.

ಕೊಂಚ ಸಹಾಯ ಬಹಳಷ್ಟು ಖುಷಿ

ಎಂದಾದರೂ ಯಾರಿಗಾದರೂ ಸಹಾಯ ಮಾಡಿ ನೋಡಿ. ನಿಮಗೆ ಎಂತಹ ಅದ್ಭುತ ಖುಷಿ ಸಿಗುತ್ತದೆಂದರೆ ನಿಮ್ಮ ಮನಸ್ಸು ಸದಾ ಯಾರಿಗಾದರೂ ಸಹಾಯ ಮಾಡಲು ಸಿದ್ಧವಾಗಿರುವುದು. ಒಬ್ಬರ ಮುಖದಲ್ಲಿ ಕೊಂಚ ಮುಗುಳ್ನಗೆ ತರುವಲ್ಲಿ ಸಿಗುವ ಆನಂದ ಮತ್ತು ನೆಮ್ಮದಿ, ನೀವು ಲೆಕ್ಕವಿಲ್ಲದಷ್ಟು ಸಂಪತ್ತು, ದೊಡ್ಡ ಮನೆ ಖರೀದಿಸಿದರೂ ಸಿಗುವುದಿಲ್ಲ. ಸಮೀಕ್ಷೆಗಳಿಂದ ತಿಳಿದುಬಂದಿದ್ದೇನೆಂದರೆ, ನಿಮ್ಮ ವ್ಯಸ್ತ ದಿನಚರಿಯಿಂದ ಕೊಂಚ ಸಮಯ ತೆಗೆದು, ಯಾರಿಗಾದರೂ ಸಹಾಯ ಮಾಡಿದರೆ ಅಪಾರವಾದ ಖುಷಿ ಸಿಗುತ್ತದೆ.

ನಿಮ್ಮ ಗುರಿಯತ್ತ ಗಮನ ಕೇಂದ್ರೀಕರಿಸಿ

ನಿಮ್ಮ ಜೀವನದಲ್ಲಿ ಸಂತಸದ ಅಲೆಗಳು ಮೂಡುವುದು ಯಾವಾಗೆಂದರೆ ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ವಿಯಾಗಿ ಹಾಗೂ ಸಾಮಾಜಿಕ ರೂಪದಲ್ಲಿ ಸಕ್ರಿಯವಾಗಿರುವಾಗ ನಿಮ್ಮ ಕಾರ್ಯದಲ್ಲಿ ಯಶಸ್ವಿಯಾಗಲು ವ್ಯರ್ಥ ಹರಟೆಗೆ ಬದಲಾಗಿ ನಿಮ್ಮ ಪ್ರಾಥಮಿಕ ಅಗತ್ಯವಿರುವ ಕೆಲಸಗಳಲ್ಲಿ ತೊಡಗಿಕೊಳ್ಳಿ. ನಿಮ್ಮ ಗುರಿಯ ಮೇಲೆ ಗಮನ ಕೇಂದ್ರೀಕರಿಸಿ. ನಿಮ್ಮ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಉನ್ನತ ಯಶಸ್ಸು ಸಿಗುತ್ತದೆ ಮತ್ತು ನಿಮಗಾಗಿ ಖುಷಿಯ ಪ್ರಪಂಚ ಕಟ್ಟಿಕೊಳ್ಳಬಹುದು.

ನಿಮ್ಮನ್ನು ನೀವು ಪ್ರೀತಿಸಿ

ಸಾಮಾನ್ಯವಾಗಿ ನೀವು ನಿಮ್ಮ ಬಗ್ಗೆ, ನಿಮ್ಮ ಖುಷಿಗಳ ಬಗ್ಗೆ ಯೋಚಿಸುವ ಬದಲು ಬೇರೆಯವರ ಬಗ್ಗೆ ಯೋಚಿಸಿ ನಿಮ್ಮ ಬದುಕಿನ ಅರ್ಧಭಾಗ ಹಾಳು ಮಾಡುತ್ತೀರಿ. ಖುಷಿಯಾಗಿರಬೇಕೆಂದರೆ ನೀವು ನಿಮ್ಮ ಬಗ್ಗೆ ಯೋಚಿಸಿ. ನಿಮ್ಮನ್ನು ನೀವು ಪ್ರೀತಿಸಿ. ನೀವು ಬೇರೆಯರ ಬಗ್ಗೆ ಯೋಚಿಸುವ ಜೊತೆ ಜೊತೆಗೆ ನಿಮ್ಮ ಬಗ್ಗೆಯೂ ಯೋಚಿಸಿ. ಜವಾಬ್ದಾರಿಗಳನ್ನು ನಿರ್ವಹಿಸುವುದು ಅಗತ್ಯ ಎಂಬುದೇನೋ ಸರಿ. ಆದರೆ ನಿಮ್ಮನ್ನು ನೀವು ಸಂತುಷ್ಟರನ್ನಾಗಿ ಇಟ್ಟುಕೊಂಡರೆ ಮಾತ್ರ ನಿಮ್ಮ ಜೀವನಲ್ಲಿ ಖುಷಿ ತರಬಹುದು. ನಿಮಗಾಗಿ ಕೊಂಚ ಸಮಯ ಮೀಸಲಿಟ್ಟು ನಿಮಗಿಷ್ಟವಾದ ಕೆಲಸ ಮಾಡಿ, ಆಗಲೇ ನೀವು ಖುಷಿಯಾಗಿರಬಹುದು ಮತ್ತು ಇತರರನ್ನೂ ಪ್ರೀತಿಸಬಹುದು.

ಲೆಟ್ಸ್ ಗೋ ಪ್ರವೃತ್ತಿ ವಿಕಸಿತಗೊಳಿಸಿ

ಸಾಮಾನ್ಯವಾಗಿ ಜನರ ಅಭ್ಯಾಸ ಹೇಗಿರುತ್ತದೆಂದರೆ ಅವರು ತಮ್ಮ ಜೀವನದ ಕೆಟ್ಟ ವಿಷಯಗಳನ್ನು ಸುಲಭವಾಗಿ ಮರೆಯುವುದಿಲ್ಲ. ಯಾರಾದರೂ ನಿಮಗೆ ತೊಂದರೆ ಕೊಟ್ಟಿದ್ದರೆ ಅವರ ಬಗ್ಗೆ ಯಾವಾಗಲೂ ದ್ವೇಷ ಮನೆ ಮಾಡಿರುತ್ತದೆ. ಆದರೆ ಜೀವನದಲ್ಲಿ ಖುಷಿಯಾಗಿರುವ ಮೂಲಮಂತ್ರವೆಂದರೆ ನೀವು ಕಳೆದುಹೋದ ವಿಷಯಗಳನ್ನು ಮರೆತು ಮುಂದುರಿಯುವ ಕಲೆ ಕಲಿಯಿರಿ. ನಿಮ್ಮೊಳಗೆ ಲೆಟ್ಸ್ ಗೋ ಪ್ರವೃತ್ತಿ ಬೆಳೆಸಿಕೊಳ್ಳಿ. ಇತರರನ್ನು ಕ್ಷಮಿಸಿ ಜೀವನದಲ್ಲಿ ಮುಂದೆ ಸಾಗುವ ಪ್ರಯತ್ನ ಮಾಡಿ. ಆಗ ಏನಾಯಿತೋ ಅದನ್ನು ಮರೆತುಬಿಡು ಎನ್ನುವ ಭಾವನೆ ಮೂಡುತ್ತದೆ. ನಂತರ ನೀವು ನಿಮಗೆ ಖುಷಿ ಕೊಡುವ ವಿಷಯಗಳನ್ನಷ್ಟೇ ನೆನಪಿಟ್ಟುಕೊಳ್ತೀರಿ.

– ಜಿ. ವತ್ಸಲಾ ವಿಶ್ವನಾಥ್‌

Tags:
COMMENT