ಉಳಿತಾಯದ ಮಹತ್ವವನ್ನು ಮಕ್ಕಳು ಅಗತ್ಯವಾಗಿ ಕಲಿಯಬೇಕು. ಉಳಿತಾಯದ ಕ್ರಮ ಹೇಗೆ, ಇದರಿಂದ ಏನು ಲಾಭ, ಹಣದ ಮೌಲ್ಯ ಏನು ಎಂಬುದು ಇದರಿಂದ ಅವರಿಗೆ ಕ್ರಮೇಣ ತಿಳಿಯುತ್ತದೆ. ಆಗ ಅವರ ಖರ್ಚು ವೆಚ್ಚದಲ್ಲಿ ತಂತಾನೇ ಬದಲಾವಣೆ ಮೂಡುತ್ತದೆ. ಇಂದಿನಿಂದಲೇ ನಿಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿಸಿಕೊಡಿ.
ಹಣದ ಮೌಲ್ಯದ ಬಗ್ಗೆ ತಿಳಿಸಿಕೊಡಿ : ದಿನೇ ದಿನೇ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವ ಇಂದಿನ ಕಾಲದಲ್ಲಿ, ಖಂಡಿತವಾಗಿಯೂ ಮಕ್ಕಳಿಗೆ ಹಣದ ಬೆಲೆ, ಅದರ ಮಹತ್ವ ಗೊತ್ತಾಗಬೇಕು. ಹಣದ ಸಂಪಾದನೆಗಾಗಿ ನೀವು ದಿನವಿಡೀ ಎಷ್ಟು ಕಷ್ಟಪಡುತ್ತೀರಿ, ಈ ಹಂತ ತಲುಪಲು ಏನೇನು ಪಾಡುಪಟ್ಟಿದ್ದೀರಿ ಎಂಬುದನ್ನು ಸರಳವಾಗಿ ಅವರಿಗೆ ಮನವರಿಕೆ ಮಾಡಿಕೊಡಿ. ಅವರು ಏನೇ ಹೊಸದಾಗಿ ಡಿಮ್ಯಾಂಡ್ ಮುಂದಿಟ್ಟರೂ, ಅದರ ಪೂರೈಕೆಗಾಗಿ ನೀವು ಎಷ್ಟೆಲ್ಲ ಕಷ್ಟಪಡಬೇಕು ಎಂಬುದನ್ನು ತಿಳಿಸಿಕೊಡಿ. ಅನಗತ್ಯದ ಖರ್ಚು ಮಾಡುವುದರಿಂದ ನೀವು ಸಾಲದ ಜಂಜಾಟಕ್ಕೆ ಸಿಲುಕಿ, ಅದರಿಂದ ಹೊರಬರಲು ಎಷ್ಟು ಕಷ್ಟಪಡಬೇಕು ಎಂದು ತಿಳಿಸಿಕೊಡಿ.
ಎಲ್ಲಾ ಬೇಡಿಕೆಗಳನ್ನೂ ಪೂರೈಸುವ ಅಗತ್ಯವಿಲ್ಲ : ನೀವು ಮಕ್ಕಳು ಕೇಳಿದರು ಅಂತ ಅವರ ಎಲ್ಲಾ ಸಣ್ಣಪುಟ್ಟ ಆಸೆಗಳನ್ನೂ ಪೂರೈಸುತ್ತಾ ಕುಳಿತರೆ, ಅವರಿಗೆ ಅದರಿಂದ ಖುಷಿ ಆಗುವುದಕ್ಕಿಂತ, ತಾನಿರುವುದೇ ಕೇಳುವುದಕ್ಕೆ, ಹೆತ್ತವರು ಇರುವುದೇ ಇದನ್ನು ಪೂರೈಸಲಿಕ್ಕೆ ಎಂಬ ತಾತ್ಸಾರ ಮನೋಭಾವ ಬೆಳೆಯುತ್ತದೆ. ಇಂದು ನೀವು ಕೊಡಿಸಿದ ವಸ್ತುವಿಗಿಂತ ನಾಳೆ ಇನ್ನಷ್ಟು, ಮತ್ತಷ್ಟು ದುಬಾರಿ ವಸ್ತು ಕೊಡಿಸಲಿಲ್ಲ ಎಂಬ ಅಸಮಾಧಾನ ಹೆಚ್ಚುತ್ತದೆ. ಹೀಗಾಗಿ ಅವರು ಕೇಳಿದ್ದನ್ನೆಲ್ಲ ಕೊಡಿಸಿತ್ತಾ ಕುಳಿತರೆ, ಮುಂದೆ ಇದರಿಂದ ನಿಮಗೆ ತೊಂದರೆ ತಪ್ಪದು. ಇದರಿಂದ ಅವರು ಹೆಚ್ಚು ಹಠಮಾರಿಗಳಾಗುತ್ತಾರೆ. ಶಿಸ್ತುಬದ್ಧತೆ ಇಲ್ಲದೆ, ಲಂಗುಲಗಾಮಿಲ್ಲದೆ ಅಡ್ಡಾದಿಡ್ಡಿ ಮಾರ್ಗ ಹಿಡಿಯುತ್ತಾರೆ. ತಮ್ಮ ಅಗತ್ಯಗಳನ್ನು ಕಂಟ್ರೋಲ್ ಮಾಡುವುದನ್ನು ಅವರು ಮೊದಲಿನಿಂದಲೇ ಕಲಿಯಬೇಕು. ಅತಿ ಅಗತ್ಯವಾದುದು ಮತ್ತು ಲಕ್ಷುರಿ ನಡುವಿನ ವ್ಯತ್ಯಾಸವನ್ನು ಅವರಿಗೆ ಮನದಟ್ಟು ಮಾಡಿಸಿ.
ಮಕ್ಕಳಿಗೆ ಗೋಲಕ ಕೊಡಿಸಿ : ನಿಮ್ಮ ಮಕ್ಕಳು ಉಳಿತಾಯದ ಬಗ್ಗೆ ಕಲಿಯಲಿ ಎಂದು ನೀವು ಬಯಸಿದರೆ, ಚಿಕ್ಕಂದಿನಿಂದಲೇ ಅವರಿಗೆ ಹಣದ ಸರಿಯಾದ ಬಳಕೆ ಬಗ್ಗೆ ಕಲಿಸಿರಿ. ಉದಾ : ಒಂದು ಪುಸ್ತಕ ಕೊಂಡ ನಂತರ ಉಳಿದ ಹಣವನ್ನು ಅಗತ್ಯವಾಗಿ ಈ ಗೋಲಕಕ್ಕೆ ಹಾಕಿ ಸಂಗ್ರಹಿಸಬೇಕು ಎಂಬುದನ್ನು ಕಲಿಸಿರಿ. ಈ ರೀತಿ ಗೋಲಕದಲ್ಲಿ ಸಣ್ಣಪುಟ್ಟ ನಾಣ್ಯ, ನೋಟು ಹಾಕುವುದರ ಮೂಲಕ ಉಳಿತಾಯ ಕಲಿಸಿರಿ. ಈ ರೀತಿ ಅವರಿಗೆ ಹಣ ಸಿಕ್ಕಿದಾಗೆಲ್ಲ ಆದಷ್ಟೂ ಈ ಗೋಲಕಕ್ಕೆ ತುಂಬಿಸುವ ಅಭ್ಯಾಸ ಮಾಡಿಸಿ.
ಉಳಿತಾಯ ಖಾತೆ ತೆರೆಸಿರಿ : ಹೀಗೆ ಗೋಲಕಕ್ಕೆ ಹಣ ಹಾಕುತ್ತಾ, ಮಕ್ಕಳು ಬೆಳೆದಂತೆ ಅವರಿಗೆ ಸಹಜವಾಗಿ ಉಳಿತಾಯದ ಅಭ್ಯಾಸ ಆಗುತ್ತದೆ. ಇದರ ಹೆಚ್ಚಿನ ಲಾಭಗಳ ಬಗ್ಗೆ ತಿಳಿಸಿಕೊಡಿ. ಈ ರೀತಿ ಪ್ರತಿ ತಿಂಗಳೂ ಗೋಲಕದಲ್ಲಿ ತುಂಬಿದ ಹಣವನ್ನು ಬ್ಯಾಂಕಿಗೆ ಜಮಾ ಮಾಡಬಹುದು ಎಂದು ಕಲಿಸಿರಿ. ಪ್ರೌಢಶಾಲೆ ತಲುಪಿದ ಮಕ್ಕಳನ್ನು ನಿಮ್ಮ ಜೊತೆ ಬ್ಯಾಂಕಿಗೆ ಕರೆದೊಯ್ದು, ಅದರದೇ ಹೆಸರಲ್ಲಿ ಅಕೌಂಟ್ ತೆರೆಸಿ ನೀವು ಗಾರ್ಡಿಯನ್ ಆಗಿರಿ. ಇತ್ತೀಚೆಗೆ ಇಂಥ ಮಕ್ಕಳು ಸಹ ಹಿರಿಯರ ಮಾರ್ಗದರ್ಶನದಲ್ಲಿ ಖಾತೆ ಹೊಂದುವ ಅವಕಾಶವಿದೆ. ಈ ರೀತಿ ಅವರಿಗೆ ತಮ್ಮ ಖಾತೆಯಲ್ಲಿ ಹಣ ಕೂಡಿಸುವ ಅಭ್ಯಾಸ ರೂಢಿಸಿ. ಈ ರೀತಿಯ ಅವರ ಸಣ್ಣಪುಟ್ಟ ಉಳಿತಾಯ, ಮುಂದೆ ಅವರ ದೊಡ್ಡ ಖರ್ಚಿಗೆ ಅನುಕೂಲವಾಗುತ್ತದೆ.