ಸವಿತಾ ಕೃಷ್ಣಮೂರ್ತಿ ಕಿರುತೆರೆ ನಟಿ, ಪಾಕತಜ್ಞೆ

ತಾಯಿ ಎನ್ನುವುದು ಒಂದು ಅಪೂರ್ವ ಶಕ್ತಿ. ಅವಳು ತಾನು ತನ್ನನ್ನು, ತನ್ನ ಮಕ್ಕಳು ಕುಟುಂಬವನ್ನು ಪ್ರೀತಿಸಬೇಕು. ಪ್ರೀತಿಯನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೀಡಬಲ್ಲಳು ತಾಯಿ. ಅದನ್ನು ಒಬ್ಬ ಸ್ತ್ರೀ ಅರ್ಥೈಸಿಕೊಂಡರೆ ಆಕೆ ತನ್ನ ಕುಟುಂಬ ಜೀವನದಲ್ಲಿ ಅತ್ಯಂತ ಯಶಸ್ಸು ಕಾಣುತ್ತಾಳೆ!

”ಸವಿತಾ ಕೃಷ್ಣಮೂರ್ತಿ, ಹೀಗೆಂದರೆ ಬಹಳಷ್ಟು ಜನರಿಗೆ ಯಾರೆಂದೇ ತಿಳಿಯಲಾರದು. ಅದೇ `ಅಮೃತರ್ಷಿಣಿ’ ಧಾರಾವಾಹಿಯ ಯಶೋದಮ್ಮ ಎಂದರೆ ತಕ್ಷಣಕ್ಕೆ ಹೊಳೆಯುತ್ತದೆ.

ಟಿವಿ ಪರದೆಯ ಮೇಲೆ ಆಕೆ ಕಣ್ಣುಗುಡ್ಡೆಗಳನ್ನು ಹೊರಳಿಸುತ್ತಾ, ಮಾತಿನಲ್ಲಿ ಕಾಠಿಣ್ಯ ತುಂಬಿಕೊಂಡು ಮಾತನಾಡುತ್ತಾ, ದಿನ ದಿನ ಹೊಸ ಹೊಸ ಕುತಂತ್ರಗಳನ್ನು ಹೆಣೆದು ಕುಟುಂಬದಲ್ಲಿ ಒಡಕನ್ನು ತರಲು ಪ್ರಯತ್ನಿಸುತ್ತಿದ್ದರೆ ವೀಕ್ಷಕರೆಲ್ಲರೂ ಉಸಿರು ಬಿಗಿ ಹಿಡಿದುಕೊಂಡು ನೋಡುತ್ತಿರುತ್ತಾರೆ. ಕಳೆದ ಐದು ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ನಂಬರ್‌ ಒನ್‌ ವ್ಯಾಂಪ್‌ ಪಾತ್ರಧಾರಿ ಸವಿತಾ ಕೃಷ್ಣಮೂರ್ತಿ.

ಅಭಿನಯದ ಹಿನ್ನೆಲೆ ಏನೂ ಇಲ್ಲದಿದ್ದರೂ ತಮಗಿದ್ದ ಆತ್ಮವಿಶ್ವಾಸದಿಂದಲೇ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡು ಇಂದು ಕಿರುತೆರೆ ಹಾಗೂ ಚಲನಚಿತ್ರ ರಂಗದಲ್ಲಿ ಯಶಸ್ವಿ ಕಲಾವಿದೆಯಾಗಿ ಬೆಳೆದಿದ್ದಾರೆ. ಇಂತಹ ಕಲಾವಿದೆಯನ್ನು ಮದರ್ಸ್‌ ಡೇ ಸಂದರ್ಭದಲ್ಲಿ ನಾವು ಮಾತಿಗೆ ಆಹ್ವಾನಿಸಿದಾಗ ಸಂತಸದಿಂದ ಒಪ್ಪಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅವರೊಡನೆ ನಡೆಸಿದ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ.

ನೀವು ಕಿರುತೆರೆಗೆ ಬಂದದ್ದು ಹೇಗೆ?

ನಾನು ಕಂಪ್ಲೀಟ್‌ ಹೌಸ್‌ ವೈಫ್‌! ಒಮ್ಮೆ ಮಲ್ಲೇಶ್ವರದಲ್ಲಿ ಕುಕರಿ ಶೋಗಾಗಿ ಆಡಿಷನ್‌ ನಡೆದಿತ್ತು. ನನಗೆ ಮೊದಲಿನಿಂದಲೂ ಅಡುಗೆಯಲ್ಲಿ ಆಸಕ್ತಿ ಇದ್ದುದರಿಂದ ನಾನೂ ಭಾಗವಹಿಸಿದ್ದೆ. ಅಷ್ಟೇ ಅಲ್ಲ ಅಲ್ಲಿ ನಾನೊಬ್ಬ ಉತ್ತಮ ಶೆಫ್‌ ಆಗಿ ಆಯ್ಕೆಯಾದೆ. ಅದಾದ ಕೆಲವು ದಿನಗಳಲ್ಲಿ ಜೀ ಕನ್ನಡದವರು `ರುಚಿ ಅಭಿರುಚಿ’ ಕಾರ್ಯಕ್ರಮಕ್ಕೆ ನನ್ನನ್ನು ಆಯ್ಕೆ ಮಾಡಿದರು. ಆ ಕಾರ್ಯಕ್ರಮ ಉತ್ತಮವಾಗಿದ್ದು ಜನಪ್ರಿಯ ಕಾರ್ಯಕ್ರಮವಾಗಿ ಮೂಡಿಬಂದಿತು. ಆಗ ಅಲ್ಲಿದ್ದ ಜೀವ ಎಂಬ ಕ್ಯಾಮರಾಮನ್‌, ನೀವೇಕೆ ಧಾರಾವಾಹಿಗಳಲ್ಲಿ ನಟಿಸಬಾರದು? ಎಂದು ನನ್ನನ್ನು ಹುರಿದುಂಬಿಸಿದರು. ಅವರ ಸಲಹೆಯಂತೆ ನಾನು ಧಾರಾವಾಹಿಯಲ್ಲಿ ಅಭಿನಯಿಸಲು ತೊಡಗಿದೆ.

ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಹೇಗನಿಸಿತು?

ನನಗೆ ಯಾವುದೇ ತರಬೇತಿಯಾಗಲಿ, ಅಭಿನಯದ ಹಿನ್ನೆಲೆಯಾಗಲಿ ಇಲ್ಲ. ಆದರೆ ನೃತ್ಯವೆಂದರೆ ನನಗೆ ಅಚ್ಚುಮೆಚ್ಚು. ಇದರ ಹೊರತಾಗಿ ನಾನೇನು ನೃತ್ಯಾಭ್ಯಾಸ ಮಾಡಿದವಳೂ ಅಲ್ಲ. ಇಷ್ಟಾಗಿಯೂ ನಾನು ಅಭಿನಯ ರಂಗಕ್ಕಿಳಿದೆ. ಮೊದಲು ಭಯವಾಗಿದ್ದೇನೋ ನಿಜ. ನಾನು ಮೊದಲು ಅಭಿನಯಿಸಿದ್ದು `ಪಾಯಿಂಟ್‌ ಪರಿಮಳಾ` ಧಾರಾವಾಹಿಯಲ್ಲಿ. ಅದೊಂದು ಫೋನ್‌ ಕಾಲ್ ಮಾಡುವ ದೃಶ್ಯ. ನನ್ನ ಮಾತೃಭಾಷೆ ಮರಾಠಿಯಾಗಿದ್ದರಿಂದ ಕನ್ನಡವನ್ನು ಸ್ಪಷ್ಟವಾಗಿ ಉಚ್ಚರಿಸುವುದು ತುಸು ಕಷ್ಟ ಎನಿಸಿತು. ಆದರೆ ಫೋನ್‌ ಸಂಭಾಷಣೆಯಾಗಿದ್ದ ಕಾರಣ ಅದು ಹೇಗೋ ಟೇಕ್‌ ಆಯಿತು. ಆದರೆ ಇವತ್ತಿಗೂ ಒಂದೊಂದು ಶಾಟ್‌ ಮಾಡುವಾಗಲೂ ಭಯ ನನ್ನನ್ನು ಕಾಡುತ್ತದೆ. ನನ್ನ ಅಭಿನಯ ಚೆನ್ನಾಗಿ ಬರಬೇಕೆನ್ನುವುದೇ ಈ ಭಯದ ಮೂಲ.

ನಿಮ್ಮ ಕುಕರಿ ಶೋ ಕುರಿತು ಹೇಳಿ….

ಮಲ್ಲೇಶ್ವರದಲ್ಲಿ `ಏರಿಯಾ ಚಾಲೆಂಜಿಂಗ್‌ ಕ್ವೀನ್‌’ ಅನ್ನೋ ಕುಕರಿ ಕಾಂಟೆಸ್ಟ್ ನಡೆದಾಗ ನಾನು ಅದರಲ್ಲಿ ಭಾಗವಹಿಸಿ ಮಲ್ಲೇಶ್ವರ ಏರಿಯಾ ಚಾಲೆಂಜ್‌ ಗೆದ್ದಿದ್ದೆ. ಅಲ್ಲಿಂದ ನನ್ನ ಈ ಕುಕರಿ ಶೋ ಜರ್ನಿ ಪ್ರಾರಂಭವಾಗಿತ್ತು. ಮೊದಲು ಜೀ ಕನ್ನಡದ `ರುಚಿ ಅಭಿರುಚಿ’ಯಲ್ಲಿ ಭಾಗವಹಿಸಿದ್ದೆ. ಇತ್ತೀಚೆಗೆ ಸುವರ್ಣ ಅವರು `ಮನೆ ಅಡುಗೆ’ ಕಾರ್ಯಕ್ರಮದಲ್ಲಿ ನನಗೆ ಅವಕಾಶ ನೀಡಿದ್ದರು. ಅದು ಆರೇಳು ತಿಂಗಳು ನಡೆಯಿತು. ಅದೊಂದು ಉತ್ತಮ ಅನುಭವವಾಗಿದೆ. ಜೊತೆಗೆ ನನಗೆ ಸಾಕಷ್ಟು ಜನಪ್ರಿಯತೆಯನ್ನೂ ತಂದಿದೆ. ಆದರೆ ನಾನು ಒಪ್ಪಿಕೊಂಡದ್ದೇ ಕೆಲವು ಎಪಿಸೋಡ್ಸ್ ಮಾತ್ರ. ಆದರೆ ಇನ್ನು ಮುಂದೆ ಯಾವುದೇ ಕುಕರಿ ಶೋನಲ್ಲಿ ಅವಕಾಶ ದೊರೆತರೆ ಭಾಗಹಿಸುತ್ತೇನೆ.

`ಅಮೃತರ್ಷಿಣಿ’ ಧಾರಾವಾಹಿ ಮತ್ತು ಅದರ ಟೀಮ್ ಕುರಿತು ತಿಳಿಸಿ….

`ಅಮೃತರ್ಷಿಣಿ’ಯಲ್ಲಿ ನನ್ನ ಪಾತ್ರ ಕೇವಲ ವ್ಯಾಂಪ್‌ ಮಾತ್ರವಲ್ಲ, ಅದಕ್ಕೆ ಬೇರೆ ಬೇರೆ ಶೇಡ್ಸ್ ಇವೆ. ನನ್ನ ಪಾತ್ರದಲ್ಲಿ ಸಾಕಷ್ಟು ವೈವಿಧ್ಯತೆಗಳಿವೆ. ನಾನು ಆ ಎಲ್ಲಾ ಸ್ಟೇಜ್‌ನಲ್ಲಿಯೂ ಪಾತ್ರಕ್ಕೆ ನ್ಯಾಯ ಒದಗಿಸಿಕೊಡಬೇಕಾಗಿದೆ.

ಟೀಮ್ ಬಗ್ಗೆ ಹೇಳಬೇಕೆಂದರೆ ಅದೊಂದು ಕಾಮಧೇನು ಹಸುವಿನಂತೆ! ಅಲ್ಲಿ ಇರುವವರೆಲ್ಲರೂ ಸೂಕ್ಷ್ಮ ಸ್ವಭಾವದವರು, ಒಳ್ಳೆಯ ಮನಸ್ಸಿನವರು. ನಿರ್ಮಾಪಕರು, ನಿರ್ದೇಶಕ ರವಿ ಗರಣಿ ಸೇರಿ ಎಲ್ಲರೂ ಬಹಳ ಉತ್ತಮ ವ್ಯಕ್ತಿತ್ವದವರು. ಕಳೆದ ಐದು ವರ್ಷಗಳಿಂದ ನಾನು ಈ ತಂಡದಲ್ಲಿದ್ದು ಬಹಳ ಒಳ್ಳೆಯ ಅಂಶಗಳನ್ನು ಕಲಿತಿದ್ದೇನೆ. ಇನ್ನು ಮುಂದೆಯೂ ಬಹಳ ಕಲಿಯಲು ಸಾಧ್ಯವಿದೆ. ಒಟ್ಟಾರೆ ಒಳ್ಳೆಯ ತಂಡ. ಎಂದೂ ಮರೆಯಲಾರದಷ್ಟು ಒಳ್ಳೆಯ ಅನುಭವ ನನಗಲ್ಲಿ ಸಿಕ್ಕಿದೆ.

ಪ್ರಾರಂಭದಲ್ಲಿ ನನಗೆ ಎದುರಾಳಿ ಪಾತ್ರದಲ್ಲಿ ಹೇಮಾ ಚೌಧರಿ ಅಭಿನಯಿಸುತ್ತಿದ್ದರಿಂದ ನನಗೆ ಸ್ವಲ್ಪ ಭಯವಾಗಿತ್ತು. ಅಂತಹ ಹಿರಿಯ ಕಲಾವಿದೆಯ ಎದುರು ನಾನು ಅಭಿನಯಿಸುತ್ತಿದ್ದೆ. ಆದರೆ ಅವರು ನಮಗೆ ತಾಯಿಯಂತಿದ್ದರು. ನಾವು ಅಮ್ಮ ಎಂದೇ ಕರೆಯುತ್ತಿದ್ದೆವು. ಇನ್ನೂ ಎಲ್ಲಾ ನಟ ನಟಿಯರು, ಟೆಕ್ನೀಷಿಯನ್ಸ್ ಎಲ್ಲರೂ ಸೇರಿ ಒಂದು ಒಳ್ಳೆಯ ಟೀಮ್. ನಾನು ಇಂತಹ ಟೀಮಿನಲ್ಲಿರುವುದು ನನ್ನ ಅದೃಷ್ಟ.

ಇತರೆ ಧಾರಾವಾಹಿಗಳು, ಬೆಳ್ಳಿತೆರೆಯಲ್ಲಿನ ಅಭಿನಯ ಹೇಗಿತ್ತು?

ನಾನು ಅಭಿನಯಿಸಿದ ಇತರೆ ಧಾರಾವಾಹಿಗಳೆಂದರೆ, `ಪಾರ್ವತಿ ಪರಮೇಶ್ವರ,’ `ಪತಿ ಪತ್ನಿ ಗುಲಾಮ,’ `ಚಕ್ರವಾಕ.’  `ಚಕ್ರವಾಕ’ ಧಾರಾವಾಹಿಯ ಪಾತ್ರ ಸೊಗಸಾಗಿತ್ತು. ಅದರಿಂದಲೇ `ಅಮೃತರ್ಷಿಣಿ’ಯಿಂದ ಕರೆ ಬಂತು.

ನನ್ನ ಮೊದಲ ಚಿತ್ರ `ಬಿಂದಾಸ್‌ ಹುಡುಗಿ.’ ಹುಲಿ, ಪ್ರಿನ್ಸ್, ಗಾಡ್‌ಫಾದರ್‌, ಜನವರಿ 1 ಬಿಡುಗಡೆ, ಮದುವೆ ಮನೆ, ಗೌರಿಪುತ್ರ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇತ್ತೀಚೆಗೆ ಹಿಂದಿ ಚಿತ್ರದಲ್ಲಿಯೂ ಅವಕಾಶ ದೊರಕುತ್ತಿದೆ. ಅಮೀರ್‌ಖಾನ್‌ ಸಹೋದರ ಫೈಜ್‌ ಖಾನ್‌ ಅವರ ಚಿತ್ರ `ಡೇಂಜರ್‌’ನಲ್ಲಿಯೂ ಒಂದು ಒಳ್ಳೆಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಗೌರವಾನ್ವಿತ ಪಾತ್ರಗಳಿಗೆ ಪ್ರಾಮುಖ್ಯತೆ ನೀಡುತ್ತೇನೆ. ಅಂತಹ ಪಾತ್ರಗಳಲ್ಲಿ ಅಭಿನಯಿಸಲು ಅವಕಾಶ ದೊರೆತರೆ ಹಿಂದೇಟು ಹಾಕುವುದಿಲ್ಲ.

ನಿಮ್ಮ ಕುಟುಂಬದ ಬಗ್ಗೆ ತಿಳಿಸಿ….

ನನ್ನ ಈ ಯಶಸ್ಸಿಗೆ ನನ್ನ ಕುಟುಂಬವೇ ಕಾರಣ! ನನ್ನ ಪತಿ ಕೃಷ್ಣಮೂರ್ತಿ, ಮಕ್ಕಳಾದ ಐಶ್ವರ್ಯಾ, ಲಕ್ಷ್ಮಿ ಹಾಗೂ ಮೋಹನ್‌ ಎಲ್ಲರ ನಿರಂತರ ಪ್ರೋತ್ಸಾಹದಿಂದಾಗಿಯೇ ನಾನಿಂದು ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ. ಇನ್ನು ನನ್ನ ತಾಯಿ, ತಂದೆ ಮತ್ತು ನನ್ನ ಇಬ್ಬರು ಸಹೋದರರು ಸಹ ನನ್ನ ಅಚ್ಚುಮೆಚ್ಚಿನ ಕುಟುಂಬದವರಾಗಿದ್ದಾರೆ. ಅದರಲ್ಲಿ ತಾಯಿಯಂತೂ ಬಹಳ ಕಷ್ಟಪಟ್ಟು ನನ್ನನ್ನು ಸಾಕಿದ್ದಾರೆ. ನಾನು ಇವತ್ತಿಗೂ ಅವರನ್ನು ಬಹಳ ಪ್ರೀತಿಸ್ತೀನಿ, ಗೌರವಿಸ್ತೀನಿ. ಅವರೂ ನನ್ನ ಬಗ್ಗೆ ಅತ್ಯಂತ ಹೆಚ್ಚಿನ ಪ್ರೀತಿ ತೋರಿಸ್ತಾರೆ.

ಮದರ್ಸ್‌ ಡೇ ಸಂದರ್ಭದಲ್ಲಿ ತಾಯಿಯಾಗಿ ಇನ್ನೊಬ್ಬ ತಾಯಿಗೆ ನಿಮ್ಮ ಸಂದೇಶ ಏನು?

ತಾಯಿ ಎನ್ನುವುದು ಒಂದು ಅಪೂರ್ವ ಶಕ್ತಿ! ಅವಳು ತಾನು ತನ್ನನ್ನು, ತನ್ನ ಮಕ್ಕಳು ಕುಟುಂಬವನ್ನು ಪ್ರೀತಿಸಬೇಕು. ಪ್ರೀತಿಯನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೀಡಬಲ್ಲವಳು ತಾಯಿ ಮಾತ್ರ, ಹಂಚಿದಷ್ಟೂ ಅದು ಅಕ್ಷಯವಾಗಿ ಉಕ್ಕುತ್ತದೆ. ಅದನ್ನು ಒಬ್ಬ ಸ್ತ್ರೀ ಅರ್ಥೈಸಿಕೊಂಡರೆ ಆಕೆ ತನ್ನ ಕುಟುಂಬ ಜೀವನದಲ್ಲಿ ಅತ್ಯಂತ ಯಶಸ್ಸು ಕಾಣುತ್ತಾಳೆ.

ತಾಯಿಯಾಗುವ ಹೆಣ್ಣಿಗೆ ಬೇಕಿರುವುದು ಮುಖ್ಯವಾಗಿ ತಾಳ್ಮೆ, ಪ್ರೀತಿ. ತಾಯಿ ಮಾತ್ರವೇ ಮಕ್ಕಳ ಫ್ರೆಂಡ್‌, ಫಿಲಾಸಫರ್‌, ಗೈಡ್‌ ಆಗಿ ಇರಬಲ್ಲಳು. ಅವಳು ತನ್ನ ಕುಟುಂಬವನ್ನು ಅತ್ಯಂತ ಹೆಚ್ಚಾಗಿ ಸಹನೆ ಹಾಗೂ ಪ್ರೀತಿಯಿಂದ ಕಾಣಬೇಕು. ಅದೇ ಅವಳ ಜೀವನದ ಯಶಸ್ಸಿಗೆ ಅಡಿಪಾಯವಾಗಬಲ್ಲದು!

– ರಾಘವೇಂದ್ರ ಅಡಿಗ ಎಚ್ಚೆನ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ