ಪುರುಷರಷ್ಟೇ ಮಹಿಳೆಯರು ಕೂಡಾ ಎಲ್ಲ ಕ್ಷೇತ್ರಗಳಲ್ಲೂ ಸಮರ್ಥರು. ಮಹಿಳೆಯರು ಸ್ವಾವಲಂಬಿಯಾಗಿ ತಮ್ಮ ಬದುಕನ್ನು ಸಾರ್ಥಕತೆಯಿಂದ ನಡೆಸಿಕೊಂಡು ಹೋಗಬೇಕು. ಮಹಿಳೆಯಾಗಿ ಹುಟ್ಟಿದ್ದಕ್ಕೆ, ತಾಯಿಯಾಗಿ ಪರಿಪೂರ್ಣತೆ ಪಡೆದುದಕ್ಕೆ ತಾರಾ ಏನು ಹೇಳುತ್ತಾರೆ………?

”ಕಲಾತ್ಮಕವಿರಲಿ, ಕಮರ್ಷಿಯಲ್ ಇರಲಿ ಎಲ್ಲ ಪಾತ್ರಗಳಿಗೂ ಹೊಂದಿಕೊಳ್ಳುವ ಏಕೈಕ ತಾರೆ ಈ ತಾರಾ. ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಅಪ್ಪಟ ಕನ್ನಡ ಕಲಾವಿದೆ. `ಹಸೀನಾ’ ಚಿತ್ರವನ್ನು ಮರೆಯುವಂತಯೇ ಇಲ್ಲ. ಇತ್ತೀಚೆಗೆ ಬಂದ `ಉಳಿದವರು ಕಂಡಂತೆ’ ಚಿತ್ರದಲ್ಲೂ ತಾರಾ ಗಮನ ಸೆಳೆದಿದ್ದರು. ನಟಿ, ರಾಜಕಾರಣಿ, ವಿಧಾನಪರಿಷತ್‌ ಸದಸ್ಯೆ, ಸಮಾಜಸೇವಕಿ ಎಲ್ಲ ಆಗಿರುವ ತಾರಾ ತಾನು ಮೆಚ್ಚಿದ ಹುಡುಗನನ್ನೇ ಮದುವೆಯಾದಳು. ವೇಣು ಖ್ಯಾತ ಛಾಯಾಗ್ರಾಹಕ. ಇವರಿಬ್ಬರ ಮುದ್ದಿನ ಪುತ್ರ ಕೃಷ್ಣ. ತಾರಾ ಬದುಕನ್ನೇ ಸುಂದರಗೊಳಿಸಿದ ಮುದ್ದು ಮಗು.

ತಾರಾ ಒಬ್ಬ ನೃತ್ಯಪಟುವಾಗಿ ಸಿನಿಮಾರಂಗಕ್ಕೆ ನಟಿಯಾಗಿ ಎಂಟ್ರಿಕೊಟ್ಟರು. ನೂರಾರು ಚಿತ್ರಗಳಲ್ಲಿ ತಂಗಿಯಾಗಿ, ನಾಯಕಿಯಾಗಿ, ಪೋಷಕ ಕಲಾವಿದೆಯಾಗಿ ಮಿಂಚಿದಂಥ ನಟಿ. ತನ್ನ ಬದುಕನ್ನು ತಾನೇ ರೂಪಿಸಿಕೊಂಡು ಒಬ್ಬ ಯಶಸ್ವೀ ಮಹಿಳೆಯಾಗಿ ಇಂದು ನಮ್ಮೆದುರು ನಿಂತಿದ್ದಾರೆ. ಸ್ನೇಹಜೀವಿ ತಾರಾ ಯಾವತ್ತೂ ತಾರೆಯಂತೆ ವರ್ತಿಸಿದವರಲ್ಲ. ಚಿತ್ರರಂಗದ ಕಷ್ಟ ಸುಖಕ್ಕೆ ಸ್ಪಂದಿಸಿದ್ದಾರೆ. ಇಂದಿಗೂ ಕಷ್ಟದಲ್ಲಿ ಇರುವವರಿಗೆ ಸಹಾಯಹಸ್ತ ನೀಡುತ್ತಲೇ ಇರುತ್ತಾರೆ. ನಿರ್ಮಾಪಕಿಯಾಗಿಯೂ ಒಳ್ಳೆ ಚಿತ್ರ ನೀಡಿದ್ದಾರೆ. `ಕಾನೂರು ಹೆಗ್ಗಡತಿ’ ಇವರ ಅತ್ಯುತ್ತಮ ಚಿತ್ರಗಳಲ್ಲೊಂದು. `ಸೈನೈಡ್‌’ ಚಿತ್ರದಲ್ಲೂ ಗಮನ ಸೆಳೆಯುವಂಥ ಪಾತ್ರ ಮಾಡಿದ್ದರು. ಉನ್ನತ ಸ್ಥಾನದಲ್ಲಿ ಉಳಿದವರೆಲ್ಲರಿಗಿಂತ ವಿಭಿನ್ನವಾಗಿ ಎದ್ದು ಕಾಣುವ ತಾರಾಳ ಅಪರೂಪದ ಸಂದರ್ಶನ ಇಲ್ಲಿದೆ.

ಬಣ್ಣದ ನಂಟು ಬಹಳ ಗಟ್ಟಿ ಅಂತಾರೆ…. ನಿಮ್ಮ ತಾರಾ ಬದುಕಿನಲ್ಲಿ ಆದ ಅನುಭವ?

ಸಿನಿಮಾರಂಗಕ್ಕೆ ಬಂದು ಸಿಲ್ವರ್‌ ಜ್ಯೂಬ್ಲಿ ಆಚರಿಸಿದ್ದೀನಿ ಎನ್ನಬಹುದು. ನಮ್ಮ ಮನೆಯಲ್ಲಿ ಯಾರೂ ಬಣ್ಣ ಹಚ್ಚಿದವರಲ್ಲ. ಸ್ಕೂಲ್‌ನಲ್ಲಿದ್ದಾಗಲೇ ನನ್ನ ನೃತ್ಯ ಕಾರ್ಯಕ್ರಮ ಕಂಡು ಸಿನಿಮಾದಲ್ಲಿ ನಟಿಸುತ್ತೀಯಾ ಅಂತ ಕೇಳಿದ್ರು. ಸಿನಿಮಾ ರಂಗಕ್ಕೆ `ತುಳಸಿದಳ’ ಚಿತ್ರದ ಮೂಲಕ ಬಂದೆ. ಅಲ್ಲಿಂದ ಶುರುವಾದ ಜರ್ನಿ ನನಗೆ ಗೊತ್ತಿಲ್ಲದಂತೆ ನನ್ನೊಳಗೊಬ್ಬ ಕಲಾವಿದೆ ಬೆಳೆದು ಬಂದಳು.

ರಾಜಕೀಯರಂಗದಲ್ಲಿ ಬಿಝಿಯಾಗಿರುವ ನೀವು ನಟನೆಯಿಂದ ಸ್ವಲ್ಪ ದೂರ ಉಳಿದಿದ್ದೀರಾ ಅನ್ಸುತ್ತಾ?

ನಾನು ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅದಕ್ಕೆ ಸಂಪೂರ್ಣವಾಗಿ ನ್ಯಾಯ ದೊರಕಿಸಿಕೊಡ್ತೀನಿ. ರಾಜಕೀಯ ರಂಗದಲ್ಲಿ ನಾನು ಮಾಡಬೇಕಾದ ಕೆಲಸಗಳನ್ನು ಜವಾಬ್ದಾರಿ ಹೊತ್ತು ಮಾಡುತ್ತೇನೆ. ಜನರ ಬದುಕನ್ನು ಹತ್ತಿರದಿಂದ ಕಾಣುತ್ತೇನೆ. ಜನರ ಸೇವೆ ಮಾಡೋದ್ರಲ್ಲಿ ಹೆಚ್ಚು ತೃಪ್ತಿ ಸಿಗುತ್ತೆ.

ಮನೆ, ಮಗು ಎಲ್ಲವನ್ನೂ ಹೇಗೆ ಮ್ಯಾನೇಜ್‌ ಮಾಡ್ತೀರಾ?

ಬೆಳಗ್ಗೆ ಹೋಗಿ ಸಂಜೆ ಬರುವ ಹಾಗಿದ್ದರೆ ಮಗುವನ್ನು ಮನೆಯಲ್ಲೇ ಬಿಟ್ಟು ಹೋಗ್ತೀನಿ. ನೋಡಿಕೊಳ್ಳಲು ಜನ ಇದ್ದಾರೆ. ತುಂಬಾ ತಡವಾಗುವಂತಿದ್ದರೆ ಮಗುವನ್ನು ಜೊತೆಯಲ್ಲೇ ಕರೆದುಕೊಂಡು ಹೋಗ್ತೀನಿ. ರಾತ್ರಿ ಹೊತ್ತು ಮಗುವನ್ನು ನಾನು ಬಿಟ್ಟರೆ ಬೇರೆ ಯಾರಿಂದಲೂ ಸಂಭಾಳಿಸಲು ಸಾಧ್ಯವಿಲ್ಲ. ನನ್ನ ತಾಯಿ ಬೆಳಗ್ಗೆ ಹೊತ್ತಾದರೆ ನೋಡಿಕೊಳ್ತಾರೆ. ರಾಜಕೀಯ ಕೆಲಸ ಯಾವಾಗಲೂ ಇದ್ದೇ ಇರುತ್ತೆ. ಆದರೆ ಸಿನಿಮಾ ನನ್ನ ಮೊದಲ ಒಲವು.

ಕಳೆದೆರಡು ವರ್ಷಗಳಿಂದ ಸಿನಿಮಾ ಒಪ್ಪಿಕೊಂಡಂತೆ ಕಾಣ್ತಿಲ್ಲ…. ಏಕೆ?

ಕಳೆದ ಒಂದೂವರೆ ವರ್ಷಗಳಿಂದ ನನ್ನ ಮಗು ಆರೈಕೆ, ರಾಜಕೀಯ ಕೆಲಸಗಳಲ್ಲಿ ಬಿಝಿ ಇದ್ದೆ. ಸಾಕಷ್ಟು ಸಿನಿಮಾಗಳ ಆಫರ್ಸ್‌ ಬಂದರೂ ಮಗುವಿನ ಸಲುವಾಗಿ ಯಾವುದನ್ನೂ ಕೈಗೆತ್ತಿಕೊಳ್ಳಲಿಲ್ಲ. ಈಗ ಅವನು ಕೈಗೆ ಬಂದಿದ್ದಾನೆ. ಹಾಗಾಗಿ ನನಗೊಪ್ಪುವಂಥ ಪಾತ್ರವಿದ್ದರೆ ಮಾತ್ರ ಮಾಡ್ತಿದ್ದೀನಿ. ತಮಿಳಿನಲ್ಲೂ ಒಂದೆರಡು ಚಿತ್ರ ಒಪ್ಕೊಂಡಿದ್ದೀನಿ. ಮಗುವಿನ ಆರೈಕೆ ನನ್ನ ಮೊದಲ ಆದ್ಯತೆ ಆಗಿತ್ತು. ಈಗ ನನ್ನ ಮಗು ಬೆಳೆದಿದೆ. ಚಿತ್ರರಂಗದಿಂದ ದೂರವಿರಲು ಸಹ ಇಷ್ಟವಿಲ್ಲ. ಹೊಸ ಹುಡುಗರ, ನಿರ್ದೇಶಕರ ಹುಮ್ಮಸ್ಸು ಅವರ ಕ್ರಿಯೇಟಿವಿಟಿ ನನಗೆ ತುಂಬಾ ಇಷ್ಟವಾಗುತ್ತೆ.

ಒಬ್ಬ ಯಶಸ್ವಿ ಮಹಿಳೆಯಾಗಿ ನಮ್ಮ ಮಹಿಳಾ ಓದುಗರಿಗೆ ಏನನ್ನು ಹೇಳಲು ಬಯಸುತ್ತೀರಾ?

ಪುರುಷರಷ್ಟೇ ಮಹಿಳೆಯರು ಕೂಡಾ ಎಲ್ಲ ಕ್ಷೇತ್ರಗಳಲ್ಲೂ ಸಮರ್ಥರು. ಮಹಿಳೆಯರು ಸ್ವಾವಲಂಬಿಯಾಗಿ ತಮ್ಮ ಬದುಕನ್ನು ಸಾರ್ಥಕತೆಯಿಂದ ನಡೆಸಿಕೊಂಡು ಹೋಗಬೇಕು. ಮಹಿಳೆಯಾಗಿ ಹುಟ್ಟಿದ್ದಕ್ಕೆ, ತಾಯಿಯಾಗಿ ಪರಿಪೂರ್ಣತೆ ಪಡೆದುದಕ್ಕೆ ನಾನು ಹೆಮ್ಮೆಪಡುತ್ತೇನೆ.

– ಸರಸ್ವತಿ ಜಾಗೀರ್‌ದಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ