ಹೊಸಪೇಟೆ ಬಸ್ ನಿಲ್ದಾಣದಿಂದ ನೇರ ಸಾರಿಗೆ ವ್ಯವಸ್ಥೆ ಹೊಂದಿದ ಕನ್ನಡ ವಿಶ್ವವಿದ್ಯಾಲಯಕ್ಕೆ ಸುಲಭವಾಗಿ ಬರಬಹುದು. ಬಸ್ ಕ್ಯಾಂಪಸ್ ತಲುಪುವುದೇ ತಡ, ಅಲ್ಲಿನ ಕಟ್ಟಡಗಳ ವಿನ್ಯಾಸ ನಿಮ್ಮನ್ನು ಆಕರ್ಷಿಸತೊಡಗುತ್ತದೆ. ಜೊತೆಗೆ ಕನ್ನಡತನವನ್ನು ಎಲ್ಲ ಕಡೆ ಉಳಿಸಿದೆ. ಆವರಣದ ಬೇರೆ ಬೇರೆ ವಿಭಾಗಗಳಿಗೆ ತೆರಳಲು ಅಲ್ಲಲ್ಲಿ ಕಟ್ಟಡ ಮುಂದುಗಡೆ ಹಾಗೂ ರಸ್ತೆಯ ಬದಿಯ ಕಲ್ಲಿನಲ್ಲಿ ಕೆತ್ತಿದ ಮಾರ್ಗಸೂಚಿಗಳನ್ನು ಗಮನಿಸಿದರೆ ಸಾಕು, ನಿಮಗೆ ಹಂಪಿಯ ಶಿಲ್ಪಕಲೆಯ ಮುಂದುವರಿದ ಭಾಗದ ತಾಣದಲ್ಲಿ ನಾವಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಅಷ್ಟೊಂದು ಅಚ್ಚುಕಟ್ಟಾದ ಮಾರ್ಗಸೂಚಿ, ವಿಶ್ವವಿದ್ಯಾಲಯ ದಾರಿ ಸೂಚಕ ನಕ್ಷೆ ಕೂಡ ಗಮನ ಸೆಳೆಯುತ್ತದೆ.
ಇಲ್ಲಿರುವ ಕಾಯಕದ ಮನೆ, ನವರಂಗ, ತುಂಗಭದ್ರ, ತ್ರಿಪದಿ ಚಾವಡಿ, ಭುವನ ವಿಜಯ, ಅಕ್ಷರ ಗ್ರಂಥಾಲಯ ಮೊದಲಾದವುಗಳು ಈ ವಿಶ್ವವಿದ್ಯಾಲಯಕ್ಕೆ ವಿದ್ಯಾರಣ್ಯ ಎಂಬ ಹೆಸರನ್ನಿಟ್ಟಿದ್ದು ಕನ್ನಡತನಕ್ಕೆ ಸಾರ್ಥಕವೆನಿಸುವಷ್ಟು ಅರ್ಥಪೂರ್ಣವೆನಿಸುತ್ತದೆ. ವಿಶ್ವವಿದ್ಯಾಲಯದ ಅಕ್ಷರ ಕಟ್ಟಡದಲ್ಲಿ ಗ್ರಂಥಾಲಯ ಹಾಗೂ ವಸ್ತು ಸಂಗ್ರಹಾಲಯಗಳಿವೆ.
`ಕ್ರಿಯಾಶಕ್ತಿ' ಆಡಳಿತ ಕೇಂದ್ರವಾದರೆ ಇನ್ನಿತರ ಕಟ್ಟಡಗಳಾದ ತ್ರಿಪದಿ, ಕೂಡಲ ಸಂಗಮ, ಘಟಿಕಾಲಯ, ಅಲ್ಲಮ, ನಾದಲೀಲೆ ಮುಂತಾದ ಕಟ್ಟಡಗಳಲ್ಲಿ ಅಧ್ಯಯನದ ವಿವಿಧ ಕಾರ್ಯಗಳು ಕಾರ್ಯ ನಿರ್ವಹಿಸುತ್ತಿವೆ.
ಗ್ರೀಕ್ ರಂಗಭೂಮಿಯ ವಿನ್ಯಾಸದಲ್ಲಿ ರೂಪುಗೊಂಡಿದೆ ನವರಂಗ, ಅಲ್ಲಿಯೇ ಅನತಿ ದೂರದಲ್ಲಿದೆ ಅದ್ಭುತ ಶಿಲ್ಪವನ! ಮುಂಜಾನೆಯ ಚುಮಚುಮು ಚಳಿಯಲ್ಲಿ ಸೂರ್ಯನ ಕಿರಣ ಬುವಿಗೆ ಸ್ಪರ್ಶವಾಗುವ ಸಮಯದಲ್ಲಿ ಒಂದು ಸಲ ನೀವೇನಾದರೂ ಈ ಶಿಲ್ಪವನಕ್ಕೆ ಬಂದರೆ ಮುಗಿಯಿತು, ಇಲ್ಲಿನ ಪ್ರತಿಯೊಂದು ಕಲ್ಲು ನಿಮ್ಮ ಸೌಂದರ್ಯ ಪ್ರಜ್ಞೆಯನ್ನು ಅರಳಿಸುವ ಜೊತೆಗೆ ಆ ಸೌಂದರ್ಯ ಪ್ರಜ್ಞೆಯಲ್ಲಿ ಕ್ಷಣಕಾಲ ನಿಮ್ಮನ್ನು ತೇಲಾಡಿಸುವುದರಲ್ಲಿ ಅಚ್ಚರಿಯೇನಿಲ್ಲ. ಇಲ್ಲಿನ ಪ್ರತಿಯೊಂದು ಕಲ್ಲು ಕೂಡ ತನ್ನಲ್ಲಿನ ಸೌಂದರ್ಯ ಪ್ರಜ್ಞೆಯಿಂದ, ನಾನು ಯಾರು ಗುರುತಿಸು, ನನ್ನಲ್ಲಿನ ಆಲೋಚನೆಗಳಿಗೆ ಸ್ಪಂದಿಸು ಎಂದು ನಿಮ್ಮನ್ನು ಕೂಗಿ ಕೇಳುತ್ತದೆ. ಹಾಗಿವೆ ಇಲ್ಲಿನ ಕಲ್ಲುಗಳ ಮೇಲಿನ ಚಿತ್ತಾರಗಳು. ಶಿಲ್ಪವನ ಎಂದು ಶೀರ್ಷಿಕೆ ಬರೆದಿರುವ ಕಲ್ಲು, ಒಳಹೋಗಲು ನಿರ್ಮಿಸಿದ ಕಲ್ಲಿನ ದ್ವಾರ, ಸುತ್ತಲೂ ನಿರ್ಮಿಸಿದ ಕಲ್ಲುಗಳನ್ನೇ ವಿಶಿಷ್ಟ ವಿನ್ಯಾಸದಲ್ಲಿ ಜೋಡಿಸಿದ ಸುತ್ತು ಆವರಣ ಗೋಡೆ.
ಒಳ ಬಂದರೆ ಗಮನ ಸೆಳೆಯುವ ಮೊಸಳೆ, ಮೀನು, ಹಂಪಿ ವಿಶ್ವವಿದ್ಯಾಲಯದ ಲಾಂಛನ, ಗಿಡಗಳಲ್ಲಿ ಚಿಲಿಪಿಲಿಗುಟ್ಟುವ ಪಕ್ಷಿಗಳ ಇಂಚರ, ಬಂಡೆಗಲ್ಲುಗಳು ಕೂಡ ವಿವಿಧ ಮುಖವಾಡಗಳನ್ನು ಹೊತ್ತ ದೃಶ್ಯ, ಅಲ್ಲಲ್ಲಿ ಯುವತಿಯ ವಿವಿಧ ಭಾವನೆಗಳ ಚಿತ್ತಾರ, ನೆಲದ ಮೇಲೆ ತನ್ನಷ್ಟಕ್ಕೆ ತಾನೇ ಮಲಗಿದ ಕಲ್ಲೊಂದರ ಮೇಲೆ ಕುಳಿತ ಓತಿಕ್ಯಾತ ಅಥವಾ ಹಲ್ಲಿಯ ಆಕಾರ, ಗಿಡದ ಕೆಳಗಿನ ಹುತ್ತದಲ್ಲಿ ಹಾವು ಇರಬಹುದೇನೋ ಎಂಬಂತೆ ಉಳಿದ ಹುತ್ತಗಳು, ಎಲ್ಲಿ ನೋಡಿದರೂ ಶಿಲ್ಪವನದಲ್ಲಿ ಪ್ರತಿಯೊಂದು ಕಲ್ಲು ಕೂಡ ತನ್ನದೇ ಆದ ಕಥೆ ಹೇಳುವಂತೆ ನಿರ್ಮಾಣವಾಗಿದೆ.
ನಾವು ಎಲ್ಲೆಂದರಲ್ಲಿ ಕಲ್ಲುಗಳನ್ನು ಅಂದಗೆಡಿಸಿ ವಿಕೃತಿ ಮೆರೆಯುವ ಜನರನ್ನು ಕಾಣುತ್ತೇವೆ. ಆದರೆ ಇಲ್ಲಿ ಕಡಿದಾದ ಬೆಟ್ಟದಲ್ಲಿ ತನ್ನಷ್ಟಕ್ಕೆ ತಾನೇ ಬಿದ್ದಿರುವ ಕಲ್ಲು ಕೂಡ ಚರಿತ್ರೆ ಹೇಳುವಂತೆ ಶಿಲ್ಪವನ ನಿರ್ಮಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದರೆ ಇತ್ತ ಬರದೇ ಹೋಗಬೇಡಿ ಎನ್ನುಷ್ಟು ಇದು ಅರ್ಥ ಪೂರ್ಣವಾಗಿದೆ.