ನಾಡಿನ ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ ಅವರು ಬುಧವಾರ (ಸೆಪ್ಟೆಂಬರ್ 24) ನಿಧನರಾಗಿದ್ದಾರೆ. 94 ವರ್ಷದ ಬೈರಪ್ಪ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.
ಭೈರಪ್ಪ ಅವರು ಪರ್ವ, ಆವರಣ, ಗೃಹಭಂಗ ಸೇರಿದಂತೆ ಅನೇಕ ಕಾದಂಬರಿಗಳನ್ನು ಬರೆದಿದ್ದರು. ಭೈರಪ್ಪ ಅವರು ಹಾಸನ ಜಿಲ್ಲೆಯ ಸಂತೇಶಿವಾರ ಗ್ರಾಮದವರು. ತಮ್ಮ ಸ್ವಗ್ರಾಮದ ಕೆರೆಗಳಿಗೆ ನೀರು ತುಂಬಿಸಲು ಕೂಡ ಶ್ರಮಿಸಿದ್ದರು. ಬಾಲ್ಯದಲ್ಲಿ ಕಷ್ಟದಲ್ಲೇ ಬೆಳೆದು ವಿದ್ಯಾಭ್ಯಾಸ ಮಾಡಿದ್ದರು. ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಅವರ ಓದುಗ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಆದರೆ, ಜ್ಞಾನಪೀಠ ಪ್ರಶಸ್ತಿಗೆ ಪರ್ಯಾಯವಾದ ಸರಸ್ವತಿ ಸಮ್ಮಾನ್ ಪ್ರಶಸ್ತಿ ಭೈರಪ್ಪ ಅವರಿಗೆ ಬಂದಿತ್ತು.
ಡಾ.ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಬೈರಪ್ಪ ಅವರಿಗೆ ಸಲ್ಲುತ್ತದೆ.
ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರ ಕಾದಂಬರಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ. ಜ್ಞಾತಕಲಾವಿದರಾದ ಭೈರಪ್ಪನವರ ಕಾದಂಬರಿಗಳ ಕಥಾವಸ್ತು ಮಾನವಸಹಜ ಸಂವೇದನಗಳ ಸುತ್ತ ಹೊಸೆದುಕೊಂಡಿರುತ್ತವೆ. ತಮ್ಮ ತತ್ತ್ವಶಾಸ್ತ್ರ ಮತ್ತು ಸಂಸ್ಕೃತಿಯ ಆಳವಾದ ಅಧ್ಯಯನದೊಂದಿಗೆ, ಬಾಲ್ಯದ ಗ್ರಾಮೀಣ ಜೀವನ ಮತ್ತು ಮಹಾನಗರದ ಬದುಕನ್ನು ಅವರು ಹತ್ತಿರದಿಂದ ಕಂಡವರು.
ಅಧ್ಯಯನ ಮತ್ತು ಜೀವನಾನುಭವ ಮಿಳಿತಗೊಂಡು ಸೃಷ್ಟಿಯಾಗುವ ಅವರ ಕಾದಂಬರಿಯ ಪಾತ್ರಗಳು ತಮ್ಮ ಬೇರುಗಳನ್ನು ಭಾರತೀಯ ನೆಲದಲ್ಲಿ ಕಂಡುಕೊಳ್ಳುತ್ತವೆ.
ಕರ್ನಾಟಕ ಆದಿಯಾಗಿ ಭಾರತ ಮತ್ತು ವಿದೇಶಗಳಲ್ಲೂ ಅವರ ಕಾದಂಬರಿಗಳ ಕುರಿತಾದ ವಿಚಾರಗೋಷ್ಠಿಗಳು ನಡೆದು, ಅವರ ಕಾದಂಬರಿಗಳ ಅಧ್ಯಯನ ಗ್ರಂಥ ಸಂಪುಟಗಳು ಹೊರಬಂದಿವೆ. ಭೈರಪ್ಪನವರ ಕಾದಂಬರಿಗಳು ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ ಪಠ್ಯಗಳಾಗಿ ಸ್ಥಾನ ಪಡೆದಿರುವುದಲ್ಲದೆ, ೨೦ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನದ ವಿಷಯವೂ ಆಗಿವೆ.
ಭೈರಪ್ಪನವರ ೨೪ ಕಾದಂಬರಿಗಳನ್ನೂ ಹಾಗೂ ಸಾಹಿತ್ಯವಿಮರ್ಶೆ, ಸೌಂದರ್ಯಮೀಮಾಂಸೆ ಮತ್ತು ಸಂಸ್ಕೃತಿಯ ಕುರಿತಾಗಿ ೫ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಬಹುತೇಕ ಕಾದಂಬರಿಗಳು ಭಾರತದ ಹದಿನಾಲ್ಕು ಭಾಷೆಗಳಿಗೂ ಅನುವಾದಗೊಂಡು, ಆರು ಕಾದಂಬರಿಗಳು ಇಂಗ್ಲೀಷಿಗೆ ಅನುವಾದಗೊಂಡಿವೆ.
ಭೈರಪ್ಪ ಅವರು ಮೂರು ದಶಕಳಿಗೂ ಹೆಚ್ಚು ಕಾಲ ಎನ್.ಸಿ.ಈ.ಆರ್.ಟಿ ಯಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಭೈರಪ್ಪನವರು ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತಾಸಕ್ತರಾಗಿದ್ದು, ಚಿತ್ರ ಮತ್ತು ಶಿಲ್ಪಕಲೆಯಲ್ಲೂ ಅಭಿರುಚಿ ಹೊಂದಿದ್ದರು. ಬಾಲ್ಯದಿಂದಲೇ ಪ್ರವಾಸದ ಗೀಳು ಹತ್ತಿಸಿಕೊಂಡಿದ್ದ ಅವರು, ಉತ್ತರ ಮತ್ತು ದಕ್ಷಿಣ ದೃವಗಳೂ ಒಳಗೊಂಡಂತೆ ವಿಶ್ವದ ಏಳೂ ಭೂಖಂಡಗಳಲ್ಲಿ ಪ್ರವಾಸ ಮಾಡಿದ್ದವರು.
ಪ್ರಶಸ್ತಿಗಳು:
- ಕೇಂದ್ರ ಸರ್ಕಾರದ ಪದ್ಮಶ್ರೀ, ೨೦೧೬
- ಮಮೋನಿ ರೈಸೊಂ ಗೋಸ್ವಾಮಿ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ಅಸ್ಸಾಮ್ ಸಾಹಿತ್ಯ ಸಭಾ, ೨೦೧೬
- ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ೨೦೧೫
- ಸಾಹಿತ್ಯ ಅಕಾಡೆಮಿ ಫೆಲೋಶಿಪ್, ೨೦೧೫
- ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ, ೨೦೧೪
- ವಾಗ್ವಿಲಾಸಿನಿ ಪುರಸ್ಕಾರ್ (ದೀನನಾಥ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ), ೨೦೧೨
- ನಾಡೋಜ ಪ್ರಶಸ್ತಿ, ೨೦೧೧
- ಸರಸ್ವತಿ ಸಮ್ಮಾನ್ ಪ್ರಶಸ್ತಿ (ಮಂದ್ರ ಕಾದಂಬರಿಗೆ), ೨೦೧೦
- ಎನ್ ಟಿ ಆರ್ ರಾಷ್ಟ್ರೀಯ ಪ್ರಶಸ್ತಿ, ೨೦೦೭
- ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟು, ೨೦೦೭
- ಪಂಪ ಪ್ರಶಸ್ತಿ, ೨೦೦೫
- ಎಸ್.ಆರ್. ಪ್ರಶಸ್ತಿ, ೨೦೦೨
- ಸಾಮಾನ್ಯ ಜ್ಞಾನ ಪ್ರಶಸ್ತಿ, ೨೦೦೨
- ಗೊರೂರು ಪ್ರಶಸ್ತಿ, ೨೦೦೦
- ಗ್ರಂಥಲೋಕ, ವರ್ಷದ ಅತ್ಯುತ್ತಮ ಸಾಹಿತ್ಯ ಕೃತಿ, ಸಾಕ್ಷಿ, ೧೯೯೮
- ಭಾರತೀಯ ಭಾಷಾ ಪರಿಷತ್ ಸಂವತ್ಸರ ಪುರಸ್ಕಾರ್, ಕಲ್ಕತ್ತ, (ತಂತು ಕಾದಂಬರಿಗೆ), ೧೯೯೬ – ೯೭
- ಮಾಸ್ತಿ ಸಾಹಿತ್ಯ ಪ್ರಶಸ್ತಿ, ೧೯೯೬
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೫
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಕಾದಂಬರಿಗೆ), ೧೯೭೫
- ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಂಶವೃಕ್ಷ ಕಾದಂಬರಿಗೆ), ೧೯೬೬
- ರಾಷ್ಟ್ರೀಯ ಪ್ರಾಧ್ಯಾಪಕ (ನ್ಯಾಷನಲ್ ಪ್ರೊಫೆಸರ್)
- ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ
ಕಾದಂಬರಿ ಆಧಾರಿತ ಚಲನಚಿತ್ರಗಳಿಗೆ ದೊರೆತ ಪ್ರಶಸ್ತಿಗಳು
- ಮುಂಬೈ ಅಂತಾರಾಷ್ಟ್ರೀಯ ಸಿನಿಮಾ ಉತ್ಸವ MAMI – ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ , ನಾಯಿ ನೆರಳು, ೨೦೦೭
- ಓಶಿಯಾನ್’ಸ್ ಏಷ್ಯಾ ಫಿಲಂ ಫೆಸ್ಟಿವಲ್, CINEFAN, ಜೂರಿ ಪ್ರಶಸ್ತಿ – ಭಾರತೀಯ ಚಲನಚಿತ್ರ ವಿಭಾಗ, ನಾಯಿ ನೆರಳು, ೨೦೦೬
- ಕರಾಚಿ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ, ನಾಯಿ ನೆರಳು, ೨೦೦೬
- ಕೇಂದ್ರ ಸರ್ಕಾರದ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ, ಮತದಾನ (ಕನ್ನಡ), ೨೦೦೧
- ಕೇಂದ್ರ ಸರ್ಕಾರದ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ, ಗೋಧೂಳಿ (ಹಿಂದಿ), ೧೯೭೭
- ಕೇಂದ್ರ ಸರ್ಕಾರದ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ, ವಂಶವೃಕ್ಷ (ಕನ್ನಡ), ೧೯೭೨
ಸಂಶೋಧನೆ ಮತ್ತು ಗೌರವಗಳು
- National Research Professor, ಭಾರತ ಸರ್ಕಾರ, ೨೦೧೪
- ಚೈನಾ ಸರ್ಕಾರದ ಆಮಂತ್ರಣದ ಮೇರೆಗೆ ಭಾರತೀಯ ಸಾಹಿತಿಗಳ ನಿಯೋಗದ ಭಾಗವಾಗಿ ಚೈನಾ ಭೇಟಿ, ೧೯೯೨
- ಅಮೆರಿಕಾದಲ್ಲಿನ ಭಾರತೀಯರ ವಲಸಿಗರ ಸಾಂಸ್ಕೃತಿಕ ಸಮಸ್ಯೆಗಳ ಅಧ್ಯಯನಕ್ಕೆ ಫೋರ್ಡ್ ಫೌಂಡೇಶನ್ ಪ್ರಾಯೋಜನೆ, ೧೯೮೩
- ಬ್ರಿಟಿಷ್ ಕೌನ್ಸಿಲ್ ಫೆಲೋಶಿಪ್, ಯೂನಿವರ್ಸಿಟಿ ಆಫ್ ಲಂಡನ್, ೧೯೭೭





