ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಯುವ ದಸರಾ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆಯಿತು.
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಚಾಲನೆ ನೀಡಿದರು.
ನಗರದ ಹೊರಹೊಲಯದ ಉತ್ತನಹಳ್ಳಿಯ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ ಸಮೀಪದ ಮೈದಾನದಲ್ಲಿ ಯುವ ದಸರಾ ಉದ್ಘಾಟಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಚಿವರು, ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುವ, ಸೌಹಾರ್ದತೆಯನ್ನು ಸಾರುವ, ಜನರ ಜೀವನದ ಮಜಲುಗಳು, ಸಾಂಸ್ಕೃತಿಕ ಜೀವನ, ನಡೆ-ನುಡಿ ಅಭಿವ್ಯಕ್ತಿಗೊಳಿಸುವ ಆಚರಣೆಯೇ ದಸರಾ ಎಂದು ಹೇಳಿದರು.
ಯುವ ಜನತೆಯು ಸಾಂಸ್ಕತಿಕ, ಜಾನಪದ ಕಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಾಂಸ್ಕೃತಿಕ ನಾಯಕತ್ವ ಬೆಳೆಸಿಕೊಂಡು ದೇಶ ವಿದೇಶದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಂವಿಧಾನ ಆಶಯ ಬಲವಾಗಿ ನೆಲೆಯೂರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಯುವ ದಸರಾ ಕಾರ್ಯಕ್ರಮಗಳಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ವೈಯಕ್ತಿಕ ಆಸಕ್ತಿಯಿಂದ ಹಗಲು-ರಾತ್ರಿ ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿರುವ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಹಾಡುಗಳನ್ನು ಹಾಸುವ ಮೂಲಕ ಗಮನ ಸೆಳೆದರು. ಅಲ್ಲದೆ, ಯುವ ದಸರಾ ಕಾರ್ಯಕ್ರಮದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯು ಬರದಂತೆ, ಶಾಂತಿ, ಶಿಸ್ತಿನಿಂದ ಯುವ ಜನತೆ ಕಾರ್ಯಕ್ರಮವನ್ನು ಸವಿದು ಪೋಲೀಸ್ ಹಾಗೂ ಆಧಿಕಾರಿಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.
ಶಾಸಕರಾದ ಕೆ.ಹರೀಶ್ ಗೌಡ, ರವಿಶಂಕರ್ ಡಿ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್, ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಯುಕೇಶ್ ಕುಮಾರ್ ಮತ್ತಿತರರು ಹಾಜರಿದ್ದರು.