ಹೊಸ ವರ್ಷದಲ್ಲಿ ನೀವು ಸಹ ಫುಡ್ಬಿಸ್ನೆಸ್ಆರಂಭಿಸಿ, ಹೆಸರು/ಹಣ ಗಳಿಸಬಾರದೇಕೆ…..? ಇಲ್ಲಿವೆ ಕೆಲವು ಸಲಹೆಗಳು……!

ನಿಮ್ಮದೇ ಸ್ವಂತ ಬಿಸ್‌ ನೆಸ್‌ ಇದ್ದರೆ, ಅದರಲ್ಲಿ ನಿರಂತರ ಕೆಲಸ ಮಾಡುತ್ತಲೇ ಇರಬೇಕೆಂಬ ಆಸೆ ಎಂಥವರಿಗಾದರೂ ಹೆಚ್ಚುತ್ತದೆ. ಇಂಥದ್ದರಲ್ಲಿ ಮನೆಯ ಸದಸ್ಯರೂ ನಿಮ್ಮ ಕೈ ಜೋಡಿಸಿದರೆ ಅದಿನ್ನೂ ಸೊಗಸು! ಮನೆಯಿಂದಲೇ ದೂರದ ಆಫೀಸ್‌ ಗಳಿಗೆ ತಿಂಡಿ/ಊಟ ಕಳಿಸಿಕೊಡುವ ದಂಧೆ ಈ ಪರಿಯದಾಗಿದೆ. ಈ ದಂಧೆಯಲ್ಲಿ ಶುಚಿಕರವಾದ ಆಹಾರವನ್ನು, ರುಚಿಯಾಗಿ ತಯಾರಿಸಿ, ಸಕಾಲಕ್ಕೆ ಒದಗಿಸುವುದೇ ದೊಡ್ಡ ಸವಾಲು!

ಪ್ರತಿದಿನ ನೀವು ಹೀಗೆ ಕಳಿಸಿಕೊಡುವ ತಿಂಡಿ/ಊಟ ಎಲ್ಲರಿಗೂ ಇಷ್ಟ ಆಗುವಂತಿರಬೇಕು, ಯಾವುದೂ ವಾಪಸ್‌ ಬರಬಾರದು. ನಗರದ ಎಷ್ಟೋ ಹೆಂಗಸರು ಇಂಥ ಆಹಾರದ ವ್ಯಾಪಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ವಿ ಎನಿಸಿದ್ದಾರೆ. ಒಂದು ಚಿಕ್ಕ ಶೀಟ್‌ ಮನೆಯಾದರೂ ಸರಿ, ಕಾಯಕವೇ ಕೈಲಾಸ ಎಂದು ನಿಷ್ಠೆಯಿಂದ ಇದನ್ನು ನಿಭಾಯಿಸುವ ಮನಸ್ಸಿರಬೇಕು, ಅಷ್ಟೆ. ಆರಂಭಕ್ಕೆ 10 ಮಂದಿಗೆಂದೇ ರೆಡಿ ಮಾಡಿ, ಬೇಡಿಕೆ ಹೆಚ್ಚುತ್ತಾ ಅದು 50-100 ದಾಟುತ್ತದೆ.

ಬೆಳಗಿನ ತಿಂಡಿಗೆ ಇಡ್ಲಿ, ರೈಸ್‌ ಭಾತ್‌, ಉಪ್ಪಿಟ್ಟು, ದೋಸೆ, ವಡೆ ಇತ್ಯಾದಿ ಒದಗಿಸಬಹುದು. ಮಧ್ಯಾಹ್ನಕ್ಕೆ ಚಪಾತಿ, ಪರೋಟ, ಅನ್ನ, ಸಾಂಬಾರು, ಪಲ್ಯ, ರಸಂ, ಕೂಟು, ಹಪ್ಪಳ, ಉಪ್ಪಿನಕಾಯಿ ಇತ್ಯಾದಿ ನೀಡಬಹುದು. ಹಬ್ಬಗಳು ಬಂದಾಗ ಸಂದರ್ಭಕ್ಕೆ ತಕ್ಕಂತೆ ಸಿಹಿ ಕೊಡಬಹುದು. ಹೀಗೆ ನಿಧಾನವಾಗಿ ನಿಮ್ಮ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದಂತೆ, ನಿಮ್ಮ ನೆರೆಹೊರೆಯ ಹೆಂಗಸರನ್ನೂ ಈ ಕೆಲಸಕ್ಕೆ ಸೇರಿಸಿಕೊಂಡು, ಅವರಿಗೊಂದು ಸಂಬಳ ನಿಗದಿಪಡಿಸಬಹುದು. ಈ ರೀತಿ 50-100 ಜನರಿಗೆ ಸಕಾಲಕ್ಕೆ ಆಹಾರ ಒದಗಿಸುವ ಬಿಸ್‌ ನೆಸ್‌ ಅಚ್ಚುಕಟ್ಟಾಗಿ ನಿಮ್ಮ ಕೈ ಹತ್ತುತ್ತದೆ. ಇಲ್ಲಿ ಅಡುಗೆಗೆ 3-4 ಜನ ಬೇಕೇಬೇಕು. ಇದನ್ನು ಬೆಳಗ್ಗೆ 7 ರಿಂದ ರಾತ್ರಿ 10ರವರೆಗೆ ನಿಭಾಯಿಸಬಹುದು.

ಉತ್ತಮ ಬಿಸ್‌ ನೆಸ್‌ ವಿನುತಾಳನ್ನು ಗಮನಿಸಿ. ಮೊದ ಮೊದಲು ಅವಳ ಅತ್ತೆಮನೆಯವರು ಇಂಥದ್ದನ್ನು ಬೇಡವೆಂದೇ ಆಕ್ಷೇಪಿಸಿದರು. ಹಣದ ಮುಗ್ಗಟ್ಟು ಅವರನ್ನು ಒಪ್ಪಿಸಿತು. ಮುಖ್ಯವಾಗಿ ಕೊರೋನಾ ಕಾಲದಲ್ಲಿ ಖಾಸಗಿ ನೌಕರಿಯಲ್ಲಿದ್ದ ಪತಿಯ ಸಂಬಳ ಅರ್ಧ ಪಾಲು ನಿಂತೇ ಹೋದಾಗ, ವಿನುತಾ ದೃಢ ಮನಸ್ಸು ಮಾಡಿ ಈ ಬಿಸ್‌ ನೆಸ್‌ ಶುರು ಮಾಡಿಯೇಬಿಟ್ಟಳು.

ವಿನುತಾ ಮೊದಲಿನಿಂದಲೂ ಅತ್ಯುತ್ತಮ ಆಹಾರ ತಯಾರಿಸುವುದರಲ್ಲಿ ಪಳಗಿದ ಕೈ. ಕ್ರಮೇಣ ಈ ಬಿಸ್‌ ನೆಸ್‌ ಕುದುರಿ, ಜನರಿಗೆ ಇವಳ ಕೈ ರುಚಿ ಹಿಡಿಸುತ್ತಿದ್ದಂತೆ, ಹೊಸ ಹೊಸ ವ್ಯಂಜನ ತಯಾರಿಸಲು, ಊಟತಿಂಡಿಯಲ್ಲಿ ವೈವಿಧ್ಯತೆ ಒದಗಿಸಲು ಸಾಧ್ಯವಾಯಿತು. ಕ್ರಮೇಣ ಬಿಡುವಿದ್ದಾಗ ಪತಿ, ಮೈದುನ ನೆರವಿಗೆ ಬಂದರು. ಅತ್ತೆ ನಾದಿನಿ ಸಹ ಸಪೋರ್ಟ್‌ ಮಾಡಿದರು. ಅಡುಗೆಗೆ ಬೇಕಾದ ಸಾಮಗ್ರಿ ತರುವುದು, ರೆಡಿಯಾದ ಆಹಾರ ತಲುಪಿಸುವುದು ಇತ್ಯಾದಿ ಎಲ್ಲಾ ಕೆಲಸಗಳನ್ನೂ ಹಂಚಿಕೊಂಡು ಮಾಡತೊಡಗಿದರು.

ಈ ರೀತಿ ವಿನುತಾ ಪ್ರತಿ ತಿಂಗಳೂ 50 ಸಾವಿರದ ಸಂಪಾದನೆಗೆ ದಾರಿ ಮಾಡಿಕೊಂಡಳು. ತನ್ನ ಮನೆ ಹತ್ತಿರದ 10-12 ಕಿ.ಮೀ. ವಲಯದಲ್ಲಿ ಎಲ್ಲಾ ಕಡೆ ನಿಯಮಿತವಾಗಿ  ಊಟ/ತಿಂಡಿ ಸಪ್ಲೈ ಮಾಡತೊಡಗಿದಳು.

ಹೆಸರೂ ಹಣ ಎರಡೂ ಉಂಟು!

ಈ ಕೆಲಸದಲ್ಲಿ ಗಮನ ಇರಿಸಬೇಕಾದುದು ಎಂದರೆ, ಜನರ ರುಚಿ ಅಭಿರುಚಿ ಬಗ್ಗೆ ಸದಾ ಅಪ್‌ ಡೇಟ್‌ ಆಗುತ್ತಿರಬೇಕು. ಸದಾ ಉತ್ತಮ ಗುಣಮಟ್ಟದ ಎಣ್ಣೆ, ಮಸಾಲೆ, ಅಡುಗೆ ಪದಾರ್ಥಗಳನ್ನೇ ಕೊಳ್ಳಿರಿ. ಎಲ್ಲಕ್ಕೂ ಮುಖ್ಯವಾದುದು ಎಂದರೆ ಶುಚಿತ್ವ ಶುಭ್ರತೆಯ ಕಡೆಗೆ ಮಹತ್ವ ಕೊಡಬೇಕು. ನಾವು ಕೊಳ್ಳುವ ತರಕಾರಿಯಿಂದ ಹಿಡಿದು, ಜೊತೆಗೆ ಸಹಕರಿಸುವ ಹೆಂಗಸರ ನೀಟ್ ನೆಸ್‌ ವರೆಗೂ ಎಲ್ಲವೂ ಅಚ್ಚುಕಟ್ಟಾಗಿರಬೇಕು.

ಶಾಲೆ ಕಲಿಯುವ ತನ್ನ ಇಬ್ಬರು ಮಕ್ಕಳು ಮುಂದೆ ಉನ್ನತ ಶಿಕ್ಷಣ ಹೊಂದಲಿ ಎಂಬುದು ವಿನುತಾಳ ಆಸೆ. ಹೀಗಾಗಿ ತನ್ನ ಬಿಸ್ ನೆಸ್‌ ನ್ನು ಸಾಧ್ಯವಿದ್ದಷ್ಟೂ ಅಚ್ಚುಕಟ್ಟಾಗಿ ನಡೆಸುತ್ತಾ, ಹೆಚ್ಚು ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಾ, ಹೆಚ್ಚಿನ ಸಂಪಾದನೆ ಬಗ್ಗೆ ಚಿಂತಿಸುತ್ತಿರುತ್ತಾಳೆ.

ಆರಂಭದಲ್ಲಿ ಕಾನೂನು ಈ ಕಡೆ ತಿರುಗದಿದ್ದರೂ, ಬಿಸ್‌ ನೆಸ್‌ ಸುಧಾರಿಸಿದಂತೆ, ಸ್ವಲ್ಪ ಸ್ಟಾಂಡರ್ಡ್‌ ಆದಾಗ, `ಫುಡ್‌ ಸೇಫ್ಟಿ  ಸ್ಟಾಂಡರ್ಡ್‌ ಇಂಡಿಯಾ ಆ್ಯಕ್ಟ್ 2008′ ಕಾನೂನು ಅನ್ವಯಿಸುತ್ತದೆ. ಹೀಗಾಗಿ ನಿಮ್ಮ ಬಿಸ್‌ ನೆಸ್‌ ವಹಿವಾಟನ್ನು ರಿಜಿಸ್ಟರ್ ಮಾಡಿಸಬೇಕಾಗುತ್ತದೆ. ಫುಡ್‌ ಇನ್‌ ಸ್ಪೆಕ್ಟರ್‌ ವೀಕ್ಷಣೆಗೆ ಬಂದಾಗ, ಎಲ್ಲವೂ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಿ.

ಜಿ. ಸುಮಾ 

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ