ದಿನವಿಡೀ ನಡೆದ ಸಂತೋಷ, ಬೇಸರ, ಕೋಪ, ನೋವು, ಗೆಲುವು, ನಿರಾಸೆ—ಇವೆಲ್ಲವನ್ನೂ ಮನದಲ್ಲಿಟ್ಟುಕೊಂಡು ಕೆಲವರು ರಾತ್ರಿ ಹೊತ್ತಿಗೆ ವಾಟ್ಸಪ್ ಸ್ಟೇಟಸ್‌ನಲ್ಲಿ ಹೊರಹಾಕುತ್ತಾರೆ. ನೇರವಾಗಿ ಹೇಳಲಾಗದ ಮಾತುಗಳಿಗೆ ಸ್ಟೇಟಸ್ ಒಂದು ಮೌನ ಮಾತಿನ ಮೈಕ್!
ಒಬ್ಬರು ಬೆಳಗಿನ ಸೂರ್ಯೋದಯದ ಚಿತ್ರ ಹಾಕಿ “ಹೊಸ ದಿನ, ಹೊಸ ಭರವಸೆ" ಎನ್ನುತ್ತಾರೆ; ಇನ್ನೊಬ್ಬರು ಕಾಫಿ ಕಪ್ ಜೊತೆಗೆ “ಕೆಲವು ಸಂಬಂಧಗಳಿಗೆ ಸಕ್ಕರೆಗಿಂತ ತಾಳ್ಮೆ ಬೇಕು” ಎಂದು ಜಾಣ್ಮೆ ತೋರಿಸುತ್ತಾರೆ. ಯಾರಿಗೋ ಮನಸ್ಸು ನೋಯಿಸಿದರೆ, ಹೆಸರು ಹೇಳದೆ ನಾಲ್ಕು ಸಾಲಿನ ಸ್ಟೇಟಸ್ ಹಾಕಿ, “ಇದು ಯಾರಿಗೆ ಹೇಳಿದ್ದು?” ಎಂದು ಎಲ್ಲರೂ ತಲೆಕೆಡಿಸಿಕೊಳ್ಳುವಂತೆ ಮಾಡುತ್ತಾರೆ!
ಕೆಲವರ ಸ್ಟೇಟಸ್‌ಗಳಲ್ಲಿ ಯಶಸ್ಸಿನ ಸಂಭ್ರಮವಿರುತ್ತದೆ, ಕೆಲವರಲ್ಲಿ ಒಂಟಿತನದ ನೆರಳು. ಕೆಲವರು ದೇವರ ಮೇಲಿನ ನಂಬಿಕೆ ಹಂಚಿಕೊಳ್ಳುತ್ತಾರೆ, ಇನ್ನು ಕೆಲವರು ಜೀವನದ ಕಹಿ ಅನುಭವವನ್ನೇ ಸಿಹಿ ಮಾತುಗಳಲ್ಲಿ ಕಟ್ಟಿಕೊಡುತ್ತಾರೆ. ಮತ್ತೆ ಕೆಲವರ ಸ್ಟೇಟಸ್ ನೋಡಿದರೆ“ಇವರು ನಿಜವಾಗಿಯೂ ಚೆನ್ನಾಗಿದ್ದಾರೋ, ಅಥವಾ ನಮಗೆ ಚೆನ್ನಾಗಿದ್ದಾರೆ ಎಂದು ತೋರಿಸುತ್ತಿದ್ದಾರೋ?” ಎಂಬ ಪ್ರಶ್ನೆಯೂ ಮೂಡುತ್ತದೆ.
ಸ್ಟೇಟಸ್ ಹಾಕಿದವರಿಗೆ ಅದು ಮನದ ಭಾರ ಇಳಿಸುವ ದಾರಿ; ನೋಡುವವರಿಗೆ ಕೆಲವೊಮ್ಮೆ ಕುತೂಹಲ, ಕೆಲವೊಮ್ಮೆ ಕಳವಳ, ಕೆಲವೊಮ್ಮೆ ನಗು, ಮತ್ತೆ ಕೆಲವೊಮ್ಮೆ “ಇದು ನನ್ನ ಬಗ್ಗೆಯೇ ಇರಬಹುದಾ?” ಎಂಬ ಅನುಮಾನ!
ಆದರೆ ಒಂದು ಒಳ್ಳೆಯ ಸ್ಟೇಟಸ್ ಯಾರಿಗಾದರೂ ಒಂದು ಕ್ಷಣದ ನೆಮ್ಮದಿ, ಒಂದು ಹೊಸ ಆಲೋಚನೆ ಅಥವಾ ಒಂದು ಸಣ್ಣ ನಗು ನೀಡಬಲ್ಲದು. ಆದ್ದರಿಂದ ನಮ್ಮ ದಿನಚರಿಯ ಪ್ರತಿಯೊಂದು ಭಾವವನ್ನೂ ಸ್ಟೇಟಸ್ ಹಾಕಿ ತೋರುವ ಅಗತ್ಯವಿಲ್ಲ; ಮನಸ್ಸಿಗೆ ನೆಮ್ಮದಿ ಕೊಡುವ ಮಾತುಗಳನ್ನು ಮಾತ್ರ ಹಂಚಿಕೊಂಡರೆ, ನಮ್ಮ ಸ್ಟೇಟಸ್‌ಗೂ ಒಂದು ಸಾರ್ಥಕತೆ ಇರುತ್ತದೆ.
ಏಕೆಂದರೆ ಸ್ಟೇಟಸ್ ಇಪ್ಪತ್ತನಾಲ್ಕು ಗಂಟೆ ಮಾತ್ರ ಉಳಿಯಬಹುದು; ಆದರೆ ಅದರಲ್ಲಿ ಬರೆದ ಒಂದು ಒಳ್ಳೆಯ ಮಾತು, ಯಾರದೋ ಮನಸ್ಸಿನಲ್ಲಿ ಬಹುಕಾಲ ಉಳಿಯಬಹುದು...
ಸುಜಾತಾ ಮಣ್ಣಿಕೇರಿ
ನಾಗಪುರ. ಮಹಾರಾಷ್ಟ್ರ
AC





