ಬೆಳಗಾವಿ ಕರ್ನಾಟಕದ ಸಾಂಸ್ಕೃತಿಕ ಸಂಪದ್ಭರಿತ ಜಿಲ್ಲೆಗಳಲ್ಲೊಂದು. ಉತ್ತರಕ್ಕೆ ಮುಂಬೈಯಿಂದ 500 ಕಿ.ಮೀ. ದಕ್ಷಿಣಕ್ಕೆ ಹುಬ್ಬಳ್ಳಿಯಿಂದ 100 ಕಿ.ಮೀ. ಪೂರ್ವಕ್ಕೆ ಬೆಂಗಳೂರಿನಿಂದ 500 ಕಿ.ಮೀ. ಪಶ್ಚಿಮಕ್ಕೆ ಪಣಜಿಯಿಂದ (ಗೋವಾ) 150 ಕಿ.ಮೀ. ಬೆಂಗಳೂರಿನಿಂದ ಮುಂಬೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ಬೆಳಗಾವಿ ಮೂಲಕ ಹಾದು ಹೋಗುವುದು.

ರೈಲು ಸಂಪರ್ಕ ಹೊಂದಿರುವ ಬೆಳಗಾವಿ, ಸಾಂಬ್ರಾದಲ್ಲಿ ವಿಮಾನ ನಿಲ್ದಾಣವನ್ನೂ ಹೊಂದಿದೆ. ಉತ್ತರ ಕರ್ನಾಟಕದ ಉಕ್ಕಿನ ಕೋಟೆ ಎಂದೇ ಹೆಸರಾಗಿರುವ ಮಲೆನಾಡಿನ ಪ್ರಾಕೃತಿಕ ಸಿರಿಯನ್ನು ಹೊಂದಿದೆ. ತನ್ನ ಮಡಿಲಲ್ಲಿ ಅನೇಕ ಪ್ರವಾಸಿ ತಾಣಗಳನ್ನು ಅಡಗಿಸಿಕೊಂಡ ಬೆಳಗಾವಿಯಲ್ಲಿ ಕೋಟೆ, ಕೋಟೆಯ ಕೆರೆ, ದುರ್ಗ ದೇವಾಲಯ, ಕೆ.ಎಲ್.ಇ. ಸಂಸ್ಥೆ, ರಾಮಕೃಷ್ಣ ಆಶ್ರಮ, ಕುಮಾರ ಗಂಧರ್ವ ರಂಗಮಂದಿರ, ಕಮಲ ಬಸದಿ, ಮಿಲಿಟರಿ ಮಹದೇವ ಮಂದಿರ, ಹಿಂಡಲಗಾ ಕಾರಾಗೃಹ, ಕಪಿಲೇಶ್ವರ ದೇಗುಲ, ಕನ್ನಡ ಸಾಹಿತ್ಯ ಭವನ ಒಂದೇ ಎರಡೇ ಹಲವು ಹತ್ತು ವಿಶಿಷ್ಟ ತಾಣಗಳನ್ನು ಹೊಂದಿದ ಬೆಳಗಾವಿಗೆ 2012ರಲ್ಲಿ ಸುವರ್ಣಸೌಧ ಲೋಕಾರ್ಪಣೆಗೊಳ್ಳುವ ಮೂಲಕ ಮತ್ತೊಂದು ದಾಖಲಾರ್ಹ ಸ್ಥಳದೊಂದಿಗೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ.

ಸಮಗ್ರ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ 50 ವರ್ಷಗಳ ಸವಿನೆನಪಿಗಾಗಿ ರಾಜ್ಯದ ಉತ್ತರದ ತುತ್ತತುದಿಯಲ್ಲಿರುವ ಕುಂದಾನಗರಿಯಲ್ಲಿ ನಿರ್ಮಿಸಲಾಗಿರುವ ಸುವರ್ಣಸೌಧ ಲೋಕಾರ್ಪಣೆಗೊಂಡಿದೆ. ಇದನ್ನು 11ನೇ ಅಕ್ಟೋಬರ್‌ 2012ರಂದು ಪ್ರಣವ್ ಮುಖರ್ಜಿ ಉದ್ಘಾಟಿಸಿದರು.

ರಾಜ್ಯದ ಹೆಮ್ಮೆಯ ಸಂಕೇತವಾಗುವ ಮೂಲಕ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಇದು ಸಾರಿ ಹೇಳುವಂತಿದೆ.

ಬೆಳಗಾವಿಯಲ್ಲಿ ಅಧಿವೇಶನ ನಡೆಸಲೇಬೇಕು ಎಂಬ ಈ ಭಾಗದ ಬಹುದಿನಗಳ ಧ್ವನಿಗೆ ಕೊನೆಗೂ ಶಾಶ್ವತ ಪರಿಹಾರ ಸುವರ್ಣ ವಿಧಾನಸೌಧದ ಮೂಲಕ ಸಿಕ್ಕಿದೆ. 2006 ಸೆಪ್ಟೆಂಬರ್‌ 25-29ರವರೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಇಂತಹ ದೊಡ್ಡ ಕಟ್ಟಡ ನಿರ್ಮಾಣದ ಕನಸು ಮೊಳಕೊಡೆಯಿತು.

ರಾಜ್ಯ ಸರ್ಕಾರ 2006ರ ಸೆಪ್ಟೆಂಬರ್‌ 25-29ರವರೆಗೆ ವಿಧಾನಮಂಡಲ ಅಧಿವೇಶನವನ್ನು ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜವಾಹರಲಾಲ್ ‌ನೆಹರು ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ನಡೆಸಿತು. ಉತ್ತರ ಕರ್ನಾಟಕದ ಇತಿಹಾಸದಲ್ಲಿಯೇ ಮೈಲಿಗಲ್ಲಾದ ಪ್ರಥಮ ಅಧಿವೇಶನದಲ್ಲಿ ಪ್ರತಿ ವರ್ಷ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಸಲು ತೀರ್ಮಾನಿಸಲಾಯಿತು. ಅದರಂತೆ ಅಧಿವೇಶನ ನಡೆಸಲು ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿದ ಸುಸಜ್ಜಿತ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಯಿತು.

ವಿಧಾನಮಂಡಲ ಅಧಿವೇಶನದ ತೀರ್ಮಾನವನ್ನು ಕರ್ನಾಟಕ ರಾಜ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕೈಗೊಂಡಿದ್ದರಿಂದ ಈ ಕಟ್ಟಡಕ್ಕೆ `ಸುವರ್ಣ ವಿಧಾನಸೌಧ’ ಎಂದು ಹೆಸರಿಡಲಾಯಿತು. ವಿಧಾನಮಂಡಲದ ತೀರ್ಮಾನದಂತೆ ಟಿಳಕಾಡಿಯ ವ್ಯಾಕ್ಸಿನ್‌ ಡಿಪೋದಲ್ಲಿ ಸುವರ್ಣಸೌಧ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿದರು. ಆ ಜಾಗ ನಗರ ಮಧ್ಯದಲ್ಲಿರುವುದರಿಂದ ಅನೇಕರು ಅಲ್ಲಿ ಸುವರ್ಣಸೌಧ ನಿರ್ಮಿಸದೇ ಬೇರೊಂದು ಸ್ಥಳದಲ್ಲಿ ನಿರ್ಮಿಸುವಂತೆ ಕೋರಿದರು.

ನಂತರ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಹಲಗಾಬಸ್ತಾಡ ಪ್ರದೇಶದ ಗುಡ್ಡವನ್ನು ಈ ಕಟ್ಟಡಕ್ಕೆ ಆಯ್ಕೆ ಮಾಡಲಾಯಿತು. 2009ರಲ್ಲಿ ಎರಡನೇ ಬಾರಿಗೆ ವಿಧಾನಮಂಡಲದ ಅಧಿವೇಶನ ನಡೆದ ಸಂದರ್ಭದಲ್ಲಿ ಸುವರ್ಣಸೌಧ

ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಒಟ್ಟು 127 ಎಕರೆ ಆವರಣದೊಳಗೆ 60,398 ಚದರ ಮೀಟರ್ ವಿಸ್ತೀರ್ಣದಲ್ಲಿ ಈ ಸೌಧದ ಕಾಮಗಾರಿಯನ್ನು 232 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಬಿ.ಜಿ. ಶಿರ್ಕೆ ಕನ್‌ಸ್ಟ್ರಕ್ಷನ್‌ ಕಂಪನಿಗೆ ನೀಡಲಾಯಿತು. 2009ರ ಜುಲೈ 10 ರಿಂದ ಕಾಮಗಾರಿ ಪ್ರಾರಂಭವಾಯಿತು.

ಬೆಳಗಾವಿಯಿಂದ 9 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಹಲಗಾಬಸ್ತಾಡ ಗ್ರಾಮದ ಬೆಟ್ಟದ ಮೇಲೆ ಹೆಸರುಘಟ್ಟದ ಕಲ್ಲು ನೆಲ ಹಾಸಿಗೆ, ಖಾನಾಪುರದ ಗ್ರಾನೈಟ್‌, ಮರಗೆಲಸಕ್ಕೆ ಬರ್ಮಾ ಟೀಕ್‌ ವುಡ್‌ ಹಾಗೂ ಬಹುತೇಕ ಪರಿಸರಸ್ನೇಹಿ ಕಟ್ಟಡ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾದ ಸುವರ್ಣಸೌಧ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಕೂಡಿದೆ.

ಬೇಸ್‌ಮೆಂಟ್‌, ನೆಲಮಹಡಿ ಸೇರಿದಂತೆ 3 ಮಹಡಿಗಳನ್ನು ಹೊಂದಿರುವ ಈ ಕಟ್ಟಡದ ಎತ್ತರ 22 ಮೀಟರ್‌, ಬೆಂಗಳೂರಿನ ವಿಧಾನಸೌಧ 200 ಮೀಟರ್‌ ಉದ್ದವಿದ್ದರೆ ಸುವರ್ಣಸೌಧ 150 ಮೀಟರ್‌ ಉದ್ದವಿದೆ. ಇದರ ಮುಖ್ಯ ದ್ವಾರ ಪಶ್ಚಿಮ ದಿಕ್ಕಿನಲ್ಲಿದ್ದು ಇದರ ಎಡಭಾಗವನ್ನು `ಎ’ ಬ್ಲಾಕ್‌ ಎಂದೂ ಕೌನ್ಸಿಲ್ ‌ಹಾಲ್‌, ಮಧ್ಯ ಭಾಗವನ್ನು `ಬಿ’ ಬ್ಲಾಕ್‌ ಎಂದೂ ಸೆಂಟ್ರಲ್ ಹಾಲ್‌, ಬಲಭಾಗವನ್ನು `ಸಿ’ ಬ್ಲಾಕ್‌ ಎಂದೂ ಇಲ್ಲಿ ವಿಧಾನಸಭೆ ಅಧಿವೇಶನ ಸಭಾಂಗಣ ನಿರ್ಮಿಸುವ ಮೂಲಕ ಮೂರೂ ಮಹಡಿಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ.

450 ಆಸನ ಹೊಂದಿರುವ ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಅಧಿವೇಶನ ಸಹ ಮಾಡಬಹುದು. 300 ಆಸನವನ್ನು ವಿಧಾನಸಭಾ ಅಧಿವೇಶನ ಸಭಾಂಗಣ, ಉಪ ಸಮಿತಿಗಾಗಿ 14 ಮೀಟಿಂಗ್‌ ಹಾಲ್‌ಗಳು, 300 ಆಸನಗಳ ಸಭಾಗೃಹ, ಮೊದಲನೇ ಮಹಡಿಯಲ್ಲಿ  3 ಸಭಾಂಗಣಗಳಿದ್ದು ಮೂರನೆಯ ಮಹಡಿಯಲ್ಲಿ ಮುಖ್ಯಮಂತ್ರಿಗಳ ಚೇಂಬರ್‌, ಕ್ಯಾಬಿನೆಟ್‌ ಹಾಲ್‌, ಸಭಾಗೃಹ ನಿರ್ಮಿಸಲಾಗಿದೆ. ಇವನ್ನು ನೆಲಮಹಡಿಯಲ್ಲಿ ಬ್ಯಾಂಕ್ವೆಟ್‌ ಹಾಲ್ ಇದೆ.

suvarna-soudha1

ಇವುಗಳ ಜೊತೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಅಧಿವೇಶನ ಸಭಾಂಗಣದಲ್ಲಿ ಪ್ರೇಕ್ಷಕರ ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ ಅಳವಡಿಸಲಾಗಿದ್ದು, ಇಲ್ಲಿನ ಧ್ವನಿವರ್ಧಕಗಳು ನೂತನ ತಂತ್ರಜ್ಞಾನದ ಮೂಲಕ ಭಾಷಾಂತರಿಸುವ ಸೌಕರ್ಯ ಅಳವಡಿಸಲಾಗಿದೆ. ಇಲ್ಲಿ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ, 9 ಲಿಫ್ಟ್ ಗಳು, ಅಕಾಸ್ಟಿಕ್‌ ಇಂಟೀರಿಯರ್ಸ್‌, ಎನರ್ಜಿ ಎಫಿಶಿಯಂಟ್‌ ಲೈಟಿಂಗ್‌, ಅಗ್ನಿ ನಂದಿಸುವ ವ್ಯವಸ್ಥೆ, ಇರಿಗೇಶನ್‌ ಸಿಸ್ಟಂ ಒಳಗೊಂಡ ಲ್ಯಾಂಡ್‌ ಸ್ಕೇಪಿಂಗ್‌, ಮಳೆ ನೀರು ಕೊಯ್ಲು ಮತ್ತಿತರ ಸೌಕರ್ಯ ಕಲ್ಪಿಸಿರುವುದು ಹೆಮ್ಮೆಯ ಸಂಗತಿ. ಪಾರ್ಲಿಮೆಂಟ್‌ನಲ್ಲಿರುವಂತೆ ಎಲೆಕ್ಟ್ರಾನಿಕ್‌ ಮತದಾನ ವ್ಯವಸ್ಥೆಯನ್ನು ಈ ಸೌಧ ಒಳಗೊಂಡಿದೆ.

ವಿಧಾನಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸಭಾಪತಿಗಳು, ಉಪಸಭಾಪತಿಗಳಿಗೆ ಪ್ರತ್ಯೇಕ ಕೊಠಡಿಗಳು ಇಲ್ಲಿದ್ದು ವಿಧಾನಸಭೆ ಮತ್ತು ವಿಧಾನಪರಿಷತ್‌ ಸಚಿವಾಲಯ ಮುಖ್ಯಮಂತ್ರಿಗಳ ಕೊಠಡಿ, ಕಛೇರಿ ಕೊಠಡಿ ಸೇರಿದಂತೆ 38 ಕೊಠಡಿಗಳನ್ನು ಕೂಡ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ 6 ಚಿಕ್ಕಗೋಪುರಗಳಿವೆ. ಮಧ್ಯದಲ್ಲಿ ಮುಖ್ಯ ಗೋಪುರವಿದ್ದು ಗ್ರಾನೈಟ್‌ ಕಲ್ಲಿನಲ್ಲಿ ಕಲಾತ್ಮಕ ಹಾಗೂ ಅಲಂಕಾರಿಕ ಕಾಮಗಾರಿಗಳನ್ನು ಇಂಡೋ ಗ್ರೀಕ್‌ ಶೈಲಿಯಲ್ಲಿ ಅಲಂಕಾರಿಕ ಸೌಂದರ್ಯವನ್ನು ಅವಳಡಿಸಲಾಗಿದೆ.

ಈ ಕಟ್ಟಡದ ಗೋಪುರದ ಮೇಲೆ ರಾಷ್ಟ್ರ ಲಾಂಛನ ಕೂಡ ಗಮನಸೆಳೆಯುತ್ತದೆ. ಒಳಭಾಗದಲ್ಲಿ 279 ಹಾಗೂ ಹೊರಗಡೆ 180 ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಸಕರ ಭವನ ನಿರ್ಮಾಣಕ್ಕೆಂದು 27 ಎಕರೆ ಜಮೀನು ಮೀಸಲಿರಿಸಿರುವ ಇಲ್ಲಿ ಕಲಾತ್ಮಕ ಚಿತ್ರಣಗಳು ಗಮನ ಸೆಳೆಯುತ್ತವೆ. ಗ್ರಂಥಾಲಯವಂತೂ ಮಾದರಿಯಾಗಿದೆ.

ದೇಶದ ಎರಡನೇ ಸೆಂಟ್ರಲ್ ಹಾಲ್ ‌ಸುವರ್ಣ ವಿಧಾನಸೌಧದಲ್ಲಿ ದೇಶದಲ್ಲಿಯೇ ಎರಡನೆಯದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸೆಂಟ್ರಲ್ ಹಾಲ್ ‌ನಿರ್ಮಿಸಿರುವುದು ವಿಶೇಷವಾಗಿದೆ. ನವದೆಹಲಿಯ ಸಂಸತ್‌ ಭವನವನ್ನು ಹೊರತುಪಡಿಸಿದರೆ ಸೆಂಟ್ರಲ್ ಹಾಲ್ ‌ಇರುವುದು ಸುವರ್ಣಸೌಧದಲ್ಲಿ ಮಾತ್ರ. ಇದು 31.38 ಮೀಟರ್‌ ವಿಸ್ತೀರ್ಣ ಹೊಂದಿದ್ದು 30 ಮೀ. ವ್ಯಾಸ ಹೊಂದಿದೆ. 450 ಆಸನದ ವ್ಯವಸ್ಥೆ ಇದ್ದು ಹೆಚ್ಚುವರಿಯಾಗಿ 50 ಆಸನಗಳಿಗೆ ಹಾಕಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಅತ್ಯಾಧುನಿಕ ವಿದ್ಯುತ್‌ ದೀಪಗಳನ್ನು ಅಳವಡಿಸಿರುವ ಸೆಂಟ್ರಲ್ ಹಾಲ್‌ಗೆ ಮೂರು ಕಡೆಗಳಲ್ಲಿ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವಿಧಾನಸಭೆ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು, ಅಧಿಕಾರಿಗಳು, ಮಾಧ್ಯಮದವರಿಗಾಗಿ  ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು ರಾಜ್ಯಪಾಲರು ಮತ್ತು ಉಭಯ ಸದನಗಳ ಸಭಾಧ್ಯಕ್ಷರಿಗೆ ವಿಶೇಷ ಅಲಂಕೃತ ಪೀಠಗಳನ್ನು ಹಾಕಿರುವರು.

ಹಸಿರುಡುಗೆಯ ಮೆರುಗು

ಸುವರ್ಣ ವಿಧಾನಸೌಧದ ಸುತ್ತಲಿನ ಹದಿನೈದು ಎಕರೆ ಪ್ರದೇಶದಲ್ಲಿ ಹಸಿರಿನಿಂದ ಕಂಗೊಳಿಸುವ ಹುಲ್ಲುಹಾಸು ಮತ್ತು ಉದ್ಯಾನಗಳ ನಿರ್ಮಾಣ ಕೂಡ ದಾಖಲೆಯ ಸಂಗತಿ. ಮೆಕ್ಸಿಕನ್‌ ಟರ್ಫ್‌ ಲಾನ್‌, ಸೈಕಸ್‌, ಹಳದಿ ಹಸಿರು ಮಿಶ್ರಿತ ಎಲೆ ಇರುವ ಬ್ಯಾಂಬೂ, ಪೈಕಸ್‌ ಗೋಲ್ಡನ್‌, ಪೈಕಸ್‌ ವೆರಿಗೇಟೆಡ್‌, ಪೈಕಸ್‌ ಪಾಂಡಾ ಗಿಡಗಳು, ವೈವಿಧ್ಯಮಯ ಹೂವಿನ ಗಿಡಗಳು, ಪ್ಲುಮೇರಿಯಾ, ಅಲ್ಟಾ, ದಾಸವಾಳದಂತಹ ಹೂ ಗಿಡಗಳು ಸಿಂಗಪುರ ಚೆರಿ ಗಿಡಗಳು ರೆಡ್‌ ಜಿಂಜರ್‌, ಹೆಲಿಕೊನಿಯಾ, ಟಬುಬಿಯಾ ರೊಜಿಯಾ, ಅಲೆಂಡಾ ಮೊದಲಾದ ಹೂ ಬಿಡುವ ಗಿಡಗಳು ವರ್ಷವಿಡೀ ಋತುಮಾನಕ್ಕೆ ತಕ್ಕಂತೆ ಹೂ ಬಿಡುವ ಸಸ್ಯಗಳನ್ನು ಇಲ್ಲಿ ಬೆಳೆಸುವ ಮೂಲಕ ಸುವರ್ಣ ವಿಧಾನಸೌಧದ ಸುತ್ತಲಿನ ಪರಿಸರ ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಮೂಲಕ ಇದೊಂದು ಪ್ರಕೃತಿಯಲ್ಲಿ ಮೈದಳೆದು ನಿಂತ ಕಟ್ಟಡದಂತೆ ಕಾಣುವ ಸೃಷ್ಟಿಯ ಸೊಬಗಿನ ಚೆಲುವನ್ನು ಪಡೆದುಕೊಂಡಿರುವುದು ಸುವರ್ಣ ವಿಧಾನಸೌಧದ ವಿಶೇಷತೆ ಎನಿಸಿದೆ.

– ವೈ.ಬಿ. ಕಡಕೋಳ. 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ