ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ “ಕಳ್ಳರು” ಎಂಬ ವಿಷಯದ ಬಗ್ಗೆ ಒಂದು ಪ್ರಬಂಧ ಬರೆಯಲು ಸೂಚಿಸಲಾಯಿತು. ಅವರಲ್ಲಿ ಒಬ್ಬ ವಿದ್ಯಾರ್ಥಿ ಬರೆದ ಪ್ರಬಂಧ ಹೀಗಿತ್ತು :
” ಕಳ್ಳರೂ ಕೂಡ ನಮ್ಮ ರಾಷ್ಟ್ರದ ಆರ್ಥಿಕತೆಯ ಒಂದು ಮುಖ್ಯವಾದ ಭಾಗ. ಅವರು ತಮ್ಮ ಕಾರ್ಯದಿಂದಾಗಿ ಅನೇಕರಿಗೆ ಉದ್ಯೋಗವನ್ನು ಒದಗಿಸಿ ರಾಷ್ಟ್ರದ ಬೆಳವಣಿಗೆಗೆ ಮುಖ್ಯವಾದ ಕೊಡುಗೆ ನೀಡುತ್ತಾರೆ.
ಲಾಕರ್ ಗಳು, ಬೀಗಗಳು, ಸೇಫ್ ಗಳು, ಕಬೋರ್ಡ್ ಗಳು ಇವುಗಳನ್ನು ಮಾಡುವುದೇ ಕಳ್ಳರ ಕಾರಣದಿಂದ. ಇವುಗಳನ್ನು ತಯಾರಿಸುವ ಫ್ಯಾಕ್ಟರಿಗಳು ಲಕ್ಷಾಂತರ ಜನರಿಗೆ ಉದ್ಯೋಗ ನೀಡುವುದು ಕಳ್ಳರ ಕಾರಣದಿಂದಾಗಿಯೇ. ಆದ್ದರಿಂದ ಕಳ್ಳರ ವೃತ್ತಿಗೆ ಧನ್ಯವಾದ ಅರ್ಪಿಸುವುದು ನಮ್ಮ ಕರ್ತವ್ಯ.
ಮನೆ ಕಟ್ಟುವಾಗಲೂ ಗಾರೆ ಕೆಲಸದವರು, ಫ್ಯಾಬ್ರಿಕೇಟರ್ ಗಳು ಮತ್ತು ಕಾರ್ಪೆಂಟರ್ ಗಳು ಕೆಲಸ ಮಾಡುವುದು ಕಳ್ಳರ ಕಾರಣದಿಂದಲೇ. ಬಾಗಿಲುಗಳು, ಗ್ರಿಲ್ ಗಳು, ಕಿಟಕಿಗಳು, ಚಿಲಕ, ಬೋಲ್ಟುಗಳು ಇವುಗಳೆಲ್ಲ ನಿರ್ಮಾಣವಾಗುವುದು ಕಳ್ಳರ ಸಲುವಾಗಿ.
ಮನೆಗಳು, ಅಂಗಡಿಗಳು, ಶಾಲೆಗಳು, ಕಾಲೇಜುಗಳು, ಆಫೀಸುಗಳು ಮತ್ತು ಕಾರ್ಖಾನೆಗಳನ್ನು ರಕ್ಷಿಸಲು ಸೆಕ್ಯೂರಿಟಿ ಗಾರ್ಡ್, ವಾಚ್ ಮ್ಯಾನ್ ಮುಂತಾದವರು ಕಳ್ಳರ ಕಾರಣದಿಂದಲೇ ಉದ್ಯೋಗ ಪಡೆಯುತ್ತಾರೆ.
ಸಿ ಸಿ ಟಿ ವಿ ಕ್ಯಾಮೆರಾ ಗಳು, ಮೆಟಲ್ ಡಿಟೆಕ್ಟರ್ ಗಳು ಮತ್ತು ಭದ್ರತಾ ವ್ಯವಸ್ಥೆಗಳನ್ನು ಉತ್ಪಾದಿಸುವ ಕಂಪನಿಗಳು ಕೂಡ ಕಳ್ಳರಿಂದಾಗಿಯೇ ಉದ್ಯೋಗವನ್ನು ಸೃಷ್ಟಿಸುತ್ತಾರೆ.
ಕಳ್ಳರಿಂದಾಗಿಯೇ ಪೊಲೀಸರು, ಪೊಲೀಸ ಅಧಿಕಾರಿಗಳು, ಕೋರ್ಟ್ ಗಳ ಸಿಬ್ಬಂದಿ, ನ್ಯಾಯಾಧೀಶರು, ಲಾಯರ್ ಗಳು ಮುಂತಾದವರು ನೌಕರಿ ಪಡೆಯುತ್ತಾರೆ.
ಬ್ಯಾರಿ ಕೇಡುಗಳು, ಬುಲೆಟ್ ಗಳು, ಶಸ್ತ್ರಾಸ್ತ್ರಗಳು, ಯೂನಿಫಾರ್ಮ್, ವಾಹನಗಳು ಮತ್ತು ಮೋಟಾರ್ ಸೈಕಲ್ ಗಳು ಪೊಲೀಸರ ಸಹಾಯಕ್ಕೆಂದು ಕೊಳ್ಳುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ಜೈಲುಗಳು, ಜೈಲು ಅಧಿಕಾರಿಗಳು, ಜೈಲಿನ ಸಿಬ್ಬಂದಿ ಮುಂತಾದವುಗಳು ಸೃಷ್ಟಿಯಾಗಲು ನಾವು ಕಳ್ಳರಿಗೆ ಧನ್ಯವಾದ ಸಮರ್ಪಿಸಬೇಕಾಗುತ್ತದೆ.
ಮೊಬೈಲ್ ಗಳು, ಲ್ಯಾಬ್ ಟಾಪ್ ಗಳು, ಕಾರುಗಳು, ಬೈಕುಗಳು, ವಿದ್ಯುತ್ ಉಪಕರಣಗಳು ಮುಂತಾದವುಗಳು ಕದಿಯಲ್ಪಟ್ಟಾಗ ಜನ ಅವುಗಳನ್ನು ಹೊಸದಾಗಿ ಕೊಳ್ಳುತ್ತಾರೆ. ಇದರಿಂದಾಗಿ ಬಿಜಿನೆಸ್ ಅಭಿವೃದ್ಧಿಯಾಗುತ್ತದೆ.
ಪ್ರಸಿದ್ಧವಾದ ಮತ್ತು ಅಪಾಯಕಾರಿಯಾದ ಕಳ್ಳರು ಸಾಮಾನ್ಯವಾಗಿ ರಾಜಕೀಯ ಸೇರುತ್ತಾರೆ. ಅವರಿಂದ ಇನ್ನೂ ದೊಡ್ಡ ಮಟ್ಟದ ಕಳ್ಳತನ ನಡೆಯುತ್ತದೆ. ಇದನ್ನು ಹೀಗೇ ಹೇಳುತ್ತಾ ಹೋಗಬಹುದು. ಆದರೆ ಒಟ್ಟಿನ ತಾತ್ಪರ್ಯ ವೆಂದರೆ ಕಳ್ಳರು ದೇಶದ ಆರ್ಥಿಕ ಸ್ಥಿತಿ ಸುಧಾರಣೆಗೆ ಬಹು ಮುಖ್ಯವಾದ ಕೊಡುಗೆ ನೀಡುತ್ತಾರೆ. ”
ಈ ಸಂಶೋಧನಾ ಒಳನೋಟದಿಂದ ಕೂಡಿದ ಪ್ರಬಂಧಕ್ಕೆ ಟೀಚರ್ ಹತ್ತಕ್ಕೆ ಹತ್ತು ಅಂಕಗಳನ್ನು ಕೊಡದೆ ಇರಲು ಸಾಧ್ಯವೇ ಇರಲಿಲ್ಲ !!!
…..ಎಲ್ಲೋ ಸಿಕ್ಕಿದ್ದು





