ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದ ಅತಂತ್ರ ಪರಿಸ್ಥಿತಿಯಲ್ಲಿ ನಟ-ರಾಜಕಾರಣಿ ಕಮಲ್ ಹಾಸನ್ ಅವರು ದಳಪತಿ ವಿಜಯ್ ಅವರ ಪರವಾಗಿ ಧ್ವನಿ ಎತ್ತಿದ್ದಾರೆ.
ಜನರ ತೀರ್ಪಿಗೆ ಗೌರವ ಸಿಗಲೇಬೇಕು. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ನೀಡಬೇಕು ಎಂದು ಕಮಲ್ ಹಾಸನ್ ಆಗ್ರಹಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಕಮಲ್ ಹಾಸನ್, “ತಮಿಳಗ ವೆಟ್ರಿ ಕಳಗಂ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅತಿ ದೊಡ್ಡ ಪಕ್ಷವಾಗಿರುವ ವಿಜಯ್ ಅವರನ್ನು ಸರ್ಕಾರ ರಚಿಸಲು ಕರೆಯದಿರುವುದು ಜನತೆಯ ತೀರ್ಪಿಗೆ ಮಾಡುವ ಅವಮಾನ” ಎಂದು ಕಿಡಿಕಾರಿದ್ದಾರೆ.
“ತಮಿಳುನಾಡಿನ ಇತಿಹಾಸದಲ್ಲೇ ಇಂತಹ ತೀರ್ಪು ಹಿಂದೆಂದೂ ಬಂದಿರಲಿಲ್ಲ. ನನ್ನ ಸಹೋದರ ಎಂ.ಕೆ. ಸ್ಟಾಲಿನ್ ಅವರು ಜನರ ತೀರ್ಪನ್ನು ಗೌರವಿಸುತ್ತೇವೆ ಎಂದು ಘೋಷಿಸಿದ್ದಾರೆ. ಅವರ ರಾಜಕೀಯ ಮುತ್ಸದ್ದಿತನವನ್ನು ನಾನು ಗೌರವಿಸುತ್ತೇನೆ” ಎಂದು ಕಮಲ್ ಹೇಳಿದ್ದಾರೆ.
“ಬಹುಮತ ಎಂಬುದು ವಿಧಾನಸಭೆಯಲ್ಲಿ ಸಾಬೀತಾಗಬೇಕೇ ಹೊರತು ರಾಜ್‌ಭವನದಲ್ಲಿ ಅಲ್ಲ. ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ” ಎಂದು ಸಾಂವಿಧಾನವನ್ನು ಉಲ್ಲೇಖಿಸಿದ್ದಾರೆ. “ನಾನು ಒಬ್ಬ ಭಾರತೀಯ ಪ್ರಜೆಯಾಗಿ ಸಾಂವಿಧಾನಿಕ ಆಶಯದ ಧ್ವನಿಯಾಗಿ ಮಾತನಾಡುತ್ತಿದ್ದೇನೆ. ತಮಿಳುನಾಡು ಜನರ ತೀರ್ಪಿಗೆ ಸರಿಯಾದ ಗೌರವ ಸಿಗಲೇಬೇಕು” ಎಂದಿದ್ದಾರೆ.
108 ಸ್ಥಾನಗಳನ್ನು ಗೆದ್ದು ದೊಡ್ಡ ಸಾಧನೆ ಮಾಡಿರುವ ವಿಜಯ್ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದ್ದು, ಒಟ್ಟು 112 ಶಾಸಕರ ಬೆಂಬಲ ಇದೆ. ಆದರೆ ಬಹುಮತಕ್ಕೆ (118) ಇನ್ನೂ 6 ಸ್ಥಾನಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ. ಕಮಲ್ ಹಾಸನ್ ಅವರ ಈ ಬೆಂಬಲವು ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ದಳಪತಿ ವಿಜಯ್ ಅವರಿಗೆ ಪ್ರಮುಖ ವ್ಯಕ್ತಿಗಳ ಬೆಂಬಲ ಹೆಚ್ಚಾಗುತ್ತಿರುವುದು ಗಮನ ಸೆಳೆದಿದೆ.





