ಕರ್ನಾಟಕದ ರಾಜಧಾನಿ, ಬೆಂಗಳೂರಿನ ಅನೇಕ ರಸ್ತೆಗಳ ಹೆಸರುಗಳನ್ನು ನಗರಪಾಲಿಕೆ ಮರುನಾಮಕರಣ ಮಾಡಿದ್ದರೂ, ಇಂದಿಗೂ ಸಾರ್ವಜನಿಕರು ವಿದೇಶಿಗರ ಹೆಸರಿನಲ್ಲೇ ಪ್ರದೇಶಗಳನ್ನು ಗುರುತಿಸುತ್ತಾರೆ ಎಂದರೆ ಖಂಡಿತವಾಗಿಯೂ ಆ ವ್ಯಕ್ತಿ ವಿಶೇಷವಾಗಿರಲೇ ಬೇಕು ಎಂದರು ಅತಿಶಯವಾಗದು. ಅದೇ ರೀತಿಯಲ್ಲೇ, ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಸೇರಿರುವ ಫ್ರೇಸರ್ ಟೌನ್ ಕೂಡಾ ಒಂದಾಗಿದ್ದು, ಆ ಪ್ರದೇಶಕ್ಕೆ ಫ್ರೇಸರ್ ಟೌನ್ ಎಂಬ ಹೆಸರನ್ನು ಇಡಲು ಕಾರಣಗಳೇನು? ಫ್ರೇಸರ್ ಎಂದರೆ ಯಾರು? ನಮ್ಮ ರಾಜ್ಯಕ್ಕೆ ಆವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ . ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸರ್ ಸ್ಟುವರ್ಟ್ ಮಿಲ್ಫೋರ್ಡ್ ಫ್ರೇಸರ್, ಜೂನ್ 2 1864 ರಂದು ಇಂಗ್ಲೇಂಡಿನಲ್ಲಿ ಜನಿಸಿ, ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಬ್ಲುಂಡೆಲ್ಸ್ ಸ್ಕೂಲ್ ನಲ್ಲಿ ಮುಗಿಸಿದ ನಂತರ ಬಲ್ಲಿಯೋಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದು, 1882 ರಲ್ಲಿ ಭಾರತೀಯ ನಾಗರಿಕ ಸೇವೆಗಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಅಂದಿನ ಬ್ರಿಟೀಷ್ ಸರ್ಕಾರದ ವಿದೇಶಿ ಮತ್ತು ರಾಜಕೀಯ ಇಲಾಖೆಯ ಪ್ರತಿಷ್ಠಿತ ಅಧಿಕಾರಿಯಾಗಿ ನಿಯೋಜಿತರಾಗುತ್ತಾರೆ. ಇದಾದ 5 ವರ್ಷಗಳ ನಂತರ ರಾಜ್‌ಕೋಟ್‌ನ ರಾಜ್‌ಕುಮಾರ್ ಕಾಲೇಜಿನಲ್ಲಿ ಶಿಕ್ಷಕರಾಗಿ ನೇಮಕಗೊಂಡು ತಮ್ಮ ಉತ್ತಮ ಗುಣಗಳಿಂದಾಗಿ ಅತ್ಯಂತ ಜನಪ್ರಿಯರಾದಾಗ, ಕೊಲ್ಲಾಪುರದ ರಾಜರು ಫ್ರೇಸರ್ ಅವರನ್ನು ತಮ್ಮ ರಕ್ಷಕರಾಗಿ ಮತ್ತು ತಮ್ಮ ಮಕ್ಕಳ ಬೋಧಕರಾಗಿ ನೇಮಿಸಿಕೊಳ್ಳುತ್ತಾರೆ. ಫ್ರೇಸರ್ ಅವರಿಂದ ಶಿಕ್ಷಣ ಪಡೆದು ನಂತರ ರಾಜ್‌ಕೋಟ್‌ನ ರಾಜ್‌ಕುಮಾರ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ನಂತರ ಛತ್ರಪತಿ ಶಾಹು ಮಹಾರಾಜ ಎಂದು ಪ್ರಖ್ಯಾತರಾಗುತ್ತಾರೆ.

ಆದಾದ ನಂತರ ಭಾವನಗರದ ಮಹಾರಾಜರಾದ ಶ್ರೀ ಭಾವಸಿಂಹಜಿ II ತಮ್ಮ ಮಗ, ಮತ್ತು ಭಾವನಗರದ ಕಡೆಯ ಮಹಾರಾಜರಾಗಿದ್ದ ಶ್ರೀ ಕೃಷ್ಣ ಕುಮಾರಸಿಂಗ್ ಭಾವಸಿಂಗ್ ಅವರಿಗೂ ಸಹಾ ವಿದ್ಯೆಯನ್ನು ಕಲಿಸಿದ್ದನ್ನು ಗಮನಿಸಿದ ಮೈಸೂರಿನ ಮಹಾರಾಣಿಯಾಗಿದ್ದ ಅಮ್ಮಣ್ಣಿಯವರು ತಮ್ಮ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ ಸಹಾ ಮಾತೃಭಾಷೆಯೊಂದಿಗೆ ಆಂಗ್ಲಭಾಷೆ ಮತ್ತು ವಿದೇಶೀ ರಾಜಕೀಯದ ಬಗ್ಗೆ ಕಲಿಸಿಕೊಡಬೇಕೆಂದು ಫ್ರೇಸರ್ ಅವರನ್ನು 1896 ರಲ್ಲಿ ಮೈಸೂರಿನ ಸಂಸ್ಥಾನಕ್ಕೆ ಕರೆತಂದು ಅರಮನೆಯ ಸಮೀಪದಲ್ಲೇ ಇದ್ದ ಖಾಸ್ ಬಂಗಲೆಯಲ್ಲಿ (ಇಂದಿನ ಪ್ರಾಣಿ ಸಂಗ್ರಹಾಲಯ) ಶಿಕ್ಷಣ ಆರಂಭವಾಗುತ್ತದೆ. ಈ ಹಿಂದಿನ ಸಂಚಿಕೆಯಲ್ಲಿ ತಿಳಿದಿದ್ದ ಅಲಿ ಅಸ್ಗರ್ ಅವರ ಮೊಮ್ಮಗ ಮಿರ್ಜಾ ಇಸ್ಮಾಯಿಲ್ ಅವರೂ ಸಹಾ ಒಡೆಯರ್ ಅವರ ಸಹಪಾಠಿಯಾಗಿದ್ದು ಮುಂದೆ ಅವರು ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ್ದದ್ದು ಈಗ ಇತಿಹಾಸ. ಮಹಾರಾಜರಿಗೆ ಕೇವಲ ಇಂಗ್ಲೀಷ್ ಭಾಷೆ ಮಾತ್ರವಲ್ಲದೇ, ಕಾನೂನು, ರಾಜ್ಯಾಡಳಿತ, ಆಡಳಿತ ನಿರ್ವಹಣೆ ಮುಂತಾದ ವಿಷಯಗಳನೂ ಸಹಾ ಫ್ರೇಸರ್ ಕಲಿಸಿಕೊಟ್ಟಿದ್ದರು.
ಮೈಸೂರು ಮಹಾರಾಜರಿಗೆ ಕಾನೂನಾತ್ಮಕವಾದ ಪಾಠವನ್ನು ಪ್ರಾಯೋಗಿಕವಾಗಿಯೇ ಕಲಿಸುವ ಸಲುವಾಗಿ ಮಹಾರಾಜರನ್ನು ಮೈಸೂರಿನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಕರೆದುಕೊಂಡು ಹೋಗಿ ಅಲ್ಲಿ ನಡೆಯುವ ವಿಚಾರಣೆಗಳ ಟಿಪ್ಪಣಿಯನ್ನು ಬರೆದುಕೊಂಡು ವಿಚಾರಣೆ ಸಂಪೂರ್ಣವಾಗಿ ಮುಗಿದ ನಂತರ ಅದರ ಕುರಿತಾಗಿ ಮಹಾರಾಜರಿಂದ ತೀರ್ಪನ್ನು ಬರೆಯಿಸಿ ನಂತರ ನ್ಯಾಯಾಧೀಶರು ಕೊಡುವ ತೀರ್ಪಿನೊಂದಿಗೆ ಅದನ್ನು ಸಮೀಕರಿಸಿ ಪ್ರತಿಯೊಂದು ಪ್ರಕರಣಕ್ಕೂ ವಿವಿಧ ಆಯಾಮಗಳಿದ್ದು, ಕೇವಲ ಏಕಮುಖವಾದ ನಿರ್ಣಯದಿಂದ ತೀರ್ಪನ್ನು ಕೊಡಬಾರದು ಎಂದು ಕಲಿಸಿಕೊಟ್ಟಿದ್ದರಂತೆ.





