ಬಹಳಷ್ಟು ವಿದ್ಯಾರ್ಥಿಗಳು ಚೆನ್ನಾಗಿ ಓದುತ್ತಾರೆ. ಆದರೂ ಅವರ ಫಲಿತಾಂಶ ಸಾಧಾರಣವಾಗಿರುತ್ತದೆ. ಅಧ್ಯಯನದ ಶೈಲಿ ಬಹಳ ಮುಖ್ಯ. ಪ್ರತಿ ವ್ಯಕ್ತಿಯೂ ಇತರರಿಗಿಂತ ವಿಭಿನ್ನ. ಆದ್ದರಿಂದ ಅಧ್ಯಯನದ ವಿಧಾನವನ್ನು ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಗುಣಲಕ್ಷಣಗಳಿಗೆ ಹೊಂದಿಸಬೇಕು. ನಿಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ತಕ್ಕಂತೆ ಓದುವುದು ಉತ್ತಮ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ನೀಡುವ ಸಲಹೆಯೇನೆಂದರೆ, ಯಾವುದೇ ತರಗತಿ, ಕೋರ್ಸ್ ಅಥವಾ ಪರೀಕ್ಷೆಗೆ ಕೂರು ಮುಂಚೆ ಸರಿಯಾಗಿ ಓದುವ ವಿಧಾನಂದರೆ `ನಿಮ್ಮನ್ನು' ನೀವು ಅಧ್ಯಯನ ಮಾಡುವುದು.
ನಿಮ್ಮನ್ನೇ ಅಧ್ಯಯನ ಮಾಡಿ : ಕೆಲವು ದಿನಗಳ ಕಾಲ ನಿಮ್ಮ ಸಾಮರ್ಥ್ಯಗಳೇನು, ನಿಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು ಪ್ರಯತ್ನಿಸಿ. ಅಧ್ಯಯನ ಮಾಡುವಾಗ ನಾವು ಬಹಳಷ್ಟು ಕೆಲಸ ಮಾಡುತ್ತೇವೆ. ನಾವು ಓದುತ್ತೇವೆ, ಅರ್ಥ ಮಾಡಿಕೊಳ್ಳುತ್ತೇವೆ, ಗ್ರಹಿಸುತ್ತೇವೆ, ಜ್ಞಾಪಿಸಿಕೊಳ್ಳುತ್ತೇವೆ, ಧಾರಣ ಮಾಡಿಕೊಳ್ಳುತ್ತೇವೆ, ನಂತರ ವ್ಯಕ್ತಪಡಿಸುತ್ತೇವೆ. ಈ ಎಲ್ಲ ಮಾನಸಿಕ ಶಕ್ತಿಗಳೊಂದಿಗೆ ಜಾಗರೂಕತೆಯಿಂದಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಉದ್ದೇಶ ಹಾಗೂ ಪ್ರೇರಣೆಯೂ ಬಹಳ ಅಗತ್ಯ.
ನಿಮ್ಮ ಪ್ರಾಮಾಣಿಕತೆ : ನೀವು ಪ್ರಾಮಾಣಿಕರೋ ಅಲ್ಲವೋ ಎಂದು ಮೊದಲು ಯೋಚಿಸಿ. ನಿಮ್ಮೆಲ್ಲಾ ಸಮಯ, ಶಕ್ತಿ ಕೊಟ್ಟು ಓದಿನಲ್ಲಿ ಕೇಂದ್ರೀಕರಿಸಲು ಸಿದ್ಧವಿದ್ದೀರಾ ಅಥವಾ ನೀವು ಪ್ರಯತ್ನಿಸುತ್ತಿದ್ದೀರೆಂದು ನಿಮ್ಮ ಪೋಷಕರನ್ನು ಹಾಗೂ ನಿಮ್ಮನ್ನು ನೀವೇ ಮೂರ್ಖರನ್ನಾಗಿಸುತ್ತಿದ್ದೀರಾ? ನೀವು ಪ್ರಾಮಾಣಿಕರಾಗಿರಬೇಕು. ಒಂದು ವೇಳೆ ನೀವು ಯಶಸ್ವಿಯಾಗದಿದ್ದರೆ ಅದು ನಿಮ್ಮ ಕಠಿಣ ಪರಿಶ್ರಮ, ಸಾಮರ್ಥ್ಯಗಳು ಹಾಗೂ ನಿಮ್ಮ ಪ್ರಾಮಾಣಿಕತೆಯ ಮೇಲೆ ಪರಿಣಾಮ ಬೀರುತ್ತದೆ.
ನಿಮ್ಮ ಗುರಿ : ಒಮ್ಮೆ ಯೋಚಿಸಿ. ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದಿದ್ದೀರಾ ಅಥವಾ ಏನೂ ಓದದೆ ನಿಮ್ಮ ತಂದೆಯ ಸಂಪಾದನೆಯನ್ನು ಹಾಳುಮಾಡಬೇಕೆಂದಿದ್ದೀರಾ? ನಿಮ್ಮ ಕೆಚ್ಚು ತೋರಿಸಿ ವೈಯಕ್ತಿಕ ಸಾಧನೆ ಮಾಡುತ್ತೀರಾ ಅಥವಾ ಏನಾದರೂ ಮಾಡಲು ಗಂಭೀರವಾಗಿ ಚಿಂತಿಸುವುದಿಲ್ಲವೇ? ಕನ್ನಡಿಯ ಮುಂದೆ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತೀರಾ?
ಆತ್ಮ ನಿಯಂತ್ರಣ : ಬೇರೆ ಕಡೆಗೆ ಗಮನ ಹೋಗದಂತೆ ನಿಮ್ಮನ್ನು ನಿಯಂತ್ರಿಸಿಕೊಳ್ಳುವಿರಾ? ಏಕಾಗ್ರತೆಯಿಂದ ಓದಿದರೆ ನಿಮ್ಮ ಬಿಡುವಿನ ಸಮಯವನ್ನು ಆನಂದಿಸಬಹುದು. ಆದರೆ ಬಿಡುವಿನ ಸಮಯ ಹೊಂದುವುದನ್ನೇ ಅಭ್ಯಾಸ ಮಾಡಿಕೊಂಡರೆ ನಿಮ್ಮ ಓದು ಕುಂಠಿತವಾಗುತ್ತದೆ ಆದ್ದರಿಂದ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಬೇಕು.
ನೀವು ವ್ಯವಸ್ಥಿತರಾಗಿದ್ದೀರಾ? : ಕಠಿಣ ವಿಷಯಗಳ ಬಗ್ಗೆ ಹಾಗೂ ನೀವು ಅನುಸರಿಸಬೇಕಾದ ಪ್ಲ್ಯಾನಿಂಗ್ ಬಗ್ಗೆ ಟೈಂ ಟೇಬಲ್ ಸಿದ್ಧಪಡಿಸಿದ್ದೀರಾ? ಇಲ್ಲವೆಂದರೆ ಕೂಡವೇ ಟೈಂ ಟೇಬಲ್ ಸಿದ್ಧಪಡಿಸಿ ಅದರಂತೆ ಅಭ್ಯಾಸದಲ್ಲಿ ನಿರತರಾಗಿ.
ಅವಿರತ ಶ್ರಮ : ನೀವು ಟೈಂ ಟೇಬಲ್ ಅನುಸರಿಸುತ್ತಿದ್ದೀರಾ? ಬಿಡುವಿನ ವೇಳೆ ಇದ್ದರೂ ಸಮಯ ಹಾಳು ಮಾಡದಿರುವಷ್ಟು ಮಾನಸಿಕವಾಗಿ ಸದೃಢರಾಗಿರುವಿರಾ? ಪಠ್ಯದ ವಿಷಯ ಕಠಿಣವಾಗಿದ್ದರೂ ಓದು ಮುಂದುವರೆಸುತ್ತೀರಾ? ನೀವು ಪಲಾಯನವಾದಿಗಳೇ ಅಥವಾ ನಿಮ್ಮ ಜಡತೆ ಹಾಗೂ ಸೋಮಾರಿತನ ಬದಿಗಿಟ್ಟು ಪ್ರಯತ್ನ ಮುಂದುವರೆಸುತ್ತೀರಾ? ವಾಸ್ತವವೆಂದರೆ ನಿಮ್ಮ ಮನಸ್ಸು ನಿಮ್ಮ ನಿಯಂತ್ರಣದಲ್ಲೇ ಇದೆ. ನಿಮಗೆ ಬೇಕೆನ್ನಿಸಿದರೆ ನೀವು ಅವಿರತವಾಗಿ ಶ್ರಮಿಸಬಹುದು.