ನೀವು ಭಾರತೀಯ ಪಾಸ್‌ಪೋರ್ಟ್‌ ಆಧರಿಸಿ 60 ದೇಶಗಳ ಪ್ರವಾಸವನ್ನು ವೀಸಾ ರಹಿತವಾಗಿ ಇಲ್ಲವೇ ಇವೀಸಾ ಅಥವಾ ವೀಸಾ ಆನ್‌ ಅರೈವಲ್‌ ಮುಖಾಂತರ ಮಾಡಬಹುದಾಗಿದೆ. ವೀಸಾ ಇಲ್ಲದೆ ಯಾವ ದೇಶಗಳಿಗೆ ಪ್ರವಾಸ ಕೈಗೊಳ್ಳಬಹುದೆಂದರೆ, ಅಂತಹ ದೇಶಗಳ ಪಟ್ಟಿಯಲ್ಲಿ ಕೆಲವು ಏಷ್ಯಾ ಖಂಡದಲ್ಲಿ ಇನ್ನು ಕೆಲವು ಆಫ್ರಿಕಾದಲ್ಲಿ, ಮತ್ತೆ ಕೆಲವು ದ. ಅಮೆರಿಕದಲ್ಲಿವೆ.

ಅಂದಹಾಗೆ ನೀವು ದಕ್ಷಿಣ ಕೊರಿಯಾದ ಪ್ರವಾಸವನ್ನು ವೀಸಾ ಇಲ್ಲದೆ ಮಾಡಲು ಸಾಧ್ಯವಿಲ್ಲ. ಆದರೆ ದಕ್ಷಿಣ ಕೊರಿಯಾದ ಒಂದು ದ್ವೀಪ ಪ್ರದೇಶ `ಜೇಜು’ಗೆ ವೀಸಾ ಇಲ್ಲದೆ ಹೋಗಬಹುದಾಗಿದೆ. ಅದನ್ನು ದಕ್ಷಿಣ ಕೊರಿಯಾದ ಹವಾಯಿ ದ್ವೀಪ ಎಂದೂ ಕರೆಯಲಾಗುತ್ತದೆ. ಒಂದು ಸಂಗತಿ ನಿಮಗೆ ಗೊತ್ತಿರಲಿ, ವೀಸಾ ರಹಿತವಾಗಿ ದಕ್ಷಿಣ ಕೊರಿಯಾದ ಯಾವುದೇ ಒಂದು ವಿಮಾನ ನಿಲ್ದಾಣದ ಮೂಲಕ ಇಲ್ಲಿಗೆ ಪ್ರವೇಶಿಸುವುದಾಗಲಿ, ಇಲ್ಲಿಂದ ಹಾಯ್ದು ಹೋಗುವುದು ಸಾಧ್ಯವಿಲ್ಲ. ನೀವು ಮಲೇಷಿಯಾ, ಸಿಂಗಾಪುರ್‌ ಅಥವಾ ಬೇರೆ ಕೆಲವು ದೇಶಗಳ ಮುಖಾಂತರ ಇಲ್ಲಿಗೆ ಬಂದು ತಲುಪಬಹುದು. ಎಲ್ಲಿಂದ ನೀವು ಬರುತ್ತಿದ್ದೀರೊ ಅಲ್ಲವೋ, ಟ್ರಾನ್ಸಿಟ್‌ ವೀಸಾದ ಮಾಹಿತಿ ನಿಮಗೆ ಗೊತ್ತಿರಬೇಕು. ದೆಹಲಿ, ಮುಂಬೈ, ಬೆಂಗಳೂರಿನಿಂದ ನೀವು ಜೇಜು ದ್ವೀಪಕ್ಕೆ ನೇರವಾಗಿ ಪ್ರಯಾಣಿಸಬಹುದಾಗಿದೆ.

ಜೇಜು ದಕ್ಷಿಣ ಕೊರಿಯಾದ ಒಂದು ಸುಂದರ ದ್ವೀಪ. ಇಲ್ಲಿನ ವಾತಾವರಣ ಬೇರೆ ಪ್ರವಾಸಿ ಸ್ಥಳಗಳಿಗಿಂತ ಭಿನ್ನ ಹಾಗೂ ಶಾಂತವಾಗಿದೆ. ದಕ್ಷಿಣ ಕೊರಿಯಾದ ಎಷ್ಟೋ ಜನರು ತಮ್ಮ ದಣಿವು ನಿವಾರಿಸಿಕೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ.

ಪ್ರೇಕ್ಷಣೀಯ ಸ್ಥಳಗಳು

ನೈಸರ್ಗಿಕ ಸೌಂದರ್ಯ : ಜೇಜು ನೈಸರ್ಗಿಕವಾಗಿ ಸಾಕಷ್ಟು ಆಕರ್ಷಕವಾಗಿದೆ. ಇಲ್ಲಿನ ಪ್ರಶಾಂತ ವಾತಾವರಣ ಹಾಗೂ ಮುಕ್ತ ವಾತಾವರಣದಲ್ಲಿ ಉಸಿರಾಟ ನಡೆಸುವುದು ಬಹಳ ಖುಷಿದಾಯಕ ಎನಿಸುತ್ತದೆ.

ಹಸ್ಲನ್ : ಜೇಜು ದ್ವೀಪದ ನಿರ್ಮಾಣ ಸಾವಿರಾರು ವರ್ಷಗಳ ಹಿಂದೆ ಜ್ವಾಲಾಮುಖಿಯ ಸ್ಛೋಟದಿಂದ ಆಗಿತ್ತು. ದ್ವೀಪದ ಮಧ್ಯ ಭಾಗದಲ್ಲಿ ಹಾಸನ ಜ್ವಾಲಾಮುಖಿ ಇದ್ದು, ಅದು ಈಗ ನಿಷ್ಕ್ರಿಯವಾಗಿದೆ. ದಕ್ಷಿಣ ಕೊರಿಯಾದ ಉನ್ನತ ಶಿಖರ ಮೌಂಟ್‌ ನ್ಯಾಷನಲ್ ಪಾರ್ಕ್‌ನಲ್ಲಿ ಪ್ರವಾಸ ಕೈಗೊಂಡು ಸಾಕಷ್ಟು ಆನಂದ ಅನುಭವಿಸಬಹುದಾಗಿದೆ. ಇಲ್ಲೊಂದು ಆಳವಾದ ಕೊರಕಲು ಇದ್ದು, ಅದೀಗ ಸುಂದರ ಸರೋವರವಾಗಿದೆ. ಅಲ್ಲಿ ನಾನಾ ಪ್ರಕಾರದ ಔಷಧಿ ಸಸ್ಯಗಳಿದ್ದು, ಅಪರೂಪದ ಪ್ರಾಣಿ ಸಂಕುಲ ಕೂಡ ಕಂಡುಬರುತ್ತದೆ.

ಹ್ಯೋಪಜೆ ಬೀಚ್‌ : ಜೇಜು ದ್ವೀಪದ ಉತ್ತರ ಭಾಗದಲ್ಲಿ ಈ ಬೀಚ್‌ ಇದೆ. ಇಲ್ಲಿನ ಮರಳು ಬೆಳ್ಳಗೆ ಇರುವುದು ವಿಶೇಷ. ಇಲ್ಲಿ ನೀವು ಅತ್ಯಂತ ಸ್ವಚ್ಛ ನೀರಿನಲ್ಲಿ ಈಜುವ ಆನಂದ ಪಡೆದುಕೊಳ್ಳಬಹುದು.

ಲಾವಾದ ಸುರಂಗ : ಜ್ವಾಲಾಮುಖಿಯ ಭಯಂಕರ ಸ್ಛೋಟದ ಬಳಿಕ ಈ ಸುರಂಗ ಮಾರ್ಗದಿಂದ ಲಾವಾರಸ ಹೊರಹೋಗುತ್ತಿತ್ತು. ಇದು ಒಂದು ಗುಹೆಯ ರೀತಿಯಲ್ಲಿ ಇದೆ. ಇದರ ಉದ್ದ 13 ಕಿ.ಮೀ ಇದ್ದು, ಇದರಲ್ಲಿ ಒಂದು ಕಿ.ಮೀ. ಮಾತ್ರ ಪ್ರವಾಸಿಗರಿಗೆ ಮುಕ್ತವಾಗಿದೆ.

ರಸ್ತೆ ಸಂಚಾರ : ಇಲ್ಲಿ ಜಿಪಿಎಸ್‌ನ ನೆರವಿನಿಂದ ದ್ವೀಪದ ಬೇರೆ ಬೇರೆ ಕಡೆ ಕಾರಿನಲ್ಲಿ ಸಂಚರಿಸಬಹುದು. ಬೇರೆ ಬೇರೆ ಪ್ರವಾಸಿಗರು ಜೊತೆಗಿದ್ದರೆ ಬಹಳ ಖುಷಿಯಿಂದ ಪ್ರವಾಸದ ಮಜ ಪಡೆಯಬಹುದು. ಕಾಲ್ನಡಿಗೆಯಲ್ಲಿ ಸಾಗಲು ಕೂಡ ಟ್ರ್ಯಾಕ್ಸ್ ನಿರ್ಮಾಣ ಮಾಡಲಾಗಿದೆ. ಇಲ್ಲಿನ ರಸ್ತೆಯಲ್ಲಿ ಒಂದು ಗ್ರ್ಯಾಂಡ್‌ ಮದರ್‌ ಸ್ಟ್ಯಾಚ್ಯೂ ಇದೆ. ದಂತಕತೆಯ ಪ್ರಕಾರ, ಒಬ್ಬ ಮೀನುಗಾರ ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ. ಅವನ ಹೆಂಡತಿ ಅವನ ನಿರೀಕ್ಷೆಯಲ್ಲಿ ಶಿಲಾ ಪ್ರತಿಮೆಯಾದಳು ಎಂದು ಹೇಳಲಾಗುತ್ತದೆ. ಹಾಗೆಂದೇ ಕೊರಿಯನ್ನರು ಹೊರಗೆ ಹೋಗುವ ಮಕ್ಕಳಿಗೆ ಹೀಗೆ ಹೇಳುತ್ತಾರೆ, “ಬಹಳ ತಡ ಮಾಡಬೇಡ. ಹಾಗೆ ಇಲ್ಲದಿದ್ದರೆ ನೀನು ಕೂಡ ಅಜ್ಜಿಯ ಮೂರ್ತಿ ಆಗಿಬಿಡ್ತಿಯಾ!”

ಟಾಂಗೆರೈನ್‌ ಹಣ್ಣಿನ ತೋಟ : ಟಾಂಗೆರೈನ್‌ ಹಣ್ಣಿನ ಮರದ ತೋಟಗಳು ದೂರ ದೂರದ ತನಕ ಪಸರಿಸಿರುವುದು ಕಣ್ಣಿಗೆ ಬೀಳುತ್ತವೆ. ಹಳದಿ ಬಣ್ಣದ ಹಣ್ಣುಗಳು ನೀವು ಫೋಟೊ ತೆಗೆಯಲು ಪ್ರೇರೇಪಿಸುತ್ತವೆ.

ಟೆಡ್ಡಿ ಬೇರ್‌ ಮ್ಯೂಸಿಯಂ : ಮಕ್ಕಳ ನಡುವೆ ಜನಪ್ರಿಯವಾಗಿರುವ ಟೆಡ್ಡಿ ಬೇರ್‌ ಸುಂದರ ಆಟಿಕೆಗಳ ಮ್ಯೂಸಿಯಂ ಕಣ್ಮನ ಸೆಳೆಯುತ್ತದೆ.

ಲವ್ ಲ್ಯಾಂಡ್‌ನ ಸೆಕ್ಸ್ ಪ್ರತಿಮೆಗಳು : ಇಲ್ಲೊಂದು `ಲವ್ ಲ್ಯಾಂಡ್‌’ ಇದ್ದು, ಇಲ್ಲಿ ಸುಮಾರು 140 ಪ್ರತಿಮೆಗಳು, ಸೆಕ್ಸ್ ನ ಥೀಮ್ ಮೇಲೆ ಬೇರೆ ಬೇರೆ ಸೆಕ್ಸ್ ಭಂಗಿಗಳನ್ನು ಹೊಂದಿವೆ.

ಸೂಕ್ತ ಸಮಯ : ನವೆಂಬರ್‌ನಿಂದ ಫೆಬ್ರವರಿ ತನಕ ಇಲ್ಲಿಗೆ ಪ್ರಯಾಣ ಮಾಡುವುದು ಸೂಕ್ತ.

ಉಳಿದುಕೊಳ್ಳುವ ವ್ಯವಸ್ಥೆ : ಒಳ್ಳೆಯ ಹೋಟೆಲ್‌ ಬಜೆಟ್‌ ಹೋಟೆಲ್‌ ಎರಡೂ ಕೂಡ ಇಲ್ಲಿ ಲಭ್ಯ. ಶಾಪಿಂಗ್‌ ಮಾಡುವವರಿಗೆ ಮಾತ್ರ ಇಲ್ಲಿ ನಿರಾಶೆ ಖಾತ್ರಿ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ