ದೆಹಲಿಯ ಬುರಾಡಿ ಎಂಬ ಭಾಗದಲ್ಲಿ ಭಾಟಿಯಾ ಕುಟುಂಬದ 11 ಜನರ ಸಾಮೂಹಿಕ ಆತ್ಮಹತ್ಯೆಯ ವಿಷಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅವರುಗಳ ಬೌದ್ಧಿಕ ದಿವಾಳಿತನ ಹಾಗೂ ಧಾರ್ಮಿಕ ಉನ್ಮಾದಕ್ಕಿಂತ ಹೆಚ್ಚಾಗಿ ಮೋಕ್ಷದ ಬಗ್ಗೆಯೇ ಚರ್ಚೆ ಜೋರಾಗಿತ್ತು. ಆದರೆ ಯಾವೊಬ್ಬ ಬುದ್ಧಿಜೀವಿಯಾಗಲಿ, ಚಿಂತಕರಾಗಲಿ ಇದೆಲ್ಲ ಧರ್ಮದ ಕಾರಣದಿಂದ ಸಂಭವಿಸಿತೆಂದು ಹೇಳುವ ಧೈರ್ಯ ತೋರಿಸಲಿಲ್ಲ.
ಭಾಟಿಯಾ ಕುಟುಂಬದ ಮುಖ್ಯ ಉದ್ದೇಶ ಮೋಕ್ಷ ಪಡೆಯುವುದಾಗಿತ್ತು. ಇನ್ನೊಂದೆಡೆ ಅದೇ ವರ್ಷ ಅಮರನಾಥ್ ಪ್ರವಾಸಕ್ಕೆ ಹೊರಟಿದ್ದ ಲಕ್ಷಾಂತರ ಭಕ್ತರ ಅಪೇಕ್ಷೆ ಮೋಕ್ಷ ಪಡೆಯುವುದು ಇಲ್ಲವೆ ಪುಣ್ಯ ಸಂಪಾದನೆ ಮಾಡುವುದಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ, ಅಲ್ಲೂ ಕೂಡ ಪುಣ್ಯ ಸಂಪಾದನೆಗೆ ಬಂದ 11 ಜನರು ಸತ್ತು ಹೋದರು. ಇಲ್ಲಿನ ವ್ಯತ್ಯಾಸ ಇಷ್ಟೇ, ಇಲ್ಲಿನ 11 ಜನರು ಒಂದೇ ಕುಟುಂಬದವರಾಗಿರದೆ, ದೇಶದ ಬೇರೆಬೇರೆ ರಾಜ್ಯಗಳು, ಬೇರೆ ಬೇರೆ ಧರ್ಮದವರಾಗಿದ್ದರು.
ಆಂಧ್ರ ಪ್ರದೇಶದ 75 ವರ್ಷದ ಥೋಟಾ ರಾಧನಮ್ ಜುಲೈ 3ರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಸಾವು ಸಂಭವಿಸಿದಾಗ ಅವರು ಒಂದು ಧರ್ಮಶಾಲೆಯ ಅಡುಗೆಮನೆಯಲ್ಲಿದ್ದರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವರಾದ ರಾಧಾಕೃಷ್ಣ ಶಾಸ್ತ್ರೀ ಅವರ ಸಾವು ಅಮರನಾಥ ಗುಹೆಯೊಂದರ ಸಮೀಪ ಸಂಭವಿಸಿತು. ಅವರಿಗೂ ಕೂಡ ಹೃದಯಾಘಾತ ಸಂಭವಿಸಿತ್ತು.
ಅದೇ ಸಮಯದಲ್ಲಿ ಪಲ್ಲಕ್ಕಿ ಹೊತ್ತೊಯ್ಯುತ್ತಿದ್ದ ಒಬ್ಬ ವ್ಯಕ್ತಿ ಹಾಗೂ ಧಾರ್ಮಿಕ ಸಮಿತಿಯ ಕಾರ್ಯಕರ್ತ ಕೂಡ ಸಾವನ್ನಪ್ಪಿದ. ಬಿಎಸ್‌ಎಫ್‌ನ ಒಬ್ಬ ಅಧಿಕಾರಿ ಕೆಟ್ಟ ಹವಾಮಾನವನ್ನು ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಇನ್ನುಳಿದ 5 ಜನರ ಸುಳಿವು ಸಿಕ್ಕಿರಲಿಲ್ಲ.
ಮೋಕ್ಷ ಮತ್ತು ಸಾವು
ಈ ಎಲ್ಲ ಜನರ ಅಕಾಲಿಕ ಸಾವಿನ ಬಗ್ಗೆ ಯಾರೊಬ್ಬರೂ ಗುಲ್ಲೆಬ್ಬಿಸಲಿಲ್ಲ. ಅದಕ್ಕೆ ತದ್ವಿರುದ್ಧ ಎಂಬಂತೆ ಅಲ್ಲಿದ್ದ ಎಲ್ಲರೂ ಹೇಳುತ್ತಿದ್ದುದು ಹೀಗೆ, ಅಮರನಾಥ ಬಾಬಾನ ಸನ್ನಿಧಿಗೆ ಬಂದು ಇಲ್ಲಿಯೇ ಸತ್ತು ಹೋಗಿದ್ದು ನಿಜಕ್ಕೂ ಪುಣ್ಯದ ಕೆಲಸ. ನಿಜ ಹೇಳಬೇಕೆಂದರೆ ಅವರು ಇಲ್ಲಿಗೆ ಬಂದು ಸಾಯಲಿಲ್ಲ, ಅವರಿಗೆ ಶಂಕರನೇ ಮೋಕ್ಷ ದಯಪಾಲಿಸಿದ.
ದೆಹಲಿಯ ಭಾಟಿಯಾ ಕುಟುಂಬದವರಿಗೆ ಮೋಕ್ಷದ ಈ ಮಾರ್ಗ ಗೊತ್ತಾಗಿದ್ದರೆ ಅವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇರಲಿಲ್ಲ. ಅವರು ಕೂಡ ಅಮರನಾಥ್ ಯಾತ್ರೆಗೆ ಬಂದು ಸಾವಿನ ಗೇಮನ್ನೇ ಆಡಲು ಇಚ್ಛಿಸುತ್ತಿದ್ದರು. ಪ್ರತಿಕೂಲ ಹವಾಮಾನ, ಹೃದಯಾಘಾತ ಅಥವಾ ಬೇರೆ ಯಾವುದೇ ಕಾರಣದಿಂದ ಸಾವಿಗೀಡಾಗಿದ್ದರೂ ಮೋಕ್ಷ ಸಿಗುತ್ತಿತ್ತು.
ಮೇಲ್ಕಂಡ ಘಟನೆಗಳು ನೇರವಾಗಿ ಸಂಬಂಧಿಸಿರುವುದು ಧರ್ಮಕ್ಕೆ. ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಯಾವ ಯಾತ್ರಾರ್ಥಿಗಳು ಸತ್ತರೋ ಅವರೇನು ಸಮಾಜ ಸೇವೆಗೆ ಹೋದವರಾಗಿರಲಿಲ್ಲ. ಅವರ ಉದ್ದೇಶ ಮೋಕ್ಷ ಪಡೆಯುವುದಾಗಿತ್ತು. ಸತ್ತು ಮೋಕ್ಷ ಸಿಕ್ಕಿತೊ ಇಲ್ಲವೋ ಎನ್ನುವುದು ದೇವರು ಇದ್ದರೆ ಅದು ಅವನಿಗೇ ಗೊತ್ತು.
ವ್ಯವಹಾರಿಕ ಹಾಗೂ ನೇರ ತರ್ಕದ ಸಂಗತಿಯೆಂದರೆ, ಯಾತ್ರಾರ್ಥಿಗಳು ಭಾಟಿಯಾ ಕುಟುಂಬದವರ ಹಾಗೆ ಮೂರ್ಖತನವನ್ನು ಬೇರೊಂದು ರೀತಿಯಲ್ಲಿ ತೋರಿಸಿದರು. ಹೀಗಾಗಿ ಸಾವು ಕೂಡ ಅವರಿಗೆ ಬೇರೊಂದು ರೀತಿಯಲ್ಲಿಯೇ ಬಂತು. ಇಂತಹ ಸ್ಥಿತಿಯಲ್ಲಿ ಮೋಕ್ಷ ಹಾಗೂ ಸಾವಿನ ನಡುವೆ ವ್ಯತ್ಯಾಸ ಕಂಡುಕೊಳ್ಳುವುದು ಕಷ್ಟ. ಸಾಯುವುದರಿಂದ ಮೋಕ್ಷ ದೊರೆಯುತ್ತದೋ ಅಥವಾ ಮೋಕ್ಷ ದೊರೆತ ಬಳಿಕ ಸಾವು ಬರುತ್ತದೊ?