ಇಡೀ ಆಫೀಸು ಖಾಲಿಯಾಗಿತ್ತು. ಆದರೆ ವಿಜಯ್ ಮಾತ್ರ ಗೊಂದಲದಲ್ಲಿದ್ದರಂತೆ ಯೋಚನೆಯಲ್ಲಿ ಮುಳುಗಿದ್ದ. ಅವನು ಬಹಳ ಹೊತ್ತಿನಿಂದ ತನುಶ್ರೀಗೆ ಪೋನ್ ಮಾಡಲು ಯೋಚಿಸುತ್ತಿದ್ದ. ಎಷ್ಟೊ ಬಾರಿ ಮೊಬೈಲ್ ಕೈಗೆತ್ತಿಕೊಂಡರೂ, ಡಯಲ್ ಮಾಡದೆ ಸುಮ್ಮನಾಗಿಬಿಡುತ್ತಿದ್ದ. ತನುಶ್ರೀಗೆ ಏನು ಹೇಳಬೇಕೆಂದು ಅವನಿಗೆ ಗೊತ್ತಾಗುತ್ತಿರಲಿಲ್ಲ. ಈಗಾಗಲೇ ಅವನು ಅನೇಕ ಸಲ ಹೇಳಿದ್ದಾನೆ. ಮತ್ತೇ ಅದನ್ನೇ ಹೇಳಬೇಕಾದೀತೆಂದು ಅವನ ಮನಸ್ಸು ಯೋಚಿಸುತ್ತಿತ್ತು.
ಕಳೆದ ಅನೇಕ ದಿನಗಳಿಂದ ಅವನು ತನುಶ್ರೀ ಜೊತೆಗೆ ಮಾತಾಡಿಯೇ ಇಲ್ಲ. ಇಂದು ತಾನು ಅವಳ ಜೊತೆಗೆ ಮಾತಾಡಿಯೇ ತೀರಬೇಕೆಂದು ನಿರ್ಧರಿಸಿದ್ದ. ಮತ್ತೊಮ್ಮೆ ಫೋನ್ ಕೈಗೆತ್ತಿಕೊಂಡು ನಂಬರ್ ಮೇಲೆ ಬೆರಳಾಡಿಸತೊಡಗಿದ. ಅತ್ತ ಕಡೆಯಿಂದ ತನುಶ್ರೀಯ `ಹಲೋ' ಧ್ವನಿ ಕೇಳಿಸಿತು.
``ತನುಶ್ರೀ......'' ವಿಜಯ್‌ನ ಧ್ವನಿ ಕೇಳಿ ಅವಳು ಕ್ಷಣಕಾಲ ಮೌನವಾದಳು. ಬಳಿಕ ತಟಸ್ಥ ಧ್ವನಿಯಿಂದ ಹೇಳಿದಳು, ``ಮಾತಾಡಿ ವಿಜಯ್......''
``ತನು ಮತ್ತೊಮ್ಮೆ ಯೋಚಿಸು. ಎಲ್ಲವೂ ಸರಿಹೋಗುತ್ತದೆ..... ಇಷ್ಟೊಂದು ಆತುರ ಒಳ್ಳೆಯದಲ್ಲ. ನಿನಗೆ ನನ್ನ ಬಗ್ಗೆ ಯಾವುದೇ ಸಮಸ್ಯೆಯಂತೂ ಇಲ್ಲವಲ್ಲ. ಉಳಿದೆಲ್ಲ ಸಮಸ್ಯೆಗಳು ಬಗೆಹರಿಯುತ್ತವೆ.... ಅವುಗಳಿಗೆ ಏನಾದರೊಂದು ಪರಿಹಾರ ಸಿಕ್ಕೇ ಸಿಗುತ್ತದೆ.... ನೀನು ವಾಪಸ್ ಬಂದುಬಿಡು, ನನ್ನ ಜೊತೆ ನೀನೇಕೆ ಹಾಗೆ ಮಾಡುತ್ತಿರುವೆ,'' ಎಂದು ಹೇಳುತ್ತಾ ಹೇಳುತ್ತಾ ವಿಜಯ್‌ನ ಧ್ವನಿ ಸ್ವಲ್ಪ ಮೃದುವಾಯಿತು. ಅವನು ಅಳುತ್ತಿದ್ದಾನೇನೋ ಅನಿಸಿತು.
``ಕಳೆದ 2 ವರ್ಷದಿಂದ ಸಮಸ್ಯೆ ಬಗೆಹರಿಸಲು ಆಗಲಿಲ್ಲ, ಈಗೇನು ಬಗೆಹರಿಸ್ತೀರಾ ವಿಜಯ್....? ನಾನು ಅಲ್ಲಿ ಉಸಿರುಗಟ್ಟುವ, ಒತ್ತಡದ ವಾತಾವರಣದಲ್ಲಿ ಜೀವನ ಸಾಗಿಸಲು ಆಗುವುದಿಲ್ಲ. ಇಡೀ ಜೀವನ ಹೀಗೆಯೇ ಇರುವುದು ಕಷ್ಟಕರ. ನಾನು ಕ್ಷಮೆ ಕೇಳ್ತೀನಿ ನಿಮ್ಮಿಂದ......''
ಅವಳು ಫೋನ್ ಇಟ್ಟುಬಿಟ್ಟಳು. ವಿಜಯ್ ಮೌನವಾಗಿ ಫೋನ್ ನ್ನೇ ದಿಟ್ಟಿಸಿ ನೋಡುತ್ತಿದ್ದ. ಅವನ ಮದುವೆಯಾಗಿ 2 ವರ್ಷಗಳು ದಾಟಿವೆ. ಕಳೆದ 1 ವರ್ಷದಿಂದ ತನುಶ್ರೀ ತನ್ನ ತವರಿನಲ್ಲಿಯೇ ಇದ್ದಾಳೆ. ಅವಳ ಜೊತೆಗೆ ಸಂಬಂಧದ ಮಾತುಕಥೆ ನಡೆದಾಗ ಇಬ್ಬರೂ ಅನೇಕ ಸಲ ಪರಸ್ಪರ ಭೇಟಿಯಾಗಿ ಮಾತನಾಡಿದ್ದರು.
ವಿಜಯ್‌ಗೆ ತನುಶ್ರೀ ರೂಪವತಿ ಮಾತ್ರವಲ್ಲ, ಶಾಂತ ಸ್ವಭಾವದ ತಿಳಿವಳಿಕೆಯುಳ್ಳ, ಎಲ್ಲರ ಜೊತೆ ಬೆರೆಯುವ ಹುಡುಗಿ ಎನಿಸಿತ್ತು. ಅದಕ್ಕೆ ಅವಳು ಅರ್ಹಳೂ ಆಗಿದ್ದಳು. ಜೊತೆಗೆ ಅವಳು ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ತನುಶ್ರೀ ಜೊತೆಗೆ ಮಾತನಾಡುವಾಗ, ಅವನಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಇಂದಿನ ಸ್ವತಂತ್ರ ಮನೋಭಾವದ ಹುಡುಗಿಯರು ಅತ್ತೆ ಮನೆಯಲ್ಲಿ ಇರಲು ಇಷ್ಟಪಡುವುದಿಲ್ಲ. ಆದರೆ ತಾನು ತಾಯಿ ತಂದೆಯರ ಏಕೈಕ ಪುತ್ರ. ಅಕ್ಕನ ಮದುವೆ ಬಹಳ ರ್ಷಗಳ ಹಿಂದೆಯೇ ಆಗಿದೆ. ಹೀಗಾಗಿ ತಾನು ತಾಯಿ ತಂದೆಯಿಂದ ಪ್ರತ್ಯೇಕವಾಗಿರಲು ಆಗುವುದಿಲ್ಲ. ಒಟ್ಟಿಗೆ ಇರಬಹುದಾ ಎಂದು ಅವನು ಕೇಳಿದ್ದ.
ಅದಕ್ಕೆ ತನುಶ್ರೀ, ``ಅಮ್ಮ ಅಪ್ಪನ ಜೊತೆಗಿರಲು ನನಗೇನು ಸಮಸ್ಯೆ ಆಗುತ್ತೆ....? ಜೊತೆಗಿರುವುದರಿಂದ ಸಹಾಯವಂತೂ ಆಗುತ್ತದೆ. ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳಲೇಬೇಕು,'' ಎಂದಿದ್ದಳು.
ತನುಶ್ರೀಯಿಂದ ಈ ಮಾತುಗಳನ್ನು ಕೇಳಿಸಿಕೊಂಡ ವಿಜಯ್ ಬಹಳ ಖುಷಿಯಾಗಿದ್ದ. ಆದರೆ ಅವನು ತನ್ನ ಅಮ್ಮ ವಿದ್ಯಾವಂತರಾಗಿಯೂ, ಹಳೆಯ ವಿಚಾರದರೆಂಬುದನ್ನು ಮಾತ್ರ ಅವಳಿಗೆ ಹೇಳಿರಲಿಲ್ಲ.