ತನ್ನೊಂದಿಗೆ ಕೆಲಸ ಮಾಡುವ ಯಾವುದೇ ಹುಡುಗಿಯರ ಜೊತೆ ಗೌತನಿ ಅಗತ್ಯಕ್ಕಿಂತ ಹೆಚ್ಚು ಮಾತುಕತೆ ನಡೆಸುತ್ತಲೇ ಇರಲಿಲ್ಲ. ಅದೊಂದು ದಿನ ಒಂದು ರಿಪೋರ್ಟ್ ತಯಾರಿಸಲೆಂದು ಆಫೀಸ್ ಮುಗಿದ ಬಳಿಕ ಶ್ರೇಯಾ ಹಾಗೂ ಗೌತಮ್ ಆಫೀಸಿನಲ್ಲಿಯೇ ಉಳಿದುಕೊಳ್ಳಬೇಕಾಯಿತು. ಹೋಗುವಾಗ ಬಾಸ್ ಗೌತಮ್ ಗೆ ಸೂಚನೆ ಕೊಟ್ಟು ಹೋದರು. ``ಶ್ರೇಯಾಗೆ ಮನೆಗೆ ಹೋಗುವ ಸಮಯದಲ್ಲಿ ಏನಾದರೂ ಸಮಸ್ಯೆಯಾದರೆ ನೀನೇ ಅದನ್ನು ಬಗೆಹರಿಸಬೇಕು ಗೌತಮ್.''
ಕೆಲಸ ಮುಗಿಸಿ ಪಾರ್ಕಿಂಗ್‌ಗೆ ಬರುತ್ತಿದ್ದಂತೆ ಶ್ರೇಯಾಳ ಆ್ಯಕ್ಟಿವಾ ಸ್ಟಾರ್ಟ್ ಆಗುವ ಲಕ್ಷಣ ಕಂಡುಬರಲಿಲ್ಲ. ಅವಳ ಅವಿರತ ಪ್ರಯತ್ನ ಕಂಡು ಗೌತಮ್ ಹೇಳಿದ, ``ನಿನ್ನ ಗಾಡಿಯನ್ನು ಇವತ್ತು ಇಲ್ಲೇ ಬಿಟ್ಟುಬಿಡು ಶ್ರೇಯಾ, ಈಗ ನಾವು ಇದನ್ನು ಹೇಗೋ ಸ್ಟಾರ್ಟ್ ಮಾಡಿಕೊಂಡು ತೆಗೆದುಕೊಂಡು ಹೋದರೆ, ದಾರಿ ಮಧ್ಯದಲ್ಲಿ ಕೈಕೊಟ್ಟರೆ ಆಗ ಏನು ಮಾಡ್ತೀಯಾ? ನಾಳೆ ಮೆಕ್ಯಾನಿಕ್‌ನನ್ನು ಕರೆದುಕೊಂಡು ಬಂದು ರಿಪೇರಿ ಮಾಡಿಸಿದರಾಯ್ತು.''
``ಸರಿ, ನಾನು ಈಗಲೇ ಪಂಕಜ್‌ಗೆ ಬಂದು ಕರೆದುಕೊಂಡು ಹೋಗಲು ಹೇಳ್ತೀನಿ,'' ಎಂದು ಹೇಳುತ್ತ ಅವಳು ಮೊಬೈಲನ್ನು ಕೈಗೆತ್ತಿಕೊಂಡು, ``ಅವನು 15-20 ನಿಮಿಷಗಳಲ್ಲಿ ಇಲ್ಲಿಗೆ ಬರ್ತಾನೆ,'' ಎಂದಳು.
``ಅವನನ್ನು ಇಲ್ಲಿಗೆ ಕರೆಸುವ ಬದಲು ನನ್ನ ಬೈಕ್‌ನಲ್ಲಿ ಬರಹುದಲ್ವಾ?'' ಗೌತಮ್ ಹೇಳಿದ.
``ಆದರೆ ನನ್ನ ಮನೆ ಇರೋದು ಒಂದು ಕಡೆ, ನಿನ್ನ ಮನೆ ಇರೋದು ಇನ್ನೊಂದು ಕಡೆ. ನಿನಗೆ ದೊಡ್ಡ ರೌಂಡ್ ಹೊಡೆಯಬೇಕಾಗುತ್ತದೆ.''
``ಇಲ್ಲಿಯೇ ನಿಂತು ಕಾಯುವುದಕ್ಕಿಂತ ನೀನು ನನ್ನೊಂದಿಗೆ ನಡೆ. ಅಂದಹಾಗೆ, ನಾನು ನಿನ್ನೊಬ್ಬಳನ್ನೇ ಇಲ್ಲಿ ಬಿಟ್ಟುಹೋಗಲು ಆಗುವುದಿಲ್ಲ.''
``ವಿಷಯ ಮನವರಿಕೆಯಾಗಿ ಶ್ರೇಯಾ ಗೌತಮ್ ನ ಬೈಕ್ ಹತ್ತಿ ಕುಳಿತಳು. ಮನೆ ತಲುಪಿದಾಗ ಶ್ರೇಯಾಳ ಆಗ್ರಹದ ಮೇರೆಗೆ ಗೌತಮ್ ಅವಳ ಮನೆಯೊಳಗೆ ಹೋಗಬೇಕಾಯಿತು. ತನ್ನ ತಂದೆ ದೇವರಾಜ್, ತಾಯಿ ಉಮಾ, ತಂಗಿ ಸೃಷ್ಟಿ ಹಾಗೂ ಅವಳಿ ಸೋದರ ಪಂಕಜ್ ಗೆ ಗೌತಮ್ ನನ್ನು ಪರಿಚಯಿಸಿದಳು.
``ಓಹ್, ಪಂಕಜ್ ನಿನ್ನ ಬಾಯ್ ಫ್ರೆಂಡ್ ಆಗಿರಬೇಕು. ಹಾಗಾಗಿ ನಿನ್ನನ್ನು ಕರೆದುಕೊಂಡು ಹೋಗಲು ಬರ್ತಾನೆ. ಅದರಿಂದ ಏನು ಭಯ ಇಲ್ಲ ಎಂದು ಭಾವಿಸಿದ್ದೆ,'' ಗೌತಮ್ ಅವಳ ಮುಂದೆ ತನ್ನ ಮನಸ್ಸಿನ ವಿಚಾರ ಹೇಳಿಕೊಂಡ.
``ಪಂಕಜ್ ಇರುವಾಗ ನನಗೆ ಬಾಯ್ ಫ್ರೆಂಡ್‌ನ ಅವಶ್ಯಕತೆಯೇ ಇಲ್ಲ,'' ಎಂದು ಹೇಳುತ್ತ ಶ್ರೇಯಾ ನಕ್ಕಳು.
``ಇವಳನ್ನು ಬಿಟ್ಟುಹೋಗುವ ಕೆಲಸ ನಿಮಗೆ ಬಂದದ್ದರಿಂದ ಇಂದು ನಿಮಗೆ ಮನೆಗೆ ಹೋಗಲು ತಡವಾಯಿತು,'' ಎಂದು ಅಮ್ಮ ಉಮಾ ಹೇಳಿದರು.
``ಇರಲಿ ತೊಂದರೆ ಇಲ್ಲ ಆಂಟಿ. ನಿಮ್ಮೆಲ್ಲರ ಜೊತೆ ತಿಂಡಿ ತಿನ್ನುತ್ತಾ ಕಾಫಿ ಕುಡಿಯುವ ಯೋಗ ಸಿಕ್ಕಿತು.''
ಉಮಾಳಿಗೆ ಅವನ ಸರಳತೆ ಬಹಳ ಇಷ್ಟವಾಯಿತು. ಅವರು ಗೌತಮ್ ಕುಟುಂಬದ ಬಗ್ಗೆ ಕೇಳಿದಾಗ, ತನಗೆ ಅಕ್ಕ ತಂಗಿ, ತಮ್ಮ ಯಾರೂ ಇಲ್ಲ ಎಂದು ಹೇಳಿದ. ತಾಯಿ ತಂದೆ ಇಬ್ಬರೂ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಈಗ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಕೇಂದ್ರ ಆರಂಭಿಸಿರುವ ಬಗ್ಗೆಯೂ ಹೇಳಿದ.