ಸುನಂದಾ ಡ್ರೆಸ್ಸಿಂಗ್ ಟೇಬಲ್ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡಳು. ತಾನು ಚೆನ್ನಾಗಿಯೇ ಕಾಣಿಸುತ್ತಿದ್ದೇನೆ ಎಂದು ಅವಳಿಗೆ ಅನ್ನಿಸಿತು. ತನ್ನ ಶೋಲ್ಡರ್ ಕಟ್ ಕೂದಲಿನಲ್ಲಿ ಬಾಚಣಿಗೆ ಹಾಕಿದಳು. ತನ್ನಿಷ್ಟದ ಪರ್ಫ್ಯೂಮ್ ಹಾಕಿಕೊಂಡಳು. ಸಮಯ 5 ಗಂಟೆ ಆಗುತ್ತಿತ್ತು. ಕಿಟಿ ಪಾರ್ಟಿಗೆ ಹೋಗುವ ಸಮಯವದು. ತನ್ನ ಬ್ಯಾಗಿನಲ್ಲಿ ಫೋನ್ ಹಾಗೂ ಮನೆಯ ಬೀಗದ ಕೈ ಇಟ್ಟುಕೊಂಡಳು. ತನ್ನ ಹೊಸ ಕುರ್ತಾ ಮತ್ತು ಜೀನ್ಸ್ ಮೇಲೆ ಮತ್ತೊಮ್ಮೆ ಕಣ್ಣು ಹರಿಸಿದಳು.
ಆ ಡ್ರೆಸ್‌ನ್ನು ಅವಳು ಕಳೆದ ವಾರವಷ್ಟೇ ಖರೀದಿಸಿದ್ದಳು. ಇಂದು ಅವಳ ಹುಟ್ಟಿದ ದಿನವಾಗಿತ್ತು. ಕಿಟಿ ಪಾರ್ಟಿಗೆ ಹೋಗ್ತಾ ಹೋಗ್ತಾ ಒಂದು ಕೇಕ್ ತೆಗೆದುಕೊಂಡು ಹೋಗಬೇಕು, ಅಲ್ಲಿನ ಸದಸ್ಯರ ಜೊತೆ ಸೇರಿ ಕೇಕ್ ಕತ್ತರಿಸಬೇಕು. ಅದರಿಂದ ಸಾಕಷ್ಟು ಖುಷಿ ಸಿಗುತ್ತದೆ ಎಂದೆಲ್ಲ ಅವಳು ಯೋಚಿಸಿದಳು.
ಅವಳು ತನ್ನ ಕಿಟಿ ಬಳಗದ ಅತ್ಯಂತ ಹಿರಿಯ ಸದಸ್ಯೆ. ಅವಳಿಗೇ ನಗು ಬಂತು. ವಯಸ್ಸಾದವಳು ಏಕೆ? ಇಂದು ಅವಳಿಗೆ 50 ತುಂಬಿತ್ತು. ಆದರೆ ಅಷ್ಟು ವಯಸ್ಸಾದವಳಂತೆ ಕಾಣುತ್ತಿರಲಿಲ್ಲ. ಅವಳು ತನ್ನನ್ನು ತಾನು ಯಂಗ್ ಮತ್ತು ಸ್ಛೂರ್ತಿಶಾಲಿ ಎಂದು ಭಾವಿಸಿದ್ದಳು. ವಯಸ್ಸಿನಿಂದ ಏನು ತಾನೇ ಆಗುತ್ತದೆ? ಈಗ ಹೊರಡಬೇಕು. ಇಲ್ಲವಾದರೆ ತಡವಾಗುತ್ತದೆ ಎಂದು ಯೋಚಿಸಿ ಕೈಯಲ್ಲಿ ಪರ್ಸ್ ಕೈಗೆತ್ತಿಕೊಂಡಳು. ಅಷ್ಟರಲ್ಲಿ ಕಾಲ್ ಬೆಲ್ ಸದ್ದಾಯಿತು.
`ಈ ಹೊತ್ತಿನಲ್ಲಿ ಯಾರು ಬಂದರು?' ಎಂದು ಯೋಚಿಸುತ್ತಾ ಅವಳು ಬಾಗಿಲು ತೆರೆದಳು.
ಎದುರಿಗಿದ್ದವರನ್ನು ನೋಡಿ ಅವಳ ಹೃದಯ ಒಮ್ಮೆಲೆ ನಿಂತುಹೋಯಿತು. ಎದುರಿಗೆ ಸೋದರತ್ತೆ ಸುಭದ್ರಾ, ಹಿರಿಯ ನಾದಿನಿ ರಮಾ ಹಾಗೂ ಅವಳ ಅಕ್ಕ ಅಂಜಲಿ ನಿಂತಿದ್ದರು.
ಸುನಂದಾಳ ಬಾಯಿಂದ ಯಾವುದೇ ಮಾತು ಹೊರಡಲಿಲ್ಲ. ಆಗ ಸುಭದ್ರಾ, ``ಏನು ಮುಖ ನೋಡುತ್ತಿರುವೆ, ಒಳಗೆ ಬರಲು ಹೇಳೋದಿಲ್ವೆ.....?'' ಎಂದರು.
``ಬನ್ನಿ..... ಬನ್ನಿ..... ಒಳಗೆ,'' ಎಂದು ಹೇಳುತ್ತಾ ಅವಳು ಸೋದರತ್ತೆಯ ಕಾಲಿಗೆ ಬಿದ್ದಳು. ಮೂವರು ಅವಳಿಗೆ ಹುಟ್ಟುಹಬ್ಬದ ವಿಶ್ ಮಾಡುತ್ತಾ ಗಿಫ್ಟ್ ಕೊಟ್ಟರು.
``ನಿನ್ನ ಬರ್ತ್ ಡೇ ಬಹಳ ಒಳ್ಳೆಯ ದಿವಸವೇ ಬಂದಿದೆ. ಇವತ್ತು ಬೆಳಗ್ಗೆಯಷ್ಟೇ ನಮ್ಮ ದೇವಸ್ಥಾನಕ್ಕೆ ಸ್ವಾಮೀಜಿ ಬಂದಿದ್ದಾರೆ. ಮೊದಲು ಅವರ ಪ್ರವಚನ, ನಂತರ ಕೀರ್ತನೆ ಇದೆ. ನಾವು ನಿನ್ನನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ,'' ಎಂದು ರಮಾ ಹೇಳಿದಳು.
ಸುನಂದಾ ತಡವರಿಸಿದಳು, ``ನಾನು ಕೀರ್ತನೆಗೆ.......?''
``ಹೋಗೋಣ ಬಾ. ಇಡೀ ದಿನ ಏನು ಮಾಡ್ತಾ ಇರ್ತಿಯೋ? ನೀನು ಧರ್ಮದಲ್ಲಿ ಒಂದಷ್ಟು ಮನಸ್ಸು ತೊಡಗಿಸು, ಪುಣ್ಯ ಲಭಿಸುತ್ತೆ. ಬಹಳ ದಿನಗಳ ಬಳಿಕ ಸ್ವಾಮೀಜಿಗಳು ಇಲ್ಲಿಗೆ ಬಂದಿದ್ದಾರೆ. ಇನ್ಯಾವಾಗ ಬರ್ತಾರೊ ಗೊತ್ತಿಲ್ಲ,'' ಸುಭದ್ರಾ ಹೇಳಿದರು.
ಸುನಂದಾಳ ಮೂಡ್ ಒಮ್ಮೆಲೆ ಕೆಟ್ಟುಹೋಯಿತು. ಅವಳು ಮನಸ್ಸಲ್ಲೇ ಸ್ವಾಮೀಜಿಯನ್ನು ತೆಗಳಿದಳು. ಅವರು ಇತ್ತೇ ಬರಬೇಕಿತ್ತಾ? ತನಗೆ ಇವತ್ತು ಕಿಟಿ ಪಾರ್ಟಿ ಇದೆ. ಅದನ್ನು ಕೇಳಿಸಿಕೊಂಡರೆ ಬಂದವರು ನೀನು ಪ್ರವಚನ ಕೀರ್ತನೆ ಬಿಟ್ಟು ಕಿಟಿ ಪಾರ್ಟಿಗೆ ಹೇಗಬೇಕಾ ಎಂದು ತನ್ನನ್ನು ಹೀಗಳೆಯುತ್ತಾರೆ. ತನ್ನ ಅಲಂಕಾರ, ಡ್ರೆಸ್ ನೋಡಿ ಅವರು ಮೊದಲೇ ಉರಿಯುತ್ತಾರೆ.