ಕಥೆ - ಅರುಣಾ ಪ್ರಸಾದ್
ಮನೆಯಲ್ಲಿನ ಜಗಳದ ವಾತಾವರಣ, ಬಾಳಿನಲ್ಲಿ ಹೇಳದೆ ಬಂದ ಹೊಡೆತಗಳು, ಇವುಗಳ ನಡುವೆ ಅಮಿತಾಳಿಗೆ ಜೀವನದ ಸಂತೋಷ ಉತ್ಸಾಹಗಳಲ್ಲಿ ಪಾಲ್ಗೊಳ್ಳುವ ಅವಕಾಶವೇ ಇರಲಿಲ್ಲ.
ಅಮಿತಾ ತನ್ನ 18ನೇ ವರ್ಷದ ಜನ್ಮದಿನವನ್ನು ಎದುರು ನೋಡುತ್ತಿದ್ದಳು. ಅವಳು ವಯಸ್ಕಳಾಗಲು ಇನ್ನೂ 2 ತಿಂಗಳು ಉಳಿದಿದ್ದವು. ಆದರೆ ಅವಳ ಜೀವನದಲ್ಲಿ ಬಿದ್ದ ಪೆಟ್ಟುಗಳು ಅವಳನ್ನು ಕಾಲಕ್ಕೆ ಮೊದಲೇ ವಯಸ್ಕಳನ್ನಾಗಿಸಿಬಿಟ್ಟಿದ್ದವು. ಅವಳ ತಾಯಿಯ ಸಾವಿನ ನಂತರ ಅಜ್ಜಿಯೇ ಅವಳನ್ನು ಸಾಕುವ ಜವಾಬ್ದಾರಿ ವಹಿಸಿಕೊಂಡಿದ್ದರು. ಮೊಮ್ಮಗಳ ಮುಖದಲ್ಲೇ ಮಗಳನ್ನು ಕಾಣುತ್ತಾ, ಚಿಕ್ಕ ಹುಡುಗಿಗೆ ತಾಯಿಯ ಕೊರತೆ ಕಾಣದಂತೆ ಮಾಡಲು ಪ್ರಯತ್ನಿಸಿದ್ದರು. ತಾಯಿಯ ಸ್ಥಾನವನ್ನು ಬೇರಾರೂ ತುಂಬಲಾರರೆಂಬುದು ಅಜ್ಜಿಗೂ ಗೊತ್ತು, ಮೊಮ್ಮಗಳಿಗೂ ಗೊತ್ತು. ಆದರೂ ಅದನ್ನು ಹೊರಗೆ ತೋರಗೊಡದೆ, ಇರುವ ಸಂಬಂಧವನ್ನು ಭದ್ರಗೊಳಿಸಲು ಇಬ್ಬರೂ ಶ್ರಮಿಸುತ್ತಿದ್ದರು. ಕಾಲಚಕ್ರ ಅಮಿತಾಳನ್ನು ಒಂದು ಪಾರ್ಸೆಲ್‌ನಂತೆ ಮಾಡಿಬಿಟ್ಟಿತ್ತು. ತಾಯಿಯ ಕಾಲಾನಂತರ ಅಜ್ಜಿಯ ಬಳಿಗೆ ತಲುಪಿಸಿತ್ತು. ಇತ್ತೀಚೆಗೆ ಅಜ್ಜಿಯ ಮರಣದ ನಂತರ ಉಳಿದಿದ್ದ ಒಬ್ಬ ಚಿಕ್ಕಮ್ಮನ ಕಡೆಗೆ ಕಳುಹಿಸಿತ್ತು. ಚಿಕ್ಕಮ್ಮನ ಇಬ್ಬರು ಮಕ್ಕಳೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೂರದ ನಗರದ ಹಾಸ್ಟೆಲ್‌ನಲ್ಲಿ ಇರುತ್ತಿದ್ದರು. ಹೀಗಾಗಿ ಅಮಿತಾ ಬಂದುದರಿಂದ ಚಿಕ್ಕಮ್ಮನಿಗೆ ಸಹಜವಾಗಿ ಸಂತೋಷವೇ ಆಗಿತ್ತು.
ಅಮಿತಾಳ ಅನೇಕ ಗೆಳತಿಯರು ತಮ್ಮ 18ನೇ ಜನ್ಮದಿನವನ್ನು ಸಡಗರದಿಂದ ಆಚರಿಸಿದ್ದರು. ಉಳಿದವರು ಬರುವ ತಿಂಗಳುಗಳಲ್ಲಿ ಆಚರಿಸಲಿದ್ದರು. ಅದಕ್ಕಾಗಿ ಪ್ಲಾನ್ ಮಾಡುತ್ತಿದ್ದರು. ಆಗೆಲ್ಲ ಅಮಿತಾ ಮೌನವಾಗಿ ಕುಳಿತು ಅವರ ಮಾತುಗಳನ್ನು ಕೇಳುತ್ತಿದ್ದಳು. ಅವಳು ಕಲ್ಪನಾಲೋಕದಲ್ಲಿ ತನ್ನ ಬರ್ತ್‌ಡೇ ಸೆಲೆಬ್ರೇಶನ್ ಪಾರ್ಟಿಯ ಆನಂದದಲ್ಲಿ ವಿಹರಿಸುತ್ತಿದ್ದಳು, ಅಷ್ಟಲ್ಲದೆ, ಅವಳು ಆ ಕುರಿತು ಮತ್ತೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ.
2 ತಿಂಗಳು ಕಳೆದವು. ಅವಳ ಜನ್ಮದಿನ ಬಂದಿತು. ಅಜ್ಜಿಯ ಸಾವಿನ ನಂತರ ಜನ್ಮದಿನವನ್ನಾಚರಿಸಿ ಸಂಭ್ರಮಿಸುವ ಮನಸ್ಸು ಉಳಿದಿರಲಿಲ್ಲ. ಹೀಗಾಗಿ ಅಮಿತಾ ಬೆಳಗ್ಗೆ ಎದ್ದು ಎಂದಿನಂತೆ ಕಾಲೇಜಿಗೆ ನಡೆದಳು. ಸಾಯಂಕಾಲ ಮನೆಗೆ ಹಿಂತಿರುಗಿದಾಗ ಡೈನಿಂಗ್ ಟೇಬಲ್ ಮೇಲೆ ಅಮಿತಾಳ ಹೆಸರಿದ್ದ ಒಂದು ದೊಡ್ಡ ಲಕೋಟೆ ಇರುವುದು ಕಾಣಿಸಿತು. ಆದರೆ ಅದರ ಮೇಲೆ ಕಳುಹಿಸಿದ್ದವರ ಹೆಸರು ಇರಲಿಲ್ಲ ಮತ್ತು ಅಂಚೆಯ ಮುದ್ರೆಯೂ ಇರಲಿಲ್ಲ.
ಅಮಿತಾ ಆ ಲಕೋಟೆಯನ್ನು ಎತ್ತಿಕೊಂಡು ಉದ್ವೇಗದಿಂದ ಚಿಕ್ಕಮ್ಮನ ಬಳಿಗೆ ಓಡಿದಳು, ``ಚಿಕ್ಕಮ್ಮ, ಇದು ಎಲ್ಲಿಂದ ಬಂತು?''
``ಅದರ ಮೇಲೆ ನಿನ್ನ ಹೆಸರೇ ಇದೆಯಲ್ಲ. ತೆರೆದು ನೋಡು.''
ಅಮಿತಾ ಆ ದೊಡ್ಡ ಲಕೋಟೆಯನ್ನು ತೆರೆದು ನೋಡಿದಾಗ ಅದರೊಳಗೆ ಬಿಳಿ ಬಣ್ಣದ ಚಿಕ್ಕ ಚಿಕ್ಕ ಕೆಲವು ಲಕೋಟೆಗಳಿರುವುದು ಕಂಡು ಬಂದಿತು. ಅವುಗಳ ಮೇಲೆ ಯಾವುದೇ ಹೆಸರಿರಲಿಲ್ಲ. ದೊಡ್ಡ ದೊಡ್ಡ ಅಂಕಿಗಳಲ್ಲಿ ಬೇರೆ ಬೇರೆ ತಾರೀಖುಗಳನ್ನು ನಮೂದಿಸಲಾಗಿತ್ತು. ಗಮನಿಸಿ ನೋಡಿದಾಗ ಅವುಗಳೆಲ್ಲ ಬೇರೆ ಬೇರೆ ವರ್ಷಗಳಲ್ಲಿ ಬೀಳುವ ಅಮಿತಾಳ ಜನ್ಮದಿನದ ತಾರೀಖುಗಳಾಗಿದ್ದವು. ಅಮಿತಾ ಗೊಂದಲದಿಂದ ಚಿಕ್ಕಮ್ಮನ ಕಡೆ ನೋಡಿದಾಗ, ತಮಗೇನೂ ತಿಳಿದಿಲ್ಲವೇನೋ ಎಂಬಂತೆ ಅವರ ತುಟಿಯ ಮೇಲೆ ರಹಸ್ಯಪೂರ್ಣವಾದ ಮುಗುಳ್ನಗೆ ಹರಡಿತ್ತು.