ಕಥೆ - ದೇವಿಕಾ ಕುಮಾರ್
ಅವಳು... ವಿಚ್ಛೇದಿತೆ! ಅವಳು ಡಿವೋರ್ಸಿ ಅಂತೆ ಎಂದು ಆಫೀಸ್‌ನ ಸಿಬ್ಬಂದಿಯೆಲ್ಲ ಮಾತನಾಡಿಕೊಳ್ಳುವವರೇ! ನನಗೆ ಈ ಕೆಲಸಕ್ಕಾಗಿ ಇಂಟರ್‌ವ್ಯೂಗೆ ಬಂದಿದ್ದಾಗಲೇ ಈ ವಿಷಯ ಗೊತ್ತಾಗಿತ್ತು. ಬೆಂಗಳೂರಿನ ಒಂದು ದೊಡ್ಡ ಖಾಸಗಿ ಕಾಲೇಜಿನಲ್ಲಿ ಉನ್ನತ ಹುದ್ದೆಗಾಗಿ ಸಂದರ್ಶನಕ್ಕೆ ಕರೆಬಂದಿತ್ತು.
ನನ್ನದು ಲೈಬ್ರೆರಿಸೈನ್ಸ್ ನಲ್ಲಿ ಡಿಗ್ರಿ ಆಗಿತ್ತು. ಅವಳ ಬಳಿ ಅದರ ಸ್ನಾತಕೋತ್ತರ ಪದವಿಯ ಹಿರಿಮೆ ಇತ್ತು. ಆ ಕಾಲೇಜಿನ ಸೆಲೆಕ್ಟಿಂಗ್ ಕಮಿಟಿಯಲ್ಲಿ ಪ್ರಿನ್ಸಿಪಾಲ್ ಆಗಿದ್ದ ಪ್ರೌಢ ಮಹಿಳೆಯೇ ಕಾಲೇಜಿನ ಮಾಲೀಕರು, ಅಧ್ಯಕ್ಷರು ಎಲ್ಲಾ ಅವರೇ ಆಗಿದ್ದರು. ಕಮಿಟಿ ನಮ್ಮನ್ನು ಇಂಟರ್‌ವ್ಯೂ ಮಾಡಲಿದೆ ಎಂದು ಹೇಳಿದ್ದರು.
ಸರಿ ಎಂದು ನಾವು ಸಂದರ್ಶನ ನಡೆಯುವ ಕ್ಯಾಬಿನ್ ಗೆ ಹೋಗಿ ನೋಡಿದರೆ ಈ ಪ್ರಿನ್ಸಿಪಾಲ್ ಸ್ನೇಹಲತಾ ಮೇಡಂ ಮಾತ್ರ ಇದ್ದರು. ಅವರು ನಮ್ಮಿಬ್ಬರ ಸಿವಿಲ್, ಡಿಗ್ರಿ ಸರ್ಟಿಫಿಕೇಟ್ಸ್ ಎಲ್ಲಾ ಪರಿಶೀಲಿಸಿದರು.
ನಂತರ ನನ್ನತ್ತ ತಿರುಗಿ ಕೇಳಿದರು, ``ನಿಮಗೆ ಮದುವೆ ಆಗಿದೆಯೇ?''
``ಹೌದು.''
``ಬಿ.ಲಿಬ್ ಆಗಿದೆ ಅಲ್ಲವೇ?''
``ಹೌದು.''
ನಂತರ ನನಗಿಂತ ಎಷ್ಟೋ ಪಾಲು ಸುಂದರಿಯಾಗಿದ್ದ ಇನ್ನೊಬ್ಬ ಯಂಗ್ ಹುಡುಗಿ ಕಡೆ ತಿರುಗಿ, ``ನೀವು ಮುಕ್ತಿ ಅಲ್ಲವೇ?'' ಎಂದರು.
``ಹ್ಞೂಂ.''
``ನಿಮ್ಮದು ಮಾಸ್ಟರ್ ಡಿಗ್ರಿ ಅಲ್ಲವೇ.... ಎಂ.ಬಿ.ಎ.''
``ಹ್ಞೂಂ,'' ಅದೆಲ್ಲ ಸರ್ಟಿಫಿಕೇಟ್‌ಗಳಲ್ಲೇ ಇದೆಯಲ್ಲ ಎಂಬ ಆಕ್ಷೇಪಣೆ ಆ ದನಿಯಲ್ಲಿ ಅಡಗಿತ್ತು.
``ಮತ್ತೆ... ನೀವು ಡಿವೋರ್ಸೀನಾ?''
``ಹ್ಞೂಂ,'' ಯಾವುದೇ ಅಳುಕಿಲ್ಲದ ಉತ್ತರ.
``ಏಕೆ ಅಂತ ಕೇಳಬಹುದೇ?''
``ಇಲ್ಲ, ಅದು ನನ್ನ ಪರ್ಸನಲ್.''
``ಓ.ಕೆ.... ನೀವಿಬ್ಬರೂ ಅಪಾಯಿಂಟೆಡ್,'' ಎಂದರು ಆಕೆ.
``ಮುಕ್ತಿ, ನಾಳೆಯಿಂದ ನೀವು ಲೈಬ್ರೇರಿಯನ್ ಹುದ್ದೆ ನಿರ್ವಹಿಸುತ್ತೀರಿ ಹಾಗೂ ಕಾರ್ತಿಕ್, ನೀವು ಅಸಿಸ್ಟೆಂಟ್ ಲೈಬ್ರೇರಿಯನ್. ಈ ವರ್ಷ ಅಟೆಂಡೆಂಟ್ ಪೋಸ್ಟ್ ಗೆ ಯಾರನ್ನೂ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ನೀವಿಬ್ಬರೇ ಎಲ್ಲವನ್ನೂ ಮ್ಯಾನೇಜ್ ಮಾಡಿಕೊಳ್ಳಬೇಕು.''
``ಆಯ್ತು ಮೇಡಂ,'' ಇಬ್ಬರೂ ಒಟ್ಟಿಗೆ ಹೇಳಿದೆವು.
ಆ ಕಾಲೇಜಿನಲ್ಲಿ ನನಗೆ ಸಂಬಳ 15 ಸಾವಿರ ಹಾಗೂ ಮುಕ್ತಿಗೆ 20 ಸಾವಿರ ಎಂದು ನಿಗದಿಯಾಗಿತ್ತು. ಮುಕ್ತಿ ಅಂದಿನಿಂದ ನನ್ನ ಪಾಲಿಗೆ ಮುಕ್ತಿ ಮೇಡಂ ಆದರು, ಏಕೆಂದರೆ ನನಗಿಂತ ಆಕೆಯದು ಹಿರಿಯ ಹುದ್ದೆ, ನಾನು ಅವರ ಬಳಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು.
ಮುಕ್ತಿ ಆ ಕ್ಯಾಬಿನ್‌ನಿಂದ ಹೊರಗೆ ಹೊರಟ ತಕ್ಷಣ ನಾನೂ ಹೊರಡಲು ಅನುವಾದೆ. ಸ್ನೇಹಾ ಮೇಡಂ ನನ್ನನ್ನು ತಡೆಯುತ್ತಾ ಹೇಳಿದರು, ``ಕಾರ್ತಿಕ್, ಆಕೆ ಡಿವೋರ್ಸಿ.... ನೀವು ಸ್ವಲ್ಪ ಎಚ್ಚರಿಕೆಯಿಂದ ಸಂಭಾಳಿಸಬೇಕು. ಹಸಿದ ಹೆಣ್ಣು ಹುಲಿ ಯಾವಾಗ ಬೇಕಾದರೂ ಮೈ ಮೇಲೆ ಎರಗಬಹುದು, ನಿಮ್ಮ ಹುಷಾರಿನಲ್ಲಿ ನೀವಿರಿ,'' ಜೋರಾಗಿ ನಗುತ್ತಾ ಹೇಳಿದರು,
``ತಮಾಷೆಗೆ ಹೇಳಿದೆ ಕಣ್ರೀ..... ಕಂಪ್ಲೇಂಟ್ ಬರದಂತೆ ಟ್ಯಾಕಲ್ ಮಾಡಿ.''
ಮಾರನೇ ದಿನದಿಂದ ಇಬ್ಬರೂ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡೆವು. ಆ ಕಾಲೇಜಿನ ಲೈಬ್ರೆರಿ ವಿಶಾಲವಾಗಿತ್ತು. ಇನ್ನೂ ಹೊಸ ಕಾಲೇಜ್ ಆದುದರಿಂದ ವಿದ್ಯಾರ್ಥಿಗಳ ಸಂಖ್ಯೆ ಬಹಳ ಜಾಸ್ತಿ ಏನಿರಲಿಲ್ಲ. ಈಗಿನ ಕಾಲದ ವಿದ್ಯಾರ್ಥಿಗಳ ಚಂದಕ್ಕೆ ಲೈಬ್ರೆರಿಗೆ ಬಂದು ಮುಖ ತೋರಿಸುವುದೂ ಕಡಿಮೆಯೇ..... ಹೀಗಾಗಿ ನಮಗೆ ಕೆಲಸ ಬಹಳ ಜಾಸ್ತಿ ಏನಿರಲಿಲ್ಲ.