ಕಥೆ- ಅನುಪಮಾ
ಅಪರೂಪಕ್ಕೆ ಬೇಸಿಗೆಯಲ್ಲಿ ಮಳೆ ಬಂದು ವಾತಾವರಣ ಎಲ್ಲೆಡೆ ತಂಪಾಗಿತ್ತು. ಆಗ ಸುತ್ತಲಿನ ಪರಿಸರ ಮಾತ್ರವಲ್ಲದೆ, ಮನಸ್ಸು ಸಹ ಪ್ರಫುಲ್ಲಿತಗೊಳ್ಳುತ್ತದೆ. ಸುತ್ತಮುತ್ತಲಿನ ಆಹ್ಲಾದಕರ ವಾತಾವರಣದಂತೆಯೇ ಸ್ನೇಹಾಳ ಮನಸ್ಸೂ ಸಹ ಸಂತಸದಿಂದ ತುಂಬಿತ್ತು. ಆಗ ತಾನೇ ಬಂದ ಮೃದುಲಾಳ ಫೋನ್ ಕಾಲ್ ಅವಳ ಸಂತಸ ಹೆಚ್ಚಿಸಿತ್ತು.
ಇವರಿಬ್ಬರ ಮೈತ್ರಿ ಸ್ನೇಹದ ಗಡಿ ದಾಟಿ ಪ್ರೇಮಕ್ಕೆ ತಿರುಗಿತ್ತು! ಹೀಗಾಗಿ ತಮ್ಮ ಬಾಂಧವ್ಯಕ್ಕೆ ಒಂದು ಶಾಶ್ವತ ತಿರುವು ಕೊಡಲು, ಕೂಡಲೇ ಸಂಗಾತಿಗಳಾಗಿ ಬಾಳಲು ನಿಶ್ಚಯಿಸಿದರು. ಇದಕ್ಕೆ ಸ್ನೇಹಾಳ ಮನೆಯವರ ಒಪ್ಪಿಗೆ ಈಗಾಗಲೇ ಸಿಕ್ಕಿತ್ತು. ಇದೀಗ ಮೃದುಲಾ ಮನೆಯವರ ಒಪ್ಪಿಗೆಗಾಗಿ ಕಾಯುತ್ತಿದ್ದರು. ಹೀಗಾಗಿ ಸ್ನೇಹಾಳೇ ಒಂದು ಕೊನೆಯ ಪ್ರಯತ್ನ ಮಾಡಿ ಹೇಗಾದರೂ ನಿನ್ನ ಮನೆಯವರನ್ನು ಒಪ್ಪಿಸು ಎಂದು ಮೃದುಲಾಳನ್ನು ಮುಂಬೈಗೆ ಕಳುಹಿಸಿದ್ದಳು.
ಅವಳು ಅಲ್ಲಿಂದ ಕಾಲೇಜು ಕಲಿಯಲೆಂದೇ ಬೆಂಗಳೂರಿಗೆ ಬಂದು ಸೇರಿದ್ದಳು. ಒಂದೇ ಓರಗೆಯವರಾದ ಈ ಸಹಪಾಠಿಗಳು ಹೀಗೆ ಆಪ್ತರಾಗಿದ್ದರು. ಮೊದಮೊದಲು ಅವರ ಮನೆಯವರು ಒಪ್ಪಿರಲಿಲ್ಲ. ಆದರೆ ಈ ರೀತಿಯ ಟೆನ್ಶನ್ ಇಟ್ಟುಕೊಂಡು ಹೊಸ ಬಾಳು ಆರಂಭಿಸುವುದಕ್ಕಿಂತ, ಯಾವ ಮಾನಸಿಕ ಒತ್ತಡ ಇಲ್ಲದೆ, ಅವರ ಮನೆಯವರೂ ಒಪ್ಪಿಗೆ ನೀಡಲಿ ಎಂದು ಕಾಯುತ್ತಿದ್ದರು. ಕೊನೆಗೆ ಮುಂಬೈನಿಂದ ಕಾಲ್ ಬಂದು ಅವರ ಮನೆಯವರು ಒಪ್ಪಿದ್ದಾರೆಂದು ತಿಳಿದ ಮೇಲೆ ಮನಸ್ಸಿಗೆ ನಿರಾಳವಾಯಿತು.
ಮಾರನೇ ದಿನ ಮೃದುಲಾ ಹಾಗೂ ಅವಳ ತಾಯಿತಂದೆ ಮುಂಬೈನಿಂದ ಬೆಂಗಳೂರಿಗೆ ಬರುವವರಿದ್ದರು.ಸ್ನೇಹಾ ಮೊದಲ ಸಲ ಮೃದುಲಾಳನ್ನು ಭೇಟಿಯಾದಾಗ, ಅವಳ ಆತ್ಮವಿಶ್ವಾಸ ತುಂಬಿದ ನಿರ್ಭೀಕ ವ್ಯಕ್ತಿತ್ವವೇ ಇವಳನ್ನು ಹೆಚ್ಚು ಆಕರ್ಷಿಸಿದ್ದು.
ಸ್ನೇಹಾ ಕಾಲೇಜಿನ 3ನೇ ವರ್ಷದಲ್ಲಿದ್ದಳು. ತನ್ನ ಸುಮನೋಹರ ಸೌಂದರ್ಯ ಮತ್ತು ವರ್ಚಸ್ವೀ ವ್ಯಕ್ತಿತ್ವದಿಂದಾಗಿ ಅವಳು ಕಾಲೇಜಿನಲ್ಲಿ ಬಹಳ ಫೇಮಸ್ ಎನಿಸಿದ್ದಳು. ಆದರೆ ಓದಿನಲ್ಲಿ ಅವಳೇನೂ ಚುರುಕಾಗಿರಲಿಲ್ಲ. ಆದರೆ ಕಾಲೇಜಿನ ಪಠ್ಯೇತರ ಸಾಂಸ್ಕೃತಿಕ ಚಟುವಟಿಕೆಗಳು, ಆಟೋಟಗಳಲ್ಲಿ ಅವಳು ಸದಾ ಮುಂದು. ಕ್ಲಾಸ್ ಮುಗಿಸಿಕೊಂಡ ಸ್ನೇಹಾ ಕ್ಯಾಂಟೀನ್ ಕಡೆ ಹೊರಟಿದ್ದಳು. ಒಂದು ಕಡೆ ಗಲಾಟೆ ಗಮನಿಸಿ, ಅಲ್ಲೇ ನಿಂತಳು.
ಎಂಜಿನಿಯರಿಂಗ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳ ಮೊದಲ ದಿನವಾದ ಅಂದು ಹೆಚ್ಚಿನ ಕಡೆ ಸದ್ದುಗದ್ದಲವಿತ್ತು. ಕಾಲೇಜಿನಲ್ಲಿ ನಿಷೇಧ ಇದ್ದರೂ ಸಹ, ಸೀನಿಯರ್ ವಿದ್ಯಾರ್ಥಿಗಳು ಹೊಸಬರನ್ನು ರಾಗಿಂಗ್ ಹೆಸರಲ್ಲಿ ಗೋಳು ಹೊಯ್ದುಕೊಳ್ಳುತ್ತಿದ್ದರು. ಅಲ್ಲಿ ಸಾಕಷ್ಟು ಜೋರು ದನಿ ಕೇಳಿಸಿ ಸ್ನೇಹಾ ಅತ್ತ ಧಾವಿಸಿದಳು.``ಜೂನಿಯರ್ ಆಗಿದ್ದುಕೊಂಡು ನಿನಗೆ ಇಷ್ಟು ಧೈರ್ಯವೇ? ಈಗಲೇ `ರಂಗಿಲಾ ರೇ....' ಹಾಡಿಗೆ ಡ್ಯಾನ್ಸ್ ಮಾಡಿ ತೋರಿಸು. ಇಲ್ಲದಿದ್ದರೆ ನಾವು ಜಂಗ್ಲಿ ಡ್ರೆಸ್‌ನಲ್ಲಿ ಬಂದು ನಿನಗೆ ಅದನ್ನು ಕಲಿಸುತ್ತೇವಷ್ಟೇ!''
``ಹ....ಹ್ಹ....ಹಾ'' ಅಟ್ಟಹಾಸದ ನಗು ಅದರ ಜೊತೆಗೂಡಿತ್ತು.
``ದಾಸ್ಯತನ ಅನ್ನೋದು ಈಗ ನಮ್ಮ ದೇಶದಲ್ಲಿ ಇಲ್ಲ ಅನ್ನೋದು ನಿಮಗೆ ಗೊತ್ತಿಲ್ಲವೇ? ಯಾರೂ ಯಾರಿಗೂ ಗುಲಾಮರಲ್ಲ ಅನ್ನೋದು ನೆನಪಿಡಿ. ನೀವೇನಾದರೂ ಇನ್ನಷ್ಟು ದುರಹಂಕಾರ ತೋರಿಸಿದರೆ ಈಗಲೇ ಪ್ರಿನ್ಸಿಪಾಲ್ ಚೇಂಬರ್‌ಗೆ ಹೋಗಿ ನಿಮ್ಮ ಮೇಲೆ ದೂರು ಕೊಡ್ತೀನಿ. ಡ್ಯಾನ್ಸ್ ಮಾಡಿಸುತ್ತಾರಂತೆ ಡ್ಯಾನ್ಸು! ಅದನ್ನೆಲ್ಲ ಹೇಳೋಕ್ಕೆ ನೀವು ಯಾರು ಅಂತ? ರಾಗಿಂಗ್ ಅನ್ನೋದು ಈಗ ಎಲ್ಲೆಡೆ ನಿಷೇಧಿಸಲಾಗಿದೆ ಅನ್ನೋದನ್ನು ಮರೆಯಬೇಡಿ.....''