ನೀಳ್ಗಥೆ –  ಪಿನಳಿನಾ ರಾವ್

ಆಕಸ್ಮಿಕವಾಗಿ ಶೇಖರ್‌ ಬೇಗ ಮನೆಗೆ ಬಂದದ್ದನ್ನು ನೋಡಿ ವೀಣಾ ಬೆರಗಾದಳು. ರಾತ್ರಿ 8ಕ್ಕೆ ಮೊದಲು ಪತಿರಾಯರು ಎಂದೂ ಮನೆಗೆ ಬಂದವರೇ ಅಲ್ಲ. ಅವರು ಆಫೀಸ್‌ ಬಿಡುವುದು 6ಕ್ಕೇ ಆದರೂ ಗೆಳೆಯರ ಗೋಷ್ಠಿ ಮುಗಿಸಿ ಮಹರಾಯ ಮನೆಗೆ ಬರುವಷ್ಟರಲ್ಲಿ ತಡ ಆಗುತ್ತಿತ್ತು. ಜೊತೆಗೆ ಟ್ರಾಫಿಕ್‌ ಸಮಸ್ಯೆಯೂ ಜೋರಾಗಿತ್ತು. ಇವತ್ತು ಯಾರೋ ಫ್ರೆಂಡ್‌ ಮನೆಯವರೆಗೂ ಲಿಫ್ಟ್ ಕೊಟ್ಟಿದ್ದರಿಂದ ಬೇಗ ಬರುವ ಹಾಗಾಯಿತು. ಹೀಗಾಗಿ ನೆಮ್ಮದಿಯಾಗಿ ಏನೋ ಗುನುಗುನಿಸುತ್ತಾ ಶೇಖರ್‌ ಪೇಪರ್‌ ಓದುತ್ತಿದ್ದ.

ವೀಣಾ ಬೇಗ 2 ಕಪ್‌ ಕಾಫಿ ಬೆರೆಸಿ ಅತ್ತೆ ಇದ್ದ ಕೋಣೆಗೆ ಬಂದಳು. ಶೇಖರ್‌ ಪೇಪರ್‌ ಮುಗಿಸಿ ಅಮ್ಮನ ಬಳಿ ಏನೋ ಹರಟುತ್ತಿದ್ದ. ಮಾವನ ಆರೋಗ್ಯ, ಮೈದುನ ರವಿಯ ವಿದ್ಯಾಭ್ಯಾಸ ಇತ್ಯಾದಿ ಚರ್ಚಿಸಿ ಕೊನೆಗೆ ವೀಣಾಳ ಬಳಿ ಮಾತುಕಥೆಗೆ ಬಿಡುವು ಸಿಗುತ್ತಿತ್ತು. ರಾತ್ರಿ ಏನಡುಗೆ ಮಾಡ್ತೀಯಾ ಎಂಬುದೇ ಅವನ ಪ್ರಮುಖ ಪ್ರಶ್ನೆ ಆಗಿರುತ್ತಿತ್ತು.

ಅಷ್ಟು ಹೊತ್ತಿಗೆ ಅವಳ ಮಾವ ಸಹ ಸಂಜೆ ವಾಕಿಂಗ್‌ ಮುಗಿಸಿ ಬಂದಿದ್ದರು. ಅವರಿಗೂ ಒಂದು ಕಪ್‌ ಕಾಫಿ ಕೊಟ್ಟಿದ್ದಾಯ್ತು. ಅವಸರದಲ್ಲಿ ಅಲಕ್ಕಿ ಉಪ್ಪಿಟ್ಟನ್ನು ಅಲ್ಲೇ ಮರೆತು ಬಂದಿದ್ದಳು. ವೀಣಾಳ ಅತ್ತೆ ತಕ್ಷಣ, “ಎಲ್ಲಮ್ಮ ಇವರ ಪ್ಲೇಟು….. ಮರೆತೇ ಬಿಟ್ಟೆ ಅಂತ ಕಾಣ್ಸುತ್ತೆ?” ಎಂದು ಕೇಳಿದರು.

ವೀಣಾ ಅವರಿಗೆ ಉತ್ತರ ಕೊಡುವಷ್ಟರಲ್ಲೇ ಶೇಖರ್‌, “ನೋಡು ವೀಣಾ, ನಮ್ಮ ಮದುವೆ ಆಗಿ 6 ತಿಂಗಳಾಯ್ತು. ಇನ್ನೂ ನೀನು ಮನೆಯ ರಿವಾಜು ಕಲಿಯಲಿಲ್ಲ. ನಿನ್ನೆ ಅಮ್ಮನ ಕೋಣೆ ಕ್ಲೀನ್‌ ಆಗಿರಲಿಲ್ಲ. ಮತ್ತೆ ರವಿ ಬಟ್ಟೆ ಐರನ್‌ ಕೂಡ ಆಗಿರಲಿಲ್ಲ…..”

ಅತ್ತೆ ಮೆಲ್ಲಗೆ ಸೇರಿಸಿದರು, “ಬೇರೆ ಮನೆಯಿಂದ ಬಂದ ಹುಡುಗಿಯರು…. ಅತ್ತೆ ಮನೆಯನ್ನು ತನ್ನ ಮನೆ ಅಂತ ಭಾವಿಸಬೇಕಲ್ಲ…..”

ವೀಣಾಳಿಗೆ ಬಹಳ ಕೆಡುಕೆನಿಸಿತು. ಅವಳಿಗೆ ಮಾತನಾಡುವ ಅವಕಾಶವೇ ಸಿಗಲಿಲ್ಲ. ಬೆಳಗ್ಗಿನಿಂದ ಸಂಜೆವರೆಗೂ ಅವಳು ಆ ಮನೆಯಲ್ಲಿ ಮೂಗಿಗೆ ಕವಡೆ ಕಟ್ಟಿಕೊಂಡು ದುಡಿಯುತ್ತಿದ್ದರೂ ಇಂಥ ಮಾತುಗಳನ್ನು ಆಗಾಗ ಕೇಳಬೇಕಾಗುತ್ತಿತ್ತು. ಪ್ರತಿಯೊಬ್ಬರ ಬೇಕುಬೇಡ ಗಮನಿಸುತ್ತಾ, ಇಡೀ ದಿನದ ಕೆಲಸ ಮುಗಿಸುಷ್ಟರಲ್ಲಿ ರಾತ್ರಿ ಆಗುತ್ತಿತ್ತು.

ಕಾಫಿ ತಿಂಡಿ ಮುಗಿಸಿ ರಾತ್ರಿ ಅಡುಗೆಯ ತಯಾರಿಗೆ ಅಡುಗೆಮನೆಗೆ ಬಂದಳು. ಬೇಗ ಬೇಗ ಅಡುಗೆ ಕೆಲಸ ಮುಗಿಸಿ, 2 ನಿಮಿಷ ಆರಾಮವಾಗಿ ಕೂರೋಣ ಎಂದು ತನ್ನ ಕೋಣೆ ಕಡೆ ಹೊರಟಿದ್ದ ವೀಣಾ, ತಾಯಿ ತಂದೆ ಮಧ್ಯೆ ಕುಳಿತು ಏನೋ ಮೆಲ್ಲಗೆ ಮಾತನಾಡುತ್ತಿದ್ದ ಗಂಡನ ದನಿ ಕೇಳಿಸಿ ಅಲ್ಲಿಯೇ ನಿಂತಳು.

ಅವಳು ಗಮನವಿಟ್ಟು ಕೇಳಿಸಿಕೊಂಡಾಗ ಶೇಖರ್‌ 8 ದಿನಗಳಿಗಾಗಿ ಆಫೀಸ್‌ ಕೆಲಸವಾಗಿ ಮುಂಬೈಗೆ ಟೂರ್‌ ಹೊರಡುತ್ತಿರುವುದು ತಿಳಿಯಿತು. ಹಾಗಾಗಿಯೇ ಆ ಸಂಜೆ ಬೇಗ ಮನೆಗೆ ಬಂದಿದ್ದು ಎಂದು ಗೊತ್ತಾಯಿತು. ಯಾವ ಸುದ್ದಿ ಎಲ್ಲಕ್ಕಿಂತ ಮೊದಲು ತನಗೆ ತಿಳಿಯಬೇಕಿತ್ತೋ ಅದಿನ್ನೂ ತಲುಪುದರಲ್ಲೇ ಇದೆ ಎಂದು ಬೇಸರವಾಯಿತು.

ಎಷ್ಟೋ ಆಸೆಗಳನ್ನು ಹೊತ್ತುಕೊಂಡು 6 ತಿಂಗಳ ಮುನ್ನ ಈ ಮನೆಗೆ ಸೊಸೆಯಾಗಿ ಬಂದಿದ್ದಳು. ಆದರೆ ಅವಳನ್ನು ಆ ಮನೆಯ ಸದಸ್ಯೆ ಎಂದು ಗುರುತಿಸಲು ಯಾರೂ ಸಿದ್ಧರಿರಲಿಲ್ಲ. ಕಾಲಕಾಲಕ್ಕೆ ಆ ಮನೆಯ ಕೆಲಸಗಳಾಗಬೇಕು, ಅದಕ್ಕೆ ಅವಳು ಬೇಕಿತ್ತು. ರವಿ ಸಹ ಅಷ್ಟೆ, ತನ್ನ ಕೆಲಸ ಆಗಬೇಕಾದಾಗ ಮಾತ್ರ ಅತ್ತಿಗೆ ಅತ್ತಿಗೆ ಅನ್ನುತ್ತಾ ಸುತ್ತಿ ಸುತ್ತಿ ಬರುತ್ತಿದ್ದ. ಶೇಖರ್‌ನ ಪ್ರೇಮದ ಬಗ್ಗೆ ಹೇಳದಿರುವುದೇ ವಾಸಿ.

ವೀಣಾ ತಾನು ಧರಿಸಿದ್ದ ನೈಟಿ ಬದಲಿಸಿ ಬೇರೆ ಸೀರೆ ಉಟ್ಟಳು. ಕೈಕಾಲು ತೊಳೆದು, ನೀಟಾಗಿ ತಲೆ ಬಾಚತೊಡಗಿದಳು. ಆಗ ಶೇಖರ್‌ ಒಳ್ಳೆ ಮೂಡ್‌ನಲ್ಲಿ ಶಿಳ್ಳೆ ಹಾಕುತ್ತಾ, ಖುಷಿಯಾಗಿ ಕೋಣೆಗೆ ಬಂದ. ಉತ್ಸಾಹದಿಂದ ಹೆಂಡತಿಯನ್ನು ತೋಳಲ್ಲಿ ಬಳಸುತ್ತಾ, “ಏನು ಮಾಡ್ತಿದ್ದೆ?” ಎಂದ.

“ತಲೆ ಬಾಚಿಕೊಳ್ತಿದ್ದೆ. ಅದಿರಲಿ, ಏನಿತ್ತು…. ಬೇಗ ಬಂದುಬಿಟ್ರಿ…..”

ಶೇಖರ್‌ ನಗುತ್ತಾ, “ಅದೇನಿಲ್ಲ. 1 ವಾರದ ಮಟ್ಟಿಗೆ ಮುಂಬೈಗೆ ಅಫಿಶಿಯಲ್ ಟೂರ್‌ ಇತ್ತು. ಅದಕ್ಕೆ.”

ವೀಣಾ ಬೇಕೆಂದೇ ಅರಿಯದವಳಂತೆ, “ನಾನು 7-8 ದಿನ ನಿಮ್ಮನ್ನು ಬಿಟ್ಟು ಹೇಗಿರಲಿ? ನೀವಿಲ್ಲದೆ ನನಗೆ ಖಂಡಿತಾ ಹೊತ್ತು ಹೋಗದು… ನನ್ನನ್ನೂ ನಿಮ್ಮ ಜೊತೆಗೆ ಕರೆದೊಯ್ಯಬಾರದೇ? ಮದುವೆ ಆದಮೇಲೆ ಹನಿಮೂನ್‌ ಅಂತ ನಾವೆಲ್ಲೂ ಹೋಗೇ ಇಲ್ಲ….”

ಇದನ್ನು ಕೇಳಿಸಿಕೊಳ್ಳುತ್ತಿದ್ದಂತೆ ಶೇಖರನ ರೊಮ್ಯಾಂಟಿಕ್‌ ಮೂಡ್‌ ಇಳಿದುಹೋಯಿತು. ತಬ್ಬಿದ್ದ ಹೆಂಡತಿಯಿಂದ ಬಿಡಿಸಿಕೊಳ್ಳುತ್ತಾ, “ನಾನು ಮನೆಯಲ್ಲಿ ಇಲ್ಲದಿದ್ದಾಗ ಅಮ್ಮ ಅಪ್ಪನ ಯೋಗಕ್ಷೇಮ ವಿಚಾರಿಸಬೇಕಾದುದು ನಿನ್ನ ಧರ್ಮ. ಅದನ್ನು ಬಿಟ್ಟು ಈಗ ಹನಿಮೂನಿಗೆ ಹೋಗುವ ಮಾತನಾಡುತ್ತಿದ್ದಿ. ಅಮ್ಮ ಹೇಳೋದು ಸರಿಯಾಗಿದೆ, ಸೊಸೆಯರು ಮನೆಮಂದಿ ಆಗೋಲ್ಲ. ಪರರ ಮನೆಯ ರಕ್ತ ಪರರ  ಹಾಗೆ ಉಳಿದುಬಿಡುತ್ತೆ…..”

ಅದನ್ನು ಕೇಳಿ ವೀಣಾ ಬಿಕ್ಕಳಿಸದೇ ಇದ್ದುದೇ ಹೆಚ್ಚು. ಶೇಖರ್‌ ಅಂತೂ ಈ ರೊಮಾನ್ಸ್ ಸಾಕು ಎಂದು ಅಮ್ಮ ಅಪ್ಪನನ್ನು ಊಟಕ್ಕೆ ಎಬ್ಬಿಸಲು ಹೊರಟ. ಅಷ್ಟರಲ್ಲಿ ರವಿ ಸಹ ಗೆಳೆಯನ ಮನೆಯಿಂದ ನೋಟ್ಸ್ ಪಡೆದು ಬಂದಿದ್ದ. ಅತ್ತೆ ಮಾವನಿಗೆ ಇಷ್ಟ ಎಂದು ಹಾಗಲಕಾಯಿ ಗೊಜ್ಜು, ಎಲ್ಲರಿಗೂ ಬೇಕು ಅಂತ ವೆಜಿಟೆಬಲ್ ಸಾಗು ಮಾಡಿದ್ದಳು. ಬಿಸಿ ಅನ್ನದ ಜೊತೆಗೆ ಅದನ್ನೆಲ್ಲ ಹಾಕಿಕೊಟ್ಟು, ಬಿಸಿ ಬಿಸಿ ಚಪಾತಿ ಲಟ್ಟಿಸಲು ನಿಂತಳು.

ಎಲ್ಲರೂ ಊಟ ಮುಗಿಸಿ ಮೌನವಾಗಿ ಎದ್ದು ಹೊರಟರು. ಯಾರೂ ಅವಳಿಗೆ ಊಟ ಮಾಡಲು ಹೇಳಲಿಲ್ಲ ಅಥವಾ ಬಡಿಸಲು ಅಲ್ಲಿ ನಿಲ್ಲಲಿಲ್ಲ. ವೀಣಾ ಅದನ್ನೆಲ್ಲ ಅಪೇಕ್ಷಿಸದೆ ಮನಸ್ಸಿಗೆ ತೋಚಿದಷ್ಟು ತಿಂದು, ಕೈ ತೊಳೆದು ಎದ್ದು ಬಂದಳು.

ಅತ್ತೆ ಮಾವನ ಕೋಣೆಯ ಹೊರಗಿದ್ದ ವಾಶ್‌ ಬೇಸಿನ್‌ನಲ್ಲಿ ಅವಳು ಕೈ ತೊಳೆಯುತ್ತಿದ್ದಳು. ಅಷ್ಟರಲ್ಲಿ ಅತ್ತೆ ಮಾತು ಕೇಳಿಸಿತು, “ಏನೂಂದ್ರೆ…. ಈಗಿನ ಕಾಲದ ಸೊಸೆಯರ ವರಸೆ ನೋಡಿ. ವಯಸ್ಸಾದರಿಗೆ ಬಿಸಿ ನೀರು ಬೇಕೋ ಏನೋ ಎಂದು ಕೇಳದೆ, ಊಟಕ್ಕೆ ಕೂರಲೇ ಎಂದೂ ವಿಚಾರಿಸದೆ, ತಮ್ಮ ಪಾಡಿಗೆ ತಾವು ಊಟ ಮಾಡಿಬಿಡುತ್ತಾರೆ. ನಾನು ಹೊಸದಾಗಿ ಈ ಮನೆಗೆ ಸೊಸೆಯಾಗಿ ಬಂದಾಗ ಅತ್ತೆಯನ್ನು ಕೇಳದೆ ಏನೂ ಮಾಡುತ್ತಿರಲಿಲ್ಲಪ್ಪ. ಈಗ ಬಿಡಿ, ಕಾಲ ಕೆಟ್ಟುಹೋಯಿತು.”

`ಸದಾ ಇದೇ ಆಗಿಹೋಯಿತು. ಈಗಿನ ಸೊಸೆ, ಪರರ ಮನೆಯ ಹುಡುಗಿ, ಬೇರೆಯವರ ರಕ್ತ….. ಯಾವಾಗ ನಾನು ಈ ಮನೆಯವಳಾಗುವುದು?’ ವೀಣಾ ತಲೆಕೊಡವಿ ತನ್ನ ಕೆಲಸದತ್ತ ಗಮನಕೊಟ್ಟಳು. ಶೇಖರ್‌ ಮಂಚದ ಮೇಲೆ ಬಟ್ಟೆ ಹರಡಿಕೊಂಡು ಸೂಟ್‌ಕೇಸ್‌ ಪ್ಯಾಕ್‌ ಮಾಡುತ್ತಿದ್ದ. ಅವನನ್ನು ಪ್ರೀತಿಯಿಂದ ಎಬ್ಬಿಸುತ್ತಾ ಹೇಳಿದಳು, “ನೀವು ಈ ಕಡೆ ಬನ್ನಿ, ನಾನು ಎಲ್ಲಾ ಪ್ಯಾಕ್‌ ಮಾಡಿ ಕೊಡ್ತೀನಿ.”

“ಅದೆಲ್ಲ ಏನೂ ಬೇಡ ಬಿಡು, ನಾನೇ ಮಾಡಿಕೊಳ್ತೀನಿ. ಅದೂ ಅಲ್ಲದೆ ನನಗೆ ಯಾವುದು ಬೇಕು ಬೇಡ ಅಂತ ನಿನಗೆ ಹೇಗೆ ಗೊತ್ತಾಗಬೇಕು?”

ವೀಣಾ ಏನೂ ಮಾತನಾಡದೆ ಮೌನವಾಗಿ ಬಂದು ಬಾಲ್ಕನಿಯಲ್ಲಿ ನಿಂತಳು. ಮನಸ್ಸಿಗೆ ಬಹಳ ಪಿಚ್ಚೆನಿಸಿತು. `ಮದುವೆಯಾಗಿ ಇಷ್ಟು ದಿನಗಳಾದ ಮೇಲೆ ಮೊದಲ ಸಲ ದೂರ ಹೋಗುತ್ತಿದ್ದಾರೆ…. ನಿನ್ನ ಮನಸ್ಸಿಗೆ ಕಷ್ಟವಾ ಅಂತ ಒಂದು ಮಾತೂ ಕೇಳಲಿಲ್ಲ. ಮನೆಯೇನೋ ದೊಡ್ಡದು, ಅನುಕೂಲ ಇದೆ. ಆದರೆ ತನ್ನವರೆಂದು ಆದರಿಸುವವರಿಲ್ಲದೆ ಮನಸ್ಸು ಮಾತ್ರ ಬರಿದಾಗಿದೆ,’ ಎಂದು ಅವಳಿಗೆ ಅನಿಸಿತು.

ಅತ್ತೆಯ ಮಾತುಗಳನ್ನು ನಿರ್ಲಕ್ಷಿಸಿ ಅವಳು ಮತ್ತೆ ಹಳೆಯ ನೆನಪುಗಳಿಗೆ ಜಾರಿದಳು. ಕಳೆದ ತಿಂಗಳ ಘಟನೆ ಅವಳಿಗೆ ಕಣ್ಮುಂದೆ ಸುಳಿಯಿತು. ಶೇಖರನ ಅಕ್ಕಾ ನೀಲಾ ಅಂದು ಇವರ ಮನೆಗೆ ಬರುವವಳಿದ್ದಳು. ಮದುವೆಯ ಗಡಿಬಿಡಿಯಲ್ಲಿ ಮಾತ್ರ ಅವಳನ್ನು ಮಾತನಾಡಿಸಿದ್ದ ವೀಣಾ, ತನ್ನದೇ ವಯಸ್ಸಿನ ನೀಲಾ ಬರುವಳೆಂದು ತಿಳಿದು ಸಂಭ್ರಮಿಸಿದಳು. ಮನೆಯನ್ನೆಲ್ಲಾ ನೀಟಾಗಿ ಓರಣಗೊಳಿಸಿ, ಅತ್ತೆಯನ್ನು ಕೇಳಿ ನೀಲಾಗೆ ಇಷ್ಟವಾಗುವಂತೆ ಬಿಸಿಬೇಳೆ ಭಾತ್‌, ಜಾಮೂನು, ಬೊಂಬಾಯಿ ಬೋಂಡ ಮಾಡಿರಿಸಿ, ಕಾಯುತ್ತಿದ್ದಳು. ಅತ್ತೆಮನೆಯಲ್ಲಿ ತನ್ನೊಂದಿಗೆ ಮನಬಿಚ್ಚಿ ಮಾತನಾಡುವಂಥ ಒಬ್ಬ ಹೆಣ್ಣು ಅಲ್ಲಿಗೆ ಬರುತ್ತಿರುವುದು ಅವಳ ಖುಷಿ ಹೆಚ್ಚಿಸಿತ್ತು. ತನಗೆ ಮದುವೆಯಲ್ಲಿ ಬಂದಿದ್ದ ಎಷ್ಟೋ ಉಡುಗೊರೆಗಳನ್ನು ವೀಣಾ ಇನ್ನೂ ಬಳಸಿರಲಿಲ್ಲ. ನೀಲಾ ಯಾವುದನ್ನು ಬಯಸುತ್ತಾಳೋ ಕೊಂಡೊಯ್ಯಲಿ ಎಂದು ನಿರ್ಧರಿಸಿದಳು. ನಂತರ ಸೀರೆ ಬದಲಾಯಿಸಿ, ತುಸು ಮೇಕಪ್‌ ಸರಿಪಡಿಸಿ, ತಲೆ ಬಾಚಿಕೊಂಡು ಮನೆಯ ಮುಂದಿನ ವರಾಂಡಾದಲ್ಲಿ ಬಂದು ಕಾದಳು. ಅದಾಗಲೇ 11 ದಾಟಿತ್ತು. ಪುಟ್ಟ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ನೀಲಾ ಆಟೋದಿಂದ ಮನೆ ಮುಂದೆ ಇಳಿದಳು. ಅವಳನ್ನು ಕಂಡು ಉತ್ಸಾಹದಿಂದ ಮುಂದೆ ಬಂದ ವೀಣಾ, ನೀಲಾಳನ್ನು ತಬ್ಬಿಕೊಂಡಳು. ಅದರ ಬಗ್ಗೆ ಯಾವುದೇ ಉತ್ಸಾಹ ತೋರದೆ ನೀಲಾ ಅವಳಿಂದ ಬಿಡಿಸಿಕೊಳ್ಳುತ್ತಾ ಕೇವಲ ಔಪಚಾರಿಕ ನಗೆನಕ್ಕು ಒಳಸರಿದಳು. ಖಾಸಾ ಗೆಳತಿಯನ್ನು ಕಂಡಂತೆ ವೀಣಾ ಸಂಭ್ರಮಿಸುತ್ತಿದ್ದರೆ ನೀಲಾ ಮಾತನಾಡದೆ ಒಳಗೆ ಅಮ್ಮನನ್ನು ಹುಡುಕಿಕೊಂಡು ಹೋದಳು. ಇದರಿಂದ ವೀಣಾ ಪೆಚ್ಚಾದಳು. ತಾಯಿ-ಮಗಳು ಏಕಾಂತದಲ್ಲಿ ಮಾತನಾಡಿಕೊಳ್ಳಲಿ ಎಂದು ವೀಣಾ ಅಡುಗೆಮನೆಯ ಕೆಲಸ ಮುಂದುವರಿಸಿದಳು. ಕಾಫಿ ಕೊಟ್ಟು ಬಂದಳು.

ಮಧ್ಯಾಹ್ನ ಊಟದ ಸಮಯಕ್ಕೆ ಎಲ್ಲರೂ ಡೈನಿಂಗ್‌ ಟೇಬಲ್‌ಗೆ ಬಂದರು. ಅಂದು ಭಾನುವಾರವಾದ್ದರಿಂದ ಶೇಖರ್‌, ರವಿ ಸಹ ಮನೆಯಲ್ಲೇ ಇದ್ದರು. ಎಲ್ಲರಿಗೂ ತಟ್ಟೆ ಹಾಕಿ, ಬಟ್ಟಲಲ್ಲಿ ಜಾಮೂನು ಕೊಟ್ಟು ಸರಭರ ಓಡಾಡುತ್ತಾ ವೀಣಾ ಬಡಿಸಿದಳು. ಅವರೆಲ್ಲ ತಂತಮ್ಮಲ್ಲೇ ನಗುತ್ತಾ ಮಾತನಾಡಿಕೊಂಡರೇ ವಿನಾ ವೀಣಾಳನ್ನು ಏನೆಂದು ಸಹ ವಿಚಾರಿಸಲಿಲ್ಲ.

ಏನೋ ಜೋಕ್‌ ಹೇಳಿ ನಗುತ್ತಿದ್ದರು, ವೀಣಾ ಬಡಿಸಲೆಂದು ಹತ್ತಿರ ಬಂದೊಡನೆ ಮೌನವಹಿಸಿದರು.

ಆದಾದ ಮೇಲೆ ಎಲ್ಲರೂ ಹಾಲ್‌ನಲ್ಲಿ ಕುಳಿತು ಎಲೆಅಡಿಕೆ ಮೆಲ್ಲುತ್ತಾ, ಟಿವಿಯ ಸಿನಿಮಾ ಬಗ್ಗೆ ವಿಮರ್ಶೆ ನಡೆಸಿದರು. ವೀಣಾ ಎಲ್ಲಾ ವಸ್ತುಗಳನ್ನೂ  ಟೇಬಲ್‌ನಿಂದ ಒಳಗೆ ಸಾಗಿಸಿ, ತಟ್ಟೆ ಲೋಟ ತೆಗೆದಳು. ಆಗ ನೀಲಾ ಮಜ್ಜಿಗೆ ಕೇಳಲೆಂದು ಅಡುಗೆಮನೆಗೆ ಬಂದವಳೇ ಔಪಚಾರಿಕವಾಗಿ, “ಅತ್ತಿಗೆ, ನೀವು ನಮ್ಮ ಜೊತೆ ಊಟಕ್ಕೆ ಕೂರಬಹುದಿತ್ತು,” ಎಂದಷ್ಟೇ ಹೇಳಿ ಉತ್ತರಕ್ಕೂ ಕಾಯದೆ ಹೊರಟುಹೋದಳು.

ಕೆಲಸದವಳಿಗೆ ಪಾತ್ರೆಗಳನ್ನೆಲ್ಲ ಹಾಕಿ ಉಳಿದ ಸುತ್ತು ಕೆಲಸ ಮುಗಿಸಿದ ವೀಣಾ, ನಿಂಗಿಗೂ ಬಡಿಸಿ, ತಾನೂ ಉಂಡ ಶಾಸ್ತ್ರ ಮಾಡಿ ಕುಳಿತಳು. ಅತ್ತೆ ಅವರುಗಳ ಮೀಟಿಂಗ್‌ ಜೋರಾಗಿ ನಡೆದಿತ್ತು. ಅತ್ತೆ ನೋಡಿದರೆ ಹಾಗೆ, ನಾದಿನಿಯಾದರೂ ತನ್ನ ಬಗ್ಗೆ ಸ್ನೇಹ ತೋರಬಹುದೆಂದು ಭಾವಿಸಿದರೆ ನೀಲಾ ತಾನು ತಾಯಿಗೆ ತಕ್ಕ ಮಗಳು ಎಂದು ನಿರೂಪಿಸಿದ್ದಳು.

ತಾನು ಉಡುಗೊರೆಗಳ ಬಗ್ಗೆ ಹೇಗೆ ಪ್ರಸ್ತಾಪಿಸಲಿ ಎಂದು ವೀಣಾ ಯೋಚಿಸುವಷ್ಟರಲ್ಲೇ ಸಂಜೆಯ ಕಾಫಿ ಮುಗಿಸಿ ನೀಲಾ ರವಿಗೆ ಹೇಳಿ ಆಟೋ ತರಿಸಿದ್ದಳು. ವೀಣಾಳ ಮಾವ, ಶೇಖರ್‌ ಕಾಂಪೌಂಡ್‌ ಬೆಂಚಿನ ಬಳಿ ನೀಲಾ ಜೊತೆ ಹರಟುತ್ತಿದ್ದರು. ವೀಣಾ ತಾನೂ ಅವರ ಬಳಿ ಬಂದು ನಿಂತಳು. ನೀಲಾ ಇವಳತ್ತ ಬರಿದೇ ಕೈ ಬೀಸುತ್ತ, “ಅತ್ತಿಗೆ ಬೈ” ಎಂದು ಆಟೋದಲ್ಲಿ ಹೊರಟೇಬಿಟ್ಟಳು. ವೀಣಾ ಪೆಚ್ಚಾಗಿ ನಿಂತದ್ದೇ ಬಂತು, ಬೆಳಗ್ಗೆಯಿಂದ ಇದ್ದ ಉತ್ಸಾಹದ ಬೆಲೂನಿಗೆ ಸೂಜಿ ಚುಚ್ಚಿದಂತಾಗಿತ್ತು.

ಹೀಗೆ ನಡೆದುದನ್ನು ಯೋಚಿಸುತ್ತಾ ನಿಂತಿದ್ದ ವೀಣಾಳನ್ನು ರವಿಯ ಮಾತು ಎಚ್ಚರಿಸಿತು, “ಅತ್ತಿಗೆ ಕೆಳಗಿನಿಂದ 2 ಸಲ ಕೂಗಿದೆ. ನಿಮ್ಮ ತಂದೆ ಲ್ಯಾಂಡ್‌ ಲೈನ್‌ಗೆ ಕಾಲ್‌ ಮಾಡಿದ್ದಾರೆ…. ಬೇಗ ಬನ್ನಿ,” ಎಂದಾಗ ಓಡಿಹೋಗಿ ಕೆಳಗೆ ಮಾತನಾಡಿದಳು.

ವೀಣಾಳ ತಂದೆ ಹೇಳಿದರು, “ಕಳೆದ ವಾರ ನನ್ನದು ರಿಟೈರ್‌ ಆಯ್ತಲ್ಲಮ್ಮ, ಅದರ ಸಲುವಾಗಿ ಬಂಧುಗಳನ್ನು ಕರೆದು ಸಣ್ಣ ಪಾರ್ಟಿ ಇಟ್ಟಿದ್ದೀನಿ. ನೀವೆಲ್ಲರೂ ಅಗತ್ಯ ಬರಬೇಕು. ನಿಮ್ಮ ಮಾವನವರ ಕೈಗೆ ಕೊಡಮ್ಮ…. ಅವರಿಗೂ ಆಹ್ವಾನ ನೀಡೋಣ….”

ವೀಣಾ ಮಾವನವರನ್ನು ಕರೆದು ವಿಷಯ ತಿಳಿಸಿಕೊಟ್ಟಳು. ಲೋಕಾಭಿರಾಮಾಗಿ ಮಾತನಾಡಿ ಮುಖ್ಯ ವಿಷಯಕ್ಕೆ ಬರುತ್ತಾ ವೀಣಾಳ ಮಾವ ಹೇಳಿದರು, “ನನಗೆ ಹುಷಾರಿಲ್ಲ. ಶ್ರೀಮತಿಯವರು ಮನೆ ಬಿಟ್ಟು ಎಲ್ಲೂ ಕದಲುತ್ತಿಲ್ಲ. ಶೇಖರ್‌ ಆಫೀಸ್‌ ಕೆಲಸವಾಗಿ ಮುಂಬೈಗೆ ಹೊರಟಿದ್ದಾನೆ. ವೀಣಾ ಬರುತ್ತಾಳೆ ಬಿಡಿ,” ಎಂದು ಖಾತ್ರಿಪಡಿಸಿದರು.

ಮತ್ತೊಮ್ಮೆ ಖಂಡಿತಾ ಬರಬೇಕೆಂದು ಔಪಚಾರಿಕಾಗಿ ನುಡಿದು 2 ದಿನಗಳ ನಂತರ ತುಮಕೂರಿಗೆ ಹಿಂದಿನ ಸಂಜೆಯೇ ಬಂದುಬಿಡಬೇಕೆಂದು ಮಗಳಿಗೆ ಆಗ್ರಹಪಡಿಸಿದರು. ವೀಣಾ ಆಗಲಿ ಎಂದು ಖುಷಿಯಾಗಿ ಹೇಳಿದಳು.

ಮದುವೆಯಾಗಿ 6 ತಿಂಗಳು ಕಳೆದ ಬಳಿಕ ಮೊದಲ ಬಾರಿಗೆ ಬೆಂಗಳೂರಿನಿಂದ ತವರಿನ ತುಮಕೂರಿಗೆ ಒಂಟಿಯಾಗಿ ಹೊರಡುವುದು ವೀಣಾಳಿಗೆ ರೋಮಾಂಚನ ಎನಿಸಿತು. ಆಗ ಶೇಖರ್‌ ಬಂದು ತಮಾಷೆ ಮಾಡಿದ, “ಇನ್ನೇನು ಬಿಡು. ನಾನು ಮುಂಬೈಗೆ ಹೊರಟರೂ ನೀನು ತವರಿಗೆ ಹೋಗಿ ಹಾಯಾಗಿ ಟೈಂಪಾಸ್‌ ಮಾಡಬಹುದು,” ಸಂತಸದ ಲಹರಿ ಉಕ್ಕಿ ಹರಿಯಲು ದಂಪತಿಗಳು ಪ್ರಣಯದಲ್ಲಿ ತೇಲಿಹೋದರು.

ಮಾರನೇ ಬೆಳಗ್ಗೆ 5 ಘಂಟೆಗೆ ಅಲಾರಂ ಹೊಡೆದಾಗ, ಶೇಖರ್‌ ಮುಂಬೈಗೆ ಹೊರಡಬೇಕು ಎಂಬುದು ಥಟ್ಟನೆ ನೆನಪಾಗಿ, ವೀಣಾ ದಡಬಡಿಸಿ ಎದ್ದಳು. ಬೇಗ ಡಿಕಾಕ್ಷನ್‌ ಹಾಕಿರಿಸಿ, ಬೆಳಗಿನ ಕೆಲಸದಲ್ಲಿ ಚುರುಕಾದಳು. 6 ಗಂಟೆಗೆ ಎಲ್ಲರೂ ಎದ್ದಾಗಿತ್ತು. ಹಾಲಿನವನು ಬಂದು ಹೋಗಿದ್ದ. ಶೇಖರ್‌ನನ್ನು ಎಬ್ಬಿಸಿ ಕಾಫಿ ಬೆರೆಸಿ ಎಲ್ಲರಿಗೂ ತಂದುಕೊಟ್ಟಳು. ಬೇಗ ಬೇಗ ತಿಂಡಿಗೆ ರೆಡಿ ಮಾಡಲು ರವೆ ಕೆದಕತೊಡಗಿದಳು.

ಹಿಂದಿನ ದಿನ ತಾನೇ ತಿಂಗಳ ರೇಷನ್‌ ಬಂದಿತ್ತು. ತಾನು ಊರಿಗೆ ಹೊರಟ ನಂತರ ಅತ್ತೆಗೆ ತೊಂದರೆ ಆಗಬಾರದೆಂದು ಅವನ್ನೆಲ್ಲ ಡಬ್ಬಗಳಿಗೆ ಹಾಕತೊಡಗಿದಳು. ಅಷ್ಟರಲ್ಲಿ ಅತ್ತೆ ಆ ಕಡೆ ಬಂದರು. “ಅದೆಲ್ಲ ಇರಲಿ ಬಿಡಮ್ಮ, ನಾನು ನಿಧಾನವಾಗಿ ಮಾಡಿಕೊಳ್ತೀನಿ. ಶೇಖರ್‌ 9 ಗಂಟೆಗೆ ಹೊರಟುಬಿಡ್ತಾನೆ. ಬೇಗ ತಿಂಡಿ ಆಗಬೇಕು, ಅವನಿಗೆ ಪ್ಯಾಕಿಂಗ್‌ಗೆ ಇನ್ನೇನಾದರೂ ಬೇಕೇ ನೋಡು. ಅವಸರದಲ್ಲಿ ಆ ಬೇಳೆ ಈ ಬೇಳೆ ಬೆರೆಸಿ ಡಬ್ಬಕ್ಕೆ ಹಾಕಿಡಬಾರದು,” ಎಂದು ನಗುತ್ತಾ ಮಗನನ್ನು ವಿಚಾರಿಸಲು ಹೊರಟರು. ಒಳ್ಳೆಯದಾಯಿತೆಂದು ಉಳಿದವನ್ನು ಒತ್ತರಿಸಿ, ಬೇಗ ಬೇಗ ಕಾಯಿ ತುರಿದುಕೊಂಡಳು. ಉಪ್ಪಿಟ್ಟಿನ ಕೆಲಸ ಪೂರ್ತಿ ಮಾಡಿ ಮುಚ್ಚಳ ಮುಚ್ಚಿರಿಸಿ, ಶೇಖರ್‌ ಕೋಣೆಗೆ ಬಂದು ಉಳಿದೇನಾದರೂ ಸಹಾಯಬೇಕೇ ಎಂದು ಇಣುಕಿದಳು. ಶೇಖರ್‌ ಹರಡಿದ್ದ ಸಾಮಗ್ರಿ ಓರಣವಾಗಿರಿಸಿ, ತಾನೂ ತಲೆ ಬಾಚಿಕೊಂಡು ಬೇರೆ ಸೀರೆ ಉಟ್ಟಳು. ಶೇಖರ್‌ ಸ್ನಾನಕ್ಕೆ ಹೋಗಿದ್ದ.

ಆಗ ಆಕಸ್ಮಿಕವಾಗಿ ಅವಳಿಗೆ ಒಂದು ಯೋಚನೆ ಹೊಳೆಯಿತು. ಮೊದಲ ಬಾರಿಗೆ ತರಿಗೆ ಹೋಗುತ್ತಿರುವುದು, ಅದೂ ಅಪ್ಪಾಜಿ ರಿಟೈರ್‌ ಆಗುತ್ತಿರುವ ಪಾರ್ಟಿ….. ಏನಾದರೂ ಉಡುಗೊರೆ ಕೊಡಲೇಬೇಕಲ್ಲ….. ಶೇಖರ್‌ ಹೊರಡುವುದಕ್ಕೆ ಮೊದಲು ಅವನಿಗೆ ವಿಷಯ ತಿಳಿಸಿ, ಉಡುಗೊರೆಗೆ  ಹಣ ಪಡೆದುಕೊಳ್ಳಬೇಕು ಎಂದುಕೊಂಡಳು. ಶೇಖರ್‌ ಹೊರಡಲು ಕೇವಲ 1 ಗಂಟೆ ಕಾಲ ಮಾತ್ರ ಬಾಕಿ ಇತ್ತು. ಅವನಿಗಾಗಿ ಬೇಗ ಬೇಗ ಡೈನಿಂಗ್‌ ಟೇಬಲ್ ಬಳಿ ತಿಂಡಿ ಹಾಕಿರಿಸಿ, ಬಿಸಿ ಆರುವಂತೆ ಮಾಡಿ, ಕಾಯತೊಡಗಿದಳು.

ಶೇಖರ್‌ ಸ್ನಾನ ಮಾಡಿ ಬಂದವನೇ ಹೊರಡು ಅವಸರದಲ್ಲಿದ್ದ. ಅವನ ಅವಸರದ ಸ್ವಭಾವ, ತಕ್ಷಣ ಸಿಡುಕುವ ಗುಣ ಗೊತ್ತಿದ್ದ ವೀಣಾಳಿಗೆ ಹೇಗಪ್ಪ ಈ ವಿಷಯ ತಿಳಿಸಲಿ ಎಂದು ಗೊಂದಲವಾಯಿತು. ಅವನು ಡ್ರೆಸ್‌ ಮಾಡಿಕೊಂಡು ಬಂದ ತಕ್ಷಣ ವಿಷಯ ತಿಳಿಸಿದಳು.

ಅದನ್ನು ಕೇಳಿ ಸಿಡಾರನೆ ಸಿಡುಕುತ್ತಾ, “ಏನಿದು ವೀಣಾ…. ಹೊರಡುವ ಸಮಯದಲ್ಲಿ ಉಡುಗೊರೆ ಪುರಾಣ ಅಂದುಕೊಂಡು ನೀನು…. ನಿಮ್ಮ ತಂದೆಯ ರಿಟೈರ್‌ಮೆಂಟ್‌ ಫಂಕ್ಷನ್‌ಗೆ ಹೋದಾಗ ಏನೋ ಒಂದು ಕೊಟ್ಟು ಅಡ್ಜಸ್ಟ್ ಮಾಡು,” ಎಂದವನೆ ತಾಯಿ ತಂದೆಗೆ ಹೇಳಿಬರಲು ಅವರ ಕೋಣೆಗೆ ಹೊರಟ.

ನೇರ ಡೈನಿಂಗ್‌ ಟೇಬಲ್‌ಗೆ ಬಂದು ಬೇಗ ಬೇಗ ತಿಂಡಿ, ಕಾಫಿ ಮುಗಿಸಿ ಸೂಟ್‌ಕೇಸ್‌ ಹಿಡಿದು ಕ್ಯಾಬ್‌ಗೆ ಹೇಳಿದ್ದೂ ಆಯ್ತು. 2 ನಿಮಿಷಗಳಲ್ಲಿ ಕ್ಯಾಬ್‌ ಬಂದಾಗ “ಬೈ” ಎಂದು ಹೊರಟೇಬಿಟ್ಟ. ಹೊರಡುವ ಘಳಿಗೆಯಲ್ಲಿ ತನಗೇನಾದರೂ ಹಣ ಕೊಡಬಹುದು ಎಂದು ಅವಳು ಕಾದಿದ್ದೇ ಬಂತು.

ಈಗ ಈ ಉಡುಗೊರೆಗೆ ಹೇಗಪ್ಪ ಹಣ ಹೊಂದಿಸಲಿ ಎಂದು ಯೋಚಿಸತೊಡಗಿದಳು. ಆ ಮನೆಯಲ್ಲಿ ಯಾರು ಅತಿ ನಿಕಟ ವ್ಯಕ್ತಿಯೋ ಅವನು ಹೊರಟಾಗಿತ್ತು. ಇನ್ನು ಅತ್ತೆಮಾವನನ್ನು ಕೇಳುವಷ್ಟು ಸಲುಗೆ ಅವಳಿಗಿನ್ನೂ ಬಂದಿರಲಿಲ್ಲ. ಏನು ಮಾಡಲಿ ಎಂದು ತಲೆ ಮೇಲೆ ಕೈ ಹೊತ್ತು ಕೂತಳು.

ಇದ್ದಕ್ಕಿದ್ದಂತೆ ಅವಳಿಗೆ ಮದುವೆಯಲ್ಲಿ ಕೊಟ್ಟಿದ್ದ 1-2 ನಗದು ಉಡುಗೊರೆಗಳ ಕವರ್‌ ಹಾಗೇ ಬಳಸದೆ ಉಳಿದಿರುವುದು ನೆನಪಾಯಿತು. ತಕ್ಷಣ ಸೂಟ್‌ಕೇಸ್‌ ತಳದಲ್ಲಿದ್ದ ಅದನ್ನು ಹುಡುಕಿ ತೆಗೆದಳು. ಅವಳ ಚಿಕ್ಕಮ್ಮ, ಸೋದರತ್ತೆ ಕೊಟ್ಟಿದ್ದ ಕವರ್‌ಗಳು. ಅದರಲ್ಲಿದ್ದ ಹಣ ಒಟ್ಟು ಮಾಡಿದಾಗ 5 ಸಾವಿರ ಸಿಕ್ಕಿತು. ಉಡುಗೊರೆಗೆ ಇಷ್ಟು ಸಾಲುತ್ತದೆಯೇ ಎನಿಸಿತು.

ಇರಲಿ, ಬರಿಗೈಗಿಂತ ಹಿತ್ತಾಳೆ ಕಡಗ ಮೇಲು, ಎಂದು ರವಿಯನ್ನು ಕರೆದುಕೊಂಡು ಅಂಗಡಿ ಕಡೆ ಹೊರಟಳು. “ಅತ್ತಿಗೆ, ನಿಮ್ಮ ಬಜೆಟ್‌ ಹೇಳಿ. ಅದರ ಪ್ರಕಾರ ಅಂಗಡಿಗೆ ಹೋಗೋಣ.”

ಆಟೋದಲ್ಲಿ ಹೊರಟಿದ್ದರು. ಅವನಿಗೆ ಮಾತ್ರ ಕೇಳಿಸುವಂತೆ, “ನಮ್ಮ ತಾಯಿ, ತಂದೆ, ತಮ್ಮ, ತಂಗಿಗೆ ತಗೋಬೇಕು. 5 ಸಾವಿರ ಮಾತ್ರ ಇದೆ,” ಎಂದಳು.

“ಸರಿ, ಅಗ್ಗದ ಬರ್ಮಾ ಬಜಾರ್‌ಗೆ ಹೋಗೋಣ.”

ಅಲ್ಲಿಗೆ ಹೋಗಿ ನೋಡಿದಾಗ  ಸ್ವಲ್ಪ ಚೆನ್ನಾಗಿದೆ ಎನಿಸಿದ ಸೀರೆ, ಡ್ರೆಸ್‌ 2 ಸಾವಿರಕ್ಕೆ ಕಡಿಮೆ ಇರಲಿಲ್ಲ. ಕೊನೆಗೆ ಹಾಗೂ ಹೀಗೂ ಮಾಡಿ ಅಮ್ಮನಿಗೆ ಸುಮಾರಾದ ಶಹಾಪೂರ ಸೀರೆ, ಅಪ್ಪನಿಗೆ ಶಾಲು, ತಮ್ಮನಿಗೆ ಜೀನ್ಸ್ ಟೀಶರ್ಟ್‌, ತಂಗಿಗೆ ಚೂಡಿದಾರ್‌ ಕೊಂಡು ಬರಿಗೈ ಮಾಡಿಕೊಂಡಳು. ಮದುವೆಯಾದ ಮೇಲೆ ಮೊದಲ ಬಾರಿಗೆ ತವರಿಗೆ ಹೊರಟಿದ್ದಾಳೆ, ಇಷ್ಟೂ ಕೊಡದಿದ್ದರೆ ಹೇಗೆ? ಕೊನೆಗೆ ಮನೆಗೆ ಹೊರಡಲು ರವಿ ತಾನೇ ಆಟೋ ದುಡ್ಡು ಕೊಡಬೇಕಾಯ್ತು.

ರವಿಗೆ ಏನೂ ಕೊಡಿಸದೆ ಅವನಿಂದಲೇ ಆಟೋ ದುಡ್ಡು ಪಡೆದಿದ್ದು ಪಿಚ್ಚೆನಿಸಿತು. ರವಿಗೆ ಅದನ್ನು ಹೇಳಿದಾಗ, “ಇರಲಿ ಬನ್ನಿ. ನನ್ನ ಬರ್ತ್‌ಡೇ ಬಂದ ಮೇಲೆ ಕೊಡಿಸುವಿರಂತೆ,” ಎಂದ.

ಮಾರನೇ ದಿನ ರವಿ ಬಸ್‌ಸ್ಟ್ಯಾಂಡ್‌ವರೆಗೆ ಬಂದು ತುಮಕೂರಿಗೆ ಹೋಗುವ ಬಸ್ಸಿನಲ್ಲಿ ಕೂರಿಸಿ ಕೈ ಬೀಸಿ ಹೊರಟ. ವೀಣಾಳ ಅತ್ತೆ ಮನೆಯಲ್ಲಿ ಮಾಡಿದ್ದ ಕೊಬ್ಬರಿ ಮಿಠಾಯಿ, ಕೋಡುಬಳೆ ಕೊಟ್ಟು ಕಳುಹಿಸಿದ್ದರು.

ಮೊದಲು ಸಲ ಒಬ್ಬಳೇ ತವರಿಗೆ ಹೊರಟಿರುವುದು ಅಳಿಗೆ ರೋಮಾಂಚನ ಎನಿಸಿತು. ಮನಸ್ಸು ಖುಷಿಯಿಂದ ಹೊಡೆದುಕೊಳ್ಳುತ್ತಿತ್ತು. ಮದುವೆ ಗಡಿಬಿಡಿ ನಂತರ ಅತ್ತೆಮನೆಗೆ ಹೊರಡುವಾಗ, ಹೊಸ ಅಳಿಯನ ಬಿಂಕ ತೋರಿಸುತ್ತಾ ಶೇಖರ್‌ ಬೇಗ ಬೇಗ ಎಂದು ಅವಸರಿಸಿದ್ದ. ಹೀಗಾಗಿ ಮಂಟಪದಿಂದ ಮನೆಗೆ ಬಂದ ಮೇಲೆ ಪ್ಯಾಕಿಂಗ್‌ನಲ್ಲೇ ಸಮಯ ಕಳೆದುಹೋಗಿ ತಮ್ಮ, ತಂಗಿ ಬಳಿ ನಿಧಾನವಾಗಿ ಮಾತನಾಡಲು ಆಗಿರಲಿಲ್ಲ. ಸ್ನೇಹಿತೆಯರಿಗೂ ಫೋನ್‌ ಮಾಡಿ ಬೈ ಹೇಳಿದ್ದಷ್ಟೆ.

ಬೆಸ್ಟ್ ಫ್ರೆಂಡ್‌ ಚಿತ್ರಾಳ ಜೊತೆ ಹೆಚ್ಚು ಹರಟಬೇಕು, ಸಿನಿಮಾ ನೋಡಬೇಕು. ನೀತಾ, ರಾಜು ತಾನು ಅತ್ತೆಮನೆಗೆ ಹೊರಟ ಮೇಲೆ ಎಷ್ಟು ಬೋರ್‌ ಆಗಿರುತ್ತಾರೋ ಎಂದೆಲ್ಲ ಚಿಂತಿಸಿದಳು. ಮನೆಯಲ್ಲಿ ಅವಳು ಕೇಂದ್ರಬಿಂದು ಆಗಿದ್ದಳು. ಹಿರಿ ಮಗಳು ಓದಿನಲ್ಲಿ ಮುಂದು ಎಂದು ತಂದೆಗೆ ಹೆಮ್ಮೆ. ಎಲ್ಲ ಕೆಲಸಗಳಿಗೂ ಮಗಳು ಬಲಗೈ ಇದ್ದಂತೆ ಎಂದು ತಾಯಿಗೆ ನಿಶ್ಚಿಂತೆ. ಓದಿನಲ್ಲಿ ಏನೇ ಸಂದೇಹವಿದ್ದರೂ ತಮ್ಮ-ತಂಗಿ ಓಡಿಬಂದು ಅಕ್ಕನನ್ನು ಕೇಳುವರು. ಮೂವರೂ ಫ್ರೆಂಡ್ಸ್ ತರಹ ಆತ್ಮೀಯರಾಗಿಯೇ ಇದ್ದುಬಿಟ್ಟಿದ್ದರು. ಹೀಗೆಲ್ಲ ಯೋಚಿಸಿ ಮುಗಿಸುವಷ್ಟರಲ್ಲಿ ಬಸ್ಸು ಬಂದು ತುಮಕೂರಲ್ಲಿ ನಿಂತಿತ್ತು.

ಅವಳು ಖುಷಿಯಾಗಿ ಇಳಿದು ಕೆಳಗೆ ಬಂದಾಗ ತಮ್ಮ ರಾಜು ಕೈ ಬೀಸುತ್ತಾ, ಅವಳ ಕಡೆ ಓಡಿಬಂದು ಸೂಟ್‌ಕೇಸ್‌ ಪಡೆದ. 6 ತಿಂಗಳಲ್ಲಿ ತಮ್ಮ ಬಲು ಸ್ಮಾರ್ಟ್‌ ಆಗಿದ್ದಾನೆ ಎನಿಸಿತು. ಆಟೋದಲ್ಲಿ ಕುಳಿತು ಬೇಗ ಮನೆ ಬಂದು ಸೇರಿದರು.

ಮನೆಗೆ ಬಂದು ಅವಳು ಎಲ್ಲರನ್ನೂ ಹಾರ್ದಿಕವಾಗಿ ಮಾತನಾಡಿಸಿ, ಸಂಭ್ರಮದಿಂದ ಎಲ್ಲವನ್ನೂ ವಿಚಾರಿಸಿಕೊಂಡಳು. ಮತ್ತೆ ಮತ್ತೆ ಮನೆ, ಮಹಡಿ, ಹಿತ್ತಲು ಎಲ್ಲಾ ಕಡೆ ಸುತ್ತಿ ಬಂದಳು. ಅವಳ ತಾಯಿ ತಂದೆ ಬಲು ಪ್ರೀತಿಯಿಂದ ತಲೆ ಸವರಿ ಮಾತನಾಡಿಸಿದರು. ತಮ್ಮ ತಂಗಿ ಚೆನ್ನಾಗಿ ರೇಗಿಸಿ ಖುಷಿಪಟ್ಟರು. ಅವಳ ಅತ್ತೆಮನೆ ಬಗ್ಗೆ ವಿಚಾರಿಸಿ ಅಮ್ಮ ಕಾಫಿ ಮಾಡಲು ಹೊರಟರು. ಅವಳು ಅಪ್ಪಾಜಿಯ ಆರೋಗ್ಯ ವಿಚಾರಿಸಿ, ಪಿ.ಯು.ಸಿ, ಡಿಗ್ರಿಗೆ ಬಂದಿದ್ದ ತಮ್ಮ ತಂಗಿಯರ ಓದಿನ ಬಗ್ಗೆ ವಿಚಾರಿಸಿಕೊಂಡಳು.

ಅದಾಗಿ ಸ್ವಲ್ಪ ಹೊತ್ತಾದ ಮೇಲೆ ಎಲ್ಲರೂ ನಸುನಗುತ್ತಾ, ಹರಟುತ್ತಾ ಊಟ ಮಾಡಿದರು. ವಿಶ್ರಾಂತಿ ಪಡೆಯಲೆಂದು ರಾಜು-ನೀತಾರ ಕೋಣೆಯಲ್ಲಿ ಮಲಗಿದಳು. ಹಿಂದೆ ಮೂವರೂ ಅದೇ ಕೋಣೆ ಉಪಯೋಗಿಸುತ್ತಿದ್ದರು.

“ಅಕ್ಕಾ, ಬೆಂಗಳೂರಿನಿಂದ ನಮಗೇನು ತಂದಿದ್ದಿ?” ಅವರು ಉತ್ಸಾಹದಿಂದ ವೀಣಾಳನ್ನು ವಿಚಾರಿಸಿದರು.

ಸಂಕೋಚದಿಂದಲೇ ಅವಳು ಅವರಿಗಾಗಿ ತಾನು ತಂದಿದ್ದ ಉಡುಗೊರೆ ನೀಡಿದಳು. ಅದನ್ನು  ತೆರೆದು ನೋಡಿದ ಅವರ ಮುಖ ಬಾಡಿಹೋಯಿತು.

ನೀತಾ ಹಿಂದುಮುಂದು ನೋಡದೆ, “ಅಷ್ಟು ಗ್ರಾಂಡ್‌ ಬೆಂಗಳೂರಿನಲ್ಲಿ ನಿನಗೆ ಈ ಅಗ್ಗದ ಮಾಲೇ ಸಿಕ್ಕಿದ್ದಾ? ನಮ್ಮ ಕೆಲಸದವಳ ಮಗಳ ಡ್ರೆಸ್‌ ಇದಕ್ಕಿಂತ ಎಷ್ಟೋ ಚೆನ್ನಾಗಿದೆ….” ಎಂದು ಅಲ್ಲೇ ಇಟ್ಟು ಹೊರಟುಬಿಟ್ಟಳು.

ರಾಜು  ಸ್ವಲ್ಪ ಹಿಂಜರಿಯದೆ, “ಇಂಥ ಚೀಪ್‌ ಡ್ರೆಸ್‌ ತರುವ ಬದಲು ನೀನು ಬರಿಗೈಲೇ ಬರಬಹುದಿತ್ತು ಅಕ್ಕಾ,” ಎಂದು ಅವನೂ ಹೊರಟುಹೋದ.

ನಾಚಿಕೆ, ಅಪಮಾನಗಳಿಂದ ವೀಣಾ ಕುಗ್ಗಿಹೋಗಿದ್ದಳು. ಈಗಿನ ಕಾಲದ ಫ್ಯಾಷನ್‌ ಕಂಡ ಹುಡುಗರು. ಅವರ ಮಟ್ಟಕ್ಕೆ ಅದು ಸರಿಹೋಗದಿದ್ದರೂ, ಕೊಟ್ಟವರ ಮುಖ ಮುರಿಯುವಂತೆ ಹಾಗೆ ಉತ್ತರಿಸಬಾರದೆಂಬ ಸೌಜನ್ಯ ಅವರಿಗೆ ಇರಲೇ ಇಲ್ಲ. ಭೂಮಿ ಬಾಯಿ ತೆರೆಯಬಾರದೆ ಎನಿಸಿತು ಅವಳಿಗೆ.

ಇಷ್ಟು ವರ್ಷ ಅವಳ ಒಡನಾಡಿಗಳಾಗಿದ್ದ ತಮ್ಮ ತಂಗಿ ಇವರೇನೇ? ಅವಳಿಗೆ ದುಃಖ ಉಮ್ಮಳಿಸಿ ಬಂತು. ಪ್ರಯಾಣದ ಆಯಾಸದಿಂದ ತಲೆ ನೋವು ಬಂದಿತ್ತು. ಹಾಗೇ ಒರಗಿದಳು ಎದ್ದಾಗ ಸಂಜೆ 5 ಗಂಟೆ ಆಗಿತ್ತು. ನೀತಾ ಯಾರೊಂದಿಗೋ ಮಾತನಾಡುತ್ತಾ ಕಿಲಕಿಲ ನಗುತ್ತಿರುವ ಸದ್ದು ಕೇಳಿಸಿತು.

ವೀಣಾ ಬಾಲ್ಕನಿಯಿಂದ ಬಗ್ಗಿ ನೋಡಿದಾಗ ನೀತಾ ಒಬ್ಬ ತರುಣನೊಡನೆ ಲಲ್ಲೇ ಹೊಡೆಯುತ್ತಿದ್ದಳು. ಹುಡುಗ ಬೈಕ್‌ ಮೇಲೆ ಕುಳಿತು ಸ್ಟೈಲಾಗಿ ಗಾಗಲ್ಸ್ ತಿರುಗಿಸುತ್ತಾ, ಇವಳನ್ನು ನಗಿಸುತ್ತಿದ್ದ. ಅಂತೂ ಕೊನೆಗೆ ಬೈಕ್‌ ಸ್ಮಾರ್ಟ್‌ ಮಾಡಿ, ಅವಳಿಗೆ ಫ್ಲೈಯಿಂಗ್‌ ಕಿಸ್‌ ನೀಡಿ ಹೊರಟುಬಿಟ್ಟ. ಅವಳು ನಸುನಗುತ್ತಾ ಅಲ್ಲೇ ಗೋಡೆಗೊರಗಿ ಕೈಯಲ್ಲಿ ಯಾವುದೋ ಹೊಸ ಉಡುಗೊರೆ ತಿರುಗಿಸಿ ನೋಡುತ್ತಾ ಸಂಭ್ರಮಿಸುತ್ತಿದ್ದಳು. ಇದರಿಂದ ನೀತಾ ಎಂಥ ಪ್ರೇಮ ಜಾಲಕ್ಕೆ ಸಿಲುಕಿದ್ದಾಳೆಂದು ವೀಣಾಳಿಗೆ ಸ್ಪಷ್ಟ ಅರಿವಾಯಿತು. ಕೇವಲ 2ನೇ ಪಿಯುಸಿ ಕಲಿಯುತ್ತಿರುವ ನೀತಾ ಇಷ್ಟು ಬೇಗ ಇಷ್ಟು ಮುಂದುವರಿದಳೇ? ನಂತರ ಅವಳ ಬಳಿ ಆ ಬಗ್ಗೆ ಮಾತನಾಡಬೇಕು ಎಂದುಕೊಂಡಳು.

ಅಮ್ಮ ಅವಳ ಕೋಣೆಗೆ ಟೀ ಮಾಡಿ ತಂದರು, “ಅಮ್ಮ ಸ್ವಲ್ಪ ಇಲ್ಲಿ ಕೂರು ಬಾ,” ಎಂದು ಅವರ ಕೈಯಿಂದ ಟೀ ಪಡೆದು, ಹಾಸಿಗೆಯಲ್ಲಿ ಕೂರಿಸಿ, ಅಮ್ಮ ಅಪ್ಪನಿಗಾಗಿ ತಂದಿದ್ದ ಉಡುಗೊರೆ ನೀಡಿದಳು. ಇವರೇನಂದುಕೊಳ್ಳುವರೋ ಎನಿಸದೇ ಇರಲಿಲ್ಲ.

ಸೀರೆ, ಶಾಲುಗಳನ್ನು ತಿರುಗಿಸಿ ನೋಡಿದ ಅಮ್ಮ, “ಈಗ ಇದರ ಅಗತ್ಯ ಏನಿತ್ತು? ಅಪ್ಪಾಜಿ ಈ ಫಂಕ್ಷನ್‌ಗಾಗಿ ಅಂತಲೇ ನನಗೆ ಗ್ರಾಂಡ್‌ ರೇಷ್ಮೆ ಸೀರೆ, ಅವರಿಗೆ ಕುರ್ತಾ ಪೈಜಾಮಾ ಸೆಟ್‌, ಮಕ್ಕಳಿಗೆ ಡ್ರೆಸ್‌, ನಿನಗೂ ಸೀರೆ ತಂದಿದ್ದಾರೆ. ನೀನು ಸುಮ್ಮನೆ ತೊಂದರೆ ತೊಗೊಂಡೆ,” ಎಂದು ವಾಪಸ್‌ ಪ್ಯಾಕೆಟ್‌ಗೆ ತುಂಬಿಸಿ ಒಳಗೆ ಹೊರಟರು. ಅಸಮಾಧಾನ ಅವರ ಮುಖದಲ್ಲಿ ಸ್ಪಷ್ಟ ಕಾ;ಸಿತ್ತು.

ಮತ್ತೊಮ್ಮೆ ವೀಣಾ ಅಸಹಾಯಕತೆಯಿಂದ ಕುಗ್ಗಿಹೋದಳು. ಅವೆಲ್ಲನ್ನೂ ಜೋಡಿಸಿ ಅಮ್ಮನ ವಾರ್ಡ್‌ರೋಬ್‌ ಸೇರಿಸಿ, ಬಲವಂತವಾಗಿ ಮುಖದಲ್ಲಿ ನಗು ತಂದುಕೊಂಡು, ಏನೂ ನಡೆದೇ ಇಲ್ಲ ಎಂಬಂತೆ ಅಮ್ಮನನ್ನು ಹುಡುಕಿಕೊಂಡು ಹೋದಳು.

“ನೀನು ಅಲ್ಲೇ ರೆಸ್ಟ್ ಮಾಡಮ್ಮ. ಇಲ್ಲಿಗೆ ಏಕೆ ಬರಲು ಹೋದೆ? ಹಿಂದಿನಂತಲ್ಲ….ಈಗ ನೀನು ನಮ್ಮ ಅತಿಥಿ,” ಎಂದರು.

ಅದನ್ನು ಕೇಳಿ ವೀಣಾಳ ಕಂಗಳು ತುಂಬಿ ಬಂದವು. ಅವಳು ಕೃತಕ ನಗು ಬೀರುತ್ತಾ ತೊಳೆದಿಟ್ಟಿದ್ದ ಪಾತ್ರೆಗಳನ್ನು ಒರೆಸಿ, ಶೆಲ್ಫ್ ನಲ್ಲಿ ಇಡತೊಡಗಿಳು.

“ಇರಲಿ ಬಿಡಮ್ಮ, ಅದೆಲ್ಲ ನಾನು ನೋಡಿಕೊಳ್ತೀನಿ,” ಎಂದು ಮೂಲೆಯಲ್ಲಿದ್ದ ಸ್ಟೂಲ್‌ ಎಳೆದು ಹಾಕಿ ಅಲ್ಲೇ ಕೂರುವಂತೆ ಹೇಳಿದರು.

ಮಾರನೇ ದಿನ ಬರಲಿರುವ ದೊಡ್ಡಮ್ಮ, ಚಿಕ್ಕಮ್ಮ, ಸೋದರತ್ತೆ ಎಲ್ಲರ ಬಗ್ಗೆ ಹೇಳುತ್ತಾ ಮಧ್ಯೆ ಮಧ್ಯೆ ವೀಣಾಳ ಅತ್ತೆ ಮನೆ ಬಗ್ಗೆಯೂ ವಿಚಾರಿಸಿದರು. ತನ್ನತ್ತೆ ಕೊಟ್ಟಿದ್ದ ತಿಂಡಿಗಳನ್ನು ವೀಣಾ ಅಮ್ಮನಿಗೆ ಕೊಟ್ಟಳು.

ಅವಳಿಗೆ ಅಮ್ಮನ ಮಡಿಲಲ್ಲಿ ತಲೆ ಇರಿಸಿ, ತಾನಿನ್ನೂ ಅತ್ತೆಮನೆಯಲ್ಲಿ ಪರಕೀಯಳು ಎಂದು ಹೇಳಿ ಅತ್ತುಕೊಳ್ಳಲು ಬಯಸಿದಳು. ಆದರೆ ಇಲ್ಲಿ ನೋಡಿದರೆ…. ಇಲ್ಲೂ ಪರಕೀಯತೆ ಕಾಡುತ್ತಿತ್ತು.

ಮಾರನೇ ದಿನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡು ಎಲ್ಲರನ್ನೂ ಆಹ್ವಾನಿಸಿದ್ದರು. ಅಪ್ಪಾಜಿ ರಿಟೈರ್‌ಮೆಂಟ್‌ ಸಲುವಾಗಿಯೇ ಇದೆಲ್ಲ ಎಂಬುದು ಅತಿಥಿಗಳಿಗೂ ಗೊತ್ತಿತ್ತು. ಈ ನೆಪದಲ್ಲಿ ಎಲ್ಲರೂ ಒಂದೆಡೆ ಸೇರಿದ್ದರು.

ಎಲ್ಲರೂ ವೀಣಾಳನ್ನು ಅವಳ ಗಂಡ ಬರಲಿಲ್ಲವೇ ಎಂದು ವಿಚಾರಿಸುವರೇ! ಅವಳ ಅತ್ತೆಮನೆ ಅನುಭವ, ಹೊಸ ಸಂಸಾರದ ಬಗ್ಗೆ, 6 ತಿಂಗಳಾಯಿತಲ್ಲ ಗುಡ್‌ ನ್ಯೂಸ್‌ ಇಲ್ಲವೇ ಎಂದು ಛೇಡಿಸಿದರು. ಭರ್ಜರಿ ಔತಣಕೂಟ ನಡೆದು, ಎಲ್ಲರೂ ಧಾರಾಳ ಉಡುಗೊರೆ ನೀಡಿದರು. ಬಂದವರು ಹೊರಟರು, ಉಳಿದವರು ಬಹಳ ಕಡಿಮೆ ಜನ. ಅಪ್ಪಾಜಿ ಮುಖದಲ್ಲಿ ಕೃತಕ ನಗು ತುಂಬಿತ್ತು. ಒಮ್ಮೊಮ್ಮೆ ಚಿಂತೆಯ ಕಾರ್ಮೋಡ ಆವರಿಸುತ್ತಿತ್ತು. ಚಿಕ್ಕ ಮಗಳು, ಒಬ್ಬನೇ ಮಗ ಇನ್ನೂ ಕಲಿಯುತ್ತಿದ್ದಾರೆ. ಅವರು ಸೆಟಲ್ ಆಗಿಲ್ಲ ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಈಗ ಬರುವ ಪೆನ್ಶನ್‌ ಹಣದಲ್ಲೇ ಸಂಸಾರ ನಡೆಯಬೇಕಿತ್ತು.

ಮಾರನೇ ದಿನ ಅಪ್ಪಾಜಿ ಕೇಟರಿಂಗ್‌ನವರಿಗೆ ಲೆಕ್ಕ ಚುಕ್ತಾ ಮಾಡುತ್ತಿದ್ದರು. ಚಿಕ್ಕಮ್ಮ, ಅತ್ತೆಯರು ಸಹ ಹೊರಟುಬಿಟ್ಟರು. ಅತಿಥಿಗಳು ಹೊರಟ ಮೇಲೆ ಮನೆ ಬಿಕೋ ಎನ್ನುವಂತೆ ಮೌನವಾಯಿತು. ಈ ಇಡೀ ಫಂಕ್ಷನ್‌ನಲ್ಲಿ ನೀತಾ-ರಾಜು ಯಾವ ಆಸಕ್ತಿಯನ್ನೂ ತೋರಿಸದೆ ಸುಮ್ಮನೆ ಓಡಾಡುತ್ತಿದ್ದುದನ್ನು ವೀಣಾ ಗಮನಿಸಿದಳು. ಅವರು ಅತಿಥಿಗಳ ಜೊತೆ ಸೇರಿ ಹರಟೆಯಲ್ಲಿ ತೊಡಗಿದ್ದರು. ಒಮ್ಮೊಮ್ಮೆ ವೀಣಾ ಗಮನಿಸಿದಾಗ, ರಾಜು ಪಕ್ಕದ ಮನೆಯ ಹುಡುಗಿ ಟೀನಾ ಜೊತೆ ಕಣ್ಣಲ್ಲೇ ಸನ್ನೆ ಮೂಲಕ ಮಾತನಾಡುತ್ತಿರುವುದು ತಿಳಿಯಿತು.

ಅವರಿಬ್ಬರಿಗೂ ತಮ್ಮ ಓದು, ಕೆರಿಯರ್‌, ಜವಾಬ್ದಾರಿ ಯಾವುದರ ಬಗ್ಗೆಯೂ ಗಮನವೇ ಇರಲಿಲ್ಲ. ಈ ವಯಸ್ಸಿನಲ್ಲಿ ಇಂಥ ಹುಡುಗಾಟಿಕೆ ಸಹಜ ಎಂದು ನಿರ್ಲಕ್ಷಿಸಿದರೂ ಏಕೋ ಯಾವುದೂ ಸರಿ ಇಲ್ಲ ಅನಿಸಿತು. ನೀತಾ-ರಾಜು ಹೊರಗೆ ಹೊರಟಿದ್ದರು. ಮನೆಯ ಕೋಣೆಯಲ್ಲಿ ಸಿನಿಮಾ ಸ್ಟಾರ್‌ಗಳ ಪೋಸ್ಟರ್‌ ತುಂಬಿದ್ದವು. ಅಮ್ಮ ಅಪ್ಪಾಜಿ ಮಲಗಿದ್ದರು ಫಂಕ್ಷನ್‌ ಮುಗಿದ ಮನೆಯನ್ನು ಓರಣವಾಗಿಡೋಣ ಎಂದು ವೀಣಾ ಒಂದು ಕಡೆಯಿಂದ ಎಲ್ಲವನ್ನೂ  ಸರಿಪಡಿಸತೊಡಗಿದಳು.

ತನ್ನ ಕೋಣೆಗೆ ಹೋಗಿ ವೀಣಾ ವಾರ್ಡ್‌ರೋಬ್‌ ತೆರೆದು ನೋಡಿದರೆ ಅದರ ತುಂಬಾ, ನೀತಾ-ರಾಜೂರ ಬಟ್ಟೆಗಳೇ ತುಂಬಿದ್ದವು. ಅವಳು ತನ್ನ ಟ್ರಂಕ್‌ ಎಲ್ಲಿ  ಎಂದು ನೋಡಿದಾಗ,  ಅದಾಗಲೇ ಅಟ್ಟ ಸೇರಿತ್ತು. ಇನ್ನೊಂದರಲ್ಲಿ ಅವಳ ಬುಕ್ಸ್ ಇದ್ದವು. ತನ್ನ ವಸ್ತುಗಳಿಗೂ, ವ್ಯಕ್ತಿತ್ವಕ್ಕೂ ಈ ಮನೆಯಲ್ಲಿ ಇಷ್ಟೇ ಮನ್ನಣೆ ಎಂದು ಗೊತ್ತಾಯಿತು.

ಎಲ್ಲವನ್ನೂ ಸರಿಪಡಿಸಿ ಮತ್ತೆ ಅವಳು ಬಾಲ್ಕನಿಗೆ ಬಂದಾಗ, ನೀತಾ ಅದೇ ಹುಡುಗನ ಜೊತೆ ಬೈಕ್‌ನಿಂದ ಇಳಿದು ಕೈ ಬೀಸುತ್ತಾ ಒಳಬಂದಳು. ಎದುರಿಗೆ ವೀಣಾ ಕಾಣಿಸಿದಾಗ ನೀತಾಳಿಗೆ ಎದೆ ಧಸಕ್‌ ಅಂದಿತು. ಏನೂ ಗಮನಿಸಿದವಳ ಹಾಗೆ ತನ್ನ ಕೋಣೆಗೆ ಹೊರಟುಹೋದಳು.

ಅದೇ ಸಮಯ ರಾಜು ಮೊಬೈಲ್‌ನಲ್ಲಿ ಯಾರೊಂದಿಗೋ ವಿಡಿಯೋ ಚಾಟ್‌ನಲ್ಲಿದ್ದ. ವೀಣಾಳನ್ನು ನೋಡಿದ ತಕ್ಷಣ ಫೋನ್‌ ಆಫ್‌ ಮಾಡಿ, ಅಲ್ಲಿ ನಿಲ್ಲಲಾರದೆ ಕೋಣೆಯ ಕಡೆ ನಡೆದ. ವೀಣಾ ರಾಜು ರಾಜು ಎಂದು ಕರೆಯುತ್ತಿದ್ದರೂ ಅವಳತ್ತ ಕಿವಿಗೊಡಲಿಲ್ಲ. ಈಗ ವೀಣಾಳಿಗೂ ಬಹಳ ಕಸಿವಿಸಿ ಎನಿಸಿತು. ಆದರೂ ಏನೂ ನಡೆದಿಲ್ಲ ಎಂಬಂತೆ ಸಂಭಾಳಿಸಿಕೊಂಡು, ಇಬ್ಬರೂ ಹಾಲ್‌ಗೆ ಬರುವಂತೆ ಕೂಗಿ ಕರೆದಳು. ಬರವುದೋ ಬೇಡವೋ ಎಂಬಂತೆ ಇಬ್ಬರೂ ಅಲ್ಲಿಗೆ ಬಂದರು.

ಇಬ್ಬರನ್ನೂ ಕೂರಿಸಿಕೊಂಡು ಪ್ರೀತಿಯಿಂದ ವೀಣಾ ಅವರ ವಿದ್ಯಾಭ್ಯಾಸದ ಬಗ್ಗೆ, ಪರೀಕ್ಷೆ ತಯಾರಿ ಬಗ್ಗೆ ವಿಚಾರಿಸಿದಳು. ಇಬ್ಬರೂ ಏನೋ ಒಂದು ಹೇಳಿ ಅಲ್ಲಿಂದ ತಕ್ಷಣ ಸರಿಯಲು ನೋಡಿದರು.ವೀಣಾ ರಾಜು ಕಡೆ ತಿರುಗಿ, “ಯಾವುದದು ಹೊಸ ಮೊಬೈಲ್‌ ರಾಜು…. ಅಪ್ಪಾಜಿ ಯಾವಾಗ  ಕೊಡಿಸಿದರು?”

“ಅಪ್ಪಾಜಿ ಎಲ್ಲಿಂದ ಇಂಥ ಸ್ಮಾರ್ಟ್‌ ಫೋನ್‌ ಕೊಡಿಸಲು ಸಾಧ್ಯ? ಯಾವುದೋ ಬೇಕಾರ್‌ ಬೇಸಿಕ್ಸ್ ಫೋನ್‌ ಇತ್ತು. ಮೊನ್ನೆ ಸುಶೀಲತ್ತೆ ಮಗ ಕಿರಣ್‌ ಐಫೋನ್‌ ತಗೊಂಡಾಗ, ಅವನ ಈ 6 ತಿಂಗಳ ಪೋನ್‌ ನನಗೆ ಕೊಟ್ಟ. ನಾನೇ 4ಜಿಗೆ ಸಿಮ್ ಬದಲಾಯಿಸಿ ಹಾಕಿಸಿಕೊಂಡೆ,” ಎಂದ ರಾಜು.

“ಯಾರೋ ಹಾಗೆ ಕೊಟ್ಟರು ಅಂತ ಕೈ ನೀಡಿ ತೆಗೆದುಕೊಳ್ಳೋದೇ? ಅತ್ತೆ ಏನು ಅಂದುಕೊಂಡ್ರೋ….. ನನಗಾದರೂ ಒಮ್ಮೆ ಫೋನ್‌ ಮಾಡಿ ಹೇಳಬಹುದಿತ್ತು. ಅಪ್ಪಾಜಿಗೆ ನೀನು ಹೇಳೇ ಇಲ್ಲ ಅನ್ಸುತ್ತೆ, ಆಗ ಅವರೂ ನಿನಗೆ ಇದೇ ಮಾತು ಹೇಳ್ತಿದ್ದರು.”

ಇದನ್ನು ಕೇಳಿ, ಈ ಭಾಷಣ ಬಿಗಿಯಲಿಕ್ಕಾ ತನ್ನನ್ನು ಕರೆಸಿದ್ದು ಎಂಬಂತೆ ರಾಜು ಮುಖ ಸಿಂಡರಿಸಿದ. ಆಗ ವೀಣಾ ತುಸು ಸಿಟ್ಟಾಗಿ, “ನೋಡ್ತಾನೇ ಇದ್ದೀನಿ…. 6 ತಿಂಗಳಲ್ಲಿ ನೀವಿಬ್ಬರೂ ಬಹಳ ಬದಲಾಗಿದ್ದೀರಿ,” ಎನ್ನುತ್ತಾ ನೀತಾ ಕಡೆ ತಿರುಗಿ, “ನೀತಾ… ಯಾರಮ್ಮ ಆ ಹುಡುಗ ನಿನ್ನನ್ನು ಡ್ರಾಪ್‌ ಮಾಡಿಹೋದವನು?”

ನೀತಾ ಸಿಡಾರನೆ ಸಿಡುಕಿದಳು, “ಏನಾಯ್ತಕ್ಕಾ ಈಗ ಅದಕ್ಕೆ….. ಅವನು ರೋಮಿ. ಕಾಲೇಜಿನಲ್ಲಿ ನನ್ನ ಜೊತೆ ಓದುತ್ತಾನೆ….ಸ್ಪೆಷಲ್ ಕ್ಲಾಸ್‌ ಮುಗಿಸಿ ಬರಲು ತಡವಾಯ್ತು ಅಂತ ನನ್ನನ್ನು ಡ್ರಾಪ್‌ ಮಾಡಿ ಹೋದ….”

ಅವಳನ್ನು ಶಾಂತಗೊಳಿಸುತ್ತಾ, “ನೋಡು ನೀತಾ, ಇಂಥ ವಿಷಯಗಳಿಗೆ ನೀನಿನ್ನೂ ತುಂಬಾ ಚಿಕ್ಕವಳು, ಬಹಳ ಮುಗ್ಧೆ. ನೀವಿಬ್ಬರೂ ಇನ್ನೂ ಓದು ಪೂರೈಸಿಲ್ಲ. ಅದರ ಕಡೆ ಗಮನ ಕೊಡಿ…. ರಾಜು, ರಾತ್ರಿ 2 ಗಂಟೆ ಹೊತ್ತಿಗೆ ನಾನು ನೀರು ಕುಡಿಯಲು ಎದ್ದಾಗ ನಿನ್ನ ಕೋಣೆಯಲ್ಲಿ ಇನ್ನೂ ಲೈಟ್‌ ಉರಿಯುತ್ತಿತ್ತು. ಬಹುಶಃ ಪರೀಕ್ಷೆಗೆ ತಯಾರಿ ನಡೆಸಿದ್ದಿ ಅಂದುಕೊಂಡ್ರೆ ಯಾವುದೋ ಇಂಗ್ಲಿಷ್‌ ಸಿನಿಮಾ ನೋಡುತ್ತಾ ಕೂತಿದ್ದಿ….. ಅಪ್ಪಾಜಿ ನಿಮ್ಮಿಬ್ಬರ ಬಗ್ಗೆ ಎಷ್ಟು ಭರವಸೆ ಇಟ್ಟುಕೊಂಡಿದ್ದಾರೆ ಗೊತ್ತಾ? ಇದೆಲ್ಲ ಗೊತ್ತಾದ್ರೆ ಬಹಳ ನೊಂದುಕೊಳ್ತಾರೆ. ಇಬ್ಬರೂ ನಿಮ್ಮ ಓದಿನ ಕಡೆ ಸಂಪೂರ್ಣ ಗಮನ ಕೊಡಿ…”

ರಾಜು ಅವಳ ಮಾತು ತಡೆಯುತ್ತಾ, “ಅಕ್ಕಾ, ಈಗ ನಾವು ಅಂಥಾದ್ದೇನು ಮಾಡಿಬಿಟ್ವಿ ಅಂತ ನೀನು ಇಷ್ಟು ದೊಡ್ಡ ಭಾಷಣ ಬಿಗಿಯುತ್ತಿದ್ದಿ?”

ನೀತಾ ತಾನೇನೂ ಕಡಿಮೆ ಇಲ್ಲ ಎಂಬಂತೆ, “ಅಕ್ಕಾ, ನಿನ್ನ ಈ ಜೋರು ಜಬರ್ದಸ್ತು ನಿಮ್ಮತ್ತೆ ಮನೆಗೆ ಕಟ್ಟಿಡು…. ನಾವು ಇನ್ನೂ ಹೈಸ್ಕೂಲಲ್ಲಿ ಇದ್ದೀವಿ ಅಂದುಕೊಂಡ್ಯಾ?”

ಇದನ್ನೆಲ್ಲ ಕೇಳಿ ವೀಣಾಳಿಗೆ ಶಾಕ್‌ ತಗುಲಿದಂತಾಯಿತು. ಇವರೇ ನನ್ನ ಆ ಹಳೆಯ ಒಡಹುಟ್ಟಿದವರು? ಇಬ್ಬರೂ ಕಲಿಕೆಯಲ್ಲಿ ಅಷ್ಟಕ್ಕಷ್ಟೆ. ತಾನು ತನ್ನ ಓದು ಮುಗಿಸಿ ಇವರಿಗೆ ಪಾಠ ಕಲಿಸಿದ್ದರಿಂದಲೇ ಕನಿಷ್ಠ ಅಂಕ ಪಡೆದು ಮುಂದಿನ ತರಗತಿ ಸೇರುತ್ತಿದ್ದರು. ಆಗೆಲ್ಲ ಈ ಅಕ್ಕಾ ಬೇಕಾಗಿತ್ತಲ್ಲವೇ?

ಇವರುಗಳ ಗಲಾಟೆ ಕೇಳಿ ಕೆಳಗೆ ಮಲಗಿದ್ದ ಅಮ್ಮ ಮಹಡಿ ಏರಿ ಮೇಲೆ ಓಡಿ ಬಂದರು. ಮಕ್ಕಳು ವಿವಾದ ನಡೆಸಿರುವುದನ್ನು ಕಂಡು, “ಏನಾಯ್ತು? ಏನಿದು ಗಲಾಟೆ?” ಎಂದರು.

ವೀಣಾ ಏನಾದರೂ ಹೇಳುವ ಮೊದಲೇ ನೀತಾ ಜೋರಾಗಿ ಕಿರುಚಿದಳು, “ಇನ್ನೇನಾಗಬೇಕಮ್ಮ…. ಈ ವೀಣಕ್ಕಾ ಬಂದಾಗಿನಿಂದ ಸಿಐಡಿ ಕೆಲಸ ಮಾಡೋದೇ ಆಗೋಗಿದೆ. ಯಾರು ಎಲ್ಲಿಗೆ ಹೋಗ್ತಾರೆ ಬರ್ತಾರೆ….. ಯಾರು ಏನು ಮಾಡುತ್ತಿದ್ದಾರೆ…. ಇದರ ವಿಚಾರಣೆ ನಡೀತಿದೆ…. ನಾವು ಇರುದರಲ್ಲೇ ಹೇಗೋ ಸಂತೋಷವಾಗಿದ್ದೀವಲ್ಲ, ಅದು ಈ ಅಕ್ಕಂಗೆ ಸಹಿಸಕ್ಕಾಗ್ತಿಲ್ಲ!”

ರಾಜು ಹೇಳಿದ, “ಅಮ್ಮ, ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಿದ್ದೇವೆ. ಅಕ್ಕಾ ಮಾತ್ರ ನಮ್ಮನ್ನು ಇನ್ನೂ ಪ್ರೈಮರಿ ಶಾಲೆ ಮಕ್ಕಳು ಅಂದ್ಕೊಂಡಿದ್ದಾಳೆ. ನಮ್ಮಿಂದ ಅಕ್ಕಂಗೆ ಏನು ತೊಂದರೆ? ನನಗಂತೂ ಅರ್ಥವಾಗುತ್ತಿಲ್ಲ….” ಎಂದು ದಾಪುಗಾಲು ಹಾಕುತ್ತಾ ಅವನು ಕೆಳಗೆ ಸರಿದುಹೋದ.

ಅಮ್ಮ ಯಾರಿಗೆ ಏನು ಹೇಳುವುದೋ ಎಂಬ ಕಸಿವಿಸಿಗೆ ಒಳಗಾಗಿ, “ನೀನು ನಡಿಯಮ್ಮ ಕೆಳಗೆ…. ಅವರು ಏನಾದರೂ ಮಾಡಿಕೊಳ್ಳಲಿ, ನೀನೇಕೆ ಅವರ ಉಸಾಬರಿಗೆ ಹೋಗಬೇಕು? ನಿನ್ನ ಅತ್ತೆ ಮನೆ ಸುಧಾರಿಸಿಕೊಂಡು ನಿನ್ನ ಕಷ್ಟಸುಖ ನೋಡು….” ಎಂದು ಬಹುತೇಕ ಅವಳ ಕೈ ಹಿಡಿದೆಳೆದರು.

ಯಾರೂ ವೀಣಾಳಿಗೆ ಮಾತನಾಡುವ ಅವಕಾಶವನ್ನೇ ಕೊಡಲಿಲ್ಲ. ಅಪಮಾನದಿಂದ ಅವಳ ಕಣ್ಣು ತುಂಬಿತ್ತು. ಅಷ್ಟರಲ್ಲಿ ಅಪ್ಪಾಜಿ ಕೂಡ ಮೇಲೆ ಬಂದಿದ್ದರು. ಏನನ್ನೂ ವಿಚಾರಿಸದೆ ಕ್ಷಣಾರ್ಧದಲ್ಲಿ ಎಲ್ಲವನ್ನೂ ಗ್ರಹಿಸಿ, ವೀಣಾಳ ಕೈ ಹಿಡಿದು ನಿಧಾನವಾಗಿ ಮೆಟ್ಟಿಲಿಳಿಯುತ್ತಾ ತಮ್ಮ ಕೋಣೆಗೆ ಕರೆದೊಯ್ದರು. ಅವಳ ಸುದೀರ್ಘ ಮೌನ ನೋಡಿ ಅಪ್ಪಾಜಿ ಏನೂ ವಿಚಾರಿಸಲಿಕ್ಕೆ ಹೋಗಲಿಲ್ಲ. ಮಗಳೇ ಸಮಾಧಾನಗೊಳ್ಳಲಿ ಎಂದು ಸುಮ್ಮನಾದರು.

ಅರ್ಧ ಗಂಟೆ ಮೌನವಾಗಿ ಅಲ್ಲಿದ್ದವಳು ನಂತರ ಮೆಲ್ಲಗೆ ಎದ್ದು ವೀಣಾ ತನ್ನ ಕೋಣೆಗೆ ಹೋಗಿ ಮಲಗಿಬಿಟ್ಟಳು. ಎಷ್ಟೋ ಹೊತ್ತಾದ ಮೇಲೆ ಅವಳು ಎದ್ದು ಬಂದಾಗ ಸಂಜೆ 7 ದಾಟಿತ್ತು. ಔಪಚಾರಿಕಾಗಿ ಅಮ್ಮನ ಜೊತೆ ಮಾತನಾಡಿ ನಂತರ ತನ್ನ ಕೋಣೆ ಸೇರಿದಳು. ಯಾರೂ ಊಟಕ್ಕೆ ಏಳುವ ಲಕ್ಷಣವೇ ಇರಲಿಲ್ಲ. ಕೊನೆಗೆ ಅಮ್ಮ ತಾವಾಗಿ ಒಬ್ಬೊಬ್ಬರನ್ನೇ ಎಬ್ಬಿಸಿದರು. ನೀತಾ-ರಾಜು ಉಂಡ ಶಾಸ್ತ್ರ ಮಾಡಿ ಬೇಗ ಮಲಗಿಬಿಟ್ಟರು. ಅಮ್ಮ, ಅಪ್ಪಾಜಿ ಮತ್ತೆ ಮತ್ತೆ ಕರೆದರೂ ವೀಣಾ ಊಟ ಬೇಡ ಹಸಿವಿಲ್ಲ, ಎಂದು ನೀರು ಕುಡಿದು ಹಾಗೆ ಮಲಗಿಬಿಟ್ಟಳು. ಅಮ್ಮ, ಅಪ್ಪಾಜಿ ಸಹ ಬೇಸರದಿಂದ ಹಾಗೇ ಮಲಗುವಂತಾಯಿತು.

ಮಾರನೇ ಬೆಳಗ್ಗೆ ಹಿಂದೆ ಮಾಡುತ್ತಿದ್ದಂತೆ, ಅಮ್ಮ ಏಳುವ ಮುಂಚೆ ವೀಣಾ ತಾನೇ ಎದ್ದು ಡಿಕಾಕ್ಷನ್‌ ಹಾಕಿ ಬೀದಿ ಬಾಗಿಲಿಗೆ ನೀರು ಚಿಮುಕಿಸಿ, ರಂಗೋಲಿ ಹಾಕಿ ಹಾಲು ತಂದಳು. ಕಾಫಿ ಬೆರೆಸಿ ಎಲ್ಲರಿಗೂ ತಾನೇ ಹೋಗಿ ಕೊಟ್ಟು ಬಂದಳು. ತುಟಿಗಳ ಮೇಲೆ ಕೃತಕ ನಗು ತಂದುಕೊಂಡು ಏನೂ ಆಗಿಯೇ ಇಲ್ಲ ಎಂಬಂತೆ ಸಹಜವಾಗಿ ವರ್ತಿಸಲು ಪ್ರಯತ್ನಿಸಿದಳು ವೀಣಾ. ಅಮ್ಮನ ಬಳಿ ಬೇಕೆಂದೇ ಹೆಚ್ಚಿಗೆ ಮಾತನಾಡುತ್ತಾ ತನ್ನತ್ತೆ ಮನೆ ವಿಚಾರ, ಮೈದುನ ರವಿಯ ತುಂಟತನ, ನಾದಿನಿಯ ಕಥೆ ಇತ್ಯಾದಿ ಉತ್ಪ್ರೇಕ್ಷೆ ಮಾಡಿ ಹೇಳತೊಡಗಿದಳು.

ಹೀಗೆ ಮಾತುಕಥೆ ನಡೆಯುತ್ತಿದ್ದಾಗ, ನೀತಾ ಕಾಲೇಜಿಗೆ ಹೋಗಲೆಂದು ಸಿದ್ಧಳಾಗಿ ಬಂದಳು. “ಅರೆ ನೀತಾ, ಇವತ್ತು ಬೇಗ ಕಾಲೇಜಿಗೆ ಹೊರಟೆಯಾ? ಇರು, ಬೇಗ ನಿಂಗೆ ಇಷ್ಟವಾದ ದಿಢೀರ್‌ ದೋಸೆ ಮಾಡಿಕೊಡ್ತೀನಿ. 2 ತಿಂದು  ಹೊರಡುವೆಯಂತೆ…..” ಎಂದು ವೀಣಾ ಸ್ನೇಹಭರಿತಳಾಗಿ ನುಡಿದು ಅಡುಗೆಮನೆ ಕಡೆ ನಡೆದಳು. ಅದು ತನಗೆ ಹೇಳಿದ್ದೇ ಅಲ್ಲವೇನೋ ಎಂಬಂತೆ, “ಅಮ್ಮ, ಕಾಲೇಜಿಗೆ ಹೊರಟೆ. ಸಂಜೆ ಬರೋದು ಸ್ವಲ್ಪ ತಡವಾಗುತ್ತೆ,” ಎಂದು ಅಮ್ಮನಿಗೆ ಬೈ ಎನ್ನುತ್ತಾ ನೀತಾ ಹೊರಟೇಬಿಟ್ಟಳು.

ವೀಣಾ ಹಾಗೂ ಅಮ್ಮ ಮುಖ ಮುಖ ನೋಡಿಕೊಂಡದ್ದೇ ಬಂತು. ಮಹರಾಯ ತಮ್ಮನಾದರೂ ತಿಂಡಿ ತಿನ್ನಲಿ ಎಂದು ದಿಢೀರ್‌ ದೋಸೆಗೆ ಬೇಗ ಬೇಗ ಸಿದ್ಧಪಡಿಸಿಕೊಂಡ ವೀಣಾ, ಎಲ್ಲರಿಗೂ ದೋಸೆ, ಚಟ್ನಿ ಮಾಡಿ ಡೈನಿಂಗ್‌ ಟೇಬಲ್ ಮೇಲೆ ತಂದಿರಿಸಿದಳು.

ಅಮ್ಮ ಅಪ್ಪ ಬೇಗ ಬಂದು ಕುಳಿತರು. ಬರಲೋ ಬೇಡವೋ ಎಂದು ಬಂದ ರಾಜು. ಅವನು ಯಾರೊಂದಿಗೂ ಮಾತನಾಡಲಿಲ್ಲ. ಬೇಗ ತಿಂದು ತಟ್ಟೆಯಲ್ಲೇ ಕೈ ತೊಳೆದು, “ಅಮ್ಮ, ಬರ್ತೀನಿ. ಕಾಲೇಜಿಗೆ ತಡವಾಯ್ತು. ಅಕ್ಕನ್ನ ಸಂಜೆ ಬಸ್ಸಿಗೆ ಕಳುಹಿಸುವ ಹಾಗಿದ್ದರೆ ನನ್ನ ಮೊಬೈಲ್‌‌ಗೆ ಫೋನ್‌ ಮಾಡು,” ಎಂದು ಅಮ್ಮನಿಗೆ ಮಾತ್ರ ಹೇಳಿ ಹೊರಟೇಬಿಟ್ಟ.

ತಮ್ಮ ತಂಗಿಯರ ವರ್ತನೆ ವೀಣಾಳಿಗೆ ಅಪಾರ ನೋವು ತಂದಿತ್ತು. ಈ ಅತಿ ಆಧುನಿಕ ವಿಚಾರಧಾರೆಯವರು ತಪ್ಪು ಹೆಜ್ಜೆ ಇರಿಸಬಾರದು, ಅದರಿಂದ ಅವರ ಭವಿಷ್ಯಕ್ಕೊಂದು ಕಪ್ಪು ಚುಕ್ಕೆ ಬರಬಾರದೆಂದು ಅವಳು ಅವರ ಹಿತ ಬಯಸಿದ್ದರೆ, ಅವರು ಪರಕೀಯವಾಗಿ ದೂರ ನಿಂತಿದ್ದರು.

ವೀಣಾ ತಕ್ಷಣ ತನ್ನ ಕೋಣೆಗೆ ಹೋಗಿ ತನ್ನ ಲಗೇಜ್‌ ಇದ್ದ 2 ದೊಡ್ಡ ಏರ್‌ಬ್ಯಾಗ್‌ ತಂದಳು. ಕೆಲವನ್ನು ಕೆಲಸದವಳಿಗೆ ಕೊಟ್ಟಿದ್ದಳು. ಒಂದಿಷ್ಟು ಬುಕ್ಸ್ ಇತ್ತು, ಅದನ್ನು ಅಮ್ಮನ ಪೆಟ್ಟಿಗೆಯಲ್ಲಿಟ್ಟಳು. ನಂತರ ಅಮ್ಮ ಅಪ್ಪನಿಗೆ ಇಷ್ಟವಾಗುವಂಥ ಅಡುಗೆ ಮಾಡಿಟ್ಟಳು. ಅವಳು ಅಡುಗೆಮನೆಯಿಂದ ಹೊರ ಬಂದಾಗ ಅಮ್ಮ ಕೂಗಿದರು, “ವೀಣಾ, ಇಲ್ಲಿ ಬಂದು ನೋಡು. ನಿನಗೆ ಇದರಲ್ಲಿ ಏನು ಬೇಕೋ ತೆಗೆದುಕೊಳ್ಳಮ್ಮ,” ಎಂದು ಅಪ್ಪಾಜಿಗೆ ರಿಟೈರ್‌ಮೆಂಟ್‌ ಫಂಕ್ಷನ್‌ನಲ್ಲಿ ಬಂದಿದ್ದ ಉಡುಗೊರೆಗಳನ್ನೆಲ್ಲ ಹರಡಿಕೊಂಡು ಕುಳಿತಿದ್ದರು. “ನಿನ್ನನ್ನು ಕಳುಹಿಸಿ ಕೊಡಲು ತಯಾರಿ ಆಗಬೇಕಿತ್ತಲ್ಲಮ್ಮ….. ಅದಕ್ಕೇ ನಿನ್ನನ್ನು ಕೇಳಿಕೊಂಡೇ ಪ್ಯಾಕಿಂಗ್‌ ಮಾಡಿಸೋಣ ಅಂತ ಇದ್ದೆ,” ಎಂದರು.

ತನಗೊಂದು ಮಾತು ಹೇಳದೆಯೇ ಅಮ್ಮ ತನ್ನನ್ನು ತವರಿನಿಂದ ಸಾಗ ಹಾಕುತ್ತಿದ್ದಾಳೆಯೇ ಎಂದು ವೀಣಾಳ ಮನಸ್ಸಿಗೆ ಬಹಳ ಪಿಚ್ಚೆನಿಸಿತು. ಅವಳಿಗೆ ದುಃಖ ಹೆಚ್ಚಾಯಿತು. 8 ದಿನಗಳ ಮಟ್ಟಿಗಾದರೂ ತವರಿನಲ್ಲಿ ನೆಮ್ಮದಿಯಾಗಿರೋಣ ಎಂದು ಬಂದಿದ್ದರೆ, 4ನೇ ದಿನವೇ ತಾಯಿ ಹೊರಡಿಸುವ ತಯಾರಿಯಲ್ಲಿದ್ದಾರೆ…..ಅಮ್ಮ ಎಷ್ಟಾದರೂ ಅನುಭವಿ. ಬೆಳೆದ ಮಕ್ಕಳ ನಡುವೆ ಹೆಚ್ಚುತ್ತಿರುವ ಟೆನ್ಶನ್‌ ಗಮನಿಸಿಕೊಂಡು, ಅದು ಹೆಚ್ಚಿನ ಬಿರುಕಾಗಬಾರದು ಎಂದು ತನ್ನನ್ನು ಊರಿಗೆ ಹೊರಡಲು ಸೂಚಿಸುತ್ತಿದ್ದಾರೆ ಎಂದು ಅರಿತಳು. ತನ್ನ ಮನದ ನಿರಾಸೆ ಮುಖದಲ್ಲಿ ಕಾಣಿಸಬಾರದೆಂದು ಎಚ್ಚರಿಕೆ ವಹಿಸುತ್ತಾ ವೀಣಾ  ಹೇಳಿದಳು, “ಈಗಷ್ಟೇ 6 ತಿಂಗಳ ಹಿಂದೆ ಅತ್ತೆಮನೆಗೆ ಕಳುಹಿಸುವಾಗ ಅಷ್ಟೊಂದು ಸಾಮಗ್ರಿ ಕೊಟ್ಟಿದ್ದೆ… ಸಾಕು ಬಿಡಮ್ಮ, ಇದೆಲ್ಲ ಏಕೆ ಬೇಕು?”

ಅಮ್ಮ ಅದಕ್ಕೇನೂ ಮಹತ್ವ ಕೊಡದೆ ಅದರಲ್ಲಿ ಬೆಸ್ಟ್ ಎನಿಸಿದ್ದನ್ನು ಎತ್ತಿಟ್ಟು ಪ್ಯಾಕ್‌ ಮಾಡಿದರು. “ನೀನೇನೋ ಹೇಳಿಬಿಟ್ಟೆಯಮ್ಮ…. ಏನೂ ಬೇಡ ಅಂತ…. ಆದರೆ ಮದುವೆ ಆದ ಮೇಲೆ ಮೊದಲ ಸಲ ತವರಿಗೆ ಮಗಳು ಬಂದರೆ ಬರಿಗೈಲಿ ಹಾಗೇ ಕಳುಹಿಸುವುದು ಸರಿಯೇ? ನಿಮ್ಮ ಅತ್ತೆಮನೆಯವರು ಇದೇನು ಬರಿಗೈಲಿ ಬಂದುಬಿಟ್ಟೆ ಅಂದ್ರೆ ನಮಗೆ ತಾನೇ ಅಪವಾದ?”

ಏನೂ ಜವಾಬು ಕೊಡದಿರುವುದೇ ಉತ್ತಮ ಎಂದು ವೀಣಾ ಭಾವಿಸಿದಳು. ಕೆಲವು ಗೃಹೋಪಯೋಗಿ ವಸ್ತುಗಳು, ಉಳಿದವು ಜವಳಿ ಆಗಿತ್ತು. ವೀಣಾ ಎಲ್ಲವನ್ನೂ ತನ್ನ ಲಗ್ಗೇಜ್‌ಗೆ ಹಾಕಿಟ್ಟಳು. ಅವಳಿಗರಿವಿಲ್ಲದೆ ಕಣ್ತುಂಬಿ ತುಳುಕಿತು. ಆಗ ಅವಳ ಕೋಣೆಯಲ್ಲಿ ಯಾರೂ ಇಲ್ಲದ್ದು ಒಳ್ಳೆಯದೇ ಆಯ್ತು. ಅವಳು ಸೂಟ್‌ಕೇಸ್‌ ತೆರೆದಾಗ, ಊರಿನಿಂದ ತಂದಿದ್ದ ಬಟ್ಟೆಗಳು ಬಳಸದೇ ಹಾಗೇ ಇದ್ದವು, ಇವಳನ್ನು ಅಣಕಿಸಿದಂತಾಯ್ತು. ಸರಿ ಈ ಚಿಂತೆ ಎಲ್ಲಾ ಬಿಟ್ಟು ಪ್ರಿಯ ಗೆಳತಿ ಚಿತ್ರಾಳನ್ನಾದರೂ ಮಾತನಾಡಿಸೋಣ ಎಂದು ಅವಳಿಗೆ ಫೋನ್‌ ಮಾಡಿದಳು. ಆದರೆ ಅವಳು ಯಾವುದೋ ಮದುವೆ ಫಂಕ್ಷನ್‌ಗಾಗಿ ನೆಂಟರ ಊರಿಗೆ ಹೋಗಿದ್ದಳು. ಅವಳಿಗಿಲ್ಲಿ ಸಮಯ ಕಳೆಯುವುದೇ ಕಷ್ಟವಾಯ್ತು. ತವರಿಗೆ ಹೋಗಬೇಕೆಂದು ಎಷ್ಟು ಆಸೆಯಿಂದ ಇದ್ದಳೋ, ಈಗ ಇಲ್ಲಿ ಒಂದೊಂದು ಕ್ಷಣ ಕಳೆಯುವುದೂ ಯುಗವಾಗುತ್ತಿತ್ತು.

ಅದಾದ ಮೇಲೆ ಅವಳು ಅಪ್ಪಾಜಿ ಕೋಣೆಗೆ ಹೋಗಿ ಮುಂದೆ ಅವರು ಏನು ಪ್ಲಾನ್‌ ಮಾಡಿದ್ದಾರೆ ಎಂದು ವಿಚಾರಿಸಿದಳು. ಮೂಲ ಆದಾಯ ಇಲ್ಲ,  ರಿಟೈರ್‌ ಆಯ್ತು ಅಂತ ಕಾಲು ಚಾಚಿ ಕೂರುವ ಹಾಗಿಲ್ಲ. ಅವರು ನಿರಾಶೆಯಲ್ಲಿ ಮುಳುಗಿದ್ದರು. ದುಬಾರಿ ಬೆಲೆ ತೆತ್ತು ಸಾಮಗ್ರಿ ಕೊಳ್ಳುವ ಈ ಕಾಲದಲ್ಲಿ ಕೇವಲ ಪೆನ್ಶನ್‌ ಒಂದನ್ನೇ ನಂಬಿಕೊಂಡು ದಿನ ದೂಡುವುದು ಹೇಗೆ? ಹಿಂದಿನಿಂದಲೂ ಅವರು ಮಿತಭಾಷಿ, ಗಂಭೀರ ಸ್ವರೂಪದ ಸ್ವಾಭಿಮಾನಿ. ಎಲ್ಲಾದರೂ ಖಾಸಗಿಯಾಗಿ 1-2 ಕಡೆ ಪಾರ್ಟ್‌ ಟೈಂ ಅಕೌಂಟೆಂಟ್‌ ಕೆಲಸ ಹುಡುಕಬೇಕಿತ್ತು.

“ವೀಣಾ, ಪೆನ್ಶನ್‌ ಒಂದನ್ನೇ ನೆಚ್ಚಿಕೊಂಡರೆ ಲಾಭವಿಲ್ಲ. ಆದರೆ ಈಗ ಎಲ್ಲಾ ಕಡೆ ರೆಕಮೆಂಡೇಶನ್‌ ಕಾಲ. ಈ ವಯಸ್ಸಿನಲ್ಲಿ ನೌಕರಿಗಾಗಿ ಯಾರ ಮುಂದೆ ಕೈಚಾಚಲಿ?”

ಇದನ್ನು ಕೇಳಿ ಅವಳಿಗೂ ಬೇಸರವಾಯ್ತು. ಅವಳು ತುಸು ರೋಷದಿಂದ, “ನನಗೆ ಇಷ್ಟು ಬೇಗ ಮದುವೆ ಬೇಡ ಅಂತ ಎಷ್ಟು ಸಲ ಹೇಳಿದೆ….. ಅಮ್ಮ, ನೀನೂ ಆ ಮಾತು ಕೇಳಿಸಿಕೊಳ್ಳಲೇ ಇಲ್ಲ. ನಾನು ಓದಿದ್ದ ಹೈಸ್ಕೂಲ್‌ನಲ್ಲಿಯೇ ನನಗೆ ಟೀಚರ್‌ ಕೆಲಸ ಸಿಗುತ್ತಿತ್ತು….. ಅವಸರಪಟ್ಟು, ಹಠದಿಂದ ನನ್ನನ್ನು ಒಪ್ಪಿಸಿ ಮದುವೆ ಮುಗಿಸಿದಿರಿ. ಈಗ ನೋಡಿ, ಎಷ್ಟು ಕಷ್ಟ ಬಂದಿದೆ?”

“ಎಷ್ಟು ದಿನ ಅಂತ ನಿನ್ನ ಮದುವೆ ಮುಂದೂಡುವುದಮ್ಮ? ಒಂದಲ್ಲ ಒಂದುದಿನ ಹೆಣ್ಣುಮಕ್ಕಳನ್ನು ಧಾರೆ ಎರೆದು ಕಳುಹಿಸಲೇಬೇಕಲ್ಲವೇ? ಹೆಣ್ಣುಮಕ್ಕಳ ಆದಾಯ ನಂಬಿಕೊಂಡು ಅವರಿಗೆ ಮದುವೆ ಮಾಡದಿರುವುದು ಧರ್ಮವೇ?”

ಅಪ್ಪಾಜಿ ಮಾತು ಕೇಳಿ ಅವಳ ಮನಸ್ಸು ಮತ್ತೆ ವೇದನೆಗೊಳಗಾಯಿತು. ತಾನು ಇಲ್ಲಿ ಪರಕೀಯಳು ಅಲ್ಲಿ ಅತ್ತೆಮನೆಯಲ್ಲಿ ಸಲ್ಲದವಳು…. ತನ್ನ ನೆಲೆಯಾದರೂ ಎಲ್ಲಿ? ಎಂದು ವೀಣಾಳ ಮನಸ್ಸು ನೊಂದುಕೊಂಡಿತು. ಕಷ್ಟಪಟ್ಟು ತನ್ನ ಕಣ್ಣೀರು ಕಾಣಿಸದಂತೆ ತಡೆಹಿಡಿದಳು. ನಿಧಾನವಾಗಿ ಅಲ್ಲಿಂದ ಅಡುಗೆಮನೆಗೆ ಬಂದು ಅಮ್ಮನಿಗೆ ಸಹಾಯ ಮಾಡತೊಡಗಿದಳು.

“ಇರಲಿ ಬಿಡಮ್ಮ, ಇವತ್ತು ನಾಳೆ ಹೊರಡುವವಳು. ಅಲ್ಲಿಗೆ ನೀನು ಹೋದ ಮೇಲೆ ಮಾಡುವುದು ಇದ್ದೇ ಇದೆ. ಇಲ್ಲಿ 2 ಘಳಿಗೆ ಆರಾಮಾಗಿ ಕುಳಿತಿರು,” ಎಂದು ಅವಳ ಕೈಗೆ ಹುರಿಗಾಳು ಕೊಟ್ಟು ಬಲವಂತವಾಗಿ ಕೂರಿಸಿದರು.

“ಆ ನೀತಾ ಅಂತೂ ಅಡುಗೆಮನೆ ಕಡೆ ತಲೆ ಹಾಕುವವಳೇ ಅಲ್ಲ….. ನೀನು ಹೊರಟ ಮೇಲೆ ನಾನು ಒಬ್ಬಳೇ ಎಲ್ಲವನ್ನೂ ಮಾಡಿಕೊಳ್ಳುವುದು ಅಭ್ಯಾಸ ಆಗಿಹೋಗಿದೆ,” ಎಂದು ಅಡುಗೆ ಮುಂದುವರಿಸಿದರು.

ನೀತಾಳ ಪ್ರಸ್ತಾಪ ಬಂದಿದ್ದರಿಂದ ಅವಳ ಪ್ರೇಮ ಪ್ರಕರಣದ ಬಗ್ಗೆ ಹೇಳೋಣ ಎಂದು ವೀಣಾ ಬಾಯಿ ತೆರೆದವಳೇ, ಮನೆಯಲ್ಲಿನ ಉದ್ವಿಗ್ನ ವಾತಾವರಣ ನೆನೆದು ಸುಮ್ಮನಾದಳು.

ಅಂತೂ ಮಾರನೇ ದಿನ ಹೊರಡುವುದೆಂದು ನಿಶ್ಚಯವಾಯಿತು. ಬೆಳಗ್ಗೆ ಬೇಗ ಎದ್ದು ಎಲ್ಲಾ ಪ್ಯಾಕಿಂಗ್‌ ಮುಗಿಸಿ, ಸ್ನಾನ ಮಾಡಿ ಬಂದಳು. ತರಿನವರಿಗೇ ಬೇಡ ಎನಿಸಿರುವಾಗ ತಾನು ಬಲವಂತವಾಗಿ ಇಲ್ಲೇ ಇರುತ್ತೇನೆ ಎನ್ನುವುದು ಸರಿಯಲ್ಲ ಎಂದು ಮನಸ್ಸು ಚೀರಿತು. ಆಗ ಕನಿಷ್ಠ ತಮ್ಮ ತಂಗಿಯರಾದರೂ ಉದ್ವಿಗ್ನ ವಾತಾವರಣ ಬಿಟ್ಟು ನೆಮ್ಮದಿಯಾಗಿರಲಿ ಎಂದು ಬಯಸಿದಳು. ಅಮ್ಮ ಆಗಲೇ ತಿಂಡಿ ಸಿದ್ಧಪಡಿಸಿದ್ದರು. ಕಾಫಿ ಮುಗಿಸಿ ಎದ್ದು ರೆಡಿಯಾದಳು. ರಾಜು ತಾನೇ ಬಸ್‌ಸ್ಟ್ಯಾಂಡಿಗೆ ಬಿಟ್ಟು ಬರ್ತೀನಿ ಎಂದು ಆಟೋ ತರಲು ಹೊರಟ. ವೀಣಾ ಅಮ್ಮ ಅಪ್ಪನಿಗೆ ನಮಸ್ಕರಿಸಿ, ಕುಂಕುಮ ಹಚ್ಚಿಕೊಂಡು, ಅಮ್ಮ ಕೊಟ್ಟ ಉಡುಗೊರೆ ಪಡೆದಳು. ತಂಗಿಯನ್ನು ಹಾರ್ದಿಕವಾಗಿ ಆಲಿಂಗಿಸಿಕೊಂಡು ಬೀಳ್ಕೊಂಡಳು. ಸಧ್ಯ…… ವೀಣಾ ಬೇಗ ತೊಲಗಿದರೆ ಸಾಕು ಎಂಬಂತಿತ್ತು ತಂಗಿ ನೀತಾಳ ವ್ಯವಹಾರ.

ಅಮ್ಮನಿಂದ ಬೀಳ್ಕೊಡುವಾಗ ಮತ್ತೆ ಕಣ್ಣಾಲಿಗಳು ತುಂಬಿ ಬಂದವು. ಅವರಿಬ್ಬರೂ ಹರಸುವಂತೆ ತಲೆ ಮೇಲೆ ಕೈ ಇರಿಸಿ, ಸುಮ್ಮನಾಗುವಂತೆ ಸಮಾಧಾನಪಡಿಸಿದರು. ಹೆಚ್ಚಿಗೆ ಹೇಳಿಸಿಕೊಳ್ಳದೆ ಮೆಟ್ಟಿಲಿಳಿದು ಬಂದಳು. ರಾಜು ಬಂದು ಲಗೇಜ್‌ ಪಡೆದು ಆಟೋಗೆ ಸೇರಿಸಿದ. ಅಪ್ಪಾಜಿ ಕೆಳಗೆ ಬಂದಿದ್ದರು. ಅಮ್ಮ, ನೀತಾ ಮೇಲಿನ ಬಾಲ್ಕನಿಯಿಂದಲೇ ಕೈ ಬೀಸಿದರು. ವೀಣಾ ಆಟೋ ಏರಿ ಎಲ್ಲರಿಗೂ ಕೈ ಬೀಸಿ ಹೊರಟಳು.

ರಾಜು ಬೇಗ ಹೋಗಿ ಬಸ್‌ ಟಿಕೆಟ್‌ ತಂದು ವೀಣಾಳ ಕೈಲಿರಿಸಿ, ಸೀಟ್‌ ಹುಡುಕಿ ಕೂರಿಸಿದ. “ಅಕ್ಕಾ, ಕಾಲೇಜಿಗೆ ತಡವಾಯ್ತು. ಬೈ,” ಎಂದು ಸರಸರ ಹೊರಟೇಬಿಟ್ಟ. ರಾಜು ಹೊರಟ ನಂತರ ವೀಣಾಳ ಮನಸ್ಸು ಕುಗ್ಗಿಹೋಯಿತು. ಸಮಯ ಎಷ್ಟು ಬೇಗ ಎಲ್ಲವನ್ನೂ ಮರೆಸಿ ಬಿಡುತ್ತದಲ್ಲವೇ ಎಂದು ಯೋಚಿಸಿದಳು. ನೀತಾ, ರಾಜುರಿಗೆ ತಾನು ಪ್ರಿಯ ಅಕ್ಕಾ ಎನಿಸಿದ್ದಳು. ತನ್ನನ್ನು ಕೇಳದೆ ಅವರೇನೂ ಮಾಡುತ್ತಿರಲಿಲ್ಲ ಎಂಬುದೆಲ್ಲ ನೆನಪಾಯಿತು. ಇಂದು ತಾನು ಅವರಿಗೆ ಅಕ್ಷರಶಃ ಪರಕೀಯಳಾಗಿ ಹೋದೆನಲ್ಲವೇ ಎನಿಸಿತು ವೀಣಾಳಿಗೆ.

ಬಸ್ಸು ಮೈಸೂರನ್ನು ಸಮೀಪಿಸುತ್ತಿದ್ದಂತೆ ತಾನು 7-8 ದಿನಗಳ ಅನುಮತಿ ಪಡೆದು ತವರಿಗೆ ಹೋಗಿದ್ದೆ, ಆದರೆ ಈಗ 4 ದಿನಗಳಿಗೆ ಮರುಳುತ್ತಿದ್ದೇನೆ ಎಂದರೆ ಅದಕ್ಕೇನಾದರೂ ಒಂದು ಕುಂಟು ನೆಪ ಕೊಡಲೇಬೇಕು ಎನಿಸಿತು. ಆಟೋ ಹಿಡಿದು ಮನೆ ಮುಂದೆ ಬಂದು ಇಳಿದಳು.

ಬಾಗಿಲು ತಟ್ಟಿದಾಗ ರವಿ ಬಂದು ಬಾಗಿಲು ತೆರೆದ. “ಇದೇನು ಅತ್ತಿಗೆ ಇಷ್ಟು ಬೇಗ ಬಂದುಬಿಟ್ಟಿದ್ದೀರಿ? ಫೋನ್‌ ಮಾಡಿದ್ದರೆ ನಾನೇ ಸ್ಟೇಷನ್‌ಗೆ ಬಂದು ಕರೆತರುತ್ತಿದ್ದೆ,” ಎಂದ. ಅವನತ್ತ ಕೃತಕ ನಗು ಬೀರುತ್ತಾ, ಸೂಟ್‌ಕೇಸ್‌ ಒಳಗೆ ಇಡಲು ಹೇಳಿದಳು ವೀಣಾ. ಯಾರೋ ಬಂದ ಹಾಗಿದೆ ಎಂದು ಮಾವ ಬಂದು ನೋಡಿದರು. ವೀಣಾ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದಳು.

ಅತ್ತೆ-ಮಾವನರಿಗೂ ಅನ್ವಯಿಸುವಂತೆ ವೀಣಾ ಜೋರಾಗಿಯೇ ಹೇಳಿದಳು, “ಅಲ್ಲಿ ಅಮ್ಮ ಅಪ್ಪ ದಕ್ಷಿಣ ಭಾರತದ ಪ್ರವಾಸಕ್ಕೆಂದು 10 ದಿನಗಳ ಮಟ್ಟಿಗೆ ಹೊರಟಿದ್ದರು. ಮೊದಲೇ ಬುಕ್ಕಿಂಗ್‌ ಆಗಿತ್ತು. ನನ್ನನ್ನೂ ಹೊರಡಲು ಹೇಳಿದರು, ಇವರು ಬೇಗ ಬಂದುಬಿಡ್ತಾರಲ್ಲ ಅಂತ ನಾನೇ ಬೇಡವೆಂದು ಹೊರಟು ಬಂದೆ,” ಎಂದು ವಿವರಿಸಿದಳು.

ಈ ಸಕಾಲಿಕ ಸುಳ್ಳು ಹೇಳುವಾಗ ಅವಳಿಗೆ ಬೇಸರವಾಗಿತ್ತು. ಆದರೆ ವಿಧಿಯಿಲ್ಲದೆ ಪ್ರತಿಷ್ಠೆ ಕಾಪಾಡಿಕೊಂಡಳು. ನಂತರ ಅತ್ತೆಯನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದಳು. ಇವಳು ಹೋಗಿದ್ದ ಫಂಕ್ಷನ್‌ ಹೇಗಾಯಿತು ಎಂದು ಅವರಿಬ್ಬರೂ ವಿಚಾರಿಸಿದರು. ಅರ್ಧ ಗಂಟೆ ಕಳೆದರೂ ಒಬ್ಬರಾದರೂ ಟೀ ಕುಡಿಯುವೆಯಾ, ಪ್ರಯಾಣ ಹೇಗಿತ್ತು ಎಂದು ಅಕ್ಕರೆ ತೋರಲಿಲ್ಲ. ಅದಾಗಲೇ ಸಂಜೆ 5ಕ್ಕೆ ಬಂದಿತ್ತು. ತಾನೇ ಎದ್ದು ಕೈ ಕಾಲು ತೊಳೆದು, ಟೀ ರೆಡಿ ಮಾಡಿ ತಂದು ಎಲ್ಲರಿಗೂ ಹಂಚಿದಳು.

ನಾದಿನಿ ನೀಲಾ 2 ದಿನಗಳ ಮಟ್ಟಿಗೆ ಇಲ್ಲಿಗೆ ಬರುತ್ತಾಳೆ ಎಂದು ಅತ್ತೆ ತಿಳಿಸಿದ್ದರು. ಅವಳ ಗೆಳತಿಯ ತಂಗಿ ಮದುವೆಗೆಂದು ನೀಲಾ ಬರಲಿದ್ದಳು. ಟೀ ಮುಗಿಸಿ ರಾತ್ರಿ ಅಡುಗೆಗೆ ಏನಾದರೂ ಸಿದ್ಧಪಡಿಸಬೇಕೇ ಎಂದು ನೋಡಲು ವೀಣಾ ಮತ್ತೆ ಅಡುಗೆಮನೆ ಸೇರಿದಳು.

ಅದಾಗಿ 2 ದಿನಗಳ ನಂತರ ಶೇಖರ್‌ ಮುಂಬೈನಿಂದ  ಮರಳಿ ಬಂದ. ಶೇಖರನ ಕೆಲಸ ಬೇಗ ಮುಗಿದಿದ್ದರಿಂದ ಪ್ರವಾಸ ಬೇಗ ಕಳೆಯಿತು. ಮಡದಿ ಅಷ್ಟು ಬೇಗ ಮರಳಿದ್ದು ಅವನಿಗೂ ಆಶ್ಚರ್ಯ ಎನಿಸಿತು.

“ನೀವು ಬೇಗ ಬರ್ತೀರಿ ಅಂತ ನನಗೆ ಕನಸಾಯ್ತು. ಅದಕ್ಕೆ ತಾಳಾರದೆ ನಾನೂ ಬೇಗ ಬಂದುಬಿಟ್ಟೆ,” ಎಂದು ವೀಣಾ ಹೇಳಿದಾಗ, ವಾರದ ನಂತರ ಸಿಕ್ಕಿದ ಹೆಂಡತಿಯ ಜೊತೆ ರೊಮಾನ್ಸ್ ನಡೆಸಲು ಶೇಖರ್‌ ಮುಂದಾದ. ಬೇಕೆಂದೇ ಅವನ ಕೈಗೆ ಸಿಗದೆ ವೀಣಾ ಒಳಗೆ ಸೇರಿದಳು.

ಮಾರನೇ ದಿನದಿಂದ ಮತ್ತದೇ ಹಳೆಯ ಯಾಂತ್ರಿಕ ಜೀವನ ಶುರುವಾಯ್ತು. ಪ್ರತಿಸಲ ಅವಳು ಅತ್ತೆಮನೆಯಲ್ಲಿ ತಾನು ಆ ಮನೆಗೆ ಎಷ್ಟು ಸಮರ್ಪಿತಳು ಎಂದು ತೋರಿಸಿಕೊಡಲು ಅವಳೆಷ್ಟೇ ಪ್ರಯತ್ನಿಸಿದರೂ ಅದರಲ್ಲಿ ವಿಫಲಳಾಗುತ್ತಿದ್ದಳು.

2 ದಿನಗಳ ನಂತರ ನಾದಿನಿ ನೀಲಾ ಗೆಳತಿಯ ತಂಗಿ ಮದುವೆಗೆ ಬರುವವಳಿದ್ದಳು. ಮದುವೆಯ ಹಿಂದಿನ ದಿನಗಳ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಬೇಕೆಂದು ನೀಲಾ ಬೇಗನೇ ಬಂದಿದ್ದಳು. ಹತ್ತಿರದಲ್ಲಿಯೇ ನೀಲಾಳ ಗೆಳತಿಯ ಮನೆ ಇತ್ತು. ಚಪ್ಪರದ ಹಿಂದಿನ ದಿನ ಸಹ ಅವರು ಬಂದು ಇವರ ಮನೆಯವರನ್ನೆಲ್ಲ ಚಪ್ಪರ, ದೇವರ ಸಮಾರಾಧನೆಗೆ ತಪ್ಪಿಸದೆ ಬರಬೇಕೆಂದು ವಿನಂತಿಸಿಕೊಂಡಿದ್ದರು. ಅಂದು ಸಂಜೆಯೇ ಸರಸ್ವತಿಪುರಂನಲ್ಲಿದ್ದ ನೀಲಾ ಬೋಗಾದಿಯ ತವರಿಗೆ ಬಂದಿಳಿದಳು. ಒಂದೇ ಊರಿನಲ್ಲಿದ್ದರೆ ಸುಲಭವಾಗಿ ಬಂದುಹೋಗಿ ಮಾಡಬಹುದು ಎಂದು ವೀಣಾಳಿಗೆ ಅನಿಸದೆ ಇರಲಿಲ್ಲ. ಆಟೋದಲ್ಲಿ ಬಂದಿಳಿದ ನಾದಿನಿಯನ್ನು ವೀಣಾ ಹಾರ್ದಿಕವಾಗಿ ಸ್ವಾಗತಿಸಿ, ಆಲಿಂಗಿಸಿಕೊಂಡು ನೀರು ತಂದಿತ್ತಳು. ಔಪಚಾರಿಕವಾಗಿ ಅವಳನ್ನು ಮಾತನಾಡಿಸಿದ ನೀಲಾ ತಕ್ಷಣ ತಾಯಿಯನ್ನು ಹುಡುಕಿಕೊಂಡು ರೂಮಿಗೆ ಹೋದಳು. ಅವಳಿಂದ ಹೆಚ್ಚಿನ ಆತ್ಮೀಯತೆ ಬಯಸಲು ಸಾಧ್ಯವಿಲ್ಲ ಎಂದು ವೀಣಾ ಸುಮ್ಮನಾದಳು.

ಮಾರನೇ ದಿನ ವರಪೂಜೆಗೆ ಮಧ್ಯಾಹ್ನ ಬೇಗ ಹೋಗಿ ಬೀಗರಿಗಾಗಿ ಗೆಳತಿಯ ಜೊತೆ ಬಿಡದಿ ಮನೆ ಸಿದ್ಧಪಡಿಸಲು ನೀಲಾ ನಿರ್ಧರಿಸಿದಳು. ಊಟ ಮುಗಿಸಿಕೊಂಡೇ ಹೊರಡಬಹುದು, ಜೊತೆಗೆ ಸಮಯಸ್ಕಳಾದ ತನ್ನನ್ನೂ ಸಹ ಕರೆದೊಯ್ಯಬಹುದೆಂಬ ಆಶಾಭಾವನೆಯಿಂದ ವೀಣಾ ಬೇಗ ಬೇಗ ಅಡುಗೆ ಕೆಲಸ ಮುಗಿಸತೊಡಗಿದಳು.

ಆಗ ಒಳಗಿನಿಂದ ಅತ್ತೆ ಹೇಳಿದರು, “ವೀಣಾ, ನಾನೂ ನೀಲಾ ಮದುವೆ ಮನೆಗೆ ಹೊರಟಿದ್ದೇವವೆ. ಅಲ್ಲೇ ಊಟ ಮಾಡಿಕೊಳ್ತೀವಿ. ನಮಗಾಗಿ ಏನೂ ಮಾಡಬೇಡ.”

ಮತ್ತೊಮ್ಮೆ ವೀಣಾ ಪೆಚ್ಚಾದಳು. ಮಗಳು-ಸೊಸೆ ಒಟ್ಟಿಗೆ ಹೋಗಲಿ ಎನ್ನದೆ ಅತ್ತೆ ಆ ವಯಸ್ಸಿನಲ್ಲಿ ತಾವೇ ಸಿಂಗರಿಸಿಕೊಂಡು ಹೊರಡಲು ಆಸಕ್ತಿ ತೋರತ್ತಿದ್ದಾರಲ್ಲ….. ಈ ಮನೆಗೆ ಎಂದೆಂದೂ ತಾನು ಪರಕೀಯಳೇ ಎನಿಸಿತು. ಮತ್ತೊಂದು ಕ್ಷಣದಲ್ಲಿ ತಲೆ ಕೊಡವಿಕೊಂಡು ತನ್ನ ಕೆಲಸ ಮುಂದುವರಿಸಿದಳು.

ಅದಾಗಿ ಅರ್ಧ ಗಂಟೆಯಲ್ಲಿ ಜೋರಾಗಿ ನೀಲಾ ಕಿರುಚಿದಂತೆ, ಅಳುತ್ತಿರು ದನಿ ಕೇಳಿಸಿತು. ಬಹುಶಃ ಅವಳ ಮಗ ರಾಹುಲ್‌ ಕೆಳಗೆ ಬಿದ್ದು ಗಾಯ ಮಾಡಿಕೊಂಡನೇ ಎಂದು ಧಾವಂತದಿಂದ, ಮಾಡುತ್ತಿದ್ದ ಕೆಲಸ ಬಿಟ್ಟು ವೀಣಾ ಅಲ್ಲಿಗೆ ಓಡಿದಳು. ಅಲ್ಲಿ ನೀಲಾ ತನ್ನ ಲಗೇಜ್‌ನ ಎಲ್ಲಾ ಸಾಮಗ್ರಿ ಹರಡಿಕೊಂಡು ಏನನ್ನೋ ಹುಡುಕಾಡುತ್ತಾ ಅಳುತ್ತಿದ್ದಳು. ಅತ್ತೆ ಅವಳ ಒಂದೊಂದೇ ಬ್ಯಾಗ್‌ ತೆರೆದು ಪರೀಕ್ಷಿಸುತ್ತಿದ್ದರು. ಅದೇನೆಂದು ವಿಚಾರಿಸಿದಾಗ, ನೀಲಾ ಆಟೋದಿಂದ ಇಳಿಯುವ ಅಸರದಲ್ಲಿ ಒಂದು ಬ್ಯಾಗನ್ನು ಆಟೋದಲ್ಲೇ ಬಿಟ್ಟುಬಿಟ್ಟಿದ್ದಳಂತೆ. ದುರಾದೃಷ್ಟಕ್ಕೆ ಅದರಲ್ಲೇ ಅವಳ ಎಲ್ಲಾ ಒಡವೆಗಳು, ಕ್ಯಾಶ್‌ ಇತ್ತು.

ಅದನ್ನು ಕೇಳಿ ವೀಣಾಳಿಗೆ ಬಹಳ ಕೆಡುಕೆನಿಸಿತು. ಈಗ ಆ ಆಟೋದವನನ್ನು ಎಲ್ಲಿಂದ ಹುಡುಕುವುದು? ನೀಲಾಗಂತೂ ಆ ಡ್ರೈವರ್‌ ಮುಖವಾಗಲಿ, ಆಟೋ ನಂಬರ್‌ ಆಗಲಿ ಖಂಡಿತಾ ನೆನಪಿರಲಿಲ್ಲ. ಆಟೋದವನ ಪ್ರಾಮಾಣಿಕತೆಯೊಂದೇ ಈಗ ಅದನ್ನು ವಾಪಸ್ಸು ತರುವುದಾಗಿತ್ತು. ಇದರಿಂದ ಚಿಂತೆ ಮತ್ತಷ್ಟು ಹೆಚ್ಚಿತು. ಮನೆಯಲ್ಲಿ ಟೆನ್ಶನ್‌ ಮೂಡಿತು.

ಅಷ್ಟರಲ್ಲಿ ಮಾವ ಶೇಖರ್‌ಗೆ ಫೋನ್‌ ಮಾಡಿ ಸ್ವಲ್ಪ ಬೇಗ ಆಫೀಸಿನಿಂದ ಹೊರಟು ಬರುವಂತೆ ಹೇಳಿದರು. ಶೇಖರ್‌ 4 ಗಂಟೆಗೆ ಬರುವಷ್ಟರಲ್ಲಿ ಒಬ್ಬರೂ ಊಟ ಸಹ ಮಾಡದೆ ದುಃಖಿಸುತ್ತಾ ಕುಳಿತಿದ್ದರು. ಬೇರೆ ದಾರಿ ಇಲ್ಲದೆ ತಂದೆ-ಮಗ ಹತ್ತಿರದ ಸ್ಟೇಷನ್‌ಗೆ ಹೋಗಿ ಕಂಪ್ಲೇಂಟ್‌ ಕೊಟ್ಟು ಬಂದರು. ಆದರೆ ಅಲ್ಲಿಗೆ ಹೋಗಿ ಬಂದರೂ ಸಮಾಧಾನದ ಉತ್ತರವೇನೂ ಸಿಕ್ಕಿರಲಿಲ್ಲ. ಒಡವೆ ಸಿಗುವ ಚಾನ್ಸಸ್‌ ಕಡಿಮೆ ಎಂದರಂತೆ.

ಮದುವೆ ನೆಪದಲ್ಲಿ ಮಗಳು ತವರಿಗೆ ಹೋಗಿ ಇದ್ದಬದ್ದ ಒಡವೆಯನ್ನೆಲ್ಲ ಕಳೆದುಕೊಂಡರೆ, ಅವಳ ಅತ್ತೆಮನೆಯವರು ಆ ಬಗ್ಗೆ ಆಡಿಕೊಳ್ಳದೆ ಇರುತ್ತಾರೆಯೇ? ತವರಿನವರಿಗೂ ಈಗ ಸಂಕಟ ಹೆಚ್ಚಾಗಿತ್ತು. ಶೇಖರ್‌, ರವಿ ಏನೇನೋ ಹೇಳಿ ನೀಲಾಗೆ ಸಮಾಧಾನ ಮಾಡುತ್ತಿದ್ದರು. ತಾನು ಅತ್ತಮನೆಗೆ ಹೋಗಿ ಏನೆಂದು ಉತ್ತರ ಕೊಡಲಿ ಎಂದು ನೀಲಾ ಅಳುತ್ತಿದ್ದಳು. ವೀಣಾಳ ಅತ್ತೆ ಆಟೋದವನಿಗೆ ಶಾಪ ಹಾಕುತ್ತಿದ್ದರು. ಅಸಹಾಯಕವಾಗಿ ವೀಣಾ, ಮಾವ ಮಾತನಾಡದೆ ನಿಂತರು.

ಆ ಇಡೀ ದಿನ ಯಾರೂ ಒಂದು ತುತ್ತು ಸಹ ಊಟ ಮಾಡಲಿಲ್ಲ. ಚಿಕ್ಕವನಾದ ರಾಹುಲ್‌ಗೆ ವೀಣಾ ತುಸು ಮೊಸರನ್ನ ತಿನ್ನಿಸುವಷ್ಟರಲ್ಲಿ ಸಾಕು ಸಾಕಾಯ್ತು. ಮಾರನೇ ದಿನ ಪೊಲೀಸ್‌ ಠಾಣೆಯಿಂದಾಗಲಿ, ಆಟೋ ಡ್ರೈವರ್‌ನಿಂದಾಗಲಿ ಯಾವ ಸುದ್ದಿಯೂ ಬರಲಿಲ್ಲ. ವೀಣಾಳಿಗೆ ನೀಲಾಳ ಸ್ಥಿತಿ ಕಂಡು ನಿಜಕ್ಕೂ ಬಹಳ ದುಃಖವಾಯಿತು. ಎಷ್ಟೋ ಆಸೆಯಿಂದ ಮದುವೆಯಲ್ಲಿ ಪಾಲ್ಗೊಳ್ಳಲು ಬಂದವಳು ಈಗ ಹೀಗೆ ದುಃಖ ಪಡುವಂತಾಯಿತೇ? ಅಕಸ್ಮಾತ್‌ ತಾನೇ ತವರಿನಲ್ಲಿ ಹೀಗೆ ಒಡವೆ ಕಳೆದುಕೊಂಡು ಬಂದಿದ್ದರೆ ಈ ಅತ್ತೆ ತನ್ನನ್ನು ಕ್ಷಮಿಸುತ್ತಿದ್ದರೆ….? ಇದನ್ನು ನೆನೆಯುತ್ತಲೇ ವೀಣಾಳಿಗೆ ನಡುಕ ಬಂದಿತು. ಯಾವ ರೀತಿ ತಾನು ನೀಲಾಳಿಗೆ ಸಹಾಯ ಮಾಡಬಹುದೆಂದು ಯೋಚಿಸತೊಡಗಿದಳು.

ತಕ್ಷಣ ಅವಳ ಮನಸ್ಸಿನಲ್ಲಿ ಒಂದು ವಿಚಾರ ಮೂಡಿತು. ಕ್ಷಣ ಮಾತ್ರದಲ್ಲಿ ಅದು ದೃಢ ನಿರ್ಧಾರವಾಯಿತು. ಸೀದಾ ತನ್ನ ರೂಮಿಗೆ ಹೋಗಿ ಬೀರುವಿನಲ್ಲಿದ್ದ ತನ್ನ ಸಮಸ್ತ ಒಡವೆ ತೆಗೆದುಕೊಂಡು ಬಂದು ನಾದಿನಿ ನೀಲಾಳಿಗೆ ಕೊಟ್ಟಳು, “ನೀಲಾ, ಈ ಒಡವೆ ಇನ್ನು ಮುಂದೆ ನಿಮ್ಮದು…. ಮದುವೆ ಮನೆಗೆ ಇದನ್ನು ಹಾಕಿಕೊಂಡು ಹೋಗಿ. ಅತ್ತೆಮನೆಗೆ ನೀವು ಬಿಚ್ಚೋಲೆ ಗೌರಮ್ಮನ ಹಾಗೆ ಹೋಗಬಾರದು. ಒಡವೆ ಕಾರಣ ಯಾರೂ ನಿಮಗೆ ಅಪಮಾನ ಮಾಡಬಾರದು,” ಎಂದು ಹೇಳಿದಳು.

ಎಲ್ಲರೂ ಶಾಕ್‌ ತಗುಲಿದಂತೆ ವೀಣಾಳತ್ತ ನೋಡಿದರು. ಕ್ಷಣ ಮಾತ್ರದಲ್ಲಿ ನೀಲಾ ಅದನ್ನು ಒಪ್ಪದೆ, “ಬೇಡ ಅತ್ತಿಗೆ…. ಈ ಒಡವೆ ನಿಮಗೆ ತವರಿನಿಂದ ಮದುವೆಯಲ್ಲಿ ಬಂದದ್ದು. ಧಾರೆ ಎರೆದು ಇನ್ನೂ 6 ತಿಂಗಳಾಗಿಲ್ಲ, ದೀಪಾವಳಿಗೆ ಒಡವೆ ಹಾಕಿಕೊಳ್ಳದೆ ಹೇಗೆ ತವರಿಗೆ ಹೋಗುತ್ತೀರಿ? ನೀವು ಇದನ್ನು ಹೀಗೆ ಕೊಡಬಾರದು….” ಎಂದು ಬಿಕ್ಕುತ್ತಾ ಮರಳಿಸಲು ಯತ್ನಿಸಿದಳು. ಅವಳ ಜೊತೆ ರವಿ, ಶೇಖರ್‌ ಸಹ ಒಡವೆ ಬೇಡ ಎಂದರು.

“ನಾನು ನೀಲಾಗೆ ಒಡವೆ ಕೊಟ್ಟು ದೊಡ್ಡ ಉಪಕಾರ ಮಾಡುತ್ತಿದ್ದೇನೆ ಎಂದುಕೊಳ್ಳಬೇಡಿ. ಮೈ ಮೇಲೆ ಏನೂ ಒಡವೆ ಇಲ್ಲದೆ ಅತ್ತೆಮನೆಗೆ ಹೋದರೆ ಆ ಸೊಸೆಗೆ ಎಂಥ ಸ್ವಾಗತ ಸಿಗುತ್ತದೆ ಅಂತ ಎಲ್ಲರಿಗೂ ಗೊತ್ತಿದೆ. ಹಾಗಿರುವಾಗ ನೀಲಾ ಕಣ್ಣೀರು ಹಾಕುತ್ತಾ ತವರಿನಿಂದ ಹೋಗಬಾರದು, ಅದು ತವರಿಗೆ ಖಂಡಿತಾ ಶ್ರೇಯಸ್ಸಲ್ಲ……

“ನನ್ನ ತಂಗಿ ಬೇರೆ ಅಲ್ಲ, ನೀಲಾ ಬೇರೆ ಅಲ್ಲ. ಒಂದು ಪಕ್ಷ ನನ್ನ ತಂಗಿಗೆ ಹೀಗಾಗಿದ್ದಿದ್ದರೆ ನಾನು ಅದನ್ನು ನೋಡಿಕೊಂಡು ಸುಮ್ಮನಿರುತ್ತಿದ್ದೆನೇ? ನಾನು ಈ ಕುಟುಂಬದ ಸೊಸೆ, ಮಗಳ ಸಮಾನ. ನೀಲಾ ಖಂಡಿತಾ ಈ ಒಡವೆ ಬೇಡ ಅಂದ್ರೆ ನನ್ನ ಮೇಲೆ ಆಣೆ!” ಎಂದು ಒಡವೆ ಬಾಕ್ಸ್ ನ್ನು ಅವಳ ಕೈಗಿತ್ತಳು.

ನೀಲಾ ಕಣ್ಣಿಂದ ಧಾರಾಕಾರ ಕಂಬನಿ ಹರಿಯುತ್ತಿತ್ತು. “ಆದರೂ…… ಏನು ಮಾಡದ ತಪ್ಪಿಗೆ ನಿಮಗೆ ಈ ಶಿಕ್ಷೆ ಕೊಡಬೇಕು? ಇಷ್ಟು ಅಭಿಮಾನದಿಂದ ಕೊಟ್ಟಿದ್ದೀರಿ, ಮದುವೆಗೆ ಹಾಕಿಕೊಂಡು ಹೋಗಿ ಮರಳಿಸುತ್ತೇನೆ,” ಎಂದಳು.

“ಖಂಡಿತಾ ಹಾಗೆ ಹೇಳಬಾರದು ನೀಲಾ….. ಮುಂದೆ ನಿಮ್ಮಣ್ಣ ನನಗೆ ಖಂಡಿತಾ ಅಂಥದ್ದೇ ಮಾಡಿಸಿ ಕೊಡ್ತಾರೆ. ಈಗ ತಗೊಂಡು ಹೋಗು…. ನನ್ನ ಆಣೆ ಮುರಿದರೆ ನನಗೇ ಕೇಡು!” ಎಂದಳು.

“ಅಯ್ಯೋ ಹಾಗೆ ಹೇಳಬೇಡಿ,” ಎಂದು ಒಡವೆ ತೆಗೆದುಕೊಳ್ಳಲು ನೀಲಾ ಒಪ್ಪಿದಳು.

ಶೇಖರ್‌, ರವಿ ಅಭಿಮಾನದಿಂದ ವೀಣಾಳತ್ತ ನೋಡಿದರು. ಮಾವ ಮುಂದೆ ಬಂದು ಸೊಸೆಯ ತಲೆ ಸವರಿ, “ಮಗು, ಇವತ್ತು ನೀನು ನಿಜಕ್ಕೂ ಸೊಸೆ ಅಲ್ಲ….. ಮನೆಮಗಳು ಅನಿಸಿದ್ದಿ. ನಿನ್ನ ಈ ಋಣವನ್ನು ನಾನೆಂದೂ ಮರೆಯಲ್ಲಮ್ಮ…..”

“ಹಾಗೆಲ್ಲ ಋಣದ ಮಾತನಾಡಬೇಡಿ ಮಾವ, ಮನೆಮಗಳು ಅಂತೀರಿ, ಮಗಳನ್ನು ಮತ್ತೆ ಪರಕೀಯಳನ್ನಾಗಿ ಮಾಡಬೇಡಿ.”

“ಖಂಡಿತಾ ಇಲ್ಲಮ್ಮ…. ನೀನೆಂದೂ ಪರಕೀಯಳಲ್ಲ…..” ಎನ್ನುವಷ್ಟರಲ್ಲಿ ಅವರ ಹೃದಯ ತುಂಬಿ ಬಂದು ಮಾತು ಹೊರಡದೆ ತಮ್ಮ ಕೋಣೆಗೆ ಹೋದರು.

ಪ್ರತಿ ಸಲ ಪರಕೀಯ ಮನೆ ಹುಡುಗಿ, ಬೇರೆ ರಕ್ತದವಳು ಎನ್ನುತ್ತಿದ್ದ ಅತ್ತೆ ಎದ್ದು ಬಂದು ವೀಣಾಳನ್ನು ತಮ್ಮ ಎದೆಗಾನಿಸಿಕೊಂಡು, ತಲೆ ಸವರಿದರು. ಮಗಳ ಕಳೆದ ಒಡವೆ ಶಾಶ್ವತವಾಗಿ ಸಿಗುವುದಿಲ್ಲ ಎಂದುಕೊಂಡಿದ್ದ ತಾಯಿಗೆ, ಸೊಸೆಯ ಮೂಲಕ ಬೇರೊಂದು ರೀತಿಯಲ್ಲಿ ಪರಿಹಾರ ಸಿಕ್ಕಿದಾಗ ಆಕೆಯ ಬಾಯಿಂದ ಮಾತೇ ಹೊರಡಲಿಲ್ಲ.

ಅಂದು ಸಂಜೆ ನೀಲಾ ಗಂಡನಿಗೆ ಫೋನ್‌ ಮಾಡಿ ಆಫೀಸಿನಿಂದ ನೇರ ಅಲ್ಲಿಗೇ ಬರುವಂತೆ ಹೇಳಿದಳು. ಮಹೇಶ್‌ ಮನೆಗೆ ಬಂದ ಮೇಲೆ ವಿಷಯವೆಲ್ಲ ತಿಳಿದು ಮೂಕವಿಸ್ಮಿತರಾದರು. ತಕ್ಷಣ ವೀಣಾ, ಶೇಖರ್‌ ಇಬ್ಬರನ್ನೂ ಕರೆಸಿ ಅವರ ಕೈಹಿಡಿದು ಕಣ್ಣಿಗೊತ್ತಿಕೊಂಡರು.

“ನಿಮ್ಮ ಈ ಸಹಾಯ ಈ ಜನ್ಮದಲ್ಲಿ ಮರೆಯುವುದಿಲ್ಲ. ನನಗೆ ಸ್ವಲ್ಪ ಕಾಲಾವಕಾಶ ಕೊಡಿ, ಅತ್ತಿಗೆ ಕೊಟ್ಟ ಒಡವೆಯನ್ನು ನೀಲಾ ಬಳಸಲಿ. 1-2 ವರ್ಷದಲ್ಲಿ ಅಂಥದೇ ಪೂರ್ತಿ ಹೊಸ ಸೆಟ್‌ ಮಾಡಿಸಿ ತಂದುಕೊಡುತ್ತೇವೆ,” ಎಂದಾಗ ಎಲ್ಲರ ಕಣ್ಣಲ್ಲಿ ನೀರಾಡಿತು. ಶೇಖರ್‌ ಭಾವ ಮಹೇಶನನ್ನು ಆಲಿಂಗಿಸಿ ಸಮಾಧಾನಪಡಿಸಿದ.

ಅಂತೂ ಆ ರಾತ್ರಿ ಎಲ್ಲರೂ ಸಮಾಧಾನವಾಗಿ ಊಟ ಮಾಡಿದರು. ಅತ್ತಿಗೆ-ನಾದಿನಿ ಕೂಡಿ ಅಡುಗೆ ಮಾಡಿ ಅವರಿಗೆ ಬಡಿಸಿದರು. ನಂತರ ತಾವಿಬ್ಬರೂ ಊಟಕ್ಕೆ ಕುಳಿತಾಗ, ಅತ್ತೆ ಮುಂದೆ ನಿಂತು ಮಗಳು-ಸೊಸೆಗೆ ಬಡಿಸಿದರು. ಒಂದೇ ದಿನದಲ್ಲಿ ಇಡೀ ಮನೆ ವಾತಾವರಣ ಬದಲಾಗಿತ್ತು.

ಮಾರನೇ ದಿನ ಒಡವೆ ತೊಟ್ಟು, ನೀಲಾ ಗಂಡನ ಜೊತೆ ಮದುವೆಗೆ ಹೋಗಿ ಬಂದಳು. ಅತ್ತಿಗೆ ವೀಣಾಳಿಗೆ 100 ಸಲ ಥ್ಯಾಂಕ್ಸ್ ಹೇಳಿ ಭಾರವಾದ ಮನಸ್ಸಿನಿಂದ ಅತ್ತೆಮನೆಗೆ ಹೊರಟಳು. ಅವಳ ಒಡವೆಗಳ ವಿಷಯ ತಿಳಿದ ಮಹೇಶನ ತಾಯಿ-ತಂದೆ ವೀಣಾಳ ಔದಾರ್ಯವನ್ನು ತುಂಬು ಹೃದಯದಿಂದ ಕೊಂಡಾಡಿದರು. ಮಗನಿಗೆ ಹೇಳಿ ಬೇಗ ಬೇರೆ ಒಡವೆ ಮಾಡಿಸಿ ಕೊಡುವಂತೆ ತಾಕೀತು ಮಾಡಿದರು.

ಈ ಘಟನೆ ನಂತರ ವೀಣಾ ಆ ಮನೆಗೆ ಅಚ್ಚುಮೆಚ್ಚಿನ ಸೊಸೆ ಎನಿಸಿದಳು. ಮನೆ ಮಂದಿ ಈಗ ತುಂಬು ಆದರದಿಂದ ಅವಳನ್ನು ನಡೆಸಿಕೊಳ್ಳುತ್ತಿದ್ದರು. ಅತ್ತೆ, ಸೊಸೆಯನ್ನು ಯಾವ ವಿಷಯಕ್ಕೂ ಬಿಟ್ಟುಕೊಡದೆ ಅವಳ ಪರವಹಿಸುತ್ತಿದ್ದರು. ಗಂಡಸರಿಗೆ ಬಡಿಸಿದ ಮೇಲೆ ಅತ್ತೆ-ಸೊಸೆ ಒಟ್ಟಾಗಿ ಊಟ ಮಾಡುತ್ತಿದ್ದರು.

ಶೇಖರ್‌ ಈಗ ಹೆಂಡತಿಯನ್ನು ನೋಡುತ್ತಿದ್ದ ದೃಷ್ಟಿಯೇ ಬೇರೆ. ಅವಳಿಗೆ ಹೇಳದೆ ಯಾವ ಕೆಲಸನ್ನೂ ಮಾಡುತ್ತಿರಲಿಲ್ಲ. ಕೆಲಸಕ್ಕೆ ಬಿಡುವು ದೊರೆತಾಗ ಇಬ್ಬರೂ 4 ದಿನಗಳ ಮಟ್ಟಿಗೆ ಊಟಿ, ಕೊಡೈಕೆನಾಲ್ ಎಂದು ಮಧುಚಂದ್ರ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ