ನೀಳ್ಗಥೆ - ಪಿ. ನಳಿನಾ ರಾವ್ (WRITER)
ಆಕಸ್ಮಿಕವಾಗಿ ಶೇಖರ್ ಬೇಗ ಮನೆಗೆ ಬಂದದ್ದನ್ನು ನೋಡಿ ವೀಣಾ ಬೆರಗಾದಳು. ರಾತ್ರಿ 8ಕ್ಕೆ ಮೊದಲು ಪತಿರಾಯರು ಎಂದೂ ಮನೆಗೆ ಬಂದವರೇ ಅಲ್ಲ. ಅವರು ಆಫೀಸ್ ಬಿಡುವುದು 6ಕ್ಕೇ ಆದರೂ ಗೆಳೆಯರ ಗೋಷ್ಠಿ ಮುಗಿಸಿ ಮಹರಾಯ ಮನೆಗೆ ಬರುವಷ್ಟರಲ್ಲಿ ತಡ ಆಗುತ್ತಿತ್ತು. ಜೊತೆಗೆ ಟ್ರಾಫಿಕ್ ಸಮಸ್ಯೆಯೂ ಜೋರಾಗಿತ್ತು. ಇವತ್ತು ಯಾರೋ ಫ್ರೆಂಡ್ ಮನೆಯವರೆಗೂ ಲಿಫ್ಟ್ ಕೊಟ್ಟಿದ್ದರಿಂದ ಬೇಗ ಬರುವ ಹಾಗಾಯಿತು. ಹೀಗಾಗಿ ನೆಮ್ಮದಿಯಾಗಿ ಏನೋ ಗುನುಗುನಿಸುತ್ತಾ ಶೇಖರ್ ಪೇಪರ್ ಓದುತ್ತಿದ್ದ.
ವೀಣಾ ಬೇಗ 2 ಕಪ್ ಕಾಫಿ ಬೆರೆಸಿ ಅತ್ತೆ ಇದ್ದ ಕೋಣೆಗೆ ಬಂದಳು. ಶೇಖರ್ ಪೇಪರ್ ಮುಗಿಸಿ ಅಮ್ಮನ ಬಳಿ ಏನೋ ಹರಟುತ್ತಿದ್ದ. ಮಾವನ ಆರೋಗ್ಯ, ಮೈದುನ ರವಿಯ ವಿದ್ಯಾಭ್ಯಾಸ ಇತ್ಯಾದಿ ಚರ್ಚಿಸಿ ಕೊನೆಗೆ ವೀಣಾಳ ಬಳಿ ಮಾತುಕಥೆಗೆ ಬಿಡುವು ಸಿಗುತ್ತಿತ್ತು. ರಾತ್ರಿ ಏನಡುಗೆ ಮಾಡ್ತೀಯಾ ಎಂಬುದೇ ಅವನ ಪ್ರಮುಖ ಪ್ರಶ್ನೆ ಆಗಿರುತ್ತಿತ್ತು.
ಅಷ್ಟು ಹೊತ್ತಿಗೆ ಅವಳ ಮಾವ ಸಹ ಸಂಜೆ ವಾಕಿಂಗ್ ಮುಗಿಸಿ ಬಂದಿದ್ದರು. ಅವರಿಗೂ ಒಂದು ಕಪ್ ಕಾಫಿ ಕೊಟ್ಟಿದ್ದಾಯ್ತು. ಅವಸರದಲ್ಲಿ ಅವಲಕ್ಕಿ ಉಪ್ಪಿಟ್ಟನ್ನು ಅಲ್ಲೇ ಮರೆತು ಬಂದಿದ್ದಳು. ವೀಣಾಳ ಅತ್ತೆ ತಕ್ಷಣ, ``ಎಲ್ಲಮ್ಮ ಇವರ ಪ್ಲೇಟು..... ಮರೆತೇ ಬಿಟ್ಟೆ ಅಂತ ಕಾಣ್ಸುತ್ತೆ?'' ಎಂದು ಕೇಳಿದರು.
ವೀಣಾ ಅವರಿಗೆ ಉತ್ತರ ಕೊಡುವಷ್ಟರಲ್ಲೇ ಶೇಖರ್, ``ನೋಡು ವೀಣಾ, ನಮ್ಮ ಮದುವೆ ಆಗಿ 6 ತಿಂಗಳಾಯ್ತು. ಇನ್ನೂ ನೀನು ಮನೆಯ ರಿವಾಜು ಕಲಿಯಲಿಲ್ಲ. ನಿನ್ನೆ ಅಮ್ಮನ ಕೋಣೆ ಕ್ಲೀನ್ ಆಗಿರಲಿಲ್ಲ. ಮತ್ತೆ ರವಿ ಬಟ್ಟೆ ಐರನ್ ಕೂಡ ಆಗಿರಲಿಲ್ಲ.....''
ಅತ್ತೆ ಮೆಲ್ಲಗೆ ಸೇರಿಸಿದರು, ``ಬೇರೆ ಮನೆಯಿಂದ ಬಂದ ಹುಡುಗಿಯರು.... ಅತ್ತೆ ಮನೆಯನ್ನು ತನ್ನ ಮನೆ ಅಂತ ಭಾವಿಸಬೇಕಲ್ಲ.....''
ವೀಣಾಳಿಗೆ ಬಹಳ ಕೆಡುಕೆನಿಸಿತು. ಅವಳಿಗೆ ಮಾತನಾಡುವ ಅವಕಾಶವೇ ಸಿಗಲಿಲ್ಲ. ಬೆಳಗ್ಗಿನಿಂದ ಸಂಜೆವರೆಗೂ ಅವಳು ಆ ಮನೆಯಲ್ಲಿ ಮೂಗಿಗೆ ಕವಡೆ ಕಟ್ಟಿಕೊಂಡು ದುಡಿಯುತ್ತಿದ್ದರೂ ಇಂಥ ಮಾತುಗಳನ್ನು ಆಗಾಗ ಕೇಳಬೇಕಾಗುತ್ತಿತ್ತು. ಪ್ರತಿಯೊಬ್ಬರ ಬೇಕುಬೇಡ ಗಮನಿಸುತ್ತಾ, ಇಡೀ ದಿನದ ಕೆಲಸ ಮುಗಿಸುಷ್ಟರಲ್ಲಿ ರಾತ್ರಿ ಆಗುತ್ತಿತ್ತು.
ಕಾಫಿ ತಿಂಡಿ ಮುಗಿಸಿ ರಾತ್ರಿ ಅಡುಗೆಯ ತಯಾರಿಗೆ ಅಡುಗೆಮನೆಗೆ ಬಂದಳು. ಬೇಗ ಬೇಗ ಅಡುಗೆ ಕೆಲಸ ಮುಗಿಸಿ, 2 ನಿಮಿಷ ಆರಾಮವಾಗಿ ಕೂರೋಣ ಎಂದು ತನ್ನ ಕೋಣೆ ಕಡೆ ಹೊರಟಿದ್ದ ವೀಣಾ, ತಾಯಿ ತಂದೆ ಮಧ್ಯೆ ಕುಳಿತು ಏನೋ ಮೆಲ್ಲಗೆ ಮಾತನಾಡುತ್ತಿದ್ದ ಗಂಡನ ದನಿ ಕೇಳಿಸಿ ಅಲ್ಲಿಯೇ ನಿಂತಳು.
ಅವಳು ಗಮನವಿಟ್ಟು ಕೇಳಿಸಿಕೊಂಡಾಗ ಶೇಖರ್ 8 ದಿನಗಳಿಗಾಗಿ ಆಫೀಸ್ ಕೆಲಸವಾಗಿ ಮುಂಬೈಗೆ ಟೂರ್ ಹೊರಡುತ್ತಿರುವುದು ತಿಳಿಯಿತು. ಹಾಗಾಗಿಯೇ ಆ ಸಂಜೆ ಬೇಗ ಮನೆಗೆ ಬಂದಿದ್ದು ಎಂದು ಗೊತ್ತಾಯಿತು. ಯಾವ ಸುದ್ದಿ ಎಲ್ಲಕ್ಕಿಂತ ಮೊದಲು ತನಗೆ ತಿಳಿಯಬೇಕಿತ್ತೋ ಅದಿನ್ನೂ ತಲುಪುವುದರಲ್ಲೇ ಇದೆ ಎಂದು ಬೇಸರವಾಯಿತು.