- ರಾಘವೇಂದ್ರ ಅಡಿಗ ಎಚ್ಚೆನ್.
ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
2025ರ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ.

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ ಗಳ ಅಂತರದಲ್ಲಿ ಮಣಿಸಿ ಭರ್ಜರಿ ಜಯ ದಾಖಲಿಸಿತು.
ಭಾರತ ನೀಡಿದ್ದ 299 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ ನಲ್ಲಿ 246 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದು ಕೊಂಡು 52 ರನ್ ಗಳ ಅಂತರದಲ್ಲಿ ಭಾರತದ ಎದುರು ಮಂಡಿಯೂರಿತು.

45 ದಿನಗಳಿಂದ ಸರಿಯಾಗಿ ನಿದ್ರೆ ಮಾಡಿರಲಿಲ್ಲ
ಐತಿಹಾಸಿಕ ಜಯದ ಬಳಿಕ ಮಾತನಾಡಿದ ಸ್ಮೃತಿ ಮಂಧಾನ ಈ ಹಿಂದೆ ಹಲವು ಬಾರಿ ಹೃದಯ ಒಡೆದಿತ್ತು ಎಂದು ಭಾವುಕರಾದರು.
ಪ್ರತಿ ವಿಶ್ವಕಪ್‌ನಲ್ಲೂ ನಮಗೆ ಒಂದಿಲ್ಲೊಂದು ಹೃದಯವಿದ್ರಾವಕ ಘಟನೆಗಳು ಸಂಭವಿಸುತ್ತಿತ್ತು. ಆದಾಗ್ಯೂ ನಾವು ಉತ್ಸಾಹ ಕಳೆದುಕೊಂಡಿರಲಿಲ್ಲ. ವಿಶ್ವಕಪ್ ಗೆಲ್ಲುವ ಜವಾಬ್ದಾರಿಯೊಂದಿಗೆ ಮಹಿಳಾ ಕ್ರಿಕೆಟ್ ಅನ್ನು ಇನ್ನಷ್ಟು ಬೆಳೆಸುವುದನ್ನ ಮುಂದುವರಿಸಿದ್ವಿ. ಕಳೆದ ಒಂದೂವರೆ ತಿಂಗಳಿನಿಂದ ದೊರೆತ ಬೆಂಬಲವೂ ಇದಕ್ಕೆ ಕಾರಣ. ಈ ಕ್ಷಣಕ್ಕಾಗಿ ಕಳೆದ 45 ದಿನಗಳಿಂದ ನಿದ್ರೆಯಿಲ್ಲದ ರಾತ್ರಿಗಳನ್ನ ಕಳೆದಿದ್ದೇನೆ ಎಂದು ತಿಳಿಸಿದರು.
ಟೂರ್ನಿಯುದ್ಧಕ್ಕೂ ನಾವು ಒಗ್ಗಟ್ಟಾಗಿದ್ದೆವು. ಒಳ್ಳೆಯದು, ಕೆಟ್ಟದ್ದರ ನಡುವೆಯೂ ಪರಸ್ಪರ ಬೆಂಬಲ ವ್ಯಕ್ಯಪಡಿಸುತ್ತಿದ್ದೆವು, ಈ ಸಕಾರಾತ್ಮಕತೆಯೇ ನಮ್ಮನ್ನ ಟ್ರೋಫಿಯತ್ತ ಕೊಂಡೊಯ್ದಿದೆ ಅಂತ ಭಾವಿಸುತ್ತೇನೆ ಎಂದು ಮಂಧಾನ ಹರ್ಷಿಸಿದರು.





