ಕಥೆ - ಸುಪ್ರೀತಾ ಭಟ್
``ಹೊಸ ದೇಶ..... ಎಲ್ಲರೂ ಹೊಸ ಜನ.... ನನಗೆ ಇಲ್ಲಿ ಮನಸ್ಸೇ ನಿಲ್ಲುತ್ತಿಲ್ಲ. ಯಾಕೋ ಯಾವುದೂ ಸರಿ ಹೋಗುತ್ತಿಲ್ಲ. ಆದಷ್ಟು ಬೇಗ ನಮ್ಮ ಭಾರತಕ್ಕೇ ವಾಪಸ್ಸು ಹೋಗಿಬಿಡೋಣ ಅನಿಸುತ್ತೆ,'' ಸಮೀಕ್ಷಾ ಎಂದಿನ ತನ್ನ ಆಲಾಪನೆಗೆ ತೊಡಗಿದ್ದಳು.
``ಇದು ಆಸ್ಟ್ರೇಲಿಯಾ! ಅತ್ಯುತ್ತಮ ಪ್ರಗತಿ ಹೊಂದಿದ ದೇಶಗಳಲ್ಲಿ ಇದೂ ಒಂದು. ನಮ್ಮ ಭಾರತದವರು ಇಲ್ಲಿ ಬಂದು ಸೆಟಲ್ ಆಗಿ ನೌಕರಿ ಗಿಟ್ಟಿಸಲು ಭೂಮಿ ಆಕಾಶ ಒಂದು ಮಾಡುತ್ತಾರೆ. ಹಾಗಿರುವಾಗ ನೀನು ಇಲ್ಲಿಂದ ವಾಪಸ್ ಹೋಗೋಣ ಅಂತಿದ್ದೀಯಲ್ಲ? ಇದನ್ನು ನಿನ್ನ ಮಕ್ಕಳಾಟದ ಬುದ್ಧಿ ಎನ್ನಬೇಕೋ.... ಏನೆನ್ನಬೇಕು?'' ಗಂಡ ಪ್ರತೀಕ್ ಹೇಳಿದ.
``ನಾನು ಏನು ಮಾಡಲಿ? ಬೆಳಗ್ಗೆ 8ಕ್ಕೆ ಹೊರಟರೆ ರಾತ್ರಿ 10ಕ್ಕೆ ಬರುತ್ತೀರಿ, ಸದಾ ಕೆಲಸ. ರಜೆ ಇರುವಾಗಲೂ ಫೋನು.... ಲ್ಯಾಪ್ ಟಾಪ್ ಹಿಡಿದು ಬಿಝಿ ಇರುತ್ತೀರಿ. ಇನ್ನು ಈ ಮಕ್ಕಳೋ ತಮ್ಮ ಶಾಲೆ, ಫ್ರೆಂಡ್ಸ್, ಆಟೋಟ, ಜಿಮ್ ಮಣ್ಣುಮಸಿ ಅಂತ ತಮ್ಮದೇ ಲೋಕದಲ್ಲಿ ಇರುತ್ತಾರೆ. ನಾನು ಸದಾ ಅಡುಗೆ, ಮನೆಗೆಲಸ, ಟಿ.ವಿ...... ಇದರಲ್ಲೇ ಮುಳುಗಿರಬೇಕು. ಎಲ್ಲರಿಗೂ ಎಲ್ಲ ಟೈಮಿಗೆ ಆಗುತ್ತಿರಬೇಕು. ಹೀಗಾಗಿ ನನಗೆ ಗೃಹಬಂಧನ ತಪ್ಪಿಲ್ಲ.....''
``ಹ್ಞಾಂ..... ಬಹಳ ಹೊತ್ತು ಯಾರೊಂದಿಗೂ ಮಾತುಕಥೆ ಇಲ್ಲದೆ ಬಾಯಿ ಹೊಲಿದಂತಾಗಿದೆ ಅಲ್ಲವೇ....'' ಪ್ರತೀಕ್ ಬೇಕೆಂದೇ ಕೆಣಕಿದ.
``ನಿಮಗೆ ಚೆಲ್ಲಾಟ..... ನನಗಿಲ್ಲಿ ಪ್ರಾಣಸಂಕಟ. ನನ್ನ ಈ ಸಮಸ್ಯೆ ಬಗ್ಗೆ ಗಂಭೀರಳಾಗಿದ್ದೇನೆ. ನನ್ನ ಸ್ಥಿತಿ ಬಾವಿಯ ಕಪ್ಪೆಯಂತಾಗಿ ಹೋಗಿದೆ. ಮದುವೆಗೆ ಮುಂಚೆ ನಾನು ಪಡೆದಿದ್ದ ವಿಜ್ಞಾನದ ಡಿಗ್ರಿಗಳು, ನನ್ನ ಓದು.... ಎಲ್ಲಾ ಮರೆತೇಹೋಗಿದೆ.''
``ನಿನ್ನನ್ನು ಬಾವಿ ಕಪ್ಪೆ ಆಗಿರು ಎಂದವರಾರು? ನೀನು ಹಕ್ಕಿಯ ಹಾಗೆ ಆಕಾಶದಲ್ಲಿ ಹಾರಾಡುತ್ತಿರು!'' ಎಂದು ಪ್ರತೀಕ್ ನಾಟಕೀಯವಾಗಿ ಹೇಳಿದ.
``ನಮ್ಮ ಮನೆಯಲ್ಲಿನ ಈ 3 ಪ್ರಾಣಿಗಳನ್ನು ಸುಧಾರಿಸುವುದೇ ನನಗೆ ದೊಡ್ಡ ಕೆಲಸವಾಗಿದೆ. ಕನಿಷ್ಠ 4ನೇ ಪ್ರಾಣಿಯ ಮುಖವನ್ನಾದರೂ ನೋಡುವ ಅವಕಾಶ ಇದ್ದಿದ್ದರೆ ಚೆನ್ನಾಗಿರುತ್ತಿತ್ತು..... ಹಾಗಿರುವಾಗ ಆಕಾಶದಲ್ಲಿ ಹಕ್ಕಿಯ ಹಾಗೆ ಹೇಗೆ ತಾನೇ ಹಾರಾಡಲಿ?''
``ಎಲ್ಲ ನಾವು ಜೀವನವನ್ನು ನೋಡುವ ದೃಷ್ಟಿಯಲ್ಲಿದೆ ಸಮೀಕ್ಷಾ...... ನಮ್ಮ ಜೀವನದಲ್ಲಿ ಸಿಗುವಂಥ ಅತ್ಯುತ್ತಮ ಕ್ಷಣಗಳನ್ನೇ ಅಮೃತ ಸಮಾನವಾಗಿ ಪರಿಗ್ರಹಿಸಿ ಮುಂದುವರಿಯಬೇಕಷ್ಟೆ,'' ಅವಳು ನೀಡಿದ ಟೀ ಕಪ್ ತೆಗೆದುಕೊಳ್ಳುತ್ತಾ ತನ್ನ ಪಕ್ಕದಲ್ಲೇ ಸೋಫಾದಲ್ಲಿ ಕೂರಿಸಿಕೊಂಡ ಪ್ರತೀಕ್.
ತಾನೂ ಟೀ ಕುಡಿಯುತ್ತಾ ಸಮೀಕ್ಷಾ ಹೇಳಿದಳು, ``ನೋಡಿ, ಇದೆಲ್ಲ ಭಾಷಣ ಮಾಡಲಿಕ್ಕೆ ಚೆಂದದ ಫಿಲಾಸಫಿ ಅಷ್ಟೆ. ನನ್ನ ಸಮಸ್ಯೆಗೆ ಪರಿಹಾರವಲ್ಲ.''
``ಅದು ಸರಿ, ನಾನು ಕೆಲವು ದಿನಗಳಿಂದ ನಿನ್ನ ತೊಂದರೆ ಗಮನಿಸುತ್ತಿದ್ದೇನೆ. ಮಕ್ಕಳು ಕ್ರಮೇಣ ತುಸು ದೊಡ್ಡವರಾದಂತೆ ಮನೆಯಲ್ಲಿ ನಿನ್ನ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳುತ್ತಾರೆ. ಅವರಿಗೆ ತಮ್ಮದೇ ಆದ ಒಂದು ಪ್ರಪಂಚ ಆಗಿಬಿಡುತ್ತದೆ. ಈಗಿನದಕ್ಕಿಂತ ಆಗ ನಿನ್ನ ಏಕಾಂಗಿತನ ಇನ್ನೂ ಹೆಚ್ಚು ಕಾಡುತ್ತದೆ. ಆ ಹೊತ್ತಿಗೆ ಅದನ್ನು ಎದುರಿಸುವುದು ಹೇಗೆ ಅಂತ ಈಗಿನಿಂದಲೇ ತಯಾರಿ ಶುರು ಮಾಡು. ಏನಾದರೂ ಕೋರ್ಸ್ ಬೇಕಿದ್ದರೆ ಮಾಡಿಕೊ.''