ಕಥೆ – ಸುಮನಾ ಭಾರದ್ವಾಜ್‌ 

“ಪ್ರಿಯ ಪ್ರಭು, ಅಮ್ಮನ ಪ್ರೀತಿಯ ಆಶೀರ್ವಾದಗಳು. ನಿನಗೆ ಈ ಪತ್ರ ಸಿಕ್ಕಿದಾಗ, ಅಮ್ಮ ನನಗಾಗಿ ಪತ್ರ ಬರೆದು ಹೇಳುವಂಥದ್ದು ಏನಿದೆ ಅಂತ ನಿನಗೆ ಖಂಡಿತಾ ಆಶ್ಚರ್ಯ ಆಗದೆ ಇರದು. ಹೆಚ್ಚುಕಡಿಮೆ ಪ್ರತಿದಿನ ನಾವು ಫೋನಿನಲ್ಲಿ ಮಾತನಾಡ್ತಾನೇ ಇರ್ತೀವಿ. ಅಂಥದ್ದರಲ್ಲಿ….. ಸಮಯಾವಕಾಶ ಆದಾಗ ನೀನು ವೆಬ್‌ಕ್ಯಾಮ್ ನಲ್ಲೂ  ನನ್ನೊಂದಿಗೆ ಚಾಟ್‌ ಮಾಡ್ತೀಯಾ. ಇಮೇಲ್‌, ವಾಟ್ಸ್ಆ್ಯಪ್‌ನ ಈ ಕಾಲದಲ್ಲಿ ಪತ್ರ ಬರುವುದು ಅಂದ್ರೆ….. ಚಾಟ್‌ ಮಾಡುವುದೇನೋ ಸುಲಭ ನಿಜ. ಆದರೆ ಪತ್ರ ಓದುವಾಗ ಮುಖದಲ್ಲಿ ಮೂಡುವ ಭಾವಗಳೇ ಬೇರೆ. ನೀನು ಅಷ್ಟು ದೂರದಲ್ಲಿದ್ದರೂ ನಿನ್ನ ಮುಖಭಾವಗಳನ್ನು ಇಲ್ಲಿಂದಲೇ ಊಹಿಸುತ್ತಿದ್ದೇನೆ.

ನೀನು ಹಾಸ್ಟೆಲ್ ಸೇರಿ ಬಹುತೇಕ 1 ವರ್ಷ ಆಗಿರಬೇಕು. ಇದಕ್ಕೆ ಮೊದಲು 19 ವರ್ಷ ನೀನು ನನ್ನ ಬಳಿಯೇ ಮನೆಯಲ್ಲಿದ್ದೆ. ಆದರೆ ಇಂದು ನಾನು ನಿನಗೆ ತಿಳಿಸಲಿರುವ ವಿಷಯ, ಕಳೆದ 19 ವರ್ಷಗಳಲ್ಲಿ ಹೇಳಿಕೊಳ್ಳಲು ಆಗಿರಲಿಲ್ಲ. ಈಗ ಈ ಅವಕಾಶ ಕೂಡಿ ಬಂದಿದೆ. ಅದರಲ್ಲೂ ಹೆತ್ತ ತಾಯಿ, ಕುಟುಂಬ ನಿನ್ನಿಂದ ದೂರ ಇರುವಾಗ.

ನೀನು ನನ್ನ ಹತ್ತಿರವೇ ಇದ್ದಾಗ ಈ ವಿಷಯವನ್ನು ನೀನು ಸರಿಯಾಗಿ ಗ್ರಹಿಸಲು ಆಗುತ್ತಿರಲಿಲ್ಲ ಎಂದೇ ಅನಿಸುತ್ತದೆ. ಪ್ರತಿ ವಿಷಯವನ್ನೂ ಸಮಯ ಸಂದರ್ಭ ನೋಡಿಕೊಂಡೇ ಹೇಳಬೇಕಾಗುತ್ತದೆ. ಬಾಲ್ಯದಿಂದಲೇ ನಿನಗೆ ಉತ್ತಮ ಸಂಸ್ಕಾರ ಕೊಡುವ ಪ್ರಯತ್ನ ಮಾಡಿದ್ದೇನೆ. ನೀನು ಆ ಸಂಸ್ಕಾರಕ್ಕೆ ಧಕ್ಕೆ ತರುವ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದೂ ಗೊತ್ತಿದೆ.

ಮಗು, ನನಗೆ ಅನಿಸುವುದೆಂದರೆ ಸಮಾಜ ಈಗ ಯಾವ ನಿಟ್ಟಿನಲ್ಲಿ ಚಲಿಸುತ್ತಿದೆ ಎಂದರೆ ವಿಚಿತ್ರ ಅನ್ಸುತ್ತೆ. ಆಧುನೀಕರಣದ ಒಂದು ಹೊಸ ಪರಿಯ ವ್ಯಾಖ್ಯಾನ ಮನದಟ್ಟು ಮಾಡಿಕೊಂಡು ಯಾವ ರೀತಿ ಇಂದಿನ ಪೀಳಿಗೆ ಪ್ರಯೋಗ ಮಾಡುತ್ತಿದೆಯೋ, ಹಿಂದಿನ ಸಂಸ್ಕಾರವೆಲ್ಲ ಧೂಳಿಪಟ ಆಯ್ತು ಎಂದೇ ಲೆಕ್ಕ. ಹೀಗಾಗಿ ನಿನಗೆ ಸರಿಯಾದ ಮಾರ್ಗದರ್ಶನ ತೋರುವುದು ನನ್ನ ಕರ್ತವ್ಯವಾಗಿದೆ.

ಹಾಸ್ಟೆಲ್‌ ವಾತಾವರಣ ಖಂಡಿತಾ ಮನೆಯ ತರಹ ಇರುವುದಿಲ್ಲ. ಅಲ್ಲಿ ನಿನಗೀಗ ನೂರಾರು ಜನ ಹೊಸಬರು ಫ್ರೆಂಡ್ಸ್ ಆಗಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಆದರ್ಶಗಳಿರುತ್ತವೆ, ವಿಚಾರಲಹರಿಗಳಿರುತ್ತವೆ. ಅಂಥವರಲ್ಲಿ ಕೆಲವರೊಡನೆ ಅವರ ಅಪೇಕ್ಷೆಗೆ ತಕ್ಕಂತೆ ನೀನು ಅವರೊಂದಿಗೆ ಬೆರೆತುಕೊಳ್ಳದೆ ಇರಬಹುದು. ಸರಿಯಾದ ಮಾರ್ಗದರ್ಶನ ಸಿಗದ ಕಾರಣ ನಿನ್ನ ಗುರಿ ತಲುಪದೆ, ದಾರಿ ತಪ್ಪಿ ಹೋಗಬಹುದು.

ವಿಭಿನ್ನ ವಾತಾವರಣದಿಂದ ಬಂದಿರತಕ್ಕಂಥ ಈ ಮಕ್ಕಳ ಜೀವನಶೈಲಿ ನಿನ್ನದಕ್ಕಿಂತ ಸಂಪೂರ್ಣ ಭಿನ್ನವಾಗಿರಬಹುದು. ಬಹುಶಃ ನಿನಗೆ ಅವರ ವಿಚಾರಲಹರಿ, ಆಶೋತ್ತರಗಳು ಇಷ್ಟವಾಗದೆ  ಇರಬಹುದು. ಅದೇ ತರಹ ನಿನ್ನ ವಿಚಾರಗಳು ಅವರಿಗೆ ಗೊಡ್ಡು ಸಂಪ್ರದಾಯ ಎನಿಸಬಹುದು. ನೀನು ಬೆಳೆದು ಬಂದ ಪರಿಸರದ ಕುರಿತು ಅವರು ಅವಹೇಳನ ಮಾಡಬಹುದು. ನಿನ್ನ ಸುತ್ತಮುತ್ತಲೂ ಇಂಥ ವಾತಾವರಣ ಏರ್ಪಟ್ಟಾಗ ನೀನು ದಾರಿತಪ್ಪುವ ಸಂಪೂರ್ಣ ಸಾಧ್ಯತೆಗಳಿವೆ.

ಈಗ ನೀನು ಸಂಪೂರ್ಣವಾಗಿ ನಿನ್ನ ಓದಿನ ಕಡೆ ಗಮನ ವಹಿಸು, ಅದಾದ ಮೇಲೆ ಕೆರಿಯರ್‌ ರೂಪಿಸಿಕೊಳ್ಳಬೇಕಾದ ಪರ್ವಕಾಲ. ಆದ್ದರಿಂದಲೇ ಆ ಕುರಿತಾಗಿ ನಾನು ನಿನಗೆ ಕೆಲವು ವಿಷಯಗಳನ್ನು ತಿಳಿಸಬಯಸುವೆ. ನಿನಗೆ ನನ್ನ ಮಾತುಗಳು ತುಸು ವಿಚಿತ್ರ  ಅನ್ನಿಸಬಹುದು. ಆದರೆ ಒಬ್ಬ ತಾಯಿಯಾದ ಕಾರಣ ನಾನು ಆ ವಿಷಯ ನಿರ್ಲಕ್ಷಿಸುವಂತಿಲ್ಲ.

ನಾನು ನಿನ್ನನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಬಯಸುತ್ತೇನೆ. ನಿನಗೊಂದು ವಿಷಯ ತಿಳಿಹೇಳಬೇಕಿದೆ. ಪ್ರತಿಯೊಬ್ಬ ಹುಡುಗಿಯನ್ನೂ ಅವಳಿಗೆ ಸಲ್ಲಬೇಕಾದ ಮಾನಸನ್ಮಾನಗಳಿಂದ ಗೌರವಿಸಬೇಕು. ಅವಳ ದೇಹ ಹೊರತುಪಡಿಸಿ ಅವಳನ್ನು ಗೌರವಾದರಗಳಿಂದ ಕಾಣಬೇಕಿದೆ. ಯಾರದೋ ದುಷ್ಟ ಸಹವಾಸಕ್ಕೆ ಬಿದ್ದು, ನಿನ್ನನ್ನು ನೀನೇ ಕ್ಷಮಿಸಿಕೊಳ್ಳಲಾರದಂಥ ತಪ್ಪು ಮಾಡಿ ಬಿಡಬೇಡ. ಹೌದು, ನಾನು ರೇಪ್‌ನಂಥ ಅತಿ ಕೀಳು ಮನೋಭಾವದ ವಿಷಯವಾಗಿಯೇ ಹೇಳುತ್ತಿದ್ದೇನೆ.

ಕೆಲವೇ ಕೆಲವು ಕ್ಷಣಗಳ ಮಜಾ ಅನುಭವಿಸಲಿಕ್ಕಾಗಿ, ಒಬ್ಬ ಹುಡುಗಿಯ ಇಡೀ ಜೀವನವನ್ನು ಪಣಕ್ಕೊಡ್ಡುವುದು…. ಮನುಕುಲಕ್ಕೆ ಕಳಂಕನೀಯ ವಿಷಯ! ಅವಳ ಕುಟುಂಬದವರನ್ನು ಸದಾ ದುಃಖದಲ್ಲಿ ಮುಳುಗಿಸಿ, ಅಪಮಾನದಲ್ಲಿ ತತ್ತರಿಸುವಂತೆ ಮಾಡಿ, ಅವರ ಜೀವನವನ್ನು ನರಕಸದೃಶ ಮಾಡುವ ಅಧಿಕಾರ ಇವರಿಗೆ ಕೊಟ್ಟವರಾರು?

ಯಾವುದೇ ಹುಡುಗಿಯ ಜೊತೆ ಇಂಥ ಅತ್ಯಾಚಾರ ನಡೆದಾಗ, ಅವಳ ಇಡೀ ಕುಟುಂಬ, ಒಡಹುಟ್ಟಿದವರ ಪೀಳಿಗೆಯೂ ಸೇರಿದಂತೆ ಎಲ್ಲರೂ ಹಿಂಸೆಯ ಮಹಾಕೂಪಕ್ಕೆ ಬೀಳುತ್ತಾರೆ. ಆ ಹಿಂಸೆಯಿಂದ ಹೊರಬರಲು ಇಡೀ ಜೀವನ ಸಾಕಾಗುವುದಿಲ್ಲ. ಅಷ್ಟಾದರೂ ಆ ಹುಡುಗಿಯ ಜೀವನದಲ್ಲಿ ಮೊದಲಿನಂತೆ ಯಾವುದೂ ಸಾಮಾನ್ಯ ಆಗುವುದಿಲ್ಲ.

ವಿಡಂಬನೆ ಎಂದರೆ ಯಾವ ಗಂಡಸು ಒಬ್ಬ ಮಗ, ಅಣ್ಣ, ತಮ್ಮ, ಗಂಡ, ತಂದೆಯಾಗಿ ತನ್ನ ಜೀವನದಲ್ಲಿ ಎದುರಾಗುವ ಪ್ರತಿ ಹೆಣ್ಣನ್ನೂ ರಕ್ಷಿಸುವ ವಾಗ್ದಾನ ಮಾಡಿರುತ್ತಾನೋ, ಹಾಗೆಯೇ ನಡೆದುಕೊಳ್ಳುತ್ತಾನೆ ಕೂಡ. ತನ್ನ ಮನೆಯ ಹೆಂಗಸರ ಬಗ್ಗೆ ಇಷ್ಟು ಕಾಳಜಿ ಇರುವ ಪ್ರತಿ ಗಂಡಸಿಗೂ ಪರಸ್ತ್ರೀ ಮಾತ್ರ ಯಾಕೆ ಕೆರಳಿಸುತ್ತಾಳೆ? ಅವಳನ್ನು ಭೋಗಿಸಿದರೆ ತಪ್ಪಿಲ್ಲ ಎಂದೇಕೆ ಅನಿಸಬೇಕು? ನಿನ್ನ ಕುಟುಂಬದ ಹೆಣ್ಣಿಗೊಂದು ರೀತಿ, ಬೇರೆ ಕುಟುಂಬದವರ ಹೆಂಗಸರಿಗಾದರೆ ಬೇರೆ ನೀತಿಯೇ?

ಬಾಲ್ಯದಲ್ಲಿ ನೀನು ಯಾರೂ ನನ್ನ ಅಕ್ಕ ತಂಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಎಂದು ರೇಗಾಡುತ್ತಿದ್ದೆ. ಅವರಿಗೆ ಯಾರಾದರೂ ತೊಂದರೆ ಕೊಟ್ಟರೆ ನಿನಗೆಷ್ಟು ಕೋಪ ಬರುತ್ತಿತ್ತು…. ಒಂದು ಸಲ ಯಾರೋ ಒಬ್ಬ ಹುಡುಗ ಆಟದ ನಡುವೆ ತಮಾಷೆಗೆಂದು ಅವಳ ಜಡೆ ಹಿಡಿದೆಳೆದಾಗ, ನೀನು ಕೆಂಡಾಮಂಡಲನಾಗಿ ಅವನ ಮೇಲೆ ಕೈ ಮಾಡಲು ಹೋಗಿದ್ದೆ. ಅದೇ ತರಹ ಯಾವುದೇ ಹುಡುಗಿ ಜೊತೆ ಈ ರೀತಿ ದುವ್ಯರ್ವಹಾರ ಆಗುತ್ತಿರುವುದನ್ನು ನೀನು ನೋಡಿದರೆ, ಅವಳೂ ಸಹ ಒಬ್ಬರ ತಂಗಿ ಎಂದು ನೆನಪಿಟ್ಟುಕೊಂಡು ಆ ಹುಡುಗಿಯ ರಕ್ಷಣೆಗೆ ಮುಂದಾಗು. ಇತರರು ಇಂಥ ಹೀನಕೃತ್ಯ ಎಸಗಲು ಮುಂದಾದಾಗ, ನೀನು ಮುನ್ನುಗ್ಗಿ ಅದನ್ನು ತಡೆ!

ನೋಡಪ್ಪ, ಈ ರೇಪ್‌ನಂಥ ಹೀನಾಯ ಕೃತ್ಯ ಕೇವಲ ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದರಲ್ಲಿ 2 ಪಕ್ಷಗಳಿವೆ. ಒಬ್ಬ ಆರೋಪಿ, ಇನ್ನೊಬ್ಬಳು ಸಂತ್ರಸ್ತೆ. ದೆಹಲಿಯ ನಿರ್ಭಯಾ ಗ್ಯಾಂಗ್‌ ರೇಪ್‌ ಇಡೀ ದೇಶದಲ್ಲೇ ಚರ್ಚೆಯ ಕೇಂದ್ರವಾಗಿತ್ತು ಎಂಬುದು ನಿನಗೆ ಗೊತ್ತೇ ಇದೆ. ಅಂಥ ನಿರ್ದಯ, ಕ್ರೂರ, ರಾಕ್ಷಸೀ ಕೃತ್ಯವನ್ನು ಯಾರು ತಾನೇ ಮರೆಯಲು ಸಾಧ್ಯ? ಆಗ ಒಂದು ಆಶ್ಚರ್ಯಜನಕ ವಿಚಾರ ನಡೆಯಿತು. ಆ ಹೀನ ಕೃತ್ಯವನ್ನು ಖಂಡಿಸಲು ಇಡೀ ದೇಶ ಒಂದಾಗಿತ್ತು, ಅದನ್ನು ವಿರೋಧಿಸಿದವರಲ್ಲಿ ಗಂಡಸರೂ ಇದ್ದರು. ಹಾಗಾದರೆ ಇಂಥ ಕ್ರೂರ ಕೃತ್ಯಕ್ಕೆ ಆ ಪಾಪಿಗಳಿಗೆ ಪ್ರೇರಣೆ ದೊರಕಿದ್ದಾದರೂ ಹೇಗೆ?

ಕಾಮವಾಂಛೆ ಇಂಥ ಪ್ರೇರಣೆಗೆ ಮೂಲ ಎಂಬುದು ಗೊತ್ತಿರುವ ಸಂಗತಿ. ಹೆಣ್ಣನ್ನು ಕೇವಲ ಭೋಗದ ವಸ್ತು ಎಂದು ಭಾವಿಸುವ ಕಾಮಪಿಪಾಸುಗಳು, ಅವಳ ಮೇಲೆ ತಮ್ಮ ಅಧಿಕಾರ ಚಲಾಯಿಸಲೇಬೇಕೆಂಬ ಹೀನಪಶುಗಳು ಹೀಗೆ ವರ್ತಿಸುತ್ತವೆ. ಹೆಣ್ಣನ್ನು ಕಾಮಿಸಿ ಅವಳಿಗೊಂದು ಗತಿ ಕಾಣಿಸಬೇಕೆಂದು ಹೀಗೆ ಮೃಗೀಯವಾಗಿ ವರ್ತಿಸುವ ಈ ಗಂಡುಗಳಿಗೆ ಇಂಥ ದುರ್ಬುದ್ಧಿ ಯಾಕಾದರೂ ಬರುತ್ತದೆ? ಪ್ರತಿ ಗಂಡಸೂ ಸಹ ಒಬ್ಬ ಹೆಣ್ಣಿಂದಲೇ ಹುಟ್ಟಿದ್ದು ಎಂಬುದನ್ನು ಅವನು ಮರೆಯುತ್ತಾನೇಕೆ? ಒಬ್ಬ ಹೆಣ್ಣು ಎಷ್ಟೆಲ್ಲ ಕಷ್ಟಪಟ್ಟು ತನ್ನನ್ನು ಸಾಕಿಸಲಹಿ ಇಷ್ಟು ದೊಡ್ಡವಳನ್ನಾಗಿ ಮಾಡಿದ್ದಾಳೆಂದು ಅವನು ತಿಳಿಯುದಿಲ್ಲವೇಕೆ?

ಮುಂದೆ ಸರಿಯಾದ ಸಮಯ ಬಂದಾಗ ನೀನು ಹೆಣ್ಣು ಗಂಡುಗಳ ನಡುವಿನ ಸರಿಯಾದ ಸಂಬಂಧದ ಬಗ್ಗೆ ತಿಳಿಯುವೆ. ಸೆಕ್ಸ್ ಎಂಬ ಪದದ ಕುರಿತು ಹೆಚ್ಚು ದಿನ ಅಪರಿಚಿತನಾಗಿ ಉಳಿಯುವುದಿಲ್ಲ ಮಗು, ಆದರೆ ಈ ಸುಂದರ ಸಂಬಂಧವನ್ನು ರೇಪ್‌ನಂಥ ಹೀನಕೃತ್ಯದಿಂದ ಅನುಭವಿಸ ಹೊರಟರೆ ಅದು ಸರಿ ಎಂದು ನಿನ್ನ ಆತ್ಮಸಾಕ್ಷಿ ಒಪ್ಪಲು ಸಾಧ್ಯವೇ? ಖಂಡಿತಾ ಇಲ್ಲ…. ಅಲ್ಲವೇ? ಆದ್ದರಿಂದ  ನಿನ್ನ ಸುತ್ತಮುತ್ತ ಇಂಥ ಘೋರ ನಡೆಯುತ್ತಿದ್ದರೆ ಕ್ಷಣ ತಡಮಾಡದೆ ಅದನ್ನು ವಿರೋಧಿಸು.

ನಮ್ಮ ನೇತಾರರು, ಬುದ್ಧಿಜೀವಿಗಳು, ನಮ್ಮ ಸಮಾಜದ ತಥಾಕಥಿತ ಸುಧಾರಕರು ರೇಪ್‌ನಂಥ ಹೀನಕೃತ್ಯಕ್ಕೆ ಹೆಣ್ಣೇ ಹೊಣೆ ಎನ್ನುತ್ತಾರೆ. ಏಕೆಂದರೆ ಅವಳು ದೇಹ ತೋರ್ಪಡಿಸುವ ಬಟ್ಟೆ ತೊಡುತ್ತಾಳೆ, ಅವಳು ರಾತ್ರಿ ಹೊತ್ತು ಹೊರಗೆಲ್ಲ ಸುತ್ತಾಡುತ್ತಾಳೆ, ಅವಳು ಗಂಡಸರ ಜೊತೆ ಸ್ನೇಹ ಬೆಳೆಸುತ್ತಾಳೆ, ಈ ಕ್ಷುಲ್ಲಕ ಕಾರಣಗಳಿಂದಾಗಿ ಗಂಡಸರು ಆಕರ್ಷಣೆಯ ಬೆಂಕಿಗೆ ಸಿಲುಕಿ ಅವಳನ್ನು ರೇಪ್‌ ಮಾಡುತ್ತಾರಂತೆ.

ಹೆಣ್ಣು ಯಾವ ತರಹದ ಬಟ್ಟೆ ಬೇಕೋ ಧರಿಸಿ ಸ್ವತಂತ್ರಳಾಗಿ ಓಡಾಡಲಿ, ತನ್ನ ಮನಸ್ಸಿಗೊಪ್ಪುವಂತೆ ನಡೆದುಕೊಳ್ಳಲಿ, ತನ್ನ ಖುಷಿಗೆ ತಕ್ಕಂತೆ ವ್ಯವಹರಿಸಲಿ, ಮುಕ್ತವಾಗಿ ಸಮಾಜದೆದುರು ಉಸಿರಾಡಲಿ. ಹೆಣ್ಣಾದವಳು ಸ್ವಲ್ಪ ತಡವಾದ ಮಾತ್ರಕ್ಕೆ ಹೊರಗೆ ಓಡಾಡಲೇ ಬಾರದು ಎಂದರೇನು? ಅವಳು ಹೆಣ್ಣು ಎಂಬ ಒಂದೇ ಕಾರಣಕ್ಕಾಗಿ ಬೇಗ ಮನೆಗೆ ಸೇರಬೇಕೇ…. ಅವಳ ದೇಹದ ಉಬ್ಬುತಗ್ಗುಗಳು ಗಂಡನ್ನು ಆಕರ್ಷಿಸುತ್ತದೆ ಎಂದು ಬಟ್ಟೆಯ ವಿಷಯದಲ್ಲಿ ಬೇರೆ ರೀತಿ ನೀತಿಗಳೇ….?

ಯಾವುದೇ ಹುಡುಗಿ ಅತ್ಯಾಚಾರಕ್ಕೆ ಒಳಗಾದರೆ ಅವಳ ನಡತೆಯ ಬಗ್ಗೆಯೇ ಸಂದೇಹ ವ್ಯಕ್ತಪಡಿಸಲಾಗುತ್ತದೆ. ಮಾನಸಿಕ, ದೈಹಿಕವಾಗಿ ನೋವುಂಡ ಆ ಜೀವವನ್ನೇ ಈ ಪಾಶವೀ ಕೃತ್ಯಕ್ಕೆ ಕಾರಣ ಎನ್ನುತ್ತಾರೆ. ರೇಪಿಸ್ಟ್ ಕೆಲವೇ ದಿನಗಳಲ್ಲಿ ಜೇಲಿನಿಂದ ಬಿಡುಗಡೆ ಹೊಂದುತ್ತಾನೆ ಅಥವಾ ಅವನ ಅಪರಾಧ ಕೋರ್ಟಿನಲ್ಲಿ ಸಾಬೀತು ಆಗುವುದೇ ಇಲ್ಲ. ಎಲ್ಲಕ್ಕಿಂತ ಘೋರವಾದ ವಿಡಂಬನೆ ಎಂದರೆ ಹೀಗೆ ಉನ್ಮುಕ್ತನಾಗಿ ಬೀದಿ ಅಲೆಯುವ ಆ ಪಾಪಿ, ಹಿಂದಿನ ಅಪರಾಧಕ್ಕೆ ಶಿಕ್ಷೆ ಅನುಭವಿಸುವ ಮೊದಲೇ ಮತ್ತೊಬ್ಬ ಹೆಣ್ಣನ್ನು ಕೆಡಿಸಿ ಪೈಶಾಚಿಕ ತೃಪ್ತಿ ಹೊಂದುತ್ತಾನೆ.

ಹುಡುಗಿ ತನ್ನ ಮಾನಮರ್ಯಾದೆಗಳಿಗೆ ಅಂಜಿ ಆ ಕುರಿತು ಯಾರಲ್ಲಿಯೂ ಹೇಳಿಕೊಳ್ಳದೆ ಮೌನವಹಿಸುತ್ತಾಳೆ. ಇದರ ವಿರುದ್ಧವಾಗಿ ಅವಳು ದೂರು ಕೊಡಲು ಹೊರಟರೆ, ಕೋರ್ಟಿನ ಕಟಕಟೆಯಲ್ಲಿ ಅವಳ ಪ್ರಾಣವೇ ಬಾಯಿಗೆ ಬಂದುಬಿಡುವಂಥ 108 ಪ್ರಶ್ನೆಗಳನ್ನು ಕೇಳಿ ಜರ್ಝರಿತಗೊಳಿಸುತ್ತಾರೆ. ಒಂದು ಸಲ ಅತ್ಯಾಚಾರ ಆದ ಮೇಲೆ ಅದನ್ನು ಸಾರ್ವಜನಿಕವಾಗಿ ಎಲ್ಲರೆದುರು ಬಣ್ಣಿಸಿದರೆ ತಾನೇ ಏನಂತೆ…? ಅಷ್ಟು ಮಾತ್ರವಲ್ಲದೆ, ಮುಂದೆ ಯಾರೊಂದಿಗೆ ಬೇಕಾದರೂ ಅವಳು ಫ್ರೀಸೆಕ್ಸ್ ಹೊಂದಬಹುದೆಂಬಂತೆ ಅನಾಗಕರೀಕ ಪ್ರಶ್ನೆಗಳ ಮಳೆಗರೆಯಲಾಗುತ್ತದೆ.

ಅವಳನ್ನು ಕೇಳಲಾಗುವ ಮರ್ಮಾಘಾತಕ ಪ್ರಶ್ನೆಗಳು ಒಂದೆರಡಲ್ಲ. ರೇಪಿಸ್ಟ್ ಎಲ್ಲೆಲ್ಲಿ ನಿನ್ನ ಮೈ ಮುಟ್ಟಿದ್ದ? ಆ ಸಮಯದಲ್ಲಿ ಅದು ಚೆನ್ನಾಗಿತ್ತು ಎಂದು ನಿನಗೆ ಅನಿಸಲೇ ಇಲ್ಲವೇ? ನಿನ್ನ ಅನುಮತಿ ಇಲ್ಲದೆ ಯಾರಾದರೂ ನಿನ್ನ ದೇಹ ಹಿಂಡಿ ಹಿಪ್ಪೆ ಮಾಡಲು ಸಾಧ್ಯವೇ? ಇದರರ್ಥ ಅವನು ಏನಾದರೂ ಮಾಡಿಕೊಳ್ಳಲಿ ಎಂದು ನೀನೇ ಅವಕಾಶ ಕಲ್ಪಿಸಿದ್ದೆ  ತಾನೇ….?

ಇಂಥ ನೋವು ಒಬ್ಬ ಹೆಣ್ಣಿಗೆ ಮಾತ್ರ ಅರ್ಥ ಆಗಲು ಸಾಧ್ಯ. ಆದ್ದರಿಂದ ನೀನು ಸದಾಸರ್ವದಾ ಹೆಣ್ಣನ್ನು ಗೌರವಾದರಗಳಿಂದ ಕಾಣಬೇಕೆಂದೇ ಹೇಳುವೆ. ಹೆಣ್ಣನ್ನು ನೋಡುವಾಗ ಅವಳ ದೇಹದ ಉಬ್ಬು ತಗ್ಗು ಗಮನಿಸುವ ಬದಲು, ಅವಳ ಭಾವನೆಗಳನ್ನು ಗೌರವಿಸಿ ಆದರಿಸು. ಅವಳ ಯೋಗ್ಯತೆಯನ್ನು ಪ್ರಶಂಸಿಸು….  ಇದೆಲ್ಲವನ್ನೂ ಒಬ್ಬ ತಾಯಿ ಮಗನಿಗೆ ವಿವರವಾಗಿ ಹೀಗೆ ಹೇಳುತ್ತಾಳೆಯೇ ಎಂದು ನಿನಗೆ ತುಸು ಸಂಕೋಚ ಎನಿಸಬಹುದು, ಮುಜುಗರ ಆಗಬಹುದು.

ಪ್ರಕೃತಿ ಹೆಣ್ಣನ್ನು ಭಾವುಕಳು, ಅಮಾಯಕಳು, ಅತಿ ಸಂವೇದನಾಶೀಲಳು, ಕೋಮಲ ಆಗಿಸಿದೆ. ಅವಳ ಸೌಂದರ್ಯ,  ಆಕರ್ಷಣೆಯ ಕೇಂದ್ರಬಿಂದು. ಅವಳ ಈ ಗುಣಗಳನ್ನೇ ಗಂಡಸು ದೌರ್ಬಲ್ಯ ಎಂದು ಭಾವಿಸಿ ತನ್ನ ರಾಕ್ಷಸೀ ದೈಹಿಕ ಬಲದಿಂದ ಅವಳನ್ನು ಮೆಟ್ಟಿ ನಿಲ್ಲುತ್ತಾನೆ. ತನ್ನ ಸ್ವತೃಪ್ತಿಗಾಗಿ ತೀಟೆ ತೀರಿಸಿಕೊಂಡು ಅವಳನ್ನು ಗೆದ್ದೆ ಎಂದು ಮೆರೆಯುತ್ತಾನೆ.

ರೇಪ್‌ನ ಅತ್ಯಂತ ದುಃಖದಾಯಕ ಮಜಲು ಎಂದರೆ ಸಂತ್ರಸ್ತೆಗೆ ಕೇವಲ ದೈಹಿಕ, ಮಾನಸಿಕ ಹಿಂಸೆ ಮಾತ್ರವಲ್ಲದೆ, ಸಾಮಾಜಿಕ ಲಾಂಛನ ಹೊರೆಯಾಗುತ್ತದೆ. ಅದನ್ನು ಸಹಿಸಲೇ ಬೇಕಾಗುತ್ತದೆ. ಈ ಭಯಾನಕ ಹಿಂಸೆಗೆ ಕೊನೆಯಿಲ್ಲ. ಹೀಗಾಗಿ ಸಂತ್ರಸ್ತೆ ಎಷ್ಟೋ ಸಲ ಇದನ್ನು ಯಾರಿಗೂ ಹೇಳದೆ ಮೌನವಾಗಿದ್ದು ಬಿಡುತ್ತಾಳೆ. ಹೀಗಾಗಿ ಕೇವಲ ಕಾನೂನಿನಲ್ಲಿ ಬದಲಾವಣೆ ಮಾಡಿದರೆ ಸಾಲದು, ಸಾಮಾಜಿಕ ಮಾನ್ಯತೆಗಳಲ್ಲೂ ಬದಲಾವಣೆ ಅತ್ಯಗತ್ಯ. ಇಂದಿನ ಆಧುನಿಕ ಯುವಜನತೆ ಈ ಬದಲಾವಣೆ ತರಲೇಬೇಕಿದೆ. ಅಂದರೆ ನೀನೂ ಸಹ ಈ ಬದಲಾವಣೆಯ ಒಂದು ಪಾಲಾಗ್ತೀಯ…..ಯಾವಾಗ ಇಂಥ ಘಟನೆ ನೋಡಿದಾಗಲೂ ನಿನ್ನಲ್ಲಿ ಒಂದು ಉಗ್ರರೋಷ ಉಕ್ಕಿಬರಬೇಕು. ಯಾವ ಸಮಾಜದಲ್ಲಿ ಇಂಥ ರೋಷ ಇಲ್ಲವೋ ಅಲ್ಲಿ ಹೆಣ್ಣಿಗೆ ನಿತ್ಯ ಅಗ್ನಿ ಪರೀಕ್ಷೆ ತಪ್ಪಿದ್ದಲ್ಲ.

ಇಂದು ನಾನು ನಿನಗೆ ಒಂದು ರಹಸ್ಯ ವಿಚಾರ ತಿಳಿಸುತ್ತೇನೆ. ಯಾವ ತಾಯಿಗೆ ಆಗಲಿ, ತನ್ನ ಮಗನ ಬಳಿ ಇಂಥ ಗುಟ್ಟು ಹೇಳಿಕೊಳ್ಳುವುದು ಎಂಥ ಕಷ್ಟಕರ ಎಂದು ಅನುಭವಿಸಿದವರಿಗೇ ಗೊತ್ತು. ಆದರೆ ನಿನ್ನೊಂದಿಗೆ ಈ ವಿಚಾರ ಹಂಚಿಕೊಳ್ಳಬೇಕಾದುದು ಇಂದು ಅನಿವಾರ್ಯವಾಗಿದೆ. ಈ ವಿಷಯ ತಿಳಿದರೆ ನಿನ್ನಲ್ಲಿ ಸಿಟ್ಟು, ಆಕ್ರೋಶ ಉಕ್ಕೇರುವುದರಲ್ಲಿ ಸಂದೇಹವಿಲ್ಲ. ಅಲ್ಲಿ ನಿನಗೆ ಸಮಾಧಾನ ಹೇಳಲು ನಾನು ಇಲ್ಲ ಎಂಬುದನ್ನು ನೆನಪಿಡು. ಇದನ್ನು ಭರಿಸಲಾಗದೆ ಆವೇಶದಿಂದ ಎಗರಾಡಬೇಡ. ನಿನ್ನನ್ನು ನೀನು ಸಂಭಾಳಿಸಿಕೊಳ್ಳಬಲ್ಲೆ, ಈ ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸುವೆ ಎಂಬ ನಂಬಿಕೆ ನನಗಿದೆ. ಇದನ್ನು ತಿಳಿದುಕೊಂಡ ನಂತರ ನನ್ನತ್ತ ನಿನ್ನ ಧೋರಣೆ ಹೇಗಿರುವುದೋ ತಿಳಿಯದು. ಆದರೆ ಇದನ್ನೆಲ್ಲ ತಿಳಿದ ನಂತರ ನೀನೆಂದೂ ತಪ್ಪು ಹೆಜ್ಜೆ ಇಡಬಾರದು….. ಸಂಯಮದಿಂದ ಹೆಜ್ಜೆ ಇಡಬೇಕು.

ಮಗು, ನಾನು ಡಿಗ್ರಿ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಒಬ್ಬ ಹುಡುಗ ನನ್ನನ್ನು ಬಹಳ ಇಷ್ಟಪಟ್ಟ. ಆದರೆ ಅದು ಅವನ ಒಮ್ಮುಖ ಪ್ರೀತಿ ಆಗಿತ್ತು. ನಾನು ಆತನಿಗೆ ಹಲವಾರು ಸಲ, `ನೀನು ನನಗೆ ಇಷ್ಟವಿಲ್ಲ. ಓದುವ ವಯಸ್ಸಿನಲ್ಲಿ ನಾನು ಹೀಗೆ ಪ್ರೀತಿಪ್ರೇಮ ಅಂತ ಹುಚ್ಚು ಆಲೋಚನೆ ಮಾಡುವುದಿಲ್ಲ. ನನ್ನಿಂದ ಆದಷ್ಟೂ ದೂರವಿರು,’ ಎಂದೆಲ್ಲ ಎಷ್ಟೋ ಹೇಳಿದ್ದೆ. ಆದರೆ ಅವನಿಗೆ ನನ್ನ ಬಗೆಗಿದ್ದ ಈ ಪ್ರೇಮ ಒಂದು ಹುಚ್ಚು ಆವೇಶದ್ದು. ನಾನು ಹ್ಞೂಂ ಎಂದು ಹೇಳುವವರೆಗೂ ಬಿಡುವುದಿಲ್ಲ, ಕಾಯುತ್ತೇನೆ ಎಂದು ಹೇಳಿದ. ಆದರೆ ಅವನು ಸದಾ ನನ್ನನ್ನು ಹಿಂಬಾಲಿಸುವುದನ್ನು ಮಾತ್ರ ಬಿಡಲಿಲ್ಲ. ನಾನು ಅವನನ್ನು ಕಂಡಾಗೆಲ್ಲ ನನ್ನ ದಾರಿ ಬದಲಾಯಿಸಿ ಹೋಗಿಬಿಡುತ್ತಿದ್ದೆ. ನಾನು ಯಾವತ್ತೂ ಅವನ ಪ್ರೇಮ ಸ್ವೀಕರಿಸುವುದಿಲ್ಲ ಎಂದು ಕ್ರಮೇಣ ತಿಳಿದುಕೊಂಡ ಅವನು ಬೆಂಕಿ ಉಂಡೆಯಾದ. ಹೀಗೆ ನಾನು ಒಮ್ಮೆ ಕಾಲೇಜಿಗೆ ಹೋಗುತ್ತಿದ್ದಾಗ, ತನ್ನ ಕಾರು ನಿಲ್ಲಿಸಿ, ನನ್ನ ಬಾಯಿ ಮುಚ್ಚಿ ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡ.

ನಾನು ಪ್ರತಿಭಟಿಸುವ ಮುನ್ನವೇ ನನ್ನ ಮೂಗಿಗೆ ಕರ್ಚೀಫ್‌ ಒತ್ತಿದ. ಕ್ಷಣ ಮಾತ್ರದಲ್ಲಿ ನನಗೆ ತಲೆ ಸುತ್ತು ಬಂದು ಅರೆ ಪ್ರಜ್ಞೆಯಾಗಿದ್ದೆ. ಅಲ್ಲಿಂದ ಕಾರು ನೇರವಾಗಿ ನಗರದಾಚೆಯ ವಲಯಕ್ಕೆ ಹೋಯಿತು. ಅಲ್ಲಿ ಅವನ ಗೆಳೆಯನ ಕೋಣೆಯ ಬೀಗದ ಕೈ ಪಡೆದಿದ್ದ. ನನ್ನನ್ನು ಹೇಗೋ ಎಳೆದುಕೊಂಡು ಆ ಕೋಣೆಗೆ ಹೋದವನೆ…. ಮಂಪರು ಸ್ಥಿತಿಯಲ್ಲಿದ್ದ ನನ್ನ ಮಾನಭಂಗ ಮಾಡಿದ್ದ.

ನನಗೆ ಪ್ರಜ್ಞೆ ಬಂದಾಗ ಅಳುವುದು, ಚೀರಾಡುವುದು ಬಿಟ್ಟರೆ ನಾನು ಏನೂ ಮಾಡುಂತಿರಲಿಲ್ಲ. `ನನ್ನನ್ನು ಒಪ್ಪದ ನೀನು ಬೇರೆ ಯಾರಿಗೂ ದಕ್ಕಬಾರದು!’ ಎಂದು ಗಹಗಹಿಸಿದ್ದ. ಅವನು ನನ್ನನ್ನು ಒದ್ದು ಬಾಗಿಲು ತೆರೆದು ಹೊರಡುತ್ತಲಿದ್ದ…. ಅಷ್ಟರಲ್ಲಿ ಇವನಿಗೆ ಕೀ ಕೊಟ್ಟಿದ್ದ ಗೆಳೆಯ ಬಂದುಬಿಟ್ಟಿದ್ದ. ಅಲ್ಲಿ ಅಳುತ್ತಾ ಬಿದ್ದಿದ್ದ ನನ್ನನ್ನು ನೋಡಿ ಅವನಿಗೆ ವಿಷಯ ಅರ್ಥವಾಗಿತ್ತು. ಇಂಥ ದುಷ್ಕೃತ್ಯಕ್ಕಾಗಿ ಮನೆ ಬಳಸಿಕೊಂಡನೇ ಎಂದು ಈ ಕೇಡಿಗನನ್ನು ಹೊಡೆದುರುಳಿಸಿದ. ಸ್ನೇಹಿತನ ಕೈಗೆ ಸಿಗದೆ ಈ ಕೇಡಿ ಪರಾರಿಯಾದ.

ಅಷ್ಟರಲ್ಲಿ ಪರಿಸ್ಥಿತಿ ಎದುರಿಸಲು ಸಿದ್ಧಳಾದ ನಾನು ಜೋರಾಗಿ ಅತ್ತು, ಹೊರಡಲು ಸಿದ್ಧಳಾದೆ. ಆಗ ಆತ ನನಗೆ ಬಗೆಬಗೆಯಾಗಿ ಸಮಾಧಾನ ಹೇಳಿ, ತನ್ನ ಗೆಳೆಯ ಇಂಥ ಹೀನಕೃತ್ಯಕ್ಕಾಗಿ ಮನೆ ಬಳಸಿಕೊಂಡ ಎಂದು ಬಹಳ ಪಶ್ಚಾತ್ತಾಪಪಟ್ಟ. ನಂತರ ಒಂದು ಆಟೋದಲ್ಲಿ ನನ್ನನ್ನು ಕ್ಷೇಮವಾಗಿ ಮನೆ ತಲುಪಿಸಿದ.

ಈ ನೋವು, ಸಂಕಟವನ್ನು ಯಾರಿಗೂ ಹೇಳಿಕೊಳ್ಳಲಾರದೆ ನಾನು ಅನುಭವಿಸಿದ ನರಕಯಾತನೆ ನನಗೊಬ್ಬಳಿಗೇ ಗೊತ್ತು. ಅಮ್ಮನ  ಬಳಿಯೂ ಹೇಳಲಾರದೆ ಮೌನವಾಗಿ ನುಂಗಿಕೊಂಡೆ. ಆದರೆ 3 ತಿಂಗಳು ಕಳೆಯುವಷ್ಟರಲ್ಲಿ ನನ್ನಲ್ಲಾದ ಬದಲಾವಣೆ ತಿಳಿದು ನಾನು ಪಾತಾಳಕ್ಕೆ ಇಳಿದುಹೋದೆ! ನಾನು ಗರ್ಭಿಣಿ ಎಂದು ಅರಿವಾಗಿ ಅಮ್ಮನ ಬಳಿ ವಿಷಯ ಹೇಳಲೇಬೇಕಾಯಿತು.

ತಮ್ಮ ತಂಗಿಯರಿದ್ದ ತುಂಬು ಸಂಸಾರ. ಮಧ್ಯಮ ವರ್ಗದ ಬವಣೆಯಲ್ಲಿ ಬೆಂದು, ತಂದೆ ನಮ್ಮನ್ನು ಕಾಲೇಜ್‌ವರೆಗೆ ಓದಿಸಿದ್ದೇ ಹೆಚ್ಚು. ವಿಷಯ ತಿಳಿದು ಅಪ್ಪ ಅಮ್ಮನ ಜಂಘಾಬಲವೇ ಉಡುಗಿಹೋಯಿತು. ಯಾರ ಮೂಲಕವೋ ಪ್ರೈವೇಟ್‌ ನರ್ಸಿಂಗ್‌ಹೋಮ್ ಸಂಪರ್ಕಿಸಿ ಗರ್ಭಪಾತಕ್ಕೆ ಪ್ರಯತ್ನಿಸಿದ್ದಾಯ್ತು.

ಆದರೆ ವೈದ್ಯರು ಈಗಾಗಲೇ ಕಾಲ ಮೀರಿದೆ, ತಾಯಿಯ ಜೀವಕ್ಕೆ ಅಪಾಯ ಎಂದು ಅದಕ್ಕೆ ಆಸ್ಪದ ಕೊಡಲಿಲ್ಲ. ಅದೇ ಕೊರಗಿನಲ್ಲಿ ನಾನು ಮಾರನೇ ದಿನ ಕಾಲೇಜಿಗೆ ಹೋದಾಗ, ನನ್ನನ್ನು ಮನೆ ತಲುಪಿಸಿದ ವ್ಯಕ್ತಿ ಸಿಕ್ಕಿದ. ಅದೇ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ.

ನನ್ನ ಪರಸ್ಥಿತಿ ಅವನ ಎದುರಿಗೆ ಹೇಳಲೇ ಬೇಕಾಯಿತು. ಕೇಳಿ ವಿಚಲಿತನಾದ ಆತ ಒಂದೇ ಕ್ಷಣದಲ್ಲಿ ನಿರ್ಧಾರ ಕೈಗೊಂಡು, ನನ್ನನ್ನು ಮದುವೆಯಾಗುವುದಾಗಿ ತಿಳಿಸಿದ! ನೀರಲ್ಲಿ ಮುಳುಗುತ್ತಿದ್ದವಳಿಗೆ ಯಾರೋ ಕೈ ನೀಡಿ ಬದುಕಲು ದಡ ತಲುಪಿಸಿದಂತಾಯಿತು.

ಅಂದು ಸಂಜೆ ಮನೆಗೆ ಬಂದು ವಿಷಯ ತಿಳಿಸಿದಾಗ, ತಾಯಿ ತಂದೆ ಕಣ್ಣೀರು ತುಂಬಿಕೊಂಡರು. ಮುಂದಿನ ವಾರದಲ್ಲಿ ನಮ್ಮ ಹಳ್ಳಿಯ ದೇವಾಲಯದಲ್ಲಿ ಕೆಲವೇ ಆಪ್ತರೆದುರು ನನ್ನ ಮದುವೆ ನಡೆಯಿತು. ಅನಾಥವಾಗಿ ಆಶ್ರಮದಲ್ಲಿ ಬೆಳೆದಿದ್ದ ಆತ ನನ್ನ ಕುಟುಂಬವನ್ನೇ ತನ್ನದಾಗಿಸಿಕೊಂಡರು. ಅವರೇ ನಿನ್ನ….. ತಂದೆ! ಅವರ ಸಂಸ್ಕಾರ ಎಷ್ಟು ಹಿರಿದಾದುದು ಎಂದರೆ ಅಂದಿನಿಂದ ಇಂದಿನವರೆಗೂ ಎಂದೂ ಆ ಬಗ್ಗೆ ಒಂದೇ ಒಂದು ಸಲ ಪ್ರಸ್ತಾಪಿಸಿದವರಲ್ಲ.

ಯಾವುದೋ ಒಂದು ಪಾರ್ಟ್‌ ಟೈಂ ಕೆಲಸಕ್ಕೆ ಸೇರಿ ಇಬ್ಬರೂ ಅದೇ ಕೋಣೆಯಲ್ಲಿ ಸಂಸಾರ ಶುರು ಮಾಡಿದೆವು. ಮುಂದೆ ನೀನು ಹುಟ್ಟಿದ ಮೇಲೆ ನಮ್ಮದು ಪರಿಪೂರ್ಣ ಕುಟುಂಬ ಎನಿಸಿತು. ನಿನ್ನ ತಂದೆ ಆಸರೆ ಸಿಗದೆ ಹೋಗಿದ್ದರೆ….. ನಾನು ಏನಾಗುತ್ತಿದ್ದೆನೋ ನನಗೆ ಗೊತ್ತಿಲ್ಲ.

ನಾನು ನಿನಗೆ ಈ ಪತ್ರದ ಮೂಲಕ ತಿಳಿಸಿರುವುದು ನನ್ನ ಬದುಕಿನ ಕರಾಳ ಅಧ್ಯಾಯ. ಈ ಮೂಲಕ ಮುಂದೆ ಯಾವುದೇ ದುಷ್ಟ ಗೆಳೆಯರ ಪ್ರಭಾವಕ್ಕೆ, ಕುಸಂಗಕ್ಕೆ ನೀನು ಬರಬಾರದೆಂದೇ, ನಿನ್ನ ವ್ಯಕ್ತಿತ್ವವನ್ನು ಸದೃಢ ಮಾಡಿಕೊಳ್ಳಲೆಂದೇ ಎಲ್ಲಾ ವಿವರವಾಗಿ ತಿಳಿಸಿರುವೆ. ಮಾನಸಿಕವಾಗಿ ನೀನು ಇನ್ನೂ ಬಲಿಷ್ಠನಾಗಬೇಕೆಂದು ಬಯಸುವೆ.

ನನ್ನ ಬಗ್ಗೆ ನಿನ್ನ ಧೋರಣೆ ಹೇಗೆ ಬದಲಾಗುವುದೋ ತಿಳಿಯದು. ಏನೇ ಆಗಲಿ, ಹುಡುಗಿಯ ಬಗ್ಗೆ ನಿನಗೆ ಸದಾ ಗೌರವಾದರ ತುಂಬಿರಲಿ ಎಂದು ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದೇನೆ. ನಿನಗೇನಾದರೂ ಹೇಳಬೇಕೆನಿಸಿದರೆ ಪತ್ರ ಬರೆಯಲು ಮರೆಯಬೇಡ.

ಇಂತಿ ನಿನ್ನ ಪ್ರೀತಿಯ ಅಮ್ಮ .”

Tags:
COMMENT