ನೀಳ್ಗಥೆ – ಚಂದ್ರಿಕಾ ಸುಧೀಂದ್ರ

ಕಳೆದ ಸಂಚಿಕೆಯ ಕಥೆ:

ಮೇಘನಾ ಮಧ್ಯಮ ವರ್ಗದ ಕುಟುಂಬದ ಹಿರಿಮಗಳು. ತಾನು ದುಡಿದು ಹೆತ್ತವರಿಗೆ ನೆರವಾಗಬೇಕೆಂಬುದು ಅವಳ ಉದ್ದೇಶ. ತಮ್ಮ ಜವಾರಬ್ದಾರಿ ಮುಗಿಸಿಕೊಳ್ಳಲು ಆತುರದಲ್ಲಿ ಅವಳ ತಂದೆ ತಾಯಿ ಮೇಘನಾಳನ್ನು ಶ್ರೀಧರನಿಗೆ ಕೊಟ್ಟು ಮದುವೆ ಮಾಡಿದರು. ಒಲ್ಲದ ಹೆಂಡತಿಯ ಜೊತೆ ಬಾಳಲು ಒಪ್ಪದ ಅವನು, ಹಸುಗೂಸಿನೊಂದಿಗೆ ಅವಳನ್ನು ನಿರ್ಲಕ್ಷಿಸಿ ಹೊರಟುಹೋದ. ತವರಿನವರೂ ಅವಳ ಕೈ ಬಿಟ್ಟರು. ಮುಂದೆ ಅವಳ ಮನೆ ಓನರ್‌ ಸುಶೀಲಮ್ಮ ಅವಳಿಗೆ ಆಧಾರವಾದರು. ಗೆಳತಿಯ ನೆರವಿನಿಂದ ಖಾಸಗಿ ಕೆಲಸಕ್ಕೆ ಸೇರಿದ ಅವಳ ಬದುಕಲ್ಲಿ ಆಕಸ್ಮಿಕವಾಗಿ ಗೌರವ್‌ನ ಪ್ರವೇಶವಾಯಿತು. ಮುಂದೆ ಅವಳ ಬದುಕು….?

…..ಮುಂದೆ ಓದಿ

ತಾನು ಪ್ರೇಮಿಸಿದ ಹುಡುಗಿ ಪರಿಣಿತಾ ಆಕಸ್ಮಿಕ ದುರಂತದಲ್ಲಿ ಸತ್ತಾಗ ಗೌರವ್ ಮುಂದೆ ಒಂಟಿಯಾಗಿಯೇ ಇರಲು ನಿಶ್ಚಯಿಸಿದ. ಅವನ ಬದುಕಲ್ಲಿ ಮೇಘನಾ ಕಾಣಿಸಿದಾಗ, ಅವಳನ್ನು ಮದುವೆಯಾಗಲು ಬಯಸಿದ. ಈಗಾಗಲೇ ಅನಘಾಳ ತಾಯಿಯಾಗಿದ್ದ ಅವಳು ಬೇರೆ ಮಗು ಬೇಡವೆಂದಳು. ಮುಂದೆ ಇವರಿಬ್ಬರ ವೈವಾಹಿಕ ಜೀವನ…..? ಮೇಘನಾಳ ಬದುಕಲ್ಲಿ ಭರವಸೆಯ ಬೆಳಕು ಮೂಡಿತೇ……?

ಜಗದೀಶ್‌ ಲಲಿತಮ್ಮ ದಂಪತಿಗಳಿಗೆ ಗೌರವ್ ಹಾಗೂ ಸಹನಾ ಇಬ್ಬರೇ ಮಕ್ಕಳು. ಚಿಕ್ಕಮಗಳೂರಿನಲ್ಲಿ ವಾಸವಿದ್ದ ಅವರು ಅಗರ್ಭ ಶ್ರೀಮಂತರು.

ಅಲ್ಲಿದ್ದ ಎಸ್ಟೇಟ್‌ನ್ನು ಮಾರಿ ಬಂದ ದುಡ್ಡಿನಲ್ಲಿ ದೊಡ್ಡ ಉದ್ಯಮವನ್ನು ಸ್ಥಾಪಿಸಿ ಮಗ ಗೌರವ್‌ನನ್ನು ಅಲ್ಲಿಯ ಮುಖ್ಯಸ್ಥನಾಗಿ ನೇಮಿಸಿದರು. ಗೌರವ್ ಬಹಳ ಬುದ್ಧಿವಂತನಾಗಿದ್ದ. ಫ್ಯಾಕ್ಟರಿಯ ಬಗ್ಗೆ ಹೆಚ್ಚಿನ ಅನುಭವ ಹೊಂದಿದ್ದ ಅವನು ಹೆಚ್ಚಿನ ಜವಾಬ್ದಾರಿಯೊಂದಿಗೆ ಸಮರ್ಪಕವಾಗಿ ನೋಡಿಕೊಳ್ಳುತ್ತಿದ್ದ.

ಗೌರವ್‌ಗೆ ತಂಗಿ ಸಹನಾಳನ್ನು ಕಂಡರೆ ಅತಿಯಾದ ಪ್ರೀತಿ ಮಮತೆ. ಅವಳನ್ನು ಆಗಾಗ್ಗೆ ರೇಗಿಸಿ, ಅಳಿಸುವುದು, ಮತ್ತೆ ನಗಿಸಿ ಅವಳಿಗೆ ಗಿಫ್ಟ್ ಗಳನ್ನು ಕೊಟ್ಟು ಅವಳನ್ನು ಸಮಾಧಾನಪಡಿಸುವುದು ಅವನ ಸ್ವಭಾವ.

ಅಂದು ಜಗದೀಶ್‌ ಹೊಸ ಮನೆಯ ಗೃಹಪ್ರವೇಶ ಸಮಾರಂಭ. ಅಂದು ಗಣ್ಯ ವ್ಯಕ್ತಿಗಳು, ಉದ್ದಿಮೆಯ ಹಲವರು, ಬಂಧು ಬಳಗದವರು ಆಗಮಿಸಿದ್ದರು. ಸಹನಾಳ ಕಾಲೇಜು ಗೆಳತಿಯರು, ಗೌರವ್‌ನ ಆತ್ಮೀಯ ಗೆಳೆಯರು ಆಗಮಿಸಿದ್ದರು. ಹೊಸ ಮನೆ ಹೊಸ ಕಳೆಯಿಂದ ಕಂಗೊಳಿಸುತ್ತಿತ್ತು. ಮನೆ ಮುಂದುಗಡೆ ವಿಶಾಲವಾದ ಲಾನ್‌ನಲ್ಲಿ ಎಲ್ಲರಿಗೂ ಔತಣ ಕೂಟ ಏರ್ಪಡಿಸಲಾಗಿತ್ತು.  ಅಷ್ಟರಲ್ಲಿ ಎದುರಿನಿಂದ ಜೂಸ್‌ ಗ್ಲಾಸ್‌ ಹಿಡಿದು ಬರುತ್ತಿದ್ದ ಮುದ್ದಾದ ಹುಡುಗಿ ನೆಲದ ಮೇಲಿನ ಕಾರ್ಪೆಟ್‌ ಎಡವಿ ಬೀಳುವುದರಲ್ಲಿದ್ದಳು. ಅವಳು ಬೀಳುವಷ್ಟರಲ್ಲಿ ಎದುರಿಗೆ ಬಂದ ಗೌರವ್ ಅವಳ ತೋಳು ಹಿಡಿದು ನಿಲ್ಲಿಸಿದ. ಅವಳ ಕೈಯಲ್ಲಿದ್ದ ಜೂಸ್‌ ಗೌರವ್‌ನ ಮೇಲೆ ಬಿದ್ದಿತು. ಸಂಕೋಚದಿಂದ ಸಾರಿ ಎಂದ ಅವಳನ್ನು ಸಹನಾ ಅಣ್ಣನಿಗೆ ತನ್ನ ಗೆಳತಿ ಪರಿಣಿತಾ ಎಂದು ಪರಿಚಯಿಸಿದಳು. ಸದ್ಯ ಕೆಳಗೆ ಬೀಳಲಿಲ್ಲವಲ್ಲಾ ಎಂದ ಅವನೆಡೆಗೆ ನೋಡಿದಳು. ಅವಳ ಕೆಂಪಾದ ತೋಳನ್ನು ನೋಡಿದ ಗೌರವ್ ಸಾರಿ ಎಲ್ಲಿ  ಬೀಳುತ್ತೀರೋ ಎಂದು ಸ್ವಲ್ಪ ಗಟ್ಟಿಯಾಗಿ ಹಿಡಿದೆ ಎಂದ.

ಪರವಾಗಿಲ್ಲ ಎಂದ ಪರಿಣಿತಾ ಮುಂದೆ ಸಾಗಿದಳು. ಈ ಘಟನೆ ಯಾರೂ ಅಷ್ಟಾಗಿ ಗಮನಿಸಲಿಲ್ಲ. ನಂತರ ಗೌರವ್ ವೀಡಿಯೋ ತೆಗೆಯುತ್ತಾ ಅವಳನ್ನೇ ಫೋಕಸ್‌ ಮಾಡುತ್ತಿದ್ದ. ಅದನ್ನು ಅವಳೂ ಗಮನಿಸಿದ್ದಳು.

ಗೃಹ ಪ್ರವೇಶ ಮುಗಿದರೂ ಗೌರವ್ ಪರಿಣಿತಾಳನ್ನು ಮರೆಯಲಾಗದೆ ತಂಗಿಯ ಬಳಿ ಅವಳ ಬಗ್ಗೆ ವಿಚಾರಿಸಿದ. `ಅವಳಿಗಾಗಿ ಮಾಲೆ ಹಿಡಿದು ಅವರ ಮಾವನ ಮಗ ವಿದೇಶದಲ್ಲಿ ಕಾಯುತ್ತಿದ್ದಾನೆ. ನೀನು ಅವಳ ಕನಸು ಕಾಣದಿರುವುದೇ ಒಳ್ಳೆಯದು,’ ಎಂದರೂ ಏನೋ ಆಕರ್ಷಣೆ, ಏನೋ ಸೆಳೆತ ಅವನನ್ನು ಕಾಡುತ್ತಿತ್ತು.

ಪರಿಣಿತಾ ಕಾಲೇಜಿಗೆ ಹೋಗುವಾಗೆಲ್ಲ ಸಹನಾಳ ಮನೆಗೆ ಬಂದು ಕಾಲ ಕಳೆಯತ್ತಿದ್ದಳು. ಅವಳ ಜೊತೆ ಗೌರವ್ ಸಹ ಕೇರಂ, ಚೆಸ್‌ ಆಡುತ್ತಾ  ಸ್ವಲ್ಪ ಸ್ವಲ್ಪವೇ ಅವಳಿಗೆ ಹತ್ತಿರವಾಗತೊಡಗಿದ.

ಒಮ್ಮೆ ಕಾಲೇಜ್‌ಗೆ ಒಂದು ವಾರ ರಜ ಬಂದಿತೆಂದು ಸಹನಾ ಅಣ್ಣನ ಬಳಿ, `ಅಣ್ಣಾ, ಹೇಗೂ ಒಂದು ವಾರ ಕಾಲೇಜಿಗೆ ರಜ. ನಾನಂತೂ ಎಲ್ಲೂ ಹೋಗಿಲ್ಲ. ಅಪ್ಪ ಅಮ್ಮ ಫ್ರೆಂಡ್ಸ್ ಜೊತೆ ಎಲ್ಲಿಗೂ ಹೋಗಲು ಒಪ್ಪಲ್ಲ. ನಾನು ನೀನೂ ಇಬ್ಬರೂ ಊಟಿಗಾದರೂ ಹೋಗಿ ಬರೋಣಾ ಬಾ,’ ಎಂದಳು.

`ಅಲ್ಲಿಗೆ ಹೋಗುವವರೆಲ್ಲ ಪ್ರೇಮಿಗಳು ಅಥವಾ ಹೊಸದಾಗಿ ಮದುವೆಯಾಗಿ ಹನಿಮೂನ್‌ಗೆ ಹೋಗುವ ಜೋಡಿಗಳು. ನೀನು ಮದುವೆಯಾಗಿ ಗಂಡನ ಜೊತೆ ಹೋಗುವೆಯಂತೆ,’ ಎಂದು ತಂಗಿಯನ್ನು ರೇಗಿಸಿದ.

`ಹಾಗಂತ ಏನಾದರೂ ರೂಲ್ಸಾ? ಪರಿಣಿತಾಳೂ ಎಲ್ಲಿಗಾದರೂ ಹೋಗೋಣ ಎನ್ನುತ್ತಿದ್ದಾಳೆ. ಯಾಕೆ ಮೂವರೂ ಹೋಗಿ ಬರಬಾರದು?’ ಎಂದಳು.

ಪರಿಣಿತಾಳ ಹೆಸರು ಕೇಳುತ್ತಿದ್ದಂತೆ ಗೌರವ್‌ಗೆ ಉತ್ಸಾಹ ಮೂಡಿ ಆಗಲಿ ಎಂದು ಒಪ್ಪಿದ. ಮಗಳ ಜೊತೆಗೆ ಗೌರವ್ ಸಹ ಹೋಗುತ್ತಾನೆಂದು ತಿಳಿದ ತಂದೆ ತಾಯಿ ಬೇಡವೆನ್ನಲಿಲ್ಲ. ಗಂಡು ಹುಡುಗ ಜೊತೆಯಲ್ಲಿರುತ್ತಾನಲ್ಲ ಎನ್ನುವ ಧೈರ್ಯದಿಂದ ಒಪ್ಪಿದರು.

ಮೂವರೂ ಕಾರಿನಲ್ಲಿ ಹೊರಟರು. ಮುಂಚಿತವಾಗಿ ಅಲ್ಲಿ ತಂಗಲು ಬೇರೆ ಬೇರೆ ಕಾಟೇಜ್‌ಗಳನ್ನು ಗೌರವ್ ಬುಕ್‌ ಮಾಡಿದ್ದ. ಏಕೆಂದರೆ ಅವರಿಬ್ಬರ ಜೊತೆ ತಾನು ಒಂದೇ ರೂಮಿನಲ್ಲಿ ಇದ್ದರೆ ಪರಿಣಿತಾ ತಪ್ಪು ತಿಳಿಯಬಹುದೆಂದು ಅರಿತು ಬೇರೆ ಬೇರೆ ತಂಗಲು ಏರ್ಪಡಿಸಿದ್ದ. ದಾರಿಯುದ್ದಕ್ಕೂ ತಂಗಿಯನ್ನು ರೇಗಿಸುವುದರ ಜೊತೆಗೆ ತನ್ನ ಇಂಗಿತವನ್ನು ಪರಿಣಿತಾಳಿಗೆ ಅರ್ಥವಾಗುವಂತೆ ರೇಗಿಸುತ್ತಿದ್ದ. ಗೌರವ್ ತನ್ನನ್ನು ಪ್ರೀತಿಸುತ್ತಿರುವನೆಂದು ಪರಿಣಿತಾಳಿಗೂ ಅರ್ಥವಾಯಿತು.

ಎಲ್ಲರೂ ರೂಮಿಗೆ ಬಂದು ವಿಶ್ರಾಂತಿ ತೆಗೆದುಕೊಂಡರು. ಮರುದಿನ ಬೆಳಗ್ಗೆ ಮೂವರೂ ಅಲ್ಲಿಯ ರಮಣೀಯ ಸ್ಥಳಗಳನ್ನು ನೋಡಿ ಸಂತಸಪಟ್ಟರು. ಆಕರ್ಷಣೀಯ ಸ್ಥಳಗಳಲ್ಲಿ ವಿವಿಧ ಭಂಗಿಗಳಲ್ಲಿ ಫೋಟೋ, ವೀಡಿಯೋ ತೆಗೆಸಿಕೊಂಡರು.

ಹತ್ತಿರದ ಹೋಟೆಲ್‌ಗೆ ಹೋಗಿ ತಿಂಡಿಯ ಜೊತೆ ಗೌರವ್ ಜೂಸ್‌ ಆರ್ಡರ್‌ ಮಾಡಿ, ತಂಗಿಗೆ ಹೇಳಿದ, `ಸಹನಾ ಅದೇನೋ ಇತ್ತೀಚೆಗೆ ಜೂಸ್‌ ಅಂದರೆ ನನಗೆ ಬಹಳ ಇಷ್ಟ,’ ಎಂದ.

ಸಹನಾಗೆ ಇವರಿಬ್ಬರ ಜೂಸ್‌ ಕಥೆ ತಿಳಿಯದೆ, `ಈಪಾಟಿ ಚಳಿಯ ವಾತಾರಣ. ಈಗ ನಿನಗೆ ಜೂಸ್‌ನ ಅವಶ್ಯಕತೆ ಇದೆಯಾ?’ ಎಂದಾಗ ಗೌರವ್ ಪರಿಣಿತಾಳೆಡೆಗೆ ನೋಡಿದ. ಕೆಂಪಾದ ಅವಳ ಮುಖವನ್ನು ನೋಡಿ ಅವಳ ಕಣ್ಣಲ್ಲಿ ತನ್ನ ದೃಷ್ಟಿ ಸೇರಿಸಿದ.

ಮಾರನೆಯ ದಿನ ಸಹನಾ ತಲೆನೋವೆಂದು ಹೊರೆಗಲ್ಲೂ ಬರುವುದಿಲ್ಲ ಎಂದು ರೂಮಿನಲ್ಲೇ ಉಳಿದಳು. ಗೌರವ್, ಪರಿಣಿತಾ ಇಬ್ಬರೂ ಬಟಾನಿಕಲ್ ಗಾರ್ಡನ್‌ಗೆ ಬಂದು ಹುಲ್ಲು ಹಾಸಿನ ಮೇಲೆ ಕುಳಿತರು. `ನಾನು ನಿನ್ನನ್ನು ತುಂಬಾ ರೇಗಿಸುತ್ತಿದ್ದೇನೆಂದು ನನ್ನ ಮೇಲೆ ಕೋಪಾನಾ?’ ಎಂದು ಪರಿಣಿತಾಳನ್ನು ಕೇಳಿದ.

`ಖಂಡಿತಾ ಇಲ್ಲ. ನಿಮ್ಮ ಮನಸ್ಸಿನ ಭಾವನೆ, ನನಗೆ ಅರ್ಥವಾಗುತ್ತಿದೆ. ನೀವು ನಿಮ್ಮ ಪ್ರೀತಿಯನ್ನು ನನ್ನ ಬಳಿ ನೇರವಾಗಿ ಹೇಳುತ್ತಿದ್ದೀರಾ… ನನಗೆ ಹೇಳಲಾಗುತ್ತಿಲ್ಲ,’ ಎಂದಳು.

ಅವಳೂ ತನ್ನನ್ನು ಪ್ರೀತಿಸುತ್ತಿರುವುದನ್ನು ಅರಿತ ಗೌರವ್ ಭಾವೋದ್ವೇಗದಿಂದ ಅವಳ ಕೈಹಿಡಿದು, `ನಾವಿಬ್ಬರೂ ಈ ಜಾಗಕ್ಕೆ ಬಂದು ಒಬ್ಬರನ್ನೊಬ್ಬರು ಮೆಚ್ಚಿರುವ ಇಂಗಿತ ವ್ಯಕ್ತಪಡಿಸುವ ಅವಕಾಶ ಸಿಕ್ಕಿತು. ಗುಡ್‌ ಮೆಮೋರೆಬಲ್ ಮೊಮೆಂಟ್‌,’ ಎಂದ. ಇಬ್ಬರೂ ಖುಷಿಯಾಗಿ, ಜೊತೆಯಾಗಿ ಬಂದಾಗ ಸಹನಾ, ಪರಿಣಿತಾಳನ್ನು ರೇಗಿಸುತ್ತಾ, `ಏನಮ್ಮಾ ಮಿಕ ಬಲೆಗೆ ಬಿತ್ತಾ?’ ಎಂದಳು.

`ಹೋಗೇ ಏನೇನೋ ಹೇಳಬೇಡ. ನಾನು ಊರಿಗೆ ಹೋಗಿ ಈ ವಿಚಾರ ನಮ್ಮ ತಂದೆ ತಾಯಿಗೆ ತಿಳಿಸಬೇಕು. ನನಗೆ ನನ್ನ ಮಾವನ ಮಗ ಇಷ್ಟವಿಲ್ಲ. ಬಹುಶಃ ಮನೆಯಲ್ಲಿ ನನ್ನ ಅಭಿಪ್ರಾಯ ಕೇಳಿದ ತಕ್ಷಣ ಸ್ವಲ್ಪ ಘರ್ಷಣೆಯಾಗಬಹುದು. ಏನು ಮಾಡುವುದು?’ ಎಂದಳು.

ಪರಿಣಿತಾ ಊಟಿಯಿಂದ ಉತ್ಸಾಹದಿಂದ ಬಂದಳು. ತಾಯಿಗೆ ಅಲ್ಲಿ ಕಾಲ ಕಳೆದ ವಿಚಾರ, ಅಲ್ಲಿಯ ರಮಣೀಯ ದೃಶ್ಯಗಳು ಎಲ್ಲವನ್ನೂ ವರ್ಣಿಸಿ ತನ್ನ ಹಾಗೂ ಗೌರವ್ ಬಗ್ಗೆ ತಿಳಿಸಿ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡುತ್ತಿರುವ ಬಗ್ಗೆ ಸಹ ತಿಳಿಸಿದಳು. ತಂದೆ ತಾಯಿ ಮೊದಲು ಇಷ್ಟಪಡಲಿಲ್ಲ. ಪರಿಣಿತಾಳ ಹಠಕ್ಕೆ ಸೋತು ಗೌರವ್‌ನನ್ನು ಮನೆಗೆ ಕರೆತರಲು ತಿಳಿಸಿದರು.

ಗೌರವ್ ಮನೆಗೆ ಬಂದಾಗ ಅವನೊಂದಿಗೆ ಇಬ್ಬರೂ ಹರ್ಷಚಿತ್ತರಾಗಿ ಮಾತನಾಡುತ್ತಾ ಅವನ ಗುಣ, ನಡವಳಿಕೆಯನ್ನು ನೋಡಿ ತಮ್ಮ ಮಗಳು ಇವನಿಗೆ ಮಾರು ಹೋಗಿರುವುದು ತಪ್ಪಲ್ಲವೆನಿಸಿ ಮನಸಾರೆ ಇಬ್ಬರೂ ಒಪ್ಪಿಗೆ ಕೊಟ್ಟರು.

ಮುಂದಿನ ತಿಂಗಳು ನಿಶ್ಚಿತಾರ್ಥವೆಂದು ಗೊತ್ತುಪಡಿಸಿದರು. ಇಬ್ಬರೂ ತಿರುಗಾಡದ ಜಾಗವಿಲ್ಲ, ಹೋಗದ ಹೋಟೆಲ್‌, ಪಾರ್ಕ್‌ಗಳಿಲ್ಲ. ಗೌರವ್ ಪರಿಣಿತಾ ಇಬ್ಬರೂ ಪಾರ್ಕ್‌, ಹೋಟೆಲ್‌, ಸಿನಿಮಾಗಳಿಗೆ ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದರೂ ಮನೆಯಲ್ಲಿ ಯಾರೂ ಆಕ್ಷೇಪಿಸುತ್ತಿರಲಿಲ್ಲ.

ಅಂದು ಭಾನುವಾರ ಗೌರವ್ ಬಳಿ ಬಂದ ಪರಿಣಿತಾ, `ನಮ್ಮ ಮನೆಯವರೆಲ್ಲ ನಮ್ಮ ಚಿಕ್ಕಮ್ಮನ ಮಗಳ ಮದುವೆಗೆ ಎಲ್ಲರೂ ಹೋಗಿದ್ದಾರೆ. ನನಗೆ ನಿನ್ನನ್ನು ಮಿಸ್‌ ಮಾಡಿಕೊಳ್ಳಲು ಇಷ್ಟವಿಲ್ಲದೆ ಧಾರೆ ವೇಳೆಗೆ ಬರುತ್ತೇನೆಂದು ಹೇಳಿದೆ. ಪಪ್ಪಾ, ನನಗೆ ಕಾರು ಬಿಟ್ಟು ಹೋಗಿದ್ದಾರೆ. ನಾಡಿದ್ದು ಬಂದುಬಿಡುತ್ತೇನೆ,’ ಎಂದಳು.

`ಒಳ್ಳೆಯ ಕೆಲಸ ಮಾಡಿದೆ. ಆದರೆ ಇನ್ನು 2 ದಿನ ನಿನ್ನನ್ನು ನೋಡದೆ ಹೇಗಿರುವುದು….?’ ಎಂದು ಗೌರವ್ ಅವಳ ತುಂಬುಗೆನ್ನೆಯನ್ನು ಚಿವುಟಿ ಮನಸ್ಸಿಲ್ಲದ ಮನಸ್ಸಿನಲ್ಲೇ ಕಳುಹಿಸಿಕೊಟ್ಟ.

ಆದರೆ ವಿಧಿಯ ಆಟದ ಮುಂದೆ ಮಾನವನದೇನೂ ನಡೆಯುವುದಿಲ್ಲ ಎನ್ನುವಂತೆ ಪರಿಣಿತಾಳ ಕಾರಿಗೆ ಎದುರಿನಿಂದ ಬಂದ ಲಾರಿಯೊಂದು ಅಪ್ಪಳಿಸಿ ಕಾರಿನಲ್ಲಿದ್ದ ಡ್ರೈವರ್‌ ಮತ್ತು ಪರಿಣಿತಾ ಇಬ್ಬರೂ ಸ್ಥಳದಲ್ಲೇ ಅಸುನೀಗಿದರು.

ಈ ದುರಂತ ವಾರ್ತೆ ತಿಳಿದ ಎರಡೂ ಮನೆಯವರಿಗೂ ತಡೆದುಕೊಳ್ಳಲಾರದ ಹೊಡೆತ. ಗೌರವ್‌ಗಂತೂ ಈ ಶಾಕ್‌ನಿಂದ ಹೊರಬರಲು ಕೆಲವು ತಿಂಗಳುಗಳೇ ಹಿಡಿಯಿತು. ಅವನಿಗೆ ಯಾರಾದರೂ ಮದುವೆಯ ಬಗ್ಗೆ ಮಾತಾಡಿದರೆ ಆ ಜಾಗ ಬಿಟ್ಟು ಬೇರೆಡೆಗೆ ಹೋಗಿಬಿಡುತ್ತಿದ್ದ. ಮನೆಯಲ್ಲಿ ಯಾರೂ ದುರಂತದ ಬಗ್ಗೆ ಪರಿಣಿತಾಳ ಬಗ್ಗೆ ಮಾತಾಡುವ ಹಾಗಿರಲಿಲ್ಲ.

ಈ ಮಧ್ಯೆ ಸಹನಾಳ ಮದುವೆ ನಿಶ್ಚಯವಾಗಿ ಅವಳು ಗಂಡನ ಮನೆಗೆ ಹೋದ ಮೇಲಂತೂ ಗೌರವ್‌ಗೆ ಒಂಟಿತನ ಹೆಚ್ಚಾಗಿ ಕಾಡಲಾರಂಭಿಸಿತು. ಸಹನಾಳಿಗೆ ಮಗು ಹುಟ್ಟಿತು. ಅವಳ ಮಗಳು ಪ್ರೀತಿಯನ್ನು ನೋಡಲು ಆಗಾಗ್ಗೆ ಅವರ ಮನೆಗೆ ಹೋಗಿ ಮಗುವಿನೊಂದಿಗೆ ಕಾಲ ಕಳೆಯುವುದರ ಮೂಲಕ ತನ್ನ ಹಳೆಯ ನೆನಪಿನಿಂದ ಸ್ವಲ್ಪ ಸ್ವಲ್ಪವಾಗಿ ಹೊರಬರಲಾರಂಭಿಸಿದ ಗೌರವ್.  ಆದಾದ ನಂತರ ಗೌರವ್‌ಗೆ ಯಾವ ಹೆಣ್ಣಿನ ಮೇಲೂ ಆಕರ್ಷಣೆ ಬರಲಿಲ್ಲ. ಅವನ ಮನಸ್ಸು ಚಂಚಲವಾಗಲಿಲ್ಲ. ಆದರೆ ಯಾಕೋ ಏನೋ ಮೇಘನಾಳನ್ನು ಕಂಡಾಗಿನಿಂದ ಒಂದು ರೀತಿಯ ಸೆಳೆತವಿದೆ ಎನಿಸಿತು. ಕೆಲಸದ ಕಡೆ ಗಮನ ಕೇಂದ್ರೀಕರಿಸಲಾಗದೆ ಒದ್ದಾಡುವಂತಾಯಿತು.

ಬಹಳ ಯೋಚಿಸಿದ ಗೌರವ್ ಒಂದು ನಿರ್ಧಾರಕ್ಕೆ ಬಂದು ಮೇಘನಾಳ ಆತ್ಮೀಯ ಗೆಳತಿ ಭಾವನಾಳ ಬಳಿ ತನ್ನ ಮನದ ಅಭಿಪ್ರಾಯವನ್ನು ತಿಳಿಸಿ, ಮೇಘನಾ ಬಳಿ ಮಾತನಾಡಲು ಹೇಳಿದ.

“ಆಗಲಿ ಗೌರವ್, ನಾನು ಸಮಯ ನೋಡಿ ಅವಳ ಬಳಿ ಮಾತನಾಡುತ್ತೇನೆ ಏಕೆಂದರೆ ಅವಳು ಬಹಳ ಸೂಕ್ಷ್ಮ ಸ್ವಭಾವದವಳು,” ಎಂದಳು ಭಾವನಾ.

ಮೇಘನಾಳ ಬಳಿ ನೇರವಾಗಿ ಮಾತನಾಡಲು ಭಾವನಾ ಆ ದಿನ ಮಧ್ಯಾಹ್ನ ಊಟಕ್ಕೆ ಅವಳೊಂದಿಗೆ ಕುಳಿತಳು. ಊಟ ಮಾಡುತ್ತಾ ಕಷ್ಟಸುಖಗಳ ವಿನಿಮಯ ಮಾಡಿಕೊಳ್ಳುತ್ತಾ, ಆಫೀಸ್‌ ವಿಚಾರವನ್ನೆಲ್ಲಾ ಇಬ್ಬರೂ ಹಂಚಿಕೊಂಡರು.

ಇದೇ ಸಮಯವೆಂದುಕೊಂಡ ಭಾವನಾ, “ಅನಘಾ ಹೇಗಿದ್ದಾಳೆ? ತುಂಬಾ ದಿನವಾಯಿತು ಅವಳನ್ನು ನೋಡಿ,” ಎನ್ನುತ್ತಾ ಮಾತಿಗೆ ಪೀಠಿಕೆ ಹಾಕಿದಳು.

“ಎಷ್ಟು ದಿನಾ ಹೀಗೆ ದುಡಿಯುತ್ತೀ ಮೇಘನಾ? ಒಂಟಿಯಾಗೇ ಇರಲು ಸಾಧ್ಯವಾ? ನಿನಗಿನ್ನೂ ಚಿಕ್ಕ ವಯಸ್ಸು. ಅನಘಾಳಿಗೆ ತಾಯಿ ಮಮತೆಯಂತೆ ತಂದೆಯ ಪ್ರೀತಿ ಆಸರೆ ಬೇಡವಾ? ನೀನೇಕೆ ಮತ್ತೊಂದು ಮದುವೆ ಆಗಬಾರದು?” ಎಂದು ಮೇಘನಾಳನ್ನು ಕೇಳಿದಳು ಭಾವನಾ.

“ಏನು ತಮಾಷೆ ಮಾಡುತ್ತಿದ್ದೀಯಾ ಭಾವನಾ? ನನ್ನ ಪರಿಸ್ಥಿತಿ ಗೊತ್ತಿದ್ದೂ ಹೀಗೆ ಕೇಳ್ತೀಯಾ?” ಎಂದಳು ಮೇಘನಾ.

“ಏಕಾಗಬಾರದು? ನಿನ್ನ ಗಂಡನೇ ಬೇರೊಂದು ಮದುವೆಯಾಗಿ ಅವನ ಜೀವನ ಅವನು ನೋಡಿಕೊಂಡಿರುವಾಗ, ನಿನ್ನ ಜೀವನ ಹೀಗೆ ಒಂಟಿಯಾಗಿ ಸಾಗಬೇಕಾ? ನಿನ್ನನ್ನು ಮದುವೆಯಾಗುತ್ತೇನೆಂದು ಯಾರೋ ಮುಂದೆ ಬಂದಿರುವಾಗ…..”

ಅವಳ ಮಾತನ್ನು ಅರ್ಧದಲ್ಲೇ ತಡೆಯುತ್ತಾ, “ಏನು ಹೇಳುತ್ತಿದ್ದೀಯಾ ಭಾವನಾ?” ಎಂದು ಆಶ್ಚರ್ಯದಿಂದ ನೋಡಿದಳು ಮೇಘನಾ.

“ಹೌದು ಮೇಘನಾ, ಗೌರವ್ ನನ್ನ ಬಳಿ ಬಂದು ನಿನ್ನನ್ನು ಮದುವೆಯಾಗುವ ಬಗ್ಗೆ ತಿಳಿಸಿ ನಿನ್ನ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ,” ಎಂದಳು.

“ಬೇಡ ಭಾವನಾ… ಮದುವೆ ಹುಡುಗಾಟವಲ್ಲ. ನನ್ನ ಮಗಳಿಗೆ ಇದುವರೆಗೂ ನಿನ್ನ ತಂದೆ ವಿದೇಶದಲ್ಲಿದ್ದಾರೆ ಎಂದು ಹೇಳಿ ನಂಬಿಸಿದ್ದೇನೆ. ಈಗ ಅವಳಿಗೆ ತಿಳಿವಳಿಕೆ ಬಂದಿದೆ. ಎಲ್ಲ ಅರ್ಥವಾಗುತ್ತದೆ. ನನ್ನ ತಂದೆ ನಮ್ಮಿಬ್ಬರಿಂದ ದೂರವಾಗಿದ್ದಾರೆಂದು ಹೇಳಿ ಮತ್ತೆ ಮದುವೆಯಾಗಿ ಮತ್ತೊಂದು ಹಳ್ಳಕ್ಕೆ ಬೀಳಲಾ…? ನನಗೆ ಮತ್ತೆ ವೈವಾಹಿಕ ಜೀವನ ನಡೆಸುವ ಯಾವ ಆಸಕ್ತಿಯೂ ಇಲ್ಲ,” ಎಂದು ಖಚಿತವಾಗಿ ಹೇಳಿದಳು.

“ನಿನಗೆ ಹಾಗನ್ನಿಸಿರಬಹುದು. ಅನಘಾಳ ಬಗ್ಗೆ ಯೋಚಿಸು. ನಿನ್ನ ಮಗಳಿಗೆ ತಂದೆಯ ಸ್ಥಾನ ನೀಡಲು ಗೌರವ್ ಉದಾರ ಮನಸ್ಸಿನಿಂದ ಒಪ್ಪಿರುವಾಗ ನೀನೇಕೆ ಮದುವೆಯಾಗಿ ನಿನ್ನ ಮಗಳ ಭವಿಷ್ಯ ಹಸನಾಗಲು ಅವಕಾಶ ಕೊಡಬಾರದು? ಚೆನ್ನಾಗಿ ಯೋಚಿಸು,” ಎಂದಳು ಭಾವನಾ.

ಮೇಘನಾ ಎಲ್ಲಾ ವಿಚಾರವನ್ನು ಸುಶೀಲಮ್ಮನ ಬಳಿ ಹೇಳಿದಳು.“ಇದರಲ್ಲಿ ತಪ್ಪು ಎಂದು ನನಗೆ ಅನ್ನಿಸುತ್ತಿಲ್ಲ. ಮಗಳಿಗೆ ತಂದೆಯ ಪ್ರೀತಿ ಸಿಗುತ್ತದೆ. ನಿನಗೂ ಕಡೆಯವರೆಗೂ ಆಧಾರವಾಗಿ ಆಸರೆಯಾಗುತ್ತದೆ ಎನ್ನುವುದಾದರೆ ಇದಕ್ಕೆ ನನ್ನ ಆಶೀರ್ವಾದ ಸಂಪೂರ್ಣವಾಗಿದೆ,” ಎಂದು ತುಂಬು ಹೃದಯದಿಂದ ಹರಸಿದರು ಸುಶೀಲಮ್ಮ.

ಆ ಭಾನುವಾರ ಗೌರವ್ ಮತ್ತು ಮೇಘನಾ ಪಾರ್ಕ್‌ನಲ್ಲಿ ಭೇಟಿಯಾದರು. ಮೇಘನಾ ತನ್ನ ಅಭಿಪ್ರಾಯ ತಿಳಿಸುತ್ತಾ, “ನೀವು ಭಾವನಾ ಬಳಿ ಹೇಳಿದ್ದೆಲ್ಲ ಕೇಳಿದೆ. ನನ್ನ ಸುಖಕ್ಕಿಂತ ನನ್ನ ಮಗಳಿಗಾಗಿ ನಾನು ಬದುಕಿದ್ದೇನೆ. ಅವಳು ನಿಮ್ಮನ್ನು ತಂದೆ ಎಂದು ಸ್ವೀಕರಿಸಿದರೆ ಮಾತ್ರ ನಿಮ್ಮನ್ನು ಮದುವೆಯಾಗುವ ಬಗ್ಗೆ ತೀರ್ಮಾನಿಸುತ್ತೇನೆ. ಇನ್ನೊಂದು ಮುಖ್ಯ ವಿಚಾರವೆಂದರೆ….. ” ಎಂದು ಹೇಳಲು ಅನುಮಾನಿಸಿದಳು ಮೇಘನಾ.

“ಯಾವುದನ್ನೂ ಮನಸ್ಸಿನಲ್ಲಿಡದೆ ಹೇಳಿದಾಗ ಮಾತ್ರ ಮನಸ್ಸು ಹೃದಯ ನಿರಾಳ. ಯಾವಾಗಲೂ ಮುಚ್ಚು ಮರೆಯಿಲ್ಲದೆ ಮಾತಾಡಿದರೆ ಭವಿಷ್ಯ ರೂಪಿಸಿಕೊಳ್ಳಲು ಹಗುರ,” ಎಂದ ಗೌರವ್.

“ನನಗೆ ಅನಘಾ ಒಬ್ಬಳೇ ಮಗಳಾಗಿರಬೇಕೆಂದು ಆಸೆಪಡುವವಳು ನಾನು. ನೀವು ನನ್ನಿಂದ ಮತ್ತೆ ಮಗುವನ್ನು ಬಯಸಲು ಇಚ್ಛಿಸಿದರೆ….” ಎಂದವಳ ಮಾತನ್ನು ಅರ್ಧದಲ್ಲೇ ತಡದೆ ಗೌರವ್, “ಜೀವನ, ಸಂಸಾರ ಎಂದರೆ ಮಕ್ಕಳು, ಆಸೆ ಅಷ್ಟಕ್ಕೇ ಮೀಸಲಾ ಮೇಘನಾ…? ನಿನ್ನ ಬಿಚ್ಚು ಮನಸ್ಸಿನ ಮಾತಿಗೆ ನಾನು ಹೆಮ್ಮೆಪಡುತ್ತೇನೆ. ನನ್ನ ಅಭಿಪ್ರಾಯದಲ್ಲಿ ನಮ್ಮಿಬ್ಬರ ಭಾವನೆಯನ್ನು ಪರಸ್ಪರ ಹಂಚಿಕೊಳ್ಳಲು ಹೃದಯಗಳೆರಡು ಮಾತ್ರ ಹತ್ತಿರವಾಗಬೇಕು.

“ನನಗೆ ನೀನು, ನಿನಗೆ ನಾನು ಆಸರೆ. ನನ್ನ ಹೃದಯದ ಭಾವನೆಗೆ ನೀನು ಸ್ಪಂದಿಸುತ್ತೀಯ ಎನ್ನುವ ಕಾರಣಕ್ಕೆ ನಾನು ನಿನ್ನನ್ನು ಮನಸಾರೆ ಮೆಚ್ಚಿ ಈ ತೀರ್ಮಾನಕ್ಕೆ ಬಂದೆ. ನಿನ್ನ ಇಚ್ಛೆಯಂತೆ ನಮ್ಮಿಬ್ಬರ ಮಗಳು ಅನಘಾ ಒಬ್ಬಳೇ,” ಎಂದ. ಅವನ ಮಾತಿಗೆ ಮೇಘನಾಳಿಗೆ ಸಂತೋಷವಾಯಿತು.

ಅದೇ ದಿನ ಗೌರವ್ ಕೈಯಲ್ಲಿ ಹಣ್ಣುಗಳು, ಚಾಕ್ಲೆಟ್‌ ಹಿಡಿದು ಮೇಘನಾಳ ಮನೆಗೆ ಬಂದ. ವರಾಂಡದಲ್ಲಿ ಹೋಂವರ್ಕ್‌ ಮಾಡುತ್ತಿದ್ದ ಅನಘಾ ಗೌರವ್‌ನನ್ನು ತಲೆ ಎತ್ತಿ ನೋಡಿದಳು. ಅವಳ ಮುದ್ದು ಮುಖ ಅವನನ್ನು ಆಕರ್ಷಿಸಿತು. ಅಷ್ಟರಲ್ಲಿ ಮೇಘನಾ ಹೊರಗೆ ಬಂದು, “ಬನ್ನಿ ಗೌರವ್,” ಎಂದು ಒಳಗೆ ಕರೆದು ಕುಳಿತುಕೊಳ್ಳಲು ಹೇಳಿ, “ಅನಘಾ, ಈ ಅಂಕಲ್ ನನ್ನ ಜೊತೆ ಕೆಲಸ ಮಾಡುತ್ತಿರುವವರು,” ಎಂದು ಪರಿಚಯಿಸಿದಳು. ಮೊದಲ ಮೊದಲು ಅನಘಾ ಅವನ ಬಳಿ ಮಾತನಾಡಲು ಹಿಂಜರಿದರೂ, ಗೌರವ್ ಅವಳ ಶಾಲೆಯ ವಿಚಾರವೆಲ್ಲ ಕೇಳಿ ಹತ್ತಿರವಾಗತೊಡಗಿದ. ಅಲ್ಲದೆ ಸ್ವೀಟ್ಸ್ ಹಾಗೂ ಅವಳಿಗಿಷ್ಟವಾದ ಡಾಲ್‌, ಗಿಫ್ಟ್ ಗಳನ್ನು ಕೊಟ್ಟು ಅವಳ ಪ್ರೀತಿಯನ್ನು ಗಳಿಸಿದ.

ಮನೆಗೆ ಬಂದಾಗೆಲ್ಲಾ ಅವಳ ಜೊತೆ ಕೇರಂ ಆಡುವುದು. ಅವಳ ಹೋಂವರ್ಕ್‌ ಕೇಳಿ ಮಾಡಿಸಲಾರಂಭಿಸಿದ. ಕ್ರಮೇಣ ಗೌರವ್‌ ಅನಘಾಳಿಗೂ ತುಂಬಾ ಇಷ್ಟವಾಗತೊಡಗಿದ. ಒಂದು ದಿನ ಬಾರದಿದ್ದರೂ,  “ಅಂಕಲ್ ಯಾಕೆ ಬರಲಿಲ್ಲ…?” ಎಂದು ತಾಯಿಯನ್ನು ಕೇಳುತ್ತಿದ್ದಳು.

ಒಮ್ಮೆ ಶಾಲೆಯಲ್ಲಿ ಹಾಡಿನ ಸ್ಪರ್ಧೆ ಇತ್ತು. ಅನಘಾ ಅಮ್ಮನ ಬಳಿ, “ಅಮ್ಮಾ, ಸ್ಕೂಲ್‌ನಲ್ಲಿ ಯಾವಾಗಲೂ ಅಪ್ಪ, ಅಮ್ಮ ಇಬ್ಬರೂ ಬರಬೇಕೆಂದು ಹೇಳುತ್ತಾರೆ. ಆದರೆ ನೀನೊಬ್ಬಳೇ ಯಾವಾಗಲೂ ಬರುತ್ತೀಯ. ಈ ಸಲ ಗೌರವ್ ಅಂಕಲ್‌ನನ್ನು ಕರೆಯುತ್ತೇನೆ ಅವರಿಗೆ ನನ್ನ ಕಂಡರೆ ತುಂಬಾ ಇಷ್ಟ. ಅವರು ಖಂಡಿತ ಮಿಸ್‌ ಮಾಡುವುದಿಲ್ಲ,” ಎಂದು ಉತ್ಸಾಹದಿಂದ ಹೇಳಿದಳು.

ಮಗಳ ಬಳಿ ಮಾತನಾಡಲು ಇದೇ ಸಮಯ ಎನಿಸಿ, “ಅನಘಾ, ಅಂಕಲ್‌ಗೆ ನಿನ್ನ ಕಂಡರೆ ತುಂಬಾ ಇಷ್ಟ ಅಲ್ವಾ…? ಅವರು ನಮ್ಮ ಜೊತೆಗೆ ಯಾವಾಗಲೂ ಇದೇ ಮನೆಯಲ್ಲಿರುವುದಾದರೆ ನಿನಗೆ ಖುಷಿನಾ….?” ಕೇಳಿದಳು ಮೇಘನಾ.

“ಹೌ ನೈಸ್‌ ಅಮ್ಮಾ….. ಖಂಡಿತಾ ಅವರು ನಮ್ಮ ಮನೆಯಲ್ಲಿ ನಮ್ಮ ಜೊತೆನೇ ಇದ್ದರೆ ನನಗೆ ತುಂಬಾ ಇಷ್ಟ. ನಮ್ಮ ತಂದೆ ಎಂದು ನನ್ನ ಫ್ರೆಂಡ್ಸೆಗೆಲ್ಲಾ ಜಂಭದಿಂದ ಹೇಳಿಕೊಳ್ಳುತ್ತೇನೆ, ” ಎಂದು ಅವಳು ಸಂಭ್ರಮದಿಂದ ಹೇಳಿದಳು.

ಮನಸ್ಸಿನ ಅರ್ಧ ಭಾರ ಕಳೆದು ಸಮಾಧಾನದ ಉಸಿರು ಬಿಟ್ಟಳು ಮೇಘನಾ. ಇನ್ನು ಗೌರವ್‌ಗೆ ತನ್ನ ಒಪ್ಪಿಗೆ ತಿಳಿಸದೆ ಮೇಘನಾ, ಸುಶೀಲಮ್ಮನ ಬಳಿ ಅನಘಾಳ ಇಚ್ಛೆ ತಿಳಿಸಿದಳು.

“ಮಗುವಿನ ಮನಸ್ಸು ಹೂವಿನ ಹಾಗೆ. ಅವಳಿಗೆ ಅಪ್ಪನ ಅವಶ್ಯಕತೆ ಎಷ್ಟಿದೆ ಎಂದು ತಿಳಿಸಿದ್ದಾಳೆ. ನೀನು ಖಂಡಿತ ಗೌರವ್‌ನನ್ನು ಪತಿಯಾಗಿ ಸ್ವೀಕರಿಸು,” ಎಂದರು ಸುಶೀಲಮ್ಮ.

ಆದರೂ ಮೇಘನಾಳಿಗೆ ಮನಸ್ಸಿನಲ್ಲಿ ಒಂದು ವಿಧದ ಅಳುಕು, ಭಯ. ಮತ್ತೆ ಎಲ್ಲಿ ಎಡವಿ ಸಮಾಜದ ಅಪನಿಂದೆ, ಕುಹಕದ ನುಡಿಗೆ ತುತ್ತಾಗುತ್ತೇನೋ ಎಂದು ಗೆಳತಿ ಭಾವನಾಳ ಬಳಿ ತನ್ನ ಅಳುಕನ್ನು ತೋಡಿಕೊಂಡಳು.

“ಒಮ್ಮೆ ಹಾಗಾಯಿತೆಂದು ಪದೇ ಪದೇ ಜೀವನದಲ್ಲಿ ಸಮಸ್ಯೆ ಬರುತ್ತದೆ ಎಂದು ಯಾಕೆ ಯೋಚಿಸುತ್ತೀ…? ಒಪ್ಪಿಗೆ ನೀಡು,” ಎಂದು ಧೈರ್ಯ ತುಂಬಿದಳು ಭಾವನಾ. ಮೇಘನಾ ಗೌರವ್‌ಗೆ ವಿಷಯ ತಿಳಿಸಿದಳು. ಗೌರವ್ ತನ್ನ ನಿರ್ಧಾರವನ್ನು ತಂದೆ, ತಾಯಿಗೆ ತಿಳಿಸಿದ. ಅದನ್ನು ಕೇಳಿದ ಅವನ ತಂದೆತಾಯಿಗೆ ನಿರಾಶೆ, ಅಸಮಾಧಾನವಾಯಿತು. ಮಗನ ಮದುವೆ ವಿಜೃಂಭಣೆಯಿಂದ ಮಾಡುವ ಆಸೆ ಹೊಂದಿದ್ದ ಅವರಿಗೆ ಗಂಡ ಬಿಟ್ಟ, ಮಗುವಿನ ತಾಯಿಯನ್ನು ಮಗ ವಿವಾಹವಾಗುವುದು ಸುತರಾಂ ಇಷ್ಟವಿರಲಿಲ್ಲ.

ಆದರೆ ಸಹನಾ ತಂದೆ, ತಾಯಿಯನ್ನು ಸಮಾಧಾನಿಸಿ, “ಎಷ್ಟು ಜನ ಈ ರೀತಿ ಯೋಚಿಸುತ್ತಾರೆ ಹೇಳಿ? ಆ ಮಗುವಿಗೆ ತಂದೆಯಾಗಿ ಮೇಘನಾಳಿಗೆ ಆಸರೆಯಾಗುವುದಾದರೆ ತಪ್ಪೇನು….?” ಎಂದಳು.

ಸಹನಾಳ ಕಪಟವಿಲ್ಲದ ಮುಗ್ಧ ನಡೆ, ನುಡಿ, ಮೇಘನಾಳಿಗೂ ಇಷ್ಟವಾಯಿತು. ಅದೇ ರೀತಿ ಮುದ್ದು ಮಗು ಅನಘಾ, ಸಹನಾಳನ್ನು “ಅತ್ತೆ,” ಎಂದು ಕರೆಯುತ್ತಾ ಅವಳ ಹಿಂದೆ ಮುಂದೆ ಸುತ್ತುತ್ತಾ ಮಾತಾಡುತ್ತಿದ್ದುದು ಸಹನಾಳಿಗೂ ಇಷ್ಟವಾಯಿತು.

ಮೇಘನಾಳ ಇಚ್ಛೆಯಂತೆ ಸರಳವಾಗೇ ಮದುವೆ ನೆರವೇರಿತು. ಗೌರವ್ ತಂದೆ, ತಾಯಿಗೆ ಮೊದಲು ಅಸಮಾಧಾನವಿದ್ದರೂ ಮೇಘನಾಳ ಸ್ವಭಾವಕ್ಕೆ ಅವಳನ್ನು ಸೊಸೆ ಎಂದು ಸ್ವೀಕರಿಸಿ ಅನಘಾಳನ್ನು ತಮ್ಮ ಮನೆಯ ಮಗು ಎಂದು ಒಪ್ಪಿಕೊಂಡು ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳತೊಡಗಿದರು.

ಮೇಘನಾ ಮತ್ತು ಅನಘಾರಿಗೆ ಆ ಭವ್ಯವಾದ ಮನೆಯಲ್ಲಿ ಯಾವ ಕೊರತೆಯೂ ಇರಲಿಲ್ಲ ಸುಖವಾಗಿದ್ದರು. ಮನೆಯಲ್ಲಿ ಕೆಲಸ ಮಾಡಲು ಆಳುಕಾಳುಗಳು ಇದ್ದುದರಿಂದ ಮೇಘನಾಳಿಗೆ ಮಾಡಲು ಯಾವ ಕೆಲಸವಿಲ್ಲದೆ ಹತ್ತಿರದಲ್ಲೇ ಇದ್ದ ಶಾಲೆಗೆ ಹೋಗಿ ಉಚಿತವಾಗಿ ಯೋಗ, ಟೈಲರಿಂಗ್‌ ಹೇಳಿಕೊಡಲಾರಂಭಿಸಿದಳು. ಅನಘಾ ಬಹಳ ಬುದ್ಧಿವಂತಳಾಗಿದ್ದರಿಂದ ಅವಳ ವಿದ್ಯಾಭ್ಯಾಸ ಅಡೆತಡೆಗಳಿಲ್ಲದೆ ನಿರಂತರವಾಗಿ ಸಾಗುತ್ತಿತ್ತು. ಅವಳಿಗೆ ನಾಟ್ಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಶಾಲೆಯಲ್ಲಿ ನಾಟ್ಯ ಪ್ರದರ್ಶನ ಮಾಡಿ ಅನೇಕ ಪದಕ, ಬಹುಮಾನಗಳನ್ನು ಪಡೆಯುತ್ತಿದ್ದಳು. ಅಲ್ಲದೆ ಬೇರೆ ಊರುಗಳಲ್ಲಿನ ಕಲಾ ಮಂದಿರಕ್ಕೆ ನಾಟ್ಯ ಮಾಡಲು ಆಹ್ವಾನಿಸುತ್ತಿದ್ದರು. ಅನಘಾಳ ಆಸಕ್ತಿಗೆ ತಂದೆ ತಾಯಿ ಇಬ್ಬರೂ ಪ್ರೋತ್ಸಾಹಿಸುತ್ತಿದ್ದರು. ಬೇರೆ ಊರುಗಳಿಗೆ ಹೋಗಬೇಕಾದ ಸಂದರ್ಭದಲ್ಲಿ ಮೇಘನಾ ಮಗಳ ಜೊತೆ ಹೋಗಿ ಅವಳ ನಾಟ್ಯ ಪ್ರದರ್ಶನ ಹಾಗೂ ಆ ಜನರ ಮೆಚ್ಚುಗೆ, ಕರತಾಡನಗಳನ್ನು ಕಂಡು ಹರ್ಷಿಸುತ್ತಿದ್ದಳು.

ಗೌರವ್ ಮೇಘನಾಳನ್ನು ಹೃದಯಪೂರ್ವಕವಾಗಿ ಪ್ರೀತಿಸುತ್ತಿದ್ದ. ಅವಳು ಯಾವಾಗಲೂ ಅನಘಾ ತನ್ನ ಉಸಿರು, ಅವಳ ಭವಿಷ್ಯಕ್ಕಾಗಿ ನನ್ನ ಜೀವನ ಮುಡಿಪಾಗಿಡುತ್ತೇನೆ ಎನ್ನುತ್ತಿದ್ದಳು. ಅದರಂತೆ ಗೌರವ್ ಮೇಘನಾಳ ಇಚ್ಛೆಯಂತೆ ಅನಘಾಳ ಬಯಕೆಗಳನ್ನೆಲ್ಲಾ ಪೂರೈಸುತ್ತಿದ್ದ. ಇಬ್ಬರಿಗೂ ಯಾವ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದ. ಅಪ್ಪಿತಪ್ಪಿಯೂ ಅವಳ ಹಿಂದಿನ ಜೀವನದ ಯಾವ ಕಹಿ ಘಟನೆಯನ್ನೂ ಗೌರವ್ ಕೆದಕಿ ಕೇಳುತ್ತಿರಲಿಲ್ಲ. ಅವನ ದೊಡ್ಡ ಗುಣ ಅರಿತಿದ್ದ ಮೇಘನಾಳಿಗೆ ಅವನಲ್ಲಿ ಗೌರವ, ಪ್ರೀತಿ ಹೆಚ್ಚಾಗುವಂತೆ ಮಾಡಿತ್ತು.

ಅನಘಾ ಬೆಳೆದು ಪದವಿ ಮುಗಿಸುವ ವೇಳೆಗೆ ಇಬ್ಬರೂ ವರಾನ್ವೇಷಣೆಗೆ ಆರಂಭಿಸಿದರು. ಅದಕ್ಕೆ ತಕ್ಕಂತೆ ಸಹನಾಳ ಅತ್ತೆಯ ಮನೆಯ ಕಡೆಯ ಒಂದು ಒಳ್ಳೆ ಸಂಬಂಧ ಸಿಕ್ಕಿತು. ಹುಡುಗನಿಗೆ ಸ್ವಂತ ಫ್ಯಾಕ್ಟರಿ ಇದ್ದು ನೋಡಲು ಲಕ್ಷಣವಾಗಿದ್ದ. ಅನಘಾಳ ಫೋಟೋ, ಜಾತಕ ಹೊಂದಿಕೆಯಾಗಿದ್ದರಿಂದ ಹುಡುಗಿಯನ್ನು ನೋಡಲು ಬರುತ್ತಿರುವುದಾಗಿ ತಿಳಿಸಿದರು. ಮೇಘನಾಳಿಗೆ ಈ ಸುದ್ದಿ ಕೇಳಿ ಆದ ಸಂತೋಷ ಅಷ್ಟಿಷ್ಟಲ್ಲ. ಅನುರೂಪನಾದ ಹುಡುಗ ಸ್ವರೂಪ್‌ ತಂದೆ, ತಾಯಿ  ಮತ್ತು ಸಹನಾಳೊಂದಿಗೆ ಅನಘಾಳನ್ನು ನೋಡಲು ಬಂದ. ಸ್ವರೂಪ್‌ ಹಾಗೂ ಅನಘಾ ಇಬ್ಬರೂ ಮೆಚ್ಚಿ ಒಪ್ಪಿದ್ದಾರೆಂದು ತಿಳಿಯಿತು.

ಗೌರವ್,  “ಹೊರಗಡೆ ಲಾನ್‌ನಲ್ಲಿ ಇಬ್ಬರೂ ಕುಳಿತು ಮಾತನಾಡಬಹುದಲ್ಲ,” ಎಂದ.

ಇಬ್ಬರೂ ಹೊರಗೆ ಬಂದು ಕುಳಿತರು. ಸ್ವರೂಪ್‌ ಅನಘಾಳನ್ನು ಒಪ್ಪಿರುವುದಾಗಿ ತಿಳಿಸಿ, “ನಮ್ಮ ತಂದೆ ತಾಯಿಗೆ ನಾನೊಬ್ಬನೇ ಮಗ. ನಾನು ಫ್ಯಾಕ್ಟರಿಯ ಕೆಲಸದ ಸಲುವಾಗಿ ವಿದೇಶಕ್ಕೆ ಹೋಗಬೇಕಾಗುತ್ತದೆ. ನೀನು ನಮ್ಮ ಮನೆಗೆ ಬಂದ ಮೇಲೆ. ನಮ್ಮ ತಂದೆ ತಾಯಿಯನ್ನು ನೋಡಿಕೊಳ್ಳುವ, ಮನೆ ಜವಾಬ್ದಾರಿ ನಿರ್ವಹಿಸುವ ಸಂಪೂರ್ಣ ಹೊಣೆ ನಿನ್ನದು,” ಎಂದ.

“ಖಂಡಿತ, ಅದು ನನ್ನ ಕರ್ತವ್ಯ, ನಾನು ನೋಡಿಕೊಳ್ಳುತ್ತೇನೆ. ನನಗೆ ನಾಟ್ಯ ಪ್ರದರ್ಶನ ಬೇರೆಡೆ ಇದ್ದಾಗ ಹೋಗಬೇಕಾಗುತ್ತದೆ. ನಾಟ್ಯವೇ ನನ್ನ ಉಸಿರು. ನೀವು ಅದಕ್ಕೆ ಸಹಕರಿಸಬೇಕು,” ಎಂದಳು. ಅದಕ್ಕೆ ಅವನು ತುಂಬು ಹೃದಯದಿಂದ ಒಪ್ಪಿಗೆ ನೀಡಿದ. ಅವರಿಬ್ಬರ ಮದುವೆ ನಿಶ್ಚಯವಾಯಿತು. ತನ್ನ ಮಗಳ ಭವಿಷ್ಯ ಹಸನಾಗಬೇಕೆಂದು ಇದುವರೆಗೂ ಅವಳಿಗಾಗಿ ತ್ಯಾಗ ಮಾಡಿ ಈ ದಿನಕ್ಕಾಗಿ ಕಾಯುತ್ತಿದ್ದ ಮೇಘನಾ ತನ್ನ ಬಾಳಿನಂತೆ ಮಗಳ ಬಾಳಾಗಬಾರದೆಂದು ದಿನ ಪ್ರಾರ್ಥಿಸುತ್ತಿದ್ದಳು.

“ಸಹನಾ, ನಿನ್ನ ಉಪಕಾರ ಎಂದೆಂದಿಗೂ ಮರೆಯುವುದಿಲ್ಲ,” ಎಂದು ಭಾವುಕಳಾದ ಮೇಘನಾಳನ್ನು ತಡೆದ ಸಹನಾ, ”ಯಾಕೆ ಅಷ್ಟೊಂದು ಎವೋಷನಲ್ ಆಗುತ್ತೀಯಾ? ನೀನು ಮಾಡಿರುವ ಪೂಜಾಫಲಕ್ಕೆ ದೇವರು ಅನಘಾಳಿಗೆ ಒಳ್ಳೆಯ ಸಂಬಂಧ ತೋರಿಸಿದ್ದಾನೆ,” ಎಂದಳು.

ತಂಗಿಯ ಉದಾರ ಉಪಕಾರದ ಸ್ವಭಾವ ಅರಿತಿದ್ದ ಗೌರವ್, “ನಿನಗೆ ಮಾತ್ರ ನಾನು ಥ್ಯಾಂಕ್ಸ್ ಹೇಳಲ್ಲ. ನೀನು ನಿನ್ನ ಅಣ್ಣನಿಗೆ ತೋರಿಸುತ್ತಿರುವ ಅಭಿಮಾನ ಎಂದುಕೊಳ್ಳುತ್ತೇನೆ,” ಎಂದು ಅವಳನ್ನು ರೇಗಿಸಿದ.

“ಹಾಗೆಂದರೆ ಆಗುತ್ತಾ? ಅನಘಾಳ ಮದುವೆಯಲ್ಲಿ ನನಗೆ ನಾನು ಕೇಳುವ ಭಾರಿ ಉಡುಗೊರೆ ಕೊಡಬೇಕು,” ಎಂದಳು.

“ನನ್ನ ತಂಗಿಗಿಂತ ಉಡುಗೊರೆ ದೊಡ್ಡದಾ,” ಎಂದು ಅಭಿಮಾನದಿಂದ ಅವಳ ತಲೆ ಮೇಲೆ ಮೊಟಕಿದ ಗೌರವ್.

ಮದುವೆ ವಿಜೃಂಭಣೆಯಿಂದ ನೆರವೇರಿತು. ಎರಡೂ ಕಡೆಯವರೂ ಅವರವರ ಅಂತಸ್ತಿಗೆ ತಕ್ಕಂತೆ ಒಡವೆ, ವಸ್ತ್ರಗಳನ್ನು ಧಾರಾಳವಾಗಿ ಕೊಟ್ಟು ಮದುವೆ ನೆರವೇರಿಸಿದರು.

ಅನಘಾಳನ್ನು ಅತ್ತೆಯ ಮನೆಗೆ ಕಳಿಸುವಾಗ ಗೌರವ್ ಅನಘಾಳನ್ನು ಅಪ್ಪಿ ಕಣ್ಣೀರು ಹಾಕಿದ. ಅನಘಾ ತಾಯಿಯನ್ನು ಅಪ್ಪಿ ಅತ್ತಳು. ಅವಳು ಹೋದ ಮೇಲೂ ಇನ್ನೂ ಅಳುತ್ತಿದ್ದ ಮೇಘನಾಳ ಭುಜದ ಸುತ್ತ ಕೈ ಹಾಕಿ, “ಅವಳೇನು ಹೊರದೇಶಕ್ಕೆ ಹೋಗಿಲ್ಲವಲ್ಲ…. ಯಾವಾಗ ಬೇಕಾದರೂ ಹೋಗಿ ಅವರಿಬ್ಬರನ್ನು ನೋಡಿಕೊಂಡು ಬರಬಹುದು. ಸಮಾಧಾನ ಮಾಡಿಕೋ. ನನ್ನ ಮಗಳು ಒಳ್ಳೆಯ ಕಡೆ ಸೇರಬೇಕೆನ್ನುವ ನಿನ್ನ ಆಸೆ ನೆರವೇರಿತಲ್ಲ. ನಮ್ಮ ಮಗಳು ಖಂಡಿತಾ ಸುಖವಾಗಿರುತ್ತಾಳೆ,” ಎಂದು ಅವಳನ್ನು ಸಂತೈಸಿದ.

ಮೇಘನಾ, ಅನಘಾಳನ್ನು ಜ್ಞಾಪಿಸಿಕೊಂಡು ಬೇಸರ ಪಟ್ಟುಕೊಳ್ಳುತ್ತಾಳೆಂದು ಅದನ್ನು ಮರೆಸಲು ಗೌರವ್ ಅವಳೊಂದಿಗೆ ಕೇರಂ ಆಡುವುದು, ಅಂತ್ಯಾಕ್ಷರಿ ಹಾಡಿ  ಸಮಯ ಕಳೆಯುವಂತೆ ಮಾಡಿದ. ಒಂದು ವಾರ ಕಳೆದ ನಂತರ ಗೌರವ್ ಮೇಘನಾಳ ಬಳಿ ಬಂದು, “ಇದುರೆಗೂ ನಿನ್ನ  ಸಮಯವನ್ನು ಮಗಳಿಗಾಗಿ ಮೀಸಲಿಟ್ಟಿದ್ದೆ. ಆಗ ಈ ಪಾಮರನ ಕಡೆ ನೋಡಲು ಸಮಯವಿರಲಿಲ್ಲ. ಈಗಾದರೂ ಅಮ್ಮಾವರು ಈ ಬಡಪಾಯಿ ಬಯಕೆಯನ್ನು ಪೂರೈಸುವಿರಾ…?” ಎಂದು ನಾಟಕೀಯವಾಗಿ ಕೇಳಿದ.

ಅದಕ್ಕೆ ಸುಮ್ಮನೆ ನಕ್ಕ ಮೇಘನಾ, “ಏನಾಗಬೇಕಾಗಿತ್ತು ನನ್ನಿಂದ?” ಎಂದಳು.

“ಏನಿಲ್ಲ ಯಾಕೆ ನಾವಿಬ್ಬರೂ ಆರಾಮವಾಗಿ ವಿದೇಶವನ್ನು ನೋಡಿಕೊಂಡು ಬರಬಾರದು? ಹವಾ ಬದಲಾವಣೆ, ಮನಸ್ಸಿಗೆ ಮುದ ಎರಡೂ ಸಿಗುತ್ತದೆ,” ಎಂದ.

ಮೇಘನಾಳಿಗೂ ಚೇಂಜ್‌ ಬೇಕೆನಿಸಿತ್ತು. ಹಾಗೆ ಆಗಲಿ ಎಂದು ಒಪ್ಪಿಕೊಂಡಳು. ಅದಕ್ಕೆ ಬೇಕಾದ ವೀಸಾ ಪಾಸ್‌ಪೋರ್ಟ್‌ ಎಲ್ಲವನ್ನೂ ಗೌರವ್ ಸಿದ್ಧಪಡಿಸಿದ. ಜೊತೆಗೆ ಮೇಘನಾಳಿಗಾಗಿ ಕೆಲವು ಮಾಡರ್ನ್‌ ಡ್ರೆಸ್‌ಗಳನ್ನು ಖರೀದಿಸಿದ.

“ನನಗೆ ಇದೆಲ್ಲಾ ಹಾಕಿ ಅಭ್ಯಾಸವಿಲ್ಲ. ಯಾಕೆ ತಂದಿರಿ? ನನ್ನನ್ನೇನು ಇನ್ನೂ ಚಿಕ್ಕ ಹುಡುಗಿ ಎಂದುಕೊಂಡಿರಾ?” ಎಂದು ಕೇಳಿದಳು ಮೇಘನಾ.

“ನನಗೇನೋ ನೀನು ಆ ದಿನ ಆಫೀಸ್‌ನಲ್ಲಿ ನೋಡಿದ ಆ ಸುಂದರಿಯೇ ಈಗಲೂ ನೆನಪಾಗುತ್ತದೆ. ಅಲ್ಲಿಗೆಲ್ಲಾ ಹೋಗಬೇಕಾದರೆ ಈ ರೀತಿಯ ಉಡುಪುಗಳೇ ಸರಿ,” ಎಂದು ಅವಳ ಕೆನ್ನೆ ಹಿಂಡುತ್ತಾ, “ಗೌರವ್ ನೋಡಿದ್ಯಾ, ಈ ಸುಂದರ ಕೆಂಪು ಮುಖದ ಚೆಲುವನ್ನು ನೋಡುವ ಭಾಗ್ಯ ಕಳೆದುಕೋ ಎನ್ನುತ್ತೀಯಾ?” ಎಂದು ರೇಗಿಸಿದ.

ಇಬ್ಬರೂ ಏರ್‌ಪೋರ್ಟ್‌ಗೆ ಬಂದರು. ತಂದೆ ತಾಯಿ ವಿದೇಶ ಪ್ರಯಾಣ ಮಾಡುತ್ತಿದ್ದಾರೆಂದು ತಿಳಿದ ಅನಘಾಳಿಗೆ ಬಹಳ ಸಂತಸವಾಗಿ ಶುಭ ಹಾರೈಸಿದಳು. ಮೊದಲ ಬಾರಿ ಮೇಘನಾ ವಿಮಾನ ಪ್ರಯಾಣ ಮಾಡುತ್ತಿರುವುದು ಹೊಸ ಅನುಭವ. ನೀನು ಇಲ್ಲಿಯೇ ಕುಳಿತಿರು. ವಿಚಾರಿಸಿ ಬರುತ್ತೇನೆ ಎಂದು ಗೌರವ್ ಆ ಕಡೆ ಹೋದ. ಅಲ್ಲಿಯೇ ಅಡ್ಡಾಡ್ಡುತ್ತಿದ್ದ ಮೇಘನಾ ಬಾಗಿಲ ಬಳಿಯಿದ್ದ ವ್ಯಕ್ತಿಯನ್ನು ನೋಡಿ ಅವಳಿಗೆ ತಲೆ ಸುತ್ತಿದಂತಾಯಿತು. ದಿಗ್ಭ್ರಮೆಯಿಂದ ಮತ್ತೆ ಮತ್ತೆ ನೋಡಿದಳು. ಯಾರನ್ನು ಇದುವರೆಗೂ ಮರೆತು ಹಾಯಾಗಿದ್ದಳೋ ಅದೇ ವ್ಯಕ್ತಿ. ತನ್ನ ಕೈ ಹಿಡಿದು, ಮೋಸ ಮಾಡಿ ತರೆಮರೆಸಿಕೊಂಡಿದ್ದ ಮಾಜಿ ಪತಿ ಶ್ರೀಧರ್‌ ಸೆಕ್ಯೂರಿಟಿ ಗಾರ್ಡ್‌ ಆಗಿ ಬಾಗಿಲು ಬಳಿ ನಿಂತಿದ್ದ. ಅವನು ತನ್ನನ್ನೇ ನೋಡುತ್ತಿರುವುದನ್ನು ಕಂಡು ಹಾಗೇ ಕಂಬದಂತೆ ನಿಂತಳು.

“ಚೆನ್ನಾಗಿದ್ದೀಯಾ ಮೇಘನಾ?” ಎಂದ.

“ನಾನು ಆರಾಮಾಗಿದ್ದೇನೆ. ಮತ್ತೆ ನನ್ನ ಜೀವನ ಅಲ್ಲೋಲ ಕಲ್ಲೋಲವಾಗಲೆಂದು ಹೀಗೆ ಮಾತನಾಡುತ್ತಿದ್ದೀರಾ?” ಎಂದಳು.

“ಇಲ್ಲ ಮೇಘನಾ, ನಿನ್ನ ಜೀವನದಲ್ಲಿ ಮತ್ತೆ ಪ್ರವೇಶಿಸಿ ಅನ್ಯಾಯ ಮಾಡಲು ಬಂದಿಲ್ಲ. ನಿನಗೆ ಮೋಸ ಮಾಡಿದ್ದಕ್ಕೇ ದೇವರು ನನಗೆ ಆಗಲೇ ಶಿಕ್ಷೆ ಕೊಟ್ಟುಬಿಟ್ಟ. ನನ್ನನ್ನು ಪ್ರೀತಿಸಿದವಳು ನನ್ನ ದುಡ್ಡೆಲ್ಲವನ್ನು ಕಸಿದು ನನಗೆ ಮೋಸ ಮಾಡಿ ಹೊರಟುಹೋದಳು. ಇದ್ದ ದುಡ್ಡು ಕಳೆದುಕೊಂಡು ಈ ಕೆಲಸಕ್ಕೆ  ಸೇರಿದ್ದೇನೆ. ಸಾಲದ್ದಕ್ಕೆ ಅನಾರೋಗ್ಯದಿಂದ ನರಳುತ್ತಿದ್ದೇನೆ… ಸಾಕಲ್ಲಾ ನಾನು ನಿನಗೆ ಮಾಡಿದ ಅನ್ಯಾಯಕ್ಕೆ? ನೀನು ಸುಖವಾಗಿರುವ ವಿಚಾರ, ನನ್ನ ಮಗಳು ಒಳ್ಳೆಯ ಕಡೆ ಮದುವೆಯಾಗಿ ಸುಖವಾಗಿರುವ ವಿಷಯ ತಿಳಿದರೂ ನಾನು ಮತ್ತೆ ನಿನ್ನನ್ನು ನೋಡಲು ಮುಖ ತೋರಿಸಲಾಗದೆ ನೋವಿನಿಂದ ಒಂದೊಂದು ಕ್ಷಣ ಕಳೆಯುತ್ತಿದ್ದೇನೆ. ಖಂಡಿತಾ ನಿನ್ನ ಜೀವನಕ್ಕೆ ಮುಳ್ಳಾಗುವುದಿಲ್ಲ. ನೀನು ಸುಖವಾಗಿರಬೇಕೆಂಬುದೇ ನನ್ನ ಆಸೆ,” ಎಂದ.

ಇಬ್ಬರೂ ಮಾತಾಡುವಷ್ಟರಲ್ಲಿ ಆ ಕಡೆಯಿಂದ ಗೌರವ್ ಬರುತ್ತಿದ್ದುದನ್ನು ನೋಡಿ ಮೇಘನಾ ಅವನಿಂದ ದೂರ ಸರಿದು ಇವನೆಡೆಗೆ ಬಂದಳು. ಇಬ್ಬರೂ ತಮ್ಮ ಲಗೇಜನ್ನು ತಳ್ಳಿಕೊಂಡು ಒಳಹೋಗಬೇಕೆನ್ನುವಷ್ಟರಲ್ಲಿ ಬಾಗಿಲು ಬಳಿ ಬಂದ ಶಬ್ದಕ್ಕೆ ಎಲ್ಲರೂ ಓಡಿ ಬಂದರು. ನೋಡಿದರೆ ಸೆಕ್ಯೂರಿಟಿ ಗಾರ್ಡ್‌ ಶ್ರೀಧರ್‌ ಬಿದ್ದುಬಿಟ್ಟಿದ್ದ. ಅಲ್ಲಿಯೇ ಇದ್ದ ವೈದ್ಯರು ಅವನ ಬಳಿ ಬಂದು ನಾಡಿ ಹಿಡಿದು ಪರೀಕ್ಷಿಸಿ,

“ಹೀ ಈಸ್‌ ನೋ ಮೋರ್‌,” ಎಂದರು. ಗೌರವ್ ಅವಳ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, “ಟೇಕ್‌ ಇಟ್‌ ಈಸಿ. ನಿನಗೆ ನೋವಾಗಿದೆ ಎಂದು ನನಗೆ ಗೊತ್ತು. ನಿನಗೆ ಮೋಸ ಮಾಡಿದ ವ್ಯಕ್ತಿ ಇವನೇ ಎಂದು ನನಗೆ ಗೊತ್ತಿತ್ತು. ಆದರೂ ನಿನ್ನ ಹಿಂದಿನ ಜೀವನದ ಬಗ್ಗೆ ಕೇಳಲಿಲ್ಲ. ಕಾರಣ ಹಿಂದಿನ ಕಹಿ ಘಟನೆ ಬಗ್ಗೆ ನೆನೆಸಿ ಜೀವನವನ್ನು ವ್ಯರ್ಥ ಮಾಡಿಕೊಳ್ಳುವುದಕ್ಕಿಂತ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಬಗ್ಗೆ ಚಿಂತಿಸಬೇಕು ಅಲ್ವಾ? ಪಾಸ್ಟ್ ಈಸ್‌ ಪಾಸ್ಟ್. ನಿನ್ನ ಜೊತೆ ಕಡೆಯವರೆಗೂ ಸುಖದಲ್ಲೂ ಕಷ್ಟದಲ್ಲೂ ನಾನಿರುತ್ತೇನೆ.

“ಹಳೆಯ ನೆನಪನ್ನು ಹಳೆಯ ಕನಸೆಂದು ಮರೆಯಬೇಕು. ನಮ್ಮ ಜೀವನದ ಕನಸನ್ನು ನನಸು ಮಾಡಿಕೊಂಡು, ನಾವಿಬ್ಬರೂ ಹೊಸ ಜೀವನ ಪ್ರಾರಂಭಿಸಿ ಸುಖವಾಗಿರೋಣ. ನಮ್ಮ ಜೀವನ ಹಸನು ಮಾಡಿಕೊಳ್ಳೋಣ. ಏನಂತೀಯಾ?” ಎಂದು ಅವಳ ಗಲ್ಲ ಹಿಡಿದೆತ್ತಿದ.

ಅವನ ವಿಶಾಲವಾದ ಹೃದಯಕ್ಕೆ ಮನಸೋತ ಮೇಘನಾ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು, ಭರವಸೆಯ ಬೆಳಕನ್ನು ಅವನ ಕಣ್ಣಲ್ಲಿ ಕಂಡು ತೃಪ್ತಿಯಿಂದ ಅವನೆದೆಗೆ ಒರಗಿದಳು. (ಮುಗಿಯಿತು)

Tags:
COMMENT