ಕಥೆ – ಚಂಚಲಾ ವೇಣು
“ಕಂಗ್ರಾಟ್ಸ್ ನಿತ್ಯಾ! ಅಂತೂ ಮನೇಲಿ ನಿಂಗೆ ಬೇಕಾದಂತಹ ಹುಡುಗನನ್ನೇ ಹುಡುಕಿದ್ದಾರೆ…..” ಗೆಳತಿ ಕಾಂತಿ, ನಿತ್ಯಾಗೆ ವಿವಾಹ ಗೊತ್ತಾಗುತ್ತಿದ್ದಂತೆ ಶುಭಾಶಯ ಕೋರಿದಳು.
ನಿತ್ಯಾ ಬೆಳ್ಳನೆಯ ಬಣ್ಣದ, ಗುಂಗುರು ಕೂದಲಿನ ಪುಟ್ಟ ಪುಟ್ಟ ಕಣ್ಣುಗಳ ಸುಂದರ ಹುಡುಗಿ, ಹೆತ್ತವರಿಗೆ ಒಬ್ಬಳೇ ಮಗಳು. ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಮದುವೆ ಸಿದ್ಧತೆ ನಡೆಸಿದ್ದರು ಹೆತ್ತವರು. ಪ್ರೀತಿ ಪ್ರೇಮವೆಂದು ಅವಳು ಯಾವ ಗೋಜಿಗೂ ಹೋಗದಿದ್ದುದು ಮನೆಯಲ್ಲಿ ನೆಮ್ಮದಿ ತಂದಿತ್ತು.
ಅವಳದು ಸ್ವತಂತ್ರ ಮನೋಭಾವ, ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಅಂತೆಯೇ ತನ್ನ ಮನಸ್ಸಿಗೆ ಬಂದದ್ದನ್ನು ಮಾಡದೆಯೇ ಬಿಡುವವಳೂ ಅಲ್ಲ, ಮದುವೆ ಕುರಿತಾಗಿ ಅವಳ ಕನಸುಗಳು ಬೇರೆಯೇ ಇದ್ದವು. ಮದುವೆಯ ನಂತರ ತಾನು ಸ್ವಇಚ್ಛೆಯಿಂದ ಇರಬೇಕೆನ್ನುವ ಹಂಬಲವಿತ್ತು. ಯಾವ ತೊಡಕುಗಳು ಇರಬಾರದು, ಯಾರ ಅಂಕೆಯೂ ಇರಬಾರದೆಂದು ಆಸೆ ಪಟ್ಟಿದ್ದಳು. ಎಲ್ಲೆಡೆ ವರದಕ್ಷಿಣೆ ಹಿಂಸೆ, ಹಣದ ದಾಹ, ಕಿರುಕುಳ, ಆತ್ಮಹತ್ಯೆ ಎಂದೆಲ್ಲಾಆ ಸುದ್ದಿ ಕೇಳಿ ಅವಳಿಗೆ ಸಾಕಾಗಿತ್ತು.
“ಮಮ್ಮಿ ನನಗೆ ಅತ್ತೆ ಮಾವ ಇಲ್ಲದ ಮನೆಯನ್ನೇ ಹುಡುಕಿಕೊಡಿ. ಗಂಡನೊಂದಿಗೆ ಆರಾಮವಾಗಿ ಇರಬಹುದು, ಯಾವ ಕಿರಿಕಿರಿ ರಗಳೆ ಬೇಡ……” ಎಂದಾಗ ಅವಳಮ್ಮ ಅಚ್ಚರಿಯಿಂದ, “ಇಲ್ಲ ನಿತ್ಯಾ ನಿನ್ನ ಭಾವನೆ ತಪ್ಪು. ಎಲ್ಲರೂ ಹಾಗಿರುವುದಿಲ್ಲ, ಹಿರಿಯರಿದ್ದಲ್ಲಿ ನಿನಗೆ ಹೇಗೆ ತೊಂದರೆಯಾಗುತ್ತದೆ? ಇನ್ನೂ ನಿನ್ನನ್ನು ಅವರು ಕಾಳಜಿ ಮುಚ್ಚಟೆಗಳಿಂದ ನೋಡಿಕೊಳ್ತಾರೆ…..” ಎಂದರು.
“ನೋ….. ಮಮ್ಮಿ ನನಗೆ ಜಾಯಿಂಟ್ ಫ್ಯಾಮಿಲಿ ಇಷ್ಟವಿಲ್ಲ….. ಅತ್ತೆ ಮಾವ ಯಾರೂ ಬೇಡ. ನನ್ನನ್ನು ಯಾರೂ ಅಂಕೆ ಮಾಡಬಾರದು. ಗಂಡ ಮಾತ್ರ ಸಾಕು…. ಯಾವ ಉಪದೇಶ, ಜವಾಬ್ದಾರಿಗಳಾಗಲೀ ನನಗೆ ಬೇಕಾಗಿಲ್ಲ. ಸಂಪೂರ್ಣ ಫ್ರೀಡಂ ಬಯಸುವವಳು ನಾನು. ನನ್ನದೇ ಆದಂತಹ ಸಾವಿರ ಕನಸುಗಳಿವೆ. ಅದಕ್ಕೆ ಯಾರಿಂದಲೂ ತೊಡಕಾಗುವುದು ಬೇಡ….” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಳು. ಮಗಳ ಮನೋಭಾವಕ್ಕೆ ತಂದೆಯೂ ಬೆಚ್ಚಿಬಿದ್ದರು.
“ನೀನು ತುಂಬಾ ಸ್ವಾರ್ಥಿ ನಿತ್ಯಾ….. ನೀನು ಅಂದುಕೊಂಡಿರುವುದೆಲ್ಲಾ ತಪ್ಪು. ನಿನ್ನ ಜೊತೆ ಇಲ್ಲದಿದ್ದರೂ ಬೇರೆ ಊರಲ್ಲಿರುವುದೂ ಬೇಡವೇ?” ತಾಯಿ ಗಾಬರಿಯಿಂದ ಕೇಳಿದರು.
“ಬೇಡ ಮಮ್ಮಿ…. ನಾವು ಅವರಲ್ಲಿಗೆ ಹೋಗುವುದು, ಅವರು ನಮ್ಮಲ್ಲಿಗೆ ಬರುವುದು ಇವೆಲ್ಲಾ ನನಗೆ ಸರಿಬರುವುದಿಲ್ಲ. ಮುಂದೊಂದು ದಿನ ಅವರ ಜವಾಬ್ದಾರಿ ನಾನೇ ಹೊರಬೇಕಾಗುತ್ತದೆ. ನಾನು ಅದಕ್ಕೆಲ್ಲ ಸಿದ್ಧಳಿಲ್ಲ… ಅವರ ಕುಟುಂಬದ ಸಂಪ್ರದಾಯ, ಆಚರಣೆ, ರೀತಿನೀತಿ ಇವೆಲ್ಲಾ ನಾನು ಪಾಲಿಸಬೇಕಾಗುತ್ತದೆ. ನಾನು ಪಾಲಿಸದಿದ್ದಲ್ಲಿ ಜಗಳ, ಕಿರಿಕಿರಿಗಳು ಶುರುವಾಗುತ್ತದೆ. ಇವ್ಯಾವುದಕ್ಕೂ ನಾನು ಒಪ್ಪುವುದಿಲ್ಲ.
“ಈ ವಿಷಯದಲ್ಲಿ ನನ್ನ ಬಲವಂತ ಪಡಿಸಬೇಡ… ಸಣ್ಣ ಕುಟುಂಬವಿರುವ ಹುಡುಗನನ್ನೇ ಹುಡುಕಿ. ಅಂತಹ ಗಂಡು ಸಿಗುವವರೆಗೆ ನಾನು ಕಾಯ್ತೀನಿ…” ಎಂದು ನಿಷ್ಟುರವಾಗಿ ಹೇಳಿದಾಗ ಹೆತ್ತವರು ಸುಮ್ಮನಾಗಬೇಕಾಯಿತು.
ಎಷ್ಟು ಹೇಳಿದರೂ ಅವಳು ಈ ವಿಷಯದಲ್ಲಿ ಮಾತ್ರ ರಾಜಿ ಆಗಲೇ ಇಲ್ಲ. ಸೋತು ಸುಮ್ಮನಾದರು ಹೆತ್ತವರು.
ಆರು ತಿಂಗಳಲ್ಲಿ ಅವಳಿಗೆ ಅಕ್ಕ ತಮ್ಮ ಮಾತ್ರ ಇರುವಂತಹ ಸಂಬಂಧ ಸಿಕ್ಕಿತು. ಅಕ್ಕ ಮದುವೆಯಾಗಿ ಸಿಂಗಪುರದಲ್ಲಿದ್ದಳು, ಹುಡುಗ ಬಿ.ಇ. ಮುಗಿಸಿ ಬಾಂಬೆಯಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸಕ್ಕಿದ್ದ. ಅವನ ಚಿಕ್ಕಪ್ಪ ಚಿಕ್ಕಮ್ಮ ಇದೇ ಊರಿನಲ್ಲಿದ್ದರು ಈ ಸಂಬಂಧ ಕುದುರಿಸಿದ್ದರು.
ಹುಡುಗನಿಗೆ ಸ್ವಂತ ಫ್ಲಾಟ್, ಕಾರು ಎಲ್ಲಾ ಇದ್ದು ಸ್ವತಂತ್ರವಾಗಿದ್ದ. ಎಲ್ಲರೂ ಅಲ್ಲಿಗೆ ಹೋಗಿ ನೋಡಿಕೊಂಡು ಬಂದರು. ಸಾಕಷ್ಟು ದೊಡ್ಡ ಫ್ಲಾಟ್ ಅದು. ಹುಡುಗ ಮಾತು ಕಡಿಮೆ. ಆದರೆ ಲಕ್ಷಣವಾಗಿದ್ದ. ಭುವನ್ ಅವನ ಹೆಸರು, ಅವಳಿಗೆ ಇಷ್ಟವಾಯಿತು. ಅವನೊಂದಿಗೆ ಒಂದೆರಡು ತಾಸು ಮಾತನಾಡಿದಳು. ಗಂಭೀರ ಮುಖಭಾವದ ಭುವನ್ ಅವಳಿಗೆ ಇಷ್ಟವಾದ. ಬೇಡವೆನ್ನಲು ಕಾರಣ ಸಿಗಲಿಲ್ಲ. ಅಲ್ಲದೆ ಯಾವ ಜವಾಬ್ದಾರಿಯೂ ಅವನಿಗಿರಲಿಲ್ಲ. ಅದು ನಿತ್ಯಾಗೆ ಖುಷಿ ಕೊಟ್ಟಿತು. ಅವನಕ್ಕ ಅಲ್ಲಿಂದಲೇ ಫೋನ್‌ಮಾಡಿ ಮಾತನಾಡಿದಳು. ಯಾವ ಕುಂದುಕೊರತೆ ಕಾಣದಿದ್ದಾಗ ಒಪ್ಪಿಕೊಂಡಳು. ಆದರೆ ನಿತ್ಯಾಳ ತಾಯಿಗೆ ಮಾತ್ರ ಈ ಸಂಬಂಧ ಅಷ್ಟಾಗಿ ಮನಸ್ಸಿಗೆ ಬರಲಿಲ್ಲ. ಹುಡುಗ ಒಂಟಿಯಾಗಿದ್ದಾನೆ ಹೆತ್ತವರಿಲ್ಲ. ಅಕ್ಕ ಎಲ್ಲೋ ದೂರದಲ್ಲಿದ್ದಾಳೆ….. ಅವನ ಗುಣಸ್ವಭಾವಗಳೇನೋ…. ಎಂಬ ಆತಂಕ ಕಾಡುತ್ತಿತ್ತು. ಆದರೆ ನಿತ್ಯಾ ಮಾತ್ರ ಸಂಪೂರ್ಣ ಒಪ್ಪಿಕೊಂಡಿದ್ದರಿಂದ ವಿಧಿಯಿಲ್ಲದೆ ಅವರೂ ಒಪ್ಪಬೇಕಾಯಿತು.
ವಿಷಯ ತಿಳಿದ ನಿತ್ಯಾಳ ಗೆಳತಿ ಕಾಂತಿ ಮನೆಗೆ ಬಂದಳು. ಗೆಳತಿಯ ಸ್ವತಂತ್ರ ಮನೋಭಾವ, ಯಾವ ಸಂಬಂಧಗಳೂ ಬೇಡ ಎನ್ನುವ ಸ್ವಭಾವ ಅವಳಿಗೂ ಗೊತ್ತಿತ್ತು. ತನಗೂ ಮದುವೆ ನಿಶ್ಚಯವಾಯಿತೆಂದು ನಿತ್ಯಾಳಿಗೆ ಹೇಳಿದಳು.
“ಅರೇ ಕಾಂತಿ, ನಿನಗೂ ಮದುವೆ ನಿಶ್ಚಯವಾಯ್ತ….? ವಾವ್….. ಕಂಗ್ರಾಟ್ಸ್ ಕಣೇ. ಹುಡುಗ ಎಲ್ಲಿಯವನು? ಏನು…” ನೂರಾರು ಪ್ರಶ್ನೆ ಕೇಳಿದಳು. ಕಾಂತಿ ಒಳ್ಳೆಯ ಗುಣಗಳ ನಿಧಾನ ಸ್ವಭಾವದ ನಗುಮುಖದ ಹುಡುಗಿ. ಯಾರಲ್ಲಿಯೂ ಎಲ್ಲೂ ದುಡುಕುವವಳಲ್ಲ. ಅಣ್ಣ, ತಮ್ಮ, ತಂಗಿ ಎಂದು ತುಂಬು ಕುಟುಂಬದಲ್ಲಿ ಹುಟ್ಟಿ ಬೆಳೆದವಳು. ಸಂಬಂಧಗಳ ಸೊಗಸು ಅವುಗಳಿಂದ ಸಿಗುವ ಪ್ರೀತಿ ಅವುಗಳ ಮೌಲ್ಯ ಎಲ್ಲಾ ಗೊತ್ತಿತ್ತು. ಅವಳು ಎಲ್ಲರನ್ನೂ ಆತ್ಮೀಯವಾಗಿ ಕಾಣುತ್ತಿದ್ದಳು. ಪ್ರೀತಿಸುವ ಅವಳ ಹೃದಯ ವಿಶಾಲವಾಗಿತ್ತು. ನಿತ್ಯಾಳ ಸ್ವಭಾವಕ್ಕೆ ವಿರುದ್ಧವಾಗಿತ್ತು ಇವಳ ಸ್ವಭಾವ. ತಾನು ಮದುವೆಯಾಗುವ ಕುಟುಂಬದಲ್ಲಿ ಎಲ್ಲರೂ ಇರುವಂತಹ ಕೂಡು ಕುಟುಂಬವಾಗಿರಬೇಕೆಂದು ಇಚ್ಛಿಸುವ ಹೃದಯ ಅವಳಿಗಿತ್ತು.
“ಹ್ಞಾಂ ನಿತ್ಯಾ…… ಇದೇ ಊರಿನ ಹುಡುಗ. ಸ್ವಂತ ಬಿಸ್‌ನೆಸ್ ಮಾಡುತ್ತಿದ್ದಾರೆ. ಅತ್ತೆ, ಮಾವ, ನಾದಿನಿ ಇದ್ದಾರೆ. ಸುಸಂಸ್ಕೃತ ಕುಟುಂಬ….” ಎಂದಳು.
“ಓಹೋ…. ಅತ್ತೆ ಮಾವಾ ಇದ್ದಾರಾ…..“ ನಿತ್ಯಾ ರಾಗವೆಳೆದಳು.
“ಹ್ಞೂಂ…… ಇದ್ದಾರೆ. ಅದರಲ್ಲೇನೂ ನನಗೆ ತೊಂದರೆಯಿಲ್ಲ. ನನ್ನ ಹೆತ್ತವರಂತೆ ಅವರನ್ನೂ ಕಾಣುತ್ತೇನೆ.”
“ನಾದಿನಿ ಬೇರೆ ಇದ್ದಾಳೆ ಅಂತಿದ್ದೀ…..”ಎಂದಳು ನಿತ್ಯಾ.
“ಇರಲಿ ಬಿಡು…. ಇನ್ನೂ ಕಾಲೇಜು ಓದುತ್ತಿರುವ ಪುಟ್ಟ ಹುಡುಗಿ. ನನಗೊಬ್ಬ ಒಳ್ಳೆಯ ಗೆಳತಿಯಾಗುತ್ತಾಳೆ….” ಕಾಂತಿ ಮಾತಿಗೆ ನಿತ್ಯಾ ಸುಮ್ಮನಾದಳು. ಗೆಳತಿಯ ವಿಶಾಲವಾದ ಮನಸ್ಸು ಅವಳಿಗೆ ಗೊತ್ತಿತ್ತು.
ಗೆಳತಿಯರಿಬ್ಬರ ಮದುವೆ ದಿನಗಳು ಗೊತ್ತಾದವು. ಮೊದಲು ನಿತ್ಯಾ ಮದುವೆ. ನಂತರ ಒಂದು ವಾರಕ್ಕೆ ಕಾಂತಿ ಮದುವೆ. ನಿತ್ಯಾ ಮದುವೆಗೆ ಕಾಂತಿ ತನ್ನ ಭಾವಿ ಪತಿ ಶಶಾಂಕ್‌ನೊಂದಿಗೆ ಬಂದಳು. ನಿತ್ಯಾ ಹೆಮ್ಮೆಯಿಂದ ತನ್ನ ಪತಿಯನ್ನು ಪರಿಚಯಿಸಿದಳು. ಭುವನ್ `ಹಲೋ’ ಹೇಳಿ ಸುಮ್ಮನಾದ. ಶಶಾಂಕ್ ಅವರನ್ನು ಹೃತ್ಪೂರ್ಕವಾಗಿ ಅಭಿನಂದಿಸಿ, “ನಮ್ಮ ಮದುವೆಗೆ ನವ ದಂಪತಿಗಳು ತಪ್ಪದೆ ಬರಬೇಕು,” ಎಂದು ಆಹ್ವಾನಿಸಿದ.
ಶಶಾಂಕ್‌ನ ಹೊಳೆವ ಕಣ್ಣು, ನಗುಮುಖ ನೋಡಿ ಕಾಂತಿಯ ಸೆಲಕ್ಷನ್ ಚೆನ್ನಾಗಿದೆ ಎಂಬ ಭಾವನೆ ನಿತ್ಯಾಳ ಮನಸ್ಸಿನಲ್ಲಿ ಮೂಡಿತು.
ಕಾಂತಿಯ ಮದುವೆಗೆ ನಿತ್ಯಾ ತನ್ನ ಗಂಡ ಭವನ್ ಜೊತೆ ಹೋಗಿದ್ದಳು. ಕಾಂತಿ ಹೆಮ್ಮೆಯಿಂದ ತನ್ನ ಅತ್ತೆ, ಮಾವ, ನಾದಿನಿ ಇತರೆ ಬಂಧುಗಳಿಗೆಲ್ಲಾ ಇವರ ಪರಿಚಯ ಮಾಡಿಕೊಟ್ಟು ಸಂಭ್ರಮಿಸಿದಳು. ಸರಳ ಸ್ವಭಾವದ ನಿಗರ್ವಿ ಕುಟುಂಬವದು. ಸೊಸೆಯ ಗೆಳತಿಯೆಂದು ಕಾಂತಿಯ ಅತ್ತೆ ನಿತ್ಯಾಳನ್ನು ವಿಶೇಷವಾಗಿ ಆದರಿಸಿ, ಉಡುಗೊರೆ ನೀಡಿ, ಪ್ರೀತಿಯಿಂದ ಮಾತನಾಡಿಸಿ ಮನೆಗೆ ಬರಲು ಆಹ್ವಾನಿಸಿದರು. ಒಳ್ಳೆಯ ಕುಟುಂಬ ಎಂದು ನಿತ್ಯಾ ಒಳಗೊಳಗೇ ಮೆಚ್ಚಿಕೊಂಡಳು, ಭುವನ್ ಹೆಚ್ಚು ಮಾತನಾಡಲಿಲ್ಲ. ಬಾಂಬೆಯಲ್ಲಿ ನಿತ್ಯಾಳ ಸಂಸಾರ ಶುರುವಾಯಿತು, ಅವಳ ಹೆತ್ತವರು ಬಂದು ನಾಲ್ಕು ದಿನವಿದ್ದು ಹೊರಟಹೋದರು. ಯಾವುದಕ್ಕೂ ಕೊರತೆ ಇರದಂತಹ ಬದುಕು ಎಂದುಕೊಂಡಳು. ಬೆಳಗ್ಗೆ ಭುವನ್ ಕೆಲಸಕ್ಕೆ ಹೋದರೆ ರಾತ್ರಿಯೇ ಬರುತ್ತಿದ್ದುದು, ಅಲ್ಲಿನ ಗದ್ದಲದ ಬದುಕು, ಟ್ರಾಫಿಕ್, ಜನಜಂಗುಳಿ ಕಂಡು ನಿತ್ಯಾ ಬೆರಗಾಗಿದ್ದಳು. ಅವಳಂದುಕೊಂಡ ಬದುಕು ಅವಳಿಗೆ ಸಿಕ್ಕಿತ್ತು. ಆದರೆ ಭುವನ್‌ತುಂಬಾ ಮೂಡಿ. ಒಮ್ಮೊಮ್ಮೆ ನಗುತ್ತಾ ಮಾತನಾಡಿದರೆ ಮತ್ತೊಮ್ಮೆ ತುಂಬಾ ಗಂಭೀರನಾಗಿ ನಿತ್ಯಾಳ ಇರುವಿಕೆಯನ್ನೇ ಮರೆತುಬಿಡುತ್ತಿದ್ದ. ಭಾನುವಾರ ಕೂಡ ಕೆಲಸವೆಂದು ಹೊರ ಹೋಗುತ್ತಿದ್ದ. ಇದರಿಂದ ನಿತ್ಯಾ ನಿರಾಶಳಾಗುತ್ತಿದ್ದಳು. ದಾಂಪತ್ಯ ಜೀವನದಲ್ಲಿನ ಉತ್ಸಾಹ, ಉಲ್ಲಾಸ ಅವನಲ್ಲಿ ಅವಳಿಗೆ ಕಾಣಲಿಲ್ಲ. ಹನಿಮೂನ್ ಕೂಡಾ ಬೇಡವೆಂದಿದ್ದ.
“ಇರುವುದು ನಾವಿಬ್ಬರೇ ತಾನೇ ಅದಕ್ಕೇಕೆ ಎಲ್ಲೋ ಹೋಗಬೇಕು…” ಎಂದಾಗ ಅವಳ ಮನಸ್ಸಿಗೆ ಪಿಚ್ ಎನಿಸಿತು.
“ನಾಲ್ಕು ದಿನ ರಜಾ ಹಾಕಿ, ಇಲ್ಲೇ ಊರು ಸುತ್ತಿ ಬರೋಣ….” ಹೊಸ ಜೀವನದ ಗುಂಗಿನಲ್ಲಿದ್ದ ನಿತ್ಯಾ ಹೇಳಿದಳು.
“ಸದ್ಯಕ್ಕೆ ರಜೆ ಇಲ್ಲ…. ಮುಂದೆ ನೋಡೋಣ,” ಎಂದಾಗ ನಿತ್ಯಾ ಪೆಚ್ಚಾದಳು.
ಯಾಕೋ ಭುವನ್‌ದು ಯಾಂತ್ರಿಕ ಜೀವನ ಎನಿಸಿತವಳಿಗೆ. ಅದರಲ್ಲಿ ಯಾವ ಸಿಹಿಯಾಗಲೀ, ಮಾಧುರ್ಯವಾಗಲೀ ಇರಲಿಲ್ಲ. ನವದಂಪತಿಗಳಲ್ಲಿ ಇರಬೇಕಾದ ಸರಸ, ಸಲ್ಲಾಪ ಅವಳಿಗೆ ಹುಡುಕಿದರೂ ಸಿಗಲಿಲ್ಲ. ಗಂಭೀರತೆಯ ಮುಖವಾಡ ಹಾಕಿದಂತಿದ್ದ ಭುವನ್‌ನಲ್ಲಿ ಅವಳಿಗೆ ಯಾವ ಆಪ್ತ ಭಾವನೆ ಕಾಣಲಿಲ್ಲ. ದಾಂಪತ್ಯ ಜೀವನ ಯಾಂತ್ರಿಕವಾಗಿತ್ತು.
ವಾರದಲ್ಲಿ ಮೂರ್ನಾಲ್ಕು ದಿನ ಅವನು ಪಾರ್ಟಿ ಎಂದು ಹೋಗಿ ಅಲ್ಲಿಂದ ಕಂಠಪೂರ್ತಿ ಕುಡಿದು ಬರುತ್ತಿದ್ದ. ಹಾಗೆ ಬಂದವನೇ ಸುಮ್ಮನೆ ಮಲಗಿಬಿಡುತ್ತಿದ್ದ. ಅವನ ಈ ಕುಡಿತ ಅವಳಿಗೆ ಆಘಾತವಾಗಿತ್ತು. ಆ ಬಗ್ಗೆ ಜಗಳವಾಡಿದಳು.
“ಇದೆಲ್ಲಾ ಇಲ್ಲಿ ಕಾಮನ್. ಆಫೀಸಿನ ಪಾರ್ಟಿಗಳಲ್ಲಿ ಕುಡಿತವಿದ್ದೇ ಇರುತ್ತದೆ. ನಿನಗೇನು ತೊಂದರೆ ಅದರಿಂದ…” ಎಂದುಬಿಟ್ಟ ಭುವನ್.
ಅವಳು ನಿರಾಶೆಯಿಂದ ಸುಮ್ಮನಾದಳು. ಹೇಗೆ ಅವನ ಕುಡಿತ ಬಿಡಿಸುವುದು ಎಂದು ಚಿಂತೆ ಶುರುವಾಗಿತ್ತವಳಿಗೆ.
ಆರು ತಿಂಗಳು ಕಳೆಯುವಷ್ಟರಲ್ಲಿ ಅವಳಿಗೆ ತನ್ನ ಬದುಕು ಬೋರ್ ಆಗುತ್ತಿದೆಯೇನೋ ಎಂದೆನಿಸುತ್ತಿತ್ತು. ಬರಿಯ ಫೋನ್, ಟಿ.ವಿ.ಯಲ್ಲಿ ಸಿನಿಮಾ ನೋಡುತ್ತಾ ಸಮಯ ಕಳೆಯುವುದು ಅವಳಿಗೆ ಹಿಂಸೆ ಎನಿಸುತ್ತಿತ್ತು. ಅವಳು ಬಯಸಿದಂತಹ ಸ್ವತಂತ್ರ ಜೀವನ ಅವಳಿಗೇನೋ ಸಿಕ್ಕಿತ್ತು. ಆದರೆ ಅದರಲ್ಲಿ ಅವಳಿಗೆ ಸೊಗಸೇ ಕಾಣಲಿಲ್ಲ. ಕೆಲಸಕ್ಕೆ ಸೇರೋಣವೆಂದುಕೊಂಡು ಗಂಡನಲ್ಲಿ ಕೇಳಿದಾಗ ಭುವನ್ ಸಿಡುಕಿಬಿಟ್ಟ.
“ನಿನಗೆಷ್ಟು ಹಣ ಬೇಕು ಹೇಳು. ನಾನೇ ಸಂಬಳವೆಂದು ಕೊಡುತ್ತೇನೆ. ನೀನು ಹೊರಗೆಲ್ಲೂ ಹೋಗಿ ದುಡಿಯಬೇಕಾಗಿಲ್ಲ…..” ಎಂದ ನಿಷ್ಟುರವಾಗಿ.
ಒಂದೇ ಮಾತಿಗೆ ತಿರಸ್ಕರಿಬಿಟ್ಟ ಅವನ ಸಿಡುಕು, ಸಿಟ್ಟು ಕಂಡು ನಿತ್ಯಾ ಬೆಚ್ಚಿಬಿದ್ದಳು. ಇದೇ ಮಾತನ್ನು ಪ್ರೀತಿಯಿಂದ ಹೇಳಿದ್ದರೆ…. ಎನಿಸಿ ಮನಸ್ಸು ಪೆಚ್ಚಾಯಿತು. ಯಾಕೋ ಹಠ ಮಾಡಿ ಕೆಲಸಕ್ಕೆ ಸೇರುವುದು ಸದ್ಯಕ್ಕೆ ಬೇಡ ಎನಿಸಿ ಸಮ್ಮನಾದಳು. ತನ್ನ ಸ್ವಭಾವದಲ್ಲಿ ಆದ ಬದಲಾವಣೆ ಕಂಡು ಅವಳು ಸೋಜಿಗಗೊಂಡಳು. ಮದುವೆಗೆ ಮುನ್ನ ತಾನೆಷ್ಟು ಬಿಂದಾಸ್ ಆಗಿದ್ದೆ ಎಲ್ಲವನ್ನೂ ಹಠ ಮಾಡಿಯಾದರೂ ಪಡೆಯುತ್ತಿದ್ದೆ. ಆದರೀಗ ಯಾಕೋ ಆಗುತ್ತಿಲ್ಲ ಎನಿಸಿ ಮನಸ್ಸು ಮುದುಡುತ್ತಿತ್ತು.
ಮನೆಯಲ್ಲಿ ಯಾರೊಬ್ಬರೂ ಇರದೆ, ಗಂಡನ ತುಂಬು ಪ್ರೀತಿಯೂ ಸಿಗದೆ ಅವಳು ಸೊರಗಿದಳು. ಇದೇ ವೇಳೆಯಲ್ಲಿ ಪಕ್ಕದ ಫ್ಲಾಟಿನ ಯುವತಿ ನೇಹಾಳ ಪರಿಚಯವಾಗಿತ್ತು. ಅವಳೂ ಕನ್ನಡದವಳಂತೆ, ಬೇಗ ಗೆಳತಿಯರಾದರು….. ನೇಹಾಳೊಂದಿಗೆ ಮಾರ್ಕೆಟ್, ಶಾಪಿಂಗ್ ಎಂದು ಆಗಾಗ್ಗೆ ಹೋಗಿಬರುವುದು ಅವಳಿಗೆ ಖುಷಿ ಕೊಡುತ್ತಿತ್ತು. ಅದು ತಿಳಿದ ಭುವನ್ ಆಕ್ಷೇಪವೇನೂ ಮಾಡಲಿಲ್ಲ. ಒಂದು ದಿನ ನಿತ್ಯಾ ನೇಹಾಳೊಂದಿಗೆ ಯಾವುದೋ ಮ್ಯೂಸಿಕ್ ಪ್ರೋಗ್ರಾಂಗೆ ಹೋದಾಗ ಬರುವುದು ತಡವಾಗಿತ್ತು. ಅಂದು ಭುವನ್ ಬಂದಾಗ ಅವಳು ಮನೆಯಲ್ಲಿ ಇರದಿದ್ದುದು ಅವನಿಗೆ ಸಿಟ್ಟು ತರಿಸಿತು.
“ರಾತ್ರಿ ಹತ್ತು ಗಂಟೆಯಲ್ಲಿ ಎಂತಹ ಸುತ್ತಾಟ ನಿನ್ನದು…. ಇಂತಹದನ್ನೆಲ್ಲಾ ಇಲ್ಲಿಗೆ ಸಾಕು ಮಾಡು,” ಎಂದು ರೇಗಿದಾಗ ನಿತ್ಯಾಳಿಗೂ ಸಿಟ್ಟು ಬಂತು.
“ನಾನೇನೂ ದಿನಾ ಹೋಗುವುದಿಲ್ಲ. ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ಅಪರೂಪದ್ದು. ಚೆನ್ನಾಗಿತ್ತು ಎಂದು ಕುಳಿತೆ. ಅದರಲ್ಲೇನು…..?”
“ದಿನಾ ಎಲ್ಲ ನಡೆಯುತ್ತದೆ. ದಿನಾ ಹೋಗುವ ಹಾಗಾದಲ್ಲಿ….” ಸಿಡುಕಿದ.
“ಹ್ಞೂಂ ಹೋಗುತ್ತೇನೆ…. ನನಗೀ ಮನೆ ಜೈಲಿನಂತಾಗಿದೆ. ನೀವು ನನ್ನ ಎಲ್ಲೂ ಕರೆದೊಯ್ಯುವುದಿಲ್ಲ… ನಾನೂ ಹೋಗಬಾರದೆಂದರೆ ಹೇಗೆ…..? ನನಗಷ್ಟು ಸ್ವಾತಂತ್ರ್ಯವಿಲ್ಲವೇ….?”
“ಹೌದು ನಾನು ಎಲ್ಲೂ ಕರೆದೊಯ್ಯುವುದಿಲ್ಲ…. ನನಗೆ ಇದಕ್ಕೆಲ್ಲಾ ಸಮಯವಿಲ್ಲ….”
“ಮತ್ತೆ ಇಂತಹ ಸಪ್ಪೆ ಬದುಕು ಹೇಗೆ ಸಹಿಸಲಿ…. ನನಗೂ ನೂರಾರು ಕನಸುಗಳಿವೆ, ಆಸೆಗಳಿವೆ. ಎಂತಹ ಸುಂದರ ಬದುಕು ಬೇಕೆಂದು ಬಯಸಿದ್ದೆ….. ನೀವು ಕುಡಿದು ಬರುವುದಕ್ಕೆ ಸಮಯವಿದೆ, ನನ್ನೊಂದಿಗೆ ಬರುವುದಕ್ಕೆ ಸಮಯವಿಲ್ಲ…. ಇದ್ಯಾವ ನ್ಯಾಯ… ಇದೆಂತಹ ಬದುಕು….ಯಾರಿಗೆ ಹೇಳಲಿ ಕೇಳಲಿ….” ನಿತ್ಯಾ ತನ್ನ ಮನದ ಬೇಗುದಿ ಹೊರಹಾಕಿದಳು.
“ಹೌದು ಕುಡಿತ ನನ್ನಿಷ್ಟ…. ಕುಡಿದು ಬರುತ್ತೇನೆ…. ಹಾಗಂತ ನೀನು ನಿನ್ನಿಷ್ಟದಂತೆ ನಡು ರಾತ್ರೀಲಿ ಬೀದಿ ಸುತ್ತಿ ಬರ್ತಿಯೇನು….” ಏನೇನೋ ಬಡಬಡಿಸುತ್ತಾ, “ಅಷ್ಟಕ್ಕೂ ನಿನಗಿಲ್ಲಿ ಏನು ಕೊರತೆಯಾಗಿದೆ….?” ಕೊನೆಗವನು ಸಿಡುಕಿನಿಂದ ಕೇಳಿದ.
“ಕೊರತೆ…. ಎಲ್ಲದಕ್ಕೂ ಇಲ್ಲಿ ಕೊರತೆ ಇದೆ. ಪ್ರೀತಿಪ್ರೇಮಕ್ಕೆ ಕೊರತೆ, ಆತ್ಮೀಯತೆಗೆ ಕೊರತೆ, ಒಳ್ಳೆ ಮಾತಿಗೆ ಕೊರತೆ, ಹೊಂದಾಣಿಕೆಗೆ ಕೊರತೆ….. ಹಣ ಬಿಟ್ಟು ಎಲ್ಲದಕ್ಕೂ ಕೊರತೆ….” ನಿತ್ಯಾ ಬಡಬಡಿಸುತ್ತಲೇ ಇದ್ದಳು. ಇಷ್ಟು ದಿನದಿಂದ ಮಡುವುಗಟ್ಟಿದ್ದ ದುಃಖ ಇಂದು ಹೊರ ಹರಿಯಿತು.
“ನೀನು ಹಾಗಂದುಕೊಂಡಲ್ಲಿ ನಾನೇನೂ ಮಾಡಲಾರೆ…. ನನ್ನ ಬದುಕು ಇರುವುದೇ ಹೀಗೆ…. ನೀನು ಹೊಂದಾಣಿಕೆ ಮಾಡಿಕೊಂಡು ಇರಬೇಕಷ್ಟೇ….” ಭುವನ್ ಮುಂದೆ ಮಾತನಾಡದೆ ಮೌನವಾಗಿ ಮಲಗುವ ತಯಾರಿ ನಡೆಸಿದ.
“ನಿಮ್ಮೆಲ್ಲಾ ದಬ್ಬಾಳಿಕೆ, ಅಂಕೆ ನನ್ನೆದುರು ನಡೆಯೊಲ್ಲ….” ಅವನ ಮಾತು ಮುಗಿದರೂ ನಿತ್ಯಾ ಎಷ್ಟೋ ಹೊತ್ತಿನವರೆಗೆ ಮಳೆಹನಿಯಂತೆ ಗೊಣಗುತ್ತಲೇ ಇದ್ದಳು.
ಮನಸ್ಸು ಕದಡಿದ ಜೇನುಗೂಡಾಗಿತ್ತು. ಮನಸ್ಸು ಅವನಿಂದ ಸಮಾಧಾನ, ಸಾಂತ್ವನ ಬಯಸಿತ್ತು. ಆದರೆ ಭುವನ್ ಏನೂ ಆಗಿಲ್ಲದಂತೆ ನಿದ್ದೆಯಲ್ಲಿ ಮುಳುಗಿಹೋದ. ವಾರಗಟ್ಟಲೇ ಮುನಿಸು ತೋರಿಸಿದರೂ ಭುವನ್ ಏನೂ ಆಗಿಲ್ಲವೆಂಬಂತೆ ತಟಸ್ಥನಾಗಿ ತನ್ನ ಪಾಡಿಗೆ ಸುಮ್ಮನಿದ್ದು ಬಿಟ್ಟ. ಇದೆಂಥ ಗುಣಗಳು, ಇದೆಂಥ ಬದುಕು? ನಿತ್ಯಾ ತಲೆ ಚಚ್ಚಿಕೊಳ್ಳುತ್ತಿದ್ದಳು.
ನೇಹಾಳ ಗಂಡನ ಗೆಳೆಯನೊಬ್ಬ ಭುವನ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಒಮ್ಮೆ ಅವನು ನೇಹಾಳ ಮನೆಗೆ ಬಂದಿದ್ದ. ಅಲ್ಲಿ ನಿತ್ಯಾ ಕೂಡ ಇದ್ದಳು. ಹೀಗೆ ಪರಸ್ಪರ ಭೇಟಿಯಾದಾಗ ಅವನಿಂದ ಭುವನ್‌ನ ಚರಿತ್ರೆಯೇ ಬಯಲಾಯಿತು. ಭುವನ್ ಏಳು ವರ್ಷಗಳ ಹಿಂದೆ ಒಬ್ಬ ವಿದೇಶೀ ಹುಡುಗಿಯೊಂದಿಗೆ ಲಿವ್ ಇನ್ ಸಂಬಂಧವಿಟ್ಟುಕೊಂಡಿದ್ದ. ಮೂರು ವರ್ಷ ಒಂದು ಸಣ್ಣ ಫ್ಲಾಟ್‌ನಲ್ಲಿ ವಾಸವಿದ್ದರು. ನಂತರ ಆ ಸಂಬಂಧ ಬಿಟ್ಟುಹೋದ ಮೇಲೆ ಈ ಫ್ಲಾಟ್ ಕೊಂಡುಕೊಂಡು ಇಲ್ಲಿ ನೆಲೆಸಿದ. ಆ ಹೆಣ್ಣಿನಿಂದ ಅವನಿಗೊಂದು ಹೆಣ್ಣು ಮಗು ಜನಿಸಿತು. ಏನೇ ಮಾಡಿದರೂ ಆ ಮಗುವನ್ನು ತೆಗೆಸಲು ಆಗಲಿಲ್ಲ. ವಿಧಿಯಿಲ್ಲದೆ ಆ ಹೆಣ್ಣು ಮಗುವನ್ನು ಹೆತ್ತು ಇವನ ಕೈಗಿತ್ತು, ಜಗಳವಾಡಿ ತನ್ನ ದೇಶಕ್ಕೆ ಹೊರಟುಹೋದಳು. ಅನಿವಾರ್ಯವಾಗಿ ಭುವನ್ ಆ ಮಗುವನ್ನು ಒಂದು ಆಶ್ರಮದಲ್ಲಿ ಬೆಳೆಸುತ್ತಿದ್ದಾನೆ. ಆಗಾಗ್ಗೆ ಅಲ್ಲಿಗೆ ಹೋಗಿ ಬರುತ್ತಿರುತ್ತಾನೆ.
ಇದರಿಂದಲೇ ಅವನಿಗೆ ಕುಡಿತ, ಸಿಗರೇಟು ಚಟಗಳೂ ಅಂಟಿಕೊಂಡವು. ಅವನ ಅಕ್ಕ ತಮ್ಮನ ವಿಷಯ ತಿಳಿದು ಮದುವೆ ಮಾಡಿಕೊಳ್ಳಲು ಒತ್ತಾಯಿಸಿದಳು. ಅವಳ ಬಲವಂತಕ್ಕೆ ಅವನು ಮದುವೆಗೆ ಒಪ್ಪಿಕೊಂಡಿದ್ದ. ಇದರಿಂದಲೇ ಅವನಿಗೆ ಮದುವೆಯಲ್ಲಿ ಯಾವ ಉತ್ಸಾಹ ಆಸಕ್ತಿ ಇರಲಿಲ್ಲ.
ಈ ಎಲ್ಲಾ ವಿಷಯ ನೇಹಾಳಿಂದ ತಿಳಿದಾಗ ನಿತ್ಯಾ ಆಘಾತಗೊಂಡಳು. ತನ್ನ ಕನಸು ಚೂರಾದಾಗ ಅವಳು ಕೆರಳಿದಳು. ವಿಷಯ ತಿಳಿಸದೆ ಮುಚ್ಚಿಟ್ಟು ಮೋಸ ಮಾಡಿದವನ ಮೇಲೆ ಅವಳಿಗೆ ಕೆಂಡದಂತಹ ಕೋಪ ಉಕ್ಕಿತು. ಅವನೊಡನೆ ದೊಡ್ಡ ಕಲಹವೇ ನಡೆದುಹೋಯಿತು. ಅವಳಿಗೆ ವಿಷಯ ಗೊತ್ತಾದಾಗ ಅವನಲ್ಲಿ ಯಾವ ಅಳುಕು, ಅಂಜಿಕೆ ಮೂಡಲೇ ಇಲ್ಲ.
ಅವನು ಬಹಳ ನಿರಾಳವಾದಂತೆ ತಣ್ಣನೆಯ ಸ್ವರದಲ್ಲಿ, “ಹೌದು, ಜೆಸ್ಸಿಯೊಂದಿಗೆ ನನಗೆ ಸಂಬಂಧವಿತ್ತು. ಮೂರು ವರ್ಷ ಒಟ್ಟಿಗಿದ್ದೆವು. ಮಗಳು ಇದ್ದಾಳೆ. ನಾನೇ ಅವಳನ್ನು ಸಾಕುತ್ತಿದ್ದೇನೆ. ಈಗ ನಿನಗೆ ವಿಷಯ ತಿಳಿಯಿತಲ್ಲ….. ಇನ್ನು ಮುಂದೆ ಮಗಳನ್ನು ನಾನು ಇದೇ ಮನೆಗೆ ಕರೆದುಕೊಂಡು ಬರ್ತೀನಿ…. ಅವಳು ಇಲ್ಲೇ ನನ್ನೊಂದಿಗೆ ಇರ್ತಾಳೆ….” ಎಂದು ಹೇಳಿದ.
ನಿಜಕ್ಕೂ ನಿತ್ಯಾಗೆ ಮಾತೇ ಹೊರಡದಂತಾಯಿತು. ತನಗೆ ಮೋಸ ಮಾಡಿದ್ದು ಅವನ ಮನಸ್ಸಿಗೆ ತಾಕಿರಲೇ ಇಲ್ಲ. ನಾನು ಏನು ಬೇಕಾದರೂ ಮಾಡುತ್ತೇನೆ ಎನ್ನುವ ಧೋರಣೆಯೇ ಅವನಲ್ಲಿತ್ತು. ಇಂತಹವನೊಂದಿಗೆ ಜಗಳ ವಿವಾದ ಕೊನೆಗೆ ಬದುಕು ನಡೆಸುವುದು ಕೂಡ ತೀರಾ ಅಸಹ್ಯವೆನಿಸಿತು.
ಅವನಿಗೆ ತನ್ನ ತಪ್ಪಿನ ಅರಿವಾಗಲೇ ಇಲ್ಲ. ಇನ್ನು ಸಹಿಸುವುದು ಸಾಧ್ಯವೇ ಇಲ್ಲ ಎಂದುಕೊಂಡು ಮರುದಿನವೇ ಅಲ್ಲಿಂದ ಹೊರಟುಬಿಟ್ಟಳು. ಅವನಿಗೆ ಏನನ್ನೂ ಹೇಳುವ ಗೋಜಿಗೇ ಹೋಗಲಿಲ್ಲ. ತನ್ನ ವಸ್ತುಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ಊರಿಗೆ ಹೊರಟೇಬಿಟ್ಟಳು. ದಿಢೀರ್ ಎಂದು ಮನೆಗೆ ಬಂದ ಮಗಳನ್ನು ನೋಡಿ ಹೆತ್ತವರು ಬೆಚ್ಚಿಬಿದ್ದರು. ಮಗಳ ಮುಖದಲ್ಲಿದ್ದ ನಿರಾಶೆ ಹತಾಶೆ ಸೋಲು ದುಃಖ ನೋವು ಕಂಡು ಅಧೀರರಾದರು. ಮಗಳಿಂದ ವಿಷಯ ತಿಳಿದಾಗ ಹೌಹಾರಿದರು. ಅಳಿಯನ ಹಿನ್ನೆಲೆ ತಿಳಿದು ಆಕ್ರೋಶಗೊಂಡರು.
ಮಗಳ ಮೂರು ವರ್ಷದ ದಾಂಪತ್ಯ ಅಲ್ಲಿಗೆ ಕೊನೆಗೊಂಡಿತು. ತಮಗೇಕೆ ಅವನು ಮೋಸ ಮಾಡಿದ ಎಂದು ಚಿಂತಿಸಿ ಹೈರಾಣಾದ ಅವರು ಮದುವೆಗೆ ಪ್ರಸ್ತಾಪಿಸಿದ ಅವನ ಚಿಕ್ಕಪ್ಪ ಚಿಕ್ಕಮ್ಮರ ಬಳಿ ಹೋಗಿ ವಿಚಾರಿಸಿದರು.
ಅವನ ಚಿಕ್ಕಪ್ಪ ಚಿಕ್ಕಮ್ಮ, “ಹೌದೇ…. ನಮಗೆ ವಿಷಯಗಳೇ ಗೊತ್ತಿಲ್ಲ… ಒಳ್ಳೆಯ ಹುಡುಗನೆಂದುಕೊಂಡಿದ್ದೆವು. ಮೋಸ ಮಾಡುತ್ತಾನೆಂದುಕೊಂಡಿರಲಿಲ್ಲ….. ನಮ್ಮಿಂದ ಎಂತಹ ತಪ್ಪಾಗಿ ಹೋಯಿತು,” ಎಂದು ಪೇಚಾಡಿಕೊಂಡರು.
ಆ ವೃದ್ಧ ದಂಪತಿಗಳನ್ನು ಬೈದು ಶಿಕ್ಷೆ ಕೊಡಿಸಲು ಇಷ್ಟವಾಗದೆ ನಿತ್ಯಾ ಮತ್ತು ಅವಳ ತಂದೆತಾಯಿ ಸುಮ್ಮನಾದರು. ಅಲ್ಲದೆ ಅವರುಗಳು ಇದರಲ್ಲಿ ನಿರಪರಾಧಿಗಳು ಎಂದೂ ಅರಿವಾಗಿತ್ತು.
ಸಿಂಗಪೂರದಲ್ಲಿದ್ದ ಅವನ ಅಕ್ಕನಿಗೆ ಫೋನ್ ಮಾಡಿದರು. ಅವಳು ಏನೂ ಗೊತ್ತಿಲ್ಲದವಂಳಂತೆ, “ಹೋ…. ಹೌದಾ…. ವೆರಿ ವೆರಿ ಸಾರಿ…. ನನಗವನ ವಿಷಯ ಗೊತ್ತೇ ಇಲ್ಲ. ನಿಮ್ಮ ಮಗಳ ಬದುಕಿನಲ್ಲಿ ಹೀಗಾಗಿದ್ದಕ್ಕೆ ಬೇಸರವಾಗ್ತಿದೆ…. ನಿತ್ಯಾ ಸಾರಿ…. ಸಾರಿ….” ಎಂದೆಲ್ಲಾ ಅನುಕಂಪ ಸೂಚಿಸಿ ಸುಮ್ಮನಾದಳು.
ಯಾರ ಬಳಿಯಲ್ಲಿ ನ್ಯಾಯ ಕೇಳುವುದು ಎಂದು ನಿತ್ಯಾ ಪೇಚಾಡಿಕೊಂಡಳು.
“ನೋಡಿದ್ಯಾ ನಿತ್ಯಾ….. ಅವನ ಹೆತ್ತವರು ಇದ್ದಿದ್ದರೆ ಹೀಗಾಗ್ತಾ ಇರುತ್ತಿರಲಿಲ್ಲ ಅಲ್ವಾ…..” ತಾಯಿ ಹೇಳಿದಾಗ ಎಲ್ಲೋ ಅವಳಿಗೆ ಅದು ನಿಜ ಎಂದೆನಿಸಿತು.
ಕಾಲ ಹೀಗೆ ಸರಿಯಿತು. ಒಮ್ಮೆ ಅವಳು ಪಾರ್ಕ್‌ಗೆ ಹೋಗಿದ್ದಾಗ ಗೆಳತಿ ಕಾಂತಿ ಸಿಕ್ಕಳು. ಮೊದಲಿಗಿಂತ ಲಕ್ಷಣವಾಗಿ ಗೃಹಿಣಿ ಕಳೆಯಿಂದ ಕಾಂತಿಯಲ್ಲಿ ಜೀವನೋತ್ಸಾಹ ತುಂಬಿತ್ತು. ಅವಳೊಂದಿಗೆ ಪುಟ್ಟ ಮಗನೂ ಇದ್ದ. ಬಲವಂತವಾಗಿ ಗೆಳತಿಯನ್ನು ಮನೆಗೆ ಕರೆದೊಯ್ದಳು ಕಾಂತಿ. ಅವಳ ಸಂಸಾರ ನೋಡಿ ನಿತ್ಯಾಗೆ ಸಂತೋಷದೊಂದಿಗೆ ಸಣ್ಣಗೆ ಅಸೂಯೆಯೂ ಆಯಿತು.
ಮುದ್ದುಮಗು, ಒಲವಿನ ಗಂಡ, ಆತ್ಮಿಯ ಗೆಳತಿಯಂತಿದ್ದ ನಾದಿನಿ, ಮಗಳಂತೆ ಕಾಣುವ ಅತ್ತೆ ಮಾವ, ಗಲಗಲವೆಂದು ನಗುತ್ತಿದ್ದ ತುಂಬಿದ ಮನೆ. ಎಲ್ಲರ ಪ್ರೀತಿಯ ಮಳೆ ಕಾಂತಿ ಮೇಲೆ ಸುರಿಯುತ್ತಿತ್ತು. ಕಾಂತಿ ಕೂಡ ಅಷ್ಟೇ ಪ್ರೀತಿ, ಗೌರವದಿಂದ ನಗುಮುಖದಿಂದ ಲವಲವಿಕೆಯಿಂದ ಎಲ್ಲರೊಡನೆ ಬೆರೆತುಹೋಗಿದ್ದಳು. ಸಂತೃಪ್ತ ಜೀವನದ ಗೃಹಿಣಿಯ ಕಳೆ ಸುಂದರ ಜೀನವನ್ನು ಬಿಂಬಿಸುತ್ತಿತ್ತು.
ಯಾವ ಕೊರತೆಯಿಲ್ಲದೆ ಕಾಂತಿ ತನ್ನ ಕುಟುಂಬದೊಂದಿಗೆ ಬೆರೆತುಹೋಗಿದ್ದಳು. ಎಲ್ಲರನ್ನೂ ಪ್ರೀತಿಸುವ ವಿಶಾಲ ಹೃದಯದಿಂದಾಗಿ ಬದುಕಿನ ಪ್ರತಿ ಘಳಿಗೆಯ ಸುಖ ಅವಳನ್ನರಸಿ ಬಂದಿತ್ತು. ಪ್ರತಿ ಕ್ಷಣದ ಸುಖವನ್ನು ಅವಳು ಮನಸಾರೆ ಅನುಭವಿಸುತ್ತಿದ್ದಳು. ಗೆಳತಿಯ ಸುಂದರ ಸಂಸಾರ ಕಂಡ ನಿತ್ಯಾ, “ನಿನ್ನದು ನಿಜಕ್ಕೂ ಸುಖಿ ಸಂಸಾರ ಕಾಂತಿ…. ನೀನೇ ಅದೃಷ್ಟವಂತೆ…. ನಿಜ ಹೇಳಬೇಕೆಂದರೆ ನಿನ್ನ ಈ ಕುಟುಂಬ, ಮುದ್ದು ಮಗು ಇದನ್ನೆಲ್ಲಾ ಬಿಟ್ಟು ಹೋಗುವುದಕ್ಕೆ ಮನಸ್ಸಾಗುತ್ತಿಲ್ಲ….” ಎನ್ನುತ್ತಾ ಅವಳ ಮಗನನ್ನು ಮುದ್ದು ಮಾಡಿದಳು. ಅವಳೊಳಗಿನ ತಾಯ್ತನ ಮಿಸುಕಾಡಿತ್ತು. ಸದ್ಯಕ್ಕೆ ಮಕ್ಕಳು ಬೇಡವೆಂದು ಗಂಡ ಹೇಳಿದ ಕೂಡಲೇ ಇವಳೂ ಒಪ್ಪಿದ್ದಳು. ಆದರೀಗ ತಾನು ಕಳೆದುಕೊಂಡಿರುವುದರ ಮೌಲ್ಯವೇನೆಂದು ಅರಿವಾಗಿತ್ತು.
ಕಾಂತಿ ನಸುನಕ್ಕಳು, “ಹೌದು ನಿತ್ಯಾ, ನಾನು ತುಂಬಾ ಲಕ್ಕಿ…. ನನ್ನ ಗಂಡ ತುಂಬಾ ಒಳ್ಳೆಯವರು. ಈ ಕುಟುಂಬದ ಸೊಸೆಯಾದ ನನಗೆ ತುಂಬು ಪ್ರೀತಿ ಆದರ ಗೌರವ ಎಲ್ಲಾ ಸಿಗುತ್ತಿದೆ. ಇಂತಹ ಅದೃಷ್ಟ ಎಷ್ಟು ಹೆಣ್ಣುಮಕ್ಕಳಿಗೆ ಸಿಗುತ್ತೆ ಹೇಳು….. ಅದಿರಲಿ ನಿನ್ನ ಲೈಫ್ ಹೇಗಿದೆ…? ಬಾಂಬೆಯಿಂದ ಯಾವಾಗ ಬಂದೆ….? ಎಲ್ಲಾ ಹೇಗೆ….? ಅಲ್ಲಿಗೆ ಹೋದ ಮೇಲೆ ಒಂದೂ ಫೋನ್ ಇಲ್ಲಾ……” ಎಂದು ಒಂದೇ ಉಸಿರಿಗೆ ಕೇಳಿದಳು ಕಾಂತಿ.
ಗೆಳತಿಯ ಕಾಳಜಿ ಮಾತಿಗೆ ನಿತ್ಯಾ ನಿಟ್ಟುಸಿರುಬಿಟ್ಟಳು. ಅವಳ ಕಣ್ಣು ತುಂಬಿ ಬಂತು. ತನ್ನ ಬದುಕಿನ ಚಿತ್ರಣವನ್ನು ಮರೆಮಾಚದೆ ಎಲ್ಲವನ್ನೂ ಗೆಳತಿಗೆ ಹೇಳಿ ಕಣ್ಣೀರಿಟ್ಟಳು.
ಕಾಂತಿಗೆ ನಿಜಕ್ಕೂ ನೋವಾಯಿತು. ಬೆಂಗಾಡಾದ ಗೆಳತಿಯ ಬದುಕು ಕಂಡು, ಎಷ್ಟು ಕನಸುಗಳನ್ನು ಹೊತ್ತೊಯ್ದಿದ್ದಳು. ಆದರೀಗ ಅಲ್ಲಿಂದ ಬರಿಯ ನಿರಾಸೆ ನೋವಿನ ಮೂಟೆ ಹೊತ್ತು ಮರಳಿ ಬಂದಿದ್ದಾಳೆ, ಭುವನ್‌ನಿಂದ ಎಂಥ ಅನ್ಯಾಯವಾಯಿತು ಎಂದು ಕೊರಗಿದಳು.
“ಎಂತಹ ಮೋಸ ಅನ್ಯಾಯವಾಗಿದೆ ನಿತ್ಯಾ… ನೀನು ನ್ಯಾಯ ಕೇಳಲಿಲ್ಲವೇ…..?” ಕೇಳಿದಳು ಕಾಂತಿ.
ನಿತ್ಯಾ ಕಣ್ಣೊರೆಸಿಕೊಳ್ಳುತ್ತಾ ಪೇಲವವಾಗಿ ನಕ್ಕು, “ಯಾರನ್ನು ಕೇಳಬೇಕು ನ್ಯಾಯ….. ಅನ್ಯಾಯವಾಗಿದೆ ಎಂದು ಯಾರ ಬಳಿ ದೂರಲಿ….? ಅತ್ತೆ ಮಾವ ಇದ್ದಿದ್ದರೆ ಬಹುಶಃ ಕೇಳುತ್ತಿದ್ದರೇನೋ….? ಆದರೆ ಅತ್ತೆ ಮಾವ ಇರುವ ಮನೆ ಬೇಡವೆಂದವಳು ನಾನು…. ಹಿರಿಯರಿದ್ದಿದ್ದಲ್ಲಿ ನಾನು ನ್ಯಾಯ ಕೇಳುತ್ತಿದ್ದೆ…. ಹೇಗೋ ಅವರು ಮಗನನ್ನು ತಿದ್ದಿ ಬುದ್ಧಿ ಹೇಳಿ ನನ್ನ ಬದುಕನ್ನು ಸರಿ ಮಾಡುತ್ತಿದ್ದರೇನೋ….? ಆದರೆ ನನ್ನ ಸ್ವತಂತ್ರ ಜೀವನದ ಆಸೆಗೆ ಇಂತಹ ಮೋಸಗಾರನ ಕೈಹಿಡಿದೆ…. ನಾನೇ ಆರಿಸಿಕೊಂಡು ಜೀವನವಿದು…. ನನಗಾಗಿ ಅವರ ಕಡೆಯಿಂದ ಯಾರೂ ಬರಲಿಲ್ಲ…. ನನ್ನ ಬದುಕು ಹಾಳಾಗಿದ್ದಕ್ಕೆ ಯಾರಿಗೂ ನಷ್ಟವಿಲ್ಲ…. ದುಃಖ ಇಲ್ಲ…. ನನ್ನ ಮಮ್ಮಿ ಡ್ಯಾಡಿ ದಿನಾ ದಿನಾ ಕೊರಗುತ್ತಿದ್ದಾರಷ್ಟೆ……” ನಿತ್ಯಾ ಗದ್ಗದ ದನಿಯಿಂದ ಹೇಳಿದಳು.
“ಹೌದು ನಿತ್ಯಾ ನಿನ್ನ ಆಯ್ಕೆ ತಪ್ಪಾಯ್ತು….. ನಿನ್ನ ಮಮ್ಮಿ ಕೂಡ ಈ ಸಂಬಂಧ ಬೇಡವೆಂದಿದ್ದರು….. ಆದರೆ ನೀನು ನಿನ್ನ ಸ್ವತಂತ್ರ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಹಿರಿಯರನ್ನು ಬೇಡವೆಂದಿದ್ದೆ. ಆದರೀಗ ಆಗಿದ್ದೇನು….? ನಿಜ ಹೇಳ್ಲಾ ನಿತ್ಯಾ, ನನ್ನ ಇಂದಿನ ಈ ಸಂತೃಪ್ತ ಬದುಕಿಗೆ ನನ್ನ ಅತ್ತೆ ಮಾವಂದಿರೇ ಕಾರಣ. ಮಕ್ಕಳು ಚೂರು ದಾರಿ ತಪ್ಪಿದರೂ ಅವರನ್ನು ತಡೆಯುತ್ತಾರೆ, ಬೈಯ್ಯುತ್ತಾರೆ. ಸರಿದಾರಿಯಲ್ಲಿ ನಡೆಯಲು ಮಾರ್ಗದರ್ಶನ ನೀಡುತ್ತಾರೆ. ನಾವು ಅವರನ್ನು ಪ್ರೀತಿಸಿದರೆ ಅವರೂ ನಮ್ಮನ್ನು ಪ್ರೀತಿಸುತ್ತಾರೆ. ಅವರು ಬರೀ ತೊಂದರೆ ಕೊಡುತ್ತಾರೆ…. ಕಿರಿಕಿರಿ ಮಾಡುತ್ತಾರೆ ಎಂದುಕೊಳ್ಳುವುದು ತಪ್ಪು ಕಲ್ಪನೆ….. ನಾವು ಅವರತ್ತ ಪ್ರೀತಿ ಗೌರವ ತೋರಿಸಬೇಕು, ಅವರದನ್ನು ಖಂಡಿತಾ ನಿರೀಕ್ಷಿಸುತ್ತಾರೆ….. ಅದು ಸಿಕ್ಕಾಗ ಮರಳಿ ಎರಡು ಪಟ್ಟು ನೀಡುತ್ತಾರೆ… ಇದೇ ಹೊಂದಾಣಿಕೆ. ಕುಟುಂಬ ಒಂದು ಭದ್ರ ಕೋಟೆಯಿದ್ದಂತೆ. ನಮ್ಮ ಕಷ್ಟ ನೋವು ತೊಂದರೆಗಳಿಗೆ ನಿಜವಾಗಿ ಮಿಡಿಯುರು ಅವರೇ. ಮನೆಗೆ ಹಿರಿಯರೇ ಭೂಷಣ…. ಅವರಿದ್ದರೆ ಮನೆಗೊಂದು ಕಳೆ ನಿತ್ಯಾ…. ಸುಂದರ ಸಂಸಾರಕ್ಕೆ ಸುಭದ್ರ ಅಡಿಪಾಯ ಹಾಕುವವರೇ ಹಿರಿಯರು. ಆದರೆ…. ಅದೇಕೋ ನಿನಗಿದು ಹೊಳೆಯಲೇ ಇಲ್ಲ……” ನಿಡುಸುಯ್ದಳು ಕಾಂತಿ.
“ಹೌದು ಕಾಂತಿ….. ನಾನಲ್ಲಿ ಒಂಟಿಯಾಗಿದ್ದಾಗ ಈ ಎಲ್ಲಾ ಭಾವನೆಗಳು ನನ್ನನ್ನು ಕಾಡುತ್ತಿದ್ದವು. ನನ್ನ ಗಂಡನಿಗೆ ಯಾರಾದರೂ ಬುದ್ಧಿ ಹೇಳಬಾರದೇ ಎಂದು ಬಯಸುತ್ತಿದ್ದೆ…..” ನಿತ್ಯಾ ಹೇಳಿದಳು.
“ನಿಜ, ಆದರೆ ಹಾಗೆ ಅವರಿಗೆ ಹೇಳುವವರು ಯಾರಿದ್ದರು…. ನಿನ್ನ ಗಂಡ ದಾರಿ ತಪ್ಪುತ್ತಿದ್ದಾಗ ಅವನಮ್ಮ ಅಪ್ಪ ಇದ್ದಿದ್ದರೆ ಖಂಡಿತಾ ತಡೆಯುತ್ತಿದ್ದರು….. ಹಟ ಮಾಡಿಯಾದರೂ ಸರಿ ದಾರಿಗೆ ತರುತ್ತಿದ್ದರೇನೋ….. ಆದರೆ ನಿನ್ನ ಗಂಡನಿಗೆ ಯಾರೂ ಇಲ್ಲದಿರುವುದರಿಂದೋ ಏನೋ ದಾರಿ ತಪ್ಪಿದ್ದಾನೆ. ಒಂಟಿತನ ಸ್ವೇಚ್ಛೆಗೆ ತಿರುಗಿಸಿದೆ. ದಾರಿ ದೀಪದ ಕೊರತೆಯಿಂದಾಗಿ ಕತ್ತಲಲ್ಲಿ ಎಡವಿ ಪಾತಾಳಕ್ಕೆ ಬಿದ್ದಿದ್ದಾನೆ…. ನೀನು ಅವರನ್ನು ತಿದ್ದಲು ಪ್ರಯತ್ನಿಸಲಿಲ್ಲವೇ ನಿತ್ಯಾ…..?”
“ತಿದ್ದುವುದಕ್ಕೆ ನನಗೆ ವಿಷಯಗಳೇ ಗೊತ್ತಾಗಿರಲಿಲ್ಲ…. ಈಗ ತನ್ನ ಮಗಳನ್ನು ಮನೆಗೆ ಕರೆತಂದು ಸಾಕುತ್ತೇನೆ ಎನ್ನುತ್ತಿದ್ದಾರೆ. ನನಗೆ ಅದು ಬೇಕಾಗಿಲ್ಲ…. ಅಲ್ಲದೆ ನನ್ನನ್ನು ಅವರು ಎಂದೂ ಹೆಂಡತಿಯಾಗಿ, ಹೆಣ್ಣಾಗಿ ಪ್ರೀತಿ ಗೌರವದಿಂದ ನೋಡಿಕೊಂಡಿಲ್ಲ. ನನ್ನ ಮಾತುಗಳಿಗೆ ಎಂದೂ ಮನ್ನಣೆಯಿರಲಿಲ್ಲ…. ಕುಡಿತ, ಸಿಗಾರ್ ಬಿಡಿಸುವುಷ್ಟು ನನಗೆ ತಾಳ್ಮೆ ಇಲ್ಲ…. ನನ್ನದು ಚೂರಾದ ಬಾಳು…. ಇದು ನನ್ನ ಸ್ವಯಂಕೃತಾಪರಾಧ ಕಾಂತಿ…. ನನ್ನ ಇಂದಿನ ಬದುಕಿಗೆ ಸ್ಥಿತಿಗೆ ನಾನೇ ಹೊಣೆ……” ಎಂದಳು.
“ಮುಂದೇನು ಮಾಡುತ್ತಿ ನಿತ್ಯಾ….. ಅವನನ್ನು ಬಿಟ್ಟು ಬಿಡುತ್ತೀಯಾ….?” ಕಾಂತಿ ಸಂಕಟದಿಂದ ಕೇಳಿದಳು. ಗೆಳತಿಯ ಬರಡಾದ ಬದುಕಿಗೆ ಅವಳು ಮರುಕಪಟ್ಟಳು.
“ಹ್ಞೂಂ…. ಬಿಟ್ಟು ಬಂದಿದ್ದೇನೆ. ಅವನ ಹಾದರಕ್ಕೆ ಹುಟ್ಟಿದ ಮಗುವನ್ನು ನೋಡಿಕೊಂಡು ನಾನು ಖಂಡಿತ ಇರಲಾರೆ ಕಾಂತಿ…. ಅಲ್ಲದೆ, ಅವನಿಗೆ ನನ್ನ ಮೇಲೆ ಯಾವ ರೀತಿಯ ಪ್ರೀತಿಯೂ ಇಲ್ಲ. ಪ್ರೀತಿ ಇದ್ದಿದ್ದರೆ ಬಹುಶಃ ತಪ್ಪನ್ನು ಕ್ಷಮಿಸುತ್ತಿದ್ದೆನೇನೋ…. ಆದರೆ ಪ್ರೀತಿ ಇಲ್ಲದ ಮೇಲೆ ಮನಸ್ಸು ಹೇಗೆ ಒಲಿಯುತ್ತೆ…..? ಕ್ಷಮಿಸುತ್ತೆ…..? ನನಗೆ ಆ ಬದುಕು ಒಂದು ದುಃಸ್ವಪ್ನ…. ವಿಚ್ಛೇದನ ಪಡೆಯುತ್ತೇನೆ. ನನಗೆ ವಿದ್ಯೆ ಇದೆ. ಉದ್ಯೋಗಕ್ಕೆ ಪ್ರಯತ್ನಿಸಿದ್ದೆ ಒಂದು ಉದ್ಯೋಗ ಸಿಕ್ಕಿದೆ. ಮುಂದಿನ ವಾರದಿಂದ ಕೆಲಸಕ್ಕೆ ಹೋಗುತ್ತೇನೆ. ಸದ್ಯಕ್ಕೆ ತೊಂದರೆಯಿಲ್ಲ.
“ಮುಂದಿನ ಜೀವನ ಹೇಗೋ ಗೊತ್ತಿಲ್ಲ….. ಈಗ ನೆಮ್ಮದಿ ಕಂಡುಕೊಳ್ಳುತ್ತಿದ್ದೇನೆ. ಆದರೆ ಕಳೆದುದಕ್ಕೆ ಕೊರಗುತ್ತಾ ಕೂರುವುದಿಲ್ಲ. ಬದುಕು ವಿಶಾಲವಾಗಿದೆ. ಬದುಕಲು ನೂರಾರು ದಾರಿಗಳಿವೆ. ಯೋಚಿಸಿ ಆಯ್ಕೆ ಮಾಡಿಕೊಳ್ಳುತ್ತೇನೆ….” ಎಂದಳು ನಿತ್ಯಾ.
ನಿತ್ಯಾ ನೋವಿನಿಂದ ಹೇಳುತ್ತಿದ್ದರೂ ಅವಳ ಮಾತಿನಲ್ಲಿ ಖಚಿತತೆ ಇತ್ತು. ದನಿಯಲ್ಲಿ ಆತ್ಮವಿಶ್ವಾಸವಿತ್ತು. ಬದುಕಿನತ್ತ ಉತ್ಸಾಹವಿತ್ತು. ಕಣ್ಮುಂದೆ ಭವಿಷ್ಯದ ಬೆಳಕಿತ್ತು. ಅದನ್ನು ಹುಡುಕಿಕೊಳ್ಳುವ ಅದಮ್ಯ ಚೇತನವಿತ್ತು.
“ನಿಜ ನಿತ್ಯಾ…., ಆಗಿಹೋಗಿರುವುದಕ್ಕೆ ಏನು ಮಾಡಲೂ ಸಾಧ್ಯವಿಲ್ಲ. ಮುಂದೆ ನೀನು ಅಂದುಕೊಂಡಂತೆ ರಾಜಮಾರ್ಗವೇ ಕಾಣಬಹುದು. ಅದರಲ್ಲಿ ನೀನು ರಾಣಿಯಂತೆ ಹೆಜ್ಜೆ ಹಾಕು. ಮತ್ತೆ ಗೆಲುವೇ ಸಿಗಲಿ. ನನ್ನ ಸಹಾಯ, ಸಹಕಾರ ಎಂದೂ ನಿನ್ನ ಜೊತೆಗಿರುತ್ತದೆ. ಒಳಿತಾಗಲಿ ಎಂದೇ ಹಾರೈಸುತ್ತೇನೆ…….” ಎಂದು ಮನದುಂಬಿ ಹೇಳಿದಳು ಕಾಂತಿ.
ಕಾಂತಿ ತುಂಬು ಮನಸ್ಸಿನಿಂದ ಹಾರೈಸಿ ಗೆಳತಿಯನ್ನು ಬೀಳ್ಕೊಟ್ಟಳು. ನೋವನ್ನು ಹೊರ ಹಾಕಿ ನಿರಾಳಳಾಗಿದ್ದ ನಿತ್ಯಾ ಬದುಕಿನತ್ತ ಹೊಸ ಹೆಜ್ಜೆ ಹಾಕುವಂತೆ ನಡೆಯತೊಡಗಿದಳು.