ಕಥೆ - ವೇದಾ ಮಂಜುನಾಥನ್
ಇಂದಿರೆ' ಈ ಹೆಸರೇ ಅಂಥದ್ದು! ಆ ವರ್ಷದ ರಾಜ್ಯೋತ್ಸ ಪ್ರಶಸ್ತಿ ಪ್ರಕಟಗೊಂಡಿತ್ತು. `ಇಂದಿರೆ' ಎಂಬ ಕಾವ್ಯನಾಮದಿಂದ ಕಳೆದ ಮೂವತ್ತು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕಾದಂಬರಿಗಳನ್ನು ನೀಡಿದ ಕೀರ್ತಿ ಇಂದಿರೆಯದು. ಪ್ರಶಸ್ತಿ, ಪ್ರದಾನ ಸಮಾರಂಭ ಮುಗಿಸಿಕೊಂಡು ಮನೆಗೆ ಬಂದ ಇಂದಿರೆಯನ್ನು ಸಂಪರ್ಕಿಸಲು ಪ್ರತಕರ್ತೆ ರೇಖಾ ಬಂದಿದ್ದಳು. ತನ್ನ ಬದುಕಿನ ನೆನಪುಗಳ ಪುಟಗಳನ್ನು ಬಿಚ್ಚಿ ಹರಡಿದ್ದಳು ಇಂದಿರೆ.
ಇಂದಿರೆಯ ಬದುಕಿನ ಮೊದಲ ಪುಟವೇ ದುರಂತದಿಂದ ಆರಂಭವಾಗಿತ್ತು! ಬಾಲ್ಯದಲ್ಲಿ ಪೋಲಿಯೋಗೆ ತುತ್ತಾದ ಇಂದಿರೆಯ ಬಲಗಾಲು ಊನವಾಗಿ, ಜೀವನಪರ್ಯಂತ ಓಡಾಡಲು ಬಾರದೆ ವಿಕಲಚೇತನೆಯಾಗಿದ್ದಳು. ಈ ದುರಂತ ಹೆಣ್ಣು ಇಂದಿರೆಯ ಮೊದಲ ಹೆಸರು ವಿಮಲಾಬಾಯಿ. ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದಾಗ ಕನ್ನಡ ಉಪನ್ಯಾಸಕರೊಬ್ಬರು ಕೊಟ್ಟ ಕಾವ್ಯನಾಮ `ಇಂದಿರೆ!'
ಇಂದಿರೆಯ ದುರಂತ ಮತ್ತೂ ಮುಂದುವರಿದು, ಅವಳು ಚಿಕ್ಕಂದಿನಲ್ಲಿಯೇ ತಂದೆತಾಯಿಯನ್ನು ಕಳೆದುಕೊಂಡು, ಬೇರೆಯವರ ಆಶ್ರಯದಲ್ಲಿ ಅನಾದರಣೀಯವಾದ, ಕಣ್ಣೀರಿನ ಬದುಕು ಕಂಡಳು. ಇಂದಿರೆಯ ಬಾಳಿಗೆ ಸಂತಸ, ನೆಮ್ಮದಿ ಗಗನಕುಸುಮವಾಗುತ್ತಿದ್ದಂತೆ ಅವಳು ತನ್ನ ಆಸಕ್ತಿಯನ್ನು ಗ್ರಂಥಾಲಯದ ಪುಸ್ತಕಗಳ ಜೊತೆಗೆ ಕಳೆಯುತ್ತಾ ತನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಟ್ಟು, ಒಂಟಿಕಾಲಿನಲ್ಲಿ ಒಂಟಿಯಾಗಿಯೇ ತನ್ನ ಬದುಕನ್ನು ಸವೆಸಿದ ಧೀಮಂತ ಮಹಿಳೆಯಾಗಿದ್ದಳು! ಸಂದರ್ಶನ ಮಾಡುತ್ತಿದ್ದ ರೇಖಾಳ ಕಂಗಳು ತುಂಬಿಬಂದವು. ಇಂದಿರೆ, ನನಗೂ ಚಿಕ್ಕಂದಿನಲ್ಲಿ ಎಲ್ಲಾ ಹುಡುಗಿಯರಂತೆ ಕುಂಟೇಬಿಲ್ಲೆ ಆಡಬೇಕು, ಪ್ರಾಯದಲ್ಲಿ ಗೆಜ್ಜೆ ಹಾಕಿ ಸದ್ದು ಮಾಡುತ್ತಾ ನಡೆಯಬೇಕು, ಆಗಸದ ಕಾಮನಬಿಲ್ಲನ್ನು ನೋಡಿ ಕುಣಿದಾಡಬೇಕು, ಜರತಾರಿ ಸೀರೆ ಉಟ್ಟು, ನಾಚುತ್ತಾ ಹಬ್ಬೆರಳಿನ ತುದಿಯಿಂದ ನೆಲದ ಮೇಲೆ ರಂಗೋಲಿ ಹಾಕುತ್ತಾ ಇತ್ಯಾದಿ, ಇತ್ಯಾದಿ.... ಆದರೆ ತನ್ನ ಬಯಕೆಗಳು ಈ ಜನ್ಮಕ್ಕೆ ಕೇವಲ ಬಯಕೆಗಳಾಗಿಯೇ ಉಳಿದಿವೆ. ಈಗ ತಾನು ಸಾಹಿತ್ಯ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸೇವೆ ಮಾಡುತ್ತಾ ಇರಬೇಕು. ತನಗೆ ಕೆಲಸದ ಹುಡುಗಿ ಸಾವಂತ್ರಿಯ ಆಸರೆಯೊಂದೇ ಇರುವುದು ಎಂದು ಹೇಳಿಕೊಂಡದ್ದನ್ನು ರೇಖಾ ಬರೆದುಕೊಂಡು, ಇಂದಿರೆಯ ಹಾಗೆ ಎಲ್ಲಾ ಹೆಣ್ಣುಮಕ್ಕಳೂ ದಿಟ್ಟತನದಿಂದ ಬದುಕನ್ನು ಎದುರಿಸಬೇಕೆಂದು ಆಶಿಸಿದಳು.
ಎಂದಿನಂತೆ ಅಂದೂ ಸಾವಂತ್ರಿಯ ಸಹಾಯದಿಂದ ಇಂದಿರೆ ಪಾರ್ಕಿಗೆ ಬಂದು ಕುಳಿತಳು. ವಯಸ್ಸು 50 ಸಮೀಪಿಸುತ್ತಿದ್ದರಿಂದ ಕೊಂಚ ಆಯಾಸವೆನಿಸಿತು. ದಿನ ಪಾರ್ಕಿನಲ್ಲಿ ಭೇಟಿಯಾಗಿ, ಕಷ್ಟಸುಖಗಳನ್ನು ಹಂಚಿಕೊಳ್ಳುವ ಪ್ರೊಫೆಸರ್ ರಾಜಶೇಖರ್ ಅಂದೂ ಭೇಟಿಯಾದರು.
``ಕಂಗ್ರಾಟ್ಸ್ ಇಂದಿರೆ! ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿತೆಂದು ಪತ್ರಿಕೆಯಲ್ಲಿ ಓದಿದೆ.''
``ಧನ್ಯವಾದಗಳು ಸಾರ್.''
``ಅಂತೂ ನಿಮ್ಮ ಜೀವನದಲ್ಲಿ ಅಂದುಕೊಂಡದ್ದನ್ನೆಲ್ಲಾ ಸಾಧಿಸಿದಿರಿ ಎಂಬಂತಾಯಿತು.''
``ಒಂದು ಹಂತಕ್ಕೆ ಹೌದು, ಆದರೆ ಈಗ ನನ್ನ ಮೇಲೆ ಜವಾಬ್ದಾರಿ ಹೆಚ್ಚಾಯಿತು. ನಾನಿನ್ನೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆಯನ್ನು ಸಲ್ಲಿಸಬೇಕು.''
``ನಿಮ್ಮ ಸ್ವಾಭಿಮಾನ, ಛಲ, ಉತ್ಸಾಹ, ಆಸಕ್ತಿ, ಶ್ರದ್ಧೆ, ಪರಿಶ್ರಮ ಎಲ್ಲ ಅನುಕರಣೀಯ.''
``ಹೊಗಳಿಕೆ ಅತಿಯಾಯ್ತು. ಅಂಥದ್ದೇನಿಲ್ಲ,'' ಇಂದಿರೆ ನಗುತ್ತಾ ಹೇಳಿದಳು.
``ಹಾಗೇಕೆ ಅಂತೀರಿ? ಇಂದಿರೆ, ಈಗಿನ ಕಾಲದ ಹದಿಹರೆಯದವರು ನಿಮ್ಮನ್ನು ನೋಡಿ ಕಲಿಯಬೇಕಾದದ್ದು ಸಾಕಷ್ಟಿದೆ. ನಾನು ಮುಂದಿನ ವರ್ಷ ರಿಟೈರ್ಡ್ ಆಗ್ತೀನಿ. ಆಮೇಲೆ ನಿಮ್ಮ ಸಾಹಿತ್ಯವನ್ನು ಓದುವುದು, ವಿಮರ್ಶೆ ಮಾಡುವುದು, ಇಷ್ಟೇ ನನ್ನ ಕೆಲಸ,'' ಎಂದರು ರಾಜಶೇಖರ.