- ದೀಪಾ ರಾವ್
ರೈಲು ಬರಲು ಇನ್ನೂ 15 ನಿಮಿಷ ಉಳಿದಿತ್ತು. ಫ್ಲಾಟ್ ಫಾರ್ಮ್ ನಲ್ಲಿ ಬೆಂಚೊಂದರ ಮೇಲೆ ಕುಳಿತಿದ್ದ ರಮ್ಯಾ ಮತ್ತೆ ಮತ್ತೆ ಬಾಗಿಲಿನತ್ತ ತಿರುಗಿ ನೋಡುತ್ತಿದ್ದಳು. `ರಾಘವ್ ಇನ್ನೂ ಬರಲಿಲ್ಲವಲ್ಲ..... ಈ ಟ್ರೇನ್ ತಪ್ಪಿ ಹೋದರೆ, ಬಸ್ ಸ್ಟಾಪ್‌ವರೆಗೂ ನಡೆದು ಹೋಗಿ ಬಸ್ ಬದಲಾಯಿಸಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಬೀಳಬೇಕಾಗುತ್ತದೆ ಅಷ್ಟೇ,' ಎಂದು ರಮ್ಯಾ ಯೋಚಿಸುತ್ತಿದ್ದಳು.
ಆಗಿನ್ನೂ ಬೆಳಗ್ಗೆ 7 ಗಂಟೆ. ಸಿಟಿಗೆ ಹೋಗುವ ಮತ್ತು ಅಲ್ಲಿಂದ ಬರುವ ರೈಲುಗಳು ಹತ್ತಿಪ್ಪತ್ತು ನಿಮಿಷದ ಹಿಂದೆಯಷ್ಟೇ ನಿರ್ಗಮಿಸಿದ್ದರಿಂದ ಫ್ಲಾಟ್ ಫಾರ್ಮ್ ಮೇಲೆ ಹೆಚ್ಚು ಜನರಿರಲಿಲ್ಲ. ಒಂದು ಪಕ್ಕದಲ್ಲಿ 3-4 ಕಾಲೇಜು ಹುಡುಗರು, ಇಳಿವಯಸ್ಸಿನ ಒಂದು ಜೋಡಿ ಇದ್ದರು. ಒಂದಷ್ಟು ದೂರದಲ್ಲಿ ಲಂಪಟರಂತೆ ಕಾಣುತ್ತಿದ್ದ 4-5 ಯುವಕರು ಹರಟುತ್ತಾ ನಿಂತಿದ್ದರು.
ರಾಘವ್ ಒಳ ಬರುವುದನ್ನು ಕಂಡು ರಮ್ಯಾ ಮುಗುಳ್ನಕ್ಕು ಕೈ ಆಡಿಸಿದಳು. ಅವನೂ ಮುಗುಳ್ನಗೆಯ ಮಾರುತ್ತರವಿತ್ತ. ರಮ್ಯಾ ಬೆಂಚಿನಿಂದ ಎದ್ದು ನಿಲ್ಲುತ್ತಿರಲು ಅವಳ ಮೊಬೈಲ್ ರಿಂಗಣಿಸಿತು. ಅವಳು ಅದನ್ನು ಆನ್ ಮಾಡುತ್ತಿರುವಂತೆ ಯಾರೋ ಹಿಂದಿನಿಂದ ಅವಳ ಬೆನ್ನಿಗೆ ಚೂರಿ ಚುಚ್ಚಿದರು.
``ಹ್ಞಾಂ.....'' ಎಂದು ಕಿರಿಚಿದ ರಮ್ಯಾ ಆಘಾತದಿಂದ ತತ್ತರಿಸಿ ಕೆಳಗೆ ಬಿದ್ದಳು. ಅವಳ ತಲೆಗೆ ಪೆಟ್ಟಾಗಿ ಪ್ರಜ್ಞಾಹೀನಳಾದಳು.
ಮಿಂಚಿನಂತೆ ಎರಡೇ ಕ್ಷಣಗಳಲ್ಲಿ ನಡೆದುಹೋದ ಹಲ್ಲೆಯನ್ನು ರಾಘವ್ ದೂರದಿಂದಲೇ ಕಂಡು ಅವಳೆಡೆಗೆ ಧಾವಿಸಿ ಬಂದು ಏನಾಯಿತೆಂದು ನೋಡುವಷ್ಟರಲ್ಲಿ ಹಲ್ಲೆಕಾರರು ಮರೆಯಾಗಿದ್ದರು. ಸುತ್ತಲಿದ್ದವರು ``ಹೋ....'' ಎಂದು ಮುತ್ತಿದರು. ರೈಲ್ವೆ ಪೊಲೀಸರು ಜನರನ್ನು ದೂರ ಸರಿಸಿ ಅವಳನ್ನು ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಮಾಡಿದರು.
ರಮ್ಯಾಳನ್ನು ಕೂಡಲೇ ಐಸಿಯುಗೆ ಕೊಂಡೊಯ್ದರು. ಪೊಲೀಸರು ರಮ್ಯಾಳ ಫೋನ್‌ನಿಂದ ಅವಳ ಮನೆಗೆ ಸುದ್ದಿ ಮುಟ್ಟಿಸಿದರು. ಸ್ವಲ್ಪ ಹೊತ್ತಿನಲ್ಲಿ ಅವಳ ತಂದೆ ತಾಯಿ ಹಾಗೂ ಅಕ್ಕ ಭಾವ ಬಂದರು. ಡಾಕ್ಟರು 24 ಗಂಟೆಗಳ ಅಲ್ಟಿಮೇಟಂ ನೀಡುತ್ತಾ, ಈ ಅವಧಿಯಲ್ಲಿ ಅವಳ ಪರಿಸ್ಥಿತಿ ಉತ್ತಮಗೊಂಡರೆ ಬದುಕುಳಿಯುವಳು ಎಂದು ಆಶ್ವಾಸನೆಯಿತ್ತರು.
ರಮ್ಯಾಳ ತಾಯಿ ಮತ್ತು ಅಕ್ಕ ಬಿಕ್ಕಳಿಸುತ್ತಾ ಕಣ್ಣೀರು ಕರೆಯುತ್ತಿದ್ದರು. ಅವಳ ತಂದೆ ಗರ ಬಡಿದವರಂತೆ ಒಂದೆಡೆ ಕುಳಿತುಬಿಟ್ಟಿದ್ದರು. ಭಾವ ಐಸಿಯು ಮತ್ತು ಮೆಡಿಕಲ್ ಸ್ಟೋರ್ಸ್ ಮಧ್ಯೆ ಓಡಾಡುತ್ತಿದ್ದರು.
ರಾಘವ್ ಒಂದು ಮೂಲೆಯ ಬೆಂಚಿನ ಮೇಲೆ ತಲೆಗೆ ಕೈ ಹೊತ್ತು ಕುಳಿತಿದ್ದ. ದೂರದಿಂದಲೇ ಅವರನ್ನೆಲ್ಲ ನೋಡುತ್ತಿದ್ದ. ಆದರೆ ಏನು ಹೇಳಬೇಕು, ಹೇಗೆ ಹೇಳಬೇಕು ಎಂದು ಅವನಿಗೆ ಗೊತ್ತಾಗಲಿಲ್ಲ. ತನ್ನ ಮನೆಯವರೆಲ್ಲ ಹಳ್ಳಿಯಲ್ಲಿ ವಾಸಿಸುವವರು, ಅವರಿಗೆ ಕನ್ನಡ ಹೊರತು ಬೇರೆ ಭಾಷೆ ತಿಳಿದಿಲ್ಲ ಎಂದು ರಮ್ಯಾ ಹೇಳಿದ್ದಳು. ಅವಳು ಪ್ರಾರಂಭದಿಂದಲೂ ಓದಿನಲ್ಲಿ ಚುರುಕಾಗಿದ್ದಳು. ಹೀಗಾಗಿ ನಗರದ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದು ಮುಂದುವರಿಸಿ ಎಂಜಿನಿಯರಿಂಗ್ ಡಿಗ್ರಿ ಪಡೆದಳು. ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು. ಆದರೆ ಅವಳ ಅಕ್ಕ 12ನೇ ತರಗತಿಗೆ ಬರುವಷ್ಟರಲ್ಲಿ ಸಮೀಪದ ಹಳ್ಳಿಯ ಸಂಪನ್ನ ಪರಿವಾರದೊಡನೆ ಸಂಬಂಧ ಕುದುರಿ ಮದುವೆಯಾಗಿತ್ತು.