“ಸಾರಿ ಮೇಡಂ, ಉಪ್ಪಿಟ್ಟಿನ ಮಿಕ್ಸ್ ಒಂದೇ ಪ್ಯಾಕೆಟ್‌ ಇತ್ತು. ಅವರು ತಗೊಂಡರು. 3-4 ದಿನಗಳಲ್ಲಿ ಹೊಸ ಸ್ಟಾಕ್‌ ಬರುತ್ತೆ,” ಸೇಲ್ಸ್ ಮನ್‌ ಹೇಳಿದ್ದನ್ನು ಕೇಳಿ ರಜತ್‌ ತಿರುಗಿ ನೋಡಿದ. ಗೌರವರ್ಣದ ಒಬ್ಬ ಅಮೆರಿಕನ್‌ ಯುವತಿ ಅವನತ್ತ ನೋಡುತ್ತಿದ್ದಳು.

ಅವಳ ಆಕರ್ಷಣೆಯಿಂದ ವಿಚಲಿತನಾದ ರಜತ್‌ ಉಪ್ಪಿಟ್ಟಿನ ಮಿಕ್ಸ್ ಪ್ಯಾಕೆಟ್‌ನ್ನು ಸೇಲ್ಸ್ ಮನ್‌ಗೆ ವಾಪಸ್‌ ಕೊಟ್ಟು, “ಈ ಪ್ಯಾಕೆಟ್‌ ಅವರಿಗೆ ಕೊಡು. ನಾನು ಇನ್ನೊಂದು ದಿನ ತಗೋತೀನಿ,” ಎಂದ.

ಆ ಯುವತಿ ರಜತ್‌ನನ್ನು ಮೆಚ್ಚುಗೆಯ ದೃಷ್ಟಿಯಿಂದ ನೋಡಿ ಡಿಪಾರ್ಟ್‌ಮೆಂಟ್‌ ಸ್ಟೋರ್‌ನಿಂದ ಹೊರಟುಹೋದಳು.

ಅಂದು ಮೆಟ್ರೋ ಟ್ರೇನ್‌ ಲೇಟಾಗಿತ್ತು. ಚಳಿ ಹೆಚ್ಚಾಗುತ್ತಿದ್ದು ಹಿಮ ಬೀಳುತ್ತಿತ್ತು. ರಜತ್‌ ಪ್ಲ್ಯಾಟ್‌ಫಾರ್ಮ್ ನಲ್ಲಿ ಬಿರುಸಿನಿಂದ ನಡೆಯುತ್ತಿದ್ದ. ಇದ್ದಕ್ಕಿದ್ದಂತೆ ಅವನು ಒಂದು ಹುಡುಗಿಗೆ ಡಿಕ್ಕಿ ಹೊಡೆದ. ಇಬ್ಬರ ದೃಷ್ಟಿಯೂ ಸೇರಿದಾಗ ಇಬ್ಬರೂ ಮುಗುಳ್ನಕ್ಕರು. ಅವಳು ಡಿಪಾರ್ಟ್‌ಮೆಂಟ್‌ ಸ್ಟೋರ್‌ನಲ್ಲಿ ಭೇಟಿಯಾದ ಯುವತಿಯೇ ಆಗಿದ್ದಳು. ಆಗಲೇ ಮೆಟ್ರೋ ಟ್ರೇನ್‌ ಬಂತು. ಇಬ್ಬರೂ ಒಂದೇ ಬೋಗಿಯಲ್ಲಿ ಹತ್ತಿದರು. ರಜತ್‌ ಅವಳ ರೇಶಿಮೆಯಂತಹ ಉದ್ದವಾದ ಕೂದಲು ಹಾಗೂ ಗೌರವರ್ಣದಿಂದ ಬಹಳ ಪ್ರಭಾವಿತನಾಗಿದ್ದ. ಅವಳ ಹೆಸರು ಜೆನಿಥ್‌. ಇಬ್ಬರೂ ಹರಟತೊಡಗಿದರು.

“ನೀವೆಲ್ಲಿ ಕೆಲಸ ಮಾಡ್ತೀರಿ?”

“ಪಾರ್ಕ್‌ ಅವೆನ್ಯೂನ ಒಂದು ಕಂಪನಿಯಲ್ಲಿ.”

“ನಾನೂ ಅಲ್ಲೇ ಕೆಲಸ ಮಾಡೋದು. ನಿಮ್ಮ ಬಿಲ್ಡಿಂಗ್‌ ಪಕ್ಕದಲ್ಲೇ ನಮ್ಮ ಆಫೀಸ್‌ ಇರೋದು.”

ಈ ಭೇಟಿಯ ನಂತರ ಭೇಟಿಗಳ ಸಾಲು ಶುರುವಾಯಿತು. ನಿಧಾನವಾಗಿ ಆತ್ಮೀಯತೆ ಬೆಳೆಯಿತು. ನಂತರ ಇಬ್ಬರೂ ಹತ್ತಿರವಾದರು. ಒಮ್ಮೆ ರಜತ್‌ ಅವಳ ಮನೆಗೆ ಬಂದರೆ, ಇನ್ನೊಮ್ಮೆ ಜೆನಿಥ್‌ ಅವನ ಮನೆಗೆ ಬರುತ್ತಿದ್ದಳು.

ಅವಿವಾಹಿತ ಸ್ತ್ರೀ ಪುರುಷರು ಒಟ್ಟಿಗೆ ಇರುವುದು ಅಮೆರಿಕಾದಲ್ಲಿ ಸಾಮಾನ್ಯವಾಗಿತ್ತು. ಅಮೆರಿಕಾ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ವಿಚ್ಛೇದನ ಪಡೆದರೆ ಬಹಳಷ್ಟು ಖರ್ಚಾಗುತ್ತಿತ್ತು. ಹೀಗಾಗಿ ಅಸಂಖ್ಯಾತ ಜೋಡಿಗಳು ವಿವಾಹವಾಗದೆ ಲಿವ್ ಇನ್‌ ರಿಲೇಶನ್‌ಶಿಪ್‌ನಲ್ಲಿ ಇರಲು ಪ್ರಾಮುಖ್ಯತೆ ನೀಡುತ್ತಿದ್ದರು. ಅಂತಹ ಜೋಡಿಗಳಲ್ಲಿ ಪ್ರಾಮಾಣಿಕತೆ ಅಥವಾ ಅಪ್ರಾಮಾಣಿಕತೆಯಂತಹ ಶಬ್ದಗಳಿಗೆ ಯಾವುದೇ ಅರ್ಥ ಇರಲಿಲ್ಲ. ಆದರೆ ಒಟ್ಟಿಗೆ ಇರುವಷ್ಟು ದಿನಗಳವರೆಗೆ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಬೇಕು ಎಂದು ತಿಳಿಯಲಾಗಿತ್ತು.

ರೋಚಕ ವಿಷಯವೆಂದರೆ ಕೆಲವು ಸಮಯದವರೆಗೆ ಜೊತೆಯಲ್ಲಿ ಇರಬೇಕೆಂದು ಒಪ್ಪಿಕೊಂಡ ಜೋಡಿಗಳು ಇಡೀ ಜೀವನ ಜೊತೆಯಲ್ಲಿರುತ್ತಿದ್ದರು. ಕಾನೂನು ರೀತ್ಯಾ ರಿಜಿಸ್ಟರ್‌ ಮದುವೆಯಾದವರ ಪೈಕಿ ಅನೇಕರ ಮದುವೆ ಮುರಿದು ಬೀಳುತ್ತಿತ್ತು. ಅಂದರೆ ಸದೃಢವಾದ ದಾರದಿಂದ ಬಂಧಿಸಿದ್ದು ಮುರಿದುಹೋಗುತ್ತಿತ್ತು. ಬಲಹೀನವಾದ ದಾರದಿಂದ ಕಟ್ಟಿದ್ದು ಇಡೀ ಜೀವನ ನಡೆಯುತ್ತಿತ್ತು. ಅಮೆರಿಕಾದಲ್ಲಿ ಯುವಕ ಯುವತಿಯರಿಗೆ ಡೇಟಿಂಗ್‌ ಮಾಡುವುದು ಅಗತ್ಯ ಎಂದು ತಿಳಿಯಲಾಗಿತ್ತು. ಡೇಟಿಂಗ್‌ಗೆ ಹೋಗದಿರುವವರನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕೌಮಾರ್ಯಕ್ಕೆ ಬೆಲೆ ಇರಲಿಲ್ಲ.

ಜೆನಿಥ್‌ ರಜತ್‌ನೊಂದಿಗೆ ಸಂಬಂಧ ಬೆಳೆಸುವ ಮೊದಲು ತನ್ನ ಹಾಗೂ ಅವನ ಎಚ್‌ಐವಿ ಟೆಸ್ಟ್ ಕೂಡ ಮಾಡಿಸಿದಳು. ತಮ್ಮಲ್ಲಿ ಯಾರಾದರೊಬ್ಬರು ಏಡ್ಸ್ ಪೀಡಿತರೇ ಎಂಬುದನ್ನು ಕಂಡುಕೊಳ್ಳಲು. ಸಮಾಗಮದ ಸಮಯದಲ್ಲಿ  ಕಾಂಡೋಮ್ ಉಪಯೋಗಿಸುವುದು ಪ್ರಾಕೃತಿಕ ಮಜಾ ಕಡಿಮೆಗೊಳಿಸುತ್ತದೆಂದು ಇಬ್ಬರೂ ತಿಳಿದಿದ್ದರು.

ಒಂದು ರಾತ್ರಿ ಸಮಾಗಮದ ಸಮಯದಲ್ಲಿ ರಜತ್‌ ಹೇಳಿದ, “ಜೆನಿಥ್‌, ನಾನು ಕಾಂಡೋಮ್ ಬಳಸಲೂ ಬಿಡಲ್ಲ. ನೀನೂ ಯಾವುದೇ ಗರ್ಭನಿರೋಧಕ ತೆಗೆದುಕೊಳ್ಳಲ್ಲ. ಒಂದುವೇಳೆ ಪ್ರೆಗ್ನೆಂಟ್‌ ಆಗಿಬಿಟ್ರೆ?”

“ಆಗಿಬಿಟ್ರೆ ಏನು? ಗರ್ಭಪಾತ ಮಾಡಿಸಿಕೊಳ್ತೀನಿ ಅಥವಾ ಮಗಳಿಗೆ ಜನ್ಮಕೊಟ್ಟು ತಾಯಿಯಾಗ್ತೀನಿ,” ಜೆನಿಥ್‌ ಸಹಜವಾಗಿ ಹೇಳಿದಳು.

“ಗರ್ಭಪಾತಾನೇ ಸರಿ. ಮಗು….”

“ಯಾಕೆ? ನಿನಗೆ ಮಗು ಇಷ್ಟ ಇಲ್ವಾ?”

“ಹಾಗಲ್ಲ. ಮದುವೆಯಾಗದೆ ಮಗುವಿಗೆ ಜನ್ಮ ಕೊಡೋದು ಅಕ್ರಮ ಅಲ್ವಾ?”

“ಅದೆಲ್ಲ ಹಳೆಯ ಕಾಲದ ವಿಷಯಗಳು. ಈ ಕಾಲದಲ್ಲಿ ಅದನ್ನೆಲ್ಲಾ ಯಾರೂ ಒಪ್ಪೋದಿಲ್ಲ. ಅದನ್ನು ಬಿಡು. ನಿನ್ನ ಹೆಂಡತಿ ಇಲ್ಲಿಗೆ ಯಾವಾಗ ಬರ್ತಿದ್ದಾಳೆ?” ಜೆನಿಥ್‌ ಮಾತು ಬದಲಾಯಿಸುತ್ತಾ ಕೇಳಿದಳು.

“ನಾನು ಇತ್ತೀಚೆಗೆ ಗ್ರೀನ್‌ ಕಾರ್ಡ್‌ ಮಾಡಿಸಿದ್ದೇನೆ. ಈಗ ನಾನು ಅವಳನ್ನು ಇಲ್ಲಿಗೆ ಕರೆಸಬಹುದು. ಈಗ ನಾನು ಪದೇ ಪದೇ ನನ್ನ ವೀಸಾ ಮತ್ತು ವರ್ಕ್‌ ಪರ್ಮಿಟ್‌ ಹೆಚ್ಚಿಸುವ ಅಗತ್ಯವಿಲ್ಲ.”

ರಜತ್‌ನ ಮಾತು ಕೇಳಿ ಜೆನಿಥ್‌ ಗಂಭೀರಳಾದಳು. ಮದುವೆಯಾದ ಹೆಂಡತಿಗೆ ಕಾನೂನಿನ ಹಕ್ಕು ಇರುತ್ತದೆ. ತಾನಂತೂ ಒಬ್ಬ ಸಂಗಾತಿಯ ರೂಪದಲ್ಲಿ ಲಿವ್ ಇನ್‌ ರಿಲೇಶನ್‌ಶಿಪ್‌ನಲ್ಲಿ ಅವನೊಂದಿಗೆ ಇದ್ದಳು.

ಕೊನೆಗೂ ರಜತ್‌ನ ಪತ್ನಿ ಸುನೀತಾ ಅಮೆರಿಕಾಗೆ ಬಂದಳು. ಜೆನಿಥ್‌ ವಾಸ್ತವವನ್ನು ಅರ್ಥ ಮಾಡಿಕೊಂಡು ಸುನೀತಾ ಬರುವ ಮೊದಲೇ ತನ್ನ ವಸ್ತುಗಳನ್ನು ರಜತ್‌ನ ಪ್ಲ್ಯಾಟ್‌ನಿಂದ ಎತ್ತಿಕೊಂಡು ತನ್ನ ಪ್ಲ್ಯಾಟ್‌ಗೆ ಹೊರಟುಬಿಟ್ಟಳು.

ರಜತ್‌ನ ಪತ್ನಿ ಸುನೀತಾ ಕೂಡ ಸ್ನಾತಕೋತ್ತರ ಪದವೀಧರೆಯಾಗಿದ್ದಳು. ಜೊತೆಗೆ ಕಂಪ್ಯೂಟರ್‌ನಲ್ಲಿ ಡಿಪ್ಲೋಮಾ ಹೋಲ್ಡರ್ ಆಗಿದ್ದಳು. ಜೆನಿಥ್‌ಗೆ ಹೋಲಿಸಿದರೆ ಅವಳು ಕೊಂಚ ತೆಳ್ಳಗೆ, ಕುಳ್ಳಗಿದ್ದಳು. ಗೋಧಿ ಬಣ್ಣ. ಆದರೆ ಭಾರತೀಯ ಮಹಿಳೆಯ ದೃಷ್ಟಿಕೋನದಲ್ಲಿ ಅವಳೂ ಸುಂದರಳಾಗಿದ್ದಳು.

ಸ್ವಲ್ಪ ದಿನಗಳವರೆಗೆ ಅವರಿಬ್ಬರ ಸುತ್ತಾಟ ನಡೆಯಿತು. ನಂತರ ರಜತ್‌ ಸುನೀತಾಗೆ ಕೆಲಸ ಹುಡುಕತೊಡಗಿದ. ಸ್ವಲ್ಪ ದಿನಗಳಲ್ಲಿ ಅವಳಿಗೆ ಸಾಫ್ಟ್ ವೇರ್‌ ತಯಾರಿಸುವ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಸುನೀತಾಳ ಸಹೋದ್ಯೋಗಿಗಳಲ್ಲಿ ಅನೇಕ ದೇಶಗಳ ಯುವಕರಿದ್ದರು. ಅವಳ ಪಕ್ಕದ ಸೀಟ್‌ನಲ್ಲಿದ್ದ ಪೀಟರ್‌ ಅಮೆರಿಕನ್‌ ಆಗಿದ್ದ. ಅವನು ಹಳೆಯ ಆಲೋಚನೆಗಳುಳ್ಳ ರೋಮನ್ ಕ್ಯಾಥೋಲಿಕ್‌ ಆಗಿದ್ದು, ಪ್ರತಿ ಭಾನುವಾರ ಚರ್ಚ್‌ಗೆ ಹೋಗುತ್ತಿದ್ದ. ತನ್ನ ತಂದೆ ತಾಯಿಯರ ಸಮಾಧಿಗಳ ಮೇಲೆ ಮೇಣದಬತ್ತಿಗಳನ್ನು ಅಂಟಿಸುತ್ತಿದ್ದ.

ಸುನೀತಾ ಪೀಟರ್‌ನ ಸ್ವಭಾವ ಮೆಚ್ಚಿ ಅವನತ್ತ ಆಕರ್ಷಿತಳಾಗಿದ್ದಳು. ಪೀಟರ್‌ ಕೂಡ ಸುನೀತಾಳ ಭಾರತೀಯ ಉಡುಪಾದ ಸೀರೆ ಹಾಗೂ ಸಲ್ವಾರ್‌ ಕಮೀಜ್‌ನ್ನು ಬಹಳ ಇಷ್ಟಪಡುತ್ತಿದ್ದ. ಅವನು ಸುನೀತಾಳ ಬಗ್ಗೆ ಸ್ನೇಹ, ವಿಶ್ವಾಸ ಇಟ್ಟುಕೊಂಡಿದ್ದ. ಅವನಿಗೆ ಭಾರತೀಯ ಆಹಾರ ರುಚಿಸುತ್ತಿತ್ತು. ಸುನೀತಾ ಅವನಿಗೆ ತನ್ನ ಟಿಫಿನ್‌ ಬಾಕ್ಸ್ ನಲ್ಲಿ ಊಟ, ತಿಂಡಿ ತರತೊಡಗಿದಳು. ಪೀಟರ್‌ಗೆ ಊಟ ಮಾಡುವಾಗ ಬಹಳ ಸಂಕೋಚವಾಗುತ್ತಿತ್ತು. ಏಕೆಂದರೆ ಅವನು ಅದಕ್ಕೆ ಬದಲಾಗಿ ತನ್ನ ಮನೆಯ ಆಹಾರ ಕೊಡಲಾಗುತ್ತಿರಲಿಲ್ಲ.

ಅವನ ಭಾವನೆಗಳನ್ನು ಅರ್ಥ ಮಾಡಿಕೊಂಡ ಸುನೀತಾ ನಗುತ್ತಾ ಹೇಳಿದಳು, “ಪೀಟರ್‌, ಪರವಾಗಿಲ್ಲ. ಟೇಕ್‌ ಇಟ್‌ ಈಸಿ.”

ಆಗ ಪೀಟರ್‌ ಕೇಳಿದ, “ನನಗೆ ಭಾರತೀಯ ಅಡುಗೆ ಮಾಡೋದನ್ನು ಕಲಿಸಿಕೊಡ್ತೀರಾ?”

“ಖಂಡಿತಾ…. ನೀವು ಫ್ರೀ ಆಗಿದ್ದಾಗ ನಮ್ಮ ಮನೆಗೆ ಬನ್ನಿ.”

ಮುಂದಿನ ಭಾನುವಾರ ಪೀಟರ್‌ ಸುನೀತಾಳ ಮನೆಗೆ ಬಂದ. ಸುನೀತಾ ಅವನನ್ನು ರಜತ್‌ಗೆ ಪರಿಚಯಿಸಿದಳು. ಪರಿಚಯಿಸುವಾಗ ರಜತ್‌ ಕೊಂಚ ಅಸಹಜವಾಗಿದ್ದರೆ ಪೀಟರ್‌ ಸಹಜವಾಗಿದ್ದ. ಪೀಟರ್‌ ನೀಲಿ ಜೀನ್ಸ್ ಮತ್ತು ಸಾಧಾರಣ ಶರ್ಟ್‌ಮೇಲೆ ತೆಳುವಾದ ಜಾಕೆಟ್‌ ಧರಿಸಿದ್ದ. ರಜತ್‌ ಪಿಕ್ನಿಕ್‌ಗೆ ಹೋಗಬೇಕಾದ್ದರಿಂದ ಸೂಟು ಬೂಟು ಧರಿಸಿದ್ದ.

“ರಜತ್‌, ನೀವು ಹೊರಗೆ ಹೋಗ್ತಿದ್ದೀರಾ?”

“ಹೌದು. ಪಿಕ್ನಿಕ್‌ಗೆ ಹೋಗ್ತಿದ್ದೀನಿ.”

“ನೀವು ಸೂಟ್‌ ಧರಿಸಿದ್ದೀರಿ. ನಾನು ಕ್ಯಾಶುವಲ್ ವೇರ್‌ ಇಷ್ಟಪಡ್ತೀನಿ. ನನಗೆ ನಿಮ್ಮ ಭಾರತೀಯ ಡ್ರೆಸ್‌ ಕುರ್ತಾ ಪೈಜಾಮ ಬಹಳ ಇಷ್ಟ.”

“ಅಂದ್ರೆ ನೀವು ಭಾರತೀಯರಾಗುತ್ತಿದ್ದೀರಿ ಮತ್ತು ನಾವು ಅಮೆರಿಕನ್‌….” ಎಂದು ಸುನೀತಾ ಹೇಳಿದಾಗ ಎಲ್ಲರೂ ನಕ್ಕರು.

ಪೀಟರ್‌ ಸುನೀತಾಳೊಂದಿಗೆ ಅಡುಗೆಮನೆಯಲ್ಲಿ ಉತ್ಸಾಹದಿಂದ ಕೆಲಸ ಮಾಡಿದ. ಆಲೂಗಡ್ಡೆ ಸಿಪ್ಪೆ ಹೆರೆದ, ಟೊಮೇಟೊ, ಈರುಳ್ಳಿ ಕತ್ತರಿಸಿದ. ಅಡುಗೆಯ ನಂತರ ಎಲ್ಲರೂ ಪಿಕ್ನಿಕ್‌ಗೆ ಹೊರಟರು.

ಕಾರಿನಲ್ಲಿ ಕೂರುವಾಗ ಸುನೀತಾ ಪೀಟರ್‌ಗೆ ಹೇಳಿದಳು, “ನೀವು ಮುಂದುಗಡೆ ಕೂತ್ಕೊಳ್ಳಿ.”

“ಇಲ್ಲ ಮೇಡಂ. ನಾನು ನಿಮ್ಮ ಸ್ಥಾನ ತೆಗೆದುಕೊಳ್ಳಲು ಆಗಲ್ಲ,” ನಗುತ್ತಾ ಹೇಳಿದ ಪೀಟರ್‌ ಹಿಂದಿನ ಸೀಟಿನಲ್ಲಿ ಕುಳಿತುಕೊಂಡ. ರಜತ್‌ಗೂ ನಗು ಬಂತು.

ಪಿಕ್ನಿಕ್‌ ಸ್ಪಾಟ್‌ ಸಮುದ್ರ ತೀರದಲ್ಲಿತ್ತು. ಅನೇಕ ಸ್ತ್ರೀ ಪುರುಷರು ಅರ್ಧಂಬರ್ಧ ಉಡುಪುಗಳಲ್ಲಿ ಮರಳಿನ ಮೇಲೆ ಮಲಗಿ ಬಿಸಿಲು ಕಾಯಿಸಿಕೊಳ್ಳುತ್ತಿದ್ದರು. ಕೆಲವರು ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದರು. ಪೀಟರ್‌ ಬಟ್ಟೆ ಬಿಚ್ಚಿ ಚಡ್ಡಿ ಧರಿಸಿ ಸಮುದ್ರದಲ್ಲಿ ಇಳಿದ. ಸುನೀತಾಗೆ ಈಜು ಗೊತ್ತಿತ್ತು. ಆದರೆ ಈ ರೀತಿ ಒಳ ಉಡುಪುಗಳಲ್ಲಿ ನದಿ ಅಥವಾ ಸಮುದ್ರದಲ್ಲಿ ಅವಳು ಹೋಗುತ್ತಿರಲಿಲ್ಲ.

ಪಿಕ್ನಿಕ್‌ ದಿನ ಸಾಕಷ್ಟು ಚೆನ್ನಾಗಿ ಕಳೆಯಿತು. ನಂತರ ಪೀಟರ್‌ ಆಗಾಗ್ಗೆ ಸುನೀತಾಳ ಮನೆಗೆ ಬರತೊಡಗಿದ. ಸ್ವಲ್ಪ ಸಮಯದಲ್ಲೇ ಅವನು ಅನೇಕ ಭಾರತೀಯ ಅಡುಗೆಗಳನ್ನು ಕಲಿತುಕೊಂಡ. ಆಮೇಲೆ ಅವನೂ ಸುನೀತಾ ಮತ್ತು ಇತರ ಸಹೋದ್ಯೋಗಿಗಳಿಗೆ ಭಾರತೀಯ ತಿಂಡಿಗಳನ್ನು ಮಾಡಿಕೊಂಡು ಬರತೊಡಗಿದ.

ಪೀಟರ್‌ ಮತ್ತು ಸುನೀತಾರ ಅನ್ಯೋನ್ಯತೆಯನ್ನು ರಜತ್‌ ಸಂಶಯದಿಂದ ನೋಡತೊಡಗಿದ. ಅವನೇ ಒಬ್ಬ ಬಿಳಿಯ ಹೆಣ್ಣಿನೊಡನೆ ಹಲವು ತಿಂಗಳು ಸಂಬಂಧ ಇಟ್ಟುಕೊಂಡಿದ್ದ. ಹೀಗಾಗಿ ಪೀಟರ್‌ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳಬಹುದು ಎಂದುಕೊಂಡು ಸುನೀತಾಳ ಮೇಲೆ ಪದೇ ಪದೇ ರೇಗುತ್ತಿದ್ದ. ಮೊದಲು ಸುನೀತಾಳನ್ನು ವೀಕೆಂಡ್‌ನಲ್ಲಿ ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದ. ಆದರೆ ಈಗ ಒಬ್ಬನೇ ಹೋಗುತ್ತಿದ್ದ.

ಪೀಟರ್‌ಗೆ ಇತ್ತೀಚೆಗೆ ತಾನೆ ಹೆಂಡತಿಯೊಡನೆ ಡೈವೋರ್ಸ್‌ ಆಗಿತ್ತು. ಅವಳು ಸಾಮಾನ್ಯ ಅಮೆರಿಕನ್‌ ಹುಡುಗಿಯರಂತೆ ಸ್ವೇಚ್ಛಾ ಪ್ರವೃತ್ತಿಯಳಾಗಿದ್ದಳು. ಗಂಡ ಅವಳ ದೃಷ್ಟಿಯಲ್ಲಿ ಮಿಸ್‌ ಫಿಟ್‌ ಪರ್ಸನ್‌ ಆಗಿದ್ದ.

ಸಾಫ್ಟ್ ವೇರ್‌ ಕಂಪನಿಗಳಲ್ಲಿ ಕೆಲಸ ಮಾಡುವ ಇತರ ಸಹೋದ್ಯೋಗಿಗಳದೂ ಹೆಚ್ಚೂಕಡಿಮೆ ಇದೇ ವಿಚಾರವಾಗಿತ್ತು. ಸುನೀತಾ ಪೀಟರ್‌ನನ್ನು ಒಬ್ಬ ಫಿಲಾಸಫರ್‌ ಮತ್ತು ಜೀನಿಯಸ್‌ ಎಂದು ತಿಳಿದಿದ್ದಳು. ಇಬ್ಬರಲ್ಲೂ ನಿಧಾನವಾಗಿ ಆತ್ಮೀಯತೆ ಬೆಳೆಯತೊಡಗಿತು.

ರಜತ್‌ಗೆ ಸುನೀತಾಳ ಬಗೆಗಿನ ಆಕರ್ಷಣೆ ಕಡಿಮೆಯಾಯಿತು. ಆಗ ಅವನಿಗೆ ಜೆನಿಥ್‌ಳ ನೆನಪಾಯಿತು. 2-3 ತಿಂಗಳಿಂದ ಅವನಿಗೆ ಅವಳ ಸಂಪರ್ಕವಿರಲಿಲ್ಲ. ಅವನು ಅವಳಿಗೆ ಫೋನ್‌ ಮಾಡಿದ.

“ಅರೆ, ಇದೇನು ನನ್ನ ನೆನಪು ಬಂದುಬಿಡ್ತು ನಿಮಗೆ?”

“ಬರಲೇ ಬೇಕಿತ್ತು. ಹೇಗಿದ್ದೀಯಾ?”

“ಫೈನ್‌…. ನೀವು ಹೇಗಿದ್ದೀರಿ? ನಿಮ್ಮ ಹೆಂಡತಿ ಹೇಗಿದ್ದಾರೆ?”

“ಚೆನ್ನಾಗಿದ್ದೀವಿ. ನಿನ್ನನ್ನು ಭೇಟಿಯಾಗಲು ಬರ್ಲಾ?”

“ಬನ್ನಿ.”

ಜೆನಿಥ್‌ ರಜತ್‌ನ ಫ್ಲ್ಯಾಟ್‌ ಬಿಡುವಾಗ ಪ್ರೆಗ್ನೆಂಟ್‌ ಆಗಿದ್ದಳು. ಅವಳಿಗೆ ಪ್ರೆಗ್ನೆನ್ಸಿಯ ಬಗ್ಗೆ ಸ್ವಲ್ಪ ತಡವಾಗಿಯೇ ತಿಳಿಯಿತು. ಗರ್ಭಪಾತ ಮಾಡಿಸಿಕೊಳ್ಳುವುದೇ, ಬೇಡವೇ ಎಂದು ಅವಳು ಗೊಂದಲದಲ್ಲಿದ್ದಳು. ವಯಸ್ಸಾದಾಗ ಆಸರೆಗೆಂದು ಒಬ್ಬ ಸಂಗಾತಿಯೊಂದಿಗಿ ಮಗುವಿನ ಅವಶ್ಯಕತೆ ಇದೆ ಎಂದು ಅವಳಿಗೆ ತಿಳಿದಿತ್ತು. ಲಿವ್ ‌ಇನ್‌ ರಿಲೇಶನ್‌ಶಿಪ್‌ನ ಆಧಾರದಲ್ಲಿ ಸಂಗಾತಿಯನ್ನು ಪಡೆಯುವುದು ಬಿಡುವುದು ಸುಲಭವಾಗಿತ್ತು. ಆದರೆ ವಿವಾಹ ಬಂಧನವೆಂಬ ಸಂಸ್ಥೆಯಲ್ಲಿರುವ ಭಾವನಾತ್ಮಕ ಸುರಕ್ಷತೆ ಲಿವ್ ‌ಇನ್‌ ರಿಲೇಶನ್‌ಶಿಪ್‌ನಲ್ಲಿ ಇರಲಿಲ್ಲ. ಲಿವ್ ಇನ್‌ ರಿಲೇಶನ್‌ಶಿಪ್‌ ಆಧಾರದಲ್ಲಿ ಒಟ್ಟಿಗೆ ಇರುವವರಲ್ಲಿ ಸಂಗಾತಿ ತನ್ನ ಬಗ್ಗೆ ಕೋಪಿಸಿಕೊಂಡರೆ ಅಥವಾ ಬೇರೆ ಉತ್ತಮ ಸಂಗಾತಿ ಸಿಕ್ಕರೆ ತನ್ನನ್ನು ಬಿಟ್ಟುಹೋಗುತ್ತಾರೆನ್ನುವ ಭಯ ಇರುತ್ತದೆ. ಮದುವೆಯಾದ ಜೋಡಿ ನಿಶ್ಚಿಂತರಾಗಿರುತ್ತಾರೆ. ಸಂಗಾತಿ ಬಿಟ್ಟುಹೋಗುತ್ತಾರೆನ್ನುವ ಭಯವಿಲ್ಲ. ಒಂದು ವೇಳೆ ವಿಚ್ಛೇದನ ಪಡೆಯುದಿದ್ದರೆ ನೋಟೀಸ್‌ ಕೊಡುತ್ತಾರೆ. ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ರಜತ್‌ ಜೆನಿಥ್‌ಳ ಫ್ಲ್ಯಾಟ್‌ಗೆ ಹೋದ. ಅವಳು ಪ್ರೆಗ್ನೆಂಟ್‌ ಆಗಿರುವುದು ಅವನಿಗೆ ತಿಳಿದಿರಲಿಲ್ಲ. ಗರ್ಭಪಾತ ಮಾಡಿಸಲೋ, ಬೇಡವೋ ಎಂಬ ಗೊಂದಲದಲ್ಲಿ ಸಮಯ ಮೀರಿ ಹೋಗಿತ್ತು. ಈಗ ಗರ್ಭಪಾತ ಮಾಡಿಸುವ ಹಾಗಿರಲಿಲ್ಲ. ಗರ್ಭಾವಸ್ಥೆಯಿಂದಾಗಿ ಅವಳ ಶರೀರ ಊದಿಕೊಂಡಿತ್ತು. ಅವಳು ಸಡಿಲವಾದ ಉಡುಪುಗಳನ್ನು ಧರಿಸಿದ್ದಳು. ರಜತ್‌ ಅವಳ ಶರೀರ ಕಂಡು ಆಶ್ಚರ್ಯಚಕಿತನಾದ.

“ಇದೇನು ಮಾಡಿಕೊಂಡಿದ್ದೀಯಾ?” ಎಂದ.

“ನೀವು ಒಂದು ಹೆಣ್ಣು ಆಗಿದ್ದಿದ್ರೆ ಏನು ಮಾಡುತ್ತಿದ್ರಿ?”

“ಗರ್ಭಪಾತ ಮಾಡಿಸಿಕೊಳ್ತಿದ್ದೆ.”

“ನಾನೂ ಹಾಗೇ ಯೋಚಿಸಿದ್ದೆ. ಆದರೆ ವಯಸ್ಸಾದ ಮೇಲೆ ಒಬ್ಬ ಸಂಗಾತಿ ಹಾಗೂ ಮಗುವಿನ ಅಗತ್ಯ ಇದೇಂತ ತಿಳಿಯಿತು. ಆಯುಸ್ಸು ಪೂರ್ತಿ ತರುಣರಾಗಿ ಇರೋಕೆ ಯಾರಿಂದಲೂ ಸಾಧ್ಯವಿಲ್ಲ,” ಜೆನಿಥ್‌ಳ ಸ್ವರದಲ್ಲಿ ವೇದನೆ ಇತ್ತು.

ಸ್ವಲ್ಪ ಹೊತ್ತು ರಜತ್‌ ಅದೂ ಇದೂ ವಿಷಯ ಮಾತಾಡಿದ. ನಂತರ ಎದ್ದು, “ನಾನು ಬರ್ತೀನಿ,” ಎಂದು ಆಚೆ ಹೊರಟುಬಿಟ್ಟ.

ಜೆನಿಥ್‌ಗೆ ರಜತ್‌ನ ಈ ನಡವಳಿಕೆಯಿಂದ ಆಘಾತವಾಯಿತು. ಅಮೆರಿಕನ್‌ ಹಾಗೂ ಇಂಗ್ಲಿಷ್‌ ಪುರುಷರು ಬಹಳ ಸ್ವಾರ್ಥಿಗಳಾಗಿರುತ್ತಾರೆ. ಆದರೆ ಒಬ್ಬ ಭಾರತೀಯನೂ ಇಷ್ಟು ನಿರ್ಮೋಹಿಯಾಗುತ್ತಾನೆಯೇ?

ಈಗ ಅವಳು ತನ್ನ ಪ್ರೀತಿಯ ಅಥವಾ ಕಾಮದ ಪರಿಣಾಮ ಅನುಭವಿಸಬೇಕಾಗಿತ್ತು. ಲಿವ್ ‌ಇನ್‌ ರಿಲೇಶನ್‌ಶಿಪ್‌ನ ಪೊಳ್ಳುತನ ಬಯಲಾಗಿತ್ತು. ಅವಳು ಚೆಕಪ್‌ ಮಾಡಿಸಿಕೊಳ್ಳಲು ಒಂದು ನರ್ಸಿಂಗ್‌ ಹೋಮ್ ನ್ನು ಸಂಪರ್ಕಿಸಿದಳು.

ಕೆಲ ದಿನಗಳ ನಂತರ ಎದುರಿನ ಫ್ಲ್ಯಾಟ್‌ನಲ್ಲಿ ಇದ್ದ ಥೆರೇಸಾರೊಂದಿಗೆ ಸುನೀತಾಳ ಪರಿಚಯವಾಯಿತು. ಇಬ್ಬರೂ ಪುರಸತ್ತಿದ್ದಾಗ ಹರಟುತ್ತಿದ್ದರು. ಒಂದು ದಿನ ಥೆರೇಸಾ ಹೇಳಿದಳು, “ನೀವು ಎಲ್ಲರೊಡನೆ ಎಷ್ಟು ಚೆನ್ನಾಗಿ ಹೊಂದಿಕೊಳ್ತೀರಿ. ನಿಮಗೆ ಮೊದಲು ಇದ್ದವರು ಬಹಳ ರಿಸರ್ವ್ ಆಗಿದ್ದರು. ಅವರು ಎಷ್ಟಾದರೂ ಅಮೆರಿಕನ್‌ ತಾನೆ.”

ತಾನು ಬರುವ ಮೊದಲು ರಜತ್‌ ಒಬ್ಬಾಕೆಯೊಂದಿಗೆ ಲಿವ್ ‌ಇನ್‌ ರಿಲೇಶನ್‌ಶಿಪ್‌ ಇಟ್ಟುಕೊಂಡಿದ್ದನೆಂದು ಸುನೀತಾಗೆ ಅರ್ಥವಾಯಿತು. ಅವನೇನು ತಾನೆ ಮಾಡ್ತಾನೆ? 3 ವರ್ಷಗಳಿಂದ ಹೆಂಡತಿಯಿಂದ ದೂರವಿದ್ದ. ಅವನಿಗೂ ಸ್ತ್ರೀ ಸಂಪರ್ಕ ಬೇಕಾಗಿತ್ತು.

ಈಗಂತೂ ರಜತ್‌ನ ಸ್ವೇಚ್ಛಾಪ್ರವೃತ್ತಿ ಇನ್ನೂ ಹೆಚ್ಚಾಯಿತು. ಅವನು ದಿನ ಕುಡಿದೇ ಮನೆಗೆ ಬರುತ್ತಿದ್ದ. ಪೂರ್ತಿ ಸಂಬಳವನ್ನು ಪಬ್‌ಗಳು, ಬಾರ್‌ಗಳು ಹಾಗೂ ಹುಡುಗಿಯರ ಮೇಲೆ ಉಡಾಯಿಸುತ್ತಿದ್ದ. ಮನೆಯ ಖರ್ಚನ್ನು ಸುನೀತಾ ನಿಭಾಯಿಸುತ್ತಿದ್ದಳು. ವಿಡಂಬನೆಯೆಂದರೆ ಹೆಂಡತಿ ಬರುವ ತನಕ ಅವನು ಜೆನಿಥ್‌ಳೊಡನೆ ಸಂಬಂಧ ಇಟ್ಟುಕೊಂಡಿದ್ದ. ಅದರಲ್ಲಿ ಸಂಯಮ ಇತ್ತು. ಆದರೆ ಈಗಂತೂ ಅವನದು ವಿಕೃತ ಕಾಮವಾಗಿತ್ತು.ಪೀಟರ್‌ ಏಕಾಂಗಿಯಾಗಿ ಜೀವನ ತಳ್ಳುತ್ತಿದ್ದ. ಒಂದು ದಿನ ಸುನೀತಾ ಅವನನ್ನು ಸಹಾನುಭೂತಿಯಿಂದ ಕೇಳಿದಳು, “ಪೀಟರ್‌ ನಿಮಗೆ ಏಕಾಂಗಿತನ ಕಾಡ್ತಿಲ್ವಾ?”

“ಈ ಏಕಾಂಗಿತನ, ಒಂಟಿತನ ಅಂದ್ರೇನು?”

“ನಿಮಗೆ ಗೊತ್ತಾಗ್ತಿಲ್ವಾ?”

“ನೋಡಿ ಸುನೀತಾರವರೇ, ಮದುವೆಯಾಗಿದ್ದರೆ ಅಥವಾ ಸಂಗಾತಿ ಇದ್ದರೆ ನೀವು ಏಕಾಂಗಿ ಅಲ್ಲ ಅಂತ ಅರ್ಥವಲ್ಲ. ಒಂದುವೇಳೆ ಪತಿ ಪತ್ನಿಯರ ಮಧ್ಯೆ ವಿಶ್ವಾಸ ಇಲ್ಲದಿದ್ರೆ ಅಂತಹ ಮದುವೆಗೆ ಯಾವುದೇ ಅರ್ಥವಿಲ್ಲ.”

“ನಿಮ್ಮಲ್ಲಿ ಲಿವ್ ಇನ್‌ ರಿಲೇಶನ್‌ಶಿಪ್‌ ನಡೀತಿದೆಯಲ್ಲ. ಯಾರಾದರೂ ಸಂಗಾತಿಯನ್ನು ಹುಡುಕಿಕೊಳ್ಳಬಹುದಲ್ವಾ?”

“ನನಗೆ ಈ ಸಿಸ್ಟಂನಲ್ಲಿ ನಂಬಿಕೆ ಇಲ್ಲ. ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗದೆ ಜೊತೆಯಲ್ಲಿ ಇಟ್ಟುಕೊಳ್ಳಲು ಬಯಸ್ತಾರಲ್ಲ ಅಂತಹ ಪುರುಷರಲ್ಲಿ ಈ ಪ್ರವೃತ್ತಿ ನಡೆಯುತ್ತಿದೆ. ಸಾಮಾನ್ಯ ಜನರು ಮದುವೆಯ ಸಂಬಂಧದಲ್ಲೇ ವಿಶ್ವಾಸ ಇಡುತ್ತಾರೆ.”

ಸುನೀತಾ ಆಫೀಸಿಗೆ ಹೋಗಿಬರಲು ಮೆಟ್ರೋ ಅಥವಾ ಲೋಕಲ್ ಬಸ್‌ ಉಪಯೋಗಿಸುತ್ತಿದ್ದಳು. ಒಂದು ದಿನ ಡಬಲ್ ಡೆಕ್ಕರ್ ಬಸ್‌ನ ಕಿಟಕಿಯಿಂದ ರಜತ್‌ ಒಬ್ಬ ಅಮೆರಿಕನ್‌ ಯುವತಿಯೊಂದಿಗೆ ಹೋಗುತ್ತಿದ್ದುದನ್ನು ಕಂಡಾಗ ಅವಳಿಗೆ ಆಘಾತವಾಯಿತು. ಅಂದು ರಾತ್ರಿಯೂ ರಜತ್‌ ಕುಡಿದ ನಶೆಯಲ್ಲಿ ಮನೆಗೆ ಬಂದ. ಸುನೀತಾ ಅವನಿಗೆ ಆಸರೆ ನೀಡಲಿಲ್ಲ. ಏಳುತ್ತಾ ಬೀಳುತ್ತಾ ರಜತ್ ಬಂದು ಮಂಚದ ಮೇಲೆ ಬಿದ್ದುಕೊಂಡ. ಬೆಳಗ್ಗೆ ಎದ್ದು ಅವನು ಸುನೀತಾಳನ್ನು ಕರೆದ. ಆದರೆ ಅವಳು ಬರಲಿಲ್ಲ. ಮೊದಲು ಅವನು ಕರೆದರೆ ಅವಳು ಕಾಫಿ ತಂದುಕೊಡುತ್ತಿದ್ದಳು.

“ಇವತ್ತು ಬೆಡ್‌ ಕಾಫಿ ಕೊಡಲೇ ಇಲ್ಲ,” ಅವನು ಕೇಳಿದ.

“ನೀವೇ ಮಾಡಿಕೊಳ್ಳಿ,” ಅವನ ಕಡೆ ನೋಡದೆ ಸುನೀತಾ ಹೇಳಿದಳು.

“ಇವತ್ತೇನು ಮೂಡ್‌ ಸರಿಯಾಗಿಲ್ಲ,” ಎನ್ನುತ್ತಾ ಅವನು ಅವಳನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ.

“ನನ್ನನ್ನು ಮುಟ್ಟಬೇಡಿ. ದಿನ ಯಾವೋಳ ಜೊತೇನೊ ಸುತ್ತುತ್ತೀರಲ್ಲ ಅವಳ ಜೊತೆಗೇ ಹೋಗಿ.”

ಅದಕ್ಕೆ ರಜತ್‌ ಕೋಪದಿಂದ? “ನೀನು ಆ ದಾಡಿವಾಲ ಫಿಲಾಸಫರ್‌ ಪೀಟರ್‌ ಜೊತೆಗೆ ದಿನ ಮೋಜು ಮಾಡ್ತೀಯ. ನನ್ನ ಮೇಲೆ ಆರೋಪ ಹೊರಿಸ್ತೀಯಾ?” ಎಂದ.

“ನಾನು ಆರೋಪ ಹೊರಿಸ್ತಿಲ್ಲ. ನಾನೇ ಖುದ್ದಾಗಿ ನೋಡ್ದೆ.”

ರಜತ್‌ ಕೋಪದಿಂದ ಆಚೆ ಹೊರಟ. ಇಬ್ಬರೂ ಒಂಟಿಯಾದರು, ನಿಧಾನವಾಗಿ ಇಬ್ಬರಲ್ಲೂ ದ್ವೇಷ ಹೆಚ್ಚಿತು.

“ನೀನು ಭಾರತಕ್ಕೆ ಹಿಂದಿರುಗು,” ಒಂದು ದಿನ ರಜತ್‌ ಅವಳಿಗೆ ಹೇಳಿದ.

“ಯಾಕೆ ಹೋಗ್ಲಿ?”

“ನಾನು ನಿನಗೆ ವಿಚ್ಛೇದನ ಕೊಡುತ್ತಿದ್ದೇನೆ.”

“ಅದನ್ನು ನೀವು ಇಲ್ಲಿಯೂ ಕೊಡಬಹುದು. ಭಾರತದಲ್ಲಿ ಒಬ್ಬ ವಿಚ್ಛೇದಿತ ಮಹಿಳೆಯ ಪರಿಸ್ಥಿತಿ ಹೇಗಿರುತ್ತೆ ಎಂದು ನನಗೆ ಗೊತ್ತಿಲ್ಲವೇ?”

ಕೊನೆಗೂ ಸುನೀತಾ ರಜತ್‌ನಿಂದ ವಿಚ್ಛೇದನ ಪಡೆದಳು. ಅವಳು ತನ್ನ ಸಹೋದ್ಯೋಗಿ ಪೀಟರ್‌ನ ಫ್ಲ್ಯಾಟ್‌ಗೆ ಹೋದಳು. ರಜತ್ ತನ್ನ ಹೊಸ ಗೆಳತಿ ಮಾರಿಯಾ ಬಳಿ ಹೋದ. ಆದರೆ ಮಾರಿಯಾ ಹೊಸ ಪ್ರೇಮಿಯ ಜೊತೆ ಇದ್ದಳು. ಆಗ ಅವನು ಜೆನಿಥ್‌ಳ ಬಳಿ ಹೋದ. ಅವಳೂ ಒಬ್ಬ ಹೊಸ ಪ್ರೇಮಿಯೊಂದಿಗೆ ಇದ್ದಳು. ರಜತ್‌ ಕೈಗಳನ್ನು ಹೊಸೆಯುತ್ತಾ ತನ್ನ ಫ್ಲ್ಯಾಟ್‌ನ ಬಾಗಿಲಲ್ಲಿ ನಿಂತು ಎರಡು ದಾರಿಗಳನ್ನು ನೋಡುತ್ತಾ ಇದ್ದ. ಒಂದು ದಾರಿಯಲ್ಲಿ ಅವನೊಂದಿಗೆ ಸಪ್ತಪದಿ ಹಾಕಿದವಳು ಹೊರಟುಹೋದಳು. ಇನ್ನೊಂದು ದಾರಿಯಲ್ಲಿ ಲಿವ್ ‌ಇನ್‌ ರಿಲೇಶನ್‌ಶಿಪ್‌ನ ಸಂಗಾತಿ ಹೋದಳು. ಅವನ ಮನೆ ನಾಶವಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ