ಪ್ರತಿದಿನದಂತೆ ಅಂದು ಬೆಳಗ್ಗೆ ಸಹ ಮಾಧವಿಗೆ ಬಹಳಷ್ಟು ಕೆಲಸಗಳು ಕಾದು ಕುಳಿತಿದ್ದ. ಮನೆಯವರಿಗೆಲ್ಲ ಕಾಫಿ ಮಾಡಿಕೊಡುವುದು, ಇಬ್ಬರು ಮಕ್ಕಳನ್ನು ಸಂಭಾಳಿಸುವುದು, ಗಂಡ ರೋಹಿತ್‌ ಹಾಗೂ ನಾದಿನಿಗೆ ಲಂಚ್‌ ಪ್ಯಾಕ್‌ ಮಾಡಿಕೊಡುವುದು, ತಿಂಡಿ ತಯಾರಿಸುವುದು, ಮಧ್ಯೆ ಮಧ್ಯೆ ಅಗತ್ಯದ ಸಣ್ಣಪುಟ್ಟ ವಸ್ತುಗಳನ್ನು ತರಲು, ಕೆಲಸವನ್ನು ಬಿಟ್ಟು ಓಡಬೇಕಾಗಿರುವುದು ಇತ್ಯಾದಿ. ಪ್ರತಿ ಕೆಲಸವನ್ನೂ ಜವಾಬ್ದಾರಿಯಿಂದ ಮುಗಿಸಿಕೊಡುತ್ತಾ ಅವಳು ಸುಸ್ತಾಗಿ ಸಿಟ್ಟಿಗೇಳುತ್ತಿದ್ದಳು. ಸಂತೋಷದ ವಿಷಯವೇನೆಂದರೆ ಗಂಡ ರೋಹಿತ್‌ ಬೆಳಗ್ಗೆ ಆಫೀಸ್‌ಗೆ ಹೋಗುವಾಗ ಮಗಳು ಅಮೃತಾಳನ್ನು ಶಾಲೆಗೆ ಬಿಡುತ್ತಿದ್ದ. ಅವಳ ಶಾಲೆ ಹೆಚ್ಚು ದೂರವೇನೂ ಇರಲಿಲ್ಲ. 8-10 ನಿಮಿಷದ ಕಾಲ್ನಡಿಗೆಯ ದಾರಿ. ಸ್ಕೂಟರ್‌ನಲ್ಲಿ ಬಹಳ ಕಡಿಮೆ ಸಮಯ ಬೀಳುತ್ತಿತ್ತು. ರೋಹಿತ್‌ ಮತ್ತು ಮಾಧವಿ ಏನು ನಿರ್ಧಾರ ಮಾಡಿದ್ದರೆಂದರೆ ಬೆಳಗ್ಗೆ ಆಫೀಸ್‌ಗೆ ಹೋಗುವಾಗ ರೋಹಿತ್‌ ಅಮೃತಾಳನ್ನು ಶಾಲೆಗೆ ಬಿಡುವುದು, ಸಂಜೆ ಮಾಧವಿ ಅವಳನ್ನು ಶಾಲೆಯಿಂದ ಕರೆದುಕೊಂಡು ನಡೆದು ಬರುವುದು ಎಂದು. ಅಮೃತಾ ನಡೆದು ಬರುವಾಗ ಬಹಳ ತೊಂದರೆ ಕೊಡುತ್ತಿದ್ದಳು. ಅವಳ ಸ್ಕೂಲ್ ‌ಬ್ಯಾಗ್‌, ನೀರಿನ ಬಾಟಲ್‌ನ್ನು ಮಾಧವಿಯೇ ಎತ್ತಿಕೊಳ್ಳಬೇಕಾಗುತ್ತಿತ್ತು. ಕೆಲವೊಮ್ಮೆ ಅಮೃತಾಳನ್ನು ಎತ್ತಿಕೊಂಡು ಶಾಲೆಗೆ ಹೋಗಬೇಕಾಗುತ್ತಿತ್ತು. ಮಗಳ ಮೂಡ್‌ನ್ನು ನಿಯಂತ್ರಣದಲ್ಲಿಡಲು ಅವಳು ಆಗಾಗ್ಗೆ ಮಗಳಿಗೆ ಚಿಪ್ಸ್, ಟಾಫಿ ಮತ್ತು ಐಸ್‌ ಕ್ರೀಂ ಇತ್ಯಾದಿಗಳನ್ನು ಪೂರೈಸಬೇಕಾಗಿತ್ತು. ಆ ಸೂಪರ್‌ ಸ್ಟೋರ್‌ ಶಾಲೆಯ ಪಕ್ಕದಲ್ಲಿ ಇಲ್ಲದಿದ್ದರೆ ಇಂತಹ ಪ್ರಸಂಗಗಳು ಉಂಟಾಗುತ್ತಿರಲಿಲ್ಲ. ಅದನ್ನು ಅಷ್ಟು ಹತ್ತಿರ ಏಕಿಟ್ಟಿದ್ದಾನೋ ಎಂದು ಅವಳಿಗೆ ಕೋಪ ಬರುತ್ತಿತ್ತು. ಆದರೆ ಸತ್ಯವೆಂದರೆ ಆ ಸ್ಟೋರ್‌ ಅಲ್ಲಿದ್ದುದರಿಂದ ಅವಳಿಗೆ ದಿನನಿತ್ಯದ ಅಗತ್ಯದ ವಸ್ತುಗಳು ಸಿಗುತ್ತಿದ್ದವು. ದಿಢೀರನೆ ಯಾರಾದರೂ ಅತಿಥಿಗಳು ಬಂದಾಗ ಅಥವಾ ಯಾವುದಾದರೂ ವಸ್ತು ಖಾಲಿಯಾದಾಗ, ವಿಶೇಷವಾಗಿ ಎಮರ್ಜೆನ್ಸಿ ಪರಿಸ್ಥಿತಿಯಲ್ಲಿ ಅಲ್ಲಿಗೇ ಓಡಬೇಕಾಗಿತ್ತು. ಅಂದೂ ಹಾಗೇ ಆಯಿತು. ಮಗ ಮೋಹನನ ಹಾಲಿನ ಡಬ್ಬಿ ಗಡಿಬಿಡಿಯಲ್ಲಿ ಅವಳ ಕೈಯಿಂದ ಜಾರಿ ಕೆಳಗೆ ಬಿತ್ತು. ಬೆಳಗಿನ ತಿಂಡಿಗೆ ಬ್ರೆಡ್‌ ಮತ್ತು ಕಾರ್ನ್‌ ಫ್ಲೇಕ್ಸ್ ತರಿಸುವುದನ್ನು ಮರೆತಿದ್ದಳು. ಅದನ್ನು ಅವಳ ಅತ್ತೆ ಮಾವ ಬೆಳಗ್ಗೆ ನಿಯಮಿತವಾಗಿ ಸೇವಿಸುತ್ತಿದ್ದರು. ಮಾಧವಿ ರೋಹಿತ್‌ ಹಾಗೂ ಅಮೃತಾಳಿಗೆ ಏನೋ ಒಂದು ತಿನ್ನಿಸಿದಳು. ಈಗ ಅವಳಿಗೆ ಉಳಿದವರ ಚಿಂತೆಯಾಗಿತ್ತು. ರೋಹಿತ್‌ ಆಫೀಸಿಗೆ ಹೋಗುವ ಮುಂಚೆ ಸ್ಟೋರ್‌ನಿಂದ ಎಲ್ಲ ಪದಾರ್ಥಗಳನ್ನೂ ತಂದುಕೊಟ್ಟು ನಂತರ ಆಫೀಸಿಗೆ ಹೋಗಲಿ ಎಂದು ಬಯಸುವುದು ವ್ಯರ್ಥ. ಅವನು ಅಮೃತಾಳನ್ನು ಶಾಲೆಗೆ ಬಿಡುವುದನ್ನೇ ದೊಡ್ಡ ಉಪಕಾರ ಎಂದುಕೊಂಡಿದ್ದ. ಹೀಗಾಗಿ ಮಾಧವಿ ಗಡಿಯಾರ ನೋಡಿಕೊಂಡು ಅಮೃತಾಳನ್ನು ಮುಂಚೆಯೇ ರೆಡಿ ಮಾಡಿ ಬಾಗಿಲ ಬಳಿ ನಿಲ್ಲಿಸುತ್ತಿದ್ದಳು. ಇಲ್ಲದಿದ್ದರೆ ಸ್ವಲ್ಪ ತಡವಾದರೂ ರೋಹಿತ್‌ ಕೋಪ ಮಾಡಿಕೊಳ್ಳುತ್ತಿದ್ದ. ಮಾಧವಿ ತನ್ನ ಬೇಜವಾಬ್ದಾರಿಗಾಗಿ ಒಂದಷ್ಟು ಬೈಗುಳ ಕೇಳಬೇಕಾಗಿತ್ತು. ಅನೇಕ ಬಾರಿ ಅಮೃತಾಳನ್ನು ಮನೆಯಲ್ಲೇ ಬಿಟ್ಟುಹೋಗುತ್ತಿದ್ದ.

ಇದ್ದಕ್ಕಿದ್ದಂತೆ ಮಾಧವಿಗೆ ಒಂದು ಉಪಾಯ ಹೊಳೆಯಿತು, “ರೋಹಿತ್‌ ಪ್ಲೀಸ್‌, ನನ್ನನ್ನೂ ಸ್ಟೋರ್‌ ಬಳಿ ಬಿಟ್ಟುಬಿಡಿ. ನಾನು ಕೆಲವು ವಸ್ತುಗಳನ್ನು ತಗೋಬೇಕು,” ಎಂದಳು.

“ಆಯ್ತು. ಆದ್ರೆ ಲೇಟ್‌ ಮಾಡಬಾರದು ಅಲಂಕಾರ ಮಾಡ್ಕೊಂಡು ಬರ್ತೀನೀಂತ,” ಟೈ ಕಟ್ಟಿಕೊಳ್ಳುತ್ತಾ ಅವಳತ್ತ ನೋಡದೆಯೇ ರೋಹಿತ್‌ ಹೇಳಿದಾಗ ಅವಳಿಗೆ ಪಿಚ್ಚೆನಿಸಿತು. ಅಲ್ಲೇನು ತಗೋಬೇಕು, ನಾನು ಹೆಲ್ಪ್ ಮಾಡ್ಲಾ ಅಂತ ಒಂದು ಬಾರಿಯಾದರೂ ಕೇಳಬೇಕಿತ್ತು. ಆದರೆ ಹಾಗೆ ಯೋಚಿಸುವುದು ವ್ಯರ್ಥ. ಅವಳು ದುಪಟ್ಟಾ ಹೊದ್ದು ತಲೆ ಬಾಚಿ ಪರ್ಸ್‌ ಹಿಡಿದು ಹೊರಟಳು. ಅಮೃತಾ ಹಾಗೂ ಮಾಧವಿಯನ್ನು ಸ್ಕೂಲ್ ಬಳಿ ಬಿಟ್ಟು ರೋಹಿತ್‌ ಸರ್ರನೆ ಸ್ಕೂಟರ್‌ನಲ್ಲಿ ಹೊರಟುಹೋದ. ಅವನು ಒಮ್ಮೆಯಾದರೂ ಮಾಧವಿಗೆ ಸಹಾಯ ಮಾಡಬೇಕಾಂತ ಕೇಳಲಿಲ್ಲ. ಈ ಉಪೇಕ್ಷೆಯಿಂದ ಮಾಧವಿಗೆ ಕೊಂಚ ಬೇಸರವಾಯಿತು. ಆದರೂ ಅವಳು ತನ್ನನ್ನು ನಿಯಂತ್ರಿಸಿಕೊಂಡಳು. ಇಂತಹ ವರ್ತನೆಯನ್ನು ಅವಳು ಆಗಾಗ್ಗೆ ಅನುಭವಿಸಬೇಕಿತ್ತು. ಮೊದಲು ಇಂತಹ ಸಂದರ್ಭದಲ್ಲಿ ಅವಳು ಕಣ್ಣೀರು ಸುರಿಸುತ್ತಿದ್ದಳು. ಆದರೆ ಈಗ ಅದು ಅಭ್ಯಾಸವಾಗಿಬಿಟ್ಟಿತ್ತು. ಈಗ ಅವಳಿಗೆ ಸಮಯವಿರಲಿಲ್ಲ. ಎಲ್ಲ ವಸ್ತುಗಳನ್ನೂ ಖರೀದಿಸಿ ಅರ್ಧ ಗಂಟೆಯೊಳಗೆ ಮನೆಯಲ್ಲಿ ಇರಬೇಕಿತ್ತು. ಅತ್ತೆ ಮಾವ ಬೆಳಗಿನ ಕಾಫಿ ಕುಡಿದು ಸ್ವಲ್ಪ ಹೊತ್ತು ಮಲಗುತ್ತಿದ್ದರು. ಅಷ್ಟರಲ್ಲಿ ನಾದಿನಿ ಇಂದಿರಾ ಕಾಲೇಜಿಗೆ ಹೋಗುವ ಸಮಯವಾಗುತ್ತಿತ್ತು. ಹೀಗಾಗಿ ಅವಳು ಬೇಗನೆ ಖರೀದಿ ಮುಗಿಸಿ ಮನೆಗೆ ಹೋಗಲು ಬಯಸಿದ್ದಳು. ಅಳುತ್ತಿದ್ದ ಮೋಹನನನ್ನು ಇಂದಿರಾಗೆ ಒಪ್ಪಿಸಿ ಬಾಗಿಲು ಹಾಕಿಕೊಳ್ಳಲು ಹೇಳಿದಳು, ಇಂದಿರಾ ನಿದ್ದೆಗಣ್ಣಿನಲ್ಲಿ ಮಾಧವಿಯನ್ನು ಕೇಳಿದಳು, “ಅತ್ತಿಗೆ, ಎಲ್ಲಾದರೂ ಹೋಗುತ್ತಿದ್ದೀರಾ?”

“ಹೌದು. ಸ್ವಲ್ಪ ಸಾಮಾನು ತರಬೇಕು,” ಎಂದು ಹೇಳಿ ರೋಹಿತ್‌ ಜೊತೆ ಹೊರಟಿದ್ದಳು. ಅವಳು ಬೇಗನೆ ಸಾಮಾನು ಖರೀದಿಸಿ ಬಿಲ್ ಕೊಟ್ಟು ಹೊರಗೆ ಬಂದಳು. ಬೆಳಗ್ಗೆಯೇ ಟ್ರಾಫಿಕ್‌ ಜಾಸ್ತಿ ಇತ್ತು. ಮನೆಗೆ ತಲುಪಿದಾಗ ಮಾಧವಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸುಸ್ತಾಗಿತ್ತು. ರೋಹಿತ್‌ ಸ್ವಲ್ಪ ಸಹಾಯ ಮಾಡಿದ್ದಿದ್ದರೆ ಕೊಂಚ ಅನುಕೂಲವಾಗುತ್ತಿತ್ತು. ಚೆನ್ನಾಗಿ ಸಂಪಾದಿಸುವ ಸುಂದರ ಪತಿ, ಸ್ನೇಹಿತೆಯಂತಹ ನಾದಿನಿ, ಒಳ್ಳೆಯ ಅತ್ತೆ ಮಾವನೊಡನೆ ಖುಷಿ ಖುಷಿಯಾಗಿ ಜೀವನ ಸಾಗಿಸುವ ಕನಸನ್ನು ಹೊತ್ತು ಈ ಮನೆಗೆ ಬಂದಿದ್ದಳು. ಆದರೆ ಅದ್ಯಾವುದೂ ನಡೆಯಲಿಲ್ಲ. ಅತ್ತೆ ಮಾವನಂತೂ ಮಾಧವಿ ಬರುತ್ತಲೇ ಎಲ್ಲ ಜವಾಬ್ದಾರಿಗಳಿಂದ ವಿಮುಖರಾದರು. ಬೆಳಗ್ಗೆ ಎದ್ದು ಗಂಟೆಗಟ್ಟಲೇ ಪೂಜೆ, ಟಿವಿ ನೋಡುವುದು, ಇಸ್ಪೀಟ್‌, ಕೇರಂ ಆಡುವುದು, ಸಂಜೆ ವಾಕಿಂಗ್‌ ಇತ್ಯಾದಿಗಳಲ್ಲಿ ಅವರ ಸಮಯ ಕಳೆಯುತ್ತಿತ್ತು. ಅವರಿಗೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಕಾಫಿ ಸಿಕ್ಕಿಬಿಟ್ಟರೆ ಸಾಕಿತ್ತು. ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಮತ್ತೆ ರೋಹಿತ್‌, ಅವನ ವಿಷಯವೇ ಬೇರೆ. ಮದುವೆಯ ನಂತರ ಪ್ರೀತಿ, ರೊಮ್ಯಾನ್ಸ್ ಗಳ ದಿನಗಳು ಬಹಳ ಬೇಗನೇ ಮುಗಿದುಹೋಗಿದ್ದವು. ಮಾಧವಿ ಅವನಿಗೆ ಅಗತ್ಯದ ವಸ್ತುವಾಗಿಬಿಟ್ಟಿದ್ದಳು. ರೋಹಿತ್‌ ಇತರ ಹುಡುಗಿಯರು ಮತ್ತು ಮಹಿಳೆಯರ ಜೊತೆ ಆರಾಮವಾಗಿ ಬೆರೆಯುತ್ತಿದ್ದ. ಇಂದಿರಾಳ ಗೆಳತಿಯರು, ಅಕ್ಕಪಕ್ಕದ ಹುಡುಗಿಯರು, ಅವನಿಗೆ ಹತ್ತಿರವಾಗಿದ್ದರು. ಅವನ ವ್ಯಕ್ತಿತ್ವದಲ್ಲಿ ಒಂದು ರೀತಿಯ ಜಾದೂವಿನಂತಹ ಆಕರ್ಷಣೆ ಇತ್ತು. ಅವನ ಸ್ನೇಹಭರಿತ ವರ್ತನೆ, ಚಿತ್ತಾಕರ್ಷಕ ಹಾಸ್ಯಭರಿತ ಮಾತುಗಳು ಅವರನ್ನು ಅವನೆಡೆಗೆ ಸೆಳೆಯುತ್ತಿದ್ದವು. ಮಾಧವಿಗೆ ಅವನ ಈ ವರ್ತನೆಗಳು ಕೀಳು ಅಭಿರುಚಿ ಅನ್ನಿಸುತ್ತಿತ್ತು. ಹೆಚ್ಚು ಆತ್ಮೀಯತೆ ತೋರುವುದು ಮಾಧವಿಗೆ ಅಸಹನೀಯವಾಗಿತ್ತು. ಯಾರದಾದರೂ ಕೈ ಕುಲುಕುವುದು, ಯಾರದಾದರೂ ಜಡೆ ಎಳೆಯುವುದು, ಯಾರದಾದರೂ ಹೆಗಲ ಮೇಲೆ ಕೈ ಇಡುವುದು, ಭವಿಷ್ಯ ಹೇಳುವ ನೆಪದಲ್ಲಿ ಕೈ ಹಿಡಿದು ಅವರು ನಾಚಿ ಕೆಂಪಾಗುವಂತೆ ಅಥವಾ ಕಿಲಕಿಲನೆ ನಗುವಂತೆ ಮಾಡುವುದು ರೋಹಿತ್‌ಗೆ ಅಭ್ಯಾಸವಾಗಿತ್ತು.

ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ಯಾರಿಗಾದರೂ ಏನಾದರೂ ಸಮಸ್ಯೆ ಅಥವಾ ತೊಂದರೆಯಾದರೆ ರೋಹಿತ್‌ ಅವರಿಗೆ ಸಹಾಯ ಮಾಡಲು ಸಿದ್ಧನಾಗುತ್ತಿದ್ದ. ಬೇರೆಯವರಿಗೆ ಇಷ್ಟೊಂದು ಉಪಕಾರ ಮಾಡುವ ಮತ್ತು ಸದಾ ಅವರೊಂದಿಗೆ ಪ್ರಸನ್ನಚಿತ್ತನಾಗಿರುವ ರೋಹಿತ್‌ ತನ್ನೊಂದಿಗೆ ಹೀಗೇಕೆ ಎಂದು ಚಿಂತಿಸುತ್ತಿದ್ದಳು. ತಾನೊಂದು ಚಿಕ್ಕ ತಪ್ಪು ಮಾಡಿದರೂ, ಸ್ವಲ್ಪ ನಿರ್ಲಕ್ಷ್ಯತೆ ತೋರಿದರೂ ಭೂಮಿ ಆಕಾಶ ಒಂದು ಮಾಡಿಬಿಡುತ್ತಿದ್ದ. ಅಡುಗೆ ಸರಿಯಿಲ್ಲದಿದ್ದರೆ, ಬಟ್ಟೆ ಸರಿಯಾಗಿ ಇಸ್ತ್ರೀ ಮಾಡದಿದ್ದರೆ ಇತ್ಯಾದಿ ಸಣ್ಣಪುಟ್ಟ ತಪ್ಪುಗಳಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದ. ಅವಳೆಷ್ಟೇ ಜಾಗರೂಕತೆಯಿಂದ ಕೆಲಸ ಮಾಡಿದರೂ ರೋಹಿತ್‌ ಏನಾದರೊಂದು ತಪ್ಪು ಕಂಡುಹಿಡಿಯುತ್ತಿದ್ದ. ಬೇರೆಯವರ ಬಳಿ ಸದಾ ಹಸನ್ಮುಖಿಯಾಗಿರುವ ವ್ಯಕ್ತಿ ತನ್ನ ಹೆಂಡತಿಗೆ ಪ್ರೀತಿ ತೋರುತ್ತಿರಲಿಲ್ಲ. ಈ ವಿಷಯಗಳನ್ನಾದರೂ ಸಹಿಸಿಕೊಳ್ಳುತ್ತಿದ್ದಳು. ಆದರೆ ರೋಹಿತ್‌ ಬೇರೆ ಮಹಿಳೆಯರ ಮಧ್ಯೆ ಇಂದ್ರನಂತೆ ಕುಳಿತಿರುವುದು ಅವಳಿಗೆ ಸ್ವಲ್ಪ ಇಷ್ಟವಾಗುತ್ತಿರಲಿಲ್ಲ.

ಮಾಧವಿಯ ತೌರುಮನೆಯ ವಾತಾವರಣ ಈ ಮನೆಯದಕ್ಕಿಂತ ಭಿನ್ನವಾಗಿತ್ತು. ಹೀಗಾಗಿ ಮದುವೆಯ ನಂತರ ಅವಳು ರೋಹಿತ್‌ನ ಗೆಳೆಯರು ಮತ್ತು ಬಂಧುಗಳೊಂದಿಗೆ ಪಳಗಿದವರಂತೆ ಮಾತಾಡುತ್ತಿದ್ದಳು. ಅದಕ್ಕೂ ರೋಹಿತ್‌ ಅವಳ ಮೇಲೆ ಕೋಪಿಸಿಕೊಳ್ಳುತ್ತಿದ್ದ. ಮೊದಲು ಅವಳು ಸುಮ್ಮನಿರುತ್ತಿದ್ದಳು. ಆದರೆ ಒಂದು ದಿನ ಅವನಿಗೆ ಹೇಳಿಯೇಬಿಟ್ಟಳು, “ನೀವು ಬೇರೆ ಹೆಂಗಸರೊಡನೆ ಯಾವುದೇ ಹಿಂಜರಿಕೆ ಇಲ್ಲದೆ ಬೆರೆಯುತ್ತೀರಿ, ಕೈ ಕುಲುಕುತ್ತೀರಿ. ನಾನು ನಿಮ್ಮ ಗೆಳೆಯರೊಂದಿಗೆ ಹೀಗೇ ಮಾಡ್ಲಾ? ಅವರ ಸಮೀಪ ಕೂತು ನಗ್ತಾ ಇರ್ಲಾ?”

“ನಿನಗೇನು ತಲೆ ಕೆಟ್ಟಿದೆಯಾ? ನನ್ನ ಹೆಂಡತಿ ಯಾರಾದ್ರೂ ಪರಪುರುಷರನ್ನು ಮುಟ್ಟೋದು ನನಗೆ ಇಷ್ಟವಿಲ್ಲ. ನೀನು ಎಲ್ಲರ ಜೊತೆ ನಕ್ಕೊಂಡು ಬಿಚ್ಚು ಮನಸ್ಸಿನಿಂದ ಮಾತಾಡು. ಅಷ್ಟು ಸಾಕು.”

“ನಿಮ್ಮ ಪ್ರಕಾರ ಬಿಚ್ಚು ಮನಸ್ಸು ಅಂದ್ರೇನು? ನೀವು ಬೇರೆ ಹುಡುಗಿಯರನ್ನು ಬೇರೆಯವರ ಹೆಂಡತಿಯರನ್ನು ಮುಟ್ಟಿದ್ರೆ ತಪ್ಪಲ್ಲ. ಆದರೆ ನಾನು ಯಾರಾದರೂ ಪರಪುರುಷರನ್ನು ಮುಟ್ಟಿದರೆ ಪ್ರಳಯವೇ ಆಗಿಬಿಡುತ್ತೆ,” ಮಾಧವಿ ವ್ಯಂಗ್ಯವಾಗಿ ಹೇಳಿದಳು.

“ನಿನ್ನ ಆಲೋಚನೆ ತಪ್ಪು. ನಾನು ಯಾರನ್ನೂ ಕೆಟ್ಟ ಯೋಚನೆಯಿಂದ ಮುಟ್ಟಲಿಲ್ಲ. ನನ್ನ ಮನಸ್ಸು ಸ್ವಚ್ಛವಾಗಿದೇಂತ ನನಗೆ ಗೊತ್ತು. ನನಗೆ ಮಾತುಕತೆ, ಗಲಾಟೆ ಇಷ್ಟ. ನಿನ್ನನ್ನು ಮುಟ್ಟೋರು ಯಾವ ದೃಷ್ಟಿಯಿಂದ ಮುಟ್ತಾರೇಂತ ನನಗೇನು ಗೊತ್ತು?” ರೋಹಿತ್‌ ಬಡಬಡಿಸಿದ.

“ಇನ್ನೊಬ್ಬರ ಉದ್ದೇಶ ಏನಿರುತ್ತೇಂತ ನಿಮಗೆ ಹೇಗೆ ಗೊತ್ತಾಗಲ್ವೋ ಹಾಗೇ ನಿಮ್ಮ ಉದ್ದೇಶ ಏನೂಂತ ಬೇರೇಯವ್ರಿಗೂ ಗೊತ್ತಾಗಲ್ಲ!” ಎಂದು ಮಾಧವಿ ಹೇಳಿದಾಗ ರೋಹಿತ್‌ ಸಿಟ್ಟಿನಿಂದ, “ಒಂದು ವೇಳೆ ಬೇರೆಯವರ ಜೊತೆ ಕೈ ಕೈ ಹಿಡಿದು ಸುತ್ತಾಡಬೇಕು ಅಂತ ನಿನಗೆ ಮನಸ್ಸಾಗಿದ್ರೆ ಖಂಡಿತಾ ಹಾಗೇ ಮಾಡು. ಆದ್ರೆ ನನ್ನ ನಿನ್ನ ಸಂಬಂಧ ಮುರಿದುಹೋಗುತ್ತೆ! ನೆನಪಿಟ್ಕೋ,” ಎಂದ. ಮಾಧವಿಗೆ ಅಸಹಾಯಕತೆಯಿಂದ ಕಣ್ಣಲ್ಲಿ ನೀರು ಬಂತು.

ರೋಹಿತ್‌, “ನೋಡು, ನಾನು ಸ್ಕೂಲ್ ‌ಬಿಟ್ಟು ತುಂಬಾ ವರ್ಷ ಆಯ್ತು. ಎಷ್ಟು ಓದಬೇಕೋ ಅಷ್ಟು ಓದಿಕೊಂಡಿದ್ದೀನಿ. ನನಗೆ ಲೆಕ್ಚರ್‌ ಕೊಟ್ಟು ನನ್ನ ತಲೆ ಕೆಡಿಸಬೇಡ,” ಎಂದು ಹೇಳಿ ಆಚೆ ಹೊರಟುಹೋದ.

`ರೋಹಿತ್‌ ಕೊಂಚ ಮೃದುವಾಗಿ ವರ್ತಿಸಿದ್ರೆ, ಕೊಂಚ ನನ್ನ ಕೆಲಸಗಳಲ್ಲಿ ಸಹಕಾರ ಕೊಟ್ರೆ ನನಗಿನ್ನೇನೂ ಬೇಕಾಗಿಲ್ಲ,’ ಎಂದೆಲ್ಲಾ ಯೋಚಿಸುತ್ತಾ ಮಾಧವಿ ರಸ್ತೆ ದಾಟುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ಕಾರು ಎದುರಿಗೆ ಬಂತು. ಮಾಧವಿ ಅದರಿಂದ ತಪ್ಪಿಸಿಕೊಳ್ಳುಷ್ಟವರಲ್ಲಿ ಅಥವಾ ಕಾರನ್ನು ನಿಯಂತ್ರಿಸಿಕೊಳ್ಳುವಷ್ಟರಲ್ಲಿ ಕಾರು ಅವಳಿಗೆ ಢಿಕ್ಕಿ ಹೊಡೆದು ಅವಳನ್ನು ದೂರದಲ್ಲಿ ಎಸೆದಿತ್ತು.

ಅವಳಿಗೆ ಸ್ವಲ್ಪ ಹೊತ್ತು ಏನಾಯಿತೆಂದೇ ತಿಳಿಯಲಿಲ್ಲ. ಸ್ವಲ್ಪ ಸಂಭಾಳಿಸಿಕೊಂಡು ಏಳಲು ಪ್ರಯತ್ನಿಸಿದಾಗ ಕಾಲಿನಿಂದ ಸೊಂಟದವರೆಗೆ ಅಸಹನೀಯ ನೋವುಂಟಾಗಿ ಅವಳ ಪ್ರಯತ್ನ ವ್ಯರ್ಥವಾಯಿತು. ಆಗಲೇ ಅವಳಿಗೆ ಕಿವಿಯ ಹಿಂದೆ ತಣ್ಣಗೆ ಹರಿಯುತ್ತಿರುವಂತೆ ಭಾಸವಾಯಿತು. ಕೈ ಹಾಕಿ ನೋಡಿದಾಗ ರಕ್ತ ಹರಿಯುತ್ತಿರುವುದು ತಿಳಿಯಿತು. ಅವಳಿಗೆ ಜ್ಞಾನ ತಪ್ಪುವಂತಾಯಿತು.

“ಮೇಡಂ, ಹೇಗಿದ್ದೀರಿ?” ಎಂಬ ಧ್ವನಿ ಕೇಳಿ ಮಾಧವಿ ಥಟ್ಟನೆ ಕಣ್ಣುಬಿಟ್ಟಳು. ಒಬ್ಬ ಅಪರಿಚಿತ ವ್ಯಕ್ತಿ ಗಾಬರಿಯಿಂದ ತಲೆ ತಗ್ಗಿಸಿ ಕೇಳುತ್ತಿದ್ದ. ಇನ್ನೂ ಕೆಲವು ಅಸ್ಪಷ್ಟ ಧ್ವನಿಗಳು ಕೇಳುತ್ತಿದ್ದವು, ಅವು ಬಹುಶಃ ಅಪಘಾತವನ್ನು ನೋಡಿ ಹತ್ತಿರ ಬಂದವರದಾಗಿತ್ತು. ಮಾಧವಿಗೆ ತನ್ನ ಸ್ಥಿತಿಯ ಬಗ್ಗೆ ನಾಚಿಕೆಯಾಗುತ್ತಿತ್ತು. ಅವಳು ಮತ್ತೊಮ್ಮೆ ಏಳಲು ಪ್ರಯತ್ನಿಸಿದಳು. ಅವಳ ತಲೆ ವಿಪರೀತ ನೋಯುತ್ತಿತ್ತು.

“ಭಯಪಡಬೇಡಿ, ನಾನು ನಿಮ್ಮನ್ನು ಹಾಸ್ಪಿಟಲ್ ಗೆ ಕರೆದುಕೊಂಡು ಹೋಗ್ತೀನಿ,” ಅಪರಿಚಿತ ಅವಳಿಗೆ ಆಸರೆ ಕೊಟ್ಟು ನಿಲ್ಲಿಸಲು ಪ್ರಯತ್ನಿಸಿದ. ಮಾಧವಿಗೆ ಕಣ್ಣುಗಳು ಮುಚ್ಚಿಹೋಗುತ್ತಿತ್ತು. ದೇಹ ಕುಸಿಯುತ್ತಿತ್ತು. ಅಪರಿಚಿತನ ತೋಳುಗಳು ಮಾಧವಿ ಕೆಳಗೆ ಬೀಳದಂತೆ ಅಪ್ಪಿ ಹಿಡಿದಿದ್ದವು. ಅಷ್ಟರಲ್ಲಿ ಅವಳು ಪೂರ್ತಿ ಜ್ಞಾನ ತಪ್ಪಿದ್ದಳು.

ಸ್ವಲ್ಪ ಹೊತ್ತಿನ ನಂತರ ಅವಳು ಕಣ್ಣು ತೆರೆದಾಗ ಅವಳಿಗೆ ಯಾವುದೂ ನೆನಪಾಗಲಿಲ್ಲ. `ಅರೆ, ಬೆಳಗಾಗಿಹೋಯ್ತು. ಅಲಾರಂ ಯಾಕೆ ಹೊಡೆಯಲಿಲ್ಲ?’ ಎಂದುಕೊಂಡಳು. ಅವಳು ಕಣ್ಣುಬಿಟ್ಟು ಅತ್ತಿತ್ತ ನೋಡಲು ಪ್ರಯತ್ನಿಸಿದಳು. ತಾನು ಒಂದು ಹೊಸ ಜಾಗದಲ್ಲಿ ಇದ್ದದ್ದು ತಿಳಿದು ಗಾಬರಿಯಿಂದ ಏಳಲು ಪ್ರಯತ್ನಿಸಿದಳು.

“ಪ್ಲೀಸ್‌, ಇನ್ನೂ ಸ್ವಲ್ಪ ಹೊತ್ತು ಮಲಗಿ,” ಯಾವುದೋ ಮಧುರ ಧ್ವನಿಯಾಗಿತ್ತು. ಮಾಧವಿ ಬೆಚ್ಚಿ ಅತ್ತ ನೋಡಿದಳು. ಮುಖ ನೋಡಿದ ಕೂಡಲೇ ಅವಳಿಗೆ ಕಾರು ಡಿಕ್ಕಿ ಹೊಡೆದದ್ದು ನೆನಪಿಗೆ ಬಂತು.

“ಮೇಡಂ ಸಾರಿ. ಅದು ಹ್ಯಾಗಾಯ್ತೋ…. ಗೊತ್ತಾಗ್ಲಿಲ್ಲ. ಐಯಾಮ್ ವೆರಿ ವೆರಿ ಸಾರಿ,” ಅಪರಿಚಿತ ನೆಲವನ್ನೇ ನೋಡುತ್ತ ಬಹಳ ಕಷ್ಟದಿಂದ ಹೇಳಿದ.

ಆ್ಯಕ್ಸಿಡೆಂಟ್‌ ಆದಾಗ ಜನ ಗಾಯಾಳುವನ್ನು ರಸ್ತೆಯಲ್ಲಿಯೇ ಬಿಟ್ಟು ಓಡಿಹೋಗಿಬಿಡುತ್ತಾರೆ. ಆದರೆ ಈತ ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದಲ್ಲದೆ, ನನಗೆ ಜ್ಞಾನ ಬರುವವರೆಗೂ ಕಾದು ಕುಳಿತಿದ್ದಾನೆ ಎಂದು ಮಾಧವಿ ಯೋಚಿಸಿದಳು.

ಅವಳು ನಿಧಾನವಾಗಿ ಹೇಳಿದಳು, “ಪರವಾಗಿಲ್ಲ. ನಾನೇ ಏನೋ ಯೋಚಿಸ್ತಾ ಬರ್ತಿದ್ದೆ ಅನಿಸುತ್ತೆ.”

“ಮೇಡಂ, ನನ್ನ ಹೆಸರು ಅಜಯ್‌ ಅಂತ. ಇದು ನನ್ನ ಗೆಳೆಯನ ಹಾಸ್ಪಿಟಲ್. ನಿಮಗೆ ಔಷಧ, ಇಂಜೆಕ್ಷನ್‌ ಕೊಟ್ಟಿದ್ದಾರೆ. ದೇವರ ದಯೆ, ನಿಮಗೆ ಫ್ರ್ಯಾಕ್ಚರ್‌ ಆಗಿಲ್ಲ.”

“ನಿಮ್ಮ ಹೆಸರು ಕೇಳಬಹುದೇ?” ಅಜಯ್‌ ಕೇಳಿದ.

“ನನ್ನ ಹೆಸರು ಮಾಧವಿ,” ಅವಳು ಹೇಳಿದಳು.

“ನಿಮ್ಮ ಪರ್ಸ್‌ನಲ್ಲಿ ಫೋನ್‌ ನಂಬರ್‌ ಯಾವುದೂ ಸಿಗಲಿಲ್ಲ. ಹೀಗಾಗಿ ನಾನು ನಿಮ್ಮ ಮನೆಯವರಿಗೆ ಸುದ್ದಿ ತಿಳಿಸೋಕೆ ಆಗಲಿಲ್ಲ. ಈಗ ನೀವು ನಂಬರ್‌ ಹೇಳಿದ್ರೆ ನಿಮ್ಮ ಮನೆಯವರಿಗೆ ವಿಷಯ ತಿಳಿಸ್ತೀನಿ,” ಆಜಯ್‌ ಹೇಳಿದ.

“ಬೇಡ ಬೇಡ, ನಾನು ಹೊರಡ್ತೀನಿ,” ಮಾಧವಿಯ ಕಣ್ಣು 10 ಗಂಟೆ ಆಗುತ್ತಿದ್ದ ಗಡಿಯಾರದ ಮೇಲೆ ಬಿದ್ದಾಗ ಅವಳು ಮತ್ತೆ ಗಾಬರಿಯಾದಳು.

ಆಗಲೇ ಡಾಕ್ಟರ್‌ ಬಂದು ಹೇಳಿದರು, “ನಿಮ್ಮ ಡ್ರಿಪ್ಸ್ ಮುಗೀತಾ ಬಂತು. ನೋವು ನಿವಾರಕ ಔಷಧಿಗಳನ್ನು ಕೊಟ್ಟಿದೆ. ಇನ್ನೂ 2 ದಿನ ಈ ಔಷಧಿಗಳನ್ನು ತಗೊಳ್ಳಿ.”

“ಪ್ರಿಸ್ಕ್ರಿಪ್ಶನ್‌ ನನಗೆ ಕೊಡಿ ಸಾರ್‌,” ಎಂದು ಅಜಯ್‌ ಔಷಧದ ಚೀಟಿ ಪಡೆದು ಅದನ್ನು ತರಲು ಹೋದ.

10 ಗಂಟೆ ಆಗೋಯ್ತು. ಮನೇಲಿ ಎಲ್ರೂ ಕಾಯ್ತಿರ್ತಾರೆ ಎಂದು ಮಾಧವಿಗೆ ಚಿಂತೆಯಾಯಿತು. ಮೋಹನ ಹಾಲು ಬೇಕೂಂತ ಅಳ್ತಾ ಇರ್ತಾನೆ. ಇಂದಿರಾಗೆ ಕಾಲೇಜಿಗೆ ಲೇಟಾಗುತ್ತಿರುತ್ತದೆ. ಅತ್ತೆ ಮಾವ ತಿಂಡಿ ತಿನ್ನೋಕೆ ಕಾಯುತ್ತಿರುತ್ತಾರೆ.

ಅಷ್ಟರಲ್ಲಿ ನರ್ಸ್‌ ಬಂದು ಡ್ರಿಪ್‌ ಕ್ಲೋಸ್‌ ಮಾಡಿ, “ಈಗ ಸ್ವಲ್ಪ ಸುಸ್ತು ಇರುತ್ತೆ. 4-5 ದಿನ ರೆಸ್ಟ್ ತಗೊಂಡ್ರೆ ಸರಿಹೋಗುತ್ತೆ. ಮಾತ್ರೆಗಳನ್ನು ಸರಿಯಾದ ಟೈಂಗೆ ತಗೊಳ್ಳಿ,” ಎಂದಳು.

ಮಾಧವಿ ಹಾಸಿಗೆಯಿಂದ ಎದ್ದಾಗ ಅವಳ ಕಾಲುಗಳು ಹೊಯ್ಡಾಡಿದವು. ನರ್ಸ್‌ ಅವಳಿಗೆ ಆಸರೆ ಕೊಟ್ಟಳು. ಆಗಲೇ ಅಜಯ್ ಔಷಧಿಗಳ ಪ್ಯಾಕೆಟ್‌ ಹಿಡಿದು ಒಳಬಂದ.

“ಪ್ಲೀಸ್‌, ನೀವು ತಪ್ಪು ತಿಳ್ಕೋಬೇಡಿ. ಹಾಸ್ಪಿಟಲ್ ಬಿಲ್ ನಾನು ಕೊಡ್ತೀನಿ,” ಮಾಧವಿ ಹೇಳಿದಳು.

“ಪರವಾಗಿಲ್ಲ ಮೇಡಂ. ನನ್ನಿಂದಾಗಿ ನೀವು ಇಷ್ಟು ಕಷ್ಟಪಡಬೇಕಾಯ್ತು. ಹೀಗೆಲ್ಲಾ ಹೇಳಿ ನನಗೆ ಮುಜುಗರ ಉಂಟು ಮಾಡಬೇಡಿ. ನನಗೆ ನೀವು ಏನು ಶಿಕ್ಷೆ ಬೇಕಾದರೂ ಕೊಡಬಹುದು. ಪೊಲೀಸರಿಗೆ ದೂರು ಕೊಡಿ ಅಥವಾ ಅಣ್ಣನಿಂದ ಒದೆ ಕೊಡಿಸಿ. ನಿಮ್ಮಿಷ್ಟದಂತೆ ಮಾಡಿ,” ಅಜಯ್‌ ಪರಿಸ್ಥಿತಿಯನ್ನು ತಿಳಿ ಮಾಡಲು ಹೇಳಿದಾಗ ಮಾಧವಿಯ ಮುಖದಲ್ಲಿ ಮಂದಹಾಸ ಮೂಡಿತು.

“ಬನ್ನಿ, ನಿಮ್ಮ ಮನೆಗೆ ಬಿಡ್ತೀನಿ,” ಅಜಯ್‌ ಹೇಳಿದಾಗ, ಮಾಧವಿ ನಿಧಾನವಾಗಿ ಹೊರಗೆ ಹೆಜ್ಜೆ ಇಟ್ಟಳು. ಅವಳ ಕಾಲುಗಳು ಮತ್ತೊಮ್ಮೆ ತೂರಾಡಿದವು. ಅಜಯ್‌ ತಕ್ಷಣ ಅವಳನ್ನು ಸಂಭಾಳಿಸಿ ತೋಳುಗಳ ಆಸರೆ ಕೊಟ್ಟು ಅವಳನ್ನು ಕಾರಿನಲ್ಲಿ ಕೂಡಿಸಿದ.

“ನೀವು ವೃಥಾ ತೊಂದರೆ ತಗೊಂಡಿರಿ. ನಾನೇ ಔಷಧಗಳನ್ನು ಖರೀದಿಸ್ತಿದ್ದೆ,” ಮಾಧವಿಗೆ ಅವನಿಂದ ಸಹಾಯ ಪಡೆಯುವುದು ಇಷ್ಟವಿರಲಿಲ್ಲ.

“ತೊಂದರೆ ಎಂಥದ್ದು? ನನ್ನ ತಪ್ಪಿಗೆ ಒಂಚೂರು ಪ್ರಾಯಶ್ಚಿತ್ತ ಬೇಡ್ವಾ? ನಿಮ್ಮ ಮನೆ ರೂಟ್‌ ಯಾವುದು?”

ಮಾಧವಿ ಅವನಿಗೆ ರೂಟ್‌ ಹೇಳತೊಡಗಿದಳು. ಮನೆ ಬಂದಾಗ ಅಜಯ್‌ ಔಷಧಗಳ ಪ್ಯಾಕೆಟ್‌ ತೆಗೆದುಕೊಟ್ಟ. ಮಾಧವಿ, “ತುಂಬಾ ಧನ್ಯವಾದಗಳು. ದಯವಿಟ್ಟು ಇದರ ಪೇಮೆಂಟ್‌ ಮಾಡಲು ಅವಕಾಶ ಕೊಡಿ,” ಎಂದಳು.

“ಮೇಡಂ, ಬೇಕೂಂದ್ರೆ ಒಂದು ದೊಡ್ಡ ಕಲ್ಲು ತಗೊಂಡು ನನ್ನ ಮೇಲೆ ಹಾಕಿಬಿಡಿ. ಆದರೆ ಈ ರೀತಿ ಮಾತಾಡಬೇಡಿ. ನೀವು ಒಪ್ಪಿದರೆ ನಿಮ್ಮ ಮನೆಯವರನ್ನು ಭೇಟಿ ಮಾಡಿ ಸಾರಿ ಕೇಳ್ತೀನಿ.”

“ಬೇಡ…. ಬೇಡ ಅಗತ್ಯವಿಲ್ಲ,” ಮಾಧವಿ ಗಾಬರಿಯಾದಳು. ತನ್ನ ಮನೆಯವರು ಈ ವಿಷಯವನ್ನು ಹೇಗೆ ತೆಗೆದುಕೊಳ್ಳುತ್ತಾರೋ ತಿಳಿದಿಲ್ಲ.

“ಆಯ್ತು. ಇದು ನನ್ನ ವಿಸಿಟಿಂಗ್‌ ಕಾರ್ಡ್‌. ನೀವು ಗುಣಮುಖರಾದ ಮೇಲೆ ನನಗೆ ತಿಳಿಸಬಹುದು. ನನಗೆ ಖುಷಿಯಾಗುತ್ತೆ. ಓ.ಕೆ. ಗೆಟ್‌ ವೆಲ್ ‌ಸೂನ್‌,” ಎಂದು ಅಜಯ್‌ ಅವಳ ಕೈಗೆ ವಿಸಿಟಿಂಗ್‌ ಕಾರ್ಡ್‌ ಕೊಟ್ಟು ಕಾರು ಓಡಿಸಿದ. ಮಾಧವಿ ಕಾರನ್ನೇ ನೋಡುತ್ತಿದ್ದಳು.

ಎರಡೂ ಕೈಗಳಲ್ಲಿ ಪರ್ಸ್‌ ಹಾಗೂ ಪ್ಯಾಕೆಟ್‌ಗಳನ್ನು ಹಿಡಿದು ಅವಳು ಕಾಲಿಂಗ್‌ ಬೆಲ್ ‌ಒತ್ತಿದಾಗ ಸ್ವಲ್ಪ ಹೊತ್ತಿನ ನಂತರ ಅತ್ತೆಯ ಕೋಪಗೊಂಡ ಮುಖ ಕಾಣಿಸಿತು. ತಲೆ ಹಾಗೂ ಹಣೆಯ ಮೇಲೆ ಬ್ಯಾಂಡೇಜ್‌ ಕಟ್ಟಿಸಿಕೊಂಡು ಗೋಡೆಯ ಆಸರೆ ಪಡೆದು ನಡೆಯುತ್ತಿದ್ದ ಮಾಧವಿಯನ್ನು ನೋಡಿ ಅತ್ತೆ ಅದರ ಬಗ್ಗೆ ಏನೂ ಕೇಳಲಿಲ್ಲ. ಅತ್ತೆಯ ಮನೆಯಲ್ಲಿ ತಾನು ಒಬ್ಬ ಕೆಲಸದವಳ ಸಮಾನ. ಏಕೀ ಉಪೇಕ್ಷೆ? ಆಗಲೇ ಅವಳ ಕಿವಿಗೆ ಮೋಹನನ ಅಳುವ ಶಬ್ದ ಕೇಳಿಸಿತು. ಅವಳು ನೋವನ್ನೆಲ್ಲಾ ಮರೆತು ಒಳಗೆ ಹೋಗಿ ಇಂದಿರಾಳ ಕೈನಿಂದ ಮಗುನ್ನೆತ್ತಿಕೊಂಡಳು.

ಅಷ್ಟರಲ್ಲಿ ಅತ್ತೆಯ ತೀಕ್ಷ್ಣ ಮಾತುಗಳು ಕೇಳಿ ಬಂದವು, “ನೀನು ಮಾಡೋದೆಲ್ಲಾ ಬಹಳ ವಿಚಿತ್ರವಾಗಿರುತ್ತೆ. ಮಕ್ಕಳನ್ನು ಗಮನಿಸದೆ, ಅವರಿಗೆ ಊಟ ತಿಂಡಿ ಕೊಡದೆ ಬೆಳಗ್ಗೇನೇ ಶಾಪಿಂಗ್‌ಗೆ ಹೊರಟುಬಿಟ್ಟಿದ್ಯಲ್ಲಾ?”

ಮಾಧವಿ ನಿಧಾನವಾಗಿ ಹೇಳಿದಳು, “ಮಗೂಗೆ ಹಾಲು, ಬ್ರೆಡ್‌ ತರಬೇಕಾಗಿತ್ತು.”

“ಸಣ್ಣ ಪುಟ್ಟ ಸಾಮಾನುಗಳಿಗಾಗಿ ಗಂಟೆಗಳ ಕಾಲ ಕಾಯಿಸ್ಬಿಟ್ಟೆ. ಇಂದಿರಾನೇ ಮಗೂನ ನೋಡಿಕೊಂಡಳು. ಅವಳೇ ಕಾಫಿ, ತಿಂಡಿ ಮಾಡಿದ್ಲು. ನಿನ್ನಿಂದಾಗಿ ಅವಳು ಕಾಲೇಜಿಗೆ ರಜಾ ಹಾಕಬೇಕಾಯ್ತು.” ಅತ್ತೆಯ ಸೂಕ್ಷ್ಮ ಕಣ್ಣುಗಳು ಅವಳ ಬ್ಯಾಗಿನತ್ತಲೇ ನೆಟ್ಟಿದ್ದವು. ಅವರಿಗೆ ಮಾಧವಿಯ ಸುಸ್ತಾದ ಮುಖ, ತಲೆಯ ಬ್ಯಾಂಡೇಜ್‌ನತ್ತ ಗಮನವೇ ಹೋಗಿರಲಿಲ್ಲ. ಅತ್ತೆ ತನಗೆ ಅವಹೇಳನ ಮಾಡಿದ್ದಕ್ಕೆ ಮಾಧವಿಗೆ ದುಃಖವಾಯಿತು. ಇರಲಿ ಇವರಿಗೆ ನನ್ನ ಬಗ್ಗೆ ಆದರ ಇಲ್ಲದಿದ್ರೆ ನಾನೇನು ಮಾಡೋಕಾಗುತ್ತೇ ಎಂದುಕೊಂಡು ಮೋಹನನನ್ನು ಎತ್ತಿಕೊಂಡು ತನ್ನ ಕೋಣೆಗೆ ಹೋದಳು. ಮೊದಲು ಅವನಿಗೆ ಹಾಲು ಕೊಟ್ಟಳು. ಹೊಟ್ಟೆ ತುಂಬಿದ ಕೂಡಲೇ ಮಗು ನಿದ್ದೆ ಹೋದ. ನಂತರ ಅವಳ ಮನಸ್ಸಿನಲ್ಲಿ ಬೆಳಗ್ಗೆ ನಡೆದ ವಿಷಯವೆಲ್ಲಾ ಹಾದುಹೋಯಿತು.

ರೋಹಿತ್‌ನೊಂದಿಗೆ ಸಣ್ಣ ಕೆಲಸಕ್ಕಾಗಿ ಆಚೆ ಹೋದಾಗ ಹೀಗೆ ಅಪಘಾತವಾಗುತ್ತದೆಂದು ಅವಳಿಗೇನು ಗೊತ್ತಿತ್ತು? ನಂತರ ಅಜಯನ ಮುಖ ಅವಳೆದುರು ಮೂಡಿಬಂದಿತ್ತು. ಅವನ ಮೇಲೆ ಕೋಪಗೊಳ್ಳುವುದೋ ಅಥವಾ ಅವನಿಗೆ ಕೃತಜ್ಞತೆ ತೋರುವುದೋ? ಮಾಧವಿಗೆ ಉಂಟಾದ ಅಪಘಾತಕ್ಕೆ ಅವನೇ ಕಾರಣನಾಗಿದ್ದ. ಆದರೆ ಅಪಘಾತದ ನಂತರ ಅವನು ಮಾಧವಿಗೆ ಮಾಡಿದ್ದ ಸಹಾಯವೇನೂ ಕಡಿಮೆ ಇರಲಿಲ್ಲ. ಅವನು ಒಂದು ಒಳ್ಳೆಯ ಮನೆತನದ, ಸುಶಿಕ್ಷಿತ, ಸಜ್ಜನನಾಗಿದ್ದ. ಅವನು ಅವಳನ್ನು ಅದೇ ಸ್ಥಿತಿಯಲ್ಲಿ ರಸ್ತೆಯಲ್ಲೇ ಬಿಟ್ಟು ಹೋಗಬಹುದಿತ್ತು ಅಥವಾ ಯಾವುದಾದರೂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನೂರಾ ಎಂಟು ಎನ್‌ಕ್ವೆಯರಿ ಅಥವಾ ಗೊಂದಲಗಳಿಗೆ ಗುರಿಯಾಗಿದ್ದರೆ? ಇದರ ಜೊತೆಗೆ ನಾಚಿಕೆಯೂ ಆಗತೊಡಗಿತ್ತು. ತಾನು ಡಿಕ್ಕಿ ಹೊಡೆಸಿಕೊಂಡು ಕೆಳಗೆ ಬೀಳುವಾಗ ತನ್ನ ದುಪಟ್ಟಾ ಎಲ್ಲೋ ದೂರಕ್ಕೆ ಹಾರಿಹೋಗಿತ್ತು. ತಾನು ಅಸ್ತವ್ಯಸ್ತ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದ್ದೆ ಎಂಬುದು ನೆನಪಾಯಿತು. ಆ ಅರೆಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿ, ನಿಶ್ಶಕ್ತಿಯಿಂದಾಗಿ ಆ ಅಪರಿಚಿತನ ತೋಳುಗಳ ಆಸರೆ ಪಡೆಯಬೇಕಾಯಿತು. ಮಾಧವಿ ಅದುವರೆಗೆ ತನ್ನ ಕೈಯನ್ನು ಒಬ್ಬ ಬಳೆಗಾರನಿಗೂ ಮುಟ್ಟಲು ಬಿಟ್ಟಿರಲಿಲ್ಲ. ಆದರೆ ಇಂದು ಅಸಹಾಯಕಳಾಗಿ ಪರಪುರುಷನ ತೋಳುಗಳ ಆಶ್ರಯ ಪಡೆಯಬೇಕಾಯಿತು. ಅವಳಿಗೆ ಒಂದು ವಿಚಿತ್ರ ಅನುಭವ ಉಂಟಾಗಿ ಬಾಥ್‌ ರೂಮಿನಲ್ಲಿ ಬಹಳ ಹೊತ್ತಿನವರೆಗೆ ಸ್ನಾನ ಮಾಡುತ್ತಲೇ ಇದ್ದಳು. ಅವಳು ಫ್ರೆಶ್‌ ಆಗಿ ಹೊರಬಂದಾಗ ಔಷಧಗಳು ಪರಿಣಾಮ ಬೀರತೊಡಗಿದವು. ಮಾಧವಿ ಅಲ್ಲೇ ಮೋಹನನ ಪಕ್ಕ ಮಲಗಿಕೊಂಡಳು.

ಮೋಹನ ಅಳುವ ಶಬ್ದ ಕೇಳಿ ಅವಳು ಕಣ್ಣುಬಿಟ್ಟಾಗ ಆಗಲೇ 2 ಗಂಟೆಯಾಗಿತ್ತು. ಅಷ್ಟು ಹೊತ್ತಿಗೆ ಎಲ್ಲರೂ ಊಟ ಮಾಡುವ ಸಮಯ. ಅವಳು ಧಡಬಡಿಸಿ ಎದ್ದು ಅಡುಗೆಮನೆಗೆ ಓಡಿದಾಗ ಇಂದಿರಾ ಅಡುಗೆ ಮಾಡುತ್ತಿದ್ದಳು. ಮಾಧವಿ ಅವಳಿಗೆ ಸಹಾಯ ಮಾಡಲಿಚ್ಛಿಸಿದಳು. ಆದರೆ ಅಡುಗೆ ಕೆಲಸ ಮುಗಿದಿದೆ ಎಂದು ಹೇಳಿ ಇಂದಿರಾ ಸಹಾಯ ಬೇಡವೆಂದಳು. ಇಂದಿರಾಳ ಮೂಡ್ ಹಾಳಾಗಿತ್ತು. ಈಗ ಬರೀ ಮುಖ ತಿರುಗಿಸಿಕೊಂಡಿದ್ದಳು. ಇನ್ನು ಉಳಿದ ಕಾರ್ಯಕ್ರಮ ರೋಹಿತ್‌ ಮನೆಗೆ ವಾಪಸ್‌ ಬಂದಮೇಲೆ ಎಂದು ಮಾಧವಿಗೆ ಗೊತ್ತಿತ್ತು.

ನಂತರ ಅದೇ ಆಯ್ತು. ರೋಹಿತ್‌ ಮನೆಗೆ ಬಂದಾಗ ತಾಯಿ ಮಗಳು ಯಾವ ಯಾವ ಕಥೆಗಳನ್ನು ಅವನಿಗೆ ಹೇಳಿದರೋ ಅವನು ಭುಸುಗುಟ್ಟುತ್ತಲೇ ಇದ್ದ.

ರಾತ್ರಿ ಕೋಣೆಗೆ ಬರುತ್ತಲೇ ಅವನು ಬಡಬಡಿಸತೊಡಗಿದ, “ಬೇಜವಾಬ್ದಾರಿಗೂ ಒಂದು ಮಿತಿ ಇರುತ್ತೆ ಮಾಧವಿ. ನೀನು ಬೆಳಗ್ಗೇನೇ ಏನು ಖರೀದಿ ಮಾಡೋಕೆ ಹೋಗಿದ್ದೆ? ನಿಮಗೆಲ್ಲಾ ಶಾಪಿಂಗ್‌ನ ಹುಚ್ಚು ಹಿಡಿದಿದೆ. ಒಂದು ವಸ್ತು ಖರೀದಿಸಲು ಹೋಗ್ತೀರಿ. ಇನ್ನೂ 6 ವಸ್ತುಗಳನ್ನು ಖರೀದಿಸ್ತೀರಿ. ಗಂಡ ಕಷ್ಟಪಟ್ಟು ಸಂಪಾದಿಸಿದ್ದನ್ನು ಉಡಾಯಿಸ್ತೀರಿ. ನನ್ನ ಬಳಿ ದುಡ್ಡಿನ ಗಿಡ ಇಲ್ಲ ಗೊತ್ತಾಯ್ತಾ?” ರೋಹಿತ್‌ ಕೋಪದಿಂದ ಅವಳು ಸಾಮಾನು ತಂದಿದ್ದ ಬ್ಯಾಗನ್ನು ತೆಗೆದುಕೊಂಡು ಅದರಲ್ಲಿದ್ದ ವಸ್ತುಗಳನ್ನು ಮಂಚದ ಮೇಲೆ ಸುರಿಯತೊಡಗಿದ, “ನೋಡು, ಏನೇನು ತಂದಿದ್ದೀಯ ನೀನು. ಕುಕೀಸ್‌, ಕೇಕ್‌, ಫಾರಿನ್‌ ಜೂಸ್‌ ಡಬ್ಬಿಗಳು, ಹಾಲಿನ ಡಬ್ಬಿಗಳು, ಚಾಕಲೇಟ್‌, ಚಿಪ್ಸ್, ಯಾಕೆ ಬೇಕು ಇವೆಲ್ಲಾ?” ಎಂದು ಕೂಗಿದ.

ಮಾಧವಿಗೆ ಮತ್ತೆ ಆ ಯುವಕನ ನೆನಪಾಯಿತು. ಅವನೇ ಅಷ್ಟೂ ವಸ್ತುಗಳನ್ನು ತಂದುಕೊಟ್ಟಿದ್ದ. ಮಾಧವಿ ಮನೆಗೆ ಬಂದ ಮೇಲೆ ಆ ವಸ್ತುಗಳೇನೆಂದೂ ಸಹ ನೋಡಿರಲಿಲ್ಲ. ಇದೆಲ್ಲವನ್ನೂ ರೋಹಿತ್‌ಗೆ ಹೇಗೆ ಹೇಳುವುದೆಂದು ಅವಳು ಯೋಚಿಸುತ್ತಿದ್ದಳು. ಆಗಲೇ ರೋಹಿತ್‌ ಮತ್ತೆ ಹೇಳಿದ, “ಎಲ್ಲಿಗೆ ಹೋಗಿದ್ದೆ ನೀನು? ಯಾವ ಹೊಸ ಸ್ಟೋರ್ಸ್ ಹುಡುಕ್ಕೊಂಡಿದ್ದೀಯ?”

ಇವರೇನೂ ಕೇಳದಿದ್ದರೆ, ನಾನೂ ಏನೂ ಹೇಳುವುದಿಲ್ಲ. ಅವಳು ತನ್ನ ಹಠ ಬಿಟ್ಟುಕೊಡದೆ ಹೇಳಿದಳು, “ಹೌದು. ಸ್ವಲ್ಪ ದೂರದಲ್ಲಿ ಒಂದು ಹೊಸ ಸ್ಟೋರ್ಸ್‌ ತೆಗೆದಿದ್ದಾರೆ. ಹಳೆಯ ಅಂಗಡಿಯಲ್ಲಿ ಯಾವ ವಸ್ತುಗಳೂ ಸಿಗಲ್ಲ. ಅದಕ್ಕೇ ಹೊಸ ಸ್ಟೋರ್ಸ್‌ಗೆ ಹೋಗಿ ಎಲ್ಲಾ ಸಾಮಾನೂ ತಂದೆ,” ಎಂದಳು.

“ಅಂದ್ರೆ ಇಡೀ ಅಂಗಡೀನೇ ತಂದುಬಿಡೋದಾ? ನನ್ನ ದುಡ್ಡೂಂದ್ರೆ ಬರೀ ಉಡಾಯಿಸೋಕೆ ಇರೋದಾ?” ಇತರರೊಂದಿಗೆ ಬಹಳ ಮೃದುವಾಗಿ ಮಾತನಾಡುತ್ತಿದ್ದ ರೋಹಿತ್‌ ಹೆಂಡತಿಯ ಮೇಲೆ ಕೆಂಡ ಕಾರುತ್ತಿದ್ದ. ಮಾಧವಿಯಂತೂ ಇದ್ಯಾವುದರ ಪರಿವೆ ಇಲ್ಲದಿದ್ದಳಂತೆ ಜ್ಯೂಸ್‌ ಬಾಟಲನ್ನೇ ನೋಡುತ್ತಿದ್ದಳು.

“ನಾನೇನು ಕೇಳ್ತಿದ್ದೀನಿ? ನೀನು ಉತ್ತರ ಯಾಕೆ ಕೊಡಲ್ಲ? ಕಿವಿ ಅರಳಿಸಿಕೊಂಡು ಕೇಳು. ಇನ್ನು ಮುಂದೆ ನನ್ನ ಪರಿಶ್ರಮದ ಸಂಪಾದನೆಯನ್ನು ಹೀಗೆ ಹಾಳುಮಾಡೋಕೆ ಬಿಡಲ್ಲ. ನೀನು ಒಂದೊಂದು ನಯಾಪೈಸೆದೂ ಲೆಕ್ಕ ಕೊಡಬೇಕು,” ರೋಹಿತ್‌ಸಿಟ್ಟಿನಲ್ಲಿ ಏನೇನೋ ಹೇಳುತ್ತಿದ್ದ. ಆದರೆ ಮಾಧವಿಗೆ ಒಂದು ಮುಖ್ಯವಾದ ಶಬ್ದ ಸಿಕ್ಕಿಬಿಟ್ಟಿತ್ತು. ಅದು ಅವಳ ಬೇಸರ, ತೊಡಕುಗಳನ್ನು ದೂರ ಮಾಡಿತ್ತು. ಅದಕ್ಕಾಗಿ ಅವಳು ಬೆಳಗಿನಿಂದ ಪ್ರಯತ್ನಿಸುತ್ತಿದ್ದಳು.

“ಲೆಕ್ಕಾನಾ……” ಅವಳು ಬಡಬಡಿಸಿದಳು.

“ಹೌದು ಲೆಕ್ಕ. ಒಂದೊಂದು ನಯಾಪೈಸೇದೂ,” ರೋಹಿತ್‌ ಗಟ್ಟಿಯಾಗಿ ಕಿರುಚಿದ.

“ಒಂದೊಂದು ಪೈಸೇದಾ ಅಥವಾ ಒಂದೊಂದು ಕ್ಷಣದ್ದಾ? ನೀವೇನು ಲೆಕ್ಕ ತಗೊಳ್ಳೋದು? ನಾನು ಅದನ್ನು ಕೊಡ್ತಾನೇ ಬಂದಿದ್ದೀನಿ. ಬೇರೆ ಹೆಣ್ಣುಗಳಲ್ಲಿ ಆಸಕ್ತಿ ತೋರಿಸ್ತೀರಿ. ಅವರ ಮೇಲೆ ರಸಿಕತೆ ತೋರಿ ಪ್ರಭಾವ ಬೀರ್ತೀರಿ. ಹಲ್ಲು ಕಿರಿದುಕೊಂಡು ಅವರ ಹಿಂದೆ ಹಿಂದೆ ಸುತ್ತುತ್ತೀರಿ. ನಿಮ್ಮ ಹೆಂಡತಿ ಮೇಲೆ ಬೇರೆಯವರ ದೃಷ್ಟಿ ಬೀಳದಂತೆ ನೋಡಿಕೊಳ್ತೀರಿ.

“ಆದರೆ ಈವತ್ತು ನಿಮ್ಮ ಹೆಂಡ್ತೀನ ಒಬ್ಬ ಪರಪುರುಷ ತನ್ನ ತೋಳುಗಳಲ್ಲಿ ಅಪ್ಪಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದ. ಅಲ್ಲಿಂದ ಮನೆಗೆ ಕರೆತಂದು ಬಿಟ್ಟ. ನೀವು ಅದನ್ನು ನೋಡಿದ್ದರೆ ಸಹಿಸಿಕೊಳ್ತಾ ಇದ್ರಾ? ಈಗ ನನಗೆ ಅರ್ಥ ಆಯ್ತು. ಈವತ್ತು ನನಗೆ ಆಗಿದ್ದು ನೀವು ಬೇರೆಯವರ ಮಗಳು, ತಂಗಿಯರೊಂದಿಗೆ ನಡೆಸಿದ ವ್ಯವಹಾರಗಳಿಗೆ ಲೆಕ್ಕ ಚುಕ್ತಾ ಮಾಡಿದಂತಾಯಿತು. ಆ ಅಪರಿಚಿತ ಈಗ ನನ್ನ ಮನಸ್ಸಿನಲ್ಲಿ ಆ ಅನುಭೂತಿ ಯಾಕೆ ಉಂಟು ಮಾಡ್ತಿದ್ದಾನೆ. ನನಗೆ ಇದುವರೆಗೆ ಅಂತಹ ಅನುಭವ ಆಗಿರಲಿಲ್ಲ”

ಇಷ್ಟು ಮಾತಾಡಿ ಮಾಧವಿ ಕಡೆಗಣ್ಣಿನಿಂದ ರೋಹಿತ್‌ನನ್ನು ನೋಡಿದಳು. ಅವನು ಮನದಲ್ಲಿದ್ದ ಸಿಟ್ಟನ್ನೆಲ್ಲಾ ಹೊರಹಾಕಿ ಈಗ ಚಿಪ್ಸ್ ತಿನ್ನುತ್ತಾ ಅವಳ ಮಾತುಗಳೇ ಕೇಳಿಸಲಿಲ್ಲ ಎಂಬಂತೆ ಟಿವಿ ನೋಡುತ್ತಾ ಮಜವಾಗಿ ಕುಳಿತಿದ್ದ. ಮಾಧವಿಗೆ ಬೇಸರವಾಯಿತು. ಇವರೆಂತಹ ಮನುಷ್ಯರು ಇವರಿಗೆ ತಮ್ಮ ಪತ್ನಿಯ ಗೌರವ ಅಥವಾ ಭಾವನೆಗಳಿಗೆ ಯಾವ ಅರ್ಥ ಇಲ್ಲ. ಇವೇ ವಿಚಾರಗಳಲ್ಲಿ ಮುಳುಗಿದ್ದ ಅವಳು ಯಾಂತ್ರಿಕವಾಗಿ ಅಲ್ಲಿದ್ದ ವಸ್ತುಗಳನ್ನು ಬ್ಯಾಗುಗಳಿಗೆ ತುಂಬುತ್ತಿದ್ದಳು. ಆಗ ರೋಹಿತ್‌ ಮೆಲ್ಲಗೆ, “ಬೆಳಗಿನ ನಿನ್ನ ಬೇಜವಾಬ್ದಾರಿಗೆ ಅಮ್ಮನಿಗೆ, ಇಂದಿರಾಗೆ ಬಹಳ ಕೋಪ ಬಂದಿದೆ. ಹೋಗು ಇದರಲ್ಲಿರೋ ಚಾಕಲೇಟ್‌, ಕುಕೀಸ್‌, ಚಿಪ್ಸ್ ಅವರಿಗೂ ಕೊಡು. ಅವರ ಮೂಡ್‌ ಕೊಂಚ ಸರಿಹೋಗುತ್ತದೆ,” ಎಂದ.

ಅದನ್ನು ಕೇಳಿ ಮಾಧವಿ ಬೆಚ್ಚಿಬಿದ್ದಳು, “ಇಲ್ಲ….ಇಲ್ಲ…. ಇದನ್ನು ನಾನು ಯಾರಿಗೂ ಕೊಡಲ್ಲ. ಇದರ ಮೇಲೆ ನನಗೆ ಮಾತ್ರ ಹಕ್ಕಿದೆ, ನನಗೆ ಮಾತ್ರ ಹಕ್ಕಿದೆ,” ಎಂದು ಜೋರಾಗಿ ಕಿರುಚಿದಳು.

ಬೆಡ್‌ ಮೇಲೆ ಬಿದ್ದಿದ್ದ ಎಲ್ಲಾ ವಸ್ತುಗಳನ್ನು ತೋಳುಗಳಲ್ಲಿ ಬಳಸಿ ಅವುಗಳ ಮೇಲೆ ತಲೆಯಿಟ್ಟು ಅಳಲಾರಂಭಿಸಿದಳು. ಅವಳ ಭಾವನೆಗಳನ್ನು ಅರಿಯದ ರೋಹಿತ್‌ ಆಶ್ಚರ್ಯದಿಂದ ಅವಳನ್ನೇ ನೋಡುತ್ತಿದ್ದ.

Tags:
COMMENT