“ಏನ್ರೀ ನೀವು, ಐರನ್ನವನಿಗೆ ಬಟ್ಟೆಗಳನ್ನು ಚೀಲಕ್ಕೆ ಹಾಕಿಕೊಡುವಾಗ ಜೊತೆಗೆ ಅಂಡರ್ವೇರ್ ಸಹ ಹಾಕಿಬಿಟ್ಟಿದ್ದೀರೇನು?” ಶೀಲಾ ಪತಿ ಶೇಖರನತ್ತ ಸಿಡುಕುತ್ತಾ ಕೇಳಿದಳು.
“ಇರಬೇಕು ಅನ್ಸುತ್ತೆ….. ಏನೋ ಬೈ ಮಿಸ್ಟೇಕ್ ಒಣ ಬಟ್ಟೆಗಳನ್ನು ಚೀಲಕ್ಕೆ ಹಾಕುವಾಗ ಜೊತೆಗೆ 1-2 ಹೋಗಿರಬೇಕು ಬಿಡು,” ಎಂದ ಶೇಖರ್.
“ಐರನ್ ಅಂಗಡಿಯವನು ಅದನ್ನು ಬೇರೆ ಬೇರೆ ಬಟ್ಟೆ ಲೆಕ್ಕದ ನೆಪದಲ್ಲಿ ಹಲವು ಎಕ್ಸ್ ಟ್ರಾ 8/ ಎಗರಿಸಿಕೊಂಡು ಹೋದ ಗೊತ್ತಾಯ್ತಾ…..?”
“ಅಯ್ಯೋ…. ಇದೊಂದು ದೊಡ್ಡ ವಿಷಯವೇ….. ಹೋಗಲಿ ಬಿಡು ಅಂದ್ನನಲ್ಲಾ…..”
“ಅದಲ್ಲ ವಿಷಯ…. ಹೇಗೋ 8/ ರೂ. ಎಕ್ಸ್ ಟ್ರಾ ತೆತ್ತಿದ್ದಾಗಿದೆ. ಅವೆರಡರ ಪೈಸೆ ವಸೂಲಿ ಆಗಬೇಕೆಂದರೆ 2 ದಿನ ನೀವು ಪ್ಯಾಂಟ್ ಇಲ್ಲದೆ ಚಡ್ಡಿಯಲ್ಲೇ ಆಫೀಸಿಗೆ ಹೊರಡಿ. ಮೇಲೆ ಹೇಗೂ ಶರ್ಟ್ ಇದ್ದೇ ಇರುತ್ತೆ!”
“ಆಹಾ…. ಎಷ್ಟು ಚೆನ್ನಾಗಿ ಹೇಳಿಬಿಟ್ಯೋ ಮಹರಾಯ್ತಿ! ಇದೇನು `ದಾರಿ ತಪ್ಪಿದ ಮಗ’ ಚಿತ್ರ ಅಂದುಕೊಂಡ್ಯಾ…… ಅದರ ನಾಯಕ ಮರೆವಿನ ಪ್ರೊಫೆಸರ್ ಪ್ಯಾಂಟ್ ಮರೆತು ಕಾಲೇಜಿಗೆ ಹೋದ ಹಾಗೆ ಮಾಡಲಿಕ್ಕೆ…. ಸ್ವಲ್ಪ ಸೀರಿಯಸ್ ಆಗಿರುವುದನ್ನು ಕಲಿತುಕೋ.”
“ಅಯ್ಯೋ….. ನಾನಿರುವುದೇ ಹೀಗೆ ಬಿಡಿ. ನನಗೀಗ 50+ ಆಗಿದ್ದರೂ, ವೈವಾಹಿಕ ಅಂಕಣದಲ್ಲಿ ಮದುವೆ ಆಗ್ತೀನಿ ಅಂತ ಫೋಟೋ ವಿವರ ನೀಡಿದರೆ ಎಷ್ಟು ಜನ ಕಾಲ್ ಮಾಡ್ತಾರೆ ಗೊತ್ತಾ……?”
ಆಗ ಮಗಳು ಸ್ನೇಹಾ, “ಅಪ್ಪ, ಅನಗತ್ಯವಾಗಿ ನನಗಾಗಿ ವೈವಾಹಿಕ ಅಂಕಣಗಳನ್ನು ತಡಕಾಡುತ್ತಿದ್ದೀರಿ. ಅದರ ಬದಲು ಅಮ್ಮನಿಗೇ ನೋಡಿ! ಈ ಅಮ್ಮ ಈಗಲೂ ಇನ್ನೊಂದು ಮದುವೆಗೆ ರೆಡಿ ಅಂತಾಳೆ, ನನಗಂತೂ ಮದುವೆ ಬೇಡಪ್ಪ!” ಎಂದಳು.
“ಅದ್ಯಾಕೆ ಹಾಗೆ ಹೇಳ್ತೀಯಮ್ಮ?” ಶೇಖರ್ಗೆ ತುಸು ಚಿಂತೆ ಎನಿಸಿತು.
“ಅಪ್ಪಾ ಇದುವರೆಗೂ ನಾನು ನಡೆಸಿರುವ ಜೀವನ ಮಜವಾಗಿದೆ. ಅದನ್ನು ಬಿಟ್ಟು ನಾನಾಗಿ ಹೋಗಿ ಜೈಲಿನಂಥ ಸಂಸಾರದಲ್ಲಿ ಸಿಲುಕಿಕೊಂಡು ನನ್ನ ಸ್ವಾತಂತ್ರ್ಯಕ್ಕೆ ನಾನೇ ಕಲ್ಲು ಹಾಕಿಕೊಳ್ಳಲೇ? ಮದುವೆ ಅನ್ನೋದು ನಿಜಕ್ಕೂ ಒಂದು ದೊಡ್ಡ ಬಂಧನವೇ ಸರಿ. ನನಗಂತೂ ಇಂಥ ಪಂಜರದ ಬಾಳು ಬೇಕಿಲ್ಲಪ್ಪ. ದಿನಾ ದಿನಾ ನೋಡ್ತಿದ್ದೀನಲ್ಲ ನಿಮ್ಮ ಇಬ್ಬರ ರಂಪ ರಾದ್ಧಾಂತ….. ಬೇಡಪ್ಪ ಬೇಡ! ಹೀಗೆ ನೆಮ್ಮದಿಯಾಗಿ ಜೀವನಪೂರ್ತಿ ಇದ್ದುಬಿಡ್ತೀನಿ…..” ಎಂದು ಮಗಳು ಸುದೀರ್ಘ ಭಾಷಣ ಮಾಡಿದಳು.
ಅಷ್ಟರಲ್ಲಿ ಶೇಖರನ ಗಮನ ಅವಳ ಕೋಣೆಯ ಬಾಗಿಲ ಕಡೆ ಹೋಯಿತು. ಅಲ್ಲಿ ಒಂದು ನಾಯಿ ಬಂದು ಸೇರಿಕೊಂಡಿತ್ತು. ಶೇಖರ್ ಹೇಳಿದ, “ನೀನು ಹೊರಗಿನ ಬಾಗಿಲು ಸರಿಯಾಗಿ ಹಾಕಿಲ್ಲ ಕಣಮ್ಮ…. ನೋಡು, ಯಾವುದೋ ಬೀದಿ ನಾಯಿ ಬಂದು ಒಳಗೆ ಸೇರಿದೆ.”
ಅದಕ್ಕೆ ಅವನ ಹೆಂಡತಿ ಶೀಲಾ, “ಸರಿಯಾಗಿ ನೋಡಿ, ಅದು ಹೆಣ್ಣು ನಾಯಿ. ಏನೋ ನಿಮ್ಮನ್ನು ಮಾತನಾಡಿಸಬೇಕು ಅಂತ ಬಂದಿದೆ. ಅದನ್ನು ಸರಿಯಾಗಿ ಮಾತನಾಡಿಸಿ, ಆಮೇಲೆ ಹೊರಗಿನ ದಾರಿ ತೋರಿಸಿ ಬನ್ನಿ,” ಎಂದು ಸಿಡುಕಿದಳು.
“ಏ ಶೀಲಾ…. ನೀನಂತೂ ಸದಾ ನನ್ನ ಬೆನ್ನು ಹಿಡಿದ ಬೇತಾಳದಂತೆ ಎಲ್ಲಕ್ಕೂ ಏನಾದರೊಂದು ಆಡಿಕೊಳ್ತಾನೇ ಇರ್ತೀಯಾ…..” ಶೇಖರ್ಗೂ ರೇಗಿಹೋಗಿತ್ತು.
“ಅಲ್ರೀ…. ನಿಮ್ಮ ಬೆನ್ನತ್ತದೆ ಇನ್ನೇನು ಪಕ್ಕದ ಮನೆಯವರ ಬೆನ್ನು ಹತ್ತಲು ಸಾಧ್ಯವೇ? ಅದೂ ಕೂಡ ಆಮೇಲೆ ನಿಮಗೆ ಸಮಾಧಾನ ಆಗೋಲ್ಲ ಬಿಡಿ. ಮತ್ತೆ ನಾನು ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೀನಿ ಅಂತ ಸರಿಯಾಗಿ ಗುರುತಿಸಿ….. ಪತಿ ಮುಂದೆ ಮುಂದೆ ನಡೆದಂತೆ ಪತ್ನಿ ಅವನ ನೆರಳಾಗಿ ಹಿಂಬಾಲಿಸುವುದೇ ಸರಿ. ಆ ಕಾಲದಿಂದ ವನವಾಸಕ್ಕೆ ಹೊರಟ ಶ್ರೀರಾಮ, ಪಾಂಡವರನ್ನು ಸೀತೆ, ದ್ರೌಪದಿ ಅನುಸರಿಸಿರಲಿಲ್ಲವೇ? ಅದನ್ನೆಲ್ಲ ಮರೆತು ನೀವೇ ಏನೇನೋ ಹೇಳ್ತಿದ್ದೀರಲ್ಲ…..?”
“ಹೋಗಲಿ ಬಿಡು. ನಾನು ನಿನ್ನನ್ನು ವಾದದಲ್ಲಿ ಗೆಲ್ಲಲು ಆಗೋದೆ ಇಲ್ಲ!”
“ಹಾಗೆ ಬನ್ನಿ ದಾರಿಗೆ…. ಮದುವೆ ಅನ್ನೋದೂ ಒಂದು ಯುದ್ಧವಿದ್ದಂತೆ, ಅದರಲ್ಲಿ ಗೆದ್ದೆವೋ ಅಲ್ಲವೋ ನೀವು ನನ್ನನ್ನು ಈ ಮನೆಗೆ ಕರೆತಂದದ್ದು…. ಅದುವೇ ಎಲ್ಲಕ್ಕಿಂತ ದೊಡ್ಡ ಗೆಲುವು ಅಂತ ತಿಳಿಯಿರಿ. ಇಂತ ಒಳ್ಳೆ ಪತ್ನಿಯನ್ನು ಪಡೆಯಲು ನೀವು ಏಳೇಳು ಜನ್ಮದ ಪುಣ್ಯ ಮಾಡಿರಬೇಕು. ಇಂಥ ಒಳ್ಳೆ ಪತ್ನಿ ಯಾರಿಗೆ ತಾನೇ ದೊರಕಿದ್ದಾಳೆ ಅಂತ ಸ್ವಲ್ಪ ನಿಮ್ಮ ಆ ಯೂಸ್ಲೆಸ್ಫ್ರೆಂಡ್ಸ್ ನೆಲ್ಲ ವಿಚಾರಿಸಿ ನೋಡಿ…..”
“ಹೋಗಲಿ ಬಿಡು ಮಾರಾಯ್ತಿ….. ನಿನ್ನನ್ನು ನೀನು ತುಂಬಾ ಹೊಗಳಿಕೊಳ್ಳಬೇಡ, `ತನ್ನ ಬಣ್ಣಿಸಬೇಡ…..!’ ಅಂತ ಆ ಕಾಲಕ್ಕೇ ಬಸಣ್ಣನವರು ವಚನದಲ್ಲಿ ಹೇಳಿದ್ದು ಮರೆತುಬಿಟ್ಯಾ? ಅದೆಲ್ಲ ಹೋಗಲಿ ಬಿಡು, ಈಗ ದಯವಿಟ್ಟು ನನ್ನ ಮಾತು ಕೇಳು,” ಶೇಖರ್ಸಂಧಾನಕ್ಕೆ ಸಿದ್ಧನಾದ.
“ನಿಮ್ಮ ಮಾತನ್ನೇ ಆಜ್ಞೆಯಾಗಿ ಶಿರಸಾವಹಿಸಿ ಪಾಲಿಸುತ್ತಿದ್ದೇನೆ. ಇಷ್ಟು ವರ್ಷಗಳಿಂದ…. ಕೈ ಹಿಡಿದು 26 ವರ್ಷಗಳಾಯ್ತು, ಎಂದಾದರೂ ಅದನ್ನು ಧಿಕ್ಕರಿಸಿ ನಡೆದಿದ್ದೀನಾ ಅಂತ ಒಂದು…. ಒಂದೇ ಒಂದು ಉದಾಹರಣೆ ಕೊಡಿ, ನಾನೂ ನೋಡೇ ಬಿಡ್ತೀನಿ!”
“ಇಲ್ಲ ಅಂತ ನಾನು ಹೇಳಿದೆನೇ? ಈಗ ವಿಷಯಕ್ಕೆ ಬಾ! ನಮ್ಮ ಮಗಳು ಸ್ನೇಹಾಳ ಸಂಬಂಧ ವಿಚಾರಿಸಿಕೊಂಡು ಹಲವಾರು ಗಂಡುಗಳು ಬರತೊಡಗಿವೆ. ಈ ಸ್ನೇಹಾ ನೋಡಿದರೆ ಮದುವೇನೇ ಬೇಡ ಅಂತ ಹಠ ಹೂಡಿ ಕುಳಿತುಬಿಟ್ಟಿದ್ದಾಳೆ. ನೀನೇ ಅವಳಿಗೆ ಒಂದಿಷ್ಟು ತಿಳಿಹೇಳಿ ವೈವಾಹಿಕ ಜೀವನ ಎಷ್ಟು ಮುಖ್ಯ ಅಂತ ಮನವರಿಕೆ ಮಾಡಿಕೊಡಬಾರದೇ?”
“ಆಗಲಿ ಸ್ವಾಮಿ, ನಾನು ಈ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತೇನೆ ಬಿಡಿ. ಅವಳಿಗೆ ನಾನು ತಿಳಿಹೇಳಿ ನಿಮ್ಮಂಥ ಬುದ್ಧಿಗೇಡಿ ಅಲ್ಲ, ಎಂಥ ಉತ್ತಮ ರನವನ್ನು ಆರಿಸಿಕೊಳ್ಳಬೇಕು ಅಂತ ತಯಾರು ಮಾಡ್ತೀನಿ. ನಿಮ್ಮ ಒಂದೊಂದೇ ಆಜ್ಞೆ ಪಾಲಿಸುತ್ತಾ ಅದು ಹೇಗೆ 26 ವರ್ಷ ಕಳೆದುಬಿಟ್ಟೆ ಅಂಥ ನೆನೆದರೆ ಬಲು ಆಶ್ಚರ್ಯವಾಗುತ್ತೆ.”
“ಸರಿ, ಆಗಿನಿಂದ ಹೊಟ್ಟೆ ತಾಳ ಹಾಕ್ತಿದೆ. ಈಗ ಬೇಗ ಅದಕ್ಕೆ ಒಂದು ದಾರಿ ಮಾಡು. ಈಗಾಗಲೇ 2 ಗಂಟೆ ಆಗ್ತಾ ಬಂತು,” ಎಂದು ತನ್ನ ಹಸಿವಿನ ಬಗ್ಗೆ ತೋಡಿಕೊಂಡ ಶೇಖರ್.
“ನೋಡ್ರಿ, ಸದಾ ಹೊತ್ತು ಹೊತ್ತಿಗೆ ನಿಮಗೆ ಮಾಡಿ ಬಡಿಯಲು ನಾನೇನೂ ಈ ಮನೆಯ ಆಳಲ್ಲ! ಈಗ ನೀವೇನೂ ಮದುವೆಯಾಗಿ ಬಂದಿರುವ ಹೊಸ ಅಳಿಯ ಅಲ್ಲ….. ಮಗಳಿಗೆ ವರ ಹುಡುಕುತ್ತಿದ್ದೀರಿ ಅಂತ ನೆನಪಿಡಿ. ಆದ್ದರಿಂದ ಬೇಕಾದಾಗ ಮಾಡಿ ಸವಿಯಿರಿ.”
“ಹೋಗಲಿ, ಅಡುಗೆನಾದ್ರೂ ಮಾಡಿದ್ದಿ ತಾನೇ? ನಾನೇ ಬಡಿಸಿಕೊಳ್ತೀನಿ ಬಿಡು…. ಮಹಾತಾಯಿ!”
“ಏನ್ರಿ ಅದು….. ನನ್ನನ್ನೇ ಮಹಾತಾಯಿ ಮಹಾಮಾರಿ ಅದೂ ಇದೂ ಅಂತ ಬಾಯಿ ಬಂದ ಹಾಗೆ ಆಡಿಕೊಳ್ತಿದ್ದೀರಿ? ಹೀಗೆಲ್ಲ ಆಡ್ತಾ ಇದ್ದರೆ ಇನ್ನು ಮುಂದೆ ನಾನು ಅಡುಗೆ ಸಹ ಮಾಡೋಲ್ಲ ಅಷ್ಟೆ. ಗೊತ್ತಾಯ್ತಾ? ಮಹಾತಾಯಿ ಅಂದ್ರಲ್ಲ, ಹಳ್ಳಿಯಲ್ಲಿರೋ ನಿಮ್ಮ ಆ ತಾಯಿಯನ್ನೇ ಆಶ್ರಯಿಸಿ ಹೊಟ್ಟೆಗೊಂದು ಆಧಾರ ಮಾಡಿಕೊಳ್ಳಿ, ಅಷ್ಟೆ.”
“ಅಯ್ಯೋ ಕರ್ಮ ಕರ್ಮ….. ಅದ್ಯಾವ ಘಳಿಗೆಯಲ್ಲಿ ಇವಳ ತಾಯಿ ತಂದೆ ಇವಳನ್ನು ಹೆತ್ತರೋ ಏನೋ…..?”
“ಇರಿ ಇರಿ, ನಮ್ಮಪ್ಪ ಅಮ್ಮನ ಬಳಿ ಹೋಗಿ ಆ ರಹಸ್ಯದ ಬಗ್ಗೆ ಕೇಳಿಕೊಂಡು ಬರ್ತೀನಿ. ನಿಮ್ಮ ಅಳಿಯನಿಗೆ ನೀವು ನನ್ನನ್ನು ಯಾವ ಘಳಿಗೆಯಲ್ಲಿ ಹೆತ್ತಿರಿ ಅಂತ ತಿಳಿಯಬೇಕಂತೆ ಅಂತ….. ಇಷ್ಟು ವರ್ಷಗಳ ನಂತರ ಇಂಥ ಒಂದು ಅನುಮಾನ ನಿಮ್ಮ ಮನಸ್ಸಿಗೆ ಬಂದುಬಿಟ್ಟಿದೆ ಅಂತ……”
“ಸರಿ ಸರಿ…. ಈಗ ಜಾಸ್ತಿ ಆಯ್ತು. ಹೋಗಲಿ ಬಿಡು,” ಶೇಖರ್ ಸುಸ್ತಾಗಿ ನುಡಿದ.
“ಸ್ನೇಹಾ…. ನನ್ನ ಕನ್ನಡಕ ಅಲ್ಲೇ ನಿನ್ನ ರೂಮಲ್ಲಿ ಮರೆತು ಇಟ್ಟುಬಿಟ್ಟೆ ಅನ್ಸುತ್ತೆ ಸ್ವಲ್ಪ ನೋಡಿ ಕೊಡಮ್ಮ,” ಎಂದು ವಿಷಯಾಂತರ ಮಾಡಲು ಈ ಸಲ ಮಗಳನ್ನು ವಿಚಾರಿಸಿದ.
ಅಲ್ಲಿಂದ ಬಂದ ಮಗಳು ತಂದೆಯನ್ನು ಗಮನಿಸಿ, “ಅಯ್ಯೋ ಅಪ್ಪ, ಕನ್ನಡಕ ನಿಮ್ಮ ತಲೆಯಲ್ಲೇ ಮೇಲ್ಭಾಗದಲ್ಲಿದೆ. ಸೊಂಟದಲ್ಲಿ ಮಗು ಇಟ್ಟುಕೊಂಡು ಊರೆಲ್ಲಾ ಹುಡುಕಿದರಂತೆ ಅನ್ನುವ ಹಾಗೆ,” ಎಂದು ಸ್ನೇಹಾ ಜೋರಾಗಿ ನಕ್ಕಳು.
“ಹ್ಞೂಂ ನಮ್ಮ….. ನಿಮ್ಮಪ್ಪನಿಗೆ ಹೆಂಡತಿಯನ್ನು ಬೈಯುವಾಗ ಬೇರೆಲ್ಲ ವಿಷಯ ಮರೆತೇ ಹೋಗುತ್ತೆ ನೋಡು,” ಶೀಲಾ ಮತ್ತೆ ಅದೇ ವಿಷಯ ಎಳೆತಂದಳು.
“ಅಯ್ಯೋ ಹೋಗ್ಲಿ ಬಿಡೇ ನೀನು…. ಈಗ ಅದಕ್ಕೊಂದು ಹಗರಣ ಮಾಡಿಬಿಡಬೇಡ.”
“ಆಹಾ ನೋಡಿದ್ರಾ…. ಆಗಲೇ ಮಹಾತಾಯಿ ಅಂದ್ರಿ, ಈಗ ನಾನೇ ಹಗರಣ ಮಾಡ್ತಿದ್ದೀನಿ ಅಂತ ಇಷ್ಟು ದೊಡ್ಡ ಆರೋಪ ಹೊರಿಸುತ್ತಿದ್ದೀರಿ. ಈಗ ಅದೆಲ್ಲ ಸಾಲದೂಂತ ಈಗ ಮಗಳ ಮುಂದೆ ನನ್ನ ತಲೆ ಮೇಲೆ ಗೂಬೆ ಕೂರಿಸ್ತಿದ್ದೀರಿ!”
“ನೋಡಿದ್ಯಾ ನಿನ್ನ ಬುದ್ಧಿ…. ದೀಪದ ಕೆಳಗೆ ಕತ್ತಿ ಅಂತ ಎಷ್ಟು ಆಡಿಕೊಳ್ತಿದ್ದೀಯಾ…. ನನ್ನಂಥ ಗಂಡ ನಿನಗೆ ಎಂದೆಂದೂ ಸಿಗೋಲ್ಲ….. ನಿನ್ನೆ ನಡೆದ ಕಥೆ ನೆನಪಿಸಿಕೊ. ಟೀ ಮಾಡುಲ ಸಂಭ್ರಮದಲ್ಲಿ ಮರೆತು ಸಕ್ಕರೆ ಡಬ್ಬಾ ಫ್ರಿಜ್ನಲ್ಲಿರಿಸಿ ಇಡೀ ಮನೆ ಪೂರ್ತಿ ಹುಡುಕಿದ್ದೇ ಹುಡುಕಿದ್ದು. ದೊಡ್ಡದಾಗಿ ಮಾತಾಡಕ್ಕೆ ಬರ್ತಾಳೆ. ಮುದುಕಿಯಂಥ ಮರೆವು ಕಾಡ್ತಿದೆ, ಏನೋ ನನ್ನನ್ನೇ ಆಡಿಕೊಳ್ತಾಳೆ.”
“ಹೌದು ಹೌದು, ನಾನು ಮಾತ್ರ ಮುದುಕಿ ಆದೆ…. ನೀವು 18 ವಯಸ್ಸಿನ ಯಂಗ್ ಎನರ್ಜಿಟಿಕ್ ಫೆಲೋ…. ಅಲ್ವೇ?”
“ಹೋಗಲಿ ಬಿಡು, ಇಬ್ಬರಿಗೂ ಬೇಡ. 1 ಲೋಟ ಟೀ ಮಾಡು, ಇಬ್ಬರಿಗೂ 50-50…..”
“1 ಲೋಟ ಯಾಕೆ….. 1 ಬಕೆಟ್ ಮಾಡಿ ಬಡೀತೀನೀ…. ಹೀರ್ತಾನೇ ಇರಿ!”
“ಸಾಕು ಸಾಕು…. ಮಾತು ಜಾಸ್ತಿ ಆಯ್ತು. ಹೆಣ್ಣು ಹುಲಿ ನೀನು, ಮುದಿ ಆದರೂ ಘರ್ಜಿಸೋದು ಮಾತ್ರ ಬಿಡುತ್ತಿಲ್ಲ. ನನ್ನ ಸಹನಶಕ್ತಿ ಪರೀಕ್ಷಿಸಬೇಡ….. ನಾಲಿಗೆ ಮೇಲೆ ಹಿಡಿತ ಇಲ್ಲ…… ಬಾಯಿಗೆ ಬಂದದ್ದೇ ಮಾತು ಆಗಿಹೋಯಿತು.”
“ಹೌದು ಹೌದು, ನನ್ನ ಬಾಯಿ ತುಂಬಾ ವಿಷ ನೋಡಿ…. ನಾನು ಮಾತನಾಡಿದ್ರೆ ನಿಮಗೆ ಚೇಳು ಕುಟುಕಿದಂತೆ ಇರುತ್ತದೆ.”
“ನೀನೆಂದೂ ಅರ್ಥ ಮಾಡಿಕೊಳ್ಳೋಲ್ಲ ಬಿಡು. ಈ ಮಾತುಗಳೇ ಮಾನವರ ಜೀವನದಲ್ಲಿ ಕಷ್ಟಗಳನ್ನು ತಂದೊಡ್ಡುವುದು. ನಗುನಗುತ್ತಾ ಇದ್ದರೆ ಅದು ಸ್ವರ್ಣ ಸಂಸಾರ…. ಅನಂತ್ನಾಗ್ ಹಾಡು ಕೇಳಿಲ್ಲವೇನು?”
“………..”
“ಓ….. ನೀನಿನ್ನೂ ಇಲ್ಲೇ ಕುಳಿತಿದ್ದೀಯಾ…. ಅಮ್ಮ ಸ್ನೇಹಾ, ನೀನೇ ಬಂದು ಮೂವರಿಗೂ ಟೀ ಮಾಡಿಬಿಡಮ್ಮ…..”
“ಹ್ಞೂಂ…… ಹ್ಞೂಂ…… ಈ 26 ವರ್ಷ ಮಗಳೇ ನಿಮಗೆಲ್ಲ ಮಾಡಿಕೊಟ್ಟಿದ್ದು…. ನಾಳೆ ಮದುವೆ ಆಗಿ ಹೋಗೋ ಹುಡುಗಿ, ಮುಂದಕ್ಕೂ ನಿಮಗೆ ಮಾಡಿ ಬಡೀತಿರ್ತಾಳೆ ಬಿಡಿ.”
“ಛೇ….ಛೇ…. ನೀನು ಕೆಟ್ಟವಳು ಅಂತ ನಾನೆಲ್ಲಿ ಹೇಳಿದೆ? ನಿನ್ನ ಮಾತು ಜಾಸ್ತಿ ಆಯ್ತು ಅಂದೆ ಅಷ್ಟೆ.”
“ಹೌದು….. ಹೌದು…. ನಾನೇ ಕೆಟ್ಟವಳು, ಬರ್ತಾ ಬರ್ತಾ ಪ್ರೀತಿ ಪ್ರೇಮದ ಮಾತುಗಳನ್ನೇ ಬಿಟ್ಟುಬಿಟ್ಟಿರಿ. ಸದಾ ಜಗಳ ಆಡೋದೇ ನಿಮ್ಮ ಬುದ್ಧಿ ಆಗೋಯ್ತು!”
“ಅಯ್ಯೋ….. ಅಯ್ಯೋ! ನೀನು ಕೆಟ್ಟವಳೆಂದು ನಾನೆಲ್ಲಿ ಹೇಳಿದೆ? ಅಯ್ಯೋ ಹುಚ್ಚಿ, ನಿನ್ನಷ್ಟು ಒಳ್ಳೆಯವರು ಪ್ರಪಂಚದಲ್ಲಿ ಇರಲು ಸಾಧ್ಯವೇ ಇಲ್ಲ. ನನ್ನದು ಒಂದೇ ವಿನಂತಿ…. ದಯವಿಟ್ಟು ಮಾತಿಗೆ ಲಗಾಮು ಹಾಕು. ಎಲ್ಲಾ ಮಾತಿಗೂ ತಿರುಗಿಬಿದ್ದು ಜಗಳಕ್ಕೆ ಬರಬೇಡ. ಅಯ್ಯೋ ಹುಚ್ಚಿ, ಈ ವಯಸ್ಸಿನಲ್ಲಿ ನೀನಲ್ಲದೆ ನನ್ನನ್ನು ಯಾರು ನೋಡಿಕೊಳ್ಳಬೇಕು?”
“ಹ್ಞೂಂ….ಹ್ಞೂಂ….. ಈ ಬಣ್ಣದ ಮಾತುಗಳಿಗೇನೂ ಕಡಿಮೆ ಇಲ್ಲ. ಹೋಗಲಿ, ಶುಂಠಿ ಹಾಕಿ ಟೀ ಮಾಡಲೇ? ಏಲಕ್ಕಿ ಬೇಕಾ?“
“ಯಾವುದಾದರೂ ಮಾಡು ಮಾರಾಯ್ತಿ, ನೀನು ಏನು ಕೊಟ್ಟರೂ ಅದು ಅಮೃತದ ಹಾಗಿರುತ್ತದೆ.”
“ಅಲ್ವೇ ಮತ್ತೆ…..? ಬೆಳಗ್ಗಿನಿಂದ ಏನಾದರೂ ಕಾಲು ಕೆದಕಿ ನಿನ್ನ ಬಳಿ ಜಗಳ ಆಡೋದು….. ಕೊನೆಯಲ್ಲಿ ಈ ರೀತಿ ಗಿಲೀಟು ಮಾತನಾಡಿ ನಿನ್ನ ಸಮಾನರಾರಿಲ್ಲ ಅಂದುಬಿಡೋದು. ನಾವು ಹೆಂಗಸರು, ಮೊದಲಿನಿಂದಲೂ ಇಂಥ ಮಧುರ ಮಾತುಗಳಿಗೆ ಮರುಳಾಗುತ್ತೇವೆ ಅಂತ ನಿಮ್ಮಂಥವರಿಗೆ ಗೊತ್ತು.”
“ನೀನು ಏನೇ ಹೇಳು, ನಿನ್ನ ರುಚಿ ತರಹ ಯಾರಿಗೂ ಬರೋಲ್ಲ ಬಿಡು. ನಮ್ಮ ಸ್ನೇಹಂಗೂ ಇವೆಲ್ಲ ಬೇಗ ಬೇಗ ಕಲಿಸಿ ಬಿಡೇ….. ನಾಳೆ ಮದುವೆ ಆಗಿ ಹೋಗೋ ಹುಡುಗಿ, ಅತ್ತೆ ಮನೆಯಲ್ಲಿ ಕಷ್ಟ ಪಡುವಂತಾಗಬಾರದು.”
“ಹೌದು, ಸ್ನೇಹಾ ಇಲ್ಲಿ ಬಾಮ್ಮ…. ಈ ಈರುಳ್ಳಿ ಹೆಚ್ಚಿಡು. ನಾನು ಟೀ ಜೊತೆ ಹಾಗೆ ಒಂದಿಷ್ಟು ಪಕೋಡ ಸಹ ಮಾಡ್ತೀನಿ. ಊಟ ಹೇಗೂ ಇನ್ನೂ 1 ಗಂಟೆ ಕಾಲ ಆಗುತ್ತೆ. ಬಿಸಿ ಬಿಸಿ ಚಪಾತಿ ಮಾಡಬೇಕಷ್ಟೆ,” ಶೀಲಾ ಹೇಳಿದಾಗ ಶೇಖರ್ನ ಜೀವಕ್ಕೆ ಬಿಡುಗಡೆ ಆಯ್ತು.





