ಮರದ ಕೊಂಬೆಗಳು ಸರ್ರನೆ ತೀಡಿ, ತಂಗಾಳಿ ಬೀಸುವಂತೆ ಮಾಡಿದವು. ಪ್ರಸಾದ್‌ ತನ್ನ ತಲೆಯನ್ನು ಮತ್ತೊಮ್ಮೆ ಆ ಕಡೆ ಈ ಕಡೆ ತಿರುಗಿಸಿ ನೋಡಿ ಏನೂ ತಿಳಯದಾಗಲು ವಿಸ್ಮಯಗೊಂಡ. ಯಾರೋ ಮರೆಯಲ್ಲಿ ಅಡಗಿ ತನ್ನನ್ನೇ ಗಮನಿಸುತ್ತಿದ್ದಾರೆ ಎನಿಸಿತು. ಆಗ ತನ್ನ ಶರ್ಟ್‌ನ ಹಿಂಭಾಗದಲ್ಲಿ ಏನೋ ಚುಚ್ಚಿದಂತಾಯಿತು. ಅರಿವಿಲ್ಲದೆಯೇ ಅವನ ಕೈ ಹಿಂಬದಿ ತಡಕಾಡಿತು.

ಯಾವುದೋ ಹುಲ್ಲುಕಡ್ಡಿ ಅದು ಹೇಗೆ ತನ್ನ ಟೀ ಶರ್ಟ್‌ನ ಹಿಂಬದಿ ಸೇರಿಕೊಂಡಿತು ಎಂದು ಅವನಿಗೆ ಅರ್ಥವಾಗಲಿಲ್ಲ. ಅವನು ಅದನ್ನು ಕಿತ್ತು ಒಂದು ಕಡೆ ಎಸೆದ. ಆದರೆ ಇದು ಎಲ್ಲಿಂದ ಹೇಗೆ ಬಂದು ಸೇರಿಕೊಂಡಿತು ಎಂದು ಯೋಚಿಸತೊಡಗಿದ. ಆ ತರಹದ ಹುಲ್ಲು ಕಡಿಮೆ ಆ ಪಾರ್ಕಿನ ವಾತಾವರಣದಲ್ಲಿ ಎಲ್ಲೂ ಕಂಡುಬರುತ್ತಿರಲಿಲ್ಲ. ಅವನು ಮತ್ತಷ್ಟು ಸೂಕ್ಷ್ಮವಾಗಿ ಎಲ್ಲಾ ಕಡೆ ಹುಡುಕಾಡಿದ.

ಆಗ ಅವನ ಬಾಲ್ಯದ ಗೆಳೆಯ ಸತೀಶ್‌ ಅಲ್ಲಿಗೆ ಬಂದು ತಲುಪಿದವನೆ ಪ್ರಸಾದ್‌ನನ್ನು ಕೇಳಿದ, “ಏನು ಹುಡುಕುತ್ತಿದ್ದೀಯಾ?”

“ಓ…. ನೀನು ಈಗ ಬಂದೆಯಾ? ಅರ್ಧ ಗಂಟೆಯಿಂದ ನಿನಗಾಗಿ ಇಲ್ಲಿ ಕಾದು ಕಾದು ಬೋರಾಗಿ ಯಾವುದೋ ಮೆಸೇಜ್ ನೋಡುತ್ತಾ ಟೈಂಪಾಸ್‌ ಮಾಡುತ್ತಿದ್ದೆ. ಫೇಸ್‌ಬುಕ್‌ನಲ್ಲಿ ಮುಳುಗಿದ್ದವನಿಗೆ ನೀನು ಬಂದದ್ದೇ ಗೊತ್ತಾಗಲಿಲ್ಲ. ನಿನಗೆ ನೆನಪಿರಬೇಕಲ್ಲ, ಚಿಕ್ಕಂದಿನಲ್ಲಿ ನಾವು ಕಚಗುಳಿ ಇಡಲು ಹಸಿರು ಹುಲ್ಲಿನಕಡ್ಡಿ ತಂದು ಬಟ್ಟೆ ಒಳಗೆ ಹಾಕಿಬಿಡುತ್ತಿದ್ದೆ….. ಅಂಥದ್ದೇ ಒಂದು ಈಗ ನನ್ನ ಟೀಶರ್ಟ್‌ನಲ್ಲಿ ಸಿಕ್ಕಿತು. ಇದು ಎಲ್ಲಿಂದ ಬಂತು ಎಂದು ತಲೆ ಕೆಡಿಸಿಕೊಳ್ಳುತ್ತಿದ್ದೆ. ನೀನು ಬಂದೆ….” ಎಂದು ನಡೆದದ್ದು ವಿವರಿಸಿ ನಗುತ್ತಿದ್ದ.

ಅದಕ್ಕೆ ಸತೀಶನೂ ನಗುತ್ತಾ, “ಆಗೆಲ್ಲ ನೀನು ತಂಬಾ ಅತ್ತುಕೊಳ್ಳುತ್ತಿದ್ದೆ, ಆಗೆಲ್ಲ ಲಾಲಿ ಅದನ್ನು ಬೇಕೆಂದೇ ನಿನ್ನ ಯೂನಿಫಾರ್ಮ್ನಲ್ಲಿ ಹಾಕಿಬಿಡುತ್ತಿದ್ದಳು. ನೀನು ಹೆಣ್ಣಪ್ಪಿಯಂತೆ ಮುಸು ಮುಸು ಅಳತೊಡಗಿದರೆ ನಾವೆಲ್ಲ ಗೇಲಿ ಮಾಡುತ್ತಾ ರೇಗಿಸುತ್ತಿದ್ದೆ. ಬಾಲ್ಯದ ಆ ಹಳೆಯ ನೆನಪುಗಳು ಎಷ್ಟು ಚೆಂದ ಅಲ್ಲವೇ…. ಅವಳೇ ಈಗ ಇಲ್ಲಿ ಬಂದಿದ್ದಾಳೇನು……. ನಿನಗೆ ಹೀಗೆ ಮಾಡಿ ಆಟ ಆಡಿಸ್ತಿದ್ದಾಳಾ? ಆ ದಿನಗಳು ಮತ್ತೆ ಬರಬಾರದೇ?”

“ಹೌದು ಕಣೋ, ಅಂಥ ಬಂಗಾರದ ದಿನಗಳು ಇನ್ನೆಲ್ಲಿ? ಅವರಲ್ಲಿ ಅತ್ಯಂತ ತುಂಟಿ, ಅನನ್ಯ ಗುಣಸ್ವಭಾವದವಳು ಎಂದರೆ ಲಾಲಿ! ಅವಳನ್ನು ಕಂಡು ಹೆದರುತ್ತಿದ್ದೆ, ಆದರೆ ಆ ತುಂಟತನ ಇನ್ನಷ್ಟು ಹೆಚ್ಚು ಬೇಕು ಎನಿಸುತ್ತಿತ್ತು. ಯಾವಾಗ ಏನು ಗಡಿಬಿಡಿ ಮಾಡಿಬಿಡುತ್ತಿದ್ದಳೋ…. ಯಾರಿಗೂ ಗೊತ್ತಾಗುತ್ತಿರಲಿಲ್ಲ.

ಈಗ ಎಲ್ಲಿದ್ದಾಳೋ ಏನೋ…..  ಮಲ್ಲೇಶ್ವರದ 18ನೇ ಕ್ರಾಸ್‌ನಿಂದ ಶಾಲೆಯ ಬಸ್‌ಗೆ ಹತ್ತುತ್ತಿದ್ದಳು. ಅವರಮ್ಮ ಅಂತೂ ದಿನ ರಾಶಿ ಸಲಹೆ ನೀಡುತ್ತಿದ್ದರು, “ಲಾಲಿ, ಶಾಲೆಯಿಂದ ಇನ್ನೇನೂ ಕಂಪ್ಲೇಂಟ್‌ ಬರಬಾರದು ನೋಡು….. ಯಾವ ಮಕ್ಕಳನ್ನು ಗೋಳು ಹೊಯ್ದುಕೊಳ್ಳಬೇಡ. ನಿನ್ನ ಬಾಕ್ಸ್ ನಲ್ಲಿ ಹಾಕಿಕೊಟ್ಟಿದ್ದನ್ನು ಮಾತ್ರ ತಿನ್ನಬೇಕು. ಬೇರೆಯವರದ್ದನ್ನು ತಿಂದು ಮತ್ತೆ ಬೈಸಿಕೊಳ್ಳಬೇಡ. ನಿನಗೆ ಇಷ್ಟವಾದ ಚಪಾತಿ, ಆಲೂ ಪಲ್ಯ ಇರಿಸಿದ್ದೇನೆ. ಗೊತ್ತಾಯ್ತಾ? ಸೋಮಣ್ಣ, ಈ ತರಲೆ ಮೇಲೆ ಒಂದು ಕಣ್ಣಿಟ್ಟಿರಿ,” ಎಂದು ವ್ಯಾನ್‌ ಡ್ರೈವರ್‌ಗೆ ಹೇಳುತ್ತಿದ್ದರು ಅವರ ತಾಯಿ,” ಎಂದು ಪ್ರಸಾದ್‌ ಹಳೆಯದನ್ನೆಲ್ಲ ನೆನಪಿಸಿಕೊಳ್ಳುತ್ತಾ ಹೇಳಿದ.

“ಆಗ ನಾವೆಲ್ಲ ಅವಳನ್ನು ಲಾಲಿ ಅಲ್ಲ ಕಾಳಿ! ಎಂದು ರೇಗಿಸುತ್ತಿದ್ದೆವು. ಅದು ಅವಳ ಮನೆಯಲ್ಲಿಟ್ಟ ಮುದ್ದಿನ ಅಡ್ಡ ಹೆಸರು, ಅವಳ ಒರಿಜಿನ್‌ ಹೆಸರೇ ಮರೆತುಹೋಗಿದೆ. ಅವರಮ್ಮ ಹೇಳಿದ್ದನ್ನೇ ಹೇಳುತ್ತಾ, `ಹೆಸರು ಮಾತ್ರ ಲಾಲಿ…… ತಲೆ ಬರೀ ಖಾಲಿ!’ ಎಂದಾಗ ಬಸ್ಸಿನಲ್ಲಿದ್ದವರೆಲ್ಲ ಜೋರಾಗಿ ನಗುತ್ತಿದ್ದರು. ಆಗ ಅವಳು ಇನ್ನಷ್ಟು ಕೋಪದಿಂದ ಇನ್ನೇನಾದರೂ ಮಾಡಿಬಿಡುತ್ತಿದ್ದಳು. ಅವಳು ನಿನ್ನನ್ನು ಪ್ರಸಾದ್‌ ಅಲ್ಲ `ಲೂಸು’ ಅಂತ್ಲೇ ಕರೀತಿದ್ದಳು. ಅದಂತೂ ನೆನಪಿದೆ. ನನ್ನನ್ನು ಸತೀಶ ಅಲ್ಲ ನಿನ್ನ ಚಮಚಾ ಅಂತ ಅನ್ನೋಳು….” ಎಂದು ನಗತೊಡಗಿದ.

“ಓ ಅವಳ ಹೆಸರು…. ಹ್ಞಾಂ ನೆನಪಾಯ್ತು, ನಿರ್ಮಲಾ! ನನ್ನ ಮುಂದಿನ ಬೆಂಚಿನಲ್ಲೇ ಕೂರುತ್ತಿದ್ದಳು. ಒಮ್ಮೊಮ್ಮೆ ಹೋಂವರ್ಕ್‌ಮಾಡದಿದ್ದರೆ ನನ್ನ ಪುಸ್ತಕ ಎಳೆದು ಮಿಸ್‌ ಕೈಲಿ ಸೈನ್‌ ಮಾಡಿಸಿ ತನ್ನದು ಆಯ್ತು ಅನ್ನಿಸಿಬಿಡೋಳು. ಮಹಾ ತರಲೆ ಅವಳು!” ಪ್ರಸಾದ್‌ ನೆನಪಿಸಿಕೊಂಡು ಹೇಳಿದ.

“ಹೌದು, ಊಟದ ಬೆಲ್ ‌ಹೊಡೆಯುವ ಮೊದಲೇ ಯಾರದ್ದಾದರೂ ಟಿಫನ್‌ ಬಾಕ್ಸ್ ನಿಂದ ಅದನ್ನು ಎಗರಿಸಿ ಖಾಲಿ ಮಾಡಿಬಿಡೋಳು! ನಿನ್ನ ಡಬ್ಬಿ ಸದಾ ಖಾಲಿ ಆಗಿಬಿಡೋದು. ಡಬ್ಬಿ ತೆರೆದು ನೀನು ಅಳತೊಡಗಿದರೆ, ಆಗ ತನ್ನ ಡಬ್ಬಿ ನಿನಗೆ ಕೋಡೋಳು. ಒಂದೊಂದು ಸಲ ಅದರಲ್ಲಿ 4-5 ಹಲಸಿನ ತೊಳೆ ಸಹ ಇರುತ್ತಿತ್ತು.”

“ಏ ಅಳುಮೂಂಜಿ…… ಅಳಬೇಡ, ಇದನ್ನು ತಿನ್ನು ಎಂದು ತನ್ನ ಬಾಕ್ಸ್ ಕೊಡೋಳು. ಮನೆಯಿಂದ ಬರ್ಗರ್‌, ಪಿಜ್ಜಾ ಯಾರೇ ತಂದಿರಲಿ ಅದನ್ನು ಹೇಗೋ ಗಮನಿಸಿಕೊಂಡು ತಾನು ಎಗರಿಸಿ, ನಂತರ ಅವರಮ್ಮ ಕಳಿಸಿದ್ದನ್ನು ಕೊಡೋಳು. ನಾನು ತಂದದ್ದು ತಿಂದು ಪೈಲ್ವಾನ್‌ ಆಗು, ಆಮೇಲೆ ನಿನ್ನನ್ನು ಮುಂದೆ ಮದುವೆ ಆಗ್ತೀನಿ ಎಂದೆಲ್ಲ ಎಲ್ಲರ ಮುಂದೆ ರೇಗಿಸಿಬಿಡೋಳು.

“ಚಾಕಲೇಟ್‌ ಅಂತ ರಾಪರ್‌ನಲ್ಲಿ ಸುತ್ತಿದ್ದು ನಿನ್ನ ಜೇಬಿಗೆ ಹಾಕಿದರೆ, ನೋಡದೆ ಅದನ್ನು ಬಾಯಿಗೆ ಹಾಕಿಕೊಂಡು, ಕಹಿ ಕಹಿ ಅಂತ ಉಗಿದು ಮತ್ತೆ ನೀನು ಅವಳ ಬಳಿ ಮೋಸ ಮೋಸ ಅಂತ ಜಗಳ ಆಡ್ತಿದ್ದೆ….. ಆಗ ಎಲ್ಲರೂ ನಗೋರು! ಒಂದು ಸಲ ಬ್ಯಾಗಿನಲ್ಲಿ ಚಿಕ್ಕ ಕಪ್ಪೆ ಹಿಡಿದು ಪೇಪರ್‌ನಲ್ಲಿ ಸುತ್ತಿ ತಂದು, ಸೀರಿಯಸ್‌ ಆಗಿ ಎಲ್ಲರೂ ಗಣಿತ ಮಾಡ್ತಿದ್ದಾಗ ಕ್ಲಾಸಿನ ಮಧ್ಯೆ ಬಿಡುತ್ತಿದ್ದಳು…. ಎಲ್ಲರೂ ಹೋ ಕಪ್ಪೆ ಎಂದು ಗಲಾಟೆ ಮಾಡೋರು! ಟೀಚರ್‌ಗಂತೂ ಕ್ಲಾಸ್‌ನ್ನು ಸುಧಾರಿಸುವಷ್ಟರಲ್ಲಿ ಸಾಕಾಗ್ತಿತ್ತು…… ಎಲ್ಲೇ ಇರಲಿ, ಈಗಲೂ ಬಹಳ ಖುಷಿಯಾಗಿಯೇ ಇದ್ದಾಳೆ ಅನ್ಸುತ್ತೆ…..” ಸತೀಶ್‌ ವಿವರಿಸುತ್ತಲೇ ಇದ್ದ.

“ಹೌದು, ಹೈಸ್ಕೂಲ್ ‌ನಂತರ ಪಿಯುಸಿಗೆ ಅಂತ ಬೇರೆ ಕಾಲೇಜಿಗೆ  ಸೇರಿದೆ….. ಅವಳು ಲೇಡೀಸ್‌ ಕಾಲೇಜ್‌ ಸೇರಿಬಿಟ್ಟಳು. ಆಗಿನಿಂದ ಸಂಪರ್ಕ ಬಿಟ್ಟುಹೋಯ್ತು. ಈಗಂತೂ ನನ್ನ ಕಮರ್ಷಿಯಲ್ ಲಾ ಪ್ರಾಕ್ಟೀಸ್‌ ರಿಸರ್ಚ್‌ ವರ್ಕ್‌ ಮುಗಿಯುತ್ತಾ ಬಂತು, ಅವಳು ಮುಂದೆ ಸಿಗಲೇ ಇಲ್ಲ. ಸತೀಶ್‌ ನೀನಂತೂ ಕಾಲೇಜಿನ ಫುಟ್‌ಬಾಲ್ ‌ಚಾಂಪಿಯನ್‌ ಅನ್ನಿಸಿದೆ. ಈಗಂತೂ ಕೆಲವು ವರ್ಷಗಳಿಂದ ಸ್ಟೇಟ್‌ ಲೆವಲ್ ‌ಕೋಚ್‌ ಆಗಿರುವೆ. ಬೇರೆ ಬೇರೆ ಊರುಗಳಲ್ಲೇ ಇದ್ದುಬಿಟ್ಟೆ. ನಮ್ಮ ಭೇಟಿ ಬಲು ಅಪರೂಪ ಆಗಿಹೋಯ್ತು,” ಪ್ರಸಾದ್‌ ಹೇಳುತ್ತಿದ್ದ.

“ನೀನು ಸದಾ ನಿನ್ನ ಪುಸ್ತಕದ ಪ್ರಪಂಚದಲ್ಲೇ ಮುಳುಗಿ ಹೋಗುತ್ತಿದ್ದೆ, ಅದರಿಂದ ನಿನಗೆ ಪುರಸತ್ತಾದರೂ ಎಲ್ಲಿ? ಬೇರೆಲ್ಲೇ ಯಾರನ್ನೋ ಮದುವೆ ಆಗಿ ಸೆಟಲ್ ಆಗಿರುತ್ತಾಳೆ ಬಿಡು. ಅವಳ ತರಹದ್ದೇ ತುಂಟ ತರಲೆ ಮಕ್ಕಳು ಆಗಿರುತ್ತವೆ ಬಿಡು ಅಮ್ಮನ ತರಹ ಆ ಮಕ್ಕಳೂ ಬೆಂಡೆಕಾಯಿ ತೊಟ್ಟು ಕತ್ತರಿಸಿ ಮುಖದ ತುಂಬಾ ಅಂಟಿಸಿಕೊಂಡು ಬೇರೆಯವರನ್ನು ಭಯಪಡಿಸುತ್ತಿರಬೇಕು!” ಎಂದಾಗ ಇಬ್ಬರೂ ಜೋರಾಗಿ ನಕ್ಕರು.

“ಏನು ಹೇಳ್ತಿದ್ದೀಯಾ…. ಹೆಚ್ಚು ಕಡಿಮೆ 8-10 ವರ್ಷ ಆಗಿರಬೇಕು. ನಾವೆಲ್ಲ ಮೀಟ್‌ ಆಗಿ, ಇಷ್ಟು ಹೊತ್ತಿಗೆ ಅವಳಿಗೆ ಮಕ್ಕಳೂ ಆಗಿರುತ್ತವೆ ಅಂತೀಯಾ?”

“ಇನ್ನೇನು ಮತ್ತೆ? ಹೆಣ್ಣುಮಕ್ಕಳು ಡಿಗ್ರಿ ಪಡೆಯುವುದನ್ನೇ ಕಾದಿದ್ದು ಬೇಗ ಅವರ ಮದುವೆ ಮುಗಿಸಿಬಿಡುತ್ತಾರೆ. ಹೆಣ್ಣುಮಕ್ಕಳ ಮದುವೆ ಮಾಡಿ ಮುಗಿಸುವುದು ಅವರ ದೊಡ್ಡ ಜವಾಬ್ದಾರಿ ಅಲ್ಲವೇ?”

“ಹೆಣ್ಣು ಮಕ್ಕಳದು ಮಾತ್ರವಲ್ಲ, ಕೆಲಸ ಸಿಕ್ಕಿದ ತಕ್ಷಣ ಗಂಡು ಹುಡುಗರಿಗೂ ಬೇಗ ಮದುವೆ ಆಗು ಅಂತ ತಾಯಿ ತಂದೆ ವರಾತ ಶುರು ಹಚ್ಚಿಕೊಳ್ಳುತ್ತಾರೆ. ನನ್ನ ಕೇಸ್‌ ನೋಡು…… ಕೆಲಸ ಕನ್‌ಫರ್ಮ್ ಆಗಿ ಈಗ ತಾನೇ 1 ವರ್ಷ ಆಯ್ತು, ಹುಡುಗಿ ನೋಡೋದೇನು, ಇದೇ ಅಂತ ಫಿಕ್ಸ್ ಮಾಡಿ ಇರಿಸಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಮದುವೆಯಲ್ಲಿ ಇಬ್ಬರನ್ನೂ ಸಿಲುಕಿಸಿ ಅವರು ತಮ್ಮ ಜವಾಬ್ದಾರಿ ಮುಗಿಸಿಕೊಳ್ತಾರೆ.”

“ಹೌದಾ….. ಕಂಗ್ರಾಟ್ಸ್ ಕಣೋ! ಯಾರು…. ಎಲ್ಲಿ….. ಏನು ಕಥೆ? ಮೆಸೇಜ್‌ ಕೂಡ ಹಾಕಲಿಲ್ಲ, ಕಳ್ಳ ನೀನು! ನಿನ್ನ ತಾಯಿ ತಂದೆ ನಿನಗೆ ಸರಿಯಾಗೇ ಮಾಡಿದ್ದಾರೆ ಬಿಡು. ನಿನ್ನ ಓದೋ…… ಪಿಎಚ್‌ಡಿ ಮುಗಿದರೂ ಇನ್ನೂ ಬೇರೆ ಬೇರೆ ಥೀಸೀಸ್‌ ಅಂತ ಮಾಡ್ತಾನೇ ಇದ್ದೀಯಾ….. ಲಾ ಜೊತೆ ಬೇಗ ಕೆಲಸ ಆಗಿದ್ದು ಒಳ್ಳೆಯದೇ ಆಯ್ತು. ಇರಲಿ, ಈಗ ಹುಡುಗಿ ಬಗ್ಗೆ ಹೇಳು.”

“ಫಿಕ್ಸ್ ಮಾಡಿಕೊಂಡು ಬಂದಿದ್ದಾರಂತೆ.ಅಷ್ಟೇ ಗೊತ್ತು,” ಎಂದ ಪ್ರಸಾದ್‌.

“ಇದೆಂಥ ಸೋಜಿಗ! ಹುಡುಗ ಹುಡುಗಿ ನೋಡದೆಯೇ ಮದುವೆ ಫಿಕ್ಸ್ ಮಾಡಲು ಇದೇನು 18ನೇ ಶತಮಾನವೇ?”

“ಹೌದಪ್ಪ….. ನಮ್ಮಲ್ಲಿ ಎಲ್ಲಾ ಇನ್ನೂ ಹಳೆಯ ಪದ್ಧತಿಗಳೇ…. ಮಕ್ಕಳ ಒಳ್ಳೆಯದಕ್ಕೆ ಹಿರಿಯರು ಮಾಡೋದು ಅಂತ ಅವರಾಗಿ ಹೋಗಿ ಸೊಸೆಯನ್ನು ಆರಿಸಿಕೊಂಡು ಬಂದ್ರು.”

“ಅವರೇ…. ಈ ಕಾಲದಲ್ಲೂ ಹೀಗುಂಟೇ?”

“ಹ್ಞೂಂ ಅಂತೀನಿ. ಮುಂದಿನ ತಿಂಗಳು 15ಕ್ಕೆ ಎಂಗೇಜ್‌ಮೆಂಟಂತೆ. ನೀನೂ ಬರ್ತೀಯಲ್ಲ…. ಆಗ ನೋಡ್ತೀನಿ ಬಿಡು. ನೀನು ಮಾತ್ರ ತಪ್ಪಿಸಬಾರದು ಅಷ್ಟೆ,” ಪ್ರಸಾದ್‌ ಒತ್ತಾಯಿಸಿದ.

“ಅದನ್ನು ನೀನು ಬಾಯಿ ಬಿಟ್ಟು ಹೇಬೇಕೇ…. ಎಲ್ಲೇ ಇದ್ದರೂ ರಜಾ ಹಾಕಿ ಹಿಂದಿನ ದಿನವೇ ನಿನ್ನ ಮನೆಗೆ ಬಂದುಬಿಡ್ತೀನಿ. ಈಗ ನನ್ನ ಕಥೆ ಕೇಳು. ನನ್ನದು ಕೃಷ್ಣಾರ್ಜುನರಂತೆ ವಧುವನ್ನು ಓಡಿಸಿಕೊಂಡು ಹೋಗಿ ಮದುವೆ ಆಗಬೇಕಾದ ಕಥೆಯಾಗಿದೆ. ಲವ್ವಲ್ಲಿ ಬಿದ್ದುಬಿಟ್ಟೆ…..” ಎಂದ.

“ವಾಹ್‌…. ಇದಲ್ಲವೇ ವರಸೆ! ಪ್ರೇಮವಿವಾಹ ಅಂದಮಾತ್ರಕ್ಕೆ ಓಡಿಹೋಗಬೇಕೇ? ಇಬ್ಬರೂ ಮನೆಗಳಲ್ಲಿ ತಿಳಿಸಿ ಹೇಗಾದರೂ ಅವರನ್ನು ಒಪ್ಪಿಸಬಾರದಾ? ಧೈರ್ಯವಾಗಿ ಫ್ರೆಂಡ್ಸ್ ಜೊತೆ ರೆಜಿಸ್ಟರ್ಡ್‌ ಮದುವೆ ಆಗಿಬಿಡುವುದು, ಓಡಿ ಯಾಕೆ ಹೋಗಬೇಕು?” ಪ್ರಸಾದ್‌ ನಗುತ್ತಾ ಕೇಳಿದ.

“ಅವಳ ಹೆಸರು ಸುಧಾ. ಅವರದು ಸಂಪ್ರದಾಯಸ್ಥ ಬ್ರಾಹ್ಮಣರ ಮನೆತನ, ನಮ್ಮದು ಗೌಡರ ಮನೆತನ, ಹೀಗಾಗಿ ಎರಡೂ ಕಡೆ ಒಪ್ಪಲಿಲ್ಲ. ಅದಕ್ಕೆ ನಿನ್ನ ಸಹಾಯ ಬೇಕೆಂದು ಬಂದಿರುವೆ. ಲಾಯರ್‌ ಆದ್ದರಿಂದ ಲಾ ಪಾಯಿಂಟ್‌ ಹಾಕಿ ಬಿಗಿ ಮಾಡು, ಇಲ್ಲ ಅಂತ ಮಾತ್ರ ಹೇಳಬಾರದು. ನಮ್ಮದು ಪವಿತ್ರ ಪ್ರೇಮ…..”

“ಓಹೋ….. ಎಲ್ಲಾ ಬೆಂಗಳೂರೇನೋ…..?”

“ಹೌದು, ಬಹಳ ಸರಳ ಸ್ವಭಾವದ ಹುಡುಗಿ, ನಮಗಿಂತ ಬಡವರು. ಬಾಡಿಗೆ ವಠಾರದಲ್ಲಿದ್ದಾರೆ. ಸದಾಶಿನಗರದ ಅನುಕೂಲಸ್ಥರಾದ ನಮ್ಮ ಆಸ್ತಿವಂತ ಮನೆಮಂದಿ ಇಂಥ ಬಡ ಸಂಬಂಧ ಒಪ್ತಾರಾ?

“ಒಂದು ಖಾಸಗಿ ಹೋಟೆಲ್‌ನಲ್ಲಿ ರಿಸಪ್ಶನಿಸ್ಟ್. ಫುಟ್‌ಬಾಲ್ ‌ಮ್ಯಾಚ್‌ಗೆಂದು ನಮ್ಮೆಲ್ಲರಿಗೂ ಅಲ್ಲೇ ರೂಂ ಬುಕ್‌ ಮಾಡಿದ್ದರು. ಅವಳಿಗೆ ನಾನೊಬ್ಬ ಸೆಲೆಬ್ರಿಟಿ ಫುಟ್‌ಬಾಲ್ ‌ಪಟು ಅಂತ ಗೊತ್ತಾಗಲೇ ಇಲ್ಲ. ಮುಕ್ಕಾಲು ಘಂಟೆ ಒಬ್ಬೊಬ್ಬರ ಪ್ರೋಫೈಲ್ ಚೆಕ್‌ ಮಾಡಿ ನಂತರವೇ ಒಳಗೆ ಬಿಟ್ಟಿದ್ದು….. ಆಮೇಲೆ ನಾನು ರಾಷ್ಟ್ರೀಯ ಕ್ರೀಡಾಪಟು ಅಂತ ಗೊತ್ತಾದ ಮೇಲೆ ಬಹಳ ಸಾರಿ ಕೇಳಿದಳು. ಕ್ರಿಕೆಟ್‌ ಬಿಟ್ಟರೆ ಫುಟ್‌ಬಾಲ್ ‌ನೋಡಿದ್ದೇ ಇಲ್ಲನಂತೆ. ಹೀಗಾಗಿ ಅವಳ ಮುಗ್ಧತನ ನನ್ನ ಮನಸ್ಸಿಗೆ ಬಹಳ ಹಿಡಿಸಿತು.

“ಹೀಗೆ ಶುರುವಾಯಿತು ನಮ್ಮ ಲವ್ ಸ್ಟೋರಿ. ಒಂದು ವಾರ ಅಲ್ಲೇ ತಂಗಿದ್ದೆ. 3ನೇ ದಿನ ನೇರವಾಗಿ ಲವ್ ವಿಷಯ ತಿಳಿಸಿ, ನನ್ನನ್ನು ಮದುವೆ ಆಗ್ತೀಯಾ ಅಂತ ಕೇಳಿದೆ. ಅವಳಂತೂ ಬಹಳ ನಾಚಿಕೊಂಡಳು. ಅಂದ್ರೆ….. ಒಪ್ಪಿಕೊಂಡಳು. ಆದರೆ ಮಾರನೇ ದಿನವೇ ಬಂದು ಅವಳು ತನ್ನ ಸಂಪ್ರದಾಯಸ್ಥ ಮನೆತನದ ಬಗ್ಗೆ ವಿವರಿಸಿದಳು. ಅವರ ಮನೆಯವರು ತಾವಾಗಿ ಮುಂದೆ ನಿಂತು ಈ ಮದುವೆ ಖಂಡಿತಾ ಮಾಡಿಕೊಡುವುದಿಲ್ಲ ಅಂತ ಖಚಿತ ಪಡಿಸಿದಳು.

“ನಮ್ಮ ಮನೆಯಲ್ಲೂ ಅದೇ ಕಥೆ. ಹೇಳಿದ ತಕ್ಷಣ ಇಂಥ ಬಡ ಸಂಬಂಧ ಬೇಡವೇ ಬೇಡ ಅಂತ ಹಠ ಹಿಡಿದರು. ಗೌಡರ ಮನೆ ಹುಡುಗಿಯರಿಗೆ ಬರೀ ಅಂತ ಶ್ರೀಮಂತರ ಮನೆ ಹುಡುಗಿಯರ ದೊಡ್ಡ ಪಟ್ಟಿ ಕೊಟ್ಟರು. ಆದರೆ ನಾವಿಬ್ಬರೂ ಈ ವಿಷಯದಲ್ಲಿ ಗಟ್ಟಿ ಮನಸ್ಸು ಮಾಡಿಬಿಟ್ಟಿದ್ದೆ. ಹೀಗಾಗಿಯೇ ನಾವು ಓಡಿಹೋಗಿ ಕೋರ್ಟ್‌ ಸಾಕ್ಷಿಯಲ್ಲಿ ರೆಜಿಸ್ಟರ್ಡ್‌ ಮದುವೆ ಆಗುವುದು ಅಂತ ಡಿಸೈಡ್ ಮಾಡಿದ್ದೇವೆ. ಇದಕ್ಕೆ ನಿನ್ನ ಸಹಾಯ ಬೇಕೇ ಬೇಕು.”

“ಏ….. ಸುಮ್ಮನಿರೋ….. ಇದೇನು ಸಿನಿಮಾ ಅಂದುಕೊಂಡೆಯಾ? ನಿಜ ಜೀವನ. ಮುಂದೆ ನಿಮ್ಮಪ್ಪ ನಿನಗೆ ಆಸ್ತಿಯಲ್ಲಿ ಒಂದು ಪೈಸೆ ಕೊಡಲ್ಲ ಅಂದ್ರೆ ಅಂಥ ಲಕ್ಷಾಂತರ ಆಸ್ತಿ ಹಾಗೇ ಬಿಟ್ಟುಬಿಡ್ತೀಯಾ? ನಾನು ಬಂದು ನಿಮ್ಮ ಮನೆಯವರ ಹತ್ತಿರ ಈ ವಿಷಯ ನಿಧಾನ ಮಾತಾಡಿ ಅವರನ್ನು ಒಪ್ಪಿಸುತ್ತೀನಿ. ನೀನು ಈ ವಿಷಯದಲ್ಲಿ ಸೀರಿಯಸ್‌ ಆಗಿದ್ದೀಯಾ ತಾನೇ?” ಪ್ರಸಾದ್‌ ನಗುತ್ತಾ ಕೇಳಿದ.

“ಅದೇನೋ ಸರಿ…. ಇಷ್ಟೆಲ್ಲ ಹಿರಿಯನಂತೆ ಬಂದು ನಮ್ಮ ಮನೆಯವರ ಬಳಿ ಮಾತನಾಡ್ತೀನಿ ಅಂತೀಯಲ್ಲ, ನೀನೇಕೆ ನಿನಗೆ ಫಿಕ್ಸ್ ಆದ ಹುಡುಗಿಯನ್ನು ಹೋಗಿ ನೋಡಲೇ ಇಲ್ಲ…. ನಮಗೂ ಪರಿಚಯಿಸು ನಡಿ.”

“ಅವರೇ…. ಇರಲಿ ಬಿಡೋ. ಇನ್ನು ಕೆಲವೇ ದಿನಗಳ ಮಾತು. ನಮ್ಮ ಮನೆಯವರಿಗೆ ನಮ್ಮಿಬ್ಬರ ಭವಿಷ್ಯ, ಸುಖ, ಸಂಸ್ಕಾರಗಳ ಬಗ್ಗೆ ಗೊತ್ತೇ ಇರುತ್ತದೆ. ಮುಂದಿನ 15ನೇ ತಾರೀಕು ಬಂದ ಮೇಲೆ ನೋಡೇ ನೋಡ್ತೀನಲ್ಲ…..”

“ಒಂದು ಪಕ್ಷ ಆಗ ನಿನಗೆ ಆ ಹುಡುಗಿ ಇಷ್ಟ ಆಗದಿದ್ದರೆ?” ಹುಡುಗಿಯನ್ನು ನೋಡದೆಯೇ ಮದುವೆಗೆ ಒಪ್ಪಿರುವ ಈ ಭೂಪತಿ ಬಗ್ಗೆ ಸತೀಶನಿಗೆ ಇನ್ನೂ ನಂಬಿಕೆ ಬರಲಿಲ್ಲ.

“ನಮ್ಮ ಮನೆಯವರಿಗೆ ಮಕ್ಕಳ ಒಳ್ಳೇದು ಕೆಟ್ಟದ್ದು ಗೊತ್ತಿಲ್ಲವೇ? ಎಲ್ಲಾ ಒಳ್ಳೆಯದೇ ಆಗುತ್ತೆ ಬಿಡು!” ಪ್ರಸಾದ್‌ ಇದನ್ನು ಕೂಲ್ ಆಗಿಯೇ ಹೇಳಿದ್ದ.

“ಏನೇ ಆಗಲಿ…. ತಿಂಗಳನಿಂದ ಮಂಗಳನತ್ತ ಮಾನವ ಪ್ರವಾಸಕ್ಕೆ ಹೊರಟಿರುವ ಈ ಅತ್ಯಾಧುನಿಕ ಕಾಲದಲ್ಲಿ ನೀನು ನೋಡದ ಹುಡುಗಿಯನ್ನು ಮದುವೆ ಆಗ್ತೀನಿ ಅಂತೀನಿ ಅಂತೀರೋದು ನನಗಂತೂ ಪರಮಾಶ್ಚರ್ಯವಾಗಿದೆ.

“ಮುಂದಿನ ತಿಂಗಳು ನಮ್ಮ ಮದುವೆ ಅಂತ ಇಟ್ಟುಕೊಳ್ಳೋಣ. ನಾವಿಬ್ಬರೂ ಮನೆಯಿಂದ ನೇರ ರಿಜಿಸ್ಟ್ರಾರ್‌ಆಫೀಸಿಗೆ ಬಂದುಬಿಡ್ತೇವೆ. ನೀನು ಅಲ್ಲಿನ ಕಾನೂನು ಕಟ್ಟಳೆ ಅದೇನು ನಿಯಮಗಳೋ ಅದೆಲ್ಲ ನೋಡಿಕೋ. ನಿನ್ನ ಕಡೆಯವರು ಅಲ್ಲಿರುವುದರಿಂದ ಇದರಲ್ಲಿ ಕಷ್ಟ ಆಗಲ್ಲ. ಮದುವೆ ಮುಗಿಸಿ, ದೇವಸ್ಥಾನದಲ್ಲಿ ಸಿಂಪಲ್ ಆಗಿ ಹಾರ ಬದಲಾಯಿಸಿ, ತಾಳಿ ಕಟ್ಟಿ, ನೇರವಾಗಿ ಮನೆಗೆ ಹೋಗಿ ಹಿರಿಯರ ಆಶೀರ್ವಾದ ಪಡೆಯುವುದು. ಮಕ್ಕಳ ಸುಖ ಬಯಸುವ ಹಿರಿಯರು ಅದೇಕೆ ಇದನ್ನು ವಿರೋಧಿಸುತ್ತಾರೋ ನನಗಂತೂ ಗೊತ್ತಿಲ್ಲ….” ಪ್ರಸಾದ್‌ ಹೇಳಿದ ಮಾತಿನಂತೆಯೇ ಹಿರಿಯರು ಈ ಮದುವೆ ಒಪ್ಪಿಕೊಳ್ಳುತ್ತಾರೆ ಎಂದು ದೃಢವಾಗಿ ಹೇಳಿದ ಸತೀಶ್‌.

“ಸರಿಯಾಗಿದ್ದಿ ಬಿಡು, ನೀನು ಉಲ್ಟಂಪಲ್ಟಾ ಕೆಲಸ ಮಾಡಿ ನಾನು. ಹೇಳಿದ್ದನ್ನೇ ನನಗೇ ಹೇಳ್ತಿದ್ದೀಯಾ…. ಈ ವಿಷಯಕ್ಕೆ ನಾನು ನಿನಗೆ ಸಪೋರ್ಟ್‌ ಮಾಡೋಲ್ಲ. ಮುಂದೆ ಆಂಟಿ ಅಂಕಲ್ ನನ್ನನ್ನು ಕಂಡು ಶಾಪ ಹಾಕಿಕೊಳ್ಳುವಂತೆ ಆಗಬಾರದು. ಅರು ನಿನ್ನದೇನು ಕಥೆ ಅಂತ ಕೇಳಿದರೆ ನನ್ನ ಮದುವೆ ಹೀಗೆ ನಡೆಯುತ್ತಿದೆ ಅಂತ ನಾನು ಹೇಳಿದರೆ ಅವರಿಗೆ ನಿನ್ನ ಮೇಲೆ ಇನ್ನೂ ಕೋಪ ಜಾಸ್ತಿ ಆಗುತ್ತೆ. ಅದಕ್ಕೆ ಅವರನ್ನು ಒಪ್ಪಿಸಿಯೇ ಈ ಮದುವೆ ಮಾಡಿಸುತ್ತೇನೆ, ನೀನು ಸುಮ್ಮನಿರು.”

“ಏ…. ನೀನೊಬ್ಬ….. ಅವಳ ಫ್ರೆಂಡ್ಸ್ ಸಾಕ್ಷಿಯಾಗಿ ಸಹಿ ಹಾಕಲು ರೆಡಿ ಇದ್ದಾರೆ. ನನ್ನ ಫ್ರೆಂಡ್‌ ಆಗಿ ನೀನು ಇಷ್ಟು ಮಾಡಬಾರದೇ?” ಸತೀಶ್‌ ರೇಗಿದ.

“ಸಹಾಯ ಮಾಡಲ್ಲ ಅನ್ಲಿಲ್ವಲ್ಲ…. ನಿಮ್ಮಮ್ಮ ಅಪ್ಪನ್ನ ಒಪ್ಪಿಸೋಣ ಅಂತ. ಜೊತೆಗೆ ಆ ರಿಜಿಸ್ಟ್ರಾರ್‌ ಆಫೀಸ್‌ನಲ್ಲೂ ಸೀನಿಯರ್ಸ್‌ನನಗೆ ಗೊತ್ತು. ನಿನಗೆ ಕಾನೂನು ತೊಡಕಿರದಂತೆ ನಾನು ನೋಡಿಕೊಳ್ತೀನಿ. ಇನ್ನೇನು ಮತ್ತೆ?”

“ಅದೇ ಕಣಪ್ಪ…. ಮದುವೆಗೆ ಹುಡುಗಿ ಕರೆತಂದು, ಬೇರೆ ಅರೇಂಜ್‌ಮೆಂಟ್ಸ್ ಎಲ್ಲಾ ಅವರು ನೋಡಿಕೊಳ್ತಾರೆ. ನೀನು ಈ ಕಾನೂನಿನ ಕಷ್ಟ ಬರದಂತೆ ಎಚ್ಚರವಹಿಸು.”

“ಅದೆಲ್ಲ ಸರಿ, ಏನೇ ಆದರೂ ಒಂದು ಸಲ ನಿಮ್ಮಮ್ಮ ಅಪ್ಪನ ಜೊತೆ ಮಾತನಾಡಲು ಬಿಡು. ದುಡುಕುವುದು ಬೇಡ!”

“ಆಗಂತೂ ಅವರು ಖಂಡಿತಾ ಕೆಲಸ ಆಗಲು ಬಿಡಲ್ಲಪ್ಪ….. ನಮ್ಮ ಮನೇಲಿ ಗೌಡಜ್ಜಿ ಮಾಡಿದ್ದೇ ಶಾಸನ…. ನಮ್ಮಪ್ಪ ಇವತ್ತೂ ಅವರಮ್ಮನ ಮಾತಿಗೆ ಥರಥರ ನಡುಗುತ್ತಾರೆ. ಹುಡುಗನ ಕಡೆಯಿಂದ ನೀನು, ಇನ್ನಿಬ್ಬರು ಸಾಕ್ಷಿಗಳು ಬರ್ತಾರೆ. ನೀನು ಇಷ್ಟು ಮಾಡಲಿಲ್ಲವೇ ನಿನ್ನ ಎಂಗೇಜ್‌ಮೆಂಟ್‌, ಮದುವೆ ಯಾವುದಕ್ಕೂ ಬರಲ್ಲ ಬಿಡು!” ಎಂದ ಸತೀಶ್‌.

ಅವನ ಮಾತಿಗೆ ಪ್ರಸಾದ್‌ ನಗುತ್ತಾ, “ಆಯ್ತ ಬಿಡಪ್ಪ….. ನೀನು ಹೇಳಿದಂತೆಯೇ ಆಗಲಿ,” ಎಂದ.ಅದಕ್ಕೆ ಸತೀಶ್‌, “ನೀನು ನಿನ್ನ ಸಂಗಾತಿಯನ್ನು ತೋರಿಸುತ್ತವೆಯೋ ಇಲ್ಲವೋ, ಇವತ್ತು ಮಲ್ಲೇಶ್ವರಂ ಜನತಾ ಹೋಟೆಲ್ ‌ಕಡೆ ಸಂಜೆ 5 ಗಂಟೆಗೆ ಬಾ. ನನ್ನವಳನ್ನು ಕರೆದು ತರುತ್ತೇನೆ. ನಾವು ದಿನಾ ಮೀಟ್‌ ಮಾಡ್ತಾ ಇರ್ತೀವಿ. ಇವತ್ತು ನೀನು ಬರ್ತೀಯಾಂತ ಅವಳಿಗೆ ಮೊದಲೇ ಫೋನ್‌ ಮಾಡ್ತೀನಿ,” ಎಂದಾಗ ಆಯ್ತು ಎಂದು ಇಬ್ಬರೂ ಮನೆ ಕಡೆ ಹೊರಟರು.

ಸಂಜೆ ಹೇಳಿದಂತೆ ಸುಧಾ ಜೊತೆ ಸತೀಶ್‌ ಬಂದಿದ್ದ. ಅವರಿಬ್ಬರ ಒಡನಾಟ ಕಂಡು ಪ್ರಸಾದನಿಗೆ ಬಹಳ ಸಂತೋಷವಾಯಿತು. ಸುಧಾಳ ವ್ಯಕ್ತಿತ್ವದಿಂದ ಅವನು ಬಹಳ ಪ್ರಭಾವಿತನಾಗಿದ್ದ. ಸತೀಶನ ಕೂಡು ಕುಟುಂಬಕ್ಕೆ ಈ ಸೊಸೆ ಖಂಡಿತಾ ಸೂಟ್‌ ಆಗುತ್ತಾಳೆ ಎನಿಸಿತು. ಅಸಾಧ್ಯದ ಬಡ್ಡೀಮಗ, ಒಳ್ಳೆ ಛಾನ್ಸ್ ಹೊಡೆದಿದ್ದಾನೆ, ಹೇಗಾದರೂ ಅವನ ತಾಯಿತಂದೆಯರನ್ನು ಒಪ್ಪಿಸಬೇಕು ಎಂದು ನಿರ್ಧರಿಸಿದ. ಆದರೆ ಅವಳ ಮನೆಯವರ ಪ್ರತಿಕ್ರಿಯೆ ಹೇಗೋ ಏನೋ….?

“ಪ್ರಸಾದಣ್ಣ, ನೀವೇ ಮುಂದೆ ನಿಂತು ನಮ್ಮ ಮದುವೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಕೋರ್ಟ್‌ನಲ್ಲಿ ನಮ್ಮ ಪರ ಸಾಕ್ಷಿ ಆಗಬೇಕು….. ನಮ್ಮ ತಾಯಿತಂದೆಯರನ್ನು ಎದುರಿಸಿ ಎಂದೂ ನಾನು ಯಾವ ಕೆಲಸವನ್ನೂ ಮಾಡಿದವಳಲ್ಲ. ಬಹಳ ಭಯ ಆಗ್ತಿದೆ.

“ನನ್ನ ಮೂವರು ಗೆಳತಿಯರು ಬರುತ್ತಾರೆ. ಅವರೇ ನನಗೆ ಇಷ್ಟು ಧೈರ್ಯ ತುಂಬಿಸಿದ್ದು. ಅವರಂತೂ ಬಲು ಗಟ್ಟಗಿತ್ತಿಯರು, ಯಾವುದಕ್ಕೂ ಹೆದರುವವರಲ್ಲ. ನೀವು ಒಮ್ಮೆ ಅವರನ್ನು ಭೇಟಿ ಆಗಬೇಕು. ಕಾಲೇಜಿನಿಂದ ನಾವೆಲ್ಲ ವೆರಿ ಕ್ಲೋಸ್‌ ಫ್ರೆಂಡ್ಸ್. ನಮ್ಮ ಮನೆಯಲ್ಲಿ ಈಗಂತೂ ವಿರೋಧಿಸುತ್ತಿದ್ದಾರೆ. ಮದುವೆ ಆಗಿಹೋಯ್ತು ಅಂತ ಅವರ ಮುಂದೆ ನಿಂತಾಗ ವಿಧಿಯಿಲ್ಲದೆ ಒಪ್ಪುತ್ತಾರೆ ಅಂತ ನಾನು ಭಾವಿಸಿದ್ದೇನೆ. ನಿಮ್ಮ ಫ್ರೆಂಡ್‌ಗೆ ಉಳಿದ ವಿವರ ತಿಳಿಸಿ ಮಿಕ್ಕಿದ್ದೆಲ್ಲ ದಯವಿಟ್ಟು ನೋಡಿಕೊಳ್ಳಿ,” ಎಂದಳು ಸುಧಾ.

ಅವಳ ಮುಗ್ಧ ವ್ಯವಹಾರ ಕಂಡು ಪ್ರಸಾದ್‌ ಕರಗಿದ.

“ಆಯ್ತಮ್ಮ ನೀನು ಇಷ್ಟು ಹೇಳಿದ ಮೇಲೆ ಮುಗಿಯಿತು. ಉಳಿದೆಲ್ಲ ಜವಾಬ್ದಾರಿ ನನಗಿರಲಿ. ಅದೆಲ್ಲ ನಾನು ನೋಡಿಕೊಳ್ತೀನಿ. ಸಾಕ್ಷಿಗೆ ನಮ್ಮ ಇಬ್ಬರು ಫ್ರೆಂಡ್ಸ್ ನ ಕರೆದುಕೊಂಡು ಬರ್ತೀನಿ,” ಎಂದು ಅವಳಿಗೆ ಭರವಸೆ ತುಂಬಿದ.

ಅವರು ಅಲ್ಲೇ ತಿಂಡಿ ತಿಂದು ಹೊರಬಂದರು. ಸುಧಾಳ ಗೆಳತಿಯರ ಗುಣಗಾನ ಕೇಳಿ ಪ್ರಸಾದನಿಗೆ ಮತ್ತೆ  ಲಾಲಿಯ ನೆನಪಾಯಿತು. ಅವಳೂ ಸಹ ಇವರಂತೆಯೇ ಅತಿ ದಾರ್ಷ್ಟೀಕ ಸ್ವಭಾವದವಳಾಗಿದ್ದಳು. ಒಮ್ಮೆ ಡೆಸ್ಕ್ ತುದಿಯಲ್ಲಿ ಬ್ಲೇಡ್ ಸಿಗಿಸಿದ್ದರೆ, ಮತ್ತೊಮ್ಮೆ ಪಾಠ ನಡೆಯುತ್ತಿದ್ದಾಗ ಮಧ್ಯದಲ್ಲಿ ತುತ್ತೂರಿ ಊದಿ ಬಿಡುತ್ತಿದ್ದಳು. ಟೀಚರ್‌ ಕೋಪಿಸಿಕೊಂಡು ಕೇಳಿದರು ಯಾರು ಹೀಗೆ ಮಾಡಿದ್ದು ಅಂತ, ಎಲ್ಲರಿಗೂ ಗೊತ್ತಿದ್ದರೂ ಯಾರೂ ಹೇಳುತ್ತಿರಲಿಲ್ಲ. ಮಕ್ಕಳ ಐಕ್ಯತೆ ಕಂಡು ಟೀಚರ್‌ ಗೊಣಗಿ ಸುಮ್ಮನಾಗುತ್ತಿದ್ದರು. ಆಗ ಕ್ಲಾಸ್‌ ಶಾಂತವಾಗುತ್ತಿತ್ತು. ಒಮ್ಮೊಮ್ಮೆ ಅವರಿಗೆ ಆ ಪೀರಿಯಡ್‌ನ ಪಾಠ ಬೇಡವೆನಿಸಿದರೆ, ಎಲ್ಲರೂ ಸೇರಿ ಒಮ್ಮತದಿಂದ ಹೋಂವರ್ಕ್‌ ಮಾಡಿಲ್ಲ ಎಂದುಬಿಡುತ್ತಿದ್ದರು. ಆಗ ಟೀಚರ್‌ ಎಲ್ಲರನ್ನೂ ಗದರಿ, ಮನೆಯಲ್ಲಿ ಮಾಡದ್ದನ್ನು ಅಲ್ಲೇ ಮಾಡಿಕೊಳ್ಳುವಂತೆ ಹೇಳಿ, ತಮ್ಮ ಕೆಲಸ ಮಾಡಿಕೊಳ್ಳುವರು. ಮತ್ತೊಮ್ಮೆ ಬೆಂಚ್‌ ಮೇಲೆ ಎಲ್ಲರನ್ನೂ ನಿಲ್ಲಿಸಿ, ಸ್ಟಾಫ್ ರೂಮಿಗೆ ಹೋಗಿಬಿಡುವರು. ಒಟ್ಟಾರೆ ಆ ದಿನ ಪಾಠ ಇಲ್ಲ. ಟೀಚರ್‌ ಅತ್ತ ಹೋದ ತಕ್ಷಣ ಇತ್ತ ಹುಡುಗರೆಲ್ಲ ಹೋ ಎಂದು ದೊಂಬಿ ಎಬ್ಬಿಸುವರು. ಯಾಕೋ ಇತ್ತೀಚೆಗೆ ಅವನಿಗೆ 3-4 ಸಲ ಅವಳ ನೆನಪೇ ಬರುತ್ತಿತ್ತು. ಯಾರೊಡನೆ ಅವಳೀಗ ಇದ್ದಾಳೋ? ಅವರು ಉದ್ಧಾರ ಆದಂತೆಯೇ ಎಂದು ನಗುತ್ತಿದ್ದ.

ಮಾರನೇ ದಿನವೇ ರಿಜಿಸ್ಟ್ರಾರ್‌ ಆಫೀಸ್‌ನಲ್ಲಿ ಪ್ರಸಾದ್‌ಇಬ್ಬರ ಕಡೆಯಿಂದ ಸಹಿ ಮಾಡಿಸಿದ್ದ ಅರ್ಜಿಯನ್ನು, ತಾನೇ ಅವರ ಲಾಯರ್‌ ಎಂದು ಸಹಿ ಹಾಕಿ, ಅಧಿಕೃತವಾಗಿ ಸಲ್ಲಿಸಿದ. ಇಂಥವರು ಕಾನೂನುಬದ್ಧವಾಗಿ ಮದುವೆ ಆಗಲಿದ್ದಾರೆ ಎಂಬುದರ ಸೂಚನೆಯನ್ನು ಕೋರ್ಟ್‌ ಬಹಿರಂಗ ನೋಟೀಸ್‌ ಬೋರ್ಡ್‌ನಲ್ಲಿ ಪ್ರಕಟಿಸುತ್ತಿತ್ತು. ಅದಕ್ಕೆ ಯಾರಾದರೂ ವಿರೋಧ ಸಲ್ಲಿಸಿದ್ದರೆ, ಅರ್ಜಿ ಸಲ್ಲಿಸಿದರು ಕಾನೂನಿನ 18-21 ವಯಸ್ಸು ಮುಟ್ಟಿರದಿದ್ದರೆ, ಆಗ ಅದು ಕ್ಯಾನ್ಸಲ್ ಆಗುತ್ತಿತ್ತು. ಇವರ ನೋಟೀಸ್‌ಗೆ 1 ತಿಂಗಳ ಕಾಲ (ಯಾರಿಗಾದರೂ ಗೊತ್ತಾಗಿದ್ದರೆ ತಾನೇ…. ಅದು ಬೇರೆ ಮಾತು) ಯಾವ ಆಕ್ಷೇಪಣೆಯೂ ಬರಲಿಲ್ಲ ಎಂದು ಕೋರ್ಟ್‌ ಅವರ ಮದುವೆಯ ದಿನಾಂಕ ನೀಡಿತು.

ಆ ದಿನ ಎಲ್ಲರೂ ಮಾಮೂಲಾಗಿಯೇ, ಯಾವ ವಿಶೇಷ ಬಗೆಯ ಹೆಚ್ಚಿನ ಅಲಂಕಾರ ಇಲ್ಲದೆ ತಮ್ಮ ಮನೆಯಿಂದ ಸಹಜವಾಗಿ ಎಂಬಂತೆ ಹೊರಟು ಅಲ್ಲಿಗೆ ಬಂದಿದ್ದರು. ಇಬ್ಬರೂ ಹಾರ ಬದಲಾಯಿಸಿಕೊಂಡರು. ಚೀಫ್‌ ರಿಜಿಸ್ಟ್ರಾರ್‌ ಬಂದು ಸಹಿ ಮಾಡಿಸಬೇಕಿತ್ತು, ಅವರಿಗಾಗಿ ಕಾಯತೊಡಗಿದರು.

“ಇದೇನು ಎಲ್ಲರೂ ಮಾಮೂಲಿ ಡ್ರೆಸ್‌ ಆಗೋಯ್ತು?” ಪ್ರಸಾದ್‌ ಕೇಳಿದಾಗ ಸತೀಶ್‌ ಹೇಳಿದ,

“ಮನೆಯವರಿಗೆ ಎಲ್ಲ ನಾರ್ಮಲ್ ಅನಿಸಲಿ ಅಂತ ಸಿಂಪಲ್ ಆಗಿಯೇ ಬಂದೆ. ಮುಂದೆ ಅವರು ಬಯಸಿದರೆ ಗ್ರಾಂಡ್‌ ರಿಸೆಪ್ಶನ್ ಇಟ್ಟುಕೊಂಡರೆ ಆಯ್ತು. ಆಗ ಎಲ್ಲಾ ತರಹದ ಗ್ರಾಂಡ್‌ ಡ್ರೆಸ್ಸಿಂಗ್‌ ಮಾಡೋಣ ಅಂತ,” ಎಲ್ಲರ ಮುಗುಳ್ನಗುೀ ಉತ್ತರವಾಗಿತ್ತು.

“ನಿಮ್ಮದೆಲ್ಲ ಗ್ರಾಂಡ್‌ ಡ್ರೆಸ್ಸಿಂಗ್‌ ಇರಬಹುದು ಅಂತ ನಾನು ಸೂಟ್‌ ಹಾಕಿಕೊಂಡು ಬಂದೆ, ಇಲ್ಲಿ ನಾನೇ ಗುಗ್ಗು ಆದೆ!” ಎಂದಾಗ ಯಾರೂ ಅದನ್ನು ವ್ಯಂಗ್ಯವಾಗಿ ಭಾವಿಸಲಿಲ್ಲ. ಸೈನ್‌ ಮಾಡುವ ಮದುವೆಯೇ ಇರಬಹುದು, ಆದರೂ ಅದೊಂದು ಪವಿತ್ರ ಕಾರ್ಯ ಎಂದು ಕೋರ್ಟ್‌ ರೂಮಿನ ಹೊರಗೆ ಶೂ ಕಳಚಿ ಒಳಗೆ ಬಂದು ಎದುರು ಕುರ್ಚಿಯ ಮೊದಲ ಸಾಲಿನಲ್ಲಿ ಕುಳಿತಿದ್ದ. ಆಗ ಯಾರೋ ಸುಧಾಳ ಗೆಳತಿಯರಲ್ಲಿ ಕಿಸಕ್ಕನೆ ನಕ್ಕಂತಾಗಿ ಆ ಕಡೆ ತಿರುಗಿ `ನಮಸ್ತೆ’ ಎಂದಳು.

ಆ ಗಡಿಬಿಡಿಯಲ್ಲಿ ಸರಿಯಾಗಿ ಗಮನಿಸಿಕೊಳ್ಳದ ಪ್ರಸಾದ್‌ ಅದು ತನಗೆ ಹೇಳಿರಬೇಕೆಂದು `ನಮಸ್ತೆ’ ಎಂದು ಉತ್ತರಿಸಿದ. ಸಾಲಿನ ಕೊನೆಯಲ್ಲಿ ಕುಳಿತಿದ್ದರಿಂದ ಅವಳ ಮುಖ ಸರಿಯಾಗಿ ಗಮನಿಸಲಿಲ್ಲ.

ನಂತರ ಅವಳೇ ಮುಂದೆ ನಿಂತು ಚಟುವಟಿಕೆಯಿಂದ ಓಡಾಡುತ್ತಾ, ವಧೂವರರು ಹಾರ ಬದಲಾವಣೆ, ಸಹಿ ಹಾಕಿದ್ದು, ರೆಜಿಸ್ಟ್ರಾರ್ ಸಾಹೇಬರು ಬಂದ ಮೇಲೆ ಅವರ ಸಹಿ, ಎಲ್ಲರಿಗೂ ಸಿಹಿ ಹಂಚಿದ್ದು, ಕಂಗ್ರಾಟ್ಸ್ ಹೇಳಲು ಅಪ್ಪಿಕೊಂಡದ್ದು, ವಧೂವರರಿಗೆ ಕೈಕುಲುಕುತ್ತಾ ಓಡಾಡುವ ಗಡಿಬಿಡಿಯಲ್ಲಿ ಅವಳು ಯಾರೆಂದು ಗೊತ್ತಾಗಲೇ ಇಲ್ಲ. ಅಂತೂ ಅರ್ಧ ಗಂಟೆಯಲ್ಲಿ ಎಲ್ಲ ಮುಗಿದು, ವಿಧಿವತ್ತಾಗಿ ಕಾನೂನುಬದ್ಧವಾಗಿ ಸುಧಾ ಸತೀಶ್‌ ನವದಂಪತಿಗಳೆಂದು ಘೋಷಿಸಲ್ಪಟ್ಟರು.

ಪ್ರಸಾದ್‌ ಮತ್ತೊಂದು ಕೇಸಿಗಾಗಿ ಬೇರೆ ಕ್ಲೈಂಟ್‌ ಬಳಿ ಹೋಗಬೇಕಾಗಿತ್ತು. ಅವನು ಉಳಿದ ಡಾಕ್ಯುಮೆಂಟೇಶನ್‌ಸರಿಪಡಿಸಿಕೊಂಡು ಆ ಕೋಣೆಯಿಂದ ಹೊರಬಂದು ನೋಡುತ್ತಾನೆ, ತಾನು ಅಲ್ಲೇ ಬಿಟ್ಟಿದ್ದ ಹೊಸ ಶೂ ಕಾಣೆಯಾಗಿತ್ತು! ಅವನು ಕಕ್ಕಾಬಿಕ್ಕಿಯಾದ.

ಆಗ ಸುಧಾಳಿಗೆ ಫೋನ್‌ ಕಾಲ್ ‌ಬಂತು, “ಸ್ವಲ್ಪ ತಮಾಷೆ ಮಾಡೋಣ ಅಂತ ನಿನ್ನ ಹೊಸ ಪತಿಯ ಫ್ರೆಂಡ್‌ ಇದ್ದಾರಲ್ಲ ಅವರ ಶೂ ಬೇರೆಡೆ ಬಚ್ಚಿಟ್ಟಿದ್ದೇನೆ. ಹಿಂದಿ ಸಿನಿಮಾಗಳಲ್ಲಿ ತೋರಿಸುವ ಹಾಗೆ, ವರನ ಶೂ ಬಚ್ಚಿಟ್ಟು ವಧುವಿನ ತಂಗಿಯರು ಹಣ ಕೇಳುತ್ತಾರೆ. ಅಳಿಯನ ಜೊತೆಗೆ ಇಲ್ಲಿ ಅವನ ಗೆಳೆಯನ ಶೂ ಸಹ ಬಚ್ಚಿಡಲಾಗಿದೆ. ಬೇಗ ಸಾವಿರ ರೂ. ತಗೋ. ಎಲ್ಲಿ ಅಂತ ಹೇಳ್ತೀನಿ.”

ಗೆಳತಿಯ ಆ ತಮಾಷೆ ಮಾತು ಕೇಳಿ ಸುಧಾ ಗಾಬರಿಗೊಂಡಳು. ಸತೀಶ್‌ನನ್ನು ಹೇಗಾದರು ಸುಧಾರಿಸಬಹುದು, ಪ್ರಸಾದ್‌ ಏನು ಭಾವಿಸುತ್ತಾನೋ ಏನೋ?

“ಓ, ಅದಕ್ಕೆ ನೀನು ಬೇಗ ಆ ಜಾಗ ಬಿಟ್ಟು ಹೊರಟುಬಿಟ್ಟೆಯಾ….. ಬೇಗ ಹೇಳೆ ಕತ್ತೆ!” ಎಂದು ಸುಧಾ ಅವಸರಿಸಿದಳು.

ಅಷ್ಟರಲ್ಲಿ ತುಂತುರು ಮಳೆ ಹನಿಯಲಾರಂಭಿಸಿತು. ಪ್ರಸಾದ್‌ ಮತ್ತೊಂದು ಮುಖ್ಯ ಕ್ಲೈಂಟ್‌ ಮೀಟಿಂಗ್‌ಗೆ ಹೋಗಬೇಕಿತ್ತು. ಸತೀಶನ ಶೂ ಕೂಡ ಹಾಗೇ ಆಗಿತ್ತು. ಹೀಗಾಗಿ ಇಬ್ಬರ ಶೂಗಾಗಿ ಅವನು ಹುಡುಕತೊಡಗಿದ.

ಈ ರೀತಿ ವಿಷಯ ಎಂದು ಗೊತ್ತಾದಾಗ ವಿಧಿಯಿಲ್ಲದೆ ಅಳಿಯ ಗೆಳೆಯ ಸಾವಿರ ರೂ ಕೊಡಲೇಬೇಕಾಯಿತು.

“ಸರಿ, ಹಣ ಕೈಗೆ ಬಂತೇನು?” ಗೆಳತಿ ಅಲ್ಲಿಂದಲೇ ಪ್ರಶ್ನಿಸಿದಳು.

“ಬಂತು ಮಹಾತಾಯಿ…… ಬೇಗ ಹೇಳು.”

“ಹಾಗಾದ್ರೆ ಸರಿ, ಅದು ಸತೀಶ್‌ ಗಾಡಿಯ ಡಿಕ್ಕಿಯಲ್ಲಿದೆ. ತಕ್ಷಣ ನನ್ನ ನಂಬರ್‌ಗೆ ಗೂಗಲ್ ಪೇ ಮಾಡು, ಇದರಲ್ಲಿ ನಿನಗೆ ಪಾಲಿಲ್ಲ, ಯಾಕಂದ್ರೆ ನೀನು ವಧು. ನಿನ್ನ ಗೆಳತಿಯರಿಗೆ ಮಾತ್ರ ಅದರ ಮೇಲೆ ಹಕ್ಕು. ಸಂಜೆ ಬಂದು ಸತೀಶ್‌ ಮನೆ ಅಲಂಕರಿಸಿ, ನಿಮ್ಮನ್ನು ಒಳಗೆ ಕಳುಹಿಸಿ ನಾವು ಪಾರ್ಟಿ ಮಾಡಿಕೊಳ್ಳುತ್ತೇವೆ,” ಎಂದು ಅಣಕಿಸಿದಳು.

“ಹಾಳಾಗಿ ಹೋಗಿ!” ಎಂದು ಹುಸಿಮುನಿಸು ಗದರುತ್ತಾ ಅವಳಿಗೆ ಹಣ ಟ್ರಾನ್ಸ್ ಫರ್‌ ಮಾಡಿದಳು ಸುಧಾ.

“ಆಹಾ ಭಾಭಿ, ನಿಮ್ಮ ಫ್ರೆಂಡ್‌ ಮಹಾತಾಯಿ ನಿಜಕ್ಕೂ ಗ್ರೇಟ್‌! ಅಂಥವಳನ್ನು ಕಟ್ಟಿಕೊಂಡು ಏಗುವವನನ್ನು ನೆನೆಸಿಕೊಂಡ್ರೆ ಅಯ್ಯೋ ಪಾಪ ಎನಿಸುತ್ತೆ,” ಪ್ರಸಾದ್‌ ಸುಧಾಳಿಗೆ ಹೇಳಿದಾಗ ಎಲ್ಲರೂ ಜೋರಾಗಿ ನಕ್ಕರು. ಶಿಷ್ಟಾಚಾರಕ್ಕಾಗಿ ಸುಧಾ ಗೆಳತಿಯ ಪರ ಕ್ಷಮೆ ಕೇಳಿದಳು. ಪ್ರಸಾದ್‌ ನಗುತ್ತಾ ಇದೆಲ್ಲ ದೊಡ್ಡ ವಿಷಯವಲ್ಲ, ಎಂದು ಹೊರಟುಬಿಟ್ಟ.

“ಸಾರಿ ಪ್ರಸಾದಣ್ಣ, ಈ ಮಹಾತಾಯಿ ಕಾಲೇಜಿನಲ್ಲೂ ಹೀಗೆ ಮಾಡುತ್ತಿದ್ದಳು. ಒಳ್ಳೆಯ ಹುಡುಗಿ, ಆದರೆ ತರಲೆ ಜಾಸ್ತಿ. ಪಠ್ಯೇತರ ಚಟುವಟಿಕೆಗಳಿಗೆ ಇಡೀ ಕಾಲೇಜಿಗೆ ಒಳ್ಳೆ ಹೆಸರು ತಗೊಂಡಿದ್ದಳು. ಹೀಗಾಗಿ ಯಾರೂ ಅವಳ ವಿರುದ್ಧ ದೊಡ್ಡದಾಗಿ ದೂರು ಕೊಡುತ್ತಿರಲಿಲ್ಲ. ಆಮೇಲೆ ಅವಳನ್ನು ಕರೆಸಿ ನಿಮ್ಮ ಬಳಿ ಕ್ಷಮೆ ಕೇಳಿಸುತ್ತೇನೆ.”

“ಅಯ್ಯೋ ಬಿಡಿ, ಇದು ಯಾವ ದೊಡ್ಡ ವಿಷಯ? ಮುಂದಿನ ಕಾರ್ಯಕ್ರಮ ಗಮನಿಸಿ. ಮಧ್ಯಾಹ್ನ ಲಂಚ್‌ಗೆ ಎಲ್ಲರೂ ಮೀಟ್ ಆಗೋಣ,” ಎಂದು ಹೊರಟುಬಿಟ್ಟ. ಅಂತೂ ಆ ದಿನದ ಕಾರ್ಯಕ್ರಮವಿಲ್ಲ ಸಾಂಗೋಪಾಂಗವಾಗಿ ನಡೆದು, ಸುಧಾ ಸತೀಶನ ಮನೆ ತುಂಬಿದಳು.

ಮಾರನೇ ದಿನ ಪ್ರಸಾದ್‌ ಜೊತೆ ಈ ಮದುಮಕ್ಕಳು ಮೊದಲು ಸತೀಶನ ತಾಯಿತಂದೆಯರನ್ನು ಭೇಟಿಯಾಗಲು ಬಂದರು. ಅವರಿಗೆ ಹಾರ್ದಿಕ ಸ್ವಾಗತ ಸಿಗಲಿಲ್ಲ. ಬೇಕಾದಷ್ಟು ಬೈಗುಳು ಆಯ್ತು. ಇವರು ಒಬ್ಬನೇ ಮಗ ಪರದೇಶಿಯಂತೆ ಹೀಗೆ ಮದುವೆ ಆದನೇ ಎಂದು ಅವರು ರೇಗಾಡಿದರು.

ಸುಧಾ ಹಿರಿಯರಿಗೆ ನಮಸ್ಕರಿಸಿ, ತಮ್ಮನ್ನು ಕ್ಷಮಿಸುವಂತೆ ಕಣ್ಣಲ್ಲಿ ನೀರು ಹಾಕಿಕೊಂಡಳು. ಅವಳ ಸನ್ನಡತೆ, ಸಂಸ್ಕಾರ ಅವರ ಕೋಪ ತಣಿಸಿತು. ಪ್ರಸಾದ್‌ ತನ್ನ ಲಾಯರ್‌ ಬುದ್ಧಿ ಎಲ್ಲಾ ಖರ್ಚು ಮಾಡಿ ಅವರನ್ನು ಕ್ಷಮಿಸುವಂತೆ ವಿನಂತಿಸಿಕೊಂಡ. ಕೊನೆಗೆ ಅಜ್ಜಿ ತೀರ್ಪು ನೀಡಿದರು, ಬೇಗ ಶುಭ ಮುಹೂರ್ತ ಹುಡುಕಿ ತಮ್ಮ ಸಂಪ್ರದಾಯದಂತೆ ಮದುವೆ ಮಾಡಿಸಿದ ಮೇಲೆಯೇ ಇವರನ್ನು ಮನೆಗೆ ಸೇರಿಸುತ್ತೇವೆ ಎಂದರು.

ಅದಾದ 15 ದಿನಗಳಲ್ಲಿ ಇವರ ಶಾಸ್ತ್ರೋಕ್ತ ಮದುವೆ ಎಂದು ನಿಗದಿ ಆಯ್ತು. ಮನೆಯಲ್ಲಿ ಎಲ್ಲರಿಗೂ ನೆಮ್ಮದಿ ಎನಿಸಿತು. ಬೇಗ ಬೇಗ ಮದುವೆ ತಯಾರಿ ಶುರುವಾಯ್ತು. ಅದೇ ತರಹ ಅವಳ ತಾಯಿ ಮನೆಗೆ ಹೋಗಿ ಅವರನ್ನೆಲ್ಲಾ ಒಪ್ಪಿಸಿದ್ದಾಯ್ತು. ಅಂತೂ ಹಿರಿಯರ ಒಪ್ಪಿಗೆಯಿಂದ ಆ ಮದುವೆ ನಿರಾಳವಾಗಿ ನಡೆಯುವಂತಾಯಿತು.

anokhi-story2

ಪ್ರಸಾದನ ಎಂಗೇಜ್‌ಮೆಂಟ್‌ಗೆ 2 ವಾರಗಳ ಮುಂಚೆಯೇ ಅದರ ಕಾರ್ಡ್‌ ಸಿದ್ಧವಾಗಿ ಬಂತು. ಆಗ ಪ್ರಸಾದ್‌ ಅದನ್ನು ಗೆಳೆಯರಿಗೆ ಹಂಚಲೆಂದು ತೆಗೆದುಕೊಂಡ. ಆಗ ಅವನ ತಾಯಿ ಹೇಳಿದರು, “ನೋಡೋ, ನಿನಗೆ ಇದರ ಡಿಸೈನ್‌ ಇಷ್ಟವಾಯಿತೇ?”

“ಹುಡುಗಿಯನ್ನೇ ನೋಡಲಿಲ್ಲ…. ಇದರ  ಡಿಸೈನ್‌ ಏನು ಬಂತು?”

“ಇರು, ಫೋಟೋ ತೋರಿಸುತ್ತೇನೆ,” ಎಂದು ತರಲು ಒಳಗೆ ಹೋದರು ಶಾರದಮ್ಮ.

ಅವನು ಕಾರ್ಡ್‌ ಗಮನಿಸಿದಾಗ ಅದರಲ್ಲಿ ವಧು ಹೆಸರಿನ ಜಾಗದಲ್ಲಿ `ನಿರ್ಮಲಾ ಭಾರ್ಗವ್’ ಎಂದಿತ್ತು. ಒಂದು ಕ್ಷಣ ಅವನಿಗೆ ಗಾಬರಿಯಾಯ್ತು. ಇವಳು ಅದೇ ಲಾಲಿ ನಿರ್ಮಲಾ ಅಲ್ಲ ತಾನೇ ಎಂದು ಕಸಿವಿಸಿಗೊಳಗಾದ.

ಒಂದೇ ಹೆಸರುಳ್ಳವರು ನಮ್ಮ ದೇಶದಲ್ಲಿ ಅದೆಷ್ಟು ಲಕ್ಷ ಜನರಿರಬಹುದೋ? ಹೆಸರು ಕೇಳಿದ ಮಾತ್ರಕ್ಕೆ ಅವಳೇ ಎಂದು ಯಾಕೆ ಅಂದುಕೊಳ್ಳಬೇಕು? ಅಷ್ಟರಲ್ಲಿ ಶಾರದಮ್ಮ ಮಗನಿಗೆ ವಧುವಿನ ಫೋಟೋ ತೋರಿಸಿದರು. ಲಕ್ಷಣವಾಗಿ ಸೀರೆ ಉಟ್ಟು, ಹೂ ಮುಡಿದು, ಹಣೆಗಿಟ್ಟುಕೊಂಡು ಕುಲವಧುವಾಗಿ ನಿಂತಿದ್ದಳು. ಬಾಲ್ಯದಲ್ಲಿ ನೆನಪಿದ್ದ ಆ ಲಾಲಿ ಮುಖ ಗಂಡುಬೀರಿಯ ಹಾಗಿತ್ತು, ಖಂಡಿತಾ ಈ ಹುಡುಗಿ ಇರಲಾರದು ಎಂದುಕೊಂಡ.

“ಹುಡುಗಿ ನಿಶ್ಚಯಿಸಿಕೊಂಡು ಬಂದಾಗ, ನೀವು ನೋಡಿದ್ದಾಯ್ತಲ್ಲ…. ನಾನೇಕೆ ಅವಳ ಫೋಟೋ ನೋಡಲಿ ಎಂದಿದ್ದೆ. ಈಗಲಾದರೂ ನೋಡು ನನ್ನ ಸೊಸೆಯನ್ನು,” ಎಂದರು.

ಅಲ್ಲ, ಆ ಹೆಸರು ಕೇಳಿದ ಕೂಡಲೇ ಮತ್ತೆ ಮತ್ತೆ ತನಗೆ ಆ ಹಳೆ ಲಾಲಿ ಏಕೆ ನೆನಪಾಗಬೇಕು?

ಅವಳ ವ್ಯಕ್ತಿತ್ವ ತನ್ನ ಮೇಲೆ ಇನ್ನೂ ಅಷ್ಟು ಪ್ರಭಾವ ಬೀರುತ್ತಿದೆಯೇ? ಅಂದಿನ ಆ ಎಳೆಯ ಮುಖಕ್ಕೂ ಇಂದಿನ ಈ ಸುಂದರ ತರಣಿಗೂ ಹೋಲಿಕೆಯೇ ಇರಲಿಲ್ಲ. ಪ್ರಸಾದನಿಗೆ ಯಾಕೋ ತುಸು ಸಮಾಧಾನ ಎನಿಸಿತು.

“ಯಾಕೋ….. ನಿನಗೆ ಇಷ್ಟ ಆಗಲಿಲ್ವಾ?” ತಾಯಿ ಕೇಳಿದರು.

“ಹಾಗೇನೂ, ಇಲ್ಲಮ್ಮ…… ಹುಡುಗಿಯ ಕುಲಗೋತ್ರ ನೋಡಿ, ನಮ್ಮ ಮನೆಗೆ ಒಪ್ಪುತ್ತಾಳೆ ಎಂದು ನಿಮಗೆ ವಿಶ್ವಾಸ ಮೂಡಿದ ಮೇಲೆ ತಾನೇ ನನಗಾಗಿ ನೀವು ಇವಳನ್ನು ಆರಿಸಿದ್ದು…..? ಅಂದ ಮೇಲೆ ಎಲ್ಲಾ ವಿಧದಲ್ಲೂ ಒಪ್ಪಿಗೆ!” ಎಂದು ಅಮ್ಮನನ್ನು ಅಪ್ಪಿಕೊಂಡ.

“ಅಯ್ಯೋ ಬಿಡೋ…… ಹುಚ್ಚು ಹುಡುಗ!” ಎಂದು ಶಾರದಮ್ಮ ನಗುತ್ತಾ ಒಳಗೆ ಹೋದರು.

ಅತ್ತ ಸುಧಾ ಸತೀಶರ ಮದುವೆ ವೈಭವದಿಂದ ನೆರವೇರಿತು. ಪ್ರಸಾದ್‌ ಪ್ರಮುಖ ಪಾತ್ರಧಾರಿಯಾಗಿ ಮದುವೆ ಮನೆಯಲ್ಲಿ ಓಡಾಡಿದ. ಇವನನ್ನು ಸತಾಯಿಸಿದ ಸುಧಾಳ ಗೆಳತಿ ಮದುವೆಗೆ ಬಂದಿದ್ದರೂ, ಇವನ ಮುಂದೆ ಮಾತ್ರ ಸುಳಿಯಲೇ ಇಲ್ಲ. ಆ ದಿನ ಮಾಡಿದ ಕೆಲಸಕ್ಕೆ ಬಹಳ ಸಂಕೋಚ ಆಗಿರಬೇಕು ಎಂದು, ಈಗಾಗಲೇ ವಿವಾಹ ನಿಶ್ಚಯವಾಗಿದ್ದ ಪ್ರಸಾದ್‌ ಬೇರೆ ಹುಡುಗಿಯನ್ನು ನೋಡುವ ಗೊಡವೆಗೂ ಹೋಗಲೇ ಇಲ್ಲ. ಈಗಾಗಲೇ ಖಾಸಗಿಯಾಗಿ ಪ್ರಾಕ್ಟೀಸ್‌ ಮಾಡುತ್ತಿದ್ದ ಪ್ರಸಾದ್‌, ಉತ್ತಮ ಸಿವಿಲ್ ಲಾಯರ್‌ ಎನಿಸಿ ಬೆಂಗಳೂರಿನಲ್ಲಿ ಖ್ಯಾತನಾಗಿದ್ದ. ಇದೀಗ ಥೀಸೀಸ್‌ ಪೂರ್ತಿ ಆದಮೇಲೆ, ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಲೀಗ್‌ ಅಡ್ವೈಸರ್‌ ಆಗಿ ಅವನಿಗೆ ಕೆಲಸ ದೊರಕಿತು.

ಲಗ್ನಪತ್ರಿಕೆಯ ದಿನ ಹತ್ತಿರ ಬರತೊಡಗಿತು. ಸತೀಶ್‌ ಒಮ್ಮೊಮ್ಮೆ ಪ್ರಸಾದನತ್ತ ರೇಗುತ್ತಿದ್ದ, “ಈ ಅಲ್ಟ್ರಾಪಾಶ್‌ ಕಾಲದಲ್ಲಿ ಒಮ್ಮೆಯಾದರೂ ಹೋಗಿ ಇದೇ ಊರಿನಲ್ಲಿರುವ ಆ ಹುಡುಗಿಯನ್ನು ನೋಡಿ ಮಾತನಾಡಿಸಬಾರದೇ? ನಮಗೂ ಪರಿಚಯಿಸಿದ್ದರೆ ನಿನ್ನ ಗಂಟೇನು ಹೋಗುತ್ತಿತ್ತು?”

“ನೋಡಿದ್ಯಾ…. ಆ ಹುಡುಗಿ ಹೇಗಿರುತ್ತಾಳೋ ಎಂಬು ಕುತೂಹಲವೇ ನಮ್ಮ ಮದುವೆಯ ಸ್ವಾರಸ್ಯ ಅಂದುಕೋ,” ಎಂದ.

ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಎಂಗೇಜ್‌ಮೆಂಟ್‌ ದಿನ ಬಂದೇಬಿಟ್ಟಿತು. ವರನ ಕಡೆಯವರೊಂದಿಗೆ ಸುಧಾ ಸತೀಶ್‌ಮುಂದಿದ್ದರು. ಮದುವೆ ಮನೆಯಲ್ಲಿ ವಧುವಿನ ಅಣ್ಣಂದಿರು, ತಂದೆ ಎಲ್ಲರೂ ಇವರನ್ನು ಆದರದಿಂದ ಬರ ಮಾಡಿಕೊಂಡು ಆರತಿ ಬೆಳಗಿ ಮೊದಲು ಉಪಾಹಾರಕ್ಕೆ ಕರೆದೊಯ್ದರು.

ಅದೆಲ್ಲ ಮುಗಿಸಿ ಪುರೋಹಿತರು ಬಂದ ಮೇಲೆ, ವರ ಮಣೆ ಮೇಲೆ ಬಂದು ಕುಳಿತಿದ್ದಾಯ್ತು. ವಧು ಎಲ್ಲೋ ಎಂದು ಸತೀಶ್‌ ಕಣ್ಣಲ್ಲೇ ಇವನನ್ನು 100 ಸಲ ಪ್ರಶ್ನಿಸಿದ್ದ. ಏನೂ ಗೊತ್ತಿಲ್ಲ ಎಂಬಂತೆ ಪ್ರಸಾದ್‌ ಕೈಚೆಲ್ಲಿದ.

ವರನ ತಂದೆ ಭಾವಿ ಅಳಿಯನಿಗೆ ಹಾರ ಹಾಕಿದರು, ಅತ್ತೆ ತಿಲಕವಿಟ್ಟು ಆರತಿ ಬೆಳಗಿದರು. ನಿಧಾನವಾಗಿ 5 ಜನ ಮುತ್ತೈದೆಯರ ಮಧ್ಯೆ ವಧು ನಡೆದು ಬಂದಳು. ವರನ ತಾಯಿ ಅವಳಿಗೆ ಹಾರ ಹಾಕಿ, ಅರಿಶಿನ ಕುಂಕುಮವಿಟ್ಟರು. ಅವಳು ಬಾಗಿ ಹಿರಿಯರಿಗೆ ನಮಸ್ಕರಿಸಿದಳು. ಈ ಶಾಸ್ತ್ರಗಳು ನಡೆಯುವಾಗ ವಧು ಬೇಕೆಂದೇ ಸೆರಗನ್ನು ತಲೆಯ ಮುಂದಕ್ಕೆ ಬಿಟ್ಟಿದ್ದಳು. ವರ ಮಹಾಶಯನ ಕುತೂಹಲ ಮುಗಿಲು ಮುಟ್ಟಿತ್ತು.

“ಉಳಿದ ಶಾಸ್ತ್ರಗಳು ನಡೆಯುವ ಮೊದಲು, ವಧೂವರರು ಹಾರ ಬದಲಾಯಿಸಿ,” ಎಂದರು ಪುರೋಹಿತರು.

“ಅದಕ್ಕೆ ಮೊದಲು ಅವಳ ತಲೆಯ ಮೇಲಿನ ಸೆರಗು ತೆಗಿ ಪ್ರಸಾದ್‌,” ಶಾರದಮ್ಮ ಮಗನಿಗೆ ಹೇಳಿದರು.

ಇಬ್ಬರೂ ಹಾರ ಹಾಕುವ ಮೊದಲು ಪ್ರಸಾದ್‌ ಅವಳ ಬಳಿ ಬಂದು ಮೆಲ್ಲಗೆ ಸೆರಗು ಸರಿಸಿದ….. ಈ ಬಾರಿ ಬೆರಗಾಗುವ ಸರದಿ ಪ್ರಸಾದನದಾಗಿತ್ತು. ಬೇಕೆಂದೇ ಒಂಡರಕಣ್ಣು ಮಾಡಿಕೊಂಡು ಅವನನ್ನು ಕೆಣಕುವಂತೆ ನಿಂತಿದ್ದ ಆ ಹುಡುಗಿ….. ಬೇರೆ ಯಾರೂ ಆಗಿರದೆ ಅದೇ ನಿರ್ಮಲಾ….. ಲಾಲಿ ಆಗಿದ್ದಳು! ಶಾಕ್‌ನಿಂದ ತತ್ತರಿಸಿದ ಅವನು ಬೆವತುಹೋಗಿದ್ದ.

ಆಗ ಸುಧಾ ಮುಂದೆ ಬಂದು ಹೇಳಿದಳು, “ಇವಳೇ ನನ್ನ ಗೆಳತಿ ನಿರ್ಮಲಾ…. ಅಂದ್ರೆ ನಿಮ್ಮ ಲಾಲಿ! ಆ ದಿನ ನಮ್ಮ ಮದುವೆಯಲ್ಲಿ ನಿಮ್ಮ ಶೂ ಬಚ್ಚಿಟ್ಟವಳೂ ಇವಳೇ…. ಕ್ಷಮಿಸಿ, ಮೊದಲೇ ತಿಳಿಸಿ ನಿಮ್ಮ ಕುತೂಹಲ ಮುಗಿಸಿಬಿಡಬಾರದು ಎಂದು ಪ್ರಮಾಣ ಮಾಡಿಸಿಕೊಂಡಿದ್ದಳು.

“ಆಕಸ್ಮಿಕವಾಗಿ ಒಂದು ಮದುವೆಯಲ್ಲಿ ನಿಮ್ಮ ತಾಯಿ ತಂದೆ ಇವಳನ್ನು ನೋಡಿ ಮೆಚ್ಚಿಕೊಂಡರು. ಶಾಸ್ತ್ರೋಕ್ತವಾಗಿ ಹೆಣ್ಣು ನೋಡಲು ಹೋಗಿ ಅವಳ ವಿವರ ಪಡೆದರು. ಆಗ ಲಾಲಿ ತನ್ನ ಬಗ್ಗೆ ಎಲ್ಲಾ ಹೇಳಿಕೊಂಡಳು. ಮಗನಿಗೆ ಈ ಹುಡುಗಿಯೇ ಸರಿ ಎಂದು ಅವರು ನಿರ್ಧರಿಸಿದರು. ಎಲ್ಲರಿಗೂ ಗೊತ್ತಿದ್ದ ವಿಷಯ ನಿಮಗೆ ಇವತ್ತು ತಿಳಿಯಿತು,” ಎಂದು ವಿವರಿಸಿದಳು ಸುಧಾ.

ನಿರ್ಮಲಾ ಅಲ್ಲ ಲಾಲಿ ಅವನತ್ತ ನೋಡಿ, ಕಣ್ಣು ಮಿಟುಕಿಸಿದಳು. ಬೇಗ ಬೇಗ ಹಾರ ಬದಲಾಯಿಸಿ ಎಂದು ಯಾರೋ ಹೇಳುತ್ತಿದ್ದರು. ಶಾಕ್‌ನಿಂದ ಹೊರಬರದ ಪ್ರಸಾದನ ಕೊರಳಿಗೆ ತಾನೇ ಮೊದಲು ಹಾರ ಹಾಕಿದಳು.

“ನೀನೂ ಬೇಗ ಹಾರ ಹಾಕಪ್ಪ…..” ತಾಯಿ ತಂದೆ  ಹೇಳುತ್ತಿದ್ದರು.

ಪ್ರಸಾದ್‌ ನಿಧಾನವಾಗಿ ಟ್ರಾನ್ಸ್ ನಿಂದ ಹೊರಬಂದು ಅವಳಿಗೆ ಹಾರ ಹಾಕಿದ. ಲಾಲಿ ಅವನ ಬಲಗೈ ಹಿಡಿದು ಉಂಗುರ ತೊಡಿಸಲು ಎಲ್ಲರೂ ಚಪ್ಪಾಳೆ ತಟ್ಟಿದರು. ಪ್ರಸಾದ್‌ ತಾನೂ ಅವಳಿಗೆ ಉಂಗುರ ತೊಡಿಸುತ್ತಾ, “ಲಾಲಿ ನನ್ನ ಮದುವೆ ಆಗ್ತೀಯಾ…..?” ಎಂದು ಮಂಡಿಯೂರಿ ಕೇಳಿದಾಗ, ಅವಳು ನಾಚಿದಳು. ಎಲ್ಲರೂ ಹೋ ಎಂದು ಕಿರುಚಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ